ಕಾಶಿಬಾಯಿ ಮತ್ತು ಸುಂದರಬಾಯಿ ಇಬ್ಬರೂ ಸೇರಿ, ನಮ್ಮ ಮಂದಿ ದುಲ್ಹೇರಾವ್‌ನನ್ನು ತಮ್ಮ ವಶಕ್ಕೆ ತಗೆದುಕೊಂಡ ಕೂಡಲೇ, ಅಲ್ಲಿ ಯಾರಿಗೂ ತಿಳಿಯದಂತೆ ತಮ್ಮ ಕುದುರೆಗಳನ್ನೇರಿ ಅಲ್ಲಿಂದ ಜಾಣ್ಮೆಯಿಂದ ಹೊರಬಂದರು. ರಾಮದೀನ್ ವಾಲ್ಮೀಕಿ ಕೊಟ್ಟಿದ್ದ ನಕಾಶೆಯ ಪ್ರಕಾರ, ಕಾಡಿನ ಒಂದು ಕಠಿಣ ಹಾದಿಯ ಮೂಲಕ ಸ್ಮಿತ್‌ನ ಶಿಬಿರದತ್ತ ಹೊರಟರು.
ಸ್ಮಿತ್‌ನ ಶಿಬಿರಕ್ಕೆ ತಲುಪಲು ಇದೊಂದೇ ದಾರಿ ಅವರಿಬ್ಬರನ್ನು ಅತೀ ಶೀಘ್ರವಾಗಿ ಅಲ್ಲಿಗೆ ತಲುಪಿಸಬಲ್ಲದ್ದಾಗಿತ್ತು. ಈ ರಸ್ತೆಯ ಬಗ್ಗೆ ಕಾಶಿಬಾಯಿ ಹಳ್ಳಿಯ ಕೆಲ ಹಳೆಯ ಶಿಕಾರಿಗಳ ಹತ್ತಿರ ಕೇಳಿ ತಿಳಿದುಕೊಂಡಿದ್ದರು. ಅವರಿಗೆ ಅವರ ಶಿಕಾರಿಯ ಶೌರ್ಯಗಾಥೆಗಳನ್ನು ಕೇಳುವ ನೆಪದಲ್ಲಿ ಮೋಹದ ಮದ್ಯ ಕುಡಿಸಿ, ಅವರಿಂದ ಈ ಗುಟ್ಟನ್ನು ರಟ್ಟು ಮಾಡಿಸಿದ್ದರು. ಈ ಕುಡಿಸುವ ಮತ್ತು ಅವರನ್ನು ಮಾತನಾಡಿಸುವ ಕೆಲಸವನ್ನು ಲಾಲಾಭೌ ಬಕ್ಷಿ ಮತ್ತು ಅವರಿಗಿಂತ ಮೊದಲು ಸರ್ದಾರ್ ಮಂಜುನಾಥ್ ಪಹಾಡಿ ಮಾಡುತ್ತಿದ್ದರು.
ಇದರಿಂದಾಗಿ ಸರ್ದಾರ್ ಮಂಜುನಾಥ್ ಪಹಾಡಿ ಮತ್ತು ಲಾಲಾಭೌ ಬಕ್ಷಿ ಇಬ್ಬರಿಗೂ ಕಾಶಿಬಾಯಿ ಮತ್ತು ಸುಂದರಬಾಯಿ ಎಲ್ಲಿಗೆ ಹೋಗಿರಬಹುದು ಎಂಬುದು ಕೂಡಲೇ ಅರಿವಾಯಿತು. ಆದರೆ ಅವರಿಬ್ಬರೂ ಹೊರನೋಟಕ್ಕೆ ಶಾಂತವಾಗಿಯೇ ಉಳಿದರು, ಏಕೆಂದರೆ ಕಾಶಿಬಾಯಿ ಇವರ ಬಳಿ ಏನನ್ನೂ ಮುಚ್ಚಿಟ್ಟಿರಲಿಲ್ಲ. ಸ್ಮಿತ್‌ನ ಶಿಬಿರದ ಮೇಲೆ ದೊಡ್ಡ ಗುಂಪಿನೊಂದಿಗೆ ದಾಳಿ ಮಾಡುವುದು ಅಸಾಧ್ಯ ಎಂಬುದು ಅವರಿಬ್ಬರಿಗೂ ಚೆನ್ನಾಗಿ ಗೊತ್ತಿತ್ತು.
