ಸದ್ಗುರು ಶ್ರೀಅನಿರುದ್ಧರ ಭಾವಲೋಕದಿಂದ - ಪಾರ್ವತಿ ಮಾತೆಯ ನವದುರ್ಗಾ ರೂಪಗಳ ಪರಿಚಯ - ಭಾಗ 5

ಸದ್ಗುರು ಶ್ರೀಅನಿರುದ್ಧರ ಭಾವಲೋಕದಿಂದ - ಪಾರ್ವತಿ ಮಾತೆಯ ನವದುರ್ಗಾ ರೂಪಗಳ ಪರಿಚಯ - ಭಾಗ 5

ಸಂದರ್ಭ - ಸದ್ಗುರು ಶ್ರೀಅನಿರುದ್ಧ ಬಾಪು ಅವರ ದೈನಿಕ ಪ್ರತ್ಯಕ್ಷದಲ್ಲಿಯ 'ತುಳಸಿಪತ್ರ' ಎಂಬ ಸಂಪಾದಕೀಯ ಸರಣಿಯ ಸಂಪಾದಕೀಯ ಸಂಖ್ಯೆ 1388 ಮತ್ತು 1389.

ಸದ್ಗುರು ಶ್ರೀಅನಿರುದ್ಧ ಬಾಪೂ 'ತುಳಸಿಪತ್ರ -1388 ಸಂಪಾದಕೀಯದಲ್ಲಿ ಬರೆಯುತ್ತಾರೆ:


'ಓಂ ಕಲ್ಪನಾರಹಿತಾಯೈ ನಮಃ'

ಈ ಜಪವನ್ನು ಮುಗಿಸಿ, ಬ್ರಹ್ಮವಾದಿನಿ ಲೋಪಾಮುದ್ರೆ ಬ್ರಹ್ಮರ್ಷಿ ಅಗಸ್ತ್ಯರ ಮೂಲಕ ನವಬ್ರಹ್ಮರ್ಷಿ ಶಶಿಭೂಷಣರ ಕೊರಳಿಗೆ ಬ್ರಹ್ಮರ್ಷಿ ರುದ್ರಾಕ್ಷಮಾಲೆಯನ್ನು ಹಾಕಿದರು. ಆ ಕೂಡಲೇ ಬ್ರಹ್ಮರ್ಷಿ ಶಶಿಭೂಷಣರು ಎರಡು ಕೈಗಳನ್ನು ಜೋಡಿಸಿ ಆದಿಮಾತೆಯ ಉಪಸ್ಥಿತಿಯಲ್ಲಿದ್ದ ಎಲ್ಲ ರೂಪಗಳಿಗೂ ಮನಃಪೂರ್ವಕವಾಗಿ ಪ್ರಣಾಮಗಳನ್ನು ಸಲ್ಲಿಸಿದರು. ನಂತರ ಅತ್ಯಂತ ವಿನಮ್ರತೆಯಿಂದ ಲೋಪಾಮುದ್ರೆಯನ್ನು ಪ್ರಶ್ನಿಸಿದರು: “'ಓಂ ಕಲ್ಪನಾರಹಿತಾಯೈ ನಮಃ' ಎಂಬ ಶ್ರೀಲಲಿತಾಸಹಸ್ರನಾಮದಲ್ಲಿಯ ಈ ಮಂತ್ರವು ನನ್ನ ಮನಸ್ಸಿನಲ್ಲಿ ಇನ್ನೂ ಪ್ರತಿಧ್ವನಿಸುತ್ತಿದೆ. ಇದರ ಬಗ್ಗೆ ನೀನು ನನಗೆ ವಿವರಿಸುವೆಯಾ?”

ಬ್ರಹ್ಮವಾದಿನಿ ಲೋಪಾಮುದ್ರೆ ಚಿಕ್ಕ ಮಗುವಿನಂತೆ ಶಶಿಭೂಷಣರನ್ನು ಹತ್ತಿರಕ್ಕೆ ಕರೆದು ಹೇಳಿದರು, “ವತ್ಸ! ಈ ನಾಮದ ಅರ್ಥವನ್ನು ನೀನೇ ಎಲ್ಲರಿಗೂ ಹೇಳಬೇಕು, ಇದು ನನ್ನ ಆಜ್ಞೆ.

ಏಕೆಂದರೆ, ಬೇರೆಯವರಿಗೆ ಕಲಿಸುವಾಗಲೇ ಮನುಷ್ಯ ಹೆಚ್ಚು ಬುದ್ಧಿವಂತನಾಗುತ್ತಾನೆ.

