ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಅನಾವರಣ ಆಗದ ಇತಿಹಾಸದ ಸೂಕ್ಷ್ಮ ಸತ್ಯಗಳು - ಭಾಗ - 27

ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಅನಾವರಣ ಆಗದ ಇತಿಹಾಸದ ಸೂಕ್ಷ್ಮ ಸತ್ಯಗಳು - ಭಾಗ - 27

ಕಮಿಷನರ್ ರ‍್ಯ್೦ಡ್ ಮತ್ತು ಲೆಫ್ಟಿನೆಂಟ್ ಐಯರ್ಸ್ಟ್ ಅವರನ್ನು ಯಾವ ರೀತಿ ಪ್ಲಾನ್ ಮಾಡಿ, ಶಿಸ್ತುಬದ್ಧವಾಗಿ ನಡುರಸ್ತೆಯಲ್ಲಿ, ಸುತ್ತಲೂ ಅಷ್ಟೊಂದು ಜನದಟ್ಟಣೆ ಇರುವಾಗ, ಅದೂ ಅತೀ ಪ್ರಮುಖವಾದ ದಿನದಂದೇ ಗುಂಡಿಟ್ಟು ಕೊಲ್ಲಲಾಯಿತೋ, ಅದನ್ನು ನೋಡಿ ಬ್ರಿಟಿಷ್ ಸರ್ಕಾರಕ್ಕೆ ಒಂದು ವಿಷಯ ಪಕ್ಕಾ ಆಗಿತ್ತು. ಈ ಕೆಲಸವನ್ನು ಬರಿ ಮೂವರು ಚಾಫೇಕರ್ ಸಹೋದರರು ಮತ್ತು ಅವರ ‘ಮಹದೇವ ರಾನಡೆ’ ಎನ್ನುವ ಸಂಬಂಧಿಕ ಅಷ್ಟೇ ಮಾಡಲು ಸಾಧ್ಯವಿಲ್ಲ ಎಂದು ಅವರಿಗೆ ಖಾತ್ರಿಯಾಗಿತ್ತು.

೧೮೫೮ ರ ನಂತರ ಮೊದಲ ಬಾರಿಗೆ ಇಷ್ಟು ಬಹಿರಂಗವಾಗಿ, ಬಹಳ ಉನ್ನತ ಹುದ್ದೆಯಲ್ಲಿದ್ದ ಬ್ರಿಟಿಷ್ ಆಫೀಸರ್‌ಗಳ ಮೇಲೆ ಪ್ರಾಣಹಾನಿ ಮಾಡುವಂತಹ ದಾಳಿ ನಡೆದಿತ್ತು.

ಆ ದಿನ ಜೂನ್ ೨೨, ೧೮೯೭ ಆಗಿತ್ತು, ಅಂದರೆ ಬ್ರಿಟಿಷ್ ರಾಣಿ ವಿಕ್ಟೋರಿಯಾಳ ಹೀರೋತ್ಸವದ ಸಂಭ್ರಮದ ದಿನ (Diamond Jubilee of Queen Victoria).

ಪುಣೆಯ ಗವರ್ಮೆಂಟ್ ಹೌಸ್‌ನಲ್ಲಿ ಈ ಸಮಾರಂಭ ನಡೆದಿತ್ತು ಮತ್ತು ಅಲ್ಲಿಂದ ವಾಪಸ್ ಬರುತ್ತಿದ್ದ ಕಮಿಷನರ್ ರ‍್ಯ್೦ಡ್ ಮೇಲೆ ಗುಂಡಿನ ದಾಳಿ ನಡೆಸಲಾಗಿತ್ತು. ಬ್ರಿಟಿಷರ ಆಕ್ರೋಶ ಇನ್ನೊಂದು ಕಾರಣಕ್ಕೆ ಜಾಸ್ತಿಯಾಯಿತು, ಅದೇನೆಂದರೆ ಲೆಫ್ಟಿನೆಂಟ್ ಐಯರ್ಸ್ಟ್ (Ayerst) ಸ್ಥಳದಲ್ಲೇ ಸಾವನ್ನಪ್ಪಿದ, ಆದರೆ ಕಮಿಷನರ್ ರ‍್ಯ್೦ಡ್ ಮಾತ್ರ ಹನ್ನೆರಡು ದಿನಗಳ ಕಾಲ ಸಾವಿನೊಂದಿಗೆ ಹೋರಾಡಿ ಜುಲೈ 3, 1897 ರಂದು ಸಸೂನ್ ಆಸ್ಪತ್ರೆಯಲ್ಲಿ ಮೃತಪಟ್ಟ.