ಬ್ರಿಗೇಡಿಯರ್ ಸ್ಮಿತ್ ಬಹಳ ಧೂರ್ತ ಮತ್ತು ಕುತಂತ್ರಿ ಆಗಿದ್ದ. ರಾಣಿ ಲಕ್ಷ್ಮೀಬಾಯಿಯ ಮರಣದ ನಂತರ ಅವನು ತನ್ನ ಶಿಬಿರವನ್ನು ಹತ್ತಿರದ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಿದ್ದ. ಅದು ನಾಲ್ಕು ಬೆಟ್ಟಗಳ ನಡುವೆ ಇದ್ದ ಒಂದು ಸಣ್ಣ ಕಣಿವೆಯಾಗಿತ್ತು. ಅವನ ಶಿಬಿರದ ನಾಲ್ಕೂ ದಿಕ್ಕುಗಳಲ್ಲಿ ಹಗಲು-ರಾತ್ರಿ ಐವತ್ತೈವತ್ತು ಸೈನಿಕರು ಗಸ್ತಿನಲ್ಲಿದ್ದರು. ಗಸ್ತು ತಿರುಗುವ ಪ್ರತಿ ಸೈನಿಕನ ಬಳಿ ರೈಫಲ್ ಇರುತ್ತಿತ್ತು ಮತ್ತು ಅವರ ಮುಖ್ಯಸ್ಥನ ಬಳಿ ದೂರದರ್ಶಕ (Binoculars) ಇರುತ್ತಿತ್ತು. ರಾತ್ರಿಯ ಹೊತ್ತು ಕೂಡ ಯಾರೂ ಬೆಟ್ಟವಿಳಿದು ಬರಬಾರದು ಎಂಬ ದೃಷ್ಟಿಯಿಂದ ಈ ವ್ಯವಸ್ಥೆ ಮಾಡಲಾಗಿತ್ತು.
ಕಾಶಿಬಾಯಿ ಇದರ ಹಿಂದಿನ ರಹಸ್ಯಗಳನ್ನು ಪತ್ತೆಹಚ್ಚಿದ್ದರು. ದುಲ್ಹೇರಾವ್‌ನ ಹಳ್ಳಿಯ ಒಬ್ಬ ಮನುಷ್ಯ, ದಿನವೂ ಬೆಳಿಗ್ಗೆ ಸ್ಮಿತ್‌ನ ಶಿಬಿರಕ್ಕೆ ಅಗತ್ಯ ವಸ್ತುಗಳನ್ನು ತಲುಪಿಸುತ್ತಿದ್ದ, ಅವನ ಹೆಂಡತಿಯ ಮೂಲಕ ಈ ಮಾಹಿತಿ ಪಡೆದಿದ್ದರು.
ಈ ಮನುಷ್ಯ ದುಲ್ಹೇರಾವ್‌ನ ಅತ್ಯಂತ ನಂಬಿಕಸ್ತ ಗೆಳೆಯನಾಗಿದ್ದ. ಸ್ಮಿತ್ ರಾಣಿ ಲಕ್ಷ್ಮೀಬಾಯಿಯ ಮೇಲೆ ದಾಳಿ ಮಾಡಿದಾಗ ಇವನು ಅವನ ಜೊತೆಗೇ ಇದ್ದ ಮತ್ತು ಇವನೇ ಬಾದಲ್ ಕುದುರೆಯ ಕಾಲಿಗೆ ಗುಂಡು ಹೊಡೆಯುವ ಉಪಾಯವನ್ನು ಸ್ಮಿತ್‌ಗೆ ಹೇಳಿಕೊಟ್ಟಿದ್ದ. ಈ ಕಾರಣದಿಂದಲೇ ಅವನು ಸ್ಮಿತ್‌ಗೆ ದುಲ್ಹೇರಾವಗಿಂತಲೂ ಹೆಚ್ಚು ಹತ್ತಿರವಾಗಿದ್ದ.