ಏಕೆಂದರೆ ಬೇರೆಯವರಿಗೆ ಸೂಕ್ತ ಜ್ಞಾನವನ್ನು ನೀಡಲು ಆ ನಿಜವಾದ ಶಿಕ್ಷಕನು ತನ್ನ ಎಲ್ಲಾ ಪೂರ್ವಜ್ಞಾನ ಹಾಗೂ ಪೂರ್ವಾನುಭವಗಳನ್ನು ಆಚರಣೆಗೆ ತರಬೇಕಾಗುತ್ತದೆ ಮತ್ತು ಅದರಿಂದಲೇ ಅವನು ನಿಜವಾದ ವಿದ್ವಾಂಸನಾಗುತ್ತಾನೆ.

ಈಗ ನೀನು ಬ್ರಹ್ಮರ್ಷಿಯಾಗಿದ್ದೀಯೆ ಮತ್ತು ಬ್ರಹ್ಮರ್ಷಿ ಅಥವಾ ಬ್ರಹ್ಮವಾದಿನಿಯ ಪ್ರಮುಖ ಕರ್ತವ್ಯವೆಂದರೆ ಜ್ಞಾನ ಅಥವಾ ವಿಜ್ಞಾನದಲ್ಲಿ ಕಲಬೆರಕೆ ಆಗದಂತೆ ನೋಡಿಕೊಳ್ಳುವುದು ಮತ್ತು ಸಾಮಾನ್ಯ ಮಾನವರವರೆಗೂ ಅಗತ್ಯವಾದಷ್ಟು ಜ್ಞಾನವನ್ನು ಸುಲಭವಾಗಿ ತಲುಪಿಸುವುದು.”

ಬ್ರಹ್ಮರ್ಷಿ ಶಶಿಭೂಷಣರು ಕೆಲವು ಕ್ಷಣಗಳ ಕಾಲ ಧ್ಯಾನ ಮಾಡಿ ಸ್ವತಃ ತಮ್ಮನ್ನು ಖಚಿತಪಡಿಸಿಕೊಂಡು, ಎಲ್ಲ ಋಷಿಗಳು, ಋಷಿಕುಮಾರರು ಹಾಗೂ ಶಿವಗಣರನ್ನು ಉದ್ದೇಶಿಸಿ ಮಾತನಾಡಲಾರಂಭಿಸಿದರು, “ಓ ಸಜ್ಜನರೇ! ಆದಿಮಾತೆಯ ಈ ನಾಮವು ನಿಜವಾಗಿಯೂ ಆಕೆಯ ಸಾಮರ್ಥ್ಯ, ಸತ್ತೆ, ಕ್ಷಮೆ ಮತ್ತು ಪ್ರೀತಿಯನ್ನು ಗುರುತಿಸುವಂತೆ ಮಾಡುತ್ತದೆ. ನಾವೆಲ್ಲಾ ಮಾನವರು ನಮ್ಮ ಹೆಚ್ಚಿನ ಜೀವನವನ್ನು ನಾನಾ ರೀತಿಯ ಕಲ್ಪನೆಗಳಲ್ಲಿ ಅಥವಾ ಅವುಗಳ ಸಹಾಯದಿಂದ ಬದುಕುತ್ತಿರುತ್ತೇವೆ.

ಕಲ್ಪನೆ ಎಂದರೇನು?, 'ಮುಂದೆ ಏನಾಗಬಹುದು, ಯಾವುದರಿಂದ ಏನಾಗುತ್ತದೆ ಮತ್ತು ಹೇಗೆ ಆಗುತ್ತದೆ, ನಡೆದುಹೋದ ಘಟನೆಗಳ ಬಗ್ಗೆ ನನಗೆ ತಿಳಿದಿಲ್ಲದಿದ್ದರೂ ಅವು ಹೇಗೆ ನಡೆದಿರಬಹುದು' ಎಂದು ತಮ್ಮ ತಮ್ಮ ಸಾಮರ್ಥ್ಯಕ್ಕನುಸಾರವಾಗಿ ಮಾಡುವ ವಿಭಿನ್ನ ಆಲೋಚನೆಗಳು, ತರ್ಕ, ಸಂದೇಹ ಅಥವಾ ಭಯವೇ ಕಲ್ಪನೆ.