ಅವನ ಆರೋಗ್ಯದ ಬಗ್ಗೆ ಸುದ್ಧಿ ಕೊಡುವ ನೆಪದಲ್ಲಿ ಟಿಳಕರ ‘ಕೇಸರಿ’ ಮತ್ತು ‘ಮರಾಠ‌’ ಪತ್ರಿಕೆಗಳು ಕ್ರಾಂತಿಯ ಜ್ವಾಲೆಯನ್ನು ಮತ್ತಷ್ಟು ಹೆಚ್ಚಿಸುತ್ತಲೇ ಹೋದವು.

ಜನಸಾಮಾನ್ಯರ ಮನಸ್ಸಿನಲ್ಲಿದ್ದ ಅಸಮಾಧಾನ ಈ ಘಟನೆಯ ಮೂಲಕ ಹೊರಬಂದಿತ್ತು ಮತ್ತು ಅದು ನಿಜವೂ ಆಗಿತ್ತು. ಪ್ಲೇಗ್ ಸಾಂಕ್ರಾಮಿಕ ರೋಗ ತಡೆಗಟ್ಟಲು ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅಗತ್ಯವೇ ಇತ್ತು. ಆದರೆ ಕಮಿಷನರ್ ರ‍್ಯ್೦ಡ್ ಈ ಕೆಲಸಕ್ಕಾಗಿ ಬ್ರಿಟಿಷ್ ಸೈನಿಕರನ್ನು ಇಳಿಸಿದ ಮತ್ತು ತುರ್ತು ಪರಿಸ್ಥಿತಿ ಘೋಷಿಸಿ ಸೈನ್ಯದ ಕೈಗೆ ಎಲ್ಲಾ ಅಧಿಕಾರ ಕೊಟ್ಟ.

ಈ ಬ್ರಿಟಿಷ್ ಸೈನಿಕರು ಮಾಡದ ಅನಾಚಾರ ಯಾವುದೂ ಇರಲಿಲ್ಲ. ಈ ಸೈನಿಕರು ಮನೆ ಮನೆಗೆ ನುಗ್ಗಿ, ಮನೆಯಲ್ಲಿದ್ದ ಮುದಿ ವಯಸ್ಸಿನವರಿಂದ ಹಿಡಿದು ಸಣ್ಣ ಮಕ್ಕಳವರೆಗೆ ಯಾರನ್ನೂ ಬಿಡದೆ ಅಕ್ಷರಶಃ ಎಳೆದಾಡುತ್ತಾ ರಸ್ತೆಗೆ ತರುತ್ತಿದ್ದರು. ಮನೆಯ ನೆಲವನ್ನೆಲ್ಲಾ ಕಿತ್ತು ಹಾಕುತ್ತಿದ್ದರು, ಮನೆಯ ಸಾಮಾನುಗಳನ್ನು ಸುಡುತ್ತಿದ್ದರು. ಬೆಲೆಬಾಳುವ ವಸ್ತುಗಳು, ಒಡವೆಗಳು, ಪೂಜೆಯ ಬೆಳ್ಳಿಯ ಪಾತ್ರೆಗಳು ಮತ್ತು ಹಣವನ್ನಂತೂ ನೇರವಾಗಿ ಲೂಟಿ ಮಾಡುತ್ತಿದ್ದರು. ಎಲ್ಲಕ್ಕಿಂತ ಭಯಾನಕ ಅಂದರೆ ಹೆಣ್ಣುಮಕ್ಕಳ ಮಾನದ ಜೊತೆ ಆಟವಾಡುತ್ತಿದ್ದರು.

ಅಲ್ಲಲ್ಲಿ ಜನ ಇದನ್ನು ವಿರೋಧಿಸುತ್ತಲೇ ಇದ್ದರು, ಆದರೆ ಹಾಗೆ ವಿರೋಧಿಸುವವರು ಕ್ರಿಮಿನಲ್

ಪ್ರಾಸಿಕ್ಯೂಷನ್ ಎದುರಿಸಬೇಕಾಗುತ್ತಿತ್ತು ಮತ್ತು ಶಿಕ್ಷೆ ಕೂಡ ಅಷ್ಟೇ ಭಯಂಕರವಾಗಿರುತ್ತಿತ್ತು.

