Showing posts with label ಗಣೇಶ ಭಕ್ತಿ. Show all posts
Showing posts with label ಗಣೇಶ ಭಕ್ತಿ. Show all posts

Friday, 25 July 2025

ಮೋದ-ಕ

ಸದ್ಗುರು ಶ್ರೀ ಅನಿರುದ್ಧ ಬಾಪು ಅವರ ದೈನಿಕ 'ಪ್ರತ್ಯಕ್ಷ'ದ ಅಗ್ರಲೇಖನ (06-09-2006)

ಶ್ರೀಗಣಪತಿಯ ನೆನಪಾದ ತಕ್ಷಣ ಪ್ರತಿಯೊಬ್ಬ ಭಕ್ತನಿಗೆ ಅಥವಾ ನಾಸ್ತಿಕನಿಗೂ ತಕ್ಷಣ ನೆನಪಾಗುವುದೇ ಮೋದಕ. ಇತ್ತೀಚಿನ ದಿನಗಳಲ್ಲಿ ಖೋವಾ ಮೋದಕಗಳು ಸಿಗುತ್ತವೆ, ಆದರೆ ಈ ಖೋವಾ ಮೋದಕ ಅಂದರೆ ಯಾವುದೆ ಕಡಿಮೆ ಗುಣಮಟ್ಟದ ವಸ್ತುವಿನಿಂದ ತೃಪ್ತಿಪಡುವ ಹಾಗೆ. ಚಿಕ್ಕಂದಿನಿಂದ ಇಂದಿನವರೆಗೂ ನಾನು ಅತ್ಯಂತ ಇಷ್ಟಪಟ್ಟು ತಿಂದ ಮೋದಕವೆಂದರೆ ಸಾಂಪ್ರದಾಯಿಕ ಮೋದಕ. ಇದರಲ್ಲಿ ಅಕ್ಕಿ ಹಿಟ್ಟನ್ನು ಬೆಣ್ಣೆಯಲ್ಲಿ ಕಲಸಿ, ಒಳಗಿನ ಮಿಶ್ರಣವನ್ನು ತಾಜಾ ಮತ್ತು ರುಚಿಕರವಾದ ತೆಂಗಿನಕಾಯಿ ತುರಿಯಿಂದ ಮನೆಯಲ್ಲೇ ಮಾಡಿದ ತುಪ್ಪದಲ್ಲಿ ತಯಾರಿಸಲಾಗುತ್ತದೆ. ಇನ್ನೂ ಹೆಚ್ಚೆಂದರೆ, ಮೋದಕವನ್ನು ತಿನ್ನುವಾಗ ಅದನ್ನು ಒಡೆದು ಅದರಲ್ಲಿ ಮತ್ತೊಂದು ಚಮಚ ತುಪ್ಪವನ್ನು ಹಾಕಿಕೊಳ್ಳುವುದು. ಎಲ್ಲಾ ಮಕ್ಕಳಿಗೆ ಈ 'ತುಪ್ಪದಲ್ಲಿ ತೊಯ್ದ' ಮೋದಕವೆಂದರೆ ಬಲು ಇಷ್ಟ. ಈ ಸಾಂಪ್ರದಾಯಿಕ ಮೋದಕವು ಆಹಾರದಲ್ಲಿನ ಸೌಮ್ಯ, ಸ್ನಿಗ್ಧ ಮತ್ತು ಗುರು ಗುಣಗಳ ಪರಮೋಚ್ಛ ಸ್ಥಿತಿ. ಅದಕ್ಕಾಗಿಯೇ ಅತ್ಯುಷ್ಣ, ಅರ್ಧಸ್ನಿಗ್ಧ ಮತ್ತು ಲಘು ಸ್ಥಾನವನ್ನು ನಿಯಂತ್ರಿಸುವ ಮೂಲಾಧಾರ ಚಕ್ರದ ಅಧಿಪತಿಯಾದ ಶ್ರೀ ಮಹಾಗಣಪತಿಗೆ ಇದು ಸರ್ವೋತ್ತಮ ನೈವೇದ್ಯ.

ಇಂದಿನ ಪರಿಸ್ಥಿತಿಯಲ್ಲಿ ಎಲ್ಲರಿಗೂ ಇಂತಹ ಮೋದಕಗಳನ್ನು ಮಾಡಲು ಸಾಧ್ಯವಿಲ್ಲ ಆದರೆ ಸಾಧ್ಯವಿದ್ದವರು ಇಂತಹ ಸಾಂಪ್ರದಾಯಿಕ ಮೋದಕಗಳನ್ನು ಮಾಡಿ ಅದನ್ನು ಅತ್ಯಂತ ಪ್ರೀತಿಯಿಂದ ಶ್ರೀ ಮಹಾಗಣಪತಿಗೆ ಅರ್ಪಿಸಬೇಕು. ದೂರ್ವೆ ಮತ್ತು ಶಮಿ ಪತ್ರೆಗಳ ಬಾಹ್ಯ ಪೂಜೆ (ಶ್ರೀಗಣಪತಿಗೆ ದೂರ್ವೆ ಮತ್ತು ಶಮಿ ಪತ್ರೆಗಳನ್ನು ಅರ್ಪಣೆ ಮಾಡುವದು) ಮತ್ತು ಸಾಂಪ್ರದಾಯಿಕ ಮೋದಕಗಳ ನೈವೇದ್ಯವು ನಿಜವಾಗಿಯೂ ಉಗ್ರ, ಶುಷ್ಕ ಮತ್ತು ಲಘು ಗುಣಗಳನ್ನು ನಾಶಮಾಡಿ ಸೌಮ್ಯತೆ, ಸ್ನಿಗ್ಧತೆ ಮತ್ತು ಗುರುತ್ವವನ್ನು (ಸ್ಥಿರತೆ) ಸ್ಥಾಪಿಸುವದು ಇರುವದರಿಂದ ಆ ಮಂಗಳಮೂರ್ತಿ ವರದವಿನಾಯಕನು ವಿಘ್ನಗಳನ್ನು ನಾಶಮಾಡಲು ಪ್ರತಿಯೊಬ್ಬರ ಪ್ರಾಣಮಯ ದೇಹ ಮತ್ತು ಮನೋಮಯ ದೇಹದಲ್ಲಿ ಅವತರಿಸುತ್ತಾನೆ.