ಸಾಮಾನ್ಯವಾಗಿ ನಮ್ಮ ನಮ್ಮ 'ಕರ್ಮಫಲದ ಅಪೇಕ್ಷೆ'ಯೇ ಎಲ್ಲಾ ಕಲ್ಪನೆಗಳ ಮೂಲ ಜನನಿ ಆಗಿರುತ್ತದೆ. ಮತ್ತು ಅದಕ್ಕಾಗಿಯೇ ಫಲಾಶೆ, ಕಲ್ಪನೆ, ತರ್ಕ-ಕುತರ್ಕ, ಸಂದೇಹ ಮತ್ತು ಭಯ ಇವುಗಳ ಪರಸ್ಪರ ನಿಕಟ ಸಂಬಂಧ ಇರುತ್ತದೆ.

ಕಲ್ಪನೆ ಮಾಡುವುದು ಖಂಡಿತವಾಗಿಯೂ ಕೆಟ್ಟದ್ದಲ್ಲ. ಆದರೆ, ಯಾವ ಕಲ್ಪನೆಗಳಿಗೆ ಅನುಭವ, ಚಿಂತನೆ, ಅಧ್ಯಯನ ಮತ್ತು ಜ್ಞಾನದ ಬೆಂಬಲವಿಲ್ಲವೋ, ಹಾಗೂ ನೀತಿಯ ಮಿತಿಯಿಲ್ಲವೋ, ಅಂತಹ ಕಲ್ಪನೆಗಳು ಯಾವಾಗಲೂ ಮನುಷ್ಯನನ್ನು ತಪ್ಪಾದ ದಾರಿಗೆ ಕೊಂಡೊಯ್ಯುತ್ತವೆ.

ಸಾಮಾನ್ಯವಾಗಿ ಮನುಷ್ಯರಿಗೆ ಒಬ್ಬರ ಬಗ್ಗೆ ಇನ್ನೊಬ್ಬರಿಗೆ ಆಗುವ ತಪ್ಪು ತಿಳುವಳಿಕೆಗಳು ಇಂತಹ ತಪ್ಪು ಕಲ್ಪನೆಗಳಿಂದಲೇ ಆಗುತ್ತವೆ.

ಪ್ರತಿಯೊಬ್ಬ ಮನುಷ್ಯನಿಗೂ ಫಲಾಶೆ ಇದ್ದೇ ಇರುತ್ತದೆ; ಆದರೆ ಫಲಾಶೆಯ ಜಾಲದಲ್ಲಿ ಎಷ್ಟು ಸಿಕ್ಕಿಹಾಕಿಕೊಳ್ಳಬೇಕು ಎಂಬುದನ್ನು ಅವನೇ ನಿರ್ಧರಿಸಬೇಕು. ಏಕೆಂದರೆ, ಫಲಾಶೆಯ ಜಾಲದಲ್ಲಿ ಅಂದರೆ ಕಲ್ಪನೆಯ ರಾಜ್ಯದಲ್ಲಿ ಸಿಕ್ಕಿಹಾಕಿಕೊಂಡಾಗ ಅವನ ಉದ್ಯಮಶೀಲತೆ ದುರ್ಬಲಗೊಳ್ಳುತ್ತಾ ಹೋಗುತ್ತದೆ ಮತ್ತು ಅವನ ಕಾರ್ಯಶಕ್ತ ಕ್ಷೀಣಿಸುತ್ತ ಇರುತ್ತದೆ.

ಹೀಗಾಗಿ ಸನಾತನ ಭಾರತೀಯ ವೈದಿಕ ಧರ್ಮವು ಯಾವಾಗಲೂ ನಿಷ್ಕಾಮ ಕರ್ಮಯೋಗಕ್ಕೆ ಪ್ರಾಧಾನ್ಯ ನೀಡಿದೆ. ಆದರೆ ಇದರ ಅರ್ಥ, ಮನುಷ್ಯ ತಾನು ಮಾಡುವುದರ ಒಳ್ಳೆಯ ಅಥವಾ ಕೆಟ್ಟ ಪರಿಣಾಮಗಳ ಬಗ್ಗೆ ಯೋಚಿಸಬಾರದು ಎಂದಲ್ಲ.

ಏಕೆಂದರೆ, ಅಂತಹ ಆಲೋಚನೆಗಳು ಕಲ್ಪನೆಗಳಲ್ಲ, ಅಂತಹ ಆಲೋಚನೆಗಳು ವಿವೇಕ ಮತ್ತು ಬುದ್ಧಿಯ ಸ್ಥಿರತೆಯಾಗಿದೆ..

ಆದರೆ, ಆ ಪರಿಣಾಮಗಳ ಬಗ್ಗೆ ಯೋಚಿಸಿ ಹೆದರುವುದು ಅಥವಾ ಸಂತೋಷದಿಂದ ಹುಚ್ಚರಾಗುವುದು, ಈ ಎರಡೂ ಕೂಡ ಕಲ್ಪನೆಯ ಮಕ್ಕಳೇ.

