ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಅನಾವರಣ ಆಗದ ಇತಿಹಾಸದ ಸೂಕ್ಷ್ಮ ಸತ್ಯಗಳು - ಭಾಗ - 13

ರಾಣಿ ಲಕ್ಷ್ಮೀಬಾಯಿಯವರ, ಸೊಂಟ ಕಟ್ಟಿ ಮತ್ತು ಉಕ್ಕಿನ ಎದೆಯೊಂದಿಗೆ ಹೋರಾಡಲು ಸಿದ್ಧರಿದ್ದ ದುರ್ಗಾದಳ ಮತ್ತು ಮಹಾದೇವಶಿವದಳವು ಬ್ರಿಟಿಷರ ದಾಳಿಗೆ ಬಲವಾದ ಪ್ರತಿಕ್ರಿಯೆ ನೀಡಲು ಪ್ರಾರಂಭಿಸಿತು. ಯುದ್ಧದಲ್ಲಿ ಝಾನ್ಸಿಯ ಕೋಟೆಯಿಂದ ರಾಣಿ ಹೇಗೆ ಹೋರಾಡುತ್ತಿದ್ದರೋ, ಹಾಗೆಯೇ ಮುಂಚಿತವಾಗಿ ಯೋಜಿಸಿದ೦ತೆ ಝಾನ್ಸಿ ನಗರ ಮತ್ತು ಝಾನ್ಸಿ ರಾಜ್ಯದ ವಿವಿಧ ಭಾಗಗಳಲ್ಲಿ ಅಡಗಿಸಿಟ್ಟಿದ್ದ ರಾಣಿ ಲಕ್ಷ್ಮೀಬಾಯಿಯವರ ನೂರಾರು ಸೈನಿಕರು, ಮೇಜರ್ ಎರ್ ಸ್ಕಿನ್ ಸೈನ್ಯದ ಮೇಲೆ ಹಲವು ಕಡೆಗಳಿಂದ ದಾಳಿ ಮಾಡಲು ಪ್ರಾರಂಭಿಸಿದರು.

‘ಬ್ರಿಟಿಷ್ ಸೈನ್ಯದ ಸಾವಿರದ ಐನೂರು ಸೈನಿಕರು ಮೊದಲ ನಾಲ್ಕು ದಿನಗಳಲ್ಲೇ ಕೊಲ್ಲಲ್ಪಟ್ಟರು ಮತ್ತು ಝಾನ್ಸಿಯ ರಾಣಿ ಲಕ್ಷ್ಮೀಬಾಯಿಯ ಸೈನ್ಯದ ಕೇವಲ ಎರಡು-ನಾಲ್ಕು ಸೈನಿಕರನ್ನು ಮಾತ್ರ ನಾವು ಕೊಲ್ಲಲು ಸಾಧ್ಯವಾಯಿತು’ ಎಂಬ ಸ್ಪಷ್ಟ ಸಂದೇಶವನ್ನು ಮೇಜರ್ ಜನರಲ್ ಹ್ಯೂಜ್ ರೋಸ್‌ನ ಗುಪ್ತಚರರು ಎರ್ಸ್ಕಿನ್‌ಗೆ ತಿಳಿಯದಂತೆ ಹ್ಯೂಜ್ ರೋಸ್ ಮತ್ತು ಲಾರ್ಡ್ ಡಾಲ್ಹೌಸಿಗೆ ತಿಳಿಸಿದರು. ಅದರ ಬೆನ್ನಲ್ಲೇ ಬ್ರಿಟಿಷ್ ಸೈನಿಕರು ವಿವಿಧೆಡೆಗಳಿಂದ ಝಾನ್ಸಿಯ ಹೊರಗೆ ಜಮಾಯಿಸಲು ಪ್ರಾರಂಭಿಸಿದರು.

