ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಅನಾವರಣ ಆಗದ ಇತಿಹಾಸದ ಸೂಕ್ಷ್ಮ ಸತ್ಯಗಳು - ಭಾಗ - 21

ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಅನಾವರಣ ಆಗದ ಇತಿಹಾಸದ ಸೂಕ್ಷ್ಮ ಸತ್ಯಗಳು - ಭಾಗ - 21

ಮೋತಿಬಾಯಿ ಒಬ್ಬ ವೃದ್ಧ, ವಿಧವೆ ಮಹಾರಾಷ್ಟ್ರಿಯನ್ ಬ್ರಾಹ್ಮಣ ಸ್ತ್ರೀಯ ವೇಷದಲ್ಲಿ ಕಾಶಿಯ ಕಡೆಗೆ ಹೊರಟಿದ್ದಳು. ಅವಳ ಜೊತೆ ಬರಲು ಅವರ ಗುಂಪಿನ ಪ್ರತಿಯೊಬ್ಬರೂ ಕಾತರರಾಗಿದ್ದರು. ಆದರೆ ಮೋತಿಬಾಯಿ ಈ ವಿಷಯಕ್ಕೆ ಖಡಾಖಂಡಿತವಾಗಿ ನಿರಾಕರಿಸಿದ್ದಳು. ಉಳಿದವರೆಲ್ಲರೂ ತಾತ್ಯಾ ಟೋಪೆಯವರನ್ನು ಹೋಗಿ ಸೇರುವುದು ಅಗತ್ಯವಾಗಿತ್ತು. ಒಂದು ವೇಳೆ ಅದು ಸಾಧ್ಯವಾಗದಿದ್ದರೆ, ಆ ಗುಂಪು ಗುಟ್ಟಾಗಿ ಬುಂದೇಲಖಂಡದ ಒಂದು ಗುಡ್ಡಗಾಡು ಹಳ್ಳಿಯಲ್ಲಿ ವಾಸವಾಗಿರಬೇಕಿತ್ತು ಮತ್ತು ಮೆಲ್ಲನೆ ಒಬ್ಬೊಬ್ಬರಾಗಿ ತಮ್ಮ ತಮ್ಮ ಸ್ಥಳಗಳಿಗೆ ಮರಳಬೇಕಿತ್ತು.

ಮೋತಿಬಾಯಿಯ ಬೆನ್ನಿನ ಮೇಲೆ ಈ ಆರು ಜನರ ಪವಿತ್ರ ಅಸ್ತಿಗಳಿದ್ದ ಆರು ಪವಿತ್ರ ಕುಂಭಗಳನ್ನು ಒಂದು ರೇಷ್ಮೆಯ ಗಂಟಿನಲ್ಲಿ ಕಟ್ಟಿ ಇಡಲಾಗಿತ್ತು. ಅವಳ ಕಂಕುಳಲ್ಲಿದ್ದ ಚೀಲದಲ್ಲಿ ಅವಳ ಬಟ್ಟೆಗಳು ಮತ್ತು ಜಪಮಾಲೆ ಇತ್ತು. ಅವಳು ಬೇಕೆಂತಲೇ ತನ್ನ ಜೊತೆ ಯಾವುದೇ ಶಸ್ತ್ರವನ್ನು ತಂದಿರಲಿಲ್ಲ. ಯಾಕೆಂದರೆ ಒಬ್ಬ ವೃದ್ಧ ಬ್ರಾಹ್ಮಣ ವಿಧವೆಯ ಬಳಿ ಶಸ್ತ್ರ ಇರುವುದನ್ನು ಯಾರಾದರೂ ನೋಡಿದ್ದರೆ, ಅನೇಕ ಸಂಶಯಗಳು ಹುಟ್ಟಿಕೊಳ್ಳುತ್ತಿದ್ದವು ಮತ್ತು ಅವಳ ಕಾರ್ಯಕ್ಕೆ ಅಡ್ಡಿ ಉಂಟಾಗುತ್ತಿತ್ತು. ಈ ವಿಷಯ ಮೋತಿಬಾಯಿಗೆ ಖಂಡಿತ ಬೇಕಿರಲಿಲ್ಲ.

