ಅತ್ರಿಋಷಿಯ ದಿವ್ಯ ಲೀಲೆ ಮತ್ತು ಸ್ವಯಂಭೂ ಮೂಲಾರ್ಕ ಗಣೇಶನ ಪ್ರಕಟ ಕಥೆ - ನಿರೀಕ್ಷಣ ಶಕ್ತಿಯ ಮಹತ್ವ

ಸದ್ಗುರು ಶ್ರೀ ಅನಿರುದ್ಧರು ತುಳಸೀಪತ್ರ 695 ಈ ಅಗ್ರಲೇಖದಲ್ಲಿ ಮನುಷ್ಯನ ಜೀವನದ 10 ಕಾಲಗಳ ಬಗ್ಗೆ ಹೇಳಿದ್ದಾರೆ. ಅವುಗಳಲ್ಲಿ 9ನೇ ಕಾಲದ ವಿವೇಚನೆಯು ತುಳಸೀಪತ್ರ 702 ಅಗ್ರಲೇಖದಿಂದ ಶುರುವಾಗುತ್ತದೆ. ಈ ಸ೦ದರ್ಭದಲ್ಲಿ ಬರುವ ಅಗ್ರಲೇಖಗಳಲ್ಲಿ ಕಿರಾತರುದ್ರ - ಕಿರಾತಕಾಲವನ್ನು ವಿವರಿಸುವಾಗ ಸದ್ಗುರು ಶ್ರೀ ಅನಿರದ್ಧರು ಮೂಲಾರ್ಕ ಗಣೇಶ ಮತ್ತು ನವದುರ್ಗೆಯರ ಮಹತ್ವವನ್ನು ಹೇಳಿದ್ದಾರೆ.

ಸಂದರ್ಭ - ಸದ್ಗುರು ಶ್ರೀ ಅನಿರುದ್ಧ ಬಾಪುರವರ ದೈನಿಕ ಪ್ರತ್ಯಕ್ಷದಲ್ಲಿಯ ಸಂತರಲ್ಲಿ ಶ್ರೇಷ್ಠರಾದ ಶ್ರೀ ತುಳಸೀದಾಸರು ರಚಿಸಿದ ಶ್ರೀರಾಮಚರಿತಮಾನಸದ ಸುಂದರಕಾಂಡದ ಮೇಲೆ ಆಧಾರಿತ 'ತುಳಸೀಪತ್ರ' ಈ ಅಗ್ರಲೇಖಮಾಲಿಕೆಯ ಅಗ್ರಲೇಖ - ತುಳಸೀಪತ್ರ - 1377 ರಿಂದ ತುಳಸೀಪತ್ರ - 1379 ರ ವರೆಗೆ.


ಸದ್ಗುರು ಶ್ರೀ ಅನಿರದ್ಧ ಬಾಪು ತುಳಸೀಪತ್ರ - 1377 ಅಗ್ರಲೇಖದಲ್ಲಿ ಬರೆಯುತ್ತಾರೆ

ಸತ್ಯಯುಗಕ್ಕೆ ನಾಲ್ಕು ಚರಣಗಳಿವೆ ಮತ್ತು ಆ ನಾಲ್ಕೂ ಚರಣಗಳು ಸಮಾನ ಸಮಯವನ್ನು ಹೊಂದಿರುತ್ತದೆ.

ಸತ್ಯಯುಗದ ಮೊದಲ ಚರಣವು ಮುಗಿಯುತ್ತಿರುವಾಗ ದೇವರ್ಷಿ ನಾರದರು ಎಲ್ಲಾ ಬ್ರಹ್ಮರ್ಷಿಗಳ ಸಭೆಯನ್ನು ಕರೆದರು ಮತ್ತು 'ಮುಂದಿನ ಚರಣಕ್ಕಾಗಿ ಏನು ಮಾಡುವುದು ಅವಶ್ಯಕ' ಎಂದು ಕೂಲಂಕಷವಾಗಿ ಚರ್ಚಿಸಿದರು. ಅವರ ಸಭೆಯಲ್ಲಿ ಕೆಲವು ನಿರ್ಧಾರಗಳು ಆದ ನಂತರ ದೇವರ್ಷಿ ನಾರದರು ಎಲ್ಲರನ್ನೂ ಕರೆದುಕೊಂಡು ಹೋಗಿ ಅತ್ರಿಋಷಿಯನ್ನು ಭೇಟಿಯಾದರು.

 

ಆ ಸಮಯದಲ್ಲಿ ಅತ್ರಿಋಷಿ ಶಾಂತವಾಗಿ ನೈಮಿಷಾರಣ್ಯವನ್ನು ರಚಿಸುವಲ್ಲಿ ಮಗ್ನರಾಗಿದ್ದರು. ದೇವರ್ಷಿ ನಾರದರು ಮತ್ತು ಎಲ್ಲಾ ಬ್ರಹ್ಮರ್ಷಿಗಳನ್ನು ನೋಡಿದ ತಕ್ಷಣ ಅತ್ರಿಋಷಿ ತಮ್ಮ ಸದಾಕಾಲದ ಶಾಂತ, ಸ್ಥಿರ ಮತ್ತು ಗಂಭೀರ ಸ್ವಭಾವದಲ್ಲಿ ಎಲ್ಲರಿಗೂ ಪ್ರಶ್ನಿಸಿದರು, "ಹೇ ಪ್ರಿಯರೇ! ನೀವು ಬಹಳ ಮಹತ್ವಪೂರ್ಣವಾದ ಕಾರ್ಯಕ್ಕಾಗಿ ಬಂದಿದ್ದೀರಿ ಎಂಬುದು ನಿಮ್ಮ ಮುಖದಿಂದಲೇ ಸ್ಪಷ್ಟವಾಗುತ್ತಿದೆ ಮತ್ತು ನೀವೆಲ್ಲರು ಮಾನವಕಲ್ಯಾಣಕ್ಕಾಗಿ ಎಲ್ಲೆಡೆ ಸಂಚರಿಸುತ್ತೀರಿ ಎಂಬುದು ನನಗೆ ಗೊತ್ತೇ ಇದೆ. ನಿಮ್ಮಲ್ಲಿ ಸ್ವಲ್ಪವೂ ಸ್ವಾರ್ಥ ಇಲ್ಲ ಎಂದು ನನಗೆ ಸಂಪೂರ್ಣ ವಿಶ್ವಾಸವಿದೆ ಮತ್ತು ಅದಕ್ಕಾಗಿಯೇ ಮಾನವಕಲ್ಯಾಣದ ಬಗ್ಗೆ ನೀವು ಏನಾದರೂ ಪ್ರಶ್ನೆಗಳನ್ನು ಕೇಳಲು ಬಯಸುವುದಾದರೆ ನಾನು ನಿಮಗೆ ಅನುಮತಿ ಕೊಡುತ್ತೇನೆ. ಆದರೆ ನಾನು ಈಗ ಈ ಪವಿತ್ರ ನೈಮಿಷಾರಣ್ಯದ ರಚನೆಯಲ್ಲಿ ತೊಡಗಿಸಿಕೊಂಡಿದ್ದೇನೆ ಮತ್ತು ಈ ಸ್ಥಳದ ಸಂಬಂಧವನ್ನು ಶಂಬಲಾ ನಗರದೊಂದಿಗೆ ಜೋಡಿಸುವಲ್ಲಿಯೂ ನಿರತನಾಗಿದ್ದೇನೆ. ಮತ್ತು ಇದಕ್ಕಾಗಿ ನಾನು ಯಾರಿಗೂ ಯಾವುದೇ ಪ್ರಶ್ನೆಗಳಿಗೂ ಬಾಯಿಯಿಂದ ಅಥವಾ ಬರೆದು ಉತ್ತರ ಕೊಡುವುದಿಲ್ಲ ಎಂದು ಸಂಕಲ್ಪ ಮಾಡಿದ್ದೇನೆ.

ಆದ್ದರಿಂದ ಹೇ ಪ್ರಿಯರೇ! ನಿಮ್ಮೆಲ್ಲರನ್ನೂ ನಾನು ಮನಃಪೂರ್ವಕವಾಗಿ ಸ್ವಾಗತಿಸುತ್ತೇನೆ. ನೀವು ನನಗೆ ಎಷ್ಟು ಪ್ರಶ್ನೆಗಳನ್ನು ಬೇಕಾದರೂ ಯಾವುದೇ ಸಮಯದಲ್ಲಾದರೂ ಕೇಳಬಹುದು; ಆದರೆ ನಾನು ನಿಮಗೆ ಅವುಗಳ ಉತ್ತರವನ್ನು ನನ್ನ ಕೃತಿಯಿಂದಲೇ ಕೊಡುತ್ತೇನೆ".

ಅತ್ರಿಋಷಿಯ ಈ ಮಾತುಗಳನ್ನು ಕೇಳಿದ ತಕ್ಷಣ ದೇವರ್ಷಿ ನಾರದರ ಜೊತೆಗೆ ಎಲ್ಲಾ ಬ್ರಹ್ಮರ್ಷಿಗಳಿಗೂ ಈ ಆದಿಪಿತನಿಗೆ ಅಂದರೆ ಭಗವಾನ್ ಅತ್ರಿಯರಿಗೆ ತಮ್ಮ ಪ್ರಶ್ನೆಗಳು ಮೊದಲೇ ಗೊತ್ತಾಗಿವೆ ಎಂದು ಅರಿವಾಯಿತು. ಏಕೆಂದರೆ ಅವರೆಲ್ಲರಿಗೂ ಒಂದೇ ಪ್ರಶ್ನೆ ಎದುರಾಗಿತ್ತು - 'ಈ ಕಲ್ಪದ ಸತ್ಯಯುಗದ ಮೊದಲ ಚರಣದ ಕೊನೆಯಲ್ಲಿಯೇ ಮನುಷ್ಯನು ಕ್ರಿಯಾತ್ಮಕ ದೃಷ್ಟಿಯಿಂದ ಇಷ್ಟು ದುರ್ಬಲನಾಗಿದ್ದರೆ, ನಂತರ ತ್ರೇತಾಯುಗ ಮತ್ತು ದ್ವಾಪರಯುಗದಲ್ಲಿ ಏನಾಗಬಹುದು? ಮತ್ತು ಇದಕ್ಕಾಗಿ ನಾವು ಏನು ಮಾಡಬೇಕು?'.