ಹಳ್ಳಿಯ ಹೆಂಗಸರು ಮತ್ತು ಹಿರಿಯರ ಜೊತೆ ಹರಟೆ ಹೊಡೆಯುತ್ತಾ ಕಾಶಿಬಾಯಿಗೆ ಒಂದು
ವಿಷಯ ತಿಳಿಯಿತು; ದುಲ್ಹೇರಾವ್ ಇದೇ ಕಾರಣಕ್ಕೆ ಈ ‘ಶಂಭುರಾವ್‌ನನ್ನು’ ದೂರ ಮಾಡಿದ್ದಾನೆ ಮತ್ತು ಶಂಭುರಾವ್ ಹಾಗೂ ದುಲ್ಹೇರಾವ್ ನಡುವೆ ಈಗ ಮೌನ ಸ್ಪರ್ಧೆ ನಡೆಯುತ್ತಿದೆ ಎಂದು.
ಕಾಶಿಬಾಯಿ ಶಂಭುರಾವ್‌ನ ಹೆಂಡತಿಯ ಜೊತೆ ಮಾತನಾಡಿ ಎಲ್ಲಾ ಮಾಹಿತಿ ಕಲೆಹಾಕಿದ್ದರು.
ಈ ಇಬ್ಬರ ಕುದುರೆಗಳ ಜೊತೆಗೇ ಮೂರನೇ ಕುದುರೆಯೂ ಸಾಗುತ್ತಿತ್ತು. ಆ ಕುದುರೆಯ ಮೇಲೆ ಕೈಕಾಲು ಮತ್ತು ಬಾಯಿ ಕಟ್ಟಲ್ಪಟ್ಟ ಸ್ಥಿತಿಯಲ್ಲಿ ಶಂಭುರಾವ್ ಇದ್ದ. ಇವನನ್ನು ಸ್ಮಿತ್‌ನ ಎದುರೇ ಬಲಿ ಕೊಡಬೇಕಿತ್ತು.
ಈ ಕಾರ್ಯಕ್ಕಾಗಿ ಮುಹೂರ್ತವಾಗಿ ಹುಣ್ಣಿಮೆಯ ರಾತ್ರಿಯನ್ನೇ ಆರಿಸಿಕೊಳ್ಳಲಾಗಿತ್ತು. ಏಕೆಂದರೆ ರಾತ್ರಿಯ ಕತ್ತಲ ಲಾಭವೂ ಸಿಗಲಿ ಮತ್ತು ಚಂದ್ರನ ಬೆಳಕಿನಲ್ಲಿ ಈ ಶಿಕ್ಷೆ ಎಲ್ಲರಿಗೂ ಸ್ಪಷ್ಟವಾಗಿ ಕಾಣಲಿ ಎಂದು.
ಹಗಲು ಹೊತ್ತು ಈ ಕೆಲಸ ಮಾಡುವುದರಲ್ಲಿ ಒಂದು ಅಪಾಯವಿತ್ತು; ಅಷ್ಟೊಂದು ಬೇಗ ಅಲ್ಲಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಇನ್ನೂ ಕೆಲವು ದಿನ ಕಾದಿದ್ದರೆ ಯಾರಾದರೂ ಒಬ್ಬ ದೇಶದ್ರೋಹಿ ಕಂಪನಿ ಸರ್ಕಾರಕ್ಕೆ ಮಾಹಿತಿ ಮುಟ್ಟಿಸುತ್ತಿದ್ದ, ಅದು ಆಗಬಾರದಿತ್ತು.
ಬೆಳ್ಳಂಬೆಳಿಗ್ಗೆ ಆಗುವ ಕೆಲವೇ ಕ್ಷಣಗಳ ಮೊದಲು ಈ ಇಬ್ಬರೂ ಸ್ಮಿತ್‌ನ ಶಿಬಿರಕ್ಕೆ ಹೊಂದಿಕೊಂಡೇ ಇರುವ, ಒಂದು ರೀತಿಯಲ್ಲಿ ಶಿಬಿರದ ಹೆಬ್ಬಾಗಿಲಂತಿರುವ ಖಿ೦ಡ (ಎರಡು ಬೆಟ್ಟಗಳ ನಡುವಿನ ಕಿರಿದಾದ ದಾರಿ) ತಲುಪಿದರು. ಅಲ್ಲಿಗೆ ತಲುಪಿದ ಕೂಡಲೇ ಕಾಶಿಬಾಯಿ, ಶಂಭುರಾವ್‌ನಿಂದಲೇ ಕಸಿದುಕೊಂಡಿದ್ದ ದೂರದರ್ಶಕವನ್ನು ಹೊರತೆಗೆದರು. ಗಸ್ತು ತಿರುಗುವ ಸೈನಿಕರು ಸರಿಯಾಗಿ ಆ ದಾರಿಯ ಎದುರಿಗೆ ಬರುತ್ತಿದ್ದಂತೆ, ಕುದುರೆಗಳನ್ನು ಓಡಿಸುತ್ತಾ ರೈಫಲ್‌ನಿಂದ ಗುಂಡು ಹಾರಿಸುತ್ತಾ ಕೆಳಗಿಳಿಯಲು ಆರಂಭಿಸಿದರು.