ಗಣೇಶಖಿಂಡ್‌ನಲ್ಲಿ ಈ ಇಬ್ಬರು ಯುರೋಪಿಯನ್ ಆಫೀಸರ್‌ಗಳ ಮೇಲೆ ದಾಳಿಯಾಯಿತೋ, ಆ ಜಾಗದಲ್ಲಿ ಮರುದಿನದಿಂದಲೇ ನೂರಾರು ಜನ ಬೆಳಗ್ಗೆ ಮತ್ತು ಸಂಜೆ ಸೇರತೊಡಗಿದರು. ಕೆಲವರಂತೂ ಅಲ್ಲಿನ ಮಣ್ಣನ್ನು ತೆಗೆದು ಹಣೆಗೆ ಹಚ್ಚಿಕೊಳ್ಳುತ್ತಿದ್ದರು.

ಜುಲೈ ೩ ರಂದು ರ‍್ಯ್೦ಡ್ ಸತ್ತರೂ ಕೂಡ ಬ್ರಿಟಿಷರಿಗೆ ‘ಅಪರಾಧಿ ಯಾರು’ ಎನ್ನುವುದರ ಸುಳಿವು ಸಿಗಲಿಲ್ಲ. ಆದರೆ ಅಕ್ಟೋಬರ್ ೭, ೧೮೯೭ ರಂದು ‘ದ್ರವಿಡ್‌’ ಎನ್ನುವ ಅಡ್ಡಹೆಸರಿನ ಇಬ್ಬರು ಸಹೋದರರು ಬ್ರಿಟಿಷ್ ಪೊಲೀಸ್ ಆಫೀಸರ್‌ಗಳ ಹತ್ತಿರ ಹಣ ಪಡೆದು ಸುದ್ಧಿ ಮುಟ್ಟಿಸಿದರು; ‘ದಾಮೋದರ್ ಹರಿ ಚಾಫೇಕರ್ ಈ ಕೊಲೆಗಳಿಗೆ ಸಂಬಂಧಿಸಿದ್ದಾನೆ’ ಎಂದು. ಅಕ್ಟೋಬರ್ ೮ ರಂದು ದಾಮೋದರ್ ಹರಿ ಚಾಫೇಕರ್‌ನನ್ನು ಬಂಧಿಸಲಾಯಿತು ಮತ್ತು ಏಪ್ರಿಲ್ ೧೮, ೧೮೯೮ ರಂದು ಅವನನ್ನು ಗಲ್ಲಿಗೇರಿಸಲಾಯಿತು. ಬಾಲಕೃಷ್ಣ ಹರಿ ಚಾಫೇಕರ್ ತಲೆಮರೆಸಿಕೊಂಡಿದ್ದ, ಆದರೆ ಅವನ ಸುಳಿವನ್ನು ಅವನೊಬ್ಬ ಪ್ರಾಣ ಸ್ನೇಹಿತನೇ ನಂಬಿಕೆ ದ್ರೋಹ ಮಾಡಿ ಬ್ರಿಟಿಷರಿಗೆ ತಿಳಿಸಿದ. ಜನವರಿ ೧೮೯೯ ರಲ್ಲಿ ಅವನನ್ನೂ ಬಂಧಿಸಲಾಯಿತು.

ನಂತರದ ದಿನಗಳಲ್ಲಿ ವಾಸುದೇವ ಹರಿ ಚಾಫೇಕರ್, ಮಹದೇವ ವಿನಾಯಕ ರಾನಡೆ ಮತ್ತು ಖಂಡೋ ವಿಷ್ಣು ಸಾಠೆ ಈ ಮೂವರು ಫೆಬ್ರವರಿ ೯, ೧೮೯೯ ರಂದು ದ್ರವಿಡ್ ಸಹೋದರರನ್ನು ಸಂಹರಿಸಿದರು. ಆದರೆ ಈ ಮೂವರನ್ನೂ ಬೇಗನೇ ಬಂಧಿಸಲಾಯಿತು.

ಖಂಡೋ ವಿಷ್ಣು ಸಾಠೆ ಅವನಿಗಿನ್ನೂ ಕೇವಲ ಹದಿನೈದು ವರ್ಷ ವಯಸ್ಸು, ಆದರೂ ಅವನಿಗೂ ಕೂಡ ಹತ್ತು ವರ್ಷಗಳ ಕಠಿಣ ಸಜೆ ನೀಡಲಾಯಿತು.