ನಮ್ಮೆಲ್ಲರ ಆದಿಮಾತೆಯೊಬ್ಬಳೇ ತನ್ನ ಕಲ್ಪನೆಯನ್ನು ತರಲ, ಸೂಕ್ಷ್ಮ ಮತ್ತು ಸ್ಥೂಲ ಈ ಮೂರೂ ಹಂತಗಳಲ್ಲಿ ನಿಜವಾಗಿಸುವ ಸಾಮರ್ಥ್ಯವನ್ನು ಹೊಂದಿದ್ದಾಳೆ - ಇದು ಬೇರೆ ಯಾರಿಗೂ ಇಲ್ಲ.

ಮತ್ತು ಮನುಷ್ಯನಿಗೆ ಆಕೆಯ ಕೃಪೆ ಬೇಕಿದ್ದರೆ, ಆಕೆಯ ಸಾಮೀಪ್ಯ ಬೇಕಿದ್ದರೆ, ಆಕೆಯ ಬಗ್ಗೆ ಕಲ್ಪನೆ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ.

ಹಾಗಾದರೆ ಅವನು ಏನು ಮಾಡಬೇಕು?

ಈ ಪ್ರಶ್ನೆ ನಮಗೆ ಮೂಡುತ್ತದೆ. ಇದರ ಉತ್ತರವೂ ಬಹಳ ಸುಲಭ. ಅದು ಏನೆಂದರೆ: ೧) ನಮಗೆ ಇಷ್ಟವಾದ ಆವಳ ರೂಪದ ಧ್ಯಾನ ಮಾಡುವುದು, ೨) ಅವಳ ಗುಣಗಳ ಬಗ್ಗೆ ಅಂದರೆ ಚರಿತ್ರೆಯ ವಾಚನ, ಪಠಣ, ಮನನ, ಚಿಂತನ ಮತ್ತು ಗುಣಸಂಕೀರ್ತನೆ ಮಾಡುವುದು, ಮತ್ತು ೩) ನಮ್ಮ ಎಲ್ಲಾ ಫಲಾಶೆಗಳನ್ನು ಅವಳ ಚರಣಗಳಿಗೆ ಸಮರ್ಪಿಸುವುದು.

ಓ ಆಪ್ತಜನರೇ! ನಮ್ಮ ಮನಸ್ಸು ಯಾವ ಕ್ಷಣ ಸಂಪೂರ್ಣವಾಗಿ ಕಲ್ಪನಾರಹಿತವಾಗುತ್ತದೆಯೋ (ಯಾವಾಗ ನಾವು ಕಲ್ಪನಾ ಲೋಕದಿಂದ ಹೊರಬರುತ್ತೇವೋ), ಆಯಾ ಕ್ಷಣಗಳಲ್ಲಿ ನಾವು ಅವಳ ಸೆರಗನ್ನು ಹಿಡಿದುಕೊಂಡಿರುತ್ತೇವೆ.”

ಬ್ರಹ್ಮರ್ಷಿ ಶಶಿಭೂಷಣರು ಇಷ್ಟನ್ನು ಹೇಳಿ ಸುಮ್ಮನಾದರು. ಅವರ ಮುಚ್ಚಿದ ಕಣ್ಣುಗಳಿಂದ ಕಣ್ಣೀರು ಧಾರಾಕಾರವಾಗಿ ಹರಿಯುತ್ತಿತ್ತು. ಅವರ ಕಣ್ಣುರೆಪ್ಪೆಗಳು ನಡುಗುತ್ತಿತ್ತು ಮತ್ತು ಅವರ ಇಡೀ ದೇಹ ರೋಮಾಂಚನದಿಂದ ಥರಗಟ್ಟುತ್ತಿತ್ತು

ಮತ್ತು ಅದೇ ಕ್ಷಣಕ್ಕೆ, ಸದ್ಗುರು ಭಗವಾನ್ ಶ್ರೀ ತ್ರಿವಿಕ್ರಮ ಅಲ್ಲಿ ಪ್ರಕಟರಾದರು. ಅವರು ಶಶಿಭೂಷಣರನ್ನು ಆಲಂಗಿಸಿ ತಮ್ಮ ತೊಡೆಯ ಮೇಲೆ ಕುಳ್ಳಿರಿಸಿದರು ಮತ್ತು ಪ್ರೀತಿಯಿಂದ ಅವರ ಹಣೆಗೆ ಹೂಮುತ್ತು ಕೊಟ್ಟು ಕಣ್ಣು ತೆರೆಯಲು ಹೇಳಿದರು.