ರಾಣಿ ಲಕ್ಷ್ಮೀಬಾಯಿ ತನ್ನ ಆಪ್ತ ಸಹೋದ್ಯೋಗಿಗಳೊಂದಿಗೆ ಚರ್ಚಿಸಿ ಅರಮನೆಯ ದೇವಾಲಯಕ್ಕೆ ಹೊರಟರು. ನಾಲ್ಕೂ ದಿಕ್ಕುಗಳಿಂದ ದಾಳಿಗಳು ಹೆಚ್ಚಾಗುತ್ತಿದ್ದವು. ಮೊದಲ ನಾಲ್ಕು ದಿನಗಳ ನಂತರದ ಪ್ರತಿ ದಿನವೂ ಝಾನ್ಸಿ ಸೈನ್ಯ ಮತ್ತು ಝಾನ್ಸಿ ರಾಜ್ಯಕ್ಕೆ ಅಪಾರ ನಷ್ಟವಾಗುತ್ತಿತ್ತು.

ಕೋಟೆಯ ಹೊರಗಿದ್ದು ಗೆರಿಲ್ಲಾ ಮಾದರಿಯಲ್ಲಿ ದಾಳಿ ಮಾಡಿ ಬ್ರಿಟಿಷ್ ಸೈನ್ಯವನ್ನು ಕಾಡುತ್ತಿದ್ದ ಲಕ್ಷ್ಮೀಬಾಯಿಯವರ ಸೈನ್ಯದಲ್ಲಿ ಸುಮಾರು 50% ಸೈನಿಕರು ಹುತಾತ್ಮರಾಗಿದ್ದರು. ಕೋಟೆಯ ಹೊರಗಿನಿಂದ ಹೋರಾಡುತ್ತಿರುವ ಸೈನಿಕರನ್ನು ತಡೆಯಬೇಕೋ ಅಥವಾ ಹೋರಾಡಲು ಬಿಡಬೇಕೋ ಮತ್ತು ಅವರಿಗೆ ಸಂದೇಶವನ್ನು ಹೇಗೆ ಕಳುಹಿಸಬೇಕು ಎಂಬ ವಿಚಾರದಲ್ಲಿ ಮುಳುಗಿದ್ದ ರಾಣಿ ದೇವಾಲಯಕ್ಕೆ ನಡೆದರು. ಏಕೆಂದರೆ ಆ ಸಂದೇಶವನ್ನು ತಲುಪಿಸಲು ಝಾನ್ಸಿಯ ಕೋಟೆಯಿಂದ ಹೊರಗಿನ ಪ್ರದೇಶಗಳಿಗೆ ಹೋಗುವ ಏಳೂ ಸುರಂಗ ಮಾರ್ಗಗಳನ್ನು ಬ್ರಿಟಿಷರು ನಾಶಪಡಿಸಿದ್ದರು.

ರಾಣಿ ಲಕ್ಷ್ಮೀಬಾಯಿ ದೇವಾಲಯವನ್ನು ಪ್ರವೇಶಿಸಿ ದೇವರ ದರ್ಶನ ಪಡೆದರು, ದೇವಾಲಯದಲ್ಲಿ ಸ್ವತಃ ಜ್ಯೋತಿಯನ್ನು ಬೆಳಗಿಸಿದರು ಮತ್ತು ‘ಇದು ಬಹುಶಃ ನಮ್ಮ ಕೊನೆಯ ಭೇಟಿಯಾಗಿರಬಹುದು’ ಎಂದು ದೇವರಿಗೆ ಸ್ಪಷ್ಟವಾಗಿ ಹೇಳಿ, ಒಮ್ಮೆ ಕೂಡ ಹಿಂದೆ ತಿರುಗಿ ನೋಡದೆ ದೃಢನಿಶ್ಚಯದಿಂದ ದೇವಾಲಯದಿಂದ ಹೊರಬಂದರು. ದೇವಾಲಯದಲ್ಲಿ ದೇವರ ಜೊತೆಗೆ, ಗೋಡೆಯ ಮೇಲೆ ಪತಿ, ಮಗ ಮತ್ತು ದಿವಂಗತ ತಾಯಿಯ ಪುರನ್‌ಸಿಂಗ್ ಕೋರಿ ಅವರು ಬಿಡಿಸಿದ ಭಾವಚಿತ್ರಗಳಿದ್ದವು. ಅವರಿಗೆ ಒಂದೇ ಒಂದು ಕಣ್ಣೀರ ಹನಿ ಸುರಿಸುವುದು ಇಷ್ಟವಿರಲಿಲ್ಲ. ಆ ಪತಿವ್ರತೆ ಭಾರತೀಯ ನಾರಿಯು ಹೊಸ್ತಿಲು ದಾಟುವಾಗ ಪತಿಯನ್ನು ಸ್ಮರಿಸಿ ಇಷ್ಟೇ ಹೇಳಿದರು - ‘ಬಹುಶಃ ಶೀಘ್ರದಲ್ಲೇ ನಿಮ್ಮ ಭೇಟಿಯಾಗುವುದು. ನಿಮ್ಮಿಬ್ಬರನ್ನು

