ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಅನಾವರಣ ಆಗದ ಇತಿಹಾಸದ ಸೂಕ್ಷ್ಮ ಸತ್ಯಗಳು - ಭಾಗ - 16


ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಅನಾವರಣ ಆಗದ ಇತಿಹಾಸದ ಸೂಕ್ಷ್ಮ ಸತ್ಯಗಳು - ಭಾಗ - 16

ರಾಣಿ ಲಕ್ಷ್ಮೀಬಾಯಿಯ ದೇಹ ನಿಷ್ಪ್ರಾಣವಾದ ಕ್ಷಣವೇ, ಬ್ರಿಟಿಷ್ ಸೈನಿಕನ ವೇಷದಲ್ಲಿದ್ದ ಸರ್ದಾರ್ ಮಂಜುನಾಥ ಪಹಾಡಿಯವರು ಕ್ಷಣವೂ ತಡಮಾಡದೆ ರಾಣಿಯ ದೇಹವನ್ನು ಎತ್ತಿಕೊಂಡು ತಮ್ಮ ಕುದುರೆಯ ಮೇಲೆ ಹಾಕಿಕೊಂಡರು. ‘ಈ ಮೃತದೇಹವನ್ನು ಮೇಜರ್ ಹ್ಯೂಜ್ ರೋಸ್‌ಗೆ ತೋರಿಸಲು ತೆಗೆದುಕೊಂಡು ಹೋಗುತ್ತಿದ್ದೇನೆ’ ಎಂದು ಕಿರುಚುತ್ತಾ ಬ್ರಿಟಿಷರನ್ನು ನಂಬಿಸಿ, ಮಂಜುನಾಥ ಪಹಾಡಿಯವರು ದಟ್ಟವಾದ ಮರಗಳಿರುವ ಕಾಡಿನೊಳಗೆ ಚುರುಕಿನಿಂದ ನುಗ್ಗಿದರು.

ಬ್ರಿಟಿಷರ ಶಿಭಿರವು ಕಾಡಿನಲ್ಲೇ ಇತ್ತು. ಮೊದಲೆಲ್ಲಾ ಏನೂ ನಿರ್ಧಾರವಾಗಿರದಿದ್ದರೂ ಸರ್ದಾರ್ ಮಂಜುನಾಥ ಪಹಾಡಿಯವರು ಈ ಕೆಲಸ ಶುರು ಮಾಡುತ್ತಿದ್ದಂತೆಯೇ, ರಾಣಿಯ ಜೊತೆಯಲ್ಲಿದ್ದ ಮುಂದರ್ ಬೇಗಂ, ಮೋತಿಬಾಯಿ, ರಾಜಕುಂವರ್ ಮತ್ತು ರಾಮಚಂದ್ರರಾವ್ ಅಷ್ಟೇ ವೇಗವಾಗಿ ಬೇರೆ ಬೇರೆ ದಿಕ್ಕಿನಿಂದ ಅವರ ಬೆನ್ನ ಹಿಂದೆ ಕಾಡಿನೊಳಗೆ ಹೋದರು. ಕಾಡಿನ ಈ ಭಾಗ ‘ಖೂನ್ ಕಿ ಘಾಟಿ’ ಎಂದೇ ಅಲ್ಲಿನ ಜನರಲ್ಲಿ ಪ್ರಸಿದ್ಧವಾಗಿತ್ತು. ‘ಈ ಭಾಗದಲ್ಲಿ ದೆವ್ವಗಳ ಕಾಟವಿದೆ’ ಎಂಬ ಬಲವಾದ ನಂಬಿಕೆ ಇದ್ದಿದ್ದರಿಂದ, ಬ್ರಿಟಿಷ್ ಸೈನ್ಯದಲ್ಲಿದ್ದ ಭಾರತೀಯ ಮೂಲದ ಸೈನಿಕರು ಈ ಭಾಗದ ಮರಗಳನ್ನು ಕಡಿಯಲು ಒಪ್ಪಿರಲಿಲ್ಲ. ಹಾಗಾಗಿ ಬ್ರಿಟಿಷ್ ಸೈನಿಕನ ವೇಷದಲ್ಲಿದ್ದ ಮಂಜುನಾಥ ಪಹಾಡಿಯವರ ಹಿಂದೆ ಒಬ್ಬನೇ ಒಬ್ಬ ಭಾರತೀಯ ಸೈನಿಕ ಹೋಗಲಿಲ್ಲ. ಇನ್ನು ಹೋಗಲು ಪ್ರಯತ್ನಿಸಿದ ಹತ್ತು-ಇಪ್ಪತ್ತು ಬ್ರಿಟಿಷ್ ಸೈನಿಕರನ್ನು, ಅವರಲ್ಲಿದ್ದ ಭಾರತೀಯ ಸೈನಿಕರೇ ತಡೆದು ನಿಲ್ಲಿಸಿದರು.