ಮೋತಿಬಾಯಿ ಒಬ್ಬಳೇ ಕೈಯಲ್ಲಿದ್ದ ಕೋಲಿನ ಆಧಾರ ಪಡೆಯುತ್ತಾ, ಆ ಕಾಡಿನಿಂದ ಹತ್ತಿರದ ಒಂದು ಹಳ್ಳಿಯ ಧರ್ಮಶಾಲೆಗೆ ಬಂದು ತಲುಪಿದಾಗ ಮಧ್ಯಾಹ್ನ ಹನ್ನೆರಡು ಗಂಟೆಯಾಗಿತ್ತು. ಹಳ್ಳಿಯ ಒಳಗೆ ಬರುತ್ತಿದ್ದಂತೆ ಅವಳ ಕಣ್ಣೆದುರೇ ರಾಮ ಮಂದಿರ ಇರುವುದು ಕಂಡಿತು. ಅವಳು ಮಂದಿರದ ಹೊರಗೆ ನಿಂತೇ ಗರ್ಭಗುಡಿಯಲ್ಲಿದ್ದ ರಾಮ-ಲಕ್ಷ್ಮಣ-ಜಾನಕಿಯ ಮೂರ್ತಿಗಳಿಗೆ ನಮಸ್ಕರಿಸಿ ದಂಡವತ್ ಪ್ರಣಾಮ ಹಾಕಿದಳು. ಅವಳು ಮನದಲ್ಲೇ ಪ್ರಾರ್ಥಿಸಿದಳು - ‘ಹೇ ಪ್ರಭು ರಾಮಭದ್ರ! ಈ ಪವಿತ್ರ ಅಸ್ತಿಗಳನ್ನು ಕಾಶಿಗೆ ಕೊಂಡೊಯ್ದು ಗಂಗೆಯಲ್ಲಿ ವಿಸರ್ಜಿಸುವ ನನ್ನ ಕಾರ್ಯ ಯಶಸ್ವಿಗೊಳಿಸು. ಈ ಜೀವಿಗಳಿಗೆ ಯಾವುದೇ ಮಂತ್ರೋಕ್ತ ಅಂತ್ಯಸಂಸ್ಕಾರ ನಡೆದಿಲ್ಲ. ಆದರೆ ಸಂಪ್ರದಾಯ ಹೇಳುವಂತೆ ಅಸ್ತಿಗಳು ಕಾಶಿಯ ಗಂಗಾ ತೀರದಲ್ಲಿ ವಿಸರ್ಜನೆಯಾದರೆ, ಬೇರೆ ಯಾವುದೇ ಕರ್ಮಕಾಂಡಗಳ ಅವಶ್ಯಕತೆ ಇರುವುದಿಲ್ಲ.

ಹೇ ಸ್ವಯಂ ಭಗವಾನ್ ರಾಮಭದ್ರ! ನಿನ್ನ ಬಾಣವೂ ಅಮೋಘ, ನಿನ್ನ ವರದಾನವೂ ಅಮೋಘ. ನಿನ್ನ ನಾಮ ಸ್ಮರಿಸುತ್ತಲೇ ಹನುಮಂತನು ಅಷ್ಟು ದೊಡ್ಡ ಸಮುದ್ರವನ್ನು ದಾಟಿದನು. ಅವನಿಗೆ ಅಸಾಧ್ಯವಾದುದು ಯಾವುದಿದೆ! ಮತ್ತು ನೀನಂತೂ ‘ದೀನದಯಾಳ‌’ ಎಂಬ ಬಿರುದು ಹೊಂದಿದವನು. ನನ್ನಂತಹ ಒಬ್ಬಂಟಿ ಹೆಣ್ಣುಮಗಳಿಗೆ ನೀನೇ ಆಧಾರ ನೀಡುತ್ತೀಯ ಎಂಬ ನಂಬಿಕೆ ನನಗಿದೆ.`

ಮೋತಿಬಾಯಿ ತನ್ನ ಬೆನ್ನ ಮೇಲಿನ ಮತ್ತು ಕಂಕುಳಲ್ಲಿದ್ದ ಸಾಮಾನುಗಳನ್ನು ತೆಗೆದುಕೊಂಡು ಮಂದಿರದ ಮುಂದೆಯೇ ಇದ್ದ ಒಂದು ವಿಶಾಲವಾದ ಆಲದ ಮರದ ಕೆಳಗೆ ಹೋಗಿ ಕುಳಿತಳು. ಹಳ್ಳಿಯ ಕೆಲವು ಬ್ರಾಹ್ಮಣ ಪುರುಷರು, ಇವಳು ಮರಾಠಿ ಬ್ರಾಹ್ಮಣ ವಿಧವೆ ಎಂದು ಗುರುತಿಸಿ ತಮ್ಮ ಮನೆಯ ಹೆಣ್ಣುಮಕ್ಕಳನ್ನು ಕರೆದುಕೊಂಡು ಅವಳ ಬಳಿ ಬಂದರು.