ಭೇಟಿಯಾಗುವಲ್ಲಿ ಆನಂದವೇ ಇದೆ. ಆದರೆ ಝಾನ್ಸಿ ನಿಮ್ಮ ತಾಯಿಯಾಗಿದ್ದಳು. ಅವಳ ರಕ್ಷಣೆಗಾಗಿ ದೇವರಿಗೆ ಪ್ರಾರ್ಥಿಸಿ.’

ರಾಣಿ ಲಕ್ಷ್ಮೀಬಾಯಿ ದೇವಾಲಯದಿಂದ ಹೊರಬಂದು ಬಾಲೇಖಿಲ್ಲೆಯ ಎರಡನೇ ಮಹಡಿಯತ್ತ ಹೊರಟರು, ಅಲ್ಲಿ ಪುರನ್‌ಸಿಂಗ್ ಕೋರಿ ಮತ್ತು ದಿವನ್ ರಘುನಾಥಸಿಂಗ್ ಕೆಲವು ವಿಶೇಷ ಸುದ್ದಿಗಳೊಂದಿಗೆ ಅವರಿಗಾಗಿ ಕಾಯುತ್ತಿದ್ದರು. ರಾಣಿ ಲಕ್ಷ್ಮೀಬಾಯಿ ಆ ದೊಡ್ಡ ವರಾಂಡಾದಲ್ಲಿ ಒಬ್ಬರೇ ನಡೆಯುತ್ತಿದ್ದರು. ಆ ಇಡೀ ಕೋಟೆಯಲ್ಲಿ ಒಬ್ಬನೇ ಒಬ್ಬ ಸೇವಕನಿರಲಿಲ್ಲ. ಅಡುಗೆಯವರು, ನೀರು ಹೊರುವವರು ಸೇರಿದಂತೆ ಎಲ್ಲಾ ಸೇವಕರು ಯುದ್ಧದ ಸಹಾಯದಲ್ಲಿ ತೊಡಗಿದ್ದರು. ಕೆಲವೊಮ್ಮೆ ಹೋರಾಡುವ ಸೈನಿಕರಿಗೆ ತಿನ್ನಲು ಕುಡಿಯಲು ಸಮಯವಿರುತ್ತಿರಲಿಲ್ಲ, ಅಂತಹ ಸಮಯದಲ್ಲಿ ಈ ಅಡುಗೆಯವರು ಮತ್ತು ನೀರು ಹೊರುವವರು ಸೈನಿಕರಿಗೆ ತಾವೇ ಕೈಯಾರೆ ತಿನ್ನಿಸುತ್ತಿದ್ದರು ಮತ್ತು ನೀರು ಕುಡಿಸುತ್ತಿದ್ದರು. ಯಾವುದೇ ಸೈನಿಕ ಎರಡು-ಮೂರು ಗಂಟೆಗಳಿಗಿಂತ ಹೆಚ್ಚು ನಿದ್ದೆ ಮಾಡಿರಲಿಲ್ಲ.