ರಾಣಿಯ ಅಂತ್ಯಸಂಸ್ಕಾರ ಮುಗಿಯುತ್ತಿದ್ದಂತೆಯೇ ಮುಂದರ್ ಬೇಗಂ ಮಂಜುನಾಥ ಪಹಾಡಿಯವರನ್ನು ಕೇಳಿದರು, “ನೀವು ಈ ‘ಖೂನ್ ಕಿ ಘಾಟಿ’ಯನ್ನು ಮೊದಲೇ ನೋಡಿ ಇಟ್ಟುಕೊಂಡಿದ್ದೀರಾ? ಇದು ನಿಮಗೆ ಹೇಗೆ ಹೊಳೆಯಿತು?”
ಕಾಡಿನ ದಾರಿಯಲ್ಲಿ ಮುಂದೆ ಹೋಗುತ್ತಿರುವಾಗಲೇ ಸರ್ದಾರ್ ಮಂಜುನಾಥ ಪಹಾಡಿ ಉತ್ತರ ಕೊಟ್ಟರು, “ಈ ಘಾಟಿಯನ್ನು ಸರಿಯಾಗಿ ನೋಡಿ ಇಟ್ಟುಕೊಳ್ಳಲು ನನಗೆ ರಾಣಿ ಲಕ್ಷ್ಮೀಬಾಯಿ ಸಾಹೇಬರೇ ಹೇಳಿದ್ದರು. ಗ್ವಾಲಿಯರ್‌ಗೆ ಬಂದ ಮೊದಲ ರಾತ್ರಿಯೇ ರಾಣಿಯವರು ನನಗೆ ಈ ಆಜ್ಞೆ ನೀಡಿದ್ದರು. ಏಕೆಂದರೆ ನಾನು ಝಾನ್ಸಿಯ ನಿವಾಸಿಯಾಗಿದ್ದರೂ, ಗ್ವಾಲಿಯರ್‌ನ ಈ ಪ್ರದೇಶ ನನ್ನ ಅಮ್ಮನ ತವರೂರು. ನಾನು ಒಮ್ಮೆ ಹೋಗಿ ಬಂದ ಮೇಲೆ ರಾಣಿಯವರ ಸೂಚನೆಯಂತೆ, ನಮ್ಮ ಗುಪ್ತಚರ ಇಲಾಖೆಯ ಪ್ರಮುಖ ಗುಪ್ತಚರ ‘ಸಾಧು ಭಗವಾನ್‌ದಾಸ್’ ಕಳೆದ ಹದಿನಾಲ್ಕು ದಿನಗಳಿಂದ ಹಗಲಿರುಳು ಶ್ರಮಿಸಿ ಬ್ರಿಟಿಷ್ ಸೈನಿಕರಲ್ಲಿ ಈ ಜಾಗದ ಬಗ್ಗೆ ಸಾಕಷ್ಟು ವದಂತಿಗಳನ್ನು ಹಬ್ಬಿಸಿದ್ದರು. ಇದರಿಂದಾಗಿ ಇಲ್ಲಿಂದ ಬಹಳ ದೂರದವರೆಗೂ ಬ್ರಿಟಿಷರ ಸೈನ್ಯ ಸುಳಿಯುತ್ತಲೇ ಇರಲಿಲ್ಲ.
