ಸಾಮಾನ್ಯವಾಗಿ ತಿಳಿದಿರುವಂತೆ ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸವು ಒಂದು ಶ್ರೇಷ್ಠ ಮತ್ತು ಆಳವಾದ ಸಾಹಸಗಾಥೆಯ ಕೇವಲ ಒಂದು ಭಾಗವಾಗಿದೆ. ಪರಿಚಿತ ಹೆಸರುಗಳು ಮತ್ತು ಪ್ರಸಿದ್ಧ ಮೈಲಿಗಲ್ಲುಗಳ ಆಚೆಗೆ ಹೇಳಲಾಗದ ಕಥೆಯಿದೆ, ದೈವಿಕಕ್ಕಿಂತ ಕಡಿಮೆಯಿಲ್ಲದ ತ್ಯಾಗಗಳನ್ನು ಮಾಡಿದ ಪುರುಷರು ಮತ್ತು ಮಹಿಳೆಯರಿಂದ ರೂಪಿಸಲ್ಪಟ್ಟಿದೆ, ಆದರೂ ಅವರ ಕಥೆಗಳು ಇತಿಹಾಸ ಪುಸ್ತಕಗಳಿಂದ ಮತ್ತು ನೆನಪಿನಿಂದ ದೂರ ಉಳಿದಿವೆ.
'ದೈನಿಕ ಪ್ರತ್ಯಕ್ಷ'ದಲ್ಲಿ ಪ್ರಕಟವಾದ ತಮ್ಮ ಒಳನೋಟವುಳ್ಳ ಸಂಪಾದಕೀಯಗಳಲ್ಲಿ, ಡಾ. ಅನಿರುದ್ಧ ಡಿ. ಜೋಷಿಯವರು ಈ ಮರೆತುಹೋದ ಇತಿಹಾಸವನ್ನು ಬೆಳಕಿಗೆ ತರುತ್ತಾರೆ. ಯೋಧರು, ಚಿಂತಕರು ಮತ್ತು ಮೂಕ ಹೋರಾಟಗಾರರಂತಹ ಅಸಾಧಾರಣ ವ್ಯಕ್ತಿಗಳ ಜೀವನವನ್ನು ಬಿಚ್ಚಿಡುತ್ತಾರೆ, ಈ ಯೋಧರು ತಮ್ಮ ಮಾತೃಭೂಮಿಯ ಕಡೆಗೆ ಅಚಲವಾದ ಬದ್ಧತೆ, ಧೈರ್ಯ ಮತ್ತು ಭಕ್ತಿಯಿಂದ ನಿಂತಿದ್ದರು. ನಿರೂಪಣೆಯು ಪ್ರಗತಿಯಲ್ಲಿರುವಂತೆ, ಕೇಳರಿಯದ ಅಸಂಖ್ಯಾತ ಹೆಸರುಗಳು ಹೊರಹೊಮ್ಮುತ್ತವೆ, ಅವರ ಜೀವನವು ಶೌರ್ಯ, ತ್ಯಾಗ ಮತ್ತು ಸ್ವಾತಂತ್ರ್ಯಕ್ಕಾಗಿ ಅಚಲವಾದ ಸಂಕಲ್ಪದಿಂದ ವ್ಯಾಖ್ಯಾನಿಸಲ್ಪಟ್ಟಿದೆ. ಝಾನ್ಸಿಯ ರಾಣಿ ಲಕ್ಷ್ಮಿಬಾಯಿಯಂತಹ ಐಕಾನಿಕ್ ವ್ಯಕ್ತಿಗಳ ಜೊತೆಗೆ ಅವರ ಅಷ್ಟೇ ಶೌರ್ಯವಂತ ಸಹಚರರು