ಸದ್ಗುರು ಶ್ರೀ ಅನिरುದ್ಧ ಬಾಪು ಅವರ ಮನೆಗೆ ಗಣಪತಿ ಆಗಮನ.
ಸದ್ಗುರು ಶ್ರೀ ಅನिरುದ್ಧ ಬಾಪು ಅವರ ಮನೆಗೆ ಗಣಪತಿ ಆಗಮನ.

ಮೋದಕ ಎಂದೊಡನೆ ನನಗೆ ಬಹಳ ಹಳೆಯ ಕಥೆಯೊಂದು ನೆನಪಾಗುತ್ತದೆ. ಒಬ್ಬ ಚಕ್ರವರ್ತಿ ಇದ್ದ. ಅವನು ಸ್ವತಃ ಅತ್ಯಂತ ವಿಲಾಸಿ ಸ್ವಭಾವದವನಾಗಿದ್ದನು ಮತ್ತು ಯಾವುದೇ ರೀತಿಯ ಶಿಕ್ಷಣವನ್ನು ಪಡೆದಿರಲಿಲ್ಲ. ಹಾಗಾಗಿ ಅವನ ತಂದೆಯು ಅವನನ್ನು ಪಟ್ಟಕ್ಕೆ ಏರಿಸುವಾಗ, ಆ ವಿದ್ಯೆಯಿಲ್ಲದ ರಾಜಕುಮಾರನಿಗೆ ಅತ್ಯಂತ ವಿದ್ವಾಂಸಳಾದ ಮತ್ತು ಸುಜ್ಞಾನಿಯಾದ ರಾಜಕುಮಾರಿಯೊಂದಿಗೆ ವಿವಾಹ ಮಾಡಿಸಿದ್ದರು. ಹೀಗೆ, ಆ ಅನಕ್ಷರಸ್ಥ ರಾಜ ಮತ್ತು ಅವನ ವಿದ್ವಾಂಸ, ಪತಿವ್ರತೆಯಾದ ರಾಣಿಯು ಸಂಪೂರ್ಣ ರಾಜಪರಿವಾರದೊಂದಿಗೆ ಸರೋವರದಲ್ಲಿ ಜಲಕ್ರೀಡೆಗೆ ಹೋಗಿದ್ದರು. ಅಲ್ಲಿ ಸರೋವರದಲ್ಲಿ ಜಲಕ್ರೀಡೆ ಆಡುತ್ತಿರುವಾಗ, ರಾಜನು ರಾಣಿಯ ಮೇಲೆ ಕೈಯಿಂದ ನೀರನ್ನು ಎರಚತೊಡಗಿದನು. ವಿವಾಹದವರೆಗೂ ಸಂಸ್ಕೃತವೇ ಅಧ್ಯಯನ ಮತ್ತು ಮಾತನಾಡುವ ಭಾಷೆಯಾಗಿದ್ದ ಆ ರಾಣಿಯು ತಟ್ಟನೆ, “ಮೋದಕೈಃ ಸಿಂಚ” ಎಂದಳು. ತಕ್ಷಣವೇ ರಾಜನು ಸೇವಕನನ್ನು ಹತ್ತಿರ ಕರೆದು ಅವನ ಕಿವಿಯಲ್ಲಿ ಏನನ್ನೋ ಹೇಳಿದನು. ಸ್ವಲ್ಪ ಹೊತ್ತಿನಲ್ಲಿ ಸೇವಕನು ಮೋದಕಗಳನ್ನು ತುಂಬಿದ ಐದಾರು ಪಾತ್ರೆಗಳನ್ನು ಅಲ್ಲಿಗೆ ತಂದನು ಮತ್ತು ರಾಜನು ಒಂದರ ನಂತರ ಒಂದರಂತೆ ಮೋದಕಗಳನ್ನು ರಾಣಿಯ ಮೇಲೆ ಗುರಿಯಿಟ್ಟು ಎಸೆಯಲಾರಂಭಿಸಿದನು. ಈ ವಿಚಿತ್ರ ಘಟನೆಯಿಂದ ಮೊದಲು ಸಂಪೂರ್ಣವಾಗಿ ಗೊಂದಲಕ್ಕೊಳಗಾದ ರಾಣಿಯು, ಸ್ವಲ್ಪ ಸಮಯದಲ್ಲೇ ಚೇತರಿಸಿಕೊಂಡು ಇತರ ರಾಜಸ್ತ್ರೀಯರು ಮತ್ತು ಮಂತ್ರಿಗಳು ಸೇರಿದಂತೆ ರಾಜಪರಿವಾರದ ಸದಸ್ಯರ ಮುಖದಲ್ಲಿದ್ದ ಕುಹಕದ ನಗುವನ್ನು ನೋಡಿ ಅತ್ಯಂತ ಲಜ್ಜಿತ ಮತ್ತು ದುಃಖಿತಳಾದಳು; ಏಕೆಂದರೆ ರಾಣಿಗೆ ಹೇಳಬೇಕಾಗಿದ್ದು, “ಮಾ ಉದಕೈಃ ಸಿಂಚ” ಅಂದರೆ, ‘ನನ್ನನ್ನು ನೀರಿನಿಂದ ತೋಯಿಸಬೇಡ.’ ಆದರೆ ಕೇವಲ ಸಂಸ್ಕೃತ ಮಾತನಾಡುವುದನ್ನು ಮಾತ್ರ ತಿಳಿದಿದ್ದ ಆ ಅನಕ್ಷರಸ್ಥ ರಾಜನಿಗೆ ಸಂಸ್ಕೃತದ ವ್ಯಾಕರಣ ನಿಯಮಗಳು ತಿಳಿದಿಲ್ಲದ ಕಾರಣ, 'ಮೋದಕೈಃ' ಎಂಬುದನ್ನು ವಿಭಜಿಸದೆ ತಪ್ಪಾಗಿ ಅರ್ಥಮಾಡಿಕೊಂಡಿದ್ದ. ಮುಂದೆ ಕಥೆಯು ಬೇರೆಯೇ ತಿರುವು ಪಡೆಯುತ್ತದೆ, ಆದರೆ ನನಗಂತೂ ರಾಣಿಯ ಮೇಲೆ ಮೋದಕಗಳ ಮಳೆಗರೆದ ಆ ಮೂರ್ಖ ರಾಜನೇ ಇಂದಿನ ದಿನಗಳಲ್ಲಿ ಅನೇಕ ರೂಪಗಳಲ್ಲಿ ಅಲ್ಲಲ್ಲಿ ಓಡಾಡುತ್ತಿರುವಂತೆ ಕಾಣುತ್ತಾನೆ.