 

ಅವರೆಲ್ಲರೂ ಭಗವಾನ್ ಅತ್ರಿಯ ಆಶ್ರಮದಲ್ಲಿಯೇ ವಾಸಿಸಲು ಪ್ರಾರಂಭಿಸಿದರು. ಆದಿಮಾತೆ ಅನಸೂಯೆ ಮಾತ್ರ ಅಲ್ಲಿ ಇರಲಿಲ್ಲ. ಅವರು ಅತ್ರಿಋಷಿಯ ಗುರುಕುಲವನ್ನು ನೋಡಿಕೊಳ್ಳುತ್ತಾ, ಎಲ್ಲಾ ಋಷಿಪತ್ನಿಯರಿಗೆ ವಿವಿಧ ವಿಷಯಗಳು ಮತ್ತು ಪದ್ಧತಿಗಳ ಬಗ್ಗೆ ವಿವರಿಸುತ್ತಿದ್ದರು ಮತ್ತು ಆ ಆಶ್ರಮವು ನೈಮಿಷಾರಣ್ಯದಿಂದ ಬಹಳ ದೂರದಲ್ಲಿತ್ತು.

ಸಾಯಂಕಾಲದವರೆಗೂ ಅತ್ರಿಋಷಿ ಕೇವಲ ಸಮಿಧೆಗಳನ್ನು ಸಂಗ್ರಹಿಸುತ್ತಲೇ ತಿರುಗುತ್ತಿದ್ದರು. ಅವರು ಪ್ರತಿಯೊಂದು ಸಮಿಧೆಯನ್ನು ಬಹಳ ಸೂಕ್ಷ್ಮವಾಗಿ ಪರಿಶೀಲಿಸಿ ಆರಿಸುತ್ತಿದ್ದರು. ಎಲ್ಲಾ ಬ್ರಹ್ಮರ್ಷಿಗಳು ಪದೇ ಪದೇ ಅತ್ರಿಋಷಿಯನ್ನು ವಿನಂತಿಸಿಕೊಂಡರು, "ಹೇ ಭಗವನ್! ಈ ಕೆಲಸವನ್ನು ನಾವು ಮಾಡುತ್ತೇವೆ". ಆದರೆ ಭಗವಾನ್ ಅತ್ರಿ ತಲೆ ಅಲ್ಲಾಡಿಸಿ ನಿರಾಕರಿಸಿದ್ದರು.

ಸೂರ್ಯಾಸ್ತವಾದ ನಂತರ ಅತ್ರಿಋಷಿ ಎಲ್ಲರೊಂದಿಗೆ ಆಶ್ರಮಕ್ಕೆ ಹಿಂದಿರುಗಿದರು ಮತ್ತು ನಂತರ ಊಟದ ನಂತರ ಅತ್ರಿಋಷಿ ತಾವೇ ಸಮಿಧೆಗಳನ್ನು ವಿವಿಧ ರೀತಿಯಲ್ಲಿ ವಿಭಜಿಸಲು ಪ್ರಾರಂಭಿಸಿದರು - ಮರಗಳ ಪ್ರಕಾರ, ಉದ್ದದ ಪ್ರಕಾರ, ತೇವದ ಪ್ರಕಾರ ಮತ್ತು ವಾಸನೆಯ ಪ್ರಕಾರ.

ಈ ರೀತಿಯಾಗಿ ಎಲ್ಲಾ ಸಮಿಧೆಗಳನ್ನು ಸರಿಯಾಗಿ ವರ್ಗೀಕರಿಸಿ, ಅವರು ವಿವಿಧ ಸಮಿಧೆಗಳ ಕಟ್ಟುಗಳನ್ನು ವಿವಿಧ ಪಾತ್ರೆಗಳಲ್ಲಿ ಇಟ್ಟರು.

ಈಗ ಅವರೆಲ್ಲರಿಗೂ ಅತ್ರಿಋಷಿ ವಿಶ್ರಾಂತಿ ತೆಗೆದುಕೊಳ್ಳುತ್ತಾರೆ ಎಂದು ಅನಿಸಿತು. ಆದರೆ ತಕ್ಷಣವೇ ಅತ್ರಿಋಷಿ ಪಲಾಶ ವೃಕ್ಷದ ಎಲೆಗಳನ್ನು ತೆಗೆದುಕೊಂಡು ಅವುಗಳಿಂದ ಪತ್ರಾವಳಿ (ತಟ್ಟೆಯ ಬದಲಾಗಿ ಉಪಯೋಗಿಸುವ ಎಲೆಗಳಿಂದ ಮಾಡಿದ ತಟ್ಟೆಯ ತರಹದ ಪಾತ್ರೆ) ಮತ್ತು ದ್ರೋಣಗಳನ್ನು ಮಾಡಲು ಪ್ರಾರಂಭಿಸಿದರು.

ಈ ಸಮಯದಲ್ಲಿ ಕೂಡ ಅವರೆಲ್ಲರೂ ಮಾಡಿದ ವಿನಂತಿಯನ್ನು ನಿರಾಕರಿಸಿ ಅತ್ರಿಋಷಿ ಸ್ವತಃ ಒಬ್ಬರೇ ಪತ್ರಾವಳಿ ಮತ್ತು ದ್ರೋಣಗಳನ್ನು ಮಾಡುತ್ತಿದ್ದರು. ಅತ್ಯಂತ ಸುಕ್ಷ್ಮವಾಗಿ ಅವರು ಎಲೆಗಳನ್ನು ಆಯ್ಕೆ ಮಾಡುತ್ತಿದ್ದರು ಮತ್ತು ಅತ್ಯಂತ ಸುಂದರ ಅಂಚುಗಳಿರುವ ಪತ್ರಾವಳಿ ಮತ್ತು ದ್ರೋಣಗಳನ್ನು ತಯಾರಿಸುತ್ತಿದ್ದರು.

 

ವರ್ಷಿ ನಾರದರು ಎಲ್ಲಾ ಬ್ರಹ್ಮರ್ಷಿಗಳಿಗೆ ಕಣ್ಣಿನಿಂದಲೇ ಇಶಾರಾ ಮಾಡಿದರು - 'ನೋಡಿ! ಒಂದು ಎಲೆಯಲ್ಲಿ ಕೂಡ ಒಂದು ಸಣ್ಣ ರಂಧ್ರವೂ ಇಲ್ಲ ಅಥವಾ ಒಂದು ಎಲೆಯೂ ಸ್ವಲ್ಪ ಕೂಡ ಖಂಡಿತವಾಗಿಲ್ಲ'.

ಪತ್ರಾವಳಿ ಮತ್ತು ದ್ರೋಣಗಳನ್ನು ಮಾಡುವ ಕೆಲಸ ಮುಗಿದ ತಕ್ಷಣ, ಆ ಎಲ್ಲ ವಸ್ತುಗಳನ್ನು ಅತ್ರಿಋಷಿ ಒಂದು ಖಾಲಿ ಮೂಲೆಯಲ್ಲಿ ಇಟ್ಟುಬಿಟ್ಟರು ಮತ್ತು ಆ ಬ್ರಹ್ಮರ್ಷಿಗಳಿಗೆ ಹೇಳಿದರು, "ನನಗೆ ಸಹಾಯ ಮಾಡುವ ಆಸೆ ನಿಮಗಿದೆಯಲ್ಲಾ! ಹಾಗಾದರೆ ನಾಳೆಯ ದಿನ ಈ ಎಲ್ಲಾ ತಾಜಾ ಹಸಿರು ಪಲಾಶಪತ್ರದ ಪತ್ರಾವಳಿ ಮತ್ತು ದ್ರೋಣಗಳನ್ನು ಬಿಸಿಲಿನಲ್ಲಿ ಒಣಗಿಸುವ ಕೆಲಸ ಮಾಡಿ". ಇಷ್ಟನ್ನು ಹೇಳಿ ಭಗವಾನ್ ಅತ್ರಿಋಷಿ ತಮ್ಮ ಧ್ಯಾನಕ್ಕಾಗಿ ಧ್ಯಾನಕುಟಿಗೆ ಹೋದರು.

ಮರುದಿನ ಎಲ್ಲಾ ಬ್ರಹ್ಮರ್ಷಿಗಳು ಎಂದಿನಂತೆ ಬ್ರಾಹ್ಮಮುಹೂರ್ತದಲ್ಲಿ ಎದ್ದು ತಮ್ಮ ತಮ್ಮ ಸಾಧನೆಗಳನ್ನು ಮುಗಿಸಿ, ಸೂರ್ಯೋದಯದ ಸಮಯದಲ್ಲಿ ತಮ್ಮ ಕೆಲಸಕ್ಕೆ ತೊಡಗಿದರು. ಅತ್ಯಂತ ತನ್ಮಯತೆಯಿಂದ ಪ್ರತಿಯೊಬ್ಬ ಬ್ರಹ್ಮರ್ಷಿಯೂ ತಮ್ಮ ಕೆಲಸವನ್ನು ಮಾಡುತ್ತಿದ್ದರು. ಸೂರ್ಯಾಸ್ತದ ಸಮಯದವರೆಗೂ ಆ ಎಲ್ಲಾ ಪತ್ರಾವಳಿ ಮತ್ತು ದ್ರೋಣಗಳು ವ್ಯವಸ್ಥಿತವಾಗಿ ಒಣಗಿದ್ದವು ಮತ್ತು ಅವು ಸಂಪೂರ್ಣವಾಗಿ ಒಣಗಿ ಹೋಗಿದ್ದವು.

ಸೂರ್ಯಾಸ್ತದ ಸಮಯದಲ್ಲಿ ಅತ್ರಿಋಷಿ ಆಶ್ರಮಕ್ಕೆ ಹಿಂದಿರುಗಿದಾಗ, ಎಲ್ಲಾ ಬ್ರಹ್ಮರ್ಷಿಗಳು ಚಿಕ್ಕ ಮಕ್ಕಳಂತೆ ಸಂತೋಷದಿಂದ ಆ ಎಲ್ಲಾ ಪತ್ರಾವಳಿ ಮತ್ತು ದ್ರೋಣಗಳು ಹೇಗೆ ವ್ಯವಸ್ಥಿತವಾಗಿ ಒಣಗಿವೆ ಎಂದು ಅತ್ರಿಋಷಿಗೆ ತೋರಿಸಿದರು.

ಅತ್ರಿಋಷಿ ಅವರ ಶ್ರಮವನ್ನು ಹೊಗಳಿದರು ಮತ್ತು ನಂತರ ಕೇಳಿದರು, "ಇವುಗಳಲ್ಲಿ ಮಧ್ಯಾಹ್ನದವರೆಗೂ ಒಣಗಿದ ಪತ್ರಾವಳಿ ಮತ್ತು ದ್ರೋಣಗಳು ಯಾವುವು? ಮಧ್ಯಾಹ್ನದಿಂದ ಮಧ್ಯಾಹ್ನದವರೆಗೂ ಒಣಗಿದವು ಯಾವುವು? ಮತ್ತು ಒಣಗಲು ಸೂರ್ಯಾಸ್ತದವರೆಗೂ ಸಮಯ ತೆಗೆದುಕೊಂಡವು, ಅವು ಯಾವುವು?".

ಈಗ ಎಲ್ಲಾ ಬ್ರಹ್ಮರ್ಷಿಗಳು ಗೊಂದಲಕ್ಕೊಳಗಾದರು. ಅವರು ಇದನ್ನು ಎಂದಿಗೂ ಗಮನಿಸಿರಲಿಲ್ಲ ಮತ್ತು ಆಧ್ಯಾತ್ಮಿಕ ಅಧಿಕಾರವನ್ನು ಉಪಯೋಗಿಸಿ ಈ ವಿಷಯವನ್ನು ಭಗವಾನ್ ಅತ್ರಿಯ ಮುಂದೆ ತಿಳಿದುಕೊಳ್ಳುವುದು ತಪ್ಪಾಗುತ್ತಿತ್ತು.

ಆದುದರಿಂದ ಎಲ್ಲಾ ಬ್ರಹ್ಮರ್ಷಿಗಳು ನಾಚಿಕೆಪಟ್ಟು ತಮ್ಮ ತಪ್ಪನ್ನು ಒಪ್ಪಿಕೊಂಡರು.

ಆಗ ಅತ್ರಿಋಷಿ ಕೇಳಿದರು, "ಆದರೆ ಇದು ಹೇಗೆ ಆಯಿತು? ನಿಮಗೆ ಈ ಪ್ರಕ್ರಿಯೆಯ ಮಹತ್ವ ಚೆನ್ನಾಗಿ ಗೊತ್ತಿದೆಯಲ್ಲಾ".

ಯಾರ ಬಳಿಯೂ ಇದಕ್ಕೆ ಉತ್ತರ ಇರಲಿಲ್ಲ.

ಮುಂದೆ ಬಾಪು ತುಳಸೀಪತ್ರ-1378 ರಲ್ಲಿ ಬರೆಯುತ್ತಾರೆ

ಮಾನಸಿಕ ದುಃಖದಲ್ಲಿದ್ದ ಆ ಎಲ್ಲಾ ಬ್ರಹ್ಮರ್ಷಿಗಳ ಕಡೆಗೆ ಅತ್ಯಂತ ಸೌಜನ್ಯದಿಂದ ನೋಡುತ್ತಾ ಅತ್ರಿಋಷಿ ಹೇಳಿದರು, *"ಮಕ್ಕಳೇ! ಅಪರಾಧಿಯ ಭಾವನೆಯನ್ನು ತ್ಯಜಿಸಿ.*

ಏಕೆಂದರೆ ನಮ್ಮ ತಪ್ಪಿನ ಕಾರಣ ಅಪರಾಧಿಯ ಭಾವನೆಯು ನಿರ್ಮಾಣವಾದರೆ ನಂತರ ನಿಧಾನವಾಗಿ ವಿಷಾದವಾಗಲು ಪ್ರಾರಂಭಿಸುತ್ತದೆ ಮತ್ತು ಈ ವಿಷಾದವು ನಿರಂತರವಾಗಿ ಮನಸ್ಸನ್ನು ಚುಚ್ಚುತ್ತಾ ಹೋದರೆ ಅದು ವಿಷಾದವಾಗಿ ಬದಲಾಗುತ್ತದೆ ಅಥವಾ ಅದು ಕೀಳರಿಮೆಯಾಗಿ (ಇನ್ಫಿರಿಯಾರಿಟಿ ಕಾಂಪ್ಲೆಕ್ಸ್) ಬದಲಾಗುತ್ತದೆ ಮತ್ತು ಇದು ಇನ್ನೂ ಹೆಚ್ಚು ತಪ್ಪು.

ಇಂದು ನೀವೇ ಪಲಾಶ ವೃಕ್ಷದ ಎಲೆಗಳನ್ನು ಸಂಗ್ರಹಿಸಿ, ನೀವೇ ಪತ್ರಾವಳಿ ಮತ್ತು ದ್ರೋಣಗಳನ್ನು ಮಾಡಿ ಮತ್ತು ನೀವೇ ನಾಳೆ ಅವುಗಳನ್ನು ಒಣಗಿಸಲು ಇಡಿ ಮತ್ತು ಆಗ ವೀಕ್ಷಣೆ ಮಾಡುವದಸ್ನು ತಪ್ಪಿಸಬೇಡಿ.

ನಾನು ನನ್ನ ಧ್ಯಾನಕ್ಕಾಗಿ ಅಂತರ್ಕುಟಿಗೆ ಹೋಗುತ್ತಿದ್ದೇನೆ ಮತ್ತು ನಾಳೆ ಸೂರ್ಯಾಸ್ತದ ಸಮಯದಲ್ಲಿಯೇ ನಾನು ಹೊರಗೆ ಬರುತ್ತೇನೆ. ಆ ಸಮಯದಲ್ಲಿ ಎಲ್ಲಾ ಕೆಲಸವನ್ನು ಮುಗಿಸಿ ಸಿದ್ಧರಾಗಿರಿ".

ಎಲ್ಲಾ ಬ್ರಹ್ಮರ್ಷಿಗಳು ಅತ್ಯಂತ ವಿಚಾರಪೂರ್ವಕವಾಗಿ ಮತ್ತು ಉತ್ಸಾಹದಿಂದ ತಮ್ಮ ಕೆಲಸಕ್ಕೆ ತೊಡಗಿದರು. ಅವರು ಅತ್ಯಂತ ನಿಖರವಾಗಿ ಎಲ್ಲಾ ಕಾರ್ಯವನ್ನು ಅತ್ರಿಋಷಿಯ ಆಜ್ಞೆಯಂತೆ ಮಾಡಿ ಮರುದಿನದ ಸೂರ್ಯಾಸ್ತದವರೆಗೂ ವ್ಯವಸ್ಥಿತವಾಗಿ ಜೋಡಿಸಿ ಇಟ್ಟರು.

ದೇವರ್ಷಿ ನಾರದರು ಮಾತ್ರ ಯಾವುದೇ ಕೆಲಸವನ್ನು ಮಾಡಿರಲಿಲ್ಲ. ಅವರು ಕೇವಲ ಆ ಪ್ರತಿಯೊಬ್ಬ ಬ್ರಹ್ಮರ್ಷಿಯ ಜೊತೆ ತಿರುಗುತ್ತಿದ್ದರು.

ಅತ್ರಿಋಷಿ ಸರಿಯಾಗಿ ಅವರು ಹೇಳಿದ ಸಮಯದಲ್ಲಿ ತಮ್ಮ ಧ್ಯಾನಕುಟಿಯಿಂದ ಹೊರಗೆ ಬಂದರು ಮತ್ತು ಅವರು ಪ್ರಶ್ನಾರ್ಥಕ ದೃಷ್ಟಿಯಿಂದ ಆ ಎಲ್ಲಾ ಬ್ರಹ್ಮರ್ಷಿಗಳ ಕಡೆಗೆ ನೋಡಿದರು ಮತ್ತು ಅದರೊಂದಿಗೆ ಪ್ರತಿಯೊಬ್ಬ ಬ್ರಹ್ಮರ್ಷಿಯೂ ಮುಂದೆ ಬಂದು ತಮ್ಮ ತಮ್ಮ ಕೆಲಸವನ್ನು ತೋರಿಸಿದರು.

ಪ್ರತಿಯೊಬ್ಬರ ಕೆಲಸವು ಬಹಳ ಅಚ್ಚುಕಟ್ಟಾಗಿ ಆಗಿತ್ತು ಮತ್ತು ಅವರಿಗೆ ಒಣಗುವ ಎಲೆಗಳನ್ನು ವರ್ಗೀಕರಣ ಮಾಡುವುದೂ ಕೂಡ ವ್ಯವಸ್ಥಿತವಾಗಿ ಸಾಧ್ಯವಾಯಿತು.

ಆದರೆ ಆಗಲೂ ಅತ್ರಿಋಷಿಯ ಮುಖದ ಮೇಲೆ ಸ್ವಲ್ಪವೂ ಸಂತೋಷ ಕಾಣಿಸುತ್ತಿರಲಿಲ್ಲ. ಈಗ ಅವರನ್ನು ಪ್ರಶ್ನೆ ಕೇಳುವ ಧೈರ್ಯ ಯಾವ ಬ್ರಹ್ಮರ್ಷಿಗೂ ಆಗುತ್ತಿರಲಿಲ್ಲ. ಏಕೆಂದರೆ ಇತರ ಎಲ್ಲಾ ಬ್ರಹ್ಮರ್ಷಿಗಳು ನಿರ್ಮಿತಿಗಳಾಗಿದ್ದರು; ಹಾಗೆಯೇ, ಭಗವಾನ್ ಅತ್ರಿಯವರು ಸ್ವಯಂಭೂ ಆಗಿದ್ದರು - ಆದಿಶಕ್ತಿಯ ಪುರುಷರೂಪವಾಗಿದ್ದರು.