ರಾಣಿ ಲಕ್ಷ್ಮೀಬಾಯಿ ವಿಚಾರಗಳಲ್ಲಿ ಮಗ್ನರಾಗಿ ಮುನ್ನಡೆಯುತ್ತಿದ್ದರು. ಅವರ ಅಂಗರಕ್ಷಕಿ ಮುಂದರಬೇಗಂ ಅವಳ ಸಂಪೂರ್ಣ ಗಮನವನ್ನು ರಾಣಿಯ ಮೇಲೆಯೇ ಇಟ್ಟಿದ್ದಳು. ಅವಳು ರಾಣಿಯ ಬೆನ್ನ ಹಿಂದೆಯೇ ನಡೆಯುತ್ತಿದ್ದಳು.

ಅರ್ಧ ದಾರಿಯಲ್ಲಿ ಮಿಲಿಟರಿ ಸಮವಸ್ತ್ರ ಧರಿಸಿದ ವ್ಯಕ್ತಿಯೊಬ್ಬರು ಇದ್ದಕ್ಕಿದ್ದಂತೆ ರಾಣಿ ಲಕ್ಷ್ಮೀಬಾಯಿಯ ಮುಂದೆ ಬಂದು ನಿಂತರು. ಆ ಕಡುಗತ್ತಲಲ್ಲೂ ಮುಂದರಬೇಗಂ ಆ ವ್ಯಕ್ತಿ ಧರಿಸಿದ್ದ ಬ್ರಿಟಿಷ್ ಸೈನಿಕನ ಉಡುಪನ್ನು ಗುರುತಿಸಿದಳು ಮತ್ತು ಕ್ಷಣಾರ್ಧದಲ್ಲಿ ಆ ಹೆಣ್ಣುಹುಲಿ ಆ ಸೈನಿಕನ ಮೇಲೆ ಜಿಗಿದಳು. ಆ ವ್ಯಕ್ತಿ ಕೆಳಗೆ ಬೀಳುತ್ತಿದ್ದಂತೆ, ಆ ಸೈನಿಕನ ತಲೆಯ ಮೇಲಿದ್ದ ಬ್ರಿಟಿಷ್ ಟೋಪಿ (Sepoy hat) ಕೆಳಗೆ ಬಿತ್ತು ಮತ್ತು ಮುಂದರಬೇಗಂ ಚಕಿತಳಾಗಿ, “ಅರೇ! ಝಲಕಾರಿ ನೀನಾ!” ಎಂದಳು.

“ಹೌದು, ನಾನು ಝಲಕಾರಿಬಾಯಿ.” ಮೂವರೂ ತಕ್ಷಣ ಪಕ್ಕದ ಕೋಣೆಗೆ ಹೋದರು. ರಾಣಿ ಲಕ್ಷ್ಮೀಬಾಯಿ ಝಲಕಾರಿಯ ಕೈ ಹಿಡಿದು ಪ್ರೀತಿ ಮತ್ತು ಗೌರವದಿಂದ ಪಕ್ಕದಲ್ಲಿ ಕುಳ್ಳಿರಿಸಿಕೊಂಡರು, “ಸಹೋದರಿ ಝಲಕಾರಿ! ಈ ವೇಷ ಧರಿಸಿ ನೀನು ಏನು ಸಾಧಿಸುತ್ತಿದ್ದೀಯ? ನಿನಗೆ ಎಷ್ಟು ಕಡೆ ಗಾಯಗಳಾಗಿವೆ! ನಮಗಾಗಿ ಒಂದು ಸುರಂಗ ಮಾರ್ಗವೂ ಉಳಿದಿಲ್ಲ. ಹಾಗಿರುವಾಗ ನೀನು ಏನು ಮಾಡಿದೆ ಮತ್ತು ಎಲ್ಲಿಗೆ ಹೋಗಿ ಬಂದೆ?”