ಅದೇ ಸಾಧು ಭಗವಾನ್‌ದಾಸ್ ಅವರು ಇಂದು ರಾಣಿಯವರು ಯುದ್ಧಕ್ಕೆ ಹೊರಡುವ ಮುನ್ನ ಬಂದು ಭೇಟಿಯಾಗಿದ್ದರು. ಅವರ ಸಲಹೆಯಂತೆಯೇ ರಾಣಿ ಲಕ್ಷ್ಮೀಬಾಯಿ ಬ್ರಿಟಿಷ್ ಶಿಭಿರದೊಳಗೆ ನುಗ್ಗುವ ದಾರಿಯನ್ನು ನಿಗದಿಪಡಿಸಿದ್ದರು. ರಾಣಿಯವರು ತಮ್ಮ ಸಾವನ್ನು ತಾವೇ ನಿಶ್ಚಯಿಸಿಕೊಂಡಿದ್ದರು ಮತ್ತು ತಮ್ಮ ಅಂತ್ಯಸಂಸ್ಕಾರದ ವ್ಯವಸ್ಥೆಯನ್ನು ಕೂಡ ಅವರೇ
ಮಾಡಿಟ್ಟುಕೊಂಡಿದ್ದರು ಅನ್ನಿಸುತ್ತದೆ.”
ಮುಂದರ್ ಬೇಗಂ ಅವರ ಬಾಯಿಂದ ಮೊದಲ ಬಾರಿಗೆ ಬಂದ ಅಳು ಕಂಡೊಡನೆ ಜೊತೆಯಲ್ಲಿದ್ದವರೆಲ್ಲಾ ಬೆಚ್ಚಿಬಿದ್ದು ಅವರ ಕಡೆ ನೋಡಿದರು. ಅದು ಅಳುವ ಸಮಯ ಖಂಡಿತ ಆಗಿರಲಿಲ್ಲ, ಹಾಗಾಗಿ ಪ್ರತಿಯೊಬ್ಬರೂ ಮುಂದರ್ ಬೇಗಂ ಅವರನ್ನು ಸಮಾಧಾನಪಡಿಸಲು ಪ್ರಯತ್ನಿಸುತ್ತಿದ್ದರು.
ಆದರೆ ಝಾನ್ಸಿ ರಾಣಿಯ ಆಪ್ತ ಅಂಗರಕ್ಷಕಿಯಾಗಿದ್ದ ಬಹದ್ದೂರ್ ಮುಂದರ್ ಬೇಗಂ ಒಂದೇ ಕ್ಷಣದಲ್ಲಿ ಕಣ್ಣೀರು ಒರೆಸಿಕೊಂಡು ಹೇಳಿದರು, “ಆ ಸಾಧು ಭಗವಾನ್‌ದಾಸ್ ಅಂದರೆ ರಾಣಿಯವರ ತಂದೆಯಾಗಿದ್ದರು ಮತ್ತು ಅದಕ್ಕಾಗಿಯೇ ನಾವು ಅವರ ಅಂತ್ಯಸಂಸ್ಕಾರಕ್ಕೂ ತಯಾರಿ ಮಾಡುವುದು ಅಗತ್ಯವಿದೆ.”
ಈ ಮಾತು ಕೇಳುತ್ತಿದ್ದಂತೆಯೇ ಪ್ರತಿಯೊಬ್ಬರೂ ಬೆಚ್ಚಿಬಿದ್ದರು. ಮಂಜುನಾಥ ಪಹಾಡಿ ನಮಸ್ಕರಿಸುತ್ತಾ ಹೇಳಿದರು, “ತಂದೆಯ ಸಾವು ಕಣ್ಣೆದುರಿಗೇ ಸಂಭವಿಸಿದರೂ ರಾಣಿಯವರು ಒಂದು ನಿಮಿಷದಲ್ಲಿ ಹೊರಗೆ ಬಂದಿದ್ದರು ಮತ್ತು ಹೊರಗೆ ನಿಂತಿದ್ದ ನಮಗೆ ಯಾರಿಗೂ ಏನೂ ಗೊತ್ತಾಗದಂತೆ ನೋಡಿಕೊಂಡರು. ರಾಣಿಯವರೂ ಮಹಾನ್ ಮತ್ತು ಅವರಿಗೆ ಜನ್ಮ ನೀಡಿದ ತಂದೆ ಶ್ರೀ ಮೊರೋಪಂತ್ ತಾಂಬೆಯವರೂ ಮಹಾನ್.