ಹೊರಹೊಮ್ಮುತ್ತಾರೆ, ಅವರ ಶೌರ್ಯವು ಅವಳ ಶೌರ್ಯಕ್ಕೆ ಸಮನಾಗಿತ್ತು ಆದರೆ ಇತಿಹಾಸವು ಅವರ ಹೆಸರುಗಳನ್ನು ಸಂರಕ್ಷಿಸಲು ವಿಫಲವಾಗಿದೆ. ನಿರೂಪಣೆಯು ನಂತರ ಬಾಲ ಗಂಗಾಧರ ತಿಲಕರ ಯುಗಕ್ಕೆ ಚಲಿಸುತ್ತದೆ, ಇದು ಅವರ ಸುಪ್ರಸಿದ್ಧ ಸಾರ್ವಜನಿಕ ಚಿತ್ರಣಕ್ಕಿಂತ ಆಳವಾದ ಆಯಾಮವನ್ನು ಬಹಿರಂಗಪಡಿಸುತ್ತದೆ. ಮುಂದೆ ಸಾಗುತ್ತಾ, ಈ ಸಂಪಾದಕೀಯಗಳು ಅವರ ಪಕ್ಕದಲ್ಲಿ ನಿಂತಿದ್ದ ಅಸಂಖ್ಯಾತ ಕಡಿಮೆ ಪರಿಚಿತ ಕ್ರಾಂತಿಕಾರಿಗಳು, ಸಂಘಟಕರು ಮತ್ತು ಸಮರ್ಪಿತ ಕಾರ್ಯಕರ್ತರನ್ನು ಅನಾವರಣಗೊಳಿಸುತ್ತವೆ. ಅವರ ಮೂಕ ತ್ಯಾಗಗಳು, ಬೌದ್ಧಿಕ ಕಠಿಣತೆ ಮತ್ತು ನಿರ್ಭೀತ ಕಾರ್ಯಗಳು ಸ್ವಾತಂತ್ರ್ಯ ಚಳವಳಿಯ ಬೆನ್ನೆಲುಬಾಗಿ ರೂಪಗೊಂಡವು ಆದರೆ ಈ ನಿಜವಾದ ಅನಾಮಿಕ ವೀರರನ್ನು, ಹೆಸರಾಂತ ಇತಿಹಾಸಕಾರರು, ನಿರ್ಲಕ್ಷಿಸಲಾಯಿತು ಹಾಗು ಕಡೆಗನಿಸಲಾದ ಕಾರಣ ಅವು ಹೆಚ್ಚಾಗಿ ದಾಖಲಾಗಿಲ್ಲ.
ಇದು ಕೇವಲ ಐತಿಹಾಸಿಕ ವರದಿಯಲ್ಲ; ಇದು ಭಾರತದ ಸ್ವಾತಂತ್ರ್ಯದ ಅದೃಶ್ಯ ಅಡಿಪಾಯಗಳಿಗೆ ಅರ್ಪಿಸಿದ ಗೌರವವಾಗಿದೆ. ಧೈರ್ಯ, ಸಮರ್ಪಣೆ ಮತ್ತು ನೈತಿಕ ಶಕ್ತಿಯಿಂದ ಸಮೃದ್ಧವಾಗಿರುವ ಈ ನಿರೂಪಣೆಗಳು ನಮ್ಮ ಸ್ವಾತಂತ್ರ್ಯ ಹೋರಾಟದ ನಿಜವಾದ ಆಳವನ್ನು ಮರುಶೋಧಿಸಲು ಮತ್ತು ಎಲ್ಲವನ್ನೂ ನೀಡಿದರೂ ಬದಲಿಗೆ ಏನನ್ನೂ ಕೇಳದವರನ್ನು ಗೌರವಿಸಲು ನಮಗೆ ಆಹ್ವಾನ ನೀಡುತ್ತವೆ.
