ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಅನಾವರಣ ಆಗದ ಇತಿಹಾಸದ ಸೂಕ್ಷ್ಮ ಸತ್ಯಗಳು - ಭಾಗ - 10

ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಅನಾವರಣ ಆಗದ ಇತಿಹಾಸದ ಸೂಕ್ಷ್ಮ ಸತ್ಯಗಳು - ಭಾಗ - 10

ಬ್ರಿಟಿಷರ ಗುಪ್ತಚರ ಇಲಾಖೆ ಎಚ್ಚರವಾಯಿತು ಮತ್ತು ರಾಣಿ ಲಕ್ಷ್ಮೀಬಾಯಿಯವರ ಝಾನ್ಸಿ ರಾಜ್ಯಕ್ಕೆ ಒಂದೇ ವಾರದಲ್ಲಿ ಭಾರತೀಯ ಮೂಲದ 50 ತರಬೇತಿ ಪಡೆದ ಗುಪ್ತಚರರನ್ನು ಕಳುಹಿಸಲಾಯಿತು. ಅವರ ಜೊತೆಗೆ ಅಪಾರ ಹಣವನ್ನೂ ನೀಡಲಾಗಿತ್ತು.

ಝಾನ್ಸಿ ಸಂಸ್ಥಾನವು 30-40 ವರ್ಷಗಳ ಹಿಂದೆಯೇ ಈಸ್ಟ್ ಇಂಡಿಯಾ ಕಂಪನಿಯ ಹಿಡಿತಕ್ಕೆ ಸಿಲುಕಿತ್ತು. ಝಾನ್ಸಿಯ ರಾಜರು ಪ್ರತಿಯೊಂದು ಕೆಲಸವನ್ನೂ ಬ್ರಿಟಿಷರು ನೇಮಿಸಿದ ವಿಶೇಷ ಅಧಿಕಾರಿಯ ಅನುಮತಿಯ ಮೇರೆಗೇ ಮಾಡಬೇಕಿತ್ತು. ರಾಜ ಗಂಗಾಧರರಾಯರಿಗೆ ಸುಮಾರು 50 ವರ್ಷ ವಯಸ್ಸಾಗಿತ್ತು ಮತ್ತು ಅವರ ಆರೋಗ್ಯವೂ ಅಷ್ಟಾಗಿ ಸರಿಯಿರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಅವರ ವಿವಾಹ ತಾಂಬೆ ಕುಟುಂಬದ ‘ಮಣಿಕರ್ಣಿಕಾ’ ಎಂಬ ಹುಡುಗಿಯೊಂದಿಗೆ ಆಯಿತು. ಆಗ ಆಕೆಗೆ ಕೇವಲ 8-9 ವರ್ಷ ವಯಸ್ಸು. ಆಕೆಗೆ 14 ವರ್ಷ ತುಂಬಿದ ಮೇಲೆ ಝಾನ್ಸಿಗೆ ಕರೆತರಲಾಯಿತು. ಒಂದೆರಡು ವರ್ಷಗಳಲ್ಲಿ ಆಕೆಗೆ ಅಲ್ಲಿಯ ಪರಿಸ್ಥಿತಿಯ ಸಂಪೂರ್ಣ ಅರಿವು ಬಂದಿತು.

ಮದುವೆಯ ನಂತರ ಮಣಿಕರ್ಣಿಕಾಳ ಹೆಸರು ‘ಲಕ್ಷ್ಮೀಬಾಯಿ’ ಎಂದಾಯಿತು. ಚಿಕ್ಕಂದಿನಿಂದಲೇ ಆಕೆ ನಾನಾಸಾಹೇಬ್ ಪೇಶ್ವೆ ಮತ್ತು ತಾತ್ಯಾ ಟೋಪೆ ಅಂತಹ ಗೆಳೆಯರೊಂದಿಗೆ ಯುದ್ಧದ ಆಟಗಳನ್ನು ಆಡುತ್ತಿದ್ದಳು. ಆಕೆಯ ಕೌಶಲ್ಯವನ್ನು ಕಂಡು ತಂದೆಯವರು ಪೇಶ್ವೆಯವರ ಅನುಮತಿಯೊಂದಿಗೆ ನಾನಾಸಾಹೇಬರ ಜೊತೆಗೆ ಯುದ್ಧಕಲೆಯ ಶಿಕ್ಷಣ ಸಿಗುವಂತೆ ವ್ಯವಸ್ಥೆ ಮಾಡಿದ್ದರು. 7 ರಿಂದ 14 ವರ್ಷದವರೆಗೆ ಲಕ್ಷ್ಮೀಬಾಯಿ ಯುದ್ಧ ಮತ್ತು ರಾಜಕೀಯದ ಪಾಠಗಳನ್ನು ಕಲಿತಳು. ತಾತ್ಯಾ ಟೋಪೆ ಮತ್ತು ನಾನಾಸಾಹೇಬರು ಲಕ್ಷ್ಮೀಬಾಯಿಗಿಂತ ದೊಡ್ಡವರಾಗಿದ್ದರೂ, ವಯಸ್ಸಿನಲ್ಲಿ ಚಿಕ್ಕವರೇ ಆಗಿದ್ದರು. ಲಕ್ಷ್ಮೀಬಾಯಿ ಅವರಿಬ್ಬರಿಗೂ ರಾಖಿ ಕಟ್ಟುತ್ತಿದ್ದಳು.