ಈ ಘಟನೆಯ ಬಗ್ಗೆ ನ್ಯೂಯಾರ್ಕ್ ಟೈಮ್ಸ್, ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ಅಂತಹ ಅಂತರಾಷ್ಟ್ರೀಯ ಮಟ್ಟದ ಪತ್ರಿಕೆಗಳು ಸುದ್ಧಿ ಪ್ರಕಟಿಸಿದವು ಮತ್ತು ಬ್ರಿಟಿಷರಿಗೆ ಎಲ್ಲೆಡೆ ಛೀಮಾರಿ ಹಾಕುವಂತಾಯಿತು.

ಕಾಂಗ್ರೆಸ್‌ನ ಮವಾಳ (ಸೌಮ್ಯವಾದಿ) ಗುಂಪಿನ ಹಿರಿಯ ನಾಯಕ ಗೋಪಾಲ ಕೃಷ್ಣ ಗೋಖಲೆ ಅವರು ಸರ್ಕಾರದ ಆಮಂತ್ರಣದ ಮೇರೆಗೆ ಬ್ರಿಟನ್‌ಗೆ ಹೋದಾಗ, ಮ್ಯಾಂಚೆಸ್ಟರ್ ಗಾರ್ಡಿಯನ್ ಪತ್ರಿಕೆಗೆ ಸಂದರ್ಶನ ನೀಡಿದರು. ಅಲ್ಲಿ ಬ್ರಿಟಿಷ್ ಸೈನಿಕರು ಭಾರತೀಯರ ಧಾರ್ಮಿಕ ಮತ್ತು ಸಾಂಸ್ಕೃತಿಕ ಭಾವನೆಗಳನ್ನು ತುಳಿದು ಹಾಕಿದ್ದಕ್ಕಾಗಿ ಅವರನ್ನು ದೋಷಿ ಎಂದು ಕರೆದರು. ಜೀವನದಲ್ಲಿ ಮೊದಲ ಬಾರಿಗೆ ಅವರು, ‘ಬ್ರಿಟಿಷ್ ಸೈನಿಕರು ಏನೇನು ಕೊಳಕು ಅಪರಾಧಗಳನ್ನು ಮಾಡಿದ್ದಾರೆ’ ಎನ್ನುವ ಬಗ್ಗೆ ಬಹಿರಂಗವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಆದರೆ ಗೋಖಲೆಯವರ ಈ ಧೈರ್ಯ ಕೆಲವು ದಿನಗಳಷ್ಟೇ ಉಳಿಯಿತು. ಅವರ ಬ್ರಿಟಿಷ್ ಸ್ನೇಹಿತರು ಅವರನ್ನು ‘ಸರಿಪಡಿಸಿದರು’ ಮತ್ತು ಕೊನೆಗೆ ಗೋಖಲೆಯವರು ಬೇಷರತ್ ಕ್ಷಮೆ ಕೇಳಿ ತಮ್ಮ ಬಂಧನವನ್ನು ತಪ್ಪಿಸಿಕೊಂಡರು. ಈ ಒಂದು ಕಾರಣದಿಂದ ಮವಾಳ ಕಾಂಗ್ರೆಸ್ ಭಾರತೀಯರ ಮನಸ್ಸಿನಿಂದ ಸಂಪೂರ್ಣವಾಗಿ ಇಳಿದು ಹೋದರು ಮತ್ತು ಇಡೀ ಭಾರತದ ಜನತೆ ‘ಆಧಾರ ಮತ್ತು ನಾಯಕ‌’ ಎಂದು ‘ಲಾಲ್-ಬಾಲ್-ಪಾಲ್‌’ ಅವರ ಕಡೆಗೆ ನೋಡಲಾರಂಭಿಸಿದರು.

ಕೆಲವು ದಿನಗಳ ಹಿಂದಷ್ಟೇ ಅಗರ್ಕರ್ ಅವರು ಅನಾರೋಗ್ಯದಿಂದ ಅಲ್ಪಾಯುಷ್ಯದಲ್ಲೇ ನಿಧನರಾಗಿದ್ದರು ಮತ್ತು ಗೋಪಾಲ ಕೃಷ್ಣ ಗೋಖಲೆ ಭಾರತೀಯರ ಮನಸ್ಸಿನಿಂದ ದೂರವಾಗಿದ್ದರು. ಆ ಎರಡು ವರ್ಷಗಳ ಕಾಂಗ್ರೆಸ್ ಅಧಿವೇಶನಗಳಲ್ಲಿ ಒಂದು ಕೂಡ ಬ್ರಿಟಿಷ್ ವಿರೋಧಿ ಗಟ್ಟಿ ನಿರ್ಣಯ ಪಾಸ್ ಆಗಲು ಬಿಡಲಿಲ್ಲ. ಇದರಿಂದ ಕಾಂಗ್ರೆಸ್‌ನ ನಾಯಕತ್ವ ಸಹಜವಾಗಿಯೇ ಪ್ರಾಣ ಪಣಕ್ಕಿಟ್ಟು ಹೋರಾಡುತ್ತಿದ್ದ ಬಾಲ ಗಂಗಾಧರ ಟಿಳಕರ ಕಡೆಗೇ ಬಂತು.

