ಮೊಟ್ಟಮೊದಲ ಬಾರಿಗೆ ರಾಣಿ ಲಕ್ಷ್ಮೀಬಾಯಿಯವರು ಸ್ವಾತಂತ್ರ್ಯ ಹೋರಾಟಗಾರರ ನೇತೃತ್ವವನ್ನು ನೇರ ಯುದ್ಧದಲ್ಲಿ ವಹಿಸಿದ್ದರು. ಶತ್ರುತ್ವವನ್ನು ಬಹಿರಂಗವಾಗಿ ಸ್ವೀಕರಿಸುವುದು ಅಗತ್ಯವೆಂದು ಅರಿತೇ ಅವರು ಎರ್ ಸ್ಕಿನ್ (Erskine)ನ ಸೈನ್ಯದ ಮೇಲೆ ದಾಳಿ ಮಾಡಿದರು. ಮೇಜರ್ ಎರ್ ಸ್ಕಿನ್ ತನ್ನ ಐವರು ಬ್ರಿಟಿಷ್ ಸೈನಿಕರು ಮತ್ತು ನೂರು ಭಾರತೀಯ ಮೂಲದ ಬ್ರಿಟಿಷ್ ಸೈನಿಕರೊಂದಿಗೆ ಅಕ್ಷರಶಃ ಜೀವ ಉಳಿಸಿಕೊಳ್ಳಲು ಓಡತೊಡಗಿದನು. ಅವನು ಸ್ವಲ್ಪವೂ ತಡ ಮಾಡದೆ ಮೇಜರ್ ಜನರಲ್ ಹ್ಯೂಜ್ ರೋಸ್ ನನ್ನು ಭೇಟಿಯಾಗಲು ಹೊರಟನು. ಆದರೆ ಈ ಪ್ರಯಾಣಕ್ಕೆ ಅವನಿಗೆ ಐದು ದಿನಗಳ ಬದಲಾಗಿ ಹದಿನೈದು ದಿನಗಳು ಬೇಕಾದವು.
ಐದು ದಿನಗಳ ಪ್ರಯಾಣವು ಹದಿನೈದು ದಿನಗಳವರೆಗೆ ಲಂಬಿತವಾಯಿತು, ಇದಕ್ಕೆ ಕಾರಣ ರಾಣಿ ಲಕ್ಷ್ಮೀಬಾಯಿಯವರ ಸೈನಿಕರು. ಹಳ್ಳಿಗಳಲ್ಲಿ ಮತ್ತು ಕಾಡಿನ ದರಿ-ಖೋರಿಗಳಲ್ಲಿ ಅಡಗಿದ್ದ ಸೈನಿಕರ ತಂಡಗಳು ಬ್ರಿಟಿಷರಿಗೆ ವಿವಿಧ ರೀತಿಯಲ್ಲಿ ತೊಂದರೆ ನೀಡತೊಡಗಿದವು.
ಬ್ರಿಟಿಷ್ ಸೈನ್ಯಕ್ಕೆ ಆಹಾರ ಧಾನ್ಯಗಳು ಸಿಗದಂತೆ ಪ್ರಯತ್ನಿಸಲಾಯಿತು. ನಾಲ್ಕೈದು ಕಡೆಗಳಲ್ಲಂತೂ ಅವರ ಅಡುಗೆಯ ಒಲೆಗಳ ಮೇಲೆಯೇ ನೀರು ಸುರಿಯಲಾಯಿತು. ಹಸಿದ ಮತ್ತು ಬಾಯಾರಿದ ಸ್ಥಿತಿಯಲ್ಲಿ ಮೇಜರ್
ಎರ್ ಸ್ಕಿನ್ ಮತ್ತು ಅವನ ಸಹಚರರು ಬೇರೆಡೆಗೆ ಓಡಿಹೋಗಬೇಕಾಯಿತು.