ಬ್ರಹ್ಮರ್ಷಿ ಶಶಿಭೂಷಣರು ಕಣ್ಣು ತೆರೆದರು, ಆದರೆ ಅಲ್ಲಿನ ಎಲ್ಲ ಮಹರ್ಷಿಗಳು, ಋಷಿಗಳು, ಋಷಿಕುಮಾರರು ಮತ್ತು ಶಿವಗಣರನ್ನು ನೋಡಿ ಆಶ್ಚರ್ಯಚಕಿತರಾದರು.

ಬಾಪೂ ಮುಂದೆ 'ತುಳಸಿಪತ್ರ - 1389 ಸಂಪಾದಕೀಯದಲ್ಲಿ ಬರೆಯುತ್ತಾರೆ:

ಅವರಿಗೆ ಏನು ಕಂಡಿತು? ಏನು ನೋಡಿದರು? ಮತ್ತು ನಿಖರವಾಗಿ ಏನು ನಡೆಯುತ್ತಿತ್ತು? - ಇವೆಲ್ಲದರಿಂದಲೇ ಎಲ್ಲರೂ ಆಶ್ಚರ್ಯಚಕಿತರಾಗಿದ್ದರು. ಆದರೆ ಕಣ್ಣು ತೆರೆದ ನವಬ್ರಹ್ಮರ್ಷಿ ಶಶಿಭೂಷಣರು ಶಾಂತ, ಸ್ಥಿರ ಮತ್ತು ಅತ್ಯಂತ ಪ್ರಸನ್ನಚಿತ್ತರಾಗಿದ್ದರು. ಅವರಿಗೆ ಇವೆಲ್ಲಾ ಕಾಣಿಸುತ್ತಿರಲಿಲ್ಲವೇ?

ನಿಜಕ್ಕೂ ಅದ್ಭುತವಾದದ್ದು ಸಂಭವಿಸುತ್ತಿತ್ತು.

ಭಗವಾನ್ ತ್ರಿವಿಕ್ರಮನ ಹಿಂದೆ, ನವದುರ್ಗಾ ಸ್ಕಂದಮಾತೆ ತನ್ನ ಸಿಂಹದ ಮೇಲೆ ಕುಳಿತು, ಮಡಿಲಲ್ಲಿ ಬಾಲಸ್ಕಂದನನ್ನು ಕರೆದುಕೊಂಡು ಹೊರಗೆ ಬಂದು ಎಲ್ಲರ ಮಧ್ಯದಲ್ಲಿ ನಿಂತಿದ್ದರು.

ಅದೇ ಸಮಯದಲ್ಲಿ, ಆಕಾಶವ್ಯಾಪಿನಿ ಸ್ಕಂದಮಾತೆಯೂ ಅದೇ ರೀತಿ ಸ್ಥಿರವಾಗಿದ್ದರು

ಅಷ್ಟೇ ಅಲ್ಲ, ಭಗವಾನ್ ತ್ರಿವಿಕ್ರಮನ 'ಶಿವನೇತ್ರಗಳಿಂದ' (ರಾಮ, ಶಿವ, ಹನುಮಂತ ಮುಖಗಳಲ್ಲಿ) ಹೊರಹೊಮ್ಮುತ್ತಿದ್ದ ಅತ್ಯಂತ ಸುಂದರವಾದ ಹೊಂಬಣ್ಣ ಬೆಳಕಿನಲ್ಲೂ ಸ್ಕಂದಮಾತೆ ಕಾಣಿಸುತ್ತಿದ್ದರು.

ಆಕಾಶವ್ಯಾಪಿನಿ ಸ್ಕಂದಮಾತೆಯ ಸಿಂಹವು ಹಿರಿಯ ಮಗನಾದ 'ವೀರಭದ್ರ'ನಾಗಿದ್ದನು.

ಎಲ್ಲರ ಮಧ್ಯದಲ್ಲಿ ನಿಂತಿದ್ದ ಸ್ಕಂದಮಾತೆಯ ಸಿಂಹವು ಘನಪ್ರಾಣ 'ಶ್ರೀಗಣಪತಿ'ಯಾಗಿದ್ದನು.

ಮತ್ತು ತ್ರಿವಿಕ್ರಮನ ಶಿವನೇತ್ರಗಳಿಂದ ಹೊರಬಿದ್ದ ಬೆಳಕಿನಲ್ಲಿದ್ದ ಸ್ಕಂದಮಾತೆಯ ಸಿಂಹವು 'ಸ್ಕಂದಕಾರ್ತಿಕೇಯ'ನಾಗಿದ್ದನು.

ಆ ಮೂರೂ ಸಿಂಹಗಳು ಅತೀವ ಪ್ರೀತಿ, ಶ್ರದ್ಧೆ ಮತ್ತು ಆದರದಿಂದ ನವದುರ್ಗಾ ನಾಮಗಳನ್ನು ಒಂದರ ನಂತರ ಒಂದರಂತೆ ಉಚ್ಚರಿಸುತ್ತಿದ್ದವು.

ಈ ಮೂರು ರೂಪಗಳಿಗೆ ಎಲ್ಲಾ ಬ್ರಹ್ಮರ್ಷಿಗಳು ಮತ್ತು ಬ್ರಹ್ಮವಾದಿನಿಯರು ಸಾಷ್ಟಾಂಗ ನಮಸ್ಕಾರ ಮಾಡಿ, ಭಾವಪೂರ್ಣವಾಗಿ ಪ್ರಣಿಪಾತ ಮಾಡಿದರು. ನಂತರ ದೇವರ್ಷಿ ನಾರದ ಮತ್ತು ಶಿವ-ಋಷಿ ತುಂಬರು ಶ್ರೀಲಲಿತಾಂಬಿಕೆಯ ಅಂದರೆ ಆದಿಮಾತೆ ಮಹಾದುರ್ಗೆಯ 'ಲಲಿತಾಸಹಸ್ರನಾಮ' ಸ್ತೋತ್ರವನ್ನು ಹಾಡಲಾರಂಭಿಸಿದರು.

ಮತ್ತು ಆ ಸ್ತೋತ್ರ ಪೂರ್ಣವಾದ ಕೂಡಲೇ, ಸ್ಕಂದಮಾತೆಯ ಮೂರೂ ರೂಪಗಳು ಒಂದೇ ಕ್ಷಣದಲ್ಲಿ ಒಂದಾಗಿ ಆದಿಮಾತೆ ಶ್ರೀವಿದ್ಯೆಯ ಸ್ವರೂಪದಲ್ಲಿ ವಿಲೀನವಾದವು.

ಮತ್ತು ಅದೇ ಕ್ಷಣಕ್ಕೆ, ಒಂದು ತೇಜಸ್ಸುಳ್ಳ ಖಡ್ಗ ಮತ್ತು ಒಂದು ಬಿಳಿ ಕಮಲವು ಆದಿಮಾತೆ ಶ್ರೀವಿದ್ಯೆಯ ಅಭಯಹಸ್ತದಿಂದ ಹೊರಬಂದವು.

ಅದು ಕಾಣಿಸಿದ ಕೂಡಲೇ ಬ್ರಹ್ಮರ್ಷಿ 'ಕಾತ್ಯಾಯನ'ರು ಬ್ರಹ್ಮಾನಂದದಿಂದ ನೃತ್ಯ ಮಾಡಲಾರಂಭಿಸಿದರು. ಅಗಸ್ತ್ಯಪುತ್ರ 'ಕತ'ನ ಮಗ ಬ್ರಹ್ಮರ್ಷಿ 'ಕಾತ್ಯ' ಮತ್ತು ಈ ಬ್ರಹ್ಮರ್ಷಿ ಕಾತ್ಯನ ಮಗನೇ 'ಕಾತ್ಯಾಯನ'.

ಈ ಬ್ರಹ್ಮರ್ಷಿ ಕಾತ್ಯಾಯನರು ಆದಿಮಾತೆಯ ಪರಾಂಬಾ ಪೂಜೆ ಮಾಡುತ್ತಾ 108 ವರ್ಷಗಳ ಕಾಲ ಕಠಿಣ ತಪಸ್ಸು ಮಾಡಿದ್ದರು ಮತ್ತು 'ಪರಾಂಬೆಯು ಭಗವತೀ ಪಾರ್ವತಿಯಾಗಿ ತನ್ನ ಉದರದಲ್ಲಿ ಜನಿಸಲಿ' ಎಂದು ಆಶಿಸಿದ್ದರು. ಆ ಪ್ರಕಾರ, ಪರಾಂಬೆಯ ವರಾನುಸಾರ ಕಾತ್ಯಾಯನರ ಪತ್ನಿ 'ಕೃತಿ'ಯ ಗರ್ಭದಲ್ಲಿ ಆರನೇ ನವದುರ್ಗಾ 'ಕಾತ್ಯಾಯಿನಿ' ಜನಿಸಿದ್ದರು.