ನಾನು ಮೋದಕ ನೈವೇದ್ಯವನ್ನು ಅರ್ಪಿಸುತ್ತೇನೆ.
ಸದ್ಗುರು ಶ್ರೀ ಅನिरುದ್ಧ ಬಾಪು ಅವರ ಮನೆಯಲ್ಲಿ ಪ್ರತಿ ವರ್ಷ ನಡೆಯುವ ಗಣೇಶೋತ್ಸವದಲ್ಲಿ, ಗಣಪತಿ ಬಾಪ್ಪಾಗೆ ಪ್ರೀತಿಯಿಂದ ಮೋದಕ ನೈವೇದ್ಯ ಅರ್ಪಿಸಲಾಗುತ್ತದೆ.

ಗಣಪತಿಗೆ ಮೋದಕ ಮತ್ತು ದೂರ್ವೆ ಇಷ್ಟವೆಂದು ಆದರದಿಂದ ಆ ವಸ್ತುಗಳನ್ನು ಅರ್ಪಿಸುವುದು ಸರಿಯಾದುದೇ. ಹಾಗೆಯೇ ಆ ಪರಮಾತ್ಮನ ರೂಪಗಳು ಅನೇಕವಾಗಿರುವುದರಿಂದ ವಿವಿಧ ಸ್ವರೂಪಗಳ ಮೂರ್ತಿಗಳನ್ನು ಮಾಡುವುದೂ ಅತ್ಯಂತ ಯೋಗ್ಯವೇ. ಆದರೆ ಆ ಗಣಪತಿಗೆ ಹಾಲು ಕುಡಿಸಲು ಅಲ್ಲಲ್ಲಿ ಸರತಿ ಸಾಲಿನಲ್ಲಿ ನಿಲ್ಲುವುದು ಆ ರಾಜನ ಪುನರಾವರ್ತನೆಯೇ ಸರಿ. ನನಗೆ ಒಂದು ಅರ್ಥವಾಗುವುದಿಲ್ಲ, ನಿಜವಾಗಿಯೂ ಗಣಪತಿಗೆ ಮೋದಕ ಅತ್ಯಂತ ಪ್ರಿಯವಾಗಿರುವಾಗ, ಅವನು ಅಲ್ಲಲ್ಲಿ ಹಾಲನ್ನು ಮಾತ್ರ ಏಕೆ ಕುಡಿಯುತ್ತಾನೆ? ಮೋದಕವನ್ನು ಏಕೆ ತಿನ್ನುವುದಿಲ್ಲ? ಮತ್ತು ಮುಖ್ಯವಾಗಿ, ಈ ಪ್ರಶ್ನೆಯು ನಮ್ಮಲ್ಲಿ ಯಾರಿಗೂ ಮೂಡುವುದಿಲ್ಲ. ಆ ಮಂಗಳಮೂರ್ತಿ ಪರಮಾತ್ಮನು ಭಕ್ತರು ಅತ್ಯಂತ ಪ್ರೀತಿಯಿಂದ ಅರ್ಪಿಸಿದ ಹಳಸಿದ ರೊಟ್ಟಿಯ ತುಂಡುಗಳನ್ನು ಕೂಡ ಅತ್ಯಂತ ಪ್ರೀತಿಯಿಂದ ಸ್ವೀಕರಿಸುತ್ತಾನೆ, ಇದರಲ್ಲಿ ನನಗೆ ಸ್ವಲ್ಪವೂ ಸಂಶಯವಿಲ್ಲ. ಮೂರ್ತಿಯ ಮುಂದಿರುವ ನೈವೇದ್ಯದ ತಟ್ಟೆಯಲ್ಲಿ ಒಂದು ಕಣವೂ ಕಡಿಮೆಯಾಗಿ ಕಾಣದಿದ್ದರೂ ಪರವಾಗಿಲ್ಲ. ಗೀತೆಯಲ್ಲಂತೂ ಸಾಕ್ಷಾತ್ ಭಗವಾನ್ ಶ್ರೀಕೃಷ್ಣನೇ ಸ್ವತಃ ತನ್ನ ಬಾಯಿಯಿಂದಲೇ ಈ ಭರವಸೆಯನ್ನು ಎಲ್ಲಾ ಭಕ್ತರಿಗೆ ನೀಡಿದ್ದಾನೆ. ಮುಖ್ಯವಾಗಿ, ಪರಮಾತ್ಮನಿಗೆ ಇಂತಹ ಕೆಲಸಗಳನ್ನು ಮಾಡಿ ತನ್ನ ಹಿರಿಮೆಯನ್ನು ಹೆಚ್ಚಿಸಿಕೊಳ್ಳುವ ಅವಶ್ಯಕತೆಯಿಲ್ಲ, ಹಾಗೆಯೇ ಜನರ ಮನಸ್ಸಿನಲ್ಲಿ ಭಕ್ತಿಯನ್ನು ಹೆಚ್ಚಿಸಲು ಪರಮಾತ್ಮನಿಗೆ ಇಂತಹ ಉಪಾಯಗಳ ಅಗತ್ಯವೂ ಇಲ್ಲ. ಭಕ್ತ ಮತ್ತು ಅಭಕ್ತ ಪ್ರತಿಯೊಬ್ಬರ ಸಂಪೂರ್ಣ ಅಸ್ತಿತ್ವದ ಪೂರ್ಣ ಅರಿವಿರುವ ಮತ್ತು ಪ್ರತಿಯೊಬ್ಬರ ಕರ್ಮದ ಫಲವು ಯಾರ ಕೈಯಲ್ಲಿದೆಯೋ, ಆ ನಿಜವಾದ ಪರಮಾತ್ಮನಿಗೆ ಇಂತಹ ವಿಚಿತ್ರ ವಿಷಯಗಳ ಅವಶ್ಯಕತೆ ಎಂದಿಗೂ ಇರುವುದಿಲ್ಲ.