ರಾಣಿ ಲಕ್ಷ್ಮೀಬಾಯಿಯವರ ದೃಷ್ಟಿಯಿಂದ ಈ ಹತ್ತು-ಹದಿನೈದು ದಿನಗಳು ತುಂಬಾ ಮಹತ್ವದ್ದಾಗಿದ್ದವು. ಏಕೆಂದರೆ ಯಮುನಾ ನದಿಯ ದಂಡೆಯ ಮೇಲಿರುವ ಕಾಲ್ಪಿ ಎಂಬ ಪ್ರಮುಖ ನಗರದಲ್ಲಿ ನಾನಾಸಾಹೇಬ್ ಪೇಶ್ವೆಯವರ ಸೋದರನ ಮಗ ರಾವ್ ಸಾಹೇಬ್ ಅವರ ಕೇಂದ್ರ ಕಚೇರಿಯಿತ್ತು. ಪೇಶ್ವೆಯವರ ಸೇನಾಪತಿ ತಾತ್ಯಾ ಟೋಪೆ, ಕಾನಪುರದ ರಾಜ ಮತ್ತು ಸ್ವತಃ ರಾಣಿ ಲಕ್ಷ್ಮೀಬಾಯಿಯವರ ನೇತೃತ್ವದಲ್ಲಿ ಹತ್ತು ಸಾವಿರ ಸೈನಿಕರ ಸೈನ್ಯವನ್ನು ಸಿದ್ಧಪಡಿಸಲಾಗಿತ್ತು ಹಾಗು ಅವರಲ್ಲಿನ ತರಬೇತಿ ಪಡೆದ ಸೈನಿಕರ ಸಹಾಯ ಝಾನ್ಸಿಯ ಯುದ್ಧಕ್ಕೆ ಅಗತ್ಯವಾಗಿತ್ತು.
ಮೇಜರ್ ಎರ್ ಸ್ಕಿನ್ ನ ಶಿಬಿರದ ಮೇಲೆ ದಾಳಿ ಮಾಡಿ ಅವನನ್ನು ಸೋಲಿಸಿದ್ದನ್ನು ನೋಡಿ, ಝಾನ್ಸಿ ಮತ್ತು ಸುತ್ತಮುತ್ತಲಿನ ಪ್ರದೇಶದ ರೈತರು ಹಾಗೂ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಝಾನ್ಸಿ ನಗರದಲ್ಲಿ ಜಮಾಯಿಸಲು ಪ್ರಾರಂಭಿಸಿದರು. ಅವರಲ್ಲಿನ ಗಟ್ಟಿಮುಟ್ಟಾದ ಜನರಿಗೆ ಸಾಧ್ಯವಾದಷ್ಟು ತರಬೇತಿ ನೀಡಿ, ಅವರ ಕೈಗೆ ಕತ್ತಿ, ಭರ್ಜಿ, ಕಟುಕನ ಚಾಕು, ಬಡಗಿಯ ಗರಗಸದಂತಹ ಆಯುಧಗಳನ್ನು ನೀಡಲಾಯಿತು.
ದೇಶಪ್ರೇಮದಿಂದ ತುಂಬಿದ ಮತ್ತು ಧರ್ಮ ರಕ್ಷಣೆಗಾಗಿ ಸಿದ್ಧರಾದ ಈ ಜನಸಮೂಹ 'ಸೈನಿಕರಾಗಿ' ಯುದ್ಧಕ್ಕೆ ಸಿದ್ಧವಿರಲಿಲ್ಲ; ಆದರೆ ಅವರ ಹೃದಯದಲ್ಲಿನ ಕಿಚ್ಚು ಪ್ರಬಲವಾಗಿತ್ತು. ಅವರು ಕೊಲ್ಲಲೂ ಸಿದ್ಧರಿದ್ದರು ಮತ್ತು ಸಾಯಲೂ ಸಿದ್ಧರಿದ್ದರು.
