![]() |
ಸದ್ಗುರು ಶ್ರೀ ಅನಿರುದ್ಧ ಬಾಪು ಅವರ ದೈನಿಕ 'ಪ್ರತ್ಯಕ್ಷ'ದ ಅಗ್ರಲೇಖನ (06-09-2006) |
ಶ್ರೀಗಣಪತಿಯ ನೆನಪಾದ ತಕ್ಷಣ ಪ್ರತಿಯೊಬ್ಬ ಭಕ್ತನಿಗೆ ಅಥವಾ ನಾಸ್ತಿಕನಿಗೂ ತಕ್ಷಣ ನೆನಪಾಗುವುದೇ ಮೋದಕ. ಇತ್ತೀಚಿನ ದಿನಗಳಲ್ಲಿ ಖೋವಾ ಮೋದಕಗಳು ಸಿಗುತ್ತವೆ, ಆದರೆ ಈ ಖೋವಾ ಮೋದಕ ಅಂದರೆ ಯಾವುದೆ ಕಡಿಮೆ ಗುಣಮಟ್ಟದ ವಸ್ತುವಿನಿಂದ ತೃಪ್ತಿಪಡುವ ಹಾಗೆ. ಚಿಕ್ಕಂದಿನಿಂದ ಇಂದಿನವರೆಗೂ ನಾನು ಅತ್ಯಂತ ಇಷ್ಟಪಟ್ಟು ತಿಂದ ಮೋದಕವೆಂದರೆ ಸಾಂಪ್ರದಾಯಿಕ ಮೋದಕ. ಇದರಲ್ಲಿ ಅಕ್ಕಿ ಹಿಟ್ಟನ್ನು ಬೆಣ್ಣೆಯಲ್ಲಿ ಕಲಸಿ, ಒಳಗಿನ ಮಿಶ್ರಣವನ್ನು ತಾಜಾ ಮತ್ತು ರುಚಿಕರವಾದ ತೆಂಗಿನಕಾಯಿ ತುರಿಯಿಂದ ಮನೆಯಲ್ಲೇ ಮಾಡಿದ ತುಪ್ಪದಲ್ಲಿ ತಯಾರಿಸಲಾಗುತ್ತದೆ. ಇನ್ನೂ ಹೆಚ್ಚೆಂದರೆ, ಮೋದಕವನ್ನು ತಿನ್ನುವಾಗ ಅದನ್ನು ಒಡೆದು ಅದರಲ್ಲಿ ಮತ್ತೊಂದು ಚಮಚ ತುಪ್ಪವನ್ನು ಹಾಕಿಕೊಳ್ಳುವುದು. ಎಲ್ಲಾ ಮಕ್ಕಳಿಗೆ ಈ 'ತುಪ್ಪದಲ್ಲಿ ತೊಯ್ದ' ಮೋದಕವೆಂದರೆ ಬಲು ಇಷ್ಟ. ಈ ಸಾಂಪ್ರದಾಯಿಕ ಮೋದಕವು ಆಹಾರದಲ್ಲಿನ ಸೌಮ್ಯ, ಸ್ನಿಗ್ಧ ಮತ್ತು ಗುರು ಗುಣಗಳ ಪರಮೋಚ್ಛ ಸ್ಥಿತಿ. ಅದಕ್ಕಾಗಿಯೇ ಅತ್ಯುಷ್ಣ, ಅರ್ಧಸ್ನಿಗ್ಧ ಮತ್ತು ಲಘು ಸ್ಥಾನವನ್ನು ನಿಯಂತ್ರಿಸುವ ಮೂಲಾಧಾರ ಚಕ್ರದ ಅಧಿಪತಿಯಾದ ಶ್ರೀ ಮಹಾಗಣಪತಿಗೆ ಇದು ಸರ್ವೋತ್ತಮ ನೈವೇದ್ಯ.