ಆ ಜನರಲ್ಲಿ, ರಾಮ ಮಂದಿರದ ಅರ್ಚಕ ಭಾಸ್ಕರ ಭಟ್ ಮತ್ತು ಅವರ ಪತ್ನಿ ನರ್ಮದಾಬಾಯಿ ಮೂಲತಃ ಮಧ್ಯಪ್ರದೇಶದ ನಿವಾಸಿಗಳಾಗಿದ್ದರು. ಹಾಗಾಗಿ ಅವರಿಬ್ಬರಿಗೂ ಮರಾಠಿ ಭಾಷೆ ಚೆನ್ನಾಗಿಯೇ ಬರುತ್ತಿತ್ತು. ನರ್ಮದಾಬಾಯಿ ಮೋತಿಬಾಯಿಯ ಹತ್ತಿರ ಬಂದು ಸಹಾನುಭೂತಿಯಿಂದ ಕೇಳಿದರು, “ಮಾವಶಿ (ಅತ್ತೆ)! ನೀವು ಒಬ್ಬರೇ ಇಷ್ಟೊಂದು ಅಸ್ತಿ ಕುಂಭಗಳನ್ನು ಹಿಡಿದುಕೊಂಡು ಎಲ್ಲಿಗೆ ಹೊರಟಿದ್ದೀರಿ? ನಿಮ್ಮ ಜೊತೆ ಯಾರೂ ನೆಂಟರಿಲ್ಲವಲ್ಲ. ನಿಮ್ಮ ದುಃಖ ನಮಗೆ ಅರ್ಥವಾಗುತ್ತದೆ. ಏನಾಯಿತು ಎಂದು ಹೇಳುತ್ತೀರಾ? ನಾವು ಖಂಡಿತ ನಿಮಗೆ ಸಹಾಯ ಮಾಡುತ್ತೇವೆ. ನಮ್ಮ ಹಳ್ಳಿಯ ಉಳಿದ ಜನರು ಕೂಡ ತುಂಬಾ ಒಳ್ಳೆಯ ಮನಸ್ಸಿನವರಿದ್ದಾರೆ.”

ಮೋತಿಬಾಯಿ ಹಿಂದುಸ್ತಾನಿ ಭಾಷೆಯಲ್ಲೇ ಉತ್ತರಿಸಿದಳು, “ನಾನು ಕೂಡ ಝಾನ್ಸಿಯಲ್ಲೇ ಇರುತ್ತಿದ್ದೆ. ಮೂಲತಃ ನಾನು ಪುಣೆಯವಳು. ಬ್ರಿಟಿಷ್ ಸೈನ್ಯ ಝಾನ್ಸಿಯ ಮೇಲೆ ದಾಳಿ ಮಾಡಿದಾಗ ನನ್ನ ಈ ಆರೂ ಜನ ಸಂಬಂಧಿಕರು ಅನ್ಯಾಯವಾಗಿ ಹತರಾದರು. ಇದರಲ್ಲಿ ಮೂವರು ಸ್ತ್ರೀಯರು ಮತ್ತು ಮೂವರು ಪುರುಷರಿದ್ದಾರೆ. ನನ್ನ ಕುಟುಂಬದಲ್ಲಿ ಕೇವಲ ಒಬ್ಬ ಮೊಮ್ಮಗ ಮಾತ್ರ ಬದುಕಿದ್ದಾನೆ. ಅವನನ್ನು ನನ್ನ ತಂಗಿಯ ಬಳಿ ಬಿಟ್ಟು ನಾನು ಕಾಶಿಗೆ ಹೊರಟಿದ್ದೇನೆ. ನಾವು ಬಡ ಬ್ರಾಹ್ಮಣರು. ನನ್ನ ಜೊತೆ ಇಷ್ಟು ದೂರದ ಪ್ರಯಾಣಕ್ಕೆ ಯಾರು ಬರುತ್ತಾರೆ?” ‘ನನ್ನ ಬದುಕಿರುವ ಮೊಮ್ಮಗ‌’ ಎನ್ನುವಾಗ ಮೋತಿಬಾಯಿಯ ಕಣ್ಣೆದುರು ರಾಣಿ ಲಕ್ಷ್ಮೀಬಾಯಿಯ ದತ್ತಕ ಪುತ್ರ ದಾಮೋದರರಾವ್ ಕಾಣಿಸುತ್ತಿದ್ದ.