ಇಬ್ಬರ ಗುರಿಯೂ ಅಚೂಕವಾಗಿತ್ತು, ಅವರಲ್ಲಿ ಜಿದ್ದಿನ ಮತ್ತು ಸೇಡಿನ ಭಾವನೆ ತೀವ್ರವಾಗಿತ್ತು. ಅವರ ಎದೆಯಲ್ಲಿ ಉರಿಯುತ್ತಿದ್ದ ಸ್ವಾತಂತ್ರ್ಯ ಯುದ್ಧದ ಜ್ಯೋತಿ ಅವರಿಗೆ ಬಲ ನೀಡುತ್ತಿತ್ತು. ರಾಣಿ ಲಕ್ಷ್ಮೀಬಾಯಿಯ ಕೊನೆಯ ಕ್ಷಣಗಳ ನೆನಪು ಅವರಲ್ಲಿ ಅಪಾರ ಧೈರ್ಯ ಮತ್ತು ಶೌರ್ಯವನ್ನು ಉ೦ಟುಮಾಡುತ್ತಿತ್ತು.
ದಾರಿ ಇಳಿಯುವಷ್ಟರಲ್ಲೇ ಗಸ್ತಿನಲ್ಲಿದ್ದ ಎಲ್ಲಾ 50 ಸೈನಿಕರನ್ನು ಯಮಪುರಿಗಟ್ಟಲಾಗಿತ್ತು. ಏಕೆಂದರೆ ಕಾಶಿಬಾಯಿಯ ಹಿಂದೆ ಬಂದಿದ್ದ ಸರ್ದಾರ್ ಮಂಜುನಾಥ್ ಪಹಾಡಿ ಮತ್ತು ಲಾಲಾಭೌ ಬಕ್ಷಿ ಅವರ ಬಳಿಯೂ ರೈಫಲ್‌ಗಳಿದ್ದವು.
ಅವರಿಬ್ಬರೂ ಕುದುರೆಯ ಹೆಜ್ಜೆಗುರುತುಗಳನ್ನು ಹಿಂಬಾಲಿಸುತ್ತಾ ಬಂದು ಸರಿಯಾದ ಸಮಯಕ್ಕೆ ಅಲ್ಲಿ ತಲುಪಿದ್ದರು.
ಈ ನಾಲ್ವರೂ ಸೇರಿ ಸ್ಮಿತ್‌ನ ಶಿಬಿರದ ಮೇಲೆ ನೇರ ದಾಳಿ ಮಾಡಿದರು. ಸ್ಮಿತ್‌ನ ಎಲ್ಲಾ ಸೈನಿಕರು ಗಾಢ ನಿದ್ರೆಯಿಂದ ಎಚ್ಚರಗೊಂಡಿದ್ದರು. ಆದರೆ ಅವರು ಬಟ್ಟೆ ಧರಿಸಿ ಶಸ್ತ್ರಾಸ್ತ್ರ ಹಿಡಿದು ಹೊರಬರುವಷ್ಟರಲ್ಲೇ, ಈ ನಾಲ್ವರು ಸ್ಮಿತ್‌ನ ತಂಬೂರಿಯ ನಾಲ್ವರು ರಕ್ಷಕರನ್ನು ಕೊಂದಿದ್ದರು. ಒಬ್ಬ ವೇಶ್ಯೆಯ ಜೊತೆ ಮಲಗಿದ್ದ ಸ್ಮಿತ್‌ನನ್ನು ಕಾಲಿನಿಂದ ಎಳೆದು ಹೊರತಂದರು ಮತ್ತು
ಅವನ ಕಣ್ಣೆದುರೇ ಶಂಭುರಾವ್‌ನ ತಲೆಯನ್ನು ಕತ್ತರಿಸಿ ಹಾಕಿದರು.