ಇವರಿಗೆ ತರಬೇತಿ ನೀಡಲು ಮತ್ತು ತಾತ್ಯಾ ಟೋಪೆ ಅವರಿಗೆ ತಮ್ಮ ಸೈನ್ಯವನ್ನು ಲಕ್ಷ್ಮೀಬಾಯಿಯವರಿಗಾಗಿ ಕಳುಹಿಸಲು ಸಾಧ್ಯವಾಗಲಿ ಎಂಬ ಎರಡು ಕಾರಣಗಳಿಗಾಗಿ ಮೇಜರ್ ಎರ್ ಸ್ಕಿನ್ ನ ಪ್ರಯಾಣವನ್ನು ಹದಿನೈದು ದಿನಗಳವರೆಗೆ ಯಶಸ್ವಿಯಾಗಿ ಎಳೆಯಲಾಗಿತ್ತು.
ಹೀಗೆ ಗೆರಿಲ್ಲಾ ಮಾದರಿಯ ದಾಳಿಗಳನ್ನು ಮಾಡಿ ಮೇಜರ್ ಎರ್ ಸ್ಕಿನ್ ಸೈನ್ಯವನ್ನು ಹೈರಾಣಾಗಿಸುವುದು ರಾಣಿಯ ಕೆಲವು ಸಹಚರರಿಗೆ ಇಷ್ಟವಿರಲಿಲ್ಲ. ಇಂತಹ ಕೆಲಸಗಳಿಂದ ಮೇಜರ್ ಜನರಲ್ ಹ್ಯೂಗ್ ರೋಸ್ ಇನ್ನಷ್ಟು ಕೋಪಗೊಳ್ಳುತ್ತಾನೆ ಮತ್ತು ದೊಡ್ಡ ಸೈನ್ಯದೊಂದಿಗೆ ಝಾನ್ಸಿಯ ಮೇಲೆ ಆಕ್ರಮಣ ಮಾಡುತ್ತಾನೆ ಎಂಬುದು ಅವರ ವಾದವಾಗಿತ್ತು.
ಈ ವಿಚಾರದ ಎಲ್ಲಾ ನಿಷ್ಠಾವಂತ ಸಹಚರರಿಗೆ ರಾಣಿ ಲಕ್ಷ್ಮೀಬಾಯಿಯವರು ಮನವರಿಕೆ ಮಾಡಿಕೊಟ್ಟರು—ನಾವು ಹೇಗೆ ವರ್ತಿಸಿದರೂ ಈ ಸ್ವಾರ್ಥಿ ಮತ್ತು ಕಪಟಿ ಬ್ರಿಟಿಷ್ ಕಂಪನಿ ಸರ್ಕಾರವು ಇಂದು ಅಥವಾ ನಾಳೆ ನಮ್ಮ ಮೇಲೆ ದೊಡ್ಡ ದಾಳಿ ಮಾಡಿಯೇ ತೀರುತ್ತದೆ.
ಸಹಚರರಿಗೆ ಮನವರಿಕೆ ಮಾಡಿಕೊಟ್ಟ ನಂತರ ರಾಣಿ ಲಕ್ಷ್ಮೀಬಾಯಿಯವರು ಸುಮಾರು 150 ಪ್ರಮುಖ ಸಹಚರರ ಸಭೆಯನ್ನು ಕರೆದರು. ಅಲ್ಲಿ ರಾಣಿಯವರು ಮಾಡಿದ ಭಾಷಣವು ಮುಂದಿನ ಕಾಲದ ಪ್ರತಿಯೊಬ್ಬ ಸ್ವಾತಂತ್ರ್ಯ ಹೋರಾಟಗಾರನಿಗೆ ಸದಾ ಪ್ರೇರಣಾದಾಯಕವಾಯಿತು.