ಮೊರೋಪಂತರೇ ಅಂದರೆ ಭಗವಾನ್‌ದಾಸ್ ಅವರೇ, ನಾನು ರಾಣಿಯವರನ್ನು ಭೇಟಿ ಮಾಡುವ ಮುನ್ನವೇ ಹೇಳಿಟ್ಟಿದ್ದರು, ‘ಖೂನ್ ಕಿ ಘಾಟಿ’ಯಲ್ಲಿನ ಪಾಳುಬಿದ್ದ ಗುಡಿಯ ಹಿಂದೆ ಅಂತ್ಯಸಂಸ್ಕಾರಕ್ಕೆ ಬೇಕಾದ ಎಲ್ಲಾ ವಸ್ತುಗಳನ್ನು ಇಟ್ಟಿದ್ದೇನೆ ಎಂದು. ಧನ್ಯ ಆ ತಂದೆ ಮತ್ತು ಅತಿ ಧನ್ಯ ಆ ಮಗಳು! ತಮ್ಮ ಅಂತ್ಯಸಂಸ್ಕಾರದ ತಯಾರಿಯನ್ನು ತಾವೇ ಮಾಡಿಕೊಂಡು ಸಾವನ್ನು ಅಪ್ಪಿಕೊಂಡರು ಇಬ್ಬರೂ. ಆದರೆ ಮೊರೋಪಂತರ ಬಗ್ಗೆ ಏನು ಮಾಡುವುದು? ನಾವು ಕೋಟೆಯೊಳಗೆ ಹೋಗುವುದು ಹೇಗೆ? ಕೋಟೆಯಲ್ಲಂತೂ ನೂರಾರು ಬ್ರಿಟಿಷ್ ಸೈನಿಕರು ನುಗ್ಗುತ್ತಿದ್ದಾರೆ.”
ಅಷ್ಟರಲ್ಲೇ ಬಲಬದಿಯ ಸಣ್ಣ ಗುಡ್ಡದ ಮೇಲಿಂದ ಒಬ್ಬ ಮುದಿ ಆದಿವಾಸಿ, ಕಟ್ಟಿಗೆ ಹೊರೆಯನ್ನು ಬೆನ್ನ ಮೇಲೆ ಹೊತ್ತುಕೊಂಡು ಇಳಿಯುತ್ತಿರುವುದು ಕಂಡಿತು. ಅವನ ಮೇಲೆ ಯಾವ ಬ್ರಿಟಿಷ್ ಸೈನಿಕನ ಕಣ್ಣು ಬೀಳಲು ಸಾಧ್ಯವಿರಲಿಲ್ಲ. ಏಕೆಂದರೆ ಅವರಿಗೆ ಲೂಟಿ ಮಾಡುವುದರಲ್ಲಿ ಆಸಕ್ತಿಯಿತ್ತೇ ಹೊರತು ಈ ಬಡ ಮುದಿ ಆದಿವಾಸಿ ಮತ್ತು ಅವನ ಕಟ್ಟಿಗೆಯಲ್ಲಲ್ಲ.
ನಮ್ಮ ಈ ಜನರ ಗಮನ ಅವನ ಕಡೆ ಹೋಗಿದ್ದು, ಆ ಮುದುಕ ಒಂದು ದೊಡ್ಡ ಕಲ್ಲನ್ನು ಕೆಳಕ್ಕೆ ಉರುಳಿಸಿದ್ದರಿಂದಲೇ. ಎಲ್ಲರೂ ತಮ್ಮ ಶಸ್ತ್ರ ಹಿಡಿದು ತಯಾರಾದರು. ಆದರೆ ಮೋತಿಬಾಯಿ ಎಲ್ಲರನ್ನು ತಡೆದರು, “ಇವರು ಸರ್ದಾರ್ ಲಾಲಾಭಾವು ಬಕ್ಷಿ. (ಸಂದರ್ಭ: ಕಥಾಮಂಜರಿ ೪-೩-೧೦) ಇವರು ನನಗೆ ಹೇಳಿಯೇ ಹಿಂದೆ ಉಳಿದಿದ್ದರು. ಅವರ ತಲೆಯ ಮೇಲಿನ ನವಿಲುಗರಿಯ ಟೋಪಿಯೇ ಗುರುತಾಗಿತ್ತು.”
ಕೇವಲ ಐದು ನಿಮಿಷಗಳಲ್ಲಿ ಲಾಲಾಭಾವು ಬಕ್ಷಿ ಆ ಕಟ್ಟಿಗೆಯ ಹೊರೆಯೊಂದಿಗೆ ಅವರ ಬಳಿ ಬಂದು ತಲುಪಿದರು. ಆ ಕಟ್ಟಿಗೆಯ ಹೊರೆಯ ಒಳಗೇ ಮೊರೋಪಂತರ ಮೃತದೇಹವಿತ್ತು.