ಅಗ್ರಲೇಖನವನ್ನು ಮುಕ್ತಾಯಗೊಳಿಸುತ್ತಾ ಸದ್ಗುರು ಶ್ರೀ ಅನಿರುದ್ಧ ಬಾಪು ಬರೆಯುತ್ತಾರೆ -

‘ಮಿತ್ರರೇ, ಆ ಪರಮಾತ್ಮನಿಗೆ ಬೇಕಾಗಿರುವುದು ನಿಮ್ಮ ಅಚಲ ಶ್ರದ್ಧೆ, ಭಕ್ತಿ ಮತ್ತು ಕೃತಜ್ಞತೆಯ ಭಾವದಿಂದ ಮಾಡಿದ ದೇವರ ಮತ್ತು ದೇವರ ಅಸಹಾಯಕ ಮಕ್ಕಳ ಸೇವೆ. ಇದೇ ನಿಜವಾದ ನೈವೇದ್ಯ. ಅಲ್ಲ, ಇದೇ ಶ್ರೇಷ್ಠ ನೈವೇದ್ಯ. ಅದನ್ನು ಪರಮಾತ್ಮನು ಪೂರ್ತಿಯಾಗಿ ಸ್ವೀಕರಿಸುತ್ತಾನೆ ಮತ್ತು ಅದರ ಸಾವಿರ ಪಟ್ಟು ಫಲವನ್ನು ಪ್ರಸಾದವಾಗಿ ಭಕ್ತನಿಗೆ ನೀಡುತ್ತಾನೆ. ಮೋದಕವನ್ನು ನೈವೇದ್ಯವಾಗಿ ಖಂಡಿತ ಅರ್ಪಿಸಿ ಮತ್ತು ಇಷ್ಟಪಟ್ಟು ನೀವೂ ತಿನ್ನಿರಿ, ಆದರೆ ‘ಮೋದ’ ಎಂದರೆ ‘ಆನಂದ’ ಎಂಬುದನ್ನು ಮರೆಯಬೇಡಿ. ಪರಮಾತ್ಮನಿಗೆ ಮತ್ತು ಇತರರಿಗೆ ಆನಂದವಾಗುವಂತೆ ವರ್ತಿಸುವುದೇ ಶ್ರೇಷ್ಠ ಮೋದಕವಾಗಿದೆ.'
मराठी >> हिंदी >> English >> ગુજરાતી>> తెలుగు>> বাংলা>> தமிழ்>>

Tuesday, 22 July 2025

ಮಂಗಲಮೂರ್ತಿ ಮೋರ್ಯಾ! ಸದ್ಗುರು ಶ್ರೀ ಅನಿರುದ್ಧ ಬಾಪು ಅವರ ದೈನಿಕ ಪ್ರತ್ಯಕ್ಷದ ಸಂಪಾದಕೀಯ (ಸಪ್ಟೆಂಬರ 15, 2007)

ಮಂಗಲಮೂರ್ತಿ ಮೋರ್ಯಾ! ಸದ್ಗುರು ಶ್ರೀ ಅನಿರುದ್ಧ ಬಾಪು ಅವರ ದೈನಿಕ ಪ್ರತ್ಯಕ್ಷದ ಸಂಪಾದಕೀಯ (ಸಪ್ಟೆಂಬರ  15, 2007)
ಮಂಗಲಮೂರ್ತಿ ಮೋರ್ಯಾ! ಸದ್ಗುರು ಶ್ರೀ ಅನಿರುದ್ಧ ಬಾಪು ಅವರ ದೈನಿಕ ಪ್ರತ್ಯಕ್ಷದ ಸಂಪಾದಕೀಯ (ಸಪ್ಟೆಂಬರ  15, 2007)

ನಮ್ಮ ಮನೆಯ ವಾತಾವರಣ ಚಿಕ್ಕಂದಿನಿಂದಲೂ ಸಂಪೂರ್ಣವಾಗಿ ಶುದ್ಧ ವೈದಿಕ ಸಂಸ್ಕಾರಗಳಿಂದ ಕೂಡಿತ್ತು. ಆದರೆ, ತಾರ-ತಮ್ಯ, ಜಾತಿ-ಭೇದ, ಕರ್ಮಠ ಕರ್ಮಕಾಂಡ ಇವುಗಳ ಸುಳಿವೇ ಇರಲಿಲ್ಲ. ಅಮ್ಮ ಮತ್ತು ಅಜ್ಜಿ ಅವರಿಗೆ ಸಂಸ್ಕೃತ ಸಾಹಿತ್ಯದಲ್ಲಿ ಉತ್ತಮ ಜ್ಞಾನವಿತ್ತು, ಎಲ್ಲಾ ಸಂಹಿತೆಗಳು ಅವರಿಗೆ ಕಂಠಪಾಠವಾಗಿದ್ದವು. ಹೀಗಾಗಿ, ವೇದ ಮಂತ್ರಗಳ ಶುದ್ಧ ಮತ್ತು ಲಯಬದ್ಧ ಉಚ್ಚಾರಣೆಗಳು ಸದಾ ನಮ್ಮ ಕಿವಿಗೆ ಬೀಳುತ್ತಿದ್ದವು. ಇಂದಿಗೂ ಅವರ ಧ್ವನಿಯಲ್ಲಿನ ವೈದಿಕ ಮಂತ್ರಗಳು ಮತ್ತು ಸೂಕ್ತಗಳ ಮಧುರ ಸ್ವರಗಳು ನನ್ನ ಹೃದಯದಲ್ಲಿ ಪ್ರತಿಧ್ವನಿಸುತ್ತವೆ. ಗಣಪತಿ ಆರತಿಯ ನಂತರ ಹೇಳಲಾಗುವ ಮಂತ್ರಪುಷ್ಪಾಂಜಲಿ, ಇಂದಿನ ‘ಶಾರ್ಟ್‌ಕಟ್’ ರೀತಿ ‘ಓಂ ಯಜ್ಞೇನ ಯಜ್ಞಮಯಜಂತಾ…’ ದಿಂದ ಪ್ರಾರಂಭವಾಗದೆ, ‘ಓಂ ಗಣಾನಾಂ ತ್ವಾ ಗಣಪತಿಂ ಹವಾಮಹೇ…’ ದಿಂದ ಪ್ರಾರಂಭವಾಗಿ ಸುಮಾರು ಅರ್ಧದಿಂದ ಮುಕ್ಕಾಲು ಗಂಟೆಗಳ ಕಾಲ ನಡೆಯುತ್ತಿತ್ತು. ಅದರಲ್ಲಿನ ಆರೋಹ, ಅವರೋಹ, ಆಘಾತ, ಉದ್ದಾರ ಇತ್ಯಾದಿ ಎಲ್ಲಾ ನಿಯಮಗಳನ್ನು ಪಾಲಿಸಿದರೂ, ಆ ಮಂತ್ರಪುಷ್ಪಾಂಜಲಿಯಲ್ಲಿನ ಮಾಧುರ್ಯ, ಕೋಮಲತೆ ಮತ್ತು ಸಹಜತೆ ಹಾಗೆಯೇ ಜೀವಂತವಾಗಿರುತ್ತಿತ್ತು. ಏಕೆಂದರೆ, ಆ ಮಂತ್ರೋಚ್ಚಾರಣೆಯಲ್ಲಿ ಶ್ರೇಷ್ಠತೆಯನ್ನು ಪ್ರದರ್ಶಿಸುವ ಹಂಬಲವಿರಲಿಲ್ಲ, ಬದಲಾಗಿ ಸಂಪೂರ್ಣ ಭಕ್ತಿ ರಸದಿಂದ ತುಂಬಿದ ಪ್ರಫುಲ್ಲಿತ ಅಂತಃಕರಣವಿರುತ್ತಿತ್ತು.