ಝಾನ್ಸಿಯ ರಾಣಿ ಹೇಳಿದರು, "ಇಡೀ ಭಾರತವರ್ಷವನ್ನೇ ನುಂಗುವ ಸಂಚು ಇದಾಗಿದೆ. ಇದನ್ನು ವಿರೋಧಿಸುವುದು ಸುಲಭದ ಮಾತಲ್ಲ ಎಂದು ನನಗೂ ಗೊತ್ತು. ಆದರೆ ಬ್ರಿಟಿಷರ ಬಳಿ ಇರುವ ಅಪಾರ ಮದ್ದುಗುಂಡುಗಳು, ಪ್ರಚ೦ಡ ಶಕ್ತಿಶಾಲಿ ಹಾಗು ಅತ್ಯ೦ತ ದೂರದವರೆಗೆ ಗುಂಡು ಹಾರಿಸುವ ನೂರಾರು ತೋಪುಗಳು ಮತ್ತು ಲಕ್ಷಾಂತರ ಸೈನಿಕರಿಗೆ ಹೆದರಿ ನಾವು ಸುಮ್ಮನೆ ಕುಳಿತರೆ, ಅವರು ನಮ್ಮನ್ನು ಪ್ರೀತಿ ಗೌರವದಿಂದ ನಡೆಸಿಕೊಳ್ಳುತ್ತಾರೆಯೇ?
ಬ್ರಿಟಿಷ್ ಸೈನ್ಯವು ಧನಸಿಂಗ್ ಗುರ್ಜರ್‌ನನ್ನು ಕೊಂದ ರೀತಿ, ಅವನ ಸೈನಿಕರ ಹತ್ಯೆ ಮಾಡಿ ಮತ್ತು ಕೇವಲ ಸಾಮಾನ್ಯ ಭಾರತೀಯರಲ್ಲಿ ಭಯ ಹುಟ್ಟಿಸಲು ನೂರಾರು ಹಳ್ಳಿಗಳ ಚೌಕಗಳಲ್ಲಿ ಅನೇಕರನ್ನು ನೇಣಿಗೇರಿಸಿದ್ದನ್ನು ನೋಡಿ, ಸುಳ್ಳು ಕನಸು ಕಾಣುವುದರಲ್ಲಿ ಅರ್ಥವಿಲ್ಲ.
ಅವರು ನಮ್ಮ ಝಾನ್ಸಿ ರಾಜ್ಯವನ್ನು ಸ್ವತಂತ್ರವಾಗಿರಲು ಬಿಡುವುದೇ ಇಲ್ಲ, ಬದಲಾಗಿ ನಮ್ಮ ಅಸ್ತಿತ್ವವನ್ನೇ ಅಳಿಸಿ ಹಾಕುತ್ತಾರೆ. ಝಾನ್ಸಿ ಸಂಸ್ಥಾನವೂ ಉಳಿಯುವುದಿಲ್ಲ, ನಾನು ಹಾಗು ನೀವು ಝಾನ್ಸಿಯ ನಾಯಕರೂ ಉಳಿಯುವುದಿಲ್ಲ ಮತ್ತು ಇಲ್ಲಿನ ಪ್ರಮುಖ ನಾಗರಿಕರೂ ಉಳಿಯುವುದಿಲ್ಲ.
ನನಗೆ ಸಿಕ್ಕಿರುವ ಮಾಹಿತಿಯ ಪ್ರಕಾರ ಲಾರ್ಡ್ ಡಾಲ್ಹೌಸಿಯು ಝಾನ್ಸಿಯಲ್ಲಿರುವ ಪ್ರತಿಯೊಬ್ಬರನ್ನೂ ಆರಿಸಿ ಆರಿಸಿ ಕೊಲ್ಲಲು ಮತ್ತು ಇಲ್ಲಿ ಒಂದು ವ್ಯಾಪಾರಿ, ಜಮೀನ್ದಾರ, ಪಾಠಶಾಲೆ ಅಥವಾ ದೇವಸ್ಥಾನವನ್ನೂ ಉಳಿಸಬಾರದು ಎಂದು ಆದೇಶ ನೀಡಿದ್ದಾನೆ.