--------------------------------------------------------------------------------------------
ಲೇಖಕ
ಡಾ. ಅನಿರುದ್ಧ ಧೈ. ಜೋಶಿ
ಭಾಗ - 1
ಅದರ ಜೊತೆಗೆ ಮಲ್ಹಾರರಾವ್ ಅವರ ತೋಟದ ಜಮೀನು ಸಹ ಬಹಳ ದೊಡ್ಡದಿತ್ತು. ನೂರಾ ಐವತ್ತು ಎಕರೆ ಕೇವಲ ಮಾವಿನ ತೋಪೇ ಇತ್ತು. ಇದರ ಜೊತೆಗೆ ಬಾಳೆ ತೋಟಗಳು, ದಾಳಿಂಬೆ ತೋಟಗಳು, ಪರಂಗಿ (ಪಪ್ಪಾಯಿ) ತೋಟಗಳು, ಸೀಬೆ ತೋಟಗಳು – ಇವೆಲ್ಲಾ ಸೇರಿ ಸುಮಾರು ಎಂಟುನೂರು ಎಕರೆ ಜಮೀನು ಇತ್ತು. ಇನ್ನು ಉಳಿದಂತೆ ಅಲ್ಲಲ್ಲಿ ಇರುವ ಬಯಲು ಪ್ರದೇಶದ ಭೂಮಿಯೂ ಇತ್ತು, ಅಲ್ಲಿ ಹುಲ್ಲು ಬೆಳೆದು ಅದರಿಂದ ಹುಲ್ಲಿನ ಬಂಡಲ್ ಮಾಡಿ ದನಕರುಗಳಿಗೆ ಮಾರಾಟ ಮಾಡುತ್ತಿದ್ದರು. ಏಳು ಕಾಡುಗಳ ಒಡೆತನವೂ ಅವರ ಬಳಿ ಇತ್ತು. ಆ ಕಾಡುಗಳಲ್ಲಿನ ದೊಡ್ಡ ದೊಡ್ಡ ಮರಗಳನ್ನು ಕತ್ತರಿಸಿ, ಅದರಿಂದ ಮರದ ದಿಮ್ಮಿ ಮತ್ತು ಹಲಗೆಗಳನ್ನು ತಯಾರಿಸುವ ಕಾರ್ಖಾನೆಗಳನ್ನೂ ಸಹ ಮಲ್ಹಾರರಾವ್ ಅವರು ಸ್ಥಾಪಿಸಿದ್ದರು. ಸೌದೆ (ಉರುವಲು, ಅಡುಗೆಗೆ ಬಳಸುವ ಮರ) ವ್ಯಾಪಾರವೂ ಮಲ್ಹಾರರಾವ್ ಅವರದು ಭರದಿಂದ ಸಾಗುತಿತ್ತು.
ಅದರ ಜೊತೆಗೆ, ಇನ್ನೂರ ಎಕರೆ ಜಮೀನಿನಲ್ಲಿ ಹಸುಗಳು, ಎಮ್ಮೆಗಳು, ಮೇಕೆಗಳನ್ನು ಸಾಕಿದ್ದರು. ಹಾಲಿನ ವ್ಯವಹಾರವೂ ಬಹಳ ಲಾಭದಾಯಕವಾಗಿತ್ತು ಮತ್ತು ಕಳೆದ ವರ್ಷದಿಂದ ಮಲ್ಹಾರರಾವ್ ಅವರ ಒಬ್ಬನೇ ಒಬ್ಬ ಪ್ರೀತಿಯ ಮಗ ರಾಮಚಂದ್ರ ಅವರು ಕೋಳಿ ಸಾಕಣೆ (ಪೋಲ್ಟ್ರಿ ಫಾರ್ಮ್) ಮಾಡಲು ವಿಶೇಷ ಜಾಗವನ್ನು ತೆಗೆದುಕೊಂಡಿದ್ದರು. ಅಲ್ಲಿ ಅದಕ್ಕಾಗಿ ಎಲ್ಲಾ ವ್ಯವಸ್ಥೆಗಳನ್ನೂ ಮಾಡಲಾಗಿತ್ತು ಮತ್ತು ಗೋವಿಂದದಾಜಿ ಎಂಬ ಹೆಸರಿನ, ಈ ಕ್ಷೇತ್ರದಲ್ಲಿ ಒಬ್ಬ ವೃತ್ತಿಪರರಿಂದ ಅವಮಾನಗೊಂಡು ಹೊರಬಂದಿದ್ದ ಅನುಭವಿ ಕಾರ್ಮಿಕನನ್ನು ಅಲ್ಲಿನ ವ್ಯವಸ್ಥಾಪಕನಾಗಿ ನೇಮಿಸಿದ್ದರು.
ಅದು ಕ್ರಾಂತಿಕಾರಿಗಳ ಸಮಯವಾಗಿತ್ತು ಮತ್ತು ಕೆಲವು ಮರಾಠಿ ಭಾಷಿಕ ಯುವ ಕ್ರಾಂತಿಕಾರಿಗಳು ಆ ಹಳ್ಳಿಗೆ ಬಂದು ಹೋಗುತ್ತಿದ್ದರು ಎಂಬ ಸುದ್ದಿ ಯಾರದೋ ಒಬ್ಬ
ದ್ರೋಹಿಯಿಂದ (Traitor) ಬ್ರಿಟಿಷ್ ಆಡಳಿತಗಾರರಿಗೆ ತಲುಪಿತ್ತು. ಭಗತ್ ಸಿಂಗ್ ಅವರನ್ನು ಎರಡು ತಿಂಗಳ ಹಿಂದೆ ಬ್ರಿಟಿಷ್ ಸರ್ಕಾರ ನೇಣಿಗೆ ಹಾಕಿಸಿತ್ತು ಮತ್ತು ಭಾರತದ ಮೂಲೆ ಮೂಲೆಯಿಂದ ಕೆರಳಿದ ರಕ್ತ ಕುದಿಯುತ್ತಿತ್ತು.