ಝಾನ್ಸಿಯಲ್ಲಿ ಹೊಂದಿಕೊಳ್ಳಲು ಅವರಿಗೆ ಎರಡು ವರ್ಷ ಬೇಕಾಯಿತು. ಆನಂತರ ರಾಣಿ ಲಕ್ಷ್ಮೀಬಾಯಿ ದೇವಸ್ಥಾನದ ದರ್ಶನ, ನಗರದ ಪ್ರಮುಖ ಮಹಿಳೆಯರ ಭೇಟಿ ಮತ್ತು ಜನರ ಕಷ್ಟಗಳನ್ನು ಆಲಿಸುತ್ತಾ ಸಮಾಜದ ವಿವಿಧ ವರ್ಗಗಳ ಜನರೊಂದಿಗೆ ಬೆರೆಯಲು ಪ್ರಾರಂಭಿಸಿದಳು. ಆಕೆ ರಾಣಿಯಾಗಿದ್ದರಿಂದ ಆಕೆಯ ಆದೇಶದಂತೆ ಸರ್ಕಾರಿ ಅಧಿಕಾರಿಗಳಿಂದ ಹಿಡಿದು ವ್ಯಾಪಾರಸ್ಥರವರೆಗೆ ಪ್ರತಿಯೊಬ್ಬರೂ ಆಕೆಯನ್ನು ಭೇಟಿಯಾಗಲೇಬೇಕಿತ್ತು.

ತನ್ನ ಪತಿ ನಾನಾ ಕಾಯಿಲೆಗಳಿಂದ ಬಳಲುತ್ತಿದ್ದರೂ ರಾಜ್ಯಭಾರವನ್ನು ನಡೆಸುತ್ತಿದ್ದಾರೆ ಎಂಬುದು ಹಂತ ಹಂತವಾಗಿ ರಾಣಿಯ ಗಮನಕ್ಕೆ ಬಂದಿತು. ಆದರೆ ಅವರ ಅಧಿಕಾರಗಳು ಬಹಳ ಸೀಮಿತವಾಗಿದ್ದವು. ಅವರ ರಾಜ್ಯ ಕೇವಲ ಹೆಸರಿಗಷ್ಟೇ ಸ್ವತಂತ್ರವಾಗಿತ್ತು. ಬ್ರಿಟಿಷ್ ಕಂಪನಿ ಸರ್ಕಾರವು ಅವರ ಪತಿಯನ್ನು ಎಲ್ಲಾ ಕಡೆಯಿಂದ ಕಟ್ಟಿಹಾಕಿತ್ತು.

ಇದರಿಂದಾಗಿ ರಾಜ್ಯದಲ್ಲಿ ಸುತ್ತಾಡುವಾಗ ಆಕೆ ಜನರ ಮನಸ್ಸನ್ನು ಅರಿಯಲು ಪ್ರಯತ್ನಿಸಿದಳು. ಬ್ರಿಟಿಷರ ಕೈಗೊಂಬೆಯಾಗಿದ್ದ ರಾಜ ಗಂಗಾಧರರಾಯರ ಸೈನ್ಯದ ಅಧಿಕಾರಿಗಳು ಬ್ರಿಟಿಷರ ಪರವಾಗಿಯೇ ನಿಲ್ಲುತ್ತಾರೆ ಮತ್ತು ಅವರ ಅಥವಾ ತನ್ನ ಆಜ್ಞೆಯನ್ನು ಅವರು ಪಾಲಿಸುವುದಿಲ್ಲ

