ಪ್ರತಿ ವರ್ಷ ಮಾರ್ಗಶೀರ್ಷ ತಿಂಗಳಿನ ಶುಕ್ಲ ಪಕ್ಷದ ಎರಡನೇ ಶನಿವಾರದಿಂದ ಭಕ್ತರು ತಮ್ಮ ತಮ್ಮ ಮನೆಗಳಲ್ಲಿ ಸದ್ಗುರು ಶ್ರೀ ಅನಿರದ್ಧರ ಪಾದುಕೆಗಳನ್ನು ಪೂಜಿಸಿ 'ಸಚ್ಚಿದಾನಂದೋತ್ಸವ' ಆಚರಿಸುತ್ತಾರೆ. ಇದನ್ನು ಎರಡು ದಿನ ಅಥವಾ ಐದು ದಿನಗಳವರೆಗೆ ಇಚ್ಛಾನುಸಾರ ಆಚರಿಸಲಾಗುತ್ತದೆ.
'ಶ್ರೀಪ್ರೇಮಸ್ವರೂಪ ತವ ಶರಣಂ | ಪುರುಷಾರ್ಥಸ್ವರೂಪ ತವ ಶರಣಂ |
ಶರಣಾಗತತ್ರಿತಾಪಹರಾ | ಸಚ್ಚಿದಾನಂದಾ ತವ ಶರಣಂ ||'
'ಆಹ್ನಿಕ'ದಲ್ಲಿರುವ ಅಚಿಂತ್ಯದಾನಿ ಸ್ತೋತ್ರದ ಈ ಒಂಬತ್ತನೇ ಪದ್ಯವನ್ನು ನಾವು ನಿಯಮಿತವಾಗಿ ಹೇಳುತ್ತೇವೆ. ಮಾನವನ ಜೀವನದಿಂದ ಆನಂದವನ್ನು ಕಸಿದುಕೊಂಡು ಬಾಧಿಸುವ ಮೂರು ವಿಧದ ನೋವುಗಳೆಂದರೆ - ಆಧ್ಯಾತ್ಮಿಕ, ಅಧಿಭೌತಿಕ ಮತ್ತು ಆಧಿಭೌತಿಕ ತಾಪಗಳು. ಸಚ್ಚಿದಾನಂದ ಸ್ವರೂಪದ ಸದ್ಗುರುತತ್ವವೇ ಈ ತ್ರಿವಿಧ ತಾಪಗಳಿಂದ ನಮ್ಮನ್ನು ಮುಕ್ತರನ್ನಾಗಿಸಿ ನಮ್ಮ ಜೀವನವನ್ನು ಆನಂದದಿಂದ ತುಂಬಿ ಹಾಕುತ್ತದೆ.
ಆ ಸಚ್ಚಿದಾನಂದನು ತನ್ನ ಕಾರ್ಯ ಮಾಡಲು ಸಮರ್ಥನಾಗಿದ್ದು, ಸಿದ್ಧನೂ ಆಗಿದ್ದಾನೆ. ಆದರೆ, ಆತನ ಕಾರ್ಯ ನಮ್ಮ ಜೀವನದಲ್ಲಿ ನಡೆಯಬೇಕಾದರೆ, ನಾವೇ ಮೊದಲು ಆತನನ್ನು ಪ್ರೀತಿಸಬೇಕು, ಆತನ ಋಣಗಳನ್ನು ಸ್ಮರಿಸಿ ಕೃತಜ್ಞರಾಗಿರಬೇಕು ಮತ್ತು ಸದ್ಗುರುಗಳ ಚರಣಗಳಲ್ಲಿ ಸಂಪೂರ್ಣ ಶರಣಾಗತಿ ಭಾವವನ್ನು ಸ್ವೀಕರಿಸಬೇಕು.