ನಂತರ, ನನ್ನ ಐದನೇ ವಯಸ್ಸಿನಲ್ಲಿ, ನನ್ನ ಅಜ್ಜಿಯ ಮನೆಯಲ್ಲಿ ಅಂದರೆ ಪಂಡಿತರ ಮನೆಯ ಗಣಪತಿ ಮುಂದೆ, ಅವರಿಬ್ಬರೂ ನನಗೆ ಮಂತ್ರಪುಷ್ಪಾಂಜಲಿಯ ಶಾಸ್ತ್ರೀಯ ವಿಧಾನವನ್ನು ಮೊದಲ ಬಾರಿಗೆ ಕಲಿಸಿದರು. ಆಗ ನನ್ನ ಅಮ್ಮನ ಮೂವರು ಚಿಕ್ಕಮ್ಮಂದಿರು, ಅಜ್ಜಿ ಮತ್ತು ಅಮ್ಮ ಹೀಗೆ ಐವರು ಸೇರಿ ನನಗೆ ಆರತಿ ಮಾಡಿ, ಸಾಕಷ್ಟು ಮೋದಕಗಳನ್ನು ತಿನ್ನಿಸಿದರು. ಆ ಸಮಯದವರೆಗೆ ನಾನು ನನ್ನ ಅಜ್ಜಿಯ ಮನೆಯಲ್ಲಿ ಏಕೈಕ ಮೊಮ್ಮಗನಾಗಿದ್ದೆ, ಹಾಗಾಗಿ ಸಂಪೂರ್ಣ ಪಾಧ್ಯೆ ಮತ್ತು ಪಂಡಿತ್ ಮನೆತನಗಳಿಗೂ ನಾನು ಅತ್ಯಂತ ಪ್ರೀತಿಯವನಾಗಿದ್ದೆ. ಅದೇ ದಿನ ಅಜ್ಜಿ, ಪಾಧ್ಯೆ ಮನೆತನದ ಸಂಪ್ರದಾಯದ ಪ್ರಕಾರ ಬಾಲಗಣೇಶನನ್ನು ಪ್ರತಿಷ್ಠಾಪಿಸುವ ವಿಧಾನವನ್ನು ನನಗೆ ವಿವರಿಸಿದರು. ಅದಕ್ಕಾಗಿಯೇ ಇಂದಿಗೂ ನಮ್ಮ ಮನೆಯಲ್ಲಿ ಗಣೇಶ ಚತುರ್ಥಿಯಂದು ಪ್ರತಿಷ್ಠಾಪಿಸುವ ಮೂರ್ತಿ ಬಾಲಗಣೇಶನದೇ ಆಗಿರುತ್ತದೆ.

ಒಂದು ಬಾರಿ ನಾನು ಅಜ್ಜಿಯನ್ನು ಕೇಳಿದೆ, ‘ಪ್ರತಿ ವರ್ಷ ಬಾಲಗಣೇಶನನ್ನೇ ಯಾಕೆ ಅಜ್ಜಿ?’ ಅಜ್ಜಿ ನನ್ನ ಕೆನ್ನೆಯನ್ನು ಸವರಿಕೊಂಡು ಉತ್ತರಿಸಿದರು, “ಅರೇ ಬಾಪುರಾಯ, ಒಂದು ಮಗು ಮನೆಗೆ ಬಂದಾಗ ನಾವು ಅದನ್ನು ಪ್ರೀತಿಯಿಂದ ನೋಡಿಕೊಂಡರೆ, ಆ ಮಗುವಿನ ಹಿಂದೆಯೇ ಅದರ ತಂದೆ-ತಾಯಿ ಕೂಡ ಬಂದು ಸಂತೋಷಪಡುತ್ತಾರೆ. ಈ ಬಾಲಗಣೇಶನನ್ನು ಭಕ್ತರು ಪ್ರೀತಿಯಿಂದ ನೋಡಿಕೊಳ್ಳುವುದರಿಂದ ಪಾರ್ವತಿ ಮಾತೆ ಮತ್ತು ಪರಮಶಿವನ ಸ್ವಾಗತ ಮತ್ತು ಪೂಜೆ ಸಹ ತನ್ನಿಂದ ತಾನೇ ಆಗುತ್ತದೆ. ಮತ್ತೊಂದು ವಿಷಯ, ಅಪರಿಚಿತ ಸಾಮಾನ್ಯ ಮನುಷ್ಯ ಕೂಡ ಮುದ್ದಾದ ಚಿಕ್ಕ ಮಗುವಿನೊಂದಿಗೆ ವ್ಯವಹರಿಸುವಾಗ ಅವರ ಮನಸ್ಸಿನಲ್ಲಿ ತಾನಾಗಿಯೇ ಒಂದು ನಿಷ್ಕಾಮ ಪ್ರೇಮ ಪ್ರಕಟವಾಗುತ್ತದೆ. ಹಾಗಾದರೆ, ಈ ಅತ್ಯಂತ ಸುಂದರವಾದ ಮಂಗಳಮೂರ್ತಿಯ ಬಾಲರೂಪದ ಸಹವಾಸದಲ್ಲಿ ಭಕ್ತರ ಮನಸ್ಸಿನಲ್ಲಿ ಭಕ್ತಿ, ಪ್ರೇಮ ಹಾಗೂ ನಿಷ್ಕಾಮ ಮತ್ತು ಪವಿತ್ರ ಪ್ರೇಮ ಇರುವುದಲ್ಲವೆ?”