ಎಂಬುದು ಆಕೆಗೆ ಅರ್ಥವಾಯಿತು. ಹಾಗೆಯೇ ಬ್ರಿಟಿಷರ ವ್ಯವಹಾರಗಳಲ್ಲಿ ಭಾಗಿಯಾಗಿದ್ದ ವ್ಯಾಪಾರಿಗಳೂ ಬ್ರಿಟಿಷರಿಗೇ ಸಾಥ್ ನೀಡುತ್ತಾರೆಂದು ಆಕೆಗೆ ತಿಳಿಯಿತು.

ಈ ವಾಸ್ತವದ ಅರಿವಾದ ತಕ್ಷಣ ರಾಣಿ ಲಕ್ಷ್ಮೀಬಾಯಿ ಝಾನ್ಸಿಯ ರೈತರು, ಬಾರಾ ಬಲುತೇದಾರ್ (ಸುತಾರ, ಕುಂಬಾರ, ಕಮ್ಮಾರ ಇತ್ಯಾದಿ ೧೨ ಪ್ರಕಾರದ ವ್ಯವಸಾಯಿಗಳು), ಕೃಷಿ ಕಾರ್ಮಿಕರು ಮತ್ತು ಕೂಲಿ ಕಾರ್ಮಿಕರಂತಹ ಸಾಮಾನ್ಯ ಜನರೊಂದಿಗೆ ಸಾಮಾನ್ಯ ವಿಷಯಗಳ ಬಗ್ಗೆ ಮಾತನಾಡಲು ಶುರು ಮಾಡಿದಳು.

ಈ ಸಂಪರ್ಕಗಳನ್ನು ಹೆಚ್ಚಿಸಿಕೊಳ್ಳಲು ಆಕೆಗೆ ತನ್ನ ಸೇವಕಿಯಾದ ‘ಝಲಕಾರಿಬಾಯಿ’ ಎಂಬವಳ ಸಹಾಯ ದೊಡ್ಡ ಮಟ್ಟದಲ್ಲಿ ಸಿಕ್ಕಿತು. ಅಂದಿನ ಕಾಲದಲ್ಲಿ ಕೋಳಿ ಸಮುದಾಯದವಳೆಂದು ಗುರುತಿಸಲ್ಪಡುತ್ತಿದ್ದ ಆ ಹೆಣ್ಣುಮಗಳನ್ನು ರಾಣಿ ಲಕ್ಷ್ಮೀಬಾಯಿ ಸರಿಯಾಗಿಯೇ ಗುರುತಿಸಿದ್ದರು. ಝಲಕಾರಿಬಾಯಿ ರಾಣಿಗಿಂತ ವಯಸ್ಸಿನಲ್ಲಿ ದೊಡ್ಡವಳಾಗಿದ್ದಳು. ಆದರೆ ಆಕೆಗೆ ಓದು-ಬರಹ ಬರುತ್ತಿತ್ತು ಮತ್ತು ರಾಣಿಯ ಜೊತೆ ಯುದ್ಧದ ಅಭ್ಯಾಸ ಮಾಡುತ್ತಿದ್ದರಿಂದ ಯುದ್ಧಕಲೆಯಲ್ಲೂ ಪ್ರವೀಣಳಾಗಿದ್ದಳು. ಝಾನ್ಸಿ ಸೈನ್ಯದ ಒಬ್ಬ ಬ್ರಿಟಿಷ್ ಸೈನಿಕನಿಗೆ ಲಂಚ ನೀಡಿ ಲಕ್ಷ್ಮೀಬಾಯಿಯು ಝಲಕರಿಬಾಯಿಗೆ ಶಸ್ತ್ರಾಗಾರದಲ್ಲಿ (ತೋಫಖಾನಾ) ಸ್ವಚ್ಛಗೊಳಿಸುವ ಕೆಲಸ ಕೊಡಿಸಿದಳು. ಆ ನೆಪದಲ್ಲಿ ಆ ಬ್ರಿಟಿಷ್ ಸಾರ್ಜೆಂಟ್ ಝಲಕಾರಿಬಾಯಿಗೆ ತೋಫ ಚಲಾಯಿಸುವ ಮತ್ತು ಮದ್ದುಗುಂಡುಗಳ ಬಳಕೆಯ ಬಗ್ಗೆ ಒಂದೂವರೆ ವರ್ಷ ತರಬೇತಿ ನೀಡಿದನು. ಕೆಲವೊಮ್ಮೆ ಸ್ವತಃ ರಾಣಿಯೇ ವೇಷ ಮರೆಸಿಕೊಂಡು ಝಲಕಾರಿಬಾಯಿಯ ತಂಗಿಯಂತೆ ಅಲ್ಲಿಗೆ ಹೋಗಿ ತೋಫು ಮತ್ತು ಬಂದೂಕು ಚಲಾಯಿಸುವುದನ್ನು ಕಲಿತಳು.