ಅವರ ಅಂತ್ಯಸಂಸ್ಕಾರ ಮಾಡುವಾಗ ಅದೇ ಕಟ್ಟಿಗೆಗಳನ್ನು ಬಳಸಲಾಯಿತು ಮತ್ತು ಮುಂದರ್ ಬೇಗಂ ತನ್ನ ಹತ್ತಿರ ಜತನದಿಂದ ಇಟ್ಟುಕೊಂಡಿದ್ದ ರಾಣಿ ಲಕ್ಷ್ಮೀಬಾಯಿಯ ಮೈಮೇಲಿನ ಶಾಲನ್ನು ಮೊರೋಪಂತರ ದೇಹದ ಮೇಲೆ ಹೊದಿಸಿದರು.
ಅವರ ಅಗ್ನಿಸಂಸ್ಕಾರವಾಗುತ್ತಿರುವಾಗ ರಾಮಚಂದ್ರರಾವ್ ದುಃಖದಿಂದ ಹೇಳಿದರು, “ಈ ಇಬ್ಬರಿಗೂ ಅರ್ಪಿಸಲು ಹೂವುಗಳೂ ಇರಲಿಲ್ಲ ಮತ್ತು ಕೇವಲ ಒಂದು ತುಳಸಿ ಎಲೆಯೂ ಇರಲಿಲ್ಲ. ನನಗೆ ಗೀತೆ ಬಾಯಿಪಾಠ ಇದೆ ಅಷ್ಟೇ.”
ಮೋತಿಬಾಯಿ ಗಂಭೀರವಾಗಿ ಹೇಳಿದರು, “ಆ ಇಬ್ಬರ ಮುಖದಲ್ಲಿ ತುಳಸಿ ಎಲೆಯನ್ನು ಸ್ವತಃ ಭಗವಂತನೇ ಇಟ್ಟಿರಬಹುದು ಮತ್ತು ಹೂವುಗಳನ್ನು ತಾಯಿ ಜಗದಂಬೆಯೇ ಚೆಲ್ಲಿರಬಹುದು. ರಾಜಕುಂವರ್! ನೀನು ಮಾತ್ರ ನಿನ್ನನ್ನು ಉಳಿಸಿಕೊ ಮತ್ತು ನಿನ್ನ ಅಣ್ಣ ಬಿಹಾರಿಲಾಲ್‌ನನ್ನು ಹೋಗಿ ಭೇಟಿ ಮಾಡು. ನಿಮ್ಮಿಬ್ಬರ ಮೇಲೆ ರಾಣಿ ಲಕ್ಷ್ಮೀಬಾಯಿ ‘ಈ ಸ್ವಾತಂತ್ರ್ಯ ಸಂಗ್ರಾಮದ ನಿಜವಾದ ಇತಿಹಾಸವನ್ನು ಜನರಿಗೆ ತಲುಪಿಸುವ’ ಕೆಲಸವನ್ನು ವಹಿಸಿದ್ದಾರೆ. ರಾಣಿಯ ಯಾವ ಆಸೆಯೂ ಅಪೂರ್ಣವಾಗಿ ಉಳಿಯಬಾರದು.”
“ಮತ್ತು ಉಳಿಯುವುದೂ ಇಲ್ಲ!” ಈ ವಾಕ್ಯ ಹೇಳಿದ್ದು ಲಾಲಾಭಾವು ಬಂದ ಹಾದಿಯಲ್ಲೇ ಗುಡ್ಡ ಇಳಿದು ಬಂದ ಕಮಲಕುಮಾರಿ ಚೌಹಾಣ್. ಅವಳು ರಾಜಕುಮಾರ ದಾಮೋದರರಾವ್ ಅವರನ್ನು ಸುರಕ್ಷಿತ ಜಾಗಕ್ಕೆ ತಲುಪಿಸಿ ಬಂದಿದ್ದಳು.