ಮೋತಿಬಾಯಿ ಮುಂದುವರಿಸಿ ಹೇಳಿದಳು, “ಇಡೀ ಝಾನ್ಸಿ ನಗರದಲ್ಲಿ ಬ್ರಿಟಿಷರು ಅಲ್ಲಲ್ಲಿ ಬೆಂಕಿ ಹಚ್ಚಿದರು, ಅದರಲ್ಲಿಯೇ ಇವೆಲ್ಲವೂ ನಡೆದುಹೋಯಿತು. ಅಲ್ಲಿಂದ ಹಂತ ಹಂತವಾಗಿ ಪ್ರಯಾಣ ಮಾಡುತ್ತಾ ನಾನು ಇಲ್ಲಿಗೆ ಬಂದು ತಲುಪಿದ್ದೇನೆ. ಯಾರಾದರೂ ಕಾಶಿಗೆ ಹೋಗುವವರು ಸಿಕ್ಕರೆ ಅವರ ಜೊತೆ ಹೋಗಬಹುದು. ನನ್ನ ಸೂತಕವೂ ಮುಗಿದಿದೆ. ಹಾಗಾಗಿ ಮುಟ್ಟಿನ ವಿಷಯದಲ್ಲಿ ಯಾವುದೇ ತೊಂದರೆಯಿಲ್ಲ. ಜೊತೆಯಲ್ಲಿ ಅಸ್ತಿ ಕುಂಭಗಳಿವೆ ಎಂಬ ಕಾರಣಕ್ಕೆ ಮಂದಿರದ ಒಳಗೆ ಹೋಗಲಿಲ್ಲ ಅಷ್ಟೇ. ಇವತ್ತಿನ ರಾತ್ರಿ ಕೂಡ ಇಲ್ಲೇ ತಂಗಿ ವಿಶ್ರಾಂತಿ ತೆಗೆದುಕೊಳ್ಳುತ್ತೇನೆ.”