ಇಂದಿನ ಪರಿಸ್ಥಿತಿಯಲ್ಲಿ ಎಲ್ಲರಿಗೂ ಇಂತಹ ಮೋದಕಗಳನ್ನು ಮಾಡಲು ಸಾಧ್ಯವಿಲ್ಲ ಆದರೆ ಸಾಧ್ಯವಿದ್ದವರು ಇಂತಹ ಸಾಂಪ್ರದಾಯಿಕ ಮೋದಕಗಳನ್ನು ಮಾಡಿ ಅದನ್ನು ಅತ್ಯಂತ ಪ್ರೀತಿಯಿಂದ ಶ್ರೀ ಮಹಾಗಣಪತಿಗೆ ಅರ್ಪಿಸಬೇಕು. ದೂರ್ವೆ ಮತ್ತು ಶಮಿ ಪತ್ರೆಗಳ ಬಾಹ್ಯ ಪೂಜೆ (ಶ್ರೀಗಣಪತಿಗೆ ದೂರ್ವೆ ಮತ್ತು ಶಮಿ ಪತ್ರೆಗಳನ್ನು ಅರ್ಪಣೆ ಮಾಡುವದು) ಮತ್ತು ಸಾಂಪ್ರದಾಯಿಕ ಮೋದಕಗಳ ನೈವೇದ್ಯವು ನಿಜವಾಗಿಯೂ ಉಗ್ರ, ಶುಷ್ಕ ಮತ್ತು ಲಘು ಗುಣಗಳನ್ನು ನಾಶಮಾಡಿ ಸೌಮ್ಯತೆ, ಸ್ನಿಗ್ಧತೆ ಮತ್ತು ಗುರುತ್ವವನ್ನು (ಸ್ಥಿರತೆ) ಸ್ಥಾಪಿಸುವದು ಇರುವದರಿಂದ ಆ ಮಂಗಳಮೂರ್ತಿ ವರದವಿನಾಯಕನು ವಿಘ್ನಗಳನ್ನು ನಾಶಮಾಡಲು ಪ್ರತಿಯೊಬ್ಬರ ಪ್ರಾಣಮಯ ದೇಹ ಮತ್ತು ಮನೋಮಯ ದೇಹದಲ್ಲಿ ಅವತರಿಸುತ್ತಾನೆ.
![]() |
ಸದ್ಗುರು ಶ್ರೀ ಅನिरುದ್ಧ ಬಾಪು ಅವರ ಮನೆಗೆ ಗಣಪತಿ ಆಗಮನ. |
ಮೋದಕ ಎಂದೊಡನೆ ನನಗೆ ಬಹಳ ಹಳೆಯ ಕಥೆಯೊಂದು ನೆನಪಾಗುತ್ತದೆ. ಒಬ್ಬ ಚಕ್ರವರ್ತಿ ಇದ್ದ. ಅವನು ಸ್ವತಃ ಅತ್ಯಂತ ವಿಲಾಸಿ ಸ್ವಭಾವದವನಾಗಿದ್ದನು ಮತ್ತು ಯಾವುದೇ ರೀತಿಯ ಶಿಕ್ಷಣವನ್ನು ಪಡೆದಿರಲಿಲ್ಲ. ಹಾಗಾಗಿ ಅವನ ತಂದೆಯು ಅವನನ್ನು ಪಟ್ಟಕ್ಕೆ ಏರಿಸುವಾಗ, ಆ ವಿದ್ಯೆಯಿಲ್ಲದ ರಾಜಕುಮಾರನಿಗೆ ಅತ್ಯಂತ ವಿದ್ವಾಂಸಳಾದ ಮತ್ತು ಸುಜ್ಞಾನಿಯಾದ ರಾಜಕುಮಾರಿಯೊಂದಿಗೆ ವಿವಾಹ ಮಾಡಿಸಿದ್ದರು. ಹೀಗೆ, ಆ ಅನಕ್ಷರಸ್ಥ ರಾಜ ಮತ್ತು ಅವನ ವಿದ್ವಾಂಸ, ಪತಿವ್ರತೆಯಾದ ರಾಣಿಯು ಸಂಪೂರ್ಣ ರಾಜಪರಿವಾರದೊಂದಿಗೆ ಸರೋವರದಲ್ಲಿ ಜಲಕ್ರೀಡೆಗೆ ಹೋಗಿದ್ದರು. ಅಲ್ಲಿ ಸರೋವರದಲ್ಲಿ ಜಲಕ್ರೀಡೆ ಆಡುತ್ತಿರುವಾಗ, ರಾಜನು ರಾಣಿಯ ಮೇಲೆ ಕೈಯಿಂದ ನೀರನ್ನು ಎರಚತೊಡಗಿದನು. ವಿವಾಹದವರೆಗೂ ಸಂಸ್ಕೃತವೇ ಅಧ್ಯಯನ ಮತ್ತು ಮಾತನಾಡುವ ಭಾಷೆಯಾಗಿದ್ದ ಆ ರಾಣಿಯು ತಟ್ಟನೆ, “ಮೋದಕೈಃ ಸಿಂಚ” ಎಂದಳು. ತಕ್ಷಣವೇ ರಾಜನು ಸೇವಕನನ್ನು ಹತ್ತಿರ ಕರೆದು ಅವನ ಕಿವಿಯಲ್ಲಿ ಏನನ್ನೋ ಹೇಳಿದನು. ಸ್ವಲ್ಪ ಹೊತ್ತಿನಲ್ಲಿ ಸೇವಕನು ಮೋದಕಗಳನ್ನು ತುಂಬಿದ ಐದಾರು ಪಾತ್ರೆಗಳನ್ನು ಅಲ್ಲಿಗೆ ತಂದನು ಮತ್ತು ರಾಜನು ಒಂದರ ನಂತರ ಒಂದರಂತೆ ಮೋದಕಗಳನ್ನು ರಾಣಿಯ ಮೇಲೆ ಗುರಿಯಿಟ್ಟು ಎಸೆಯಲಾರಂಭಿಸಿದನು. ಈ ವಿಚಿತ್ರ ಘಟನೆಯಿಂದ ಮೊದಲು ಸಂಪೂರ್ಣವಾಗಿ ಗೊಂದಲಕ್ಕೊಳಗಾದ ರಾಣಿಯು, ಸ್ವಲ್ಪ ಸಮಯದಲ್ಲೇ ಚೇತರಿಸಿಕೊಂಡು ಇತರ ರಾಜಸ್ತ್ರೀಯರು ಮತ್ತು ಮಂತ್ರಿಗಳು ಸೇರಿದಂತೆ ರಾಜಪರಿವಾರದ ಸದಸ್ಯರ ಮುಖದಲ್ಲಿದ್ದ ಕುಹಕದ ನಗುವನ್ನು ನೋಡಿ ಅತ್ಯಂತ ಲಜ್ಜಿತ ಮತ್ತು ದುಃಖಿತಳಾದಳು; ಏಕೆಂದರೆ ರಾಣಿಗೆ ಹೇಳಬೇಕಾಗಿದ್ದು, “ಮಾ ಉದಕೈಃ ಸಿಂಚ” ಅಂದರೆ, ‘ನನ್ನನ್ನು ನೀರಿನಿಂದ ತೋಯಿಸಬೇಡ.’ ಆದರೆ ಕೇವಲ ಸಂಸ್ಕೃತ ಮಾತನಾಡುವುದನ್ನು ಮಾತ್ರ ತಿಳಿದಿದ್ದ ಆ ಅನಕ್ಷರಸ್ಥ ರಾಜನಿಗೆ ಸಂಸ್ಕೃತದ ವ್ಯಾಕರಣ ನಿಯಮಗಳು ತಿಳಿದಿಲ್ಲದ ಕಾರಣ, 'ಮೋದಕೈಃ' ಎಂಬುದನ್ನು ವಿಭಜಿಸದೆ ತಪ್ಪಾಗಿ ಅರ್ಥಮಾಡಿಕೊಂಡಿದ್ದ. ಮುಂದೆ ಕಥೆಯು ಬೇರೆಯೇ ತಿರುವು ಪಡೆಯುತ್ತದೆ, ಆದರೆ ನನಗಂತೂ ರಾಣಿಯ ಮೇಲೆ ಮೋದಕಗಳ ಮಳೆಗರೆದ ಆ ಮೂರ್ಖ ರಾಜನೇ ಇಂದಿನ ದಿನಗಳಲ್ಲಿ ಅನೇಕ ರೂಪಗಳಲ್ಲಿ ಅಲ್ಲಲ್ಲಿ ಓಡಾಡುತ್ತಿರುವಂತೆ ಕಾಣುತ್ತಾನೆ.
