ಪ್ರಫುಲ್ಲ ಚಾಕಿ ಅವರು ತಿಲಕರ ಬಂಗಾಳದ ಪ್ರಮುಖ ಸಹಚರ ಅರವಿಂದ ಘೋಷ್ ಮತ್ತು ಭಗಿನಿ ನಿವೇದಿತಾ ಅವರ ಭಾಷಣಗಳು ಹಾಗೂ ಚರ್ಚಾಗೋಷ್ಠಿಗಳ ಪ್ರಭಾವದಿಂದ ಸಂಪೂರ್ಣವಾಗಿ ಧೇಯಾಸಕ್ತರಾದ ತರುಣರು, ಬ್ರಿಟಿಷರ ಆಡಳಿತವನ್ನು ಕಿತ್ತೊಗೆಯಲು ಅವರು ತುಡಿಯುತ್ತಿದ್ದರು. ಅದರಲ್ಲೂ ತಿಲಕರ ಕಲ್ಕತ್ತಾದ ಭಾಷಣ ಕೇಳಿದ ಮೇಲೆ ಮತ್ತು ವಿಶೇಷವಾಗಿ ಅವರ ‘ಆ’ ಪ್ರಸಿದ್ಧ ಸುದ್ದಿಗೋಷ್ಠಿಯನ್ನು ನೋಡಿದ ಮೇಲಂತೂ ಪ್ರಫುಲ್ಲ ಚಾಕಿಯವರಿಗೆ ಒಂದು ವಿಷಯ ಖಾತ್ರಿಯಾಯಿತು—ಕೇವಲ ತಿಲಕರು ಮಾತ್ರ ಭಾರತವನ್ನು ಬ್ರಿಟಿಷರ ಗುಲಾಮಗಿರಿಯಿಂದ ಮುಕ್ತಗೊಳಿಸಲು ಸಾಧ್ಯ ಎಂದು.
ಇದೇ ಕಲ್ಕತ್ತಾದ ಸಭೆಯಲ್ಲಿ ಅವರಿಗೆ ಒಬ್ಬ ಹೊಸ ಗೆಳೆಯ ಸಿಕ್ಕಿದ—ಅವನೇ ಖುದಿರಾಮ್ ಬೋಸ್. ಈ ಖುದಿರಾಮ್ ಬೋಸ್ ಯಾವಾಗ ಅರವಿಂದ ಘೋಷರ ಸಹಚರ ಗುಂಪಿನ ಮೆಂಬರ್ ಆದರೋ ಎಂಬುದು ಯಾರಿಗೂ ತಿಳಿಯಲೇ ಇಲ್ಲ. ಅವರ ಮನೆಯ ತಂದೆ, ತಾಯಿ, ಮೂವರು ಅಕ್ಕತಂಗಿಯರಿಗೆ ಮಾತ್ರವಲ್ಲ, ಘೋಷರ ಸಂಘಟನೆಯಾದ ‘ಬಂಗಾಳ ಸ್ವದೇಶಿ ಮೂವ್‌ಮೆಂಟ್’ನ ಹಿರಿಯ ಸಹೋದ್ಯೋಗಿಗಳಿಗೂ ಇದು ಗೊತ್ತಿರಲಿಲ್ಲ. ಯಾಕೆಂದರೆ ಇವರು ಎಲ್ಲಿಯೂ ‘ಕಾರ್ಯಕರ್ತ’ ಎಂದು ಹೆಸರು ನೋಂದಾಯಿಸಿಕೊಳ್ಳಲೇ ಇಲ್ಲ.
ಸಣ್ಣ ವಯಸ್ಸಿನ ಈ ಹುಡುಗ ಖುದಿರಾಮ್ ಬೋಸ್ ಎಷ್ಟೊಂದು ಪರಿಪಕ್ವವಾಗಿದ್ದರೆಂದರೆ, ಈ ಚಳವಳಿಯಲ್ಲಿ ಭಾಗವಹಿಸಲು ಶುರು ಮಾಡಿದಾಗಲೇ ಅವರಿಗೆ ಒಂದು ವಿಷಯ ಅರ್ಥವಾಗಿತ್ತು—ಕ್ರಾಂತಿಕಾರಿ ಚಳವಳಿಯ ಯಶಸ್ಸು ಗೌಪ್ಯತೆಯ (Secrecy) ಮೇಲೆ ನಿಂತಿರುತ್ತದೆ ಎಂಬುದು. ಅವರು ‘ಸಂಘಟನೆಗಾಗಿ ಕರಪತ್ರಗಳನ್ನು ಮುದ್ರಿಸುವುದು, ಸಂದೇಶಗಳನ್ನು ರವಾನಿಸುವುದು, ಸಭೆ ನಡೆಸುವ ಕೊಠಡಿಗಳನ್ನು ಅಚ್ಚುಕಟ್ಟಾಗಿಡುವುದು ಮತ್ತು ಭೂಗತರಾದವರಿಗೆ ಊಟದ ಡಬ್ಬಿಗಳನ್ನು ತಲುಪಿಸುವ ಸಣ್ಣಪುಟ್ಟ ಕೆಲಸಗಳನ್ನು ಮಾಡುವ ಒಬ್ಬ ಸಾಮಾನ್ಯ ಕಾರ್ಯಕರ್ತ’ ಎಂದೇ ಆ ಗುಂಪಿನ ಪ್ರಮುಖ ನಾಯಕರ ಅಭಿಪ್ರಾಯವಾಗಿತ್ತು.
ಆದರೆ ಅರವಿಂದ ಘೋಷ್ ಒಬ್ಬರು ಮಾತ್ರ ಖುದಿರಾಮ್ ಅವರ ಕಣ್ಣಿನ ಭಾವನೆಗಳನ್ನು ಸರಿಯಾಗಿ ಗುರುತಿಸಿದ್ದರು. ಅವರು ಯಾರಿಗೂ ತಿಳಿಯದಂತೆ ಖುದಿರಾಮ್ ಬೋಸ್ ಅವರನ್ನು ತಮ್ಮ ಪರ್ಸನಲ್ ಅಸಿಸ್ಟೆಂಟ್ ಆಗಿ ನೇಮಿಸಿಕೊಂಡರು ಮತ್ತು ಇಲ್ಲಿಂದಲೇ ಖುದಿರಾಮ್