ಈ ಕಾತ್ಯಾಯನರ ಭಕ್ತಿ ಯಾವಾಗಲೂ ವಾತ್ಸಲ್ಯ ಭಕ್ತಿಯೇ ಆಗಿತ್ತು. ಮತ್ತು ಈಗಲೂ ಅವರು 'ನನ್ನ ಪ್ರೀತಿಯ ಮಗಳು ನನ್ನನ್ನು ಭೇಟಿಯಾಗಲಿದ್ದಾಳೆ' ಎಂಬ ಆನಂದಭಾವನೆಯಿಂದ, ಒಬ್ಬ ವಾತ್ಸಲ್ಯಮಯ ತಂದೆಯಾಗಿ ನೃತ್ಯ ಮಾಡುತ್ತಿದ್ದರು.

ಅವರು ಆಕೆಯ ನವದುರ್ಗಾ ರೂಪವನ್ನೂ ಒಪ್ಪಿಕೊಂಡಿದ್ದರು. 'ಆರನೇ ನವದುರ್ಗಾ' ಎಂದು ಆಕೆಯ ಚರಣಗಳ ಮೇಲೆ ಮಸ್ತಕವಿಡುತ್ತಿದ್ದರು. ನಂತರ ಅತ್ಯಂತ ವಾತ್ಸಲ್ಯಭಾವದಿಂದ ಭಗವತೀ ನವದುರ್ಗಾ ಕಾತ್ಯಾಯಿನಿಯ ಹಣೆಗೆ ಮುತ್ತಿಡುತ್ತಿದ್ದರು.

ಬ್ರಹ್ಮರ್ಷಿ ಕಾತ್ಯಾಯನರು ಪ್ರತಿದಿನ ಬ್ರಹ್ಮಮುಹೂರ್ತದಲ್ಲಿ ಕಾತ್ಯಾಯಿನಿಯ ಬಾಲರೂಪದ ಧ್ಯಾನ ಮಾಡಿ ತಂದೆಯ ಪ್ರೀತಿಯ ಆನಂದವನ್ನು ಅನುಭವಿಸುತ್ತಿದ್ದರು.

ಮಧ್ಯಾಹ್ನದ ಸಮಯ ಹತ್ತಿರ ಬರುತ್ತಿದ್ದಂತೆ, ಆ ಸಮಯದಲ್ಲಿ ಬ್ರಹ್ಮರ್ಷಿ ಕಾತ್ಯಾಯನರು ಕಾತ್ಯಾಯಿನಿಯನ್ನು 'ತನ್ನ ತಾಯಿ' ಎಂದು ಭಾವಿಸಿ ಪುತ್ರನ ಕರ್ತವ್ಯದಂತೆ ಸೇವೆ ಮತ್ತು ಪೂಜೆ ಮಾಡುತ್ತಿದ್ದರು.

ಮಧ್ಯಾಹ್ನದ ನಂತರ ಸೂರ್ಯಾಸ್ತದವರೆಗೆ, ಕಾತ್ಯಾಯನರು ಆಕೆಯನ್ನು 'ತಮ್ಮ ಅಜ್ಜಿ' ಎಂದು ಭಾವಿಸಿ, ತಮ್ಮನ್ನು ಚಿಕ್ಕ ಮಗುವಿನಂತೆ ಆಕೆಯಿಂದ ಮುದ್ದು ಮಾಡಿಸಿಕೊಳ್ಳುತ್ತಿದ್ದರು. ಆದರೆ ಸೂರ್ಯಾಸ್ತದ ನಂತರ, ಅವರು ಆಕೆಯನ್ನೇ ಸಾಕ್ಷಾತ್ ಆದಿಮಾತೆ ಲಲಿತಾಂಬಿಕೆ ಎಂದು ಭಾವಿಸಿ, ಆಕೆಯ ವಿಶ್ವಾತೀತ ರೂಪವನ್ನು ಧ್ಯಾನಿಸುತ್ತಿದ್ದರು.