ನಮ್ಮ ಜೀವನದಲ್ಲಿ ಪ್ರೇಮಭಾವ, ಕೃತಜ್ಞತಾಭಾವ ಮತ್ತು ಶರಣಾಗತಿ ಭಾವ ಈ ಮೂರು ಭಾವಗಳು ಎಷ್ಟರ ಮಟ್ಟಿಗೆ ಹೆಚ್ಚುತ್ತವೆಯೋ, ಅಷ್ಟರ ಮಟ್ಟಿಗೆ ನಮ್ಮ ಲೌಕಿಕ ಮತ್ತು ಆಧ್ಯಾತ್ಮಿಕ ಜೀವನ ಆನಂದಮಯವಾಗುತ್ತದೆ. ಇದಕ್ಕಾಗಿಯೇ ಭಕ್ತರು ಮಾರ್ಗಶೀರ್ಷ ತಿಂಗಳಲ್ಲಿ 'ಸಚ್ಚಿದಾನಂದೋತ್ಸವ' ಆಚರಿಸುತ್ತಾರೆ.
ಸ್ವತಃ ಭಗವಾನ ಶ್ರೀಕೃಷ್ಣನು ಶ್ರೀಮದ್ಬಾಗವದ್ಗೀತೆಯಲ್ಲಿ 'ಮಾಸಾನಾಂ ಮಾರ್ಗಶೀರ್ಷೋಹಂ' (ತಿಂಗಳುಗಳಲ್ಲಿ ನಾನೇ ಮಾರ್ಗಶೀರ್ಷ) ಎಂದು ಹೇಳಿದ್ದಾನೆ. ಮಾರ್ಗಶೀರ್ಷ ತಿಂಗಳು, ದೇವಯಾನ ಮಾರ್ಗದ ಅಂತಿಮ ಗುರಿಯನ್ನು ತಲುಪಲು ಬಯಸುವ ಭಕ್ತರಿಗೆ ಅತ್ಯಂತ ಮಹತ್ವದವಾದ ಪರ್ವಕಾಲವೆಂದು ಪರಿಗಣಿಸಲಾಗಿದೆ.
ಈ ಮಾರ್ಗದಲ್ಲಿ ಸಚ್ಚಿದಾನಂದನ ಕಡೆಗೆ ಸಾಗುವ 'ಪ್ರೇಮ-ಪ್ರವಾಸ' ಸುಗಮವಾಗಲಿ ಎಂಬ ಕಾರಣಕ್ಕೆ ಭಕ್ತರು ಮಾರ್ಗಶೀರ್ಷ ತಿಂಗಳಲ್ಲಿ ಸಚ್ಚಿದಾನಂದೋತ್ಸವ ಆಚರಿಸುತ್ತಾರೆ.
ಈ ಮಾರ್ಗದಲ್ಲಿನ ಪ್ರಯಾಣದಲ್ಲಿ ನಮ್ಮ ಲೌಕಿಕ ಜೀವನ ಮತ್ತು ಆಧ್ಯಾತ್ಮಿಕ ಜೀವನ ಎರಡೂ ಏಕಕಾಲದಲ್ಲಿ ಸುಖಮಯವಾಗಲು ಮನಸ್ಸು, ಪ್ರಾಣ ಮತ್ತು ಪ್ರಜ್ಞೆ ಈ ಮೂರು ಹಂತಗಳಲ್ಲಿ 'ಔಚಿತ್ಯ' ಅಂದರೆ ಸೂಕ್ತತೆ ಕಾಪಾಡಿಕೊಳ್ಳುವುದು ಮುಖ್ಯವಾಗಿದೆ. ಸಚ್ಚಿದಾನಂದೋತ್ಸವದಲ್ಲಿ ಭಕ್ತರು ಅನಿರುದ್ಧ-ಅಥರ್ವ ಸ್ತೋತ್ರ ಮತ್ತು ಅನಿರುದ್ಧ ಅಷ್ಟೋತ್ತರಶತ ನಾಮಾವಳಿಗಳೊಂದಿಗೆ, ಸೂಕ್ತತೆಯನ್ನು ಸಾಧಿಸುವ ಉದ್ದೇಶದಿಂದ ಸದ್ಗುರು ಶ್ರೀಅನಿರುದ್ಧರ ಪಾದುಕೆಗಳ ಪೂಜೆ ಮಾಡುತ್ತಾರೆ.