ಸರ್ದಾರ್ ಮಂಜುನಾಥ್ ಪಹಾಡಿ ಅವರು ತಮ್ಮ ಗಂಭೀರ ಧ್ವನಿಯಲ್ಲಿ ಸ್ಮಿತ್‌ನ ಸೈನಿಕರಿಗೆ ಎಚ್ಚರಿಕೆ ನೀಡಿದರು; “ಯಾರಾದರೂ ಸಾಹಸ ಮಾಡಲು ಹೋದರೆ, ಬೆಟ್ಟದ ಸುತ್ತಮುತ್ತ ಅಡಗಿ ಕುಳಿತಿರುವ ನಮ್ಮ ನಾನೂರು ಸೈನಿಕರು ನಿಮ್ಮನ್ನು ಗುಂಡಿಟ್ಟು ಕೊಲ್ಲುತ್ತಾರೆ. ನಮಗೆ ಬರಿ ಬ್ರಿಗೇಡಿಯರ್ ಸ್ಮಿತ್ ಬೇಕು, ಬೇರೆಯವರಿಗೆ ನಾವು ತೊಂದರೆ ಕೊಡುವುದಿಲ್ಲ.” ಇದರಿಂದ ಎಲ್ಲಾ ಸೈನಿಕರು ಗಪ್‌ಚುಪ್ ಆದರು. ಯಾರೂ ಅಲುಗಾಡುವ ಸ್ಥಿತಿಯಲ್ಲಿ ಇರಲಿಲ್ಲ.
ಕಾಶಿಬಾಯಿಯೇ ಬ್ರಿಗೇಡಿಯರ್ ಸ್ಮಿತ್‌ನ ಕಾಲಿಗೆ ಹಗ್ಗ ಕಟ್ಟಿದ್ದರು. ಸ್ಮಿತ್ ಸಹಾಯಕ್ಕಾಗಿ ಕಿರುಚುತ್ತಿದ್ದ, ಆದರೆ ಸ್ವಲ್ಪವೂ ದಯೆ ತೋರದೆ ಉಳಿದ ಮೂವರು ಕುದುರೆಗಳ ಕಾಲಿನ ಅಡಿಯಲ್ಲಿ ಸ್ಮಿತ್‌ನನ್ನು ಅಕ್ಷರಶಃ ತುಳಿಯುತ್ತಿದ್ದರು. ಕುದುರೆಯ ಪ್ರತಿ ಒದೆಯ ಜೊತೆಗೆ ಹೊರಬರುತ್ತಿದ್ದ ಸ್ಮಿತ್‌ನ ಕಿರುಚಾಟ ಈ ನಾಲ್ವರಿಗೆ ಮತ್ತಷ್ಟು ಬಲ ನೀಡುತ್ತಿತ್ತು.
ಸರ್ದಾರ್ ಮಂಜುನಾಥ್ ಪಹಾಡಿ ಸ್ಮಿತ್‌ನನ್ನು ಈಟಿಗಳಿಂದ ಚುಚ್ಚಿ ಚುಚ್ಚಿ ಒಂದು ಮರದ ಆಧಾರದಿಂದ ನಿಲ್ಲಿಸಿದರು. ಕಾಶಿಬಾಯಿ ಕುದುರೆಯಿಂದ ಕೆಳಗಿಳಿದು ತನ್ನ ಕೈಯಾರೆ ಸ್ಮಿತ್‌ನನ್ನು ಆ ಮರಕ್ಕೆ ಗಟ್ಟಿಯಾಗಿ ಬಿಗಿದು ಕಟ್ಟಿದರು. ಅವಳ ಹಿಂದೆಯೇ ಇಳಿದ ಸುಂದರಬಾಯಿ ಸ್ಮಿತ್‌ನ ಎರಡು ಕಾಲುಗಳಿಗೆ ತಲಾ ನಾಲ್ಕು-ನಾಲ್ಕು ಗುಂಡುಗಳನ್ನು ಹೊಡೆದರು. ಪ್ರತಿ ಗುಂಡು ಹಾರಿಸುವಾಗಲೂ ಅವರು “ಜೈ ರಾಣಿ ಲಕ್ಷ್ಮೀಬಾಯಿ! ಜೈ ಬಾದಲ್!” ಎಂದು ಜೋರಾಗಿ ಘೋಷಣೆ ಕೂಗುತ್ತಿದ್ದರು, ಉಳಿದವರು ಅವರಿಗೆ ಸಾಥ್ ನೀಡಿದರು.