ಆದ್ದರಿಂದ ಇಂದು ಮಲ್ಹಾರರಾವ್ ಅವರ ಮೇಲೆ ತುಂಬಾ ಒತ್ತಡ ಬಿದ್ದಿತ್ತು. ಅವರಿಗೆ ಸ್ವತಃ ಕೆಲಸಕ್ಕೆ ಇಳಿಯಬೇಕಾಗಿತ್ತು. ಅವರ ಮಗ ರಾಮಚಂದ್ರ ಮೊದಲು ಮುಂಬೈಯಲ್ಲಿ ಒಂದು ಸೂತಗಿರಣಿಯಲ್ಲಿ (ನೂಲಿನ ಗಿರಣಿ) ಹಿರಿಯ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು. ಆದರೆ ಅವರ ಬುದ್ಧಿವಂತಿಕೆ ಮತ್ತು ಶಿಕ್ಷಣವನ್ನು ನೋಡಿ ಬ್ರಿಟಿಷ್ ಗವರ್ನರ್ ರಾಮಚಂದ್ರ ಅವರನ್ನು ಸರ್ಕಾರಿ ಸೇವೆಗಾಗಿ ಆಯ್ಕೆ ಮಾಡಿದ್ದರು. ಅವರು ದೊಡ್ಡ ಗವರ್ನ್ಮೆಂಟ್ ಆಫೀಸರ್ ಆಗಿದ್ದರು. ಅಧಿಕೃತವಾಗಿ ಅವರ ಬಳಿ ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶದ ದಕ್ಷಿಣ ಭಾಗ ಮತ್ತು ಕರ್ನಾಟಕದ ಉತ್ತರ ಭಾಗ - ಇಷ್ಟು ಪ್ರದೇಶದ ಅರಣ್ಯ ಇಲಾಖೆ ಇತ್ತು. ಅವರು ಆ ವಿಭಾಗದ ಸರ್ವಾಧಿಕಾರಿ (ಸರ್ವೇಸರ್ವಾ) ಆಗಿದ್ದರು. ಅವರು ನೇರವಾಗಿ ಗವರ್ನರ್ ಅವರಿಗೆ ವರದಿ (ರಿಪೋರ್ಟಿಂಗ್) ಮಾಡುತ್ತಿದ್ದರು. ಅವರ ಮತ್ತು ಗವರ್ನರ್ ಅವರ ಮಧ್ಯೆ ಬೇರೆ ಯಾವ ಬ್ರಿಟಿಷ್ ಅಧಿಕಾರಿಯೂ ಇರಲಿಲ್ಲ ಮತ್ತು ಭಾರತೀಯ ಅಧಿಕಾರಿ ಇರಲು ಸಾಧ್ಯವೇ ಇರಲಿಲ್ಲ.
ರಾಮಚಂದ್ರ ಯಾವಾಗಲೂ ಪ್ರವಾಸದಲ್ಲಿ ಇರುತ್ತಿದ್ದರು. ಮುಂಬೈನ ‘ಕೋಟ’ (ಫೋರ್ಟ್) ಪ್ರದೇಶದಲ್ಲಿ (ಇಲಾಖೆಯಲ್ಲಿ) ಅವರಿಗೆ ಸರ್ಕಾರದಿಂದ ಕೊಡಲ್ಪಟ್ಟಿರುವ ದೊಡ್ಡ, ನಿಜ ಹೇಳಬೇಕೆಂದರೆ ಅತಿ ದೊಡ್ಡ ಬಂಗಲೆ ಇತ್ತು. ಗವರ್ನರ್ ಅವರನ್ನು ನೇರವಾಗಿ ಭೇಟಿ ಮಾಡಬಹುದಾದವರು ಕೇವಲ ಎರಡರಿಂದ ಮೂರು ಪ್ರಾದೇಶಿಕ ಅಧಿಕಾರಿಗಳು ಮಾತ್ರ ಇದ್ದರು. ಅವರಲ್ಲಿ ರಾಮಚಂದ್ರರ ಹೆಸರು ಎಲ್ಲಕ್ಕಿಂತ ಮೇಲೆ ಇತ್ತು.