ಸಚ್ಚಿದಾನಂದೋತ್ಸವ ಆಚರಿಸುವ ಭಕ್ತರ ಆಶಯವೆಂದರೆ, ಈ ಪೂಜೆಯಲ್ಲಿರುವ ಅಥರ್ವ ಸ್ತೋತ್ರವು ನಮ್ಮೊಳಗಿನ ಚಂಚಲತೆಯನ್ನು ನಾಶಪಡಿಸಲಿ ಮತ್ತು ಅಷ್ಟೋತ್ತರಶತ ನಾಮಾವಳಿಯು ನಮ್ಮ ದೇಹದಲ್ಲಿನ ೧೦೮ ಶಕ್ತಿಕೇಂದ್ರಗಳಿಗೆ ಸಾಮರ್ಥ್ಯವನ್ನು ಒದಗಿಸಲಿ.
ಸಚ್ಚಿದಾನಂದೋತ್ಸವ ಆಚರಿಸುವ ಭಕ್ತರು ಸದ್ಗುರುಗಳಲ್ಲಿ ಈ ಆಶೀರ್ವಾದಗಳನ್ನು ಬೇಡುತ್ತಾರೆ:
೧) ನಮ್ಮ ಮೂರು ಸ್ತರಗಳ ಮೇಲಿನ ಅಶುದ್ಧಿ, ಅಪವಿತ್ರತೆ, ಅನುಚಿತತೆ ದೂರವಾಗಲಿ,
೨) ನಮ್ಮಲ್ಲಿ ಪ್ರೇಮಭಾವ, ಕೃತಜ್ಞತಾಭಾವ ಮತ್ತು ಶರಣಾಗತಿ ಭಾವ ಹೆಚ್ಚಾಗುತ್ತಿರಲಿ,
೩) ನಮ್ಮ ಮನಸ್ಸು, ಪ್ರಾಣ ಮತ್ತು ಪ್ರಜ್ಞೆ ಈ ಮೂರು ಸ್ತರಗಳನ್ನು ಬಾಧಿಸುವ ಚಂಚಲತೆ, ಅವರೋಧ ಮತ್ತು ದಿಶೆ ಇಲ್ಲದಿರುವಿಕೆ ಎಂಬ ಮೂರು ಅಸುರರ ನಾಶವಾಗಿ ಮೂರೂ ಸ್ತರಗಳಲ್ಲಿ ಸೂಕ್ತತೆ ನೆಲೆಸಲಿ.
'ವಾಮಪಾದೇನ ಅಚಲಂ ದಕ್ಷಿಣೇನ ಗತಿಕಾರಕಂ' ಅಂದರೆ, ಎಡಪಾದದಿಂದ ಅನುಚಿತತೆಯನ್ನು ತಡೆಯುವ ಮತ್ತು ಬಲಗಾಲಿನಿಂದ ಉಚಿತಕ್ಕೆ ಗತಿಯನ್ನು ನೀಡುವಂತಹ ಯಾರ ಚರಣನ್ಯಾಸವನ್ನು ವರ್ಣಿಸಲಾಗಿದೆಯೋ, ಅಂತಹ ಸದ್ಗುರು ಶ್ರೀಅನಿರುದ್ಧರ ಪಾದುಕೆಗಳನ್ನು ಪೂಜಿಸಿ, ಸದ್ಗುರುಕೃಪೆಯಿಂದ ಲೌಕಿಕ ಮತ್ತು ಆಧ್ಯಾತ್ಮಿಕ ಜೀವನ ಏಕಕಾಲದಲ್ಲಿ ಆನಂದಮಯವಾಗಲಿ ಎಂಬ ಶ್ರದ್ಧೆಯಿಂದ ಭಕ್ತರು ಸಚ್ಚಿದಾನಂದೋತ್ಸವ ಆಚರಿಸುತ್ತಾರೆ.