ಅತ್ರಿಋಷಿ: - "ಹೇ ಮಿತ್ರರೇ! ದೇವರ್ಷಿ ನಾರದರು ಮಾತ್ರ ಸರ್ವೋತ್ಕೃಷ್ಟವಾದ ಕೆಲಸವನ್ನು ಮಾಡಿದ್ದಾರೆ. ನಿಮ್ಮೆಲ್ಲರ ಕೆಲಸ ಕೇವಲ ನೂರು ಗುಣಗಳಲ್ಲಿ 100 ಗುಣದ್ದಾಗಿದೆ, 108 ಗುಣದ್ದಾಗಿಲ್ಲ".

ಈಗ ಎಲ್ಲಾ ಬ್ರಹ್ಮರ್ಷಿಗಳು ಇನ್ನೂ ಹೆಚ್ಚು ಗೊಂದಲಕ್ಕೊಳಗಾದರು. 'ದೇವರ್ಷಿ ನಾರದರು ಒಂದು ಪಲಾಶ ಎಲೆಯನ್ನು ಕೂಡ ಸಂಗ್ರಹಿಸಿರಲಿಲ್ಲ, ಒಂದು ದ್ರೋಣವಾಗಲೀ ಅಥವಾ ಪತ್ರಾವಳಿಯಾಗಲಿ ಮಾಡಿರಲಿಲ್ಲ'. 'ಹಾಗಾದರೆ ಇದು ಹೇಗೆ ಆಯಿತು?' ಈ ವಿಚಾರವು ಅವರಲ್ಲಿ ಪ್ರತಿಯೊಬ್ಬರ ಮನಸ್ಸಿನಲ್ಲಿ ಬರುತ್ತಿತ್ತು.

ಆದರೆ ಅವರಲ್ಲಿ ಪ್ರತಿಯೊಬ್ಬರಿಗೂ ಒಂದು ವಿಷಯದ ಬಗ್ಗೆ ಸಂಪೂರ್ಣ ಖಚಿತತೆ ಇತ್ತು ಏನೆಂದರೆ ಭಗವಾನ್ ಅತ್ರಿ ಎಂದಿಗೂ ಸುಳ್ಳು ಹೇಳುವುದಿಲ್ಲ, ಪಕ್ಷಪಾತ ಮಾಡುವುದಿಲ್ಲ ಅಥವಾ ನಮ್ಮನ್ನು ಪರೀಕ್ಷಿಸಲು ವಾಸ್ತವವನ್ನು ಬದಲಾಯಿಸಿ ಹೇಳುವುದಿಲ್ಲ.

ಅಷ್ಟರಲ್ಲಿ ಆ ಎಲ್ಲಾ ಬ್ರಹ್ಮರ್ಷಿಗಳಿಗೂ ತಮ್ಮ ಎಲ್ಲಾ ಮುಖ್ಯ ಋಷಿಶಿಷ್ಯರು ಆಶ್ರಮದ ಹೊರಗೆ ಬಂದಿದ್ದಾರೆಂದು ಅರಿವಾಯಿತು - ಅವರಲ್ಲಿ ಕೆಲವರು ಮಹರ್ಷಿಗಳು, ಕೆಲವರು ತಪಸ್ವಿ ಋಷಿಗಳು, ಕೆಲವರು ಹೊಸ ಋಷಿಗಳು ಮತ್ತು ಕೆಲವರು ಋಷಿಕುಮಾರರೂ ಕೂಡ ಇದ್ದರು.

ಈಗ ಅತ್ರಿಋಷಿ ಅವರೆಲ್ಲರಿಗೂ ಮತ್ತೆ ಎರಡು ದಿನ ಅದೇ ಕಾರ್ಯವನ್ನು ಅವರವರ ಶಿಷ್ಯರಿಂದ ಮಾಡಿಸಿಕೊಳ್ಳಲು ಆಜ್ಞೆ ನೀಡಿದರು ಮತ್ತು ಹೇಳಿದರು, "ಈ ಸಲ ನೀವು ನಿಮ್ಮ ಪ್ರತಿಯೊಬ್ಬ ಶಿಷ್ಯನಿಗೆ ಅವನವನ ಕಾರ್ಯದ ಅನುಗುಣವಾಗಿ ಗುಣಗಳನ್ನು ಕೊಡುತ್ತೀರಿ ಮತ್ತು ನಾನು ನಿಮಗೆ".

ಎಲ್ಲಾ ಬ್ರಹ್ಮರ್ಷಿಗಳು ತಮ್ಮ ತಮ್ಮ ಶಿಷ್ಯರಿಗೆ ಅತ್ರಿಋಷಿಯ ಆಜ್ಞೆಯನ್ನು ತಿಳಿಸಿದರು ಮತ್ತು ಅವರು ಸ್ವತಃ ಪ್ರತಿಯೊಬ್ಬ ಶಿಷ್ಯನ ಕಾರ್ಯವನ್ನು ಸೂಕ್ಷ್ಮವಾಗಿ ವೀಕ್ಷಣೆ ಮಾಡಲು ಪ್ರಾರಂಭಿಸಿದರು.

ಎರಡು ದಿನಗಳ ನಂತರ ಅತ್ರಿಋಷಿ ಮತ್ತೆ ಅದೇ ಸಮಯಕ್ಕೆ ಹೊರಗೆ ಬಂದರು ಮತ್ತು ಅದರೊಂದಿಗೆ ಪ್ರತಿಯೊಬ್ಬ ಬ್ರಹ್ಮರ್ಷಿಯೂ ತಮ್ಮ ತಮ್ಮ ಶಿಷ್ಯರು ಮಾಡಿರುವ ಕೆಲಸವನ್ನು ಅತ್ರಿಋಷಿಗೆ ತೋರಿಸಿ, ಅದರ ಜೊತೆಗೆ ಪ್ರತಿಯೊಬ್ಬರಿಗೆ ಸಿಕ್ಕಿರುವ ನೂರರಲ್ಲಿನ ಗುಣಗಳ ಬಗ್ಗೆಯೂ ತಿಳಿಸಿದರು.

ಇದಾದ ನಂತರ ಭಗವಾನ್ ಅತ್ರಿ ಬ್ರಹ್ಮರ್ಷಿಗಳ ಎಲ್ಲಾ ಶಿಷ್ಯರಿಗೆ ಅವರವರ ವಾಸಸ್ಥಾನಕ್ಕೆ ಹೋಗಲು ಹೇಳಿದರು.

ಆ ಎಲ್ಲಾ ಮಹರ್ಷಿಗಳು ಮತ್ತು ಋಷಿಗಳು ಅಲ್ಲಿಂದ ಹೊರಟು ಹೋದ ನಂತರ, ಎಲ್ಲಾ ಬ್ರಹ್ಮರ್ಷಿಗಳು ಅತ್ಯಂತ ಮಗುವಿನಂತ ಮನೋಭಾವದಿಂದ ಬಹಳ ಉತ್ಸಾಹ ಮತ್ತು * ಕುತೂಹಲದಿಂದ * ಅತ್ರಿಋಷಿಯ ಕಡೆಗೆ ನೋಡಿದರು.

ಅತ್ರಿಋಷಿ ಎಲ್ಲರಿಗೂ ಬಹಳಷ್ಟು ಆಶೀರ್ವಾದವನ್ನು ನೀಡಿ ಮಾತನಾಡಲು ಆರಂಭಿಸಿದರು, " ಪ್ರೀತಿಯ ಆಪ್ತಜನರೇ! ನಿಮ್ಮ 'ಮಹರ್ಷಿ' ಶಿಷ್ಯರಿಗೆ ಕೂಡ 100 ರಲ್ಲಿ 100 ಗುಣಗಳು ಕೂಡ ಸಿಕ್ಕಿಲ್ಲ. ಇದಕ್ಕೆ ಕಾರಣವೇನು?".

ಎಲ್ಲಾ ಬ್ರಹ್ಮರ್ಷಿಗಳು ತುಂಬಾ ಯೋಚಿಸಿದರು. ಆದರೆ ಅವರಿಗೆ ಉತ್ತರ ಸಿಗಲಿಲ್ಲ ಮತ್ತು ಉತ್ತರವನ್ನು ಹುಡುಕಲು ತಮ್ಮಲ್ಲಿರುವ ಸಿದ್ಧಿಯನ್ನು ಅತ್ರಿ ಆಶ್ರಮದಲ್ಲಿ ಉಪಯೋಗಿಸಲು ಅವರಿಗೆ ಸಾಧ್ಯವಿರಲಿಲ್ಲ. ಅದಕ್ಕಾಗಿಯೇ ಅವರೆಲ್ಲರೂ ಅತ್ಯಂತ ವಿನಯದಿಂದ ಪ್ರಣಾಮ ಮಾಡಿ * ಭಗವಾನ್ ಅತ್ರಿಯವರಿಗೆ ಹೇಳಿದರು, "ನಮಗೆ ಇದರ ಹಿಂದಿರುವ ಕಾರಣ ತಿಳಿದುಬರುತ್ತಿಲ್ಲ.

ನಮಗೆ ಸ್ವತಃ 100 ರಲ್ಲಿ 108 ಗುಣಗಳು ಸಿಗಲು ಸಾಧ್ಯವಾಗಲಿಲ್ಲ ಮತ್ತು ನಮ್ಮ ಶಿಷ್ಯರಿಗೆ 100 ಗುಣಗಳೂ ಕೂಡ ಸಿಗಲಿಲ್ಲನಮ್ಮ ಬುದ್ಧಿಯು ಜಡವಾಗಿದೆ.