ನನಗೆ ಹೇಳಿ, ಇಂತಹ ಬ್ರಿಟಿಷರಿಗೆ ಹೆದರಿ ಇಲಿಯಂತೆ ಸಾಯುವುದು ಮೇಲೋ ಅಥವಾ ಅವರನ್ನು ವಿರೋಧಿಸಿ ಹೋರಾಡುತ್ತಾ ಮುಂದೆ ಸಾಗುವುದು ಶ್ರೇಯಸ್ಕರವೋ?
ಹೋರಾಡಿದರೆ ಬದುಕುವ ಸ್ವಲ್ಪವಾದರೂ ಆಸೆಯಿದೆ, ಆದರೆ ಹೋರಾಡದಿದ್ದರೆ ಸರ್ವನಾಶ ಖಂಡಿತ.
ಹೋರಾಡುತ್ತಾ ನಾವು ಸೋತರೂ, ಸೆರೆಸಿಕ್ಕರೂ ಅಥವಾ ಮಡಿದರೂ, ಸಾಯುವ ಮುನ್ನ ಬ್ರಿಟಿಷ್ ಕಂಪನಿ ಸರ್ಕಾರಕ್ಕೆ ಅಂತಹ ಪಾಠ ಕಲಿಸೋಣವೆಂದರೆ ಅವರಿಗೆ ಭಾರತೀಯರ ಶೌರ್ಯ ಮತ್ತು ಒಗ್ಗಟ್ಟಿನ ಭಯ ಉಂಟಾಗಬೇಕು.
ಯಾವತ್ತದರೂ ಸಾವು ಎಲ್ಲರಿಗೂ ಖಚಿತ. ನಾನೂ ಅಮರಳಲ್ಲ, ನೀವೂ ಅಲ್ಲ. ಹಾಗಿದ್ದ ಮೇಲೆ ದೇಶಕ್ಕಾಗಿ ಮತ್ತು ಸ್ವಧರ್ಮಕ್ಕಾಗಿ ಸಾಯೋಣ. ಅದರಿಂದಲೇ ಮುಂದೆ ಲಕ್ಷಾಂತರ ಯೋಧರು ಭಾರತದಾದ್ಯಂತ ಸಿದ್ಧರಾಗುತ್ತಾರೆ.
ಖಂಡಿತವಾಗಿಯೂ ಸಿದ್ಧರಾಗುತ್ತಾರೆ! ಏಕೆಂದರೆ ರಾಜಕುಂವರ್ ಯಾದವ್ ಮತ್ತು ಅವಳ ಸಹೋದರ ಬಿಹಾರಿಲಾಲ್ ಯಾದವ್ ಎಂಬ ಇಬ್ಬರನ್ನು ನಾನು ಸ್ವತಃ ಸಿದ್ಧಪಡಿಸಿದ್ದೇನೆ. ನಮ್ಮ ಪ್ರತಿಯೊಂದು ಯುದ್ಧದ ಹಾಗು ದಾಳಿಯ ಅತ್ಯ೦ತ ವಿವರವಾದ ಮಾಹಿತಿ ಇಟ್ಟುಕೊಳ್ಳಲು ಮತ್ತು ಒಂದು ವೇಳೆ ನಾವು ಸೋತರೆ, ಸೆರೆಸಿಕ್ಕಿದರೆ ಅಥವಾ ಮಡಿದರೆ, ಇವರ ನೇತೃತ್ವದ ತಂಡವು ಭಾರತದಾದ್ಯಂತ ಸಂಚರಿಸಿ ನಮ್ಮ ಶೌರ್ಯದ ಗಾಥೆಯನ್ನು, ನಮ್ಮ ಹೋರಾಟದ ಕಥೆಯನ್ನು ಮತ್ತು ನಮ್ಮ ನೋವನ್ನು ಹಳ್ಳಿ ಹಳ್ಳಿಗೆ ಹೋಗಿ ತಿಳಿಸುತ್ತಾರೆ. ಜೊತೆಗೆ ಬ್ರಿಟಿಷರು ಎಷ್ಟು ಅತ್ಯಾಚಾರಿ ಮತ್ತು ಕ್ರೂರರು ಎಂಬುದನ್ನೂ ಜನರಿಗೆ ಹೇಳುತ್ತಾರೆ.