ಎಲ್ಲರಿಗಿಂತ ಕೊನೆಯಲ್ಲಿ ಕುದುರೆಯಿಂದಿಳಿದ ಲಾಲಾಭೌ ಬಕ್ಷಿ ಸ್ಮಿತ್‌ನ ಎರಡೂ ಕೈಗಳಿಗೆ ತಲಾ ನಾಲ್ಕು-ನಾಲ್ಕು ಗುಂಡುಗಳನ್ನು ಹಾಕಿದರು.
ನಮ್ಮ ಜನರಿಗೆ ಸ್ಮಿತ್‌ನನ್ನು ತಕ್ಷಣವೇ ಕೊಲ್ಲುವುದು ಬೇಕಿರಲಿಲ್ಲ. ಅವನಿಗೆ ಸುಲಭವಾದ ಸಾವು ನೀಡಬಾರದಿತ್ತು. ಅವನು ನರಳಿ ನರಳಿ ಸಾಯಬೇಕು ಮತ್ತು ಅದು ಇಡೀ ಬ್ರಿಟಿಷ್ ಸೈನ್ಯಕ್ಕೆ ಹಾಗೂ ಭಾರತೀಯ ದೇಶದ್ರೋಹಿಗಳಿಗೆ ತಿಳಿಯಬೇಕು ಎಂಬುದು ಅವರ ಉದ್ದೇಶವಾಗಿತ್ತು.
ನಂತರ ಆ ನಾಲ್ವರೂ ಮತ್ತೆ ಕುದುರೆಯೇರಿದರು ಮತ್ತು ಕಾಶಿಬಾಯಿ ತನ್ನ ತಲವಾರಿನಿಂದ ಅವನ ಬೆನ್ನಿನ ಮೇಲೆ ಒಂದು ಆಳವಾದ ಗಾಯ ಮಾಡಿದರು—ರಾಣಿ ಲಕ್ಷ್ಮೀಬಾಯಿಯ ಬೆನ್ನಿನ ಮೇಲೆ ಆದಂತೆಯೇ. ಆ ನಾಲ್ವರಿಗೂ ಈಗ ಬಹಳ ಶಾಂತಿ ಅನಿಸುತ್ತಿತ್ತು ಮತ್ತು ಅವರ ಕಣ್ಣೆದುರು ಎಲ್ಲೆಡೆ ರಾಣಿ ಲಕ್ಷ್ಮೀಬಾಯಿಯೇ ಕಾಣುತ್ತಿದ್ದರು.
ಈ ನಾಲ್ವರು ಮರಳಲು ಸಿದ್ಧರಾದಾಗ, ಒಬ್ಬ ಬ್ರಿಟಿಷ್ ಸೈನಿಕ ಜೋರಾಗಿ ಕೂಗಿದ, “ಬೆಟ್ಟದ ಮೇಲೆ ಯಾರೂ ಇಲ್ಲ ಎಂದು ನಾನು ಖಚಿತಪಡಿಸಿಕೊಂಡಿದ್ದೇನೆ.” ಅಷ್ಟರಲ್ಲಿ, ಕೂಡಲೇ ಸೈನಿಕರ ಎಲ್ಲಾ ರೈಫಲ್‌ಗಳು ಒಮ್ಮೆಲೆ ಗುಂಡಿನ ಮಳೆ ಸುರಿಸಿದವು. ನಾಲ್ವರ ಮೈಯಲ್ಲೂ ಗುಂಡುಗಳು ಹೊಕ್ಕಿದ್ದವು, ಆದರೂ ಅವರು ಹೇಗೋ ಕಾಡಿನೊಳಗೆ ನುಗ್ಗಿ ವೇಗವಾಗಿ ವಿರುದ್ಧ ದಿಕ್ಕಿನತ್ತ ಸಾಗಿದರು.