ಇಷ್ಟೇ ಅಲ್ಲ, ಕಳೆದ ನಾಲ್ಕು ವರ್ಷಗಳಲ್ಲಿ ಅವರು ತೋರಿಸಿದ ಸಾಧನೆಯಿಂದಾಗಿ ಅವರು ಇಂಡಿಯಾದ ವೈಸ್‌ರಾಯ್ ಅವರೊಂದಿಗೆ (ಭಾರತದಲ್ಲಿನ ಬ್ರಿಟಿಷರ ಸರ್ವೋಚ್ಚ ಅಧಿಕಾರಿ) ಮೂರು ಬಾರಿ ಭೇಟಿಯಾಗಿದ್ದರು ಮತ್ತು ಅದೂ ಸಹ ಬೇರೆ ಯಾರೂ ಇರದೇ ಇರುವಾಗ, ವೈಸ್‌ರಾಯ್ ಅವರ ವಿಶೇಷ ಕೋಣೆಯಲ್ಲಿ, ವೈಸ್‌ರಾಯ್, ಈ ಪ್ರದೇಶದ ಗವರ್ನರ್ ಮತ್ತು ರಾಮಚಂದ್ರ. ಇದರಿಂದ ರಾಮಚಂದ್ರ ಅವರ ಪ್ರಭಾವ ಅವರ ಪ್ರದೇಶದಲ್ಲಿ ಮಾತ್ರವಲ್ಲದೆ, ಸಾಕಷ್ಟು ಪ್ರಮಾಣದಲ್ಲಿ ಭಾರತದ ಇತರ ಭಾಗಗಳಲ್ಲಿಯೂ ಇತ್ತು.
ಕೇವಲ ಮಲ್ಹಾರರಾವ್ ಅವರಿಗೆ ಮಾತ್ರ ಗೊತ್ತಿತ್ತು, ರಾಮಚಂದ್ರ ಅವರ ಬಳಿ ಮೇಲ್ನೋಟಕ್ಕೆ ಕೇವಲ ಅರಣ್ಯ ಮತ್ತು ಕೃಷಿ ಇಲಾಖೆ ಇದ್ದರೂ ಸಹ, ನಿಜವಾಗಿಯೂ ಅವರ ಬಳಿ ಆ ಪ್ರದೇಶದಲ್ಲಿ ಸ್ವಾತಂತ್ರ್ಯ ಚಳುವಳಿಯನ್ನು ದುರ್ಬಲಗೊಳಿಸುವ ಕೆಲಸ ಇತ್ತು.
ಈ ಜವಾಬ್ದಾರಿಯನ್ನು ರಾಮಚಂದ್ರ ಅವರಿಗೆ ವಹಿಸಿದಾಗ, ರಾಮಚಂದ್ರ ಅವರು ತಕ್ಷಣ ತಮ್ಮ ತಂದೆಯನ್ನು ಮುಂಬೈಗೆ ಕರೆಸಿಕೊಂಡಿದ್ದರು, ಏಕೆಂದರೆ ಮಲ್ಹಾರರಾವ್ ಅವರು ಲೋಕಮಾನ್ಯ ಟಿಳಕ್ ಅವರ ಪರಮ ಭಕ್ತರಾಗಿದ್ದರು. ಸ್ವಾತಂತ್ರ್ಯ ಚಳುವಳಿಯಲ್ಲಿ ಅವರು ಕಾಣಿಸಿಕೊ೦ಡಿರದಿದ್ದರೂ ಸಹ, ಆ ಕಾರ್ಯಕ್ಕಾಗಿ ಹಣಕಾಸು ಒದಗಿಸುವುದು, ಗುಪ್ತ ಪತ್ರಿಕೆಗಳನ್ನು ಮುದ್ರಿಸುವುದು, ಸ್ವಾತಂತ್ರ್ಯ ವೀರರಿಗೆ ರಹಸ್ಯವಾಗಿ ಉಳಿಯಲು ಜಾಗ ಒದಗಿಸುವುದು, ಅವರ ಊಟೋಪಚಾರ ಮತ್ತು ಗೌಪ್ಯತೆಯ ಬಗ್ಗೆ ಕಾಳಜಿ ವಹಿಸುವುದು ಮತ್ತು ಮುಖ್ಯವಾಗಿ ಲೋಕಮಾನ್ಯರ ವೃತ್ತಪತ್ರಿಕೆಯ ಮುಖ್ಯ ಸಂಪಾದಕೀಯಗಳನ್ನು ಪ್ರತಿದಿನ ಸಂಜೆ ಗ್ರಾಮಸ್ಥರಿಗೆ ಓದಿ ಹೇಳುವುದು - ಇಂತಹ ಕೆಲಸಗಳು ನಡೆಯುತ್ತಲೇ ಇದ್ದವು.