ಹೇ ದೇವರ್ಷಿ ನಾರದರೇ! ನಿಮಗೆ ಮಾತ್ರ 100 ರಲ್ಲಿ 108 ಗುಣಗಳು ಸಿಕ್ಕಿವೆ. ನೀವಾದರೂ ದಯವಿಟ್ಟು ನಮ್ಮ ಪ್ರಶ್ನೆಗಳಿಗೆ ಉತ್ತರ ಕೊಡಿ".

ದೇವರ್ಷಿ ನಾರದರು ಸ್ಪಷ್ಟವಾದ ಶಬ್ದಗಳಲ್ಲಿ ಹೇಳಿದರು, "ಭಗವಾನ್ ಅತ್ರಿಯ ಮಾತುಗಳನ್ನು ಮೀರಿ ನಡೆಯುವುದು ನನಗೂ ಕೂಡ ಸಾಧ್ಯವಿಲ್ಲ ಮತ್ತು ನನಗೆ ಭಗವಾನ್ ಅತ್ರಿಯ ಅನುಕಂಪ ಮತ್ತು ಅನುಗ್ರಹದ ಮೇಲೆ ಸಂಪೂರ್ಣ ವಿಶ್ವಾಸವಿದೆ. ಆದುದರಿಂದ ಏನು ಮಾಡಬೇಕೋ ಅದನ್ನು ಅವರೇ ಮಾಡುತ್ತಾರೆ".

ಭಗವಾನ್ ಅತ್ರಿಯ ತಕ್ಷಣವೇ ಆದಿಮಾತೆ ಅನಸೂಯೆಯನ್ನು ಸ್ಮರಿಸಿದರು ಮತ್ತು ಕ್ಷಣಾರ್ಧದಲ್ಲಿ ಅತ್ರಿಋಷಿಯ ಪಕ್ಕದಲ್ಲಿ ಆದಿಮಾತೆ ಅನಸೂಯೆ ಕಾಣಿಸಿಕೊಳ್ಳಲು ಪ್ರಾರಂಭಿಸಿದರು.

ಆ ವಾತ್ಸಲ್ಯಮಯಿ ಆದಿಮಾತೆಯನ್ನು ನೋಡಿದ ತಕ್ಷಣ ಆ ಎಲ್ಲಾ ಬ್ರಹ್ಮರ್ಷಿಗಳಿಗೆ ಅಳಲು ಪ್ರಾರಂಭವಾಯಿತು. ಅವರು ಆದಿಮಾತೆಯೇ ಆಗಿದ್ದರಲ್ಲ!. ಅವರ ಹೃದಯವು ಕಳವಳಗೊಂಡಿತು ಮತ್ತು ಅವರು ತಕ್ಷಣವೇ ಶ್ರೀವಿದ್ಯಾಪುತ್ರ ತ್ರಿವಿಕ್ರಮನನ್ನು ಅಲ್ಲಿಗೆ ಕರೆದರು.

 

ಮುಂದೆ ಬಾಪು ತುಳಸೀಪತ್ರ-1379ರಲ್ಲಿ ಬರೆಯುತ್ತಾರೆ,

ಆದಿಮಾತೆ ಅನಸೂಯೆಯ ಆಜ್ಞೆಯಂತೆ ಭಗವಾನ್ ತ್ರಿವಿಕ್ರಮನು ಆ ಆಶ್ರಮಕ್ಕೆ ಬಂದು ಆ ಎಲ್ಲಾ ಬ್ರಹ್ಮರ್ಷಿಗಳೊಂದಿಗೆ ಮಾತನಾಡಲು ಪ್ರಾರಂಭಿಸಿದರು, "ಹೇ ಮಿತ್ರರೇ! ನೀವೆಲ್ಲಾ ಬ್ರಹ್ಮರ್ಷಿಗಳು ನನಗೆ ಅತ್ಯಂತ ಸಮೀಪದವರಾಗಿದ್ದೀರಿ ಮತ್ತು ನಿಮ್ಮ ಪ್ರತಿಯೊಬ್ಬರ ಸಾಮರ್ಥ್ಯ, ಕಾರ್ಯಕ್ಷಮತೆ ಮತ್ತು ಜ್ಞಾನ ಅಪಾರವಾಗಿದೆ.

ಆದರೆ ಈ ಕ್ಷಣದಲ್ಲಿ ನೀವೆಲ್ಲಾ 'ನಾವು ಎಲ್ಲಿಯೋ ಹಿಂದೆ ಬಿದ್ದಿದ್ದೇವೆ' ಈ ಭಾವನೆಯಲ್ಲಿ ಸಿಕ್ಕಿಬಿದ್ದಿದ್ದೀರಿ.

ಭಗವಾನ್ ಅತ್ರಿಯರಿಗೆ ನೀವು ಕೇಳಲು ಇಲ್ಲಿಗೆ ಬಂದಿರುವ ಪ್ರಶ್ನೆ - 'ಈ ಕಲ್ಪದಲ್ಲಿ ಸತ್ಯಯುಗದ ಮೊದಲ ಚರಣದ ನಂತರವೇ ಮಾನವಸಮಾಜ ಅಕಾರ್ಯಕ್ಷಮ ಮತ್ತು ದುರ್ಬಲ ಆಗಿ ಹೋಗುತ್ತಿದೆ, ಹಾಗಾದರೆ ಮುಂದೆ ಏನಾಗುತ್ತದೆ?'  - ಈ ಪ್ರಶ್ನೆಗೆ ಉತ್ತರವನ್ನು ಕೊಡಲು ಭಗವಾನ್ ಅತ್ರಿ ಈ ಎಲ್ಲಾ ಲೀಲೆಯನ್ನು ಮಾಡಿಸಿದ್ದಾರೆ.

ನೀವೇನು, ನಾನೂ ಕೂಡ ಮತ್ತು ಜೇಷ್ಠ ಭ್ರಾತ ಹನುಮಂತ ಮತ್ತು ಶ್ರೀದತ್ತಾತ್ರೇಯರು ಕೂಡ ಅತ್ರಿ-ಅನಸೂಯರ ಮುಂದೆ ಬಾಲ್ಯಭಾವದಲ್ಲಿಯೇ ಇರುತ್ತೇವೆ.

ಮತ್ತು ನಿಖರವಾಗಿ ಇದನ್ನೇ ನೀವೆಲ್ಲಾ ಮರೆಯುತ್ತಿದ್ದೀರಿ ಮತ್ತು ಅದಕ್ಕಾಗಿಯೇ ನೀವು ಗುಣಗಳು ಕಡಿಮೆ ಸಿಕ್ಕಿದ ಕಾರಣ ಲಜ್ಜಿತರಾಗಿದ್ದೀರಿ. ಹಾಗಾಗಲು ಯಾವುದೇ ಕಾರಣವಿಲ್ಲ; ಏಕೆಂದರೆ ಬ್ರಹ್ಮರ್ಷಿ ಅಗಸ್ತ್ಯರು ಬೇರೆ ಮತ್ತು ಅತ್ರಿ-ಅನಸೂಯರ ಮುಂದೆ ನಿಂತಿರುವ ಬಾಲ್ಯದ ಭಾವದಲ್ಲಿರುವ ಅಗಸ್ತ್ಯರು ಬೇರೆ.

ನೋಡಿ! ಇಲ್ಲಿ ನಡೆದಿರುವ ಎಲ್ಲಾ ಕೃತಿಗಳ ಕಡೆಗೆ ಸರಿಯಾಗಿ ನೋಡಿ! ನಿಮ್ಮ ಕೈಯಿಂದ ಆಗಿರುವ ಮೊದಲ ತಪ್ಪು ಏನೆಂದರೆ - ನೀವು ಅತ್ರಿಋಷಿಯ ಆಜ್ಞೆಯನ್ನು ಪಾಲಿಸಿ ಪತ್ರಾವಳಿ ಮತ್ತು ದ್ರೋಣಗಳನ್ನು ಮಾಡಿದ್ದೀರಿ; ಆದರೆ ಸ್ವತಃ ಭಗವಾನ್ ಅತ್ರಿಯರು ದ್ರೋಣಗಳನ್ನು ಮಾಡುತ್ತಿರುವಾಗ ನೀವು ಅವರ ಕೃತಿಯನ್ನು ಸರಿಯಾಗಿ ವೀಕ್ಷಣೆ ಮಾಡಿಲ್ಲ ಮತ್ತು ಅದಕ್ಕಾಗಿಯೇ ಅತ್ರಿಋಷಿ ಸ್ವತಃ ಮಾಡಿದ ವಸ್ತುಗಳನ್ನು ಯಾವ ರೀತಿಯಲ್ಲಿ ವರ್ಗೀಕರಿಸಿದರು, ಅದು ನಿಮ್ಮ ಗಮನಕ್ಕೆ ಬರಲಿಲ್ಲ.

ಸರಿಯಾಗಿ ಇದೇ ತಪ್ಪು ಈ ಕಲ್ಪದ ಸತ್ಯಯುಗದ ಮನುಷ್ಯನಿಂದಲೂ ಆಗುತ್ತಿದೆ. ಅವನು ಜ್ಞಾನಾರ್ಜನೆಯನ್ನು ಮಾಡುತ್ತಿದ್ದಾನೆ, ಕೆಲಸವನ್ನೂ ಮಾಡುತ್ತಿದ್ದಾನೆ. ಆದರೆ ಈ ಕಲ್ಪದ ಈ ಮನುಷ್ಯನು ವೀಕ್ಷಣಾ ಶಕ್ತಿಯನ್ನು ಉಪಯೋಗಿಸುವುದರಲ್ಲಿ ಹಿಂದೆ ಬೀಳುತ್ತಿದ್ದಾನೆ.

ಮತ್ತು ಸರಿಯಾಗಿ ಇದನ್ನೇ ಭಗವಾನ್ ಅತ್ರಿ ನಿಮಗೆ ತೋರಿಸಿ ಕೊಟ್ಟಿದ್ದಾರೆ.

ನಿಮ್ಮ ಪ್ರಶ್ನೆಯ ಅರ್ಧ ಉತ್ತರ ನಿಮಗೆ ಸಿಕ್ಕಿದೆಯಲ್ಲವೇ?".