ಮೋತಿಬಾಯಿಯ ನಾಯಕತ್ವ ಅಲ್ಲಿದ್ದವರೆಲ್ಲರಿಗೂ ಒಪ್ಪಿಗೆಯಾಗಿತ್ತು. ಏಕೆಂದರೆ ರಾಣಿ ಲಕ್ಷ್ಮೀಬಾಯಿ ಸ್ವತಃ ಅವಳನ್ನು ಮುಖ್ಯ ರಾಜಕೀಯ ಸಲಹೆಗಾರಳನ್ನಾಗಿ ಮಾಡಿದ್ದರು. ಮೋತಿಬಾಯಿ ಎಲ್ಲರನ್ನು ಕರೆದುಕೊಂಡು ಕಣಿವೆಯೊಳಗೆ ಇಳಿದರು. ಅವಳ ಜೊತೆಗೆ ಒಟ್ಟು ೧೬ ಪುರುಷರು ಮತ್ತು ಅವಳು, ಕಮಲಕುಮಾರಿ, ರಾಜಕುಂವರ್ ಹಾಗೂ ಮುಂದರ್ ಬೇಗಂ ಎಂಬ ನಾಲ್ವರು ಸ್ತ್ರೀಯರಿದ್ದರು.
ಮೋತಿಬಾಯಿ ಎಲ್ಲರ ಜೊತೆ ಚರ್ಚಿಸಿ ನಿರ್ಧಾರ ಪ್ರಕಟಿಸಿದರು, “ಎಲ್ಲರಿಗಿಂತ ದೊಡ್ಡ ದ್ರೋಹಿಯಾದ ಸರ್ದಾರ್ ದುಲ್ಹೇರಾವ್‌ನನ್ನು ಕೊಲ್ಲಲೇಬೇಕು, ಅದು ಅವನಿಗೆ ಬುದ್ಧಿ ಕಲಿಸಿದ ನಂತರವೇ; ಮತ್ತು ರಾಣಿ ಲಕ್ಷ್ಮೀಬಾಯಿಯ ಬೆನ್ನಿಗೆ ಖಡ್ಗ ಚುಚ್ಚಿದ ಬ್ರಿಗೇಡಿಯರ್ ಸ್ಮಿತ್‌ನನ್ನಂತೂ ಹಿಂಸಿಸಿ ಕೊಲ್ಲಬೇಕು. ದುಲ್ಹೇರಾವ್‌ನ ಹತ್ಯೆಯಿಂದ ಭಾರತದ ದ್ರೋಹಿಗಳಿಗೆ ನಡುಕ ಹುಟ್ಟಬೇಕು, ಬ್ರಿಗೇಡಿಯರ್ ಸ್ಮಿತ್‌ನ ಹತ್ಯೆಯಿಂದ ಬ್ರಿಟಿಷರಲ್ಲಿ ಭಯ ಉಂಟಾಗಬೇಕು.”
ಹಿರಿಯ ಸರ್ದಾರ್ ಲಾಲಾಭಾವು ಬಕ್ಷಿ ಹೇಳಿದರು, “ಮತ್ತು ಈ ಎರಡೂ ಹತ್ಯೆಗಳು ನೂರಾರು ಜನರ ಸಮ್ಮುಖದಲ್ಲೇ ಆಗಬೇಕು. ಆದರೆ ಆ ಕೆಲಸ ಮಾಡುವಾಗ ನಾವು ಪ್ರತಿಯೊಬ್ಬರೂ ಸಾಯಲು ಸಿದ್ಧರಿರಬೇಕು.”
ಲಾಲಾಭಾವು ಬಕ್ಷಿ ಎಲ್ಲರಿಗೂ ಪ್ರಮಾಣ ಮಾಡಿಸಿದರು, “ದುಲ್ಹೇರಾವ್ ಮತ್ತು ಬ್ರಿಗೇಡಿಯರ್ ಸ್ಮಿತ್‌ನ ಹತ್ಯೆಯೇ ರಾಣಿ ಲಕ್ಷ್ಮೀಬಾಯಿ ಮತ್ತು ನಮ್ಮ ಇತರ ಅಸಂಖ್ಯಾತ ಸಹಚರರ ಸಾವಿಗೆ ನಾವು ಸಲ್ಲಿಸುವ ನಿಜವಾದ ಪುಷ್ಪಾಂಜಲಿ. ವೀರರಿಗೆ ಪುಷ್ಪಾಂಜಲಿ ರಕ್ತದ್ದೇ ಆಗಿರಲಿ.”
ಇಂದು ಮೊದಲ ಬಾರಿಗೆ ಘೋಷಣೆ ಮೊಳಗಿತು, “ಜೈ ರಾಣಿ ಲಕ್ಷ್ಮೀಬಾಯಿ! ಜೈ ಭಾರತ ಮಾತಾ!”
(ಕಥೆ ಮುಂದುವರಿಯುವುದು)