 

ಅಜ್ಜಿಯ ಈ ಭಾವನೆಗಳು ಅತ್ಯಂತ ಶುದ್ಧ ಮತ್ತು ಪವಿತ್ರ ಭಕ್ತಿಯಿಂದ ತುಂಬಿದ ಅಂತಃಕರಣದ ಸಹಜ ಪ್ರವೃತ್ತಿಗಳಾಗಿದ್ದವು. ನಾವೆಲ್ಲರೂ ಅಕ್ಷರಶಃ ಕೋಟ್ಯಂತರ ಜನರು ಗಣಪತಿಯನ್ನು ಮನೆಗೆ ತರುತ್ತೇವೆ, ಕೆಲವರು ಒಂದೂವರೆ ದಿನ, ಇನ್ನು ಕೆಲವರು ಹತ್ತು ದಿನ. ವಿವಿಧ ರೀತಿಯ ಗಣೇಶ ಮೂರ್ತಿಗಳು ಇರಲಿ, ಆದರೆ ಈ ವಿಘ್ನಹರ್ತ ಗಣೇಶನೊಂದಿಗೆ ನಾವು ಇಂತಹ ಆತ್ಮೀಯ ಮತ್ತು ಆಪ್ತವಾದ ಮನೆತನದ ಸಂಬಂಧವನ್ನು ಬೆಳೆಸಿಕೊಳ್ಳುತ್ತೇವೆಯೇ?

ಮನೆಗೆ ಬಂದ ಗಣಪತಿ ಕೇವಲ ಮನೆಯ ಸಂಪ್ರದಾಯವನ್ನು ಮುರಿಯಬಾರದು, ಮುರಿದರೆ ವಿಘ್ನಗಳು ಬರುತ್ತವೆ ಎಂಬ ಭಾವನೆಯಿಂದ ಕೆಲವು ಕಡೆಗಳಲ್ಲಿ ತರಲಾಗುತ್ತದೆ. ಕೆಲವು ಕಡೆಗಳಲ್ಲಿ ಹರಕೆ ತೀರಿಸಲು ತರಲಾಗುತ್ತದೆ, ಇನ್ನು ಕೆಲವು ಕಡೆಗಳಲ್ಲಿ ಕೇವಲ ಉತ್ಸವ ಮತ್ತು ಮೋಜು ಮಸ್ತಿಗಾಗಿ ತರಲಾಗುತ್ತದೆ. ಇಂತಹ ಗಣಪತಿ ಪ್ರತಿಷ್ಠಾಪನೆಯಲ್ಲಿ ಮಂತ್ರಗಳು, ಮಂತ್ರಪುಷ್ಪಾಂಜಲಿ, ಆರತಿ, ಮಹಾನೈವೇದ್ಯ ಇರುತ್ತವೆ. ಜೊತೆಗೆ ರೀತಿ-ರಿವಾಜುಗಳು ಮತ್ತು ಶಾಸ್ತ್ರಗಳನ್ನು ಸಂಪೂರ್ಣವಾಗಿ ಪಾಲಿಸುವ ಭೀತಿಯಿಂದ ಕೂಡಿದ ಪ್ರಯತ್ನವೂ ಇರುತ್ತದೆ. ಆದರೆ, ಈ ಎಲ್ಲ ಗೊಂದಲದಲ್ಲಿ ಕಳೆದುಹೋಗುವುದು ಈ ಆರಾಧನೆಯ ಮೂಲ ಸಾರ ಅಂದರೆ ಪ್ರೀತಿಭರಿತ ಭಕ್ತಿಭಾವ.

ಮಂಗಲಮೂರ್ತಿ ಮೋರ್ಯಾ ಮತ್ತು ಸುಖಕರ್ತಾ ದುಃಖಹರ್ತಾ, ಈ ಶ್ರೀ ಗಣಪತಿಯ ಬಿರುದುಗಳು ಎಲ್ಲರಿಗೂ ತಿಳಿದಿವೆ. ವಾಸ್ತವವಾಗಿ, ಈ ‘ಸುಖಕರ್ತಾ ದುಃಖಹರ್ತಾ’ ಎಂಬ ಬಿರುದಿನಿಂದಲೇ ನಾವು ಗಣಪತಿಯನ್ನು ಮನೆಗೆ ತರಲು ಸಿದ್ಧರಾಗುತ್ತೇವೆ. ಆದರೆ ‘ಮಂಗಲಮೂರ್ತಿ’ ಎಂಬ ಬಿರುದಿನ ಬಗ್ಗೆ ಏನು? ಆ ಸಿದ್ಧಿ ವಿನಾಯಕ ಎಲ್ಲವನ್ನೂ ಮಂಗಳಕರವನ್ನಾಗಿ ಮಾಡುತ್ತಾನೆ. ಆದರೆ, ಅವನನ್ನು ಮನೆಗೆ ತಂದ ನಂತರ ನಾವು ಅವನನ್ನು ಎಷ್ಟು ಮಂಗಳಕರ ವಾತಾವರಣದಲ್ಲಿ ಇಡುತ್ತೇವೆ? ಇದೇ ಮುಖ್ಯ ಪ್ರಶ್ನೆ.

ಕೇವಲ ದೂರ್ವೆಗಳ ದೊಡ್ಡ ಹಾರವನ್ನು ಹಾಕಿ, ಇಪ್ಪತ್ತೊಂದು ಮೋದಕಗಳನ್ನು ಬೆಳಿಗ್ಗೆ ಮತ್ತು ಸಂಜೆ ಅವನ ಮುಂದೆ ಇಟ್ಟು, ಕೆಂಪು ಹೂವುಗಳನ್ನು ಅರ್ಪಿಸಿ ಮತ್ತು ಆರತಿಗಳಿಗೆ ತಾಳಗಳನ್ನು ಕುಟ್ಟಿ, ನಾವು ನಮ್ಮ ಕೈಲಾದಷ್ಟು ಮತ್ತು ನಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಮಂಗಳವನ್ನು ಸೃಷ್ಟಿಸುತ್ತೇವೆಯೇ? ಉತ್ತರ ಬಹುತೇಕ ಬಾರಿ ‘ಇಲ್ಲ’ ಎಂದೇ ಸಿಗುತ್ತದೆ.