ಮೋತಿಬಾಯಿಯ ಮಾತನ್ನು ಕೇಳಿ ಪ್ರತಿಯೊಬ್ಬರೂ ಮರುಗುತ್ತಿದ್ದರು. ಆ ಹಳ್ಳಿಯ ಅನೇಕರ ನೆಂಟರಿಷ್ಟರು ಝಾನ್ಸಿಯಲ್ಲಿದ್ದರು. ಮೋತಿಬಾಯಿ ಬೇಕೆಂತಲೇ ಕಣ್ಣೀರಿಟ್ಟು ಅಳಲು ಶುರು ಮಾಡಿದಳು. ಕೂಡಲೇ ಮೂರ್ನಾಲ್ಕು ಮಹಿಳೆಯರು ಅವಳನ್ನು ಸಮಾಧಾನಪಡಿಸಲು ಮುಂದೆ ಬಂದರು. ಅವರಲ್ಲಿ ಒಬ್ಬ ಮಹಿಳೆ ಮೋತಿಬಾಯಿಗೆ ಹೇಳಿದಳು, “ನಿಮ್ಮ ಜೊತೆ ಹಳ್ಳಿಯಿಂದ ಯಾರಾದರೂ ಖಂಡಿತ ಬರುತ್ತಾರೆ. ಯಾಕೆಂದರೆ ನಾವೆಲ್ಲರೂ ಝಾನ್ಸಿಯಲ್ಲಿ ನಮ್ಮವರನ್ನು ಕಳೆದುಕೊಂಡಿದ್ದೇವೆ. ರಾಮ ಮಂದಿರದ ಅರ್ಚಕ ಭಾಸ್ಕರ ಭಟ್ ಮತ್ತು ಅವರ ಪತ್ನಿ ನರ್ಮದಾಬಾಯಿ ಅಂತೂ ದಾಳಿಯ ಸಮಯದಲ್ಲಿ ಝಾನ್ಸಿಯಲ್ಲೇ ಇದ್ದರು. ಅವರು ಎಲ್ಲಾ ವಿಷಯವನ್ನು ನಮಗೆ ಹೇಳಿದ್ದಾರೆ. ಬೇರೆ ಯಾರೂ ಬರದಿದ್ದರೂ ನಾನು ಒಬ್ಬಳೇ ನಿಮ್ಮ ಜೊತೆ ಬರುತ್ತೇನೆ. ಯಾಕೆಂದರೆ ನನ್ನ ತವರು ಮನೆಯವರೆಲ್ಲರೂ ಝಾನ್ಸಿಯ ಬೆಂಕಿಯಲ್ಲಿ ಮೃತಪಟ್ಟಿದ್ದಾರೆ. ನಿಮ್ಮಲ್ಲಿರುವ ಈ ಅಸ್ತಿಗಳನ್ನು ವಿಸರ್ಜನೆ ಮಾಡುವಾಗ ನಾನು ನನ್ನ ಸಂಬಂಧಿಕರ ಹೆಸರಿನಲ್ಲೂ ಗಂಗೆಗೆ ಅರ್ಘ್ಯ ಅರ್ಪಿಸುತ್ತೇನೆ.” ಆ ಸುಭದ್ರಾಬಾಯಿಯ ಕಣ್ಣಿನಿಂದಲೂ ನೀರು ಧಾರಾಕಾರವಾಗಿ ಹರಿಯತೊಡಗಿತು. ಅವಳು ಮೋತಿಬಾಯಿಯನ್ನು ಗಟ್ಟಿಯಾಗಿ ಅಪ್ಪಿಕೊಂಡಳು. ಅವಳ ತವರು ಮನೆಯ ಶೋಕ ಜೋರಾಗಿ ಹೊರಬರುತ್ತಿತ್ತು.

ಯಾರಾದರೂ ತಮ್ಮ ಜೊತೆ ಬರಬಹುದು ಎಂಬುದು ಮೋತಿಬಾಯಿಗೆ ಮನಸ್ಸಿನಲ್ಲಿ ಸಮಾಧಾನ ನೀಡಿತು. ಯಾಕೆಂದರೆ ಬ್ರಿಟಿಷರ ಗೂಢಚಾರರು ಅವಳನ್ನು ಹುಡುಕುತ್ತಲೇ ಇರುತ್ತಾರೆ ಎಂಬ ಖಾತ್ರಿ ಅವಳಿಗಿತ್ತು. ಅವಳು ಒಬ್ಬಂಟಿಯಾಗಿ ಪ್ರಯಾಣಿಸುವುದು ದ್ರೋಹಿಗಳ ಕಣ್ಣಿಗೆ ಬೀಳುವ ಸಾಧ್ಯತೆಯಿತ್ತು. ಅವಳನ್ನು ಯಾರೂ ‘ಮೋತಿಬಾಯಿ’ ಎಂದು ಗುರುತಿಸುವುದು ಅಸಾಧ್ಯವಾಗಿತ್ತು. ಆದರೆ ಅವಳ ಬಳಿಯಿದ್ದ ಪ್ರತಿಯೊಂದು ಅಸ್ತಿ ಕುಂಭದ ಮೇಲೆ ಆಯಾ ವ್ಯಕ್ತಿಯ ಒಂದು ಮುಖ್ಯವಾದ ಗುರುತಿತ್ತು ಮತ್ತು ಅದನ್ನು ಗುರುತಿಸುವ ಸಂಭವವಿತ್ತು.