![]() |
ಸದ್ಗುರು ಶ್ರೀ ಅನिरುದ್ಧ ಬಾಪು ಅವರ ಮನೆಯಲ್ಲಿ ಪ್ರತಿ ವರ್ಷ ನಡೆಯುವ ಗಣೇಶೋತ್ಸವದಲ್ಲಿ, ಗಣಪತಿ ಬಾಪ್ಪಾಗೆ ಪ್ರೀತಿಯಿಂದ ಮೋದಕ ನೈವೇದ್ಯ ಅರ್ಪಿಸಲಾಗುತ್ತದೆ. |
ಗಣಪತಿಗೆ ಮೋದಕ ಮತ್ತು ದೂರ್ವೆ ಇಷ್ಟವೆಂದು ಆದರದಿಂದ ಆ ವಸ್ತುಗಳನ್ನು ಅರ್ಪಿಸುವುದು ಸರಿಯಾದುದೇ. ಹಾಗೆಯೇ ಆ ಪರಮಾತ್ಮನ ರೂಪಗಳು ಅನೇಕವಾಗಿರುವುದರಿಂದ ವಿವಿಧ ಸ್ವರೂಪಗಳ ಮೂರ್ತಿಗಳನ್ನು ಮಾಡುವುದೂ ಅತ್ಯಂತ ಯೋಗ್ಯವೇ. ಆದರೆ ಆ ಗಣಪತಿಗೆ ಹಾಲು ಕುಡಿಸಲು ಅಲ್ಲಲ್ಲಿ ಸರತಿ ಸಾಲಿನಲ್ಲಿ ನಿಲ್ಲುವುದು ಆ ರಾಜನ ಪುನರಾವರ್ತನೆಯೇ ಸರಿ. ನನಗೆ ಒಂದು ಅರ್ಥವಾಗುವುದಿಲ್ಲ, ನಿಜವಾಗಿಯೂ ಗಣಪತಿಗೆ ಮೋದಕ ಅತ್ಯಂತ ಪ್ರಿಯವಾಗಿರುವಾಗ, ಅವನು ಅಲ್ಲಲ್ಲಿ ಹಾಲನ್ನು ಮಾತ್ರ ಏಕೆ ಕುಡಿಯುತ್ತಾನೆ? ಮೋದಕವನ್ನು ಏಕೆ ತಿನ್ನುವುದಿಲ್ಲ? ಮತ್ತು ಮುಖ್ಯವಾಗಿ, ಈ ಪ್ರಶ್ನೆಯು ನಮ್ಮಲ್ಲಿ ಯಾರಿಗೂ ಮೂಡುವುದಿಲ್ಲ. ಆ ಮಂಗಳಮೂರ್ತಿ ಪರಮಾತ್ಮನು ಭಕ್ತರು ಅತ್ಯಂತ ಪ್ರೀತಿಯಿಂದ ಅರ್ಪಿಸಿದ ಹಳಸಿದ ರೊಟ್ಟಿಯ ತುಂಡುಗಳನ್ನು ಕೂಡ ಅತ್ಯಂತ ಪ್ರೀತಿಯಿಂದ ಸ್ವೀಕರಿಸುತ್ತಾನೆ, ಇದರಲ್ಲಿ ನನಗೆ ಸ್ವಲ್ಪವೂ ಸಂಶಯವಿಲ್ಲ. ಮೂರ್ತಿಯ ಮುಂದಿರುವ ನೈವೇದ್ಯದ ತಟ್ಟೆಯಲ್ಲಿ ಒಂದು ಕಣವೂ ಕಡಿಮೆಯಾಗಿ ಕಾಣದಿದ್ದರೂ ಪರವಾಗಿಲ್ಲ. ಗೀತೆಯಲ್ಲಂತೂ ಸಾಕ್ಷಾತ್ ಭಗವಾನ್ ಶ್ರೀಕೃಷ್ಣನೇ ಸ್ವತಃ ತನ್ನ ಬಾಯಿಯಿಂದಲೇ ಈ ಭರವಸೆಯನ್ನು ಎಲ್ಲಾ ಭಕ್ತರಿಗೆ ನೀಡಿದ್ದಾನೆ. ಮುಖ್ಯವಾಗಿ, ಪರಮಾತ್ಮನಿಗೆ ಇಂತಹ ಕೆಲಸಗಳನ್ನು ಮಾಡಿ ತನ್ನ ಹಿರಿಮೆಯನ್ನು ಹೆಚ್ಚಿಸಿಕೊಳ್ಳುವ ಅವಶ್ಯಕತೆಯಿಲ್ಲ, ಹಾಗೆಯೇ ಜನರ ಮನಸ್ಸಿನಲ್ಲಿ ಭಕ್ತಿಯನ್ನು ಹೆಚ್ಚಿಸಲು ಪರಮಾತ್ಮನಿಗೆ ಇಂತಹ ಉಪಾಯಗಳ ಅಗತ್ಯವೂ ಇಲ್ಲ. ಭಕ್ತ ಮತ್ತು ಅಭಕ್ತ ಪ್ರತಿಯೊಬ್ಬರ ಸಂಪೂರ್ಣ ಅಸ್ತಿತ್ವದ ಪೂರ್ಣ ಅರಿವಿರುವ ಮತ್ತು ಪ್ರತಿಯೊಬ್ಬರ ಕರ್ಮದ ಫಲವು ಯಾರ ಕೈಯಲ್ಲಿದೆಯೋ, ಆ ನಿಜವಾದ ಪರಮಾತ್ಮನಿಗೆ ಇಂತಹ ವಿಚಿತ್ರ ವಿಷಯಗಳ ಅವಶ್ಯಕತೆ ಎಂದಿಗೂ ಇರುವುದಿಲ್ಲ.
ಅಗ್ರಲೇಖನವನ್ನು ಮುಕ್ತಾಯಗೊಳಿಸುತ್ತಾ ಸದ್ಗುರು ಶ್ರೀ ಅನಿರುದ್ಧ ಬಾಪು ಬರೆಯುತ್ತಾರೆ -
‘ಮಿತ್ರರೇ, ಆ ಪರಮಾತ್ಮನಿಗೆ ಬೇಕಾಗಿರುವುದು ನಿಮ್ಮ ಅಚಲ ಶ್ರದ್ಧೆ, ಭಕ್ತಿ ಮತ್ತು ಕೃತಜ್ಞತೆಯ ಭಾವದಿಂದ ಮಾಡಿದ ದೇವರ ಮತ್ತು ದೇವರ ಅಸಹಾಯಕ ಮಕ್ಕಳ ಸೇವೆ. ಇದೇ ನಿಜವಾದ ನೈವೇದ್ಯ. ಅಲ್ಲ, ಇದೇ ಶ್ರೇಷ್ಠ ನೈವೇದ್ಯ. ಅದನ್ನು ಪರಮಾತ್ಮನು ಪೂರ್ತಿಯಾಗಿ ಸ್ವೀಕರಿಸುತ್ತಾನೆ ಮತ್ತು ಅದರ ಸಾವಿರ ಪಟ್ಟು ಫಲವನ್ನು ಪ್ರಸಾದವಾಗಿ ಭಕ್ತನಿಗೆ ನೀಡುತ್ತಾನೆ. ಮೋದಕವನ್ನು ನೈವೇದ್ಯವಾಗಿ ಖಂಡಿತ ಅರ್ಪಿಸಿ ಮತ್ತು ಇಷ್ಟಪಟ್ಟು ನೀವೂ ತಿನ್ನಿರಿ, ಆದರೆ ‘ಮೋದ’ ಎಂದರೆ ‘ಆನಂದ’ ಎಂಬುದನ್ನು ಮರೆಯಬೇಡಿ. ಪರಮಾತ್ಮನಿಗೆ ಮತ್ತು ಇತರರಿಗೆ ಆನಂದವಾಗುವಂತೆ ವರ್ತಿಸುವುದೇ ಶ್ರೇಷ್ಠ ಮೋದಕವಾಗಿದೆ.'मराठी >> हिंदी >> English >> ગુજરાતી>> తెలుగు>> বাংলা>> தமிழ்>>