ಹಾಗಾದರೆ, ಆ ಮಂಗಳಮೂರ್ತಿಗೆ ನಮ್ಮಿಂದ ನಿರೀಕ್ಷಿತವಾಗಿರುವ ‘ಮಾಂಗಲ್ಯ’ವನ್ನು ನಾವು ಹೇಗೆ ಅರ್ಪಿಸಬಹುದು? ಉತ್ತರ ತುಂಬಾ ಸರಳ ಮತ್ತು ಸುಲಭ. ಆ ಮೂರ್ತಿಯನ್ನು ಸ್ವಾಗತಿಸುವಾಗ, ಒಂದು ವರ್ಷದ ನಂತರ ನಮ್ಮ ಆಪ್ತರು ಮನೆಗೆ ಮರಳುತ್ತಿದ್ದಾರೆ ಎಂಬ ಭಾವನೆಯನ್ನು ಇಟ್ಟುಕೊಳ್ಳಿ; ಇಪ್ಪತ್ತೊಂದು ಮೋದಕಗಳೊಂದಿಗೆ ನೈವೇದ್ಯದಿಂದ ತುಂಬಿದ ತಟ್ಟೆಯನ್ನು ಅವನ ಮುಂದೆ ಇಟ್ಟು, ಪ್ರೀತಿಯಿಂದ ಆಗ್ರಹಪಡಿಸಿ; ಬಂದ ಅತಿಥಿಗಳ ಆತಿಥ್ಯಕ್ಕಿಂತ ಆ ಗಣೇಶನ ಆರಾಧನೆಯ ಕಡೆಗೆ ಹೆಚ್ಚು ಗಮನ ಕೊಡಿ; ಆರತಿ ಹೇಳುವಾಗ ಯಾರೊಂದಿಗೂ ಸ್ಪರ್ಧೆ ಮಾಡಬೇಡಿ ಮತ್ತು ಮುಖ್ಯವಾಗಿ, ಈ ಮಹಾವಿನಾಯಕ ತನ್ನ ಸ್ಥಾನಕ್ಕೆ ಮರಳಲು ಹೊರಟಾಗ, ಹೃದಯ ತುಂಬಿ ಬರಲಿ ಮತ್ತು ಪ್ರೀತಿಯ ವಿಶ್ವಾಸಪೂರ್ವಕ ವಿನಂತಿಯಾಗಲಿ, ‘ಮಂಗಲಮೂರ್ತಿ ಮೋರ್ಯಾ, ಮುಂದಿನ ವರ್ಷ ಬೇಗ ಬನ್ನಿ.’

ಸಂಪಾದಕೀಯದ ಕೊನೆಯಲ್ಲಿ ಸದ್ಗುರು ಶ್ರೀ ಅನಿರುದ್ಧ ಬಾಪು ಬರೆಯುತ್ತಾರೆ -

‘ನನ್ನ ಶ್ರದ್ಧಾಳು ಸ್ನೇಹಿತರೇ, ‘ಮುಂದಿನ ವರ್ಷ ಬೇಗ ಬನ್ನಿ’ ಈ ವಾಕ್ಯದ ಅರ್ಥವನ್ನು ಸರಿಯಾಗಿ ಅರ್ಥಮಾಡಿಕೊಳ್ಳಿ. ಬರುವ ದಿನಾಂಕ ಈಗಾಗಲೇ ನಿಗದಿಯಾಗಿರುತ್ತದೆ, ಹಾಗಾದರೆ ಕೇವಲ ಬಾಯಿಂದ ‘ಬೇಗ ಬನ್ನಿ’ ಎಂದು ಹೇಳುವುದರ ಹಿಂದೆ ಯಾವ ಅರ್ಥವಿರಬಹುದು? ಇದರಲ್ಲಿ ಒಂದೇ ಅರ್ಥವಿದೆ, ಅದು ಮುಂದಿನ ವರ್ಷದವರೆಗೆ ಕಾಯಬೇಡಿ, ದೇವ ಮೋರ್ಯಾ, ನೀವು ಪ್ರತಿದಿನವೂ ಬರುತ್ತಿರಿ ಮತ್ತು ಅದು ಆದಷ್ಟು ಬೇಗ ನಡೆಯಲಿ.’


मराठी >> हिंदी >> বাংলা>> ગુજરાતી>>

Friday, 18 July 2025

ಅನಿರುದ್ಧ ಬಾಪೂ ಅವರು ವಿವರಿಸಿದ ಶ್ರೀ ಗಣೇಶನ ಭಕ್ತಿ, ನಂಬಿಕೆ ಮತ್ತು ವಿಜ್ಞಾನದ ಪಯಣ


ನಾವು ಯಾವುದೇ ಶುಭ ಕಾರ್ಯವನ್ನು ಪ್ರಾರಂಭಿಸುವಾಗ, ಅದು ಯಾವುದೇ ಅಡೆತಡೆಯಿಲ್ಲದೆ ನೆರವೇರಲಿ ಎಂದು ವಿಘ್ನಹರ್ತ ಶ್ರೀ ಗಣೇಶನನ್ನು ಸ್ಮರಿಸುತ್ತೇವೆ, ಪೂಜಿಸುತ್ತೇವೆ ಮತ್ತು ಪ್ರಾರ್ಥಿಸುತ್ತೇವೆ. ಚಿಕ್ಕವರಿದ್ದಾಗ ಅಕ್ಷರಗಳನ್ನು ಬರೆಯಲು ಕಲಿಯುವಾಗಲೂ, ನಾವು ಮೊದಲು 'ಶ್ರೀ ಗಣೇಶಾಯ ನಮಃ' ಎಂದೇ ಬರೆಯಲು ಕಲಿಯುತ್ತೇವೆ. ಎಷ್ಟು ವಿವಿಧ ದೇವರ ದೇವಸ್ಥಾನಗಳಿದ್ದರೂ, ಶ್ರೀ ಗಣೇಶ ಮಾತ್ರ ಪ್ರತಿಯೊಂದು ದೇವಸ್ಥಾನದ ಗರ್ಭಗುಡಿಯ ಪ್ರವೇಶ ದ್ವಾರದಲ್ಲಿ ವಿರಾಜಮಾನನಾಗಿರುತ್ತಾನೆ. 'ಮಂಗಲಮೂರ್ತಿ ಶ್ರೀ ಗಣಪತಿ' ನಿಜಕ್ಕೂ ಎಲ್ಲ ಶುಭ ಕಾರ್ಯಗಳ ಅಗ್ರಸ್ಥಾನದಲ್ಲಿರುವ, ನಮ್ಮ ಭಾರತದಾದ್ಯಂತ ಚಿಕ್ಕವರಿಂದ ಹಿಡಿದು ದೊಡ್ಡವರವರೆಗೆ ಎಲ್ಲರಿಗೂ ಪ್ರಿಯವಾದ ದೈವವಾಗಿದೆ.