ಸುಭದ್ರಾಬಾಯಿಯ ಬೆನ್ನು ಸವರುತ್ತಾ ನರ್ಮದಾಬಾಯಿ ಹೇಳಿದರು, “ನೀನು ಇವರ ಜೊತೆ ಖಂಡಿತ ಹೋಗು! ನಾವು ಕೂಡ ಹಳ್ಳಿಯ ನಾಲ್ಕೈದು ಜನರನ್ನು ಇವರ ಜೊತೆ ಖಂಡಿತ ಕಳುಹಿಸುತ್ತೇವೆ.” ಮಾತನಾಡುತ್ತಾ ನರ್ಮದಾಬಾಯಿಯ ಕಣ್ಣಿನಲ್ಲೂ ನೀರು ಬರುತ್ತಿತ್ತು. ನರ್ಮದಾಬಾಯಿ ಮತ್ತು ಭಾಸ್ಕರ ಭಟ್ ತಮ್ಮ ದುಃಖವನ್ನು ಮರೆಮಾಚಲು ಪ್ರಯತ್ನಿಸುತ್ತಿದ್ದಾರೆ ಎಂಬುದು ಮೋತಿಬಾಯಿಗೆ ಅರಿವಾಯಿತು. ಖಂಡಿತ ಅವರಿಗೆ ಝಾನ್ಸಿಯ ಬಗ್ಗೆ ಯಾವುದೋ ನೋವಿದೆ. ಆದರೆ ಮೋತಿಬಾಯಿ ಸುಮ್ಮನಿದ್ದಳು. ಅವಳು ತನ್ನ ಹೆಸರು ‘ಚಿಮಾಬಾಯಿ ಆಚಾರ್ಯ‌’ ಎಂದು ಹೇಳಿದ್ದಳು.

ಮಂದಿರದ ಧರ್ಮಶಾಲೆಯಲ್ಲಿ ಮೋತಿಬಾಯಿಯ ತಂಗುವಿಕೆಗೆ ವ್ಯವಸ್ಥೆ ಮಾಡಲಾಯಿತು. ರಾತ್ರಿ ಅವಳಿಗೆ ಊಟ ತಂದ ನರ್ಮದಾಬಾಯಿ ಮತ್ತು ಭಾಸ್ಕರ ಭಟ್ ಇಬ್ಬರೂ ಬಂದು ಹೇಳಿದರು, “ಹಳ್ಳಿಯ ಹತ್ತು-ಹನ್ನೆರಡು ಮಂದಿ ನಿಮ್ಮ ಜೊತೆ ಬರಲು ಸಿದ್ಧರಾಗಿದ್ದಾರೆ. ಯಾಕೆಂದರೆ ಪ್ರತಿಯೊಬ್ಬರ ಯಾರೋ ಒಬ್ಬರು ಅಲ್ಲಿ ಮೃತಪಟ್ಟಿದ್ದಾರೆ.”

ಮೋತಿಬಾಯಿ ಒಂದು ಕ್ಷಣ ರಾಮ ಮಂದಿರದ ಗೋಪುರದ ಕಡೆಗೆ ನೋಡಿ ಪ್ರಾರ್ಥಿಸಿದಳು - ‘ದೇವಾಧಿದೇವ! ಯಾರಿಂದ ವಿಘ್ನವಾಗುತ್ತದೆಯೋ, ಬ್ರಿಟಿಷರಿಗೆ ಸಂಶಯ ಬರುತ್ತದೆಯೋ ಅಂತಹ ವ್ಯಕ್ತಿಯನ್ನು ಕಳುಹಿಸಬೇಡ.`

ಅವಳು ಮನಸ್ಸಿನಲ್ಲಿ ಹೀಗೆ ಅಂದುಕೊಳ್ಳುತ್ತಿದ್ದಂತೆಯೇ, ಧರ್ಮಶಾಲೆಯ ಕಿಟಕಿಯಿಂದ ಒಳಗೆ ಬಂದ ಅಳಿಲೊಂದು ಮೋತಿಬಾಯಿಯ ಗಂಟಿನ ಮೇಲೆಯೇ ಜಿಗಿದು ಒಳಗೆ ನುಗ್ಗಿತು. ಅದರ ಗಡಿಬಿಡಿಯಿಂದ ಆ ಮಣ್ಣಿನ ಕುಂಭಗಳು ಒಡೆಯಬಾರದೆಂದು ಮೋತಿಬಾಯಿ ಅವಸರದಿಂದ ಆ ಗಂಟನ್ನು ಬಿಚ್ಚಿದಳು.