ಈ ರೀತಿ ವಾತ್ಸಲ್ಯಭಕ್ತಿಯ ಶಿಖರವಾದ ಬ್ರಹ್ಮರ್ಷಿ ಕಾತ್ಯಾಯನರು ಆ ಖಡ್ಗ ಮತ್ತು ಕಮಲವನ್ನು ಪ್ರೀತಿಯಿಂದ ಸ್ಪರ್ಶಿಸುತ್ತಿದ್ದಂತೆ, ಆ ಖಡ್ಗ ಮತ್ತು ಆ ಕಮಲ ಪುಷ್ಪವನ್ನು ತಮ್ಮ ಎಡಗೈಗಳಲ್ಲೆರಡರಲ್ಲಿ ಹಿಡಿದು, ಬಲಗೈಗಳಲ್ಲಿ ಅಭಯ ಮುದ್ರೆ ಮತ್ತು ವರದ ಮುದ್ರೆಯನ್ನು ಹೊಂದಿದ್ದ ಆರನೇ ನವದುರ್ಗಾ ಕಾತ್ಯಾಯಿನಿ ಅಲ್ಲಿ ಪ್ರಕಟರಾದರು.

ಮುಖದಲ್ಲಿ ಚಂದ್ರನ ತೇಜಸ್ಸಿದ್ದು, ಆದರೆ ಚಂದ್ರನ ಕಲೆಯಿಲ್ಲದ ಈ ನವದುರ್ಗಾ ಕಾತ್ಯಾಯಿನಿಯೂ ಸಿಂಹವಾಹಿನಿಯೇ ಆಗಿದ್ದರು.

ಆದರೆ ಆಕೆಯ ಸಿಂಹವು ಒಂದೇ ಸಮಯದಲ್ಲಿ ಪರಾಕ್ರಮ ಮತ್ತು ಪ್ರಸನ್ನತೆ ಈ ಎರಡೂ ಭಾವಗಳನ್ನು ಹೊಂದಿತ್ತು.

ಬ್ರಹ್ಮವಾದಿನಿ ಲೋಪಾಮುದ್ರೆ ತಟ್ಟೆಯಲ್ಲಿ 108 ಬಿಳಿ ಕಮಲಗಳನ್ನು ತೆಗೆದುಕೊಂಡು ಮುಂದೆ ಬಂದರು.

'ಓಂ ಕಾತ್ಯಾಯನ್ಯೈ ನಮಃ' ಎಂಬ ಮಂತ್ರವನ್ನು ಉಚ್ಚರಿಸುತ್ತಾ, ಅವರು ಅದರಲ್ಲಿನ 107 ಕಮಲಗಳನ್ನು ನವದುರ್ಗಾ ಕಾತ್ಯಾಯಿನಿಯ ಚರಣಗಳಿಗೆ ಅರ್ಪಿಸಿದರು.

ಮತ್ತು ಕೊನೆಯ 108ನೇ ಕಮಲಪುಷ್ಪವನ್ನು ಆ ಸಿಂಹದ ತಲೆಯ ಮೇಲೆ ಅರ್ಪಿಸಿದರು.

ಆ ಕೂಡಲೇ, ಆ ಸಿಂಹದ ದೇಹದಲ್ಲಿ ಬ್ರಹ್ಮರ್ಷಿಗಳಿಂದ ಹಿಡಿದು ಸಾಮಾನ್ಯ ಶ್ರದ್ಧಾವಂತರವರೆಗೂ ಆದಿಮಾತೆಯ ಪ್ರತಿಯೊಬ್ಬ ಭಕ್ತನೂ ಕಾಣಿಸತೊಡಗಿದನು.

ಬ್ರಹ್ಮವಾದಿನಿ ಲೋಪಾಮುದ್ರೆ ಅತ್ಯಂತ ವಾತ್ಸಲ್ಯಭಾವದಿಂದ ಹೇಳಲಾರಂಭಿಸಿದರು, “ಈ ಆರನೇ ನವದುರ್ಗಾ 'ಕಾತ್ಯಾಯಿನಿ'ಯು ನವರಾತ್ರಿಯ ಷಷ್ಠಿ ತಿಥಿಯ ಹಗಲು ಮತ್ತು ರಾತ್ರಿಯ ನಾಯಕಿ.

ಮತ್ತು ಇವರು ಶಾಂಭವೀ ವಿದ್ಯೆಯ ಹನ್ನೊಂದನೇ ಮತ್ತು ಹನ್ನೆರಡನೇ ಮೆಟ್ಟಿಲುಗಳ (ಕಕ್ಷೆಗಳ) ಅಧಿಷ್ಠಾತ್ರಿ.

ಈ ಕಾತ್ಯಾಯಿನಿಯು ಭಕ್ತಮಾತೆ ಪಾರ್ವತಿಯ ವಾತ್ಸಲ್ಯಭಾವದ ಸುಂದರ ಮತ್ತು ಶ್ರೇಷ್ಠ ಅವಿಷ್ಕಾರ.”