ಇದೇ ಗಣಪತಿಯ ಬಗ್ಗೆ, ದೈನಿಕ 'ಪ್ರತ್ಯಕ್ಷ'ದ ಕಾರ್ಯಕಾರಿ ಸಂಪಾದಕ ಡಾ. ಶ್ರೀ ಅನಿರುದ್ಧ ಧೈರ್ಯಧರ ಜೋಶಿ (ಸದ್ಗುರು ಶ್ರೀ ಅನಿರುದ್ಧ ಬಾಪೂ) ಅವರು ತಮ್ಮ ಅಧ್ಯಯನ ಮತ್ತು ಚಿಂತನೆಯಿಂದ ಮೂಡಿಬಂದ ವಿಚಾರಗಳನ್ನು ಅನೇಕ ಸಂಪಾದಕೀಯಗಳಲ್ಲಿ ಮಂಡಿಸಿದ್ದಾರೆ. ಈ ಸಂಪಾದಕೀಯಗಳು ಕೇವಲ ಮಾಹಿತಿ ನೀಡಲು ಸೀಮಿತವಾಗಿಲ್ಲ, ಬದಲಿಗೆ ಭಕ್ತರ ಮನಸ್ಸಿನ ಪ್ರಶ್ನೆಗಳಿಗೆ ಉತ್ತರಿಸುವ, ಭಕ್ತಿಯನ್ನು ಹೆಚ್ಚು ಅರ್ಥಪೂರ್ಣವಾಗಿಸುವ ಮತ್ತು ಗಣಪತಿಯ ವಿವಿಧ ರೂಪಗಳನ್ನು ಆಳವಾಗಿ ಪರಿಚಯಿಸುವಂತಿವೆ.

ಈ ಸಂಪಾದಕೀಯಗಳಲ್ಲಿ ಬಾಪೂ ಅವರು ವೇದ, ಪುರಾಣ, ಸಂತ ಸಾಹಿತ್ಯದಿಂದ ಗಣಪತಿಯ ಸ್ವರೂಪ ಮತ್ತು ಅದರ ಹಿಂದಿನ ತತ್ತ್ವಜ್ಞಾನವನ್ನು ಬಹಳ ಸುಲಭ ಮತ್ತು ಸರಳ ಭಾಷೆಯಲ್ಲಿ ವಿವರಿಸಿದ್ದಾರೆ. ಬ್ರಹ್ಮಣಸ್ಪತಿ-ಗಣಪತಿ ಸಂಕಲ್ಪನೆ, ವಿಶ್ವದ ಘನಪ್ರಾಣ ಗಣಪತಿ, ಗಣಪತಿಯ ಜನ್ಮ ಕಥೆಯ ಹಿಂದಿನ ಸಿದ್ಧಾಂತ, ಸಾರ್ವಜನಿಕ ಗಣೇಶೋತ್ಸವದ ಹಿಂದಿನ ಪಾತ್ರ, ಮೂಲಾಧಾರ ಚಕ್ರದ ಅಧಿಷ್ಠಾತ ಗಣಪತಿ, ಗಣಪತಿಯ ಪ್ರಮುಖ ಹೆಸರುಗಳು, ಅವನ ವಾಹನ ಮೂಷಕರಾಜ, ವ್ರತಬಂಧ ಕಥೆ, ಮೋದಕ ಕಥೆ ಮತ್ತು ಆ ಕಥೆಗಳ ಭಾವಾರ್ಥ... ಈ ಎಲ್ಲ ವಿಷಯಗಳನ್ನು ಬಾಪೂ ಅವರು ಇಂತಹ ರಚನೆಯಲ್ಲಿ ಮಂಡಿಸಿದ್ದಾರೆ, ಅಂದರೆ ನಮ್ಮ ಮನಸ್ಸಿನ ಪ್ರಶ್ನೆಗಳಿಗೆ ಉತ್ತರ ನೀಡುತ್ತಿರುವಂತೆ.

ಗಣಪತಿ ದೈವದ ಬಗ್ಗೆ ಈ ವಿವೇಚನೆಯು ಶ್ರದ್ಧಾವಂತ ಭಕ್ತರಿಗೆ ಕೇವಲ ಮಾಹಿತಿಯಲ್ಲ, ಬದಲಿಗೆ ಭಾವನಾತ್ಮಕ ದೃಷ್ಟಿಕೋನದಿಂದ ನಮ್ಮ ಶ್ರದ್ಧೆಯನ್ನು ಇನ್ನಷ್ಟು ದೃಢಪಡಿಸುವಂತಹದ್ದು.

ದೈನಿಕ 'ಪ್ರತ್ಯಕ್ಷ'ದಲ್ಲಿ ಬೇರೆ ಬೇರೆ ಸಮಯದಲ್ಲಿ ಪ್ರಕಟವಾದ ಈ ಸಂಪಾದಕೀಯಗಳು ಈಗ ಬ್ಲಾಗ್‌ಪೋಸ್ಟ್ ರೂಪದಲ್ಲಿ ನಮ್ಮೆಲ್ಲರಿಗೂ ಲಭ್ಯವಾಗುತ್ತಿವೆ — ಬಾಪೂ ಅವರು ನೀಡಿದ ಆ ಅಮೂಲ್ಯ ವಿಚಾರಗಳ ಪರಿಮಳ ನಮ್ಮೆಲ್ಲರ ಮನಸ್ಸಿನಲ್ಲಿ ಹರಡಲಿ ಎಂಬ ಒಂದೇ ಉದ್ದೇಶದಿಂದ.

_____________________________________________