ಬ್ರಿಟಿಷರು 'ಮುಂಬಾದೇವಿ' ಎಂಬ ಏಳು ದ್ವೀಪಗಳ ನಗರವನ್ನು ಚೆನ್ನಾಗಿ ಅಭಿವೃದ್ಧಿಪಡಿಸಿದ್ದಾರೆ. ಅಲ್ಲಿನ ಅನೇಕ ಭಾರತೀಯ ವ್ಯಾಪಾರಿಗಳು ಶ್ರೀಮಂತರಾಗಿದ್ದಾರೆ ಮತ್ತು ಅವರು ಬ್ರಿಟಿಷರನ್ನೇ ಬೆಂಬಲಿಸಲಿದ್ದಾರೆ ಎಂಬುದು ನನಗೆ ಖಚಿತವಾಗಿದೆ. ಆದ್ದರಿಂದ ಮುಂಬೈಯ ಅತ್ಯಂತ ಗಣ್ಯ ಶ್ರೀಮಂತ 'ಶ್ರೀ ಜಗನ್ನಾಥ ಶಂಕರ ಶೇಠ್' ಅವರೊಂದಿಗೆ ನಾನು ನಿರಂತರ ಸಂಪರ್ಕದಲ್ಲಿದ್ದೇನೆ. ಅವರು ಗುಪ್ತವಾಗಿ ನಮಗೆ ಸಹಾಯ ಮಾಡುತ್ತಿದ್ದಾರೆ. ಹಾಗೆಯೇ ಮುಂಬೈಯಲ್ಲಿರುವ ಹವಾಲ್ದಾರ್ ಸೈಯದ್ ಹುಸೇನ್, ನಾಯಿಕ್ ಮಂಗಲ್ ಗುಡರಿಯಾ ಮತ್ತು ವಟೇಶ್ವರ ಪಾಠಕ್ ಎಂಬ ಮೂವರು ಪ್ರಮುಖ ವ್ಯಕ್ತಿಗಳು ಕೂಡ ಗುಪ್ತವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಅದರ ಜೊತೆಗೆ ಕೊಲ್ಲಾಪುರದ ಚೀಮಾ ಸಾಹೇಬ್, ಸತಾರಾದ ರಂಗೋ ಬಾಪೂಜಿ ಗುಪ್ತೆ, ನರಗುಂಡದ ಬಾಳಾಸಾಹೇಬ್ ಭಾವೆ, ಅಹ್ಮದ್‌ನಗರ ಜಿಲ್ಲೆಯ ಭಾಗೋಜಿ ನಾಯಕ್ ಮತ್ತು ಕೊಲ್ಲಾಪುರ ದಂಡಿನ ಹವಾಲ್ದಾರ್ ರಾಮ್‌ಜೀ ಶಿರಸಾಟ್ ಅಂತಹ ನಮ್ಮ ಆಪ್ತರು ನಮಗೆ ವಿವಿಧ ರೀತಿಯಲ್ಲಿ ಬೆಂಬಲ ನೀಡುತ್ತಿದ್ದಾರೆ. ಸಮಯ ಬಂದಾಗ ಇವರೆಲ್ಲರೂ ತಮ್ಮ ತಮ್ಮ ಜಾಗಗಳಲ್ಲಿ ಬಂಡಾಯವೇಳಿಸಲಿದ್ದಾರೆ. ವಿವಿಧ ಪ್ರಾಂತ್ಯಗಳ ಸಾಮಾನ್ಯ ಭಾರತೀಯರು ಈ ಸಮಯದಲ್ಲಿ ಒಟ್ಟಾಗಿ ನಿಲ್ಲುತ್ತಿದ್ದಾರೆ ಎಂದರೆ ಅದರ ಅರ್ಥ ತಿಳಿದುಕೊಳ್ಳಿ—ನಮ್ಮ ಭಾರತ ಮತ್ತು ಭಾರತೀಯ ಸಂಸ್ಕೃತಿ ಮಹಾನ ಆಗಿದೆ ಮತ್ತು ಬ್ರಿಟಿಷರನ್ನು ನಾವು ಸುಖವಾಗಿ ರಾಜ್ಯವಾಡಿಸಲು ಬಿಡುವುದಿಲ್ಲ.