ಆನಂದಿತರಾದ ಎಲ್ಲಾ ಬ್ರಹ್ಮರ್ಷಿಗಳು ತಕ್ಷಣವೇ 'ಸಾಧು ಸಾಧು' ಎಂದು ಹೇಳುತ್ತಾ ಭಗವಾನ್ ತ್ರಿವಿಕ್ರಮನ ಮಾತಿಗೆ ಸಮ್ಮತಿ ನೀಡಿದರು.

ಈಗ ಭಗವಾನ್ ತ್ರಿವಿಕ್ರಮನು ಮುಂದೆ ಮಾತನಾಡಲು ಪ್ರಾರಂಭಿಸಿದರು, "ಪ್ರೀತಿಯ ಬ್ರಹ್ಮರ್ಷಿ ಗಣಗಳೇ! ಈಗ ಪ್ರಶ್ನೆಯ ಉತ್ತರದ ಉತ್ತರಾರ್ಧದ ಬಗ್ಗೆ.

ನೀವು ಮಾಡಿದ ತಪ್ಪು, ಈ ಎಲ್ಲಾ ಮಹರ್ಷಿಗಳು ಕೂಡ ಮಾಡಿದರು.

ಏಕೆಂದರೆ ನೀವೆಲ್ಲಾ ಮಹರ್ಷಿಗಳು ಮತ್ತು ಋಷಿಗಳ ಶಿಕ್ಷಕ-ಗುರುಗಳಾಗಿದ್ದೀರಿ ಮತ್ತು ನಿಮಗೆ ಬಂದಿರುವ ಅನುಭವವನ್ನು ನಿಮ್ಮ ಶಿಷ್ಯರಿಗೆ ಆಜ್ಞೆ ಮಾಡುವಾಗ ಅವರ ಎದುರಿಗೆ ಪ್ರಾಮಾಣಿಕವಾಗಿ ಇಡಲೇ ಇಲ್ಲ.

ಶಿಕ್ಷಕನು ಸ್ವತಃ ವಿದ್ಯಾರ್ಥಿದಶೆಯಲ್ಲಿ ಮಾಡಿದ ತಪ್ಪುಗಳಿಂದಲೇ ನಿಧಾನವಾಗಿ ವಿಕಸಿತನಾಗುತ್ತಾ ಹೋಗುತ್ತಾನೆ ಮತ್ತು ಅವನು ಅದೇ ಅನುಭವಗಳನ್ನು ತನ್ನ ವಿದ್ಯಾರ್ಥಿಗಳಿಗೆ ಹೇಳಿ, ಅವರ ವಿಕಸಿತವಾಗುವುದನ್ನು ಸುಲಭಗೊಳಿಸಬೇಕು.

ಅದು ಕೂಡ ಇಲ್ಲಿ ಆಗಲಿಲ್ಲ ಮತ್ತು ಅದಕ್ಕಾಗಿಯೇ ನಿಮ್ಮ ಈ ಒಳ್ಳೆಯ ವಿದ್ಯಾರ್ಥಿಗಳಿಗೆ ಕೂಡ ಬಹಳ ಕಡಿಮೆ ಗುಣಗಳು ಸಿಕ್ಕಿದವು.

ಈ ವಸುಂಧರೆಯಲ್ಲಿ ಈ ಕಲ್ಪದಲ್ಲಿ ಈಗ ಸರಿಯಾಗಿ ಇದೇ ಆಗುತ್ತಿದೆ. ನೀವು ನಿಮ್ಮ ಶಿಷ್ಯರನ್ನು ತಯಾರಿಸುವುದರಲ್ಲಿ ಅಂದರೆ ಮಹರ್ಷಿಗಳು ಮತ್ತು ಋಷಿಗಳನ್ನು ತಯಾರಿಸುವುದರಲ್ಲಿ ಎಲ್ಲಿಯೂ ತಪ್ಪಿಲ್ಲ ಮತ್ತು ಅವರೂ ಕೂಡ ಬೇರೆ ಬೇರೆ ಅಧ್ಯಾಪಕರನ್ನು ವ್ಯವಸ್ಥಿತವಾಗಿ ರೂಪಿಸುತ್ತಿದ್ದಾರೆ.

ಆದರೆ ಈ ಋಷಿಗಳು ಆಗಿರದ ಅಧ್ಯಾಪಕರು, ತಮ್ಮ ತಪ್ಪುಗಳಿಂದ ತಾವು ಏನನ್ನು ಕಲಿತಿದ್ದಾರೋ, ಅದನ್ನು ತಮ್ಮ ವಿದ್ಯಾರ್ಥಿಗಳ ಎದುರಿಗೆ ಇಡುತ್ತಿಲ್ಲ ಮತ್ತು ಮುಖ್ಯವಾಗಿ * ವೀಕ್ಷಣೆ * ಮತ್ತು ವೀಕ್ಷಣೆಯ ನಂತರದ * ಕೃತಿ * ಈ ಕ್ರಮವು ವಿದ್ಯಾರ್ಥಿಗಳಿಗೆ ಸಿಗುತ್ತಿಲ್ಲ ಮತ್ತು ಅದಕ್ಕಾಗಿಯೇ ಈ ಕಲ್ಪದಲ್ಲಿ ಮನುಷ್ಯನ ಕಾರ್ಯಕ್ಷಮತೆಯು ಬಹಳ ಬೇಗ ಕಡಿಮೆ ಆಗುತ್ತಾ ಹೋಗುತ್ತಿದೆ".

ಭಾವಪೂರ್ಣರಾದ ಎಲ್ಲಾ ಬ್ರಹ್ಮರ್ಷಿಗಳು ಮೊದಲು ಅತ್ರಿ-ಅನಸೂಯರ ಪಾದಗಳನ್ನು ಹಿಡಿದರು ಮತ್ತು ನಂತರ ತ್ರಿವಿಕ್ರಮನಿಗೂ ಕೂಡ ನಮಸ್ಕರಿಸಿದರು.

ಆದರೆ ಬ್ರಹ್ಮರ್ಷಿ ಯಜ್ಞವಲ್ಕ್ಯರಿಗೆ ಏನೋ ನೆನಪಾಗಿ ವಿಚಾರದಲ್ಲಿ ಮುಳುಗಿಹೋದಂತೆ ಆದರು. ಅದನ್ನು ತಿಳಿದು ತ್ರಿವಿಕ್ರಮನು ಅವರನ್ನು ನೇರವಾಗಿ ಪ್ರಶ್ನೆ ಕೇಳಿದರು, "ಹೇ ಬ್ರಹ್ಮರ್ಷಿ ಯಜ್ಞವಲ್ಕ್ಯರೇ! ನೀವು ಸರ್ವಶ್ರೇಷ್ಠ ಅಧ್ಯಾಪಕರಾಗಿದ್ದೀರಿ. ನೀವು ಏಕೆ ಹೀಗೆ ಯೋಚನೆಯಲ್ಲಿ ಮುಳುಗಿ ಹೋಗಿದ್ದೀರಿ? ನಿಮ್ಮ ಮನಸ್ಸಿನಲ್ಲಿ ಏನಾದರೂ ಪ್ರಶ್ನೆ ಇದೆಯೇ? ನೀವು ನನಗೆ ಯಾವುದೇ ಪ್ರಶ್ನೆಯನ್ನು ಕೇಳಬಹುದು".

ಬ್ರಹ್ಮರ್ಷಿ ಯಜ್ಞವಲ್ಕ್ಯರು ಹೇಳಿದರು, "ಹೇ ತ್ರಿವಿಕ್ರಮನೇ! ಆದರೆ ನಮ್ಮ ಪ್ರಶ್ನೆಗೆ ಒಂದು ಅಪವಾದವಿತ್ತು ಮತ್ತು ಇದೆ. ಬ್ರಹ್ಮರ್ಷಿ ಧೌಮ್ಯರ ಆಶ್ರಮದಲ್ಲಿ ಎಲ್ಲವೂ ವ್ಯವಸ್ಥಿತವಾಗಿ ನಡೆಯುತ್ತಿದೆ ಮತ್ತು ಅದರ ಕಾರಣವೂ ತಿಳಿದು ಬರುತ್ತಿಲ್ಲ. ಅಲ್ಲಿ ಎಲ್ಲರೂ ವ್ಯವಸ್ಥಿತವಾಗಿ ವೀಕ್ಷಣೆ ಮಾಡಿ ಬಹಳ ಸುಂದರವಾದ ಕೆಲಸ ಮಾಡುತ್ತಿರುತ್ತಾರೆ. ಇದಕ್ಕೆ ಕಾರಣವೇನು?".

ಧೌಮ್ಯಋಷಿಗಳೂ ಕೂಡ ಯಜ್ಞವಲ್ಕ್ಯರ ಮಾತನ್ನು ಅನುಮೋದಿಸಿದರು, "ಹೌದು! ಆದರೆ ನನಗೆ ಕೂಡ ಅದರ ಕಾರಣ ತಿಳಿದುಕೊಳ್ಳಲು ಸಾಧ್ಯವಾಗಿಲ್ಲ".

 

ಭಗವಾನ್ ತ್ರಿವಿಕ್ರಮನು ಒಂದು ಮಂದಹಾಸವನ್ನು ಬೀರಿ ಹೇಳಿದರು, "ಆದಿಮಾತೆಯು ಯಾವುದೇ ಪ್ರಶ್ನೆಯು ನಿರ್ಮಾಣವಾಗುವುದಕ್ಕೆ ಮುಂಚೆಯೇ, ಅದರ ಉತ್ತರವನ್ನು ತಯಾರಿಸಿ ಇಟ್ಟಿರುತ್ತಾರೆ.

ಬ್ರಹ್ಮರ್ಷಿ ಧೌಮ್ಯರು 100 ವರ್ಷ ದೇಶಸಂಚಾರಕ್ಕೆ ಹೋಗಿದ್ದಾಗ ಅವರ ಆಶ್ರಮದ ಜವಾಬ್ದಾರಿಯನ್ನು ಅವರ ಜೇಷ್ಠ ಪುತ್ರ ಮಹರ್ಷಿ ಮಂದಾರ ಮತ್ತು ಅವರ ಪತ್ನಿ ರಾಜಯೋಗಿನಿ ಶಮೀ ಇವರು ನೋಡಿಕೊಳ್ಳುತ್ತಿದ್ದರು.