ಲೋಕಮಾನ್ಯರು 1920 ರಲ್ಲಿ ದೈವಾಧೀನರಾದ ನಂತರ ನ. ಚಿ. ಕೇಳ್ಕರ್ ಅವರು ಅವರ ವೃತ್ತಪತ್ರಿಕೆಗಳನ್ನು ಮುಂದುವರಿಸಿದ್ದರು. ಗಾಂಧೀಜಿಯವರ ಅಹಿಂಸಾತ್ಮಕ ವಿಚಾರಗಳ ಪ್ರಭಾವ ಹೆಚ್ಚುತ್ತಿತ್ತು. 1928 ರ ದಾ೦ಡಿ ಯಾತ್ರೆಯಲ್ಲಿ ಅಂದರೆ ಉಪ್ಪಿನ ಸತ್ಯಾಗ್ರಹದ ಚಳುವಳಿಯಲ್ಲಿ ಮಲ್ಹಾರರಾವ್ ಅವರು ಭಾಗವಹಿಸಿದ್ದರು. ಆದರೆ ಈ ದಬ್ಬಾಳಿಕೆಯ ವಿದೇಶಿ ಶಕ್ತಿ, ಅಹಿಂಸೆಯ ಮಾರ್ಗದಿಂದ ಸ್ವಾತಂತ್ರ್ಯವನ್ನು ನೀಡುತ್ತದೆ ಎಂಬುದರ ಮೇಲಿನ ಮಲ್ಹಾರರಾವ್ ಅವರ ವಿಶ್ವಾಸ 28 ರಲ್ಲೇ ಕಳೆದುಹೋಗಿತ್ತು, ಏಕೆಂದರೆ ಅವರ ಕಣ್ಣೆದುರಿಗೆ ಅನೇಕ ನಿಃಶಸ್ತ್ರ, ನಿರಪರಾಧಿ, ನಿರ್ದೋಷ ಮನುಷ್ಯರ, ವೃದ್ಧರು ಮತ್ತು ಸ್ತ್ರೀಯರ ತಲೆಗಳು ಒಡೆದು ಹೋಗುವುದನ್ನು ಅವರು ನೋಡಿದ್ದರು ಮತ್ತು ಯೋಧರ ಪರಂಪರೆ ಇರುವ ಮಲ್ಹಾರರಾವ್ ಅವರಿಗೆ ಅದನ್ನು ಸಹಿಸಲು ಆಗಲಿಲ್ಲ.
ಆದರೆ ಲೋಕಮಾನ್ಯರು ಈಗಾಗಲೇ ಹೋಗಿದ್ದರು. ಗಾಂಧೀಜಿಯವರು ಅಹಿಂಸೆಯ ಮಾರ್ಗದಲ್ಲಿ ದೃಢವಾಗಿ ನಿಂತಿದ್ದರು. ಬಂಗಾಳ ಮತ್ತು ಪಂಜಾಬ್‌ನಲ್ಲಿ ಕ್ರಾಂತಿಕಾರಿಗಳ ದಂಗೆಗಳು ನಡೆಯುತ್ತಿದ್ದವು. ಆದರೆ ಸ್ಥಳೀಯ ಭಾರತೀಯ ದೇಶದ್ರೋಹಿಗಳಿ೦ದಾಗಿ ಎಲ್ಲಾ ಕ್ರಾಂತಿಕಾರಿಗಳು ಸಿಕ್ಕಿಬೀಳುತ್ತಿದ್ದರು ಮತ್ತು ಗಲ್ಲಿಗೇರಿಸಲ್ಪಡುತ್ತಿದ್ದರು ಅಥವಾ ನೇರವಾಗಿ ಬ್ರಿಟಿಷರ ಗುಂಡುಗಳಿಗೆ ಬಲಿಯಾಗುತ್ತಿದ್ದರು.