ಇವೆಲ್ಲಾ ನಡೆಯುತ್ತಿರುವಾಗಲೇ ಲಕ್ಷ್ಮೀಬಾಯಿ ಗರ್ಭಿಣಿಯಾದಳು ಮತ್ತು ಆಕೆಗೆ ವಿಶ್ರಾಂತಿಯ ಸಲಹೆ ನೀಡಲಾಯಿತು.

ಈ ಸಮಯವನ್ನು ಬಳಸಿಕೊಂಡು ಲಕ್ಷ್ಮೀಬಾಯಿ ಪ್ರಜೆಗಳನ್ನು ಅವರ ಮನೆಯ ಹೆಣ್ಣುಮಕ್ಕಳೊಂದಿಗೆ ಭೇಟಿಯಾಗಲು ಕರೆಯಲಾರಂಭಿಸಿದಳು. ಇದರಿಂದ ಜನಸಾಮಾನ್ಯರ ಮನಸ್ಥಿತಿ ಆಕೆಗೆ ಸರಿಯಾಗಿ ಅರ್ಥವಾಯಿತು.

ಒಂದು ದಿನ ಏಕಾಂತದಲ್ಲಿದ್ದಾಗ ಲಕ್ಷ್ಮೀಬಾಯಿ ಝಲಕಾರಿಬಾಯಿಗೆ ಹೇಳಿದಳು, "ನಮ್ಮ ರಾಜ್ಯದ ಒಬ್ಬ ನಾಗರಿಕನೂ ಸುಖವಾಗಿಲ್ಲ. ಬ್ರಿಟಿಷರ ಹಸ್ತಕ್ಷೇಪದಿಂದ ರೈತರು ಮತ್ತು ಕಾರ್ಮಿಕರು ಹೈರಾಣಾಗಿದ್ದಾರೆ. ನಾವೇನಾದರೂ ಮಾಡಲೇಬೇಕು. ನಾವಿಬ್ಬರೂ ಸೇರಿ ಧೈರ್ಯಶಾಲಿ ಮತ್ತು ಬುದ್ಧಿವಂತ ಮಹಿಳೆಯರ ಸಂಘಟನೆಯನ್ನು ಕಟ್ಟೋಣ. ಮಹಿಳೆಯರು ಇಂತಹ ಕೆಲಸ ಮಾಡುತ್ತಾರೆ ಎಂದು ಬ್ರಿಟಿಷರಿಗೆ ಸಂಶಯವೂ ಬರುವುದಿಲ್ಲ." ಕೂಡಲೇ ಝಲಕಾರಿಬಾಯಿ ಕೆಲಸಕ್ಕೆ ಇಳಿದಳು ಮತ್ತು ‘ದುರ್ಗಾದಳ’ ಸ್ಥಾಪನೆಯಾಯಿತು. ‘ಮೋತಿಬಾಯಿ’ ಎಂಬ ಮಹಿಳೆ ಯುದ್ಧಕಲೆ ಮತ್ತು ಗುಪ್ತಚರ ಶಾಸ್ತ್ರದಲ್ಲಿ ನಿಪುಣಳಾದಳು, ‘ಮುಂದರ್ ಬೇಗಂ’ ಎಂಬಾಕೆ ಕುಸ್ತಿ ಕಲಿತು ರಾಣಿಯ ಅಂಗರಕ್ಷಕಿಯಾದಳು.