ಝಲಕಾರಿಬಾಯಿ ಶಾಂತವಾಗಿ ಲಕ್ಷ್ಮೀಬಾಯಿಗೆ ಮುಜರೆ ಮಾಡಿ ಹೇಳಿದರು, “ಝಾನ್ಸಿ ಕೋಟೆಯ ಉತ್ತರ ದಿಕ್ಕಿನ ಕಡಿದಾದ ಬಂಡೆಯಿಂದ ಕೆಳಗಿಳಿಯುವುದು ತುಂಬಾ ಕಷ್ಟ ಎಂದು ತಿಳಿದು ಅಲ್ಲಿ ಯಾವುದೇ ಸುರಂಗ ಮಾರ್ಗ ಮಾಡಿರಲಿಲ್ಲ ಮತ್ತು ನೇರವಾಗಿ ಇಳಿಯಲು ದಾರಿಯೇ ಇರಲಿಲ್ಲ.

ಆದರೆ ನಾನು ನಿನ್ನೆ ಒಂದು ಬೆಕ್ಕನ್ನು ಆ ಬಂಡೆಯಿಂದ ಕೆಳಕ್ಕೆ ಬಿಟ್ಟೆ ಮತ್ತು ಅದು ಹೇಗೆ ಕೆಳಗಿಳಿಯಿತು ಎಂಬುದನ್ನು ಗಮನಿಸುತ್ತಾ ಇದ್ದೆ. ಅದೇ ಮಾರ್ಗವಾಗಿ ಇಂದು ರಾತ್ರಿ ನಾನು ಕೋಟೆಯ ತಳದವರೆಗೆ ಹೋಗಲು ಸಾಧ್ಯವಾಯಿತು. ಅಲ್ಲಿ ಬ್ರಿಟಿಷ್ ಸೈನ್ಯದ ಗಸ್ತೂ ಇಲ್ಲ ಏಕೆಂದರೆ ಅಲ್ಲಿ ಭಯಾನಕ ಬಂಡೆಗಳ ಜಾಲ ಹರಡಿಕೊಂಡಿದೆ. ಅಲ್ಲಿಂದ ನೀವು ಖಂಡಿತವಾಗಿಯೂ ದಾರಿ ಕಂಡುಕೊಳ್ಳಬಹುದು.

ನನ್ನ ವಿನಂತಿಯೆಂದರೆ ನೀವು ಕೆಲವೇ ನಿಷ್ಠಾವಂತ ಸೈನಿಕರನ್ನು ಕರೆದುಕೊಂಡು ಈ ರಹಸ್ಯ ದಾರಿಯ ಮೂಲಕ ಕೋಟೆಯಿಂದ ಇಳಿದು ಕಾಲ್ಪಿಯ ಕಡೆಗೆ ಪ್ರಯಾಣ ಬೆಳೆಸಬೇಕು ಏಕೆಂದರೆ ‘ನಮ್ಮ ಕೋಟೆಯನ್ನು ನಾವು ಇನ್ನು ಮೂರು ದಿನಗಳಿಗಿಂತ ಹೆಚ್ಚು ಕಾಲ ಉಳಿಸಿಕೊಳ್ಳಲು ಸಾಧ್ಯವಿಲ್ಲ’ ಎಂದು ನನಗನ್ನಿಸುತ್ತಿದೆ. ನೀವು ಬದುಕಿ ಉಳಿದರೆ ಮಾತ್ರ ಈ ಹೋರಾಟ ಮುಂದುವರಿಯಲು ಸಾಧ್ಯ, ಇಲ್ಲದಿದ್ದರೆ ತಾತ್ಯಾ ಟೋಪೆಯವರನ್ನೂ ಹೀಗೆಯೇ ಒಬ್ಬಂಟಿಯಾಗಿಸಿ ಕೊಲ್ಲಲಾಗುವುದು. ನೋಡಿ! ತಾತ್ಯಾ ಟೋಪೆಯವರಿಂದ ಬರುವ ಸೈನಿಕ ಸಹಾಯವನ್ನು ಬ್ರಿಟಿಷರು ‘ಕಾನ್ಪುರ’ (Kawnpoor) ಗಡಿಯಲ್ಲೇ ತಡೆದಿದ್ದಾರೆ. ಆದರೆ ನೀವು ಹೊರಗಿನಿಂದ ದಾಳಿ ಮಾಡಿದರೆ ತಾತ್ಯಾ ಟೋಪೆ ಕಾನ್ಪುರ ನಗರದ ಒಳಗಿನಿಂದ ಹೋರಾಡಬಹುದು. ನೀವು ಹೊರಡುವುದು ಒಳ್ಳೆಯದು.”