ಇದನ್ನು ನೋಡಿ ಮಲ್ಹಾರರಾವ್ ಕಳೆದ ಮೂರು ವರ್ಷಗಳಿಂದ ಸಕ್ರಿಯ ಹೋರಾಟದಿಂದ ದೂರವಾಗಿದ್ದರು. ಅವರಿಗೆ ದಾರಿ ಸಿಗುತ್ತಿರಲಿಲ್ಲ. ನಿಜ ಹೇಳಬೇಕೆಂದರೆ ಅವರಿಗೆ ನಾಯಕ ಸಿಗುತ್ತಿರಲಿಲ್ಲ. ರಾಮಚಂದ್ರ ಅವರಿಗೆ ಈ ಗುಪ್ತ ಜವಾಬ್ದಾರಿಯನ್ನು ಬ್ರಿಟಿಷರು ಎಲ್ಲಾ ಮಾಹಿತಿಯನ್ನು ತೆಗೆದುಕೊಂಡು ನಂತರವೇ ನೀಡಿದ್ದರು. ಅವರ ವರದಿಯಲ್ಲಿ (ರಿಪೊಟ್) ಹೀಗೆ ಬರೆಯಲಾಗಿತ್ತು - ‘ರಾಮಚಂದ್ರ ರಾಜಕೀಯದಿಂದ ಸಂಪೂರ್ಣವಾಗಿ ದೂರವಿದ್ದಾರೆ. ಅವರ ತಂದೆ ಮಲ್ಹಾರರಾವ್ ಅತಿ ಶ್ರೀಮಂತ ಜಮೀನುದಾರ, ರೈತ ಮತ್ತು ವೃತ್ತಿಪರರಾಗಿದ್ದು ಟಿಳಕ್ ಅವರ ಅಭಿಮಾನಿಯಾಗಿದ್ದರು. ಆದರೆ ಸದ್ಯ ಅವರು ರಾಜಕೀಯದಿಂದ ದೂರವಿದ್ದರು.’ ಈ ವರದಿಯಿಂದಾಗಿಯೇ ರಾಮಚಂದ್ರ ಅವರಿಗೆ ಈ ಜವಾಬ್ದಾರಿ ಸಿಗಲು ಸಾಧ್ಯವಾಯಿತು.
ಮಲ್ಹಾರರಾವ್ ಅವರು ಎಲ್ಲವನ್ನೂ ಶಾಂತವಾಗಿ ಕೇಳಿದರು ಮತ್ತು ಕಣ್ಣು ಮುಚ್ಚಿಕೊಂಡು, ತಲೆ ಕೆಳಗೆ ಹಾಕಿ ತಮ್ಮ ಯಾವಾಗಲೂ ಇಷ್ಟಪಡುವ ಆರಾಮ ಕುರ್ಚಿಯಲ್ಲಿ ಶಾಂತವಾಗಿ ಕುಳಿತುಕೊಂಡರು. ಆ ಐದು ನಿಮಿಷಗಳ ಸಂಪೂರ್ಣ ಶಾಂತತೆ ರಾಮಚಂದ್ರ ಅವರಿಗೆ ಅಸಹನೀಯವಾಗುತ್ತಿತ್ತು. ಐದು ನಿಮಿಷಗಳ ನಂತರ ಮಲ್ಹಾರರಾವ್ ಅವರ ಆರಾಮ ಕುರ್ಚಿ ಒಂದು ನಿಧಾನ ಲಯದಲ್ಲಿ ತೂಗಾಡಲು ಶುರುವಾಯಿತು. ಆ ಸಮಯದಲ್ಲಿ ತೂಗಾಡುವ ಆರಾಮ ಕುರ್ಚಿಗಳು ಇರುತ್ತಿದ್ದವು.
(ಕಥೆ ಮುಂದುವರೆಯುತ್ತದೆ)
.jpg)