ನಿಮಗೆ ಎದುರಾದ ಪ್ರಶ್ನೆಯು ಅವರಿಗೆ 99 ವರ್ಷಗಳ ಹಿಂದೆಯೇ ಎದುರಾಗಿತ್ತು ಮತ್ತು ಇದಕ್ಕಾಗಿ ಅವರು ಅನೇಕ ಸಂಶೋಧನೆಗಳನ್ನು ಮಾಡಿದರು. ಆದರೆ ಯಾವುದೇ ರೀತಿಯಿಂದಲೂ ಅವರಿಗೆ ಉತ್ತರ ಸಿಗುತ್ತಿರಲಿಲ್ಲ ಮತ್ತು ಅದೇ ಸಮಯದಲ್ಲಿ ಅಸುರರ ಗುರುಕುಲದಲ್ಲಿ ಅವರ ಆಸುರಿ ಕೆಲಸವು ಶಿಸ್ತಿನಿಂದ ಸರಿಯಾಗಿ ನಡೆಯುತ್ತಿದೆ ಎಂದು ಇವರಿಗೆ ತಿಳಿದುಬಂದಿತು.

ಮತ್ತು ಇವರಿಬ್ಬರೂ ಆದಿಮಾತೆಯವರ ಚರಣಗಳಲ್ಲಿ ತಮ್ಮ ತಪಸ್ಸು ಮತ್ತು ಪವಿತ್ರತೆಯನ್ನು ಸುರಕ್ಷಿತವಾಗಿ ಇರಿಸಿ, * ದೇವರ್ಷಿ ನಾರದರ ಜೊತೆಗೆ * ಅವರು ತಾಮ್ರತಾಮಸ ಅರಣ್ಯಕ್ಕೆ ಹೋದರು ಮತ್ತು ಅವರಿಗೆ ಕೆಲವೇ ದಿನಗಳಲ್ಲಿ ಜ್ಞಾನಾರ್ಜನೆ ಮತ್ತು ಕಾರ್ಯದಲ್ಲಿರುವ ವೀಕ್ಷಣಾ ಶಕ್ತಿ ಮತ್ತು ಶಿಕ್ಷಕರು ತಮ್ಮ ಹಿಂದಿನ ಜೀವನದ ತಪ್ಪುಗಳನ್ನು ವಿದ್ಯಾರ್ಥಿಗಳ ಎದುರಿಗೆ ಕಥೆಗಳ ರೂಪದಲ್ಲಿ ಪ್ರಸ್ತುತಪಡಿಸುವುದರ ಮಹತ್ವ ತಿಳಿದುಬಂತು ಮತ್ತು ಅವರು ತಕ್ಷಣವೇ ತಮ್ಮ ಆಶ್ರಮಕ್ಕೆ ಹಿಂದಿರುಗಿದರು. \

ಆದಿಮಾತೆಯಿಂದ ಅವರಿಗೆ ತಮ್ಮ ಪವಿತ್ರತೆ ಮತ್ತು ತಪಸ್ಸು ಮರಳಿ ಸಿಕ್ಕಿದ ನಂತರ ಅವರು ವೀಕ್ಷಣಾ ಶಕ್ತಿಯ ಮತ್ತು ತಪ್ಪುಗಳನ್ನು * ಕಥೆಗಳ ರೂಪದಲ್ಲಿ * ವಿದ್ಯಾರ್ಥಿಗಳ ಎದುರಿಗೆ ಪ್ರಸ್ತುತಪಡಿಸುವುದರ ಅಧ್ಯಯನವನ್ನು ಪ್ರಾರಂಭಿಸಿದರು. ಒಂದು ದಿನ ಈ ರೀತಿಯಾಗಿ ಚಿಂತನೆ ಮಾಡುತ್ತಾ ಅವರು ಧ್ಯಾನಮಗ್ನರಾದರು ಮತ್ತು ಆ ಧ್ಯಾನದಲ್ಲಿ ಅವರಿಗೆ ತಾಮ್ರತಾಮಸದಲ್ಲಿರುವ ವಿದ್ಯಾಲಯಗಳು ಕಾಣಿಸತೊಡಗಿದವು ಮತ್ತು ಅವರಿಗೆ ತಾವು ಅರಿವಿಲ್ಲದೆ ಅಸುರರನ್ನು ಅನುಕರಿಸಿದ್ದೇವೆ ಎಂದು ತಿಳಿದುಬಂತು - ಒಳ್ಳೆಯದಕ್ಕಾಗಿ ಇದ್ದರೂ, ಅಸುರರನ್ನು ಅನುಕರಿಸುವುದು ಕೆಟ್ಟ ವಿಷಯವೇ.

ಮತ್ತು ಅದಕ್ಕಾಗಿಯೇ ಅವರಿಬ್ಬರೂ ಪ್ರಾಯಶ್ಚಿತ್ತವಾಗಿ ತಮ್ಮ ಎಲ್ಲಾ ಸಾಧನೆ, ಉಪಾಸನೆ, ತಪಸ್ಸು ಮತ್ತು ಪವಿತ್ರತೆಯನ್ನು ದೇವರ್ಷಿ ನಾರದರಿಗೆ ದಾನವಾಗಿ ಕೊಟ್ಟರು.

ಅವರ ಈ ಸಾತ್ತ್ವಿಕ ಆಚರಣೆಯಿಂದ ಆದಿಮಾತೆಯು ಅತ್ಯಂತ ಪ್ರಸನ್ನರಾದರು ಮತ್ತು ಅವರು ಅವರಿಗೆ ವರವನ್ನು ಕೇಳಲು ಹೇಳಿದರು.

ಅವರಿಬ್ಬರೂ ನನ್ನನ್ನೇ ಆರಾಧ್ಯ ದೈವವೆಂದು ನಂಬಿದ್ದರಿಂದ ಅವರಿಬ್ಬರೂ ನನ್ನ ಬಳಿಯೇ ಮಾರ್ಗವನ್ನು ಕೇಳಿದರು, ನನ್ನ ಬಳಿಯೇ ಅವರು ತಮಗಾಗಿ ಆದಿಮಾತೆಯವರಿಂದ ವರವನ್ನು ಕೇಳಲು ಹೇಳಿದರು.

ಮತ್ತು ಈ ರೀತಿಯಾಗಿ ನನ್ನನ್ನು ಇಕ್ಕಟ್ಟಿಗೆ ಸಿಲುಕಿಸಿದರು. ನಾನು ಅವರಿಗೆ ಸರಿಯಾದ ವರವನ್ನು ಕೇಳುವ ಬುದ್ಧಿಯನ್ನು ಕೊಟ್ಟ ತಕ್ಷಣವೇ ಅವರಿಬ್ಬರೂ ಆದಿಮಾತೆಯನ್ನು ಕೇಳಿದರು, "ಹೇ ಆದಿಮಾತೆಯೇ! ಅಸುರರನ್ನು ಅನುಕರಿಸುವುದನ್ನು ಬಿಟ್ಟು ಸರಿಯಾದ ವೀಕ್ಷಣಾ ಶಕ್ತಿ ಮತ್ತು ಸರಿಯಾದ ಬೋಧನಾ ಮಾರ್ಗವು ಎಲ್ಲಿಂದ ಹುಟ್ಟಿಕೊಳ್ಳುತ್ತದೆ ಮತ್ತು ಅದನ್ನು ಹೇಗೆ ಪಡೆಯಬೇಕು, ಅದನ್ನು ನಮಗೆ ಹೇಳುತ್ತೀಯಾ? ನಮಗೆ ಇದೇ ವರ ಬೇಕಾಗಿದೆ.

ಇಷ್ಟೇ ಅಲ್ಲದೇ, ಅಸುರರ ಭೂಮಿಯಲ್ಲಿ ಕೂಡ ಪವಿತ್ರ ಶ್ರದ್ಧಾವಂತರು ಚೆನ್ನಾಗಿ ವೀಕ್ಷಣಾಪೂರ್ವಕವಾಗಿ ಕಾರ್ಯ ಮಾಡಲು ಸಾಧ್ಯವಾಗುವುದರ ಮೂಲವನ್ನು ಕೂಡ ನಮಗೆ ತಿಳಿಸು".

 

ಅದರೊಂದಿಗೆ ಆದಿಮಾತೆಯು ಅವರಿಬ್ಬರಿಗೂ 'ತಥಾಸ್ತು' ಎಂದು ವರವನ್ನು ಕೊಟ್ಟು, ಅವರಿಗೆ ಮಾರ್ಗದರ್ಶನ ಮಾಡುವಂತೆ ನನಗೆ ಹೇಳಿದರು. ನಾನು ಅವರಿಬ್ಬರನ್ನೂ ಕರೆದುಕೊಂಡು ಈ ನೈಮಿಷಾರಣ್ಯಕ್ಕೆ ಬಂದೆ ಮತ್ತು ಅವರಿಗೆ ಅತ್ಯುನ್ನತ ಧ್ಯಾನವನ್ನು ಕಲಿಸಿದೆ ಮತ್ತು ಆ ಧ್ಯಾನದ ಮೂಲಕ ನಾನು ಅವರಿಗೆ ಬುದ್ಧಿಯ ಆಚೆಗಿರುವ ಜ್ಞಾನವನ್ನು, ಆಸುರಿ ಶಕ್ತಿಗಳ ಆಚೆಗಿರುವ ಸತ್ವದ ಮೂಲವನ್ನು ತೋರಿಸಿದೆ.

ಆ ಮೂಲವು ಅಂದರೆ ಪ್ರತಿಯೊಬ್ಬರ ಮೂಲಾಧಾರ ಚಕ್ರದ ಸ್ವಾಮಿಯಾಗಿರುವ ಭಗವಾನ್ ಶ್ರೀಮೂಲಾರ್ಕ ಗಣಪತಿಯೇ.