ಜೊತೆಗೆ ದಿವಾನ್ ರಘುನಾಥ್ ಸಿಂಗ್, ಲಾಲಾಭಾವು ಬಕ್ಷಿ ಅಂತಹ ಅಧಿಕಾರಿಗಳೂ ರಾಣಿಗೆ ಸಹಕರಿಸತೊಡಗಿದರು. ‘ಖುದಾಬಕ್ಷ್ ಬಶರತ್ ಅಲಿ’ ಎಂಬ ಮತ್ತೊಬ್ಬ ಸೇನಾ ಅಧಿಕಾರಿ ತನ್ನ ಪತ್ನಿಯೊಂದಿಗೆ ಈ ಕಾರ್ಯದಲ್ಲಿ ಭಾಗಿಯಾದನು. ಕಮಲಕುಮಾರಿ ಚೌಹಾಣ್, ರಾಜಕುನ್ವರ್

ಯಾದವ್ ಅಂತಹ ಸಾಮಾನ್ಯ ಮಹಿಳೆಯರು ರಾಣಿಯನ್ನು ಪದೇ ಪದೇ ಭೇಟಿಯಾಗುತ್ತಿದ್ದರು.

ಸರಿಯಾದ ಸಮಯದಲ್ಲಿ ಲಕ್ಷ್ಮೀಬಾಯಿಗೆ ಒಬ್ಬ ಮಗ ಹುಟ್ಟಿದನು. ಆದರೆ ಆ ಮಗು ಬಹಳ ದಿನ ಬದುಕಲಿಲ್ಲ. ಆ ದುಃಖದಿಂದ ಹೊರಬರಲು ಲಕ್ಷ್ಮೀಬಾಯಿಗೆ ಮೋತಿಬಾಯಿ, ಝಲಕಾರಿಬಾಯಿ ಮತ್ತು ಮುಂದರ್ ಬೇಗಂ ತುಂಬಾ ಸಹಾಯ ಮಾಡಿದರು.

ಒಂದು ದಿನ ರಾಣಿ ಮಹಲ್‌ನಲ್ಲಿ ಏಕಾಂಗಿಯಾಗಿ ಅಳುತ್ತಾ ಕುಳಿತಿದ್ದಾಗ, ದೂರದಲ್ಲಿ ಬ್ರಿಟಿಷ್ ಅಧಿಕಾರಿಯೊಬ್ಬ ಝಾನ್ಸಿಯ ಕೆಲವು ಪ್ರಜೆಗಳನ್ನು ಕ್ರೂರವಾಗಿ ಹೊಡೆಯುತ್ತಿರುವುದು ಕಂಡಿತು. ಅದರ ಬಗ್ಗೆ ಮಾಹಿತಿ ಪಡೆಯಲು ಆಕೆ ಮೋತಿಬಾಯಿಯನ್ನು ಕಳುಹಿಸಿದಳು. ಮೋತಿಬಾಯಿ ಗುಟ್ಟಾಗಿ ಮಾಹಿತಿ ನೀಡತೊಡಗಿದಳು ಮತ್ತು ಆ ಮಾಹಿತಿಯನ್ನು ತಲುಪಿಸಲು ಮುಂದರ್ ಬೇಗಂ ಮತ್ತು ರಾಜಕುನ್ವರ್‌ಬಾಯಿಯವರನ್ನು ನೇಮಿಸಲಾಯಿತು.

ಆ ಸಮಯದಲ್ಲಿ ರಾಣಿ ಬಹಳ ಸಾದಾ ಉಡುಪಿನಲ್ಲಿದ್ದಳು. ಮಗನ ಮರಣದ ದುಃಖದಲ್ಲಿದ್ದ ಆಕೆಯ ಮೈಮೇಲೆ ಯಾವುದೇ ಆಭರಣಗಳಿರಲಿಲ್ಲ. ರಾಜಕುನ್ವರ್‌ಬಾಯಿ ಗಡಿಬಿಡಿಯಲ್ಲಿ ಮಹಲ್‌ಗೆ ಬಂದಾಗ, ಅಲ್ಲಿ ಕುಳಿತಿರುವುದು ಝಲಕಾರಿಬಾಯಿ ಎಂದುಕೊಂಡು, "ಸೋದರಿ ಝಲಕಾರಿ, ರಾಣಿ ನಮ್ಮನ್ನು ಗೌರವದಿಂದ ನಡೆಸಿಕೊಳ್ಳುತ್ತಾರೆ ಎಂದಮಾತ್ರಕ್ಕೆ ನೀನು ರಾಣಿಯ ಆಸನದ ಮೇಲೆ ಕೂರುವುದು ಸರಿಯಲ್ಲ" ಎಂದುಬಿಟ್ಟಳು. ಆಕೆಯ ಹಿಂದೆ ಬಂದ ಮುಂದರ್ ಬೇಗಂಗೂ ಹಾಗೆಯೇ ಅನ್ನಿಸಿತು.