ನಾನು ಮಡಿದರೂ ಮತ್ತೆ ಭಾರತದಲ್ಲೇ ಜನ್ಮ ತಾಳಿ ಬ್ರಿಟಿಷರ ವಿರುದ್ಧ ಹೋರಾಡುತ್ತೇನೆ ಮತ್ತು ಆಗ ಖಂಡಿತವಾಗಿ ಜಯಶಾಲಿಯಾಗುತ್ತೇನೆ ಎಂಬ ಪೂರ್ಣ ನಂಬಿಕೆ ನನಗಿದೆ."
ರಾಣಿ ಲಕ್ಷ್ಮೀಬಾಯಿಯವರ ಈ ತೇಜಸ್ವಿ ಮಾತುಗಳಿಂದ ಅಲ್ಲಿದ್ದ ಪ್ರತಿಯೊಬ್ಬರೂ ಪ್ರೇರಿತರಾದರು ಮತ್ತು ಹೆಚ್ಚಿನ ಉತ್ಸಾಹದಿಂದ ಸಿದ್ಧರಾದರು.
ಈ ಸಭೆಯಲ್ಲಿ ಮುಂಬೈಯ ಜಗನ್ನಾಥ ಶಂಕರ ಶೇಠ್ ಮತ್ತು ಸತಾರಾದ ರಂಗೋ ಬಾಪೂಜಿ ಗುಪ್ತೆ ಅವರು ಗುಪ್ತ ವೇಷದಲ್ಲಿ ಉಪಸ್ಥಿತರಿದ್ದರು. ಇವರಿಬ್ಬರು ಮಹಾರಾಷ್ಟ್ರದ, ವಿಶೇಷವಾಗಿ ಮುಂಬೈಯ ನಾಗರಿಕರಿಂದ ಸಂಗ್ರಹಿಸಿದ ನಿಧಿಯನ್ನು ರಾಣಿಯ ಪಾದಗಳಿಗೆ ಅರ್ಪಿಸಿ ನಂತರ ಹಿಂತಿರುಗಿದರು.
ಇದಾದ ಎಂಟು ದಿನಗಳ ನಂತರ ಮೇಜರ್ ಎರ್ ಸ್ಕಿನ್ ಹದಿನೈದು ಸಾವಿರ ಸೈನಿಕರೊಂದಿಗೆ ಝಾನ್ಸಿಯ ಮೇಲೆ ನಾಲ್ಕೂ ದಿಕ್ಕುಗಳಿಂದ ದಾಳಿ ಮಾಡಿದನು. ಅವನ ಐದು ನೂರು ಫಿರಂಗಿಗಳು ಝಾನ್ಸಿಯ ಮೇಲೆ ಗುಂಡುಗಳ ಮಳೆ ಸುರಿಸತೊಡಗಿದವು.
ಆಗ ರಾಣಿ ಲಕ್ಷ್ಮೀಬಾಯಿಯವರು ಇಡೀ ರಾಜದರ್ಬಾರಿನಲ್ಲಿ ಘೋಷಿಸಿದರು, 'ಮೇರಿ ಝಾನ್ಸಿ ನಹೀ ದೂಂಗಿ!' (ನನ್ನ ಝಾನ್ಸಿಯನ್ನು ನಾನು ಬಿಟ್ಟುಕೊಡುವುದಿಲ್ಲ!)
(ಕಥೆ ಮುಂದುವರೆಯುವುದು)