ಪ್ರಭು ರಾಮಭದ್ರರು ತಮ್ಮ ಕೆಲಸ ಮಾಡಿದ್ದರು. ಲಾಲಾಭಾವು ಬಕ್ಷಿಯವರ ಅಸ್ತಿ ಕುಂಭಕ್ಕೆ ಕಟ್ಟಿದ್ದ ಅವರ ಕತ್ತಿನ ವಿಶಿಷ್ಟ ರೀತಿಯ ಮುತ್ತಿನ ಮಾಲೆ ಮತ್ತು ಅದರಲ್ಲಿನ ಒಂದು ವಿಶಿಷ್ಟ ಚಿಹ್ನೆಯ ಪದಕ ನರ್ಮದಾಬಾಯಿಯ ಕಣ್ಣಿಗೆ ಬಿತ್ತು.

ನರ್ಮದಾಬಾಯಿ ಅತ್ಯಂತ ವೇಗವಾಗಿ ಆ ಪದಕವನ್ನು ಕೈಗೆತ್ತಿಕೊಂಡು ನೋಡಿದರು ಮತ್ತು ಅದರ ಮೇಲಿನ ಗುರುತನ್ನು ಕಂಡು ಅಳುತ್ತಾ ಹೇಳಿದರು, “ಚಿಮಾಬಾಯಿ! ನೀವು ನಿಜವಾಗಿಯೂ ಯಾರು? ಇದು ಲಾಲಾಭಾವು ಬಕ್ಷಿಯವರ ಮಾಲೆ ಮತ್ತು ಅವರು ನನ್ನ ಸ್ವಂತ ಅಣ್ಣ. ಅವರು ರಾಣಿ ಲಕ್ಷ್ಮೀಬಾಯಿಯ ಸೈನ್ಯದ ಸರ್ದಾರರಾಗಿದ್ದರು ಎಂಬುದು ಮಾತ್ರ ನನಗೆ ಗೊತ್ತು. ಈ ಪದಕ ಕೇವಲ ಅವರದ್ದೇ ಆಗಿತ್ತು ಮತ್ತು ಈ ಚಿಹ್ನೆ ಅವರ ಜನ್ಮಕುಂಡಲಿಯ ಪ್ರಕಾರ ಇತ್ತು. ಸರಿಯಾಗಿ ನೋಡಿ! ಆ ಪದಕದ ಕಲೆಗಾರಿಕೆಯಲ್ಲಿ ಅವರ ಹೆಸರು ಬರೆಯಲಾಗಿದೆ. ನಾನು ನಿಮ್ಮ ಜೊತೆ ಬರುತ್ತೇನೆ.”

ಭಾಸ್ಕರ ಭಟ್ ಆತುರದಿಂದ ತಮ್ಮ ಪತ್ನಿಯನ್ನು ಶಾಂತಗೊಳಿಸುತ್ತಾ ಹೇಳಿದರು, “ನಾವು ಶಾಂತ ಮನಸ್ಸಿನಿಂದ ಕೆಲಸ ಮಾಡಬೇಕಾಗಿದೆ. ಯಾಕೆಂದರೆ ಈ ಕುಂಭದ ಮೇಲಿನ ಲಾಲಾಭಾವು ಅವರ ಪದಕದಂತೆ ಉಳಿದ ವ್ಯಕ್ತಿಗಳ ಗುರುತುಗಳು ಕೂಡ ಬೇರೆಯವರಿಗೆ ತಿಳಿಯುವ ಸಾಧ್ಯತೆಯಿದೆ.

ತಾಯಿ! ನಿಮ್ಮ ನಿಜವಾದ ಹೆಸರೇನು ಎಂದು ನನಗೆ ತಿಳಿಸಿ. ಯಾಕೆಂದರೆ ಲಾಲಾಭಾವು ಬಕ್ಷಿ ಕೇವಲ ಈಕೆಯ ಅಣ್ಣ ಮಾತ್ರವಲ್ಲ, ನನ್ನ ಪ್ರಾಣ ಸ್ನೇಹಿತನಾಗಿದ್ದ. ಅವರ ಅಸ್ತಿಗಳು ನಿಮ್ಮ ಬಳಿ ಇವೆ ಎಂದರೆ ನೀವು ಕೂಡ ರಾಣಿ ಲಕ್ಷ್ಮೀಬಾಯಿಯ ಆಪ್ತರೇ ಇರಬೇಕು!”