ರಾಣಿ ಲಕ್ಷ್ಮೀಬಾಯಿ ದೃಢವಾಗಿ ಹೇಳಿದರು, “ನಾನು ಓಡಿ ಹೋಗಲು ಸಾಧ್ಯವಿಲ್ಲ!” ಎದುರಿನಿಂದ ಅವಸರದಿಂದ ಬಂದ ದಿವನ್ ರಘುನಾಥಸಿಂಗ್ ಅಷ್ಟೇ ದೃಢವಾಗಿ ಹೇಳಿದರು, “ನಾನು ನಿಮ್ಮ ತಂದೆಯ ಸಮಾನ. ಇದು ‘ಪಲಾಯನ’ ಅಲ್ಲ, ಬದಲಿಗೆ ಇದೊಂದು ನಿಜವಾದ ‘ರಣನೀತಿ’. ಗೆಲ್ಲಲು ಇದೊಂದೇ ದಾರಿ ಉಳಿದಿದೆ.”

ರಾಣಿ ಲಕ್ಷ್ಮೀಬಾಯಿ ಕೇಳಿದರು, “ಯಕೆ?” ದಿವನ್ ರಘುನಾಥಸಿಂಗ್ ಮತ್ತು ನಾಯಕ್ ಪುರನ್‌ಸಿಂಗ್ ಕೋರಿ ಒಟ್ಟಾಗಿ ಉತ್ತರಿಸಿದರು, “ನಮ್ಮ ಒಬ್ಬ ಸೇನಾಪತಿ ದುಲ್ಹೇರಾವ್ ತನ್ನ ತುಕಡಿಯೊಂದಿಗೆ ಬ್ರಿಟಿಷರನ್ನು ಸೇರಿಕೊಂಡಿದ್ದಾನೆ ಮತ್ತು ಅವನಿಗೆ ಕೋಟೆಯ ಇಂಚಿಂಚೂ ಮಾಹಿತಿ ಇದೆ. ಈ ದೇಶದ್ರೋಹಿ ಎಲ್ಲಾ ಮಾಹಿತಿಯನ್ನು ಬ್ರಿಟಿಷರಿಗೆ ನೀಡಿಯೇ ನೀಡುತ್ತಾನೆ. ಅವನಿಗೆ ಹ್ಯೂಜ್ ರೋಸ್ ದೊಡ್ಡ ಜಾಗೀರನ್ನು ನೀಡುವುದಾಗಿ ಹೇಳಿದ್ದಾನೆ. ನೀವು ಈಗಲೇ ಹೊರಡುವುದು ಸೂಕ್ತ. ಯೋಚಿಸಲು ಸಮಯವಿಲ್ಲ.”

ರಾಣಿ ಲಕ್ಷ್ಮೀಬಾಯಿ ರಾತ್ರಿಯೇ ಹೊರಡಲು ನಿರ್ಧರಿಸಿದರು. ಲಾಲಾಭಾವು ಬಕ್ಷಿ, ಮೋತಿಬಾಯಿ, ಖುದಾಬಕ್ಷ್ ಮತ್ತು ಮುಂದರಬೇಗಂ ರಾಣಿಯ ಜೊತೆ ಹೊರಟರು. ರಾಣಿ ಆ ಕಠಿಣ ದಾರಿಯ ಮೂಲಕ ಕೋಟೆ ಇಳಿಯತೊಡಗಿದರು.