ಆಗಲೇ ಅವರೆಲ್ಲರಿಗೂ ಮೊದಲ ಬಾರಿಗೆ ಅರಿವಾಗಿದ್ದು ಏನೆಂದರೆ, ಸಾಮಾನ್ಯ ವೇಷದಲ್ಲಿದ್ದ ಲಕ್ಷ್ಮೀಬಾಯಿ ಮತ್ತು ಝಲಕರಿಬಾಯಿ ಇಬ್ಬರೂ ಅಚ್ಚುತಪ್ಪಿದಂತೆ ಒ0ದೇ ತರಹ ಕಾಣುತ್ತಿದ್ದರು.

ಆ ಬ್ರಿಟಿಷ್ ಅಧಿಕಾರಿ ಸಣ್ಣ ತಪ್ಪಿಗಾಗಿ ಮತ್ತು ತೆರಿಗೆ ವಸೂಲಿಗಾಗಿ ಆ ಜನರನ್ನು ಅಮಾನವೀಯವಾಗಿ ಹೊಡೆಯುತ್ತಿದ್ದನು. ಆ ಹೊಡೆದಾಟದಲ್ಲಿ ತಂದೆಯ ಹೆಗಲ ಮೇಲೆ ಕುಳಿತಿದ್ದ ಪುಟ್ಟ ಮಗುವೂ ಸಾವನ್ನಪ್ಪಿತ್ತು.

ಈ ಸುದ್ದಿ ತಿಳಿಯುತ್ತಿದ್ದಂತೆ ರಾಣಿ ತನ್ನ ಪುತ್ರಶೋಕವನ್ನು ಮರೆತು ಮತ್ತೆ ದುರ್ಗಾದಳದ ಕೆಲಸಕ್ಕೆ ವೇಗ ನೀಡಿದಳು. ಝಲಕಾರಿಬಾಯಿಯ ಪತಿ ‘ಪುರನ್ ಸಿಂಗ್ ಕೋರಿ’ ಝಾನ್ಸಿಯ ಸೈನ್ಯದಲ್ಲಿ ಸಣ್ಣ ಅಧಿಕಾರಿಯಾಗಿದ್ದನು. ಅವನೇ ಮಹಿಳೆಯರಿಗೆ ಯುದ್ಧಕಲೆಯನ್ನು ಕಲಿಸಲು ಆರಂಭಿಸಿದನು. ಅನಾರೋಗ್ಯದಲ್ಲಿದ್ದ ಗಂಗಾಧರರಾಯರಿಗೆ ಹೇಳಿ ಆತನನ್ನು ತೋಫಖಾನೆಯ ‘ನಾಯಕ್’ ಆಗಿ ನೇಮಿಸಲಾಯಿತು.

ಹೀಗೆ ದುರ್ಗಾದಳದ ಮಹಿಳೆಯರ ಸಂಖ್ಯೆ ಬೆಳೆಯುತ್ತಾ ಹೋಯಿತು. ದಿವಾನ್ ರಘುನಾಥ್ ಸಿಂಗ್ ಅವರ ಮಾರ್ಗದರ್ಶನದಲ್ಲಿ ರೈತರು ಮತ್ತು ಕಾರ್ಮಿಕರು ಸಿದ್ಧರಾದರು.

ಕ್ರಿ.ಶ. 1856ರ ವಿಜಯದಶಮಿಯ ವೇಳೆಗೆ ರಾಣಿ ಲಕ್ಷ್ಮೀಬಾಯಿಯ ಬಳಿ ದುರ್ಗಾದಳದ ಎರಡು ಸಾವಿರ ಮಹಿಳಾ ಸೈನಿಕರು ಮತ್ತು ‘ಮಹಾದೇವಶಿವ’ ಗುಂಪಿನ ಸೈನಿಕರು ಸಹ ತಯಾರಾಗಿದ್ದರು.

(ಕಥೆ ಮುಂದುವರೆಯುವುದು)