ಮೋತಿಬಾಯಿ ಆಮೇಲೆ ಸ್ವಲ್ಪವೂ ಹಿಂಜರಿಯದೆ ಎಲ್ಲವನ್ನೂ ಸಂಕ್ಷಿಪ್ತವಾಗಿ ಹೇಳಿದಳು. ಅದನ್ನು ಕೇಳುತ್ತಾ ಭಾಸ್ಕರ ಭಟ್ ಏಕಾಏಕಿ ಭಾವುಕರಾದರು. ಅವರು ರಾಣಿ ಲಕ್ಷ್ಮೀಬಾಯಿಯ ಅಸ್ತಿ ಕುಂಭವನ್ನು ಹಣೆಗೆ ಹಚ್ಚಿಕೊಂಡು ಅತ್ಯಂತ ಮೆಲು ದನಿಯಲ್ಲಿ ಹೇಳಿದರು, “ರಾಣಿ ಲಕ್ಷ್ಮೀಬಾಯಿ ನನ್ನ ಸ್ವಂತ ಸೋದರತ್ತೆಯ ಮಗಳು. ನಾವಿಬ್ಬರೂ ಒಂದೇ ವಂಶದವರು. ಇನ್ನು ಮುಂದೆ ಎಲ್ಲ ಜವಾಬ್ದಾರಿ ನನ್ನದು.”

ಬೆಳಿಗ್ಗೆ ಸೂರ್ಯೋದಯದ ಸಮಯದಲ್ಲಿ ೫೦-೬೦ ಯಾತ್ರಿಕರು ಬಂದು ರಾಮ ಮಂದಿರದ ಪ್ರಾಂಗಣದಲ್ಲಿ ಜಮಾಯಿಸಿದರು. ಮೋತಿಬಾಯಿಯ ಜೊತೆ ಭಾಸ್ಕರ ಭಟ್, ನರ್ಮದಾಬಾಯಿ ಮತ್ತು ಸುಭದ್ರಾಬಾಯಿ ಆಪ್ತೇಷ್ಟರಾಗಿಯೇ ಬರುವವರಿದ್ದರು. ಭಾಸ್ಕರ ಭಟ್ಟರು ಸೇರಿಸಿದ ಯಾತ್ರಿಕರಲ್ಲಿ ಪ್ರತಿಯೊಬ್ಬರೂ ರಾಣಿ ಲಕ್ಷ್ಮೀಬಾಯಿಯ ಸೈನ್ಯದಲ್ಲಿ ಹೋರಾಡಿದವರಾಗಿದ್ದರು ಮತ್ತು ಮೋತಿಬಾಯಿಯ ಮೂಲ ರೂಪ ಹಾಗೂ ಅಧಿಕಾರವನ್ನು ತಿಳಿದವರಾಗಿದ್ದರು.

ಯಾತ್ರೆ ಕಾಶಿಯ ಕಡೆಗೆ ಆರಂಭವಾಯಿತು. ಮೋತಿಬಾಯಿ ವೃದ್ಧ ವಿಧವೆಯ ರೂಪದಲ್ಲೇ ನಡೆಯುತ್ತಿದ್ದಳು ಮತ್ತು ಅಸ್ತಿ ಕುಂಭಗಳನ್ನು ಇಷ್ಟು ಜನರ ಸಾಮಾನುಗಳಲ್ಲಿ ಬಚ್ಚಿಟ್ಟು ಇಡಲಾಗಿತ್ತು. ಅವರಲ್ಲಿ ಪ್ರತಿಯೊಬ್ಬರೂ ‘ನಮಗೆ ಏನೋ ಒಂದು ಮಾಡುವ ಅವಕಾಶ ಸಿಕ್ಕಿದೆ’ ಎಂಬ ಭಾವನೆಯಿಂದಲೇ ಪ್ರತಿಯೊಂದು ಹೆಜ್ಜೆಯನ್ನೂ ಇಡುತ್ತಿದ್ದರು.

ಹನ್ನೊಂದು ದಿನಗಳ ಪ್ರಯಾಣದ ನಂತರ ಕಾಶಿ ವಿಶ್ವನಾಥನ ಗೋಪುರ ಕಾಣಿಸತೊಡಗಿತು.

(ಕಥೆ ಮುಂದುವರಿಯುವುದು)