ಅದೇ ಕ್ಷಣದಲ್ಲಿ ಝಲಕರಿಬಾಯಿ ರಾಣಿ ಲಕ್ಷ್ಮೀಬಾಯಿಯ ವೇಷ ಧರಿಸಿ ಇನ್ನೂರು ಸೈನಿಕರೊಂದಿಗೆ ಹೋರಾಡುತ್ತಾ ಕೋಟೆ ಇಳಿಯತೊಡಗಿದರು. ಬ್ರಿಟಿಷ್ ಸೈನ್ಯದ ಗಮನ ಕೇವಲ ತನ್ನ ಮೇಲೆ ಇರಬೇಕು ಮತ್ತು ರಾಣಿ ಲಕ್ಷ್ಮೀಬಾಯಿ ಯಾವುದೇ ಅಡೆತಡೆಯಿಲ್ಲದೆ ಕಾಲ್ಪಿಗೆ ತಲುಪಬೇಕು ಎಂಬುದೇ ಅವಳ ಗುರಿಯಾಗಿತ್ತು.

ಕೋಟೆಯ ಅರ್ಧ ಭಾಗದವರೆಗೆ ಹೋರಾಡುತ್ತಾ ಬಂದ ಝಲಕಾರಿಬಾಯಿಯನ್ನು ನೋಡಿ ಹ್ಯೂಜ್ ರೋಸ್ ತುಂಬಾ ಸಂತೋಷಪಟ್ಟನು. ಅವನು ಸೈನಿಕರಿಗೆ ದಾಳಿಯನ್ನು ಕಡಿಮೆ ಮಾಡಲು ಹೇಳಿದನು. ಅವನಿಗೆ ರಾಣಿ ಲಕ್ಷ್ಮೀಬಾಯಿಯನ್ನು ಜೀವಂತವಾಗಿ ಹಿಡಿಯಬೇಕಿತ್ತು. ಅದು 1858ರ ಏಪ್ರಿಲ್ 3ರ ರಣಚ೦ಡಿಯ ರಾತ್ರಿಯಾಗಿತ್ತು. ಝಲಕಾರಿಬಾಯಿಯ ಕಣ್ಣಮುಂದೆಯೇ ಅವಳ ಪತಿ ಪುರನ್‌ಸಿಂಗ್ ಕೋರಿ ಬ್ರಿಟಿಷರ ಗುಂಡಿಗೆ ಬಲಿಯಾಗಿ ಹುತಾತ್ಮರಾದರು. ಅವರಿಗೆ ನಮಸ್ಕರಿಸಿ ಮತ್ತು ಅವರ ರಕ್ತದಿಂದ ತನ್ನ ಹಣೆಬೊಟ್ಟು ಇಟ್ಟುಕೊಂಡು ಝಲಕಾರಿಬಾಯಿ ಬ್ರಿಟಿಷ್ ಶಿಬಿರದ ಹತ್ತಿರ ತಲುಪಿದಳು. ಅವಳು ಪೂರ್ತಿ ಇಪ್ಪತ್ನಾಲ್ಕು ಗಂಟೆಗಳ ಕಾಲ ಶಿಬಿರದ ಸುತ್ತ ಹೋರಾಡುತ್ತಲೇ ಇದ್ದಳು. ಕೊನೆಯಲ್ಲಿ ಅವಳು ಮತ್ತು ಅವಳ ಇಬ್ಬರು ಸಂಗಾತಿಗಳಾದ ರಾಜಕುನ್ವರ್ ಮತ್ತು ಕಮಲಕುಮಾರಿ ಮಾತ್ರ ಉಳಿದರು.

ಏಪ್ರಿಲ್ 4ರ ರಾತ್ರಿ ಆರಂಭವಾಯಿತು. ಬ್ರಿಟಿಷರ ಗುಂಡುಗಳಿಂದ ಎಡಗೈ ಪೂರ್ತಿ ಗಾಯಗೊಂಡಿದ್ದರೂ ಝಲಕಾರಿಬಾಯಿ ಕುದುರೆಯ ಮೇಲೆ ಹ್ಯೂಜ್ ರೋಸ್‌ನ ಶಿಬಿರಕ್ಕೆ ನುಗ್ಗಿದಳು. ರಾಣಿ ಲಕ್ಷ್ಮೀಬಾಯಿ ಗ್ವಾಲಿಯರ್ ತಲುಪಿದ್ದಾರೆ ಎಂಬ ಸಂದೇಶವನ್ನು ಕಮಲಕುಮಾರಿ ಅವಳಿಗೆ ನೀಡಿದ್ದಳು.