ಸುಮಾರು ಒಂದು ಗಂಟೆಯ ನಂತರ ಅವರ ಗೆಳೆಯರ ಗುಂಪು ಅವರನ್ನು ಹುಡುಕುತ್ತಾ ಬಂದಿತು. ಅವರಿಗೆ ನಡೆದದ್ದನ್ನೆಲ್ಲಾ ಹೇಳುತ್ತಾ ಹೇಳುತ್ತಾ ಆ ನಾಲ್ವರೂ ಒಬ್ಬೊಬ್ಬರಾಗಿ ಪ್ರಾಣ
ಬಿಟ್ಟರು. ಸ್ಮಿತ್‌ನ ಸೈನ್ಯ ಇವರ ಬೆನ್ನಟ್ಟಿ ಬಂದಿರಲಿಲ್ಲ. ಅವರೆಲ್ಲಾ ಸ್ಮಿತ್‌ನನ್ನು ಉಳಿಸಿಕೊಳ್ಳುವ ಗಡಿಬಿಡಿಯಲ್ಲಿದ್ದರು ಹಾಗು ಅವರಿಗೆ ಇವರ ಹಿ೦ದೆ ಬರಲಿಕ್ಕೆ ಇರಲಿಲ್ಲ ಕಾರಣ ದಾಳಿಗೆ ಆದೇಶ ನೀಡಿದ ಆ ಬ್ರಿಟಿಶ ಸೈನಿಕ ಎಲ್ಲರಿಗೆ ಸ್ಫಷ್ತವಾಗಿ ಹೇಳಿದ್ದ, ’ಬೆಟ್ಟದ ಮೇಲೆ ಸೈನಿಕರು ಇಲ್ಲಾ ಅ೦ತ ನಾನು ಸುಮ್ಮನೆ ಹೇಳಿದ್ದೆ. ನಾವು ನಮ್ಮ ಮತ್ತು ಸ್ಮಿತ್‌ನ ಸುರಕ್ಷೆ ನೊಡುವ.’
ನಮ್ಮ ಜನ ಆ ನಾಲ್ವರ ಶವಗಳನ್ನು ಹೊತ್ತು ಕಾಡಿನ ಮತ್ತೊಂದು ದಟ್ಟವಾದ ಕಣಿವೆಗೆ ಹೋದರು. ಆ ನಾಲ್ವರ ಅಂತ್ಯಸಂಸ್ಕಾರ ಮಾಡುವಾಗ ಯಾರ ಕಣ್ಣಿನಲ್ಲೂ ನೀರು ನಿಲ್ಲುತ್ತಿರಲಿಲ್ಲ. ಮೋತಿಬಾಯಿ ಮತ್ತು ಗಂಗಾಬಾಯಿ ಇಬ್ಬರೂ ಸೇರಿ ಆ ನಾಲ್ವರಿಗೂ ಅಗ್ನಿ ನೀಡಿದರು. ಈ ಬಾರಿ ಗೀತೆ ಹೇಳಲು ರಾಮಚಂದ್ರರಾವ್ ಇರಲಿಲ್ಲ.
ಇದಾದ ನಂತರ ಮೋತಿಬಾಯಿ ಒಂದು ನಿರ್ಧಾರ ತಗೆದುಕೊಂಡರು; ಎಲ್ಲರೂ ಸಣ್ಣ ಸಣ್ಣ ತಂಡಗಳಾಗಿ ತಾತ್ಯಾ ಟೋಪೆ ಅವರನ್ನು ಭೇಟಿಯಾಗಲು ಹೊರಟರು. ಮೋತಿಬಾಯಿ ಮಾತ್ರ ಏಕಾಂಗಿಯಾಗಿ ರಾಣಿ ಲಕ್ಷ್ಮೀಬಾಯಿ, ಮೋರೋಪಂತ್ ಮತ್ತು ಈ ನಾಲ್ವರ ಸೇರಿ ಒಟ್ಟು ಆರು ಜನರ ಅಸ್ಥಿಗಳನ್ನು ತಗೆದುಕೊಂಡು ಕಾಶಿಗೆ ಹೊರಟರು.
(ಕಥೆ ಮುಂದುವರಿಯುವುದು)