ತಮ್ಮದೇ ಮೂಲಾಧಾರ ಚಕ್ರದಲ್ಲಿ ಮತ್ತು ಅದರ ಜೊತೆಗೆ ವಸುಂಧರೆಯ ಮೂಲಾಧಾರ ಚಕ್ರದಲ್ಲಿ ಶ್ರೀಮೂಲಾರ್ಕ ಗಣಪತಿಯನ್ನು ನೋಡುತ್ತಿದ್ದಾಗ, ಅವರಿಬ್ಬರ ಸಂಪೂರ್ಣವಾಗಿ ಸಮರ್ಪಿತರಾಗುವ ಇಚ್ಛೆಯು ಅತ್ಯಂತ ಪ್ರಬಲವಾಗುತ್ತಾ ಹೋಯಿತು ಮತ್ತು ಅದು ಅತ್ಯುನ್ನತ ಹಂತವನ್ನು ತಲುಪಿತು.

ಮತ್ತು ಅವರ ಈ ಸರ್ವೋಚ್ಚ, ಸರ್ವೋತ್ಕೃಷ್ಟ ಇಚ್ಛೆಯು ಆದಿಮಾತೆಗೆ ಅತ್ಯಂತ ಇಷ್ಟವಾಯಿತು ಮತ್ತು ಶ್ರೀಗಣಪತಿಗೆ ಅತ್ಯಂತ ಪ್ರಿಯವಾಯಿತು.

ನಂತರ ಮಹರ್ಷಿ ಮಂದಾರನಿಂದ ಒಂದು ವೃಕ್ಷವು ನಿರ್ಮಾಣವಾಯಿತು ಮತ್ತು ರಾಜಯೋಗಿನಿ ಶಮೀಯಿಂದ ಒಂದು ಸೂಕ್ಷ್ಮ ಸಸಿ ನಿರ್ಮಾಣವಾಯಿತು.

ಅಂದರೆ ಮಂದಾರ ವೃಕ್ಷ ಮತ್ತು ಶಮೀ ಸಸ್ಯವು ಮೊದಲ ಬಾರಿಗೆ ಹುಟ್ಟಿಕೊಂಡವು.

ಮತ್ತು ಅದರೊಂದಿಗೆ ಆದಿಮಾತೆಯು ವರವನ್ನು ಕೊಟ್ಟರು, ಯಾರು ಶ್ರೀಗಣಪತಿಯ ಯಾವುದೇ ಪ್ರತಿಮೆಯ ಪೂಜೆಯನ್ನು, ವಿಶೇಷವಾಗಿ ಮೂಲಾರ್ಕ ಗಣಪತಿಯ ಪೂಜೆಯನ್ನು ಮಂದಾರ ವೃಕ್ಷದ ಕೆಳಗೆ ಮತ್ತು ಶಮೀಪತ್ರಗಳಿಂದ ಮಾಡುತ್ತಾರೋ, ಅವರಿಗೆ ಈ ಬುದ್ಧಿಯ ಆಚೆಗಿರುವ ವೀಕ್ಷಣಾ ಶಕ್ತಿ ಮತ್ತು ಆಸುರಿ ಪರಿಸ್ಥಿತಿಗಳಲ್ಲಿ ಕೂಡ ಸಂಕಟಗಳಿಂದ ಮುಕ್ತವಾಗಿರುವ ಶಕ್ತಿ ಅಂದರೆ ದೈವಿ ಪ್ರಜ್ಞೆ (ದೈವಿ ಪ್ರತಿಭೆ) ಪ್ರಾಪ್ತವಾಗುತ್ತದೆ.

ಈ ರೀತಿಯಾಗಿ ಈ ನೈಮಿಷಾರಣ್ಯದಲ್ಲಿ ವಿಶ್ವದ ಮೊದಲ ಮಂದಾರ ವೃಕ್ಷ ಮತ್ತು ಮೊದಲ ಶಮೀ ಸಸ್ಯವು ನಿರ್ಮಾಣವಾದವು.

ಒಂದು ನಿಮಿಷದಲ್ಲಿ (ಕಣ್ಣು ರೆಪ್ಪೆ ಹೊಡೆಯುವ ಸಮಯ) ಮಂದಾರ ವೃಕ್ಷವು ಅರಳಿದ್ದರಿಂದ ಅದಕ್ಕೆ 'ನಿಮಿಷ ವೃಕ್ಷ' ಎಂದು ಹೆಸರನ್ನು ನಾನೇ ಕೊಟ್ಟೆ ಮತ್ತು ಇತ್ತೀಚೆಗೆ ನಡೆದ ತ್ರಿಪುರಾಸುರ ಯುದ್ಧದ ಸಮಯದಲ್ಲಿ ಶಿವಪುತ್ರರ ಬಾಣಗಳನ್ನು ಮಂದಾರ ವೃಕ್ಷದ, ಶಮಿಯ ರಸದಲ್ಲಿ ಅದ್ದಿದ ಸಮಿಧೆಗಳಿಂದ ನಾನೇ ಸ್ವತಃ ತಯಾರಿಸಿದೆ.

ಮತ್ತು ಅದಕ್ಕಾಗಿಯೇ ಶಿವಪುತ್ರರ ಈಟಿಗಳು ಮತ್ತು ಬಾಣಗಳು ತಾಮ್ರತಾಮಸ ಅರಣ್ಯದ ಭೂಮಿಯಲ್ಲಿ ನೆಡಲ್ಪಟ್ಟ ತಕ್ಷಣ, ಶ್ರದ್ಧಾವಂತರನ್ನು ರಕ್ಷಿಸಲು ಅಲ್ಲಿ ಅಲ್ಲಲ್ಲಿ (ಎಲ್ಲೆಡೆ) ಮಂದಾರ ವೃಕ್ಷ ಮತ್ತು ಶಮಿಯ ನಿರ್ಮಾಣವಾಯಿತು ".

ಈ ಕಥೆಯನ್ನು ಕೇಳಿ ಎಲ್ಲಾ ಬ್ರಹ್ಮರ್ಷಿಗಳು ಅತ್ಯಂತ ಸಂತೋಷದಿಂದ ಧೌಮ್ಯಋಷಿಯನ್ನು ಅಭಿನಂದಿಸಲು ಪ್ರಾರಂಭಿಸಿದರು.

ಮತ್ತು ಅಷ್ಟರಲ್ಲಿ ಅವರೆಲ್ಲರಿಗೂ ತಮ್ಮ ಎದುರಿಗೆ ಮಂದಾರ ಮತ್ತು ಶಮೀ ಇವೆ ಎಂದು ತಿಳಿದುಬಂತು. ಎಲ್ಲಾ ಬ್ರಹ್ಮರ್ಷಿಗಳು ಅತ್ಯಂತ ಪ್ರೀತಿಯಿಂದ, ವಾತ್ಸಲ್ಯದಿಂದ ಮತ್ತು ಗೌರವದಿಂದ ಮಂದಾರ ವೃಕ್ಷವನ್ನು ಆಪ್ಪಿಕೊಂಡರು.

ಮತ್ತು ಅದರೊಂದಿಗೆ ತ್ರಿವಿಕ್ರಮನು ಆ ಎಲ್ಲಾ ಬ್ರಹ್ಮರ್ಷಿಗಳ, ಸಾಮಾನ್ಯ ಶ್ರದ್ಧಾವಂತರ ಬಗ್ಗೆ ಇರುವ ಕರುಣೆಯನ್ನು * ನೀರಿನಂತೆ * ಆ ಮಂದಾರ ವೃಕ್ಷದ ಬೇರುಗಳಿಗೆ ಅರ್ಪಿಸಿದರು ಮತ್ತು ಆ ಮಂದಾರ ವೃಕ್ಷದ ಬೇರಿನಿಂದ ಭಗವಾನ್ ತ್ರಿವಿಕ್ರಮನ ಕೈಗೆ ಈ ವಿಶ್ವದ ಮೂಲಾರ್ಕ ಗಣೇಶನ ಆದಿ ಸ್ವಯಂಭೂ ಮೂರ್ತಿ  ಯು ಬಂತು.

ಬ್ರಹ್ಮವಾದಿನಿ ಲೋಪಾಮುದ್ರೆಯು ಕೈಲಾಸದಲ್ಲಿರುವ ಎಲ್ಲರಿಗೂ ಮುಂದೆ ಹೇಳಲು ಪ್ರಾರಂಭಿಸಿದರು, "ಅದೇ ಆ ಕ್ಷಣ, ಯಾವಾಗ ಸ್ವಯಂಭೂ ಮೂಲಾರ್ಕ ಗಣೇಶನ ಮೂರ್ತಿಯನ್ನು ತ್ರಿವಿಕ್ರಮನು ನೈಮಿಷಾರಣ್ಯದಲ್ಲಿ ಅತ್ರಿಋಷಿಯವರ ಆಶ್ರಮದ ಎದುರು ಸ್ಥಾಪಿಸಿದರು.

ಯಾಕಾಗಿ?

ಮೂಲಾರ್ಕ ಗಣೇಶನ ಮಂತ್ರ ಪಠಣದಿಂದ ಮನುಷ್ಯನ ಪ್ರಜ್ಞೆ ಅಂದರೆ ಭಗವಂತನು ಅವನಿಗೆ ಕೊಟ್ಟ ಬುದ್ಧಿಯು, ಮನುಷ್ಯನ ಮಾನವ ಬುದ್ಧಿಯ ಮೇಲೆ ಮತ್ತು ಮಾನವ ಮನಸ್ಸಿನ ಮೇಲೆ ಅಧಿಕಾರವನ್ನು ಸ್ಥಾಪಿಸುತ್ತದೆ ಮತ್ತು ಶ್ರದ್ಧಾವಂತರನ್ನು ಎಲ್ಲಾ ಸಂಕಟ ಮತ್ತು ತಪ್ಪುಗಳಿಂದ ಮುಕ್ತಗೊಳಿಸುತ್ತದೆ"