ಬ್ರಿಟಿಷ್ ಸರ್ಕಾರ ಟಿಳಕರನ್ನು ಎಷ್ಟು ದ್ವೇಷಿಸುತ್ತಿತ್ತೋ ಇಲ್ಲವೋ ಗೊತ್ತಿಲ್ಲ, ಆದರೆ ಅದಕ್ಕಿಂತ ಎಷ್ಟೋ ಪಟ್ಟು ಜಾಸ್ತಿ ದ್ವೇಷವನ್ನು ಕಾಂಗ್ರೆಸ್‌ನ ಮವಾಳ ಗುಂಪು ಮತ್ತು ಸಮಾಜ ಸುಧಾರಣೆಯ ಹೆಸರಲ್ಲಿ ನಾಯಕರೆಂದು ಓಡಾಡುತ್ತಿದ್ದ ಕೆಲವು ಭಾರತೀಯರೇ ಮಾಡುತ್ತಿದ್ದರು. ಇದರಿಂದಾಗಿಯೇ ಲೋಕಮಾನ್ಯ ಟಿಳಕರ ಮೇಲೆ ಹಲವಾರು ಖಾಸಗಿ ಕೇಸ್‌ಗಳು ದಾಖಲಾಗಲಾರಂಭಿಸಿದವು. ‘ತಾಯಿಮಹಾರಾಜ್ ಕೇಸ್‌’ ಅತೀ ದೊಡ್ಡ ವಿವಾದವಾಯಿತು. ಇದೊಂದು ದತ್ತಕ ಪ್ರಕ್ರಿಯೆಗೆ ಸಂಬಂಧಿಸಿದ ವೈಯಕ್ತಿಕ ವಿಷಯವಾಗಿತ್ತು ಮತ್ತು ಟಿಳಕರು ಕೇವಲ ಒಬ್ಬ ಟ್ರಸ್ಟಿ ಆಗಿದ್ದರು. ಆದರೆ ‘ಟಿಳಕರನ್ನು ಮಟ್ಟಹಾಕಲೇಬೇಕು’ ಎಂಬ ಹಠಕ್ಕೆ ಬಿದ್ದಿದ್ದ ಈ ಸೋ ಕಾಲ್ಡ್ ಸುಧಾರಕರು ಕೆಲವು ಕಡೆ ಯಶಸ್ವಿಯಾದರು ಮತ್ತು ಟಿಳಕರು ಎರಡು ಬಾರಿ ಇಂತಹ ಕ್ಷುಲ್ಲಕ ಕಾರಣಗಳಿಗಾಗಿ ಜೈಲು ಶಿಕ್ಷೆ ಅನುಭವಿಸಬೇಕಾಯಿತು.

ಆದರೂ ಲೋಕಮಾನ್ಯ ಟಿಳಕರು ಇಂತಹ ಪರಿಸ್ಥಿತಿಯಲ್ಲೂ ಬ್ರಿಟಿಷರ ವಿರೋಧ ಮಾಡುವುದನ್ನು ನಿಲ್ಲಿಸಲಿಲ್ಲ. ಟಿಳಕರು ಸೆರೆಮನೆಯಲ್ಲಿದ್ದಾಗ ನ. ಚಿ. ಕೇಳ್ಕರ್ ಮತ್ತು ಧೋಂಡೋಪಂತ ವಿದ್ವಾಂಸರು (ಟಿಳಕರ ಅಳಿಯ ಮತ್ತು ಸೋದರಳಿಯ) ಟಿಳಕರ ಪತ್ರಿಕೆಗಳು ಮತ್ತು ಕೆಲಸಗಳನ್ನು ಅಷ್ಟೇ ನಿಷ್ಠೆಯಿಂದ ಮುಂದುವರಿಸಿಕೊಂಡು ಹೋದರು.

(ಕಥೆ ಮುಂದುವರಿಯುವುದು)

मराठी >> हिंदी >> English >> ગુજરાતી>> తెలుగు>> বাংলা>> தமிழ்>> മലയാളം>>