ತೂಗಾಡುತ್ತಿದ್ದ ಎಡಗೈಯೊಂದಿಗೇ ಝಲಕಾರಿಬಾಯಿ ರಾಣಿ ಲಕ್ಷ್ಮೀಬಾಯಿಯ ಆವೇಶದಲ್ಲಿ ಮೇಜರ್ ಜನರಲ್ ಹ್ಯೂಜ್‌ನ ಟೆಂಟ್ ಮೇಲೆ ದಾಳಿ ಮಾಡಿದಳು.

ಅವಳು ಆ ಇಬ್ಬರನ್ನು ಗುಪ್ತವಾಗಿ ಹಿಂದಕ್ಕೆ ಕಳುಹಿಸಿ ಒಬ್ಬಳೇ ಮುಂದೆ ಹೋದಳು.

ಏಪ್ರಿಲ್ 4ರ ಮಧ್ಯರಾತ್ರಿ 12 ಗಂಟೆಗೆ ಝಲಕಾರಿಬಾಯಿ ತನ್ನ ಕುದುರೆಯನ್ನು ಹ್ಯೂಜ್‌ನ ಮುಂದೆ ತಂದು ಅವನ ಹೆಗಲ ಮೇಲೆ ದಾಳಿ ಮಾಡಿದಳು. ಆದರೆ ಕ್ಷಣಾರ್ಧದಲ್ಲಿ ಬ್ರಿಟಿಷ್ ಸೈನಿಕರು ಅವಳ ಮೇಲೆ ಮುಗಿಬಿದ್ದರು. ಝಲಕಾರಿಬಾಯಿ ತನ್ನ ಕೊನೆಯ ಮಾತುಗಳನ್ನು ಹೇಳಿದಳು, “ನಾನು ಕೇವಲ ಝಲಕಾರಿ. ನಿಜವಾದ ಸೂರ್ಯ ಲಕ್ಷ್ಮೀಬಾಯಿ ಕೋಟೆಯಲ್ಲಿ ಸಿದ್ಧತೆ ಮಾಡುತ್ತಿದ್ದಾರೆ.”

ಝಲಕಾರಿಬಾಯಿಯ ಮುಚ್ಚುತ್ತಿದ್ದ ಕಣ್ಣುಗಳಿಗೆ ಕೇವಲ ಲಕ್ಷ್ಮೀಬಾಯಿಯ ಮುಖವೇ ಕಾಣಿಸುತ್ತಿತ್ತು. ಅವಳು ಸಾಯುತ್ತಾ ಹ್ಯೂಜ್ ರೋಸ್‌ನ ಕತ್ತಿಯನ್ನು ಮುರಿದೇ ಕೊನೆಯುಸಿರೆಳೆದಳು.

ಅವಳ ಇ೦ದಿನ ಸಮಾಧಿಯ ಮೇಲಿನ ಮು೦ದಿನ ಸಾಲುಗಳು ಎಷ್ಟು ಅರ್ಥಪೂರ್ಣವಾಗಿವೆ.

"ಆಕರ್ ರಣ್ ಮೆ ಲಲಕಾರಿ ಥಿ
ವಹ ಝಾನ್ಸಿ ಕೀ ಝಲಕಾರಿ ಥಿ
ಗೊರೊ ಕೊ ಲಡನ ಸಿಖ್ಹಾ ಗಯಿ
ರಾಣಿ ಬನ್ ಜೊಹರ ದಿಖ್ಹಾ ಗಯಿ
ಹೈ ಇತಿಹಾಸ ಮೆ ಝಲಕ ರಹಿ
ವಹ ಭಾರತ ಕಿ ಸನ್ನಾರಿ ಥಿ
'ಮೈಥಿಲಿ ಶರಣ್ ಗುಪ್ತ'"

(ಕಥೆ ಮುಂದುವರೆಯುವುದು)

मराठी >> हिंदी >> English >> ગુજરાતી>> తెలుగు>> বাংলা>> தமிழ்>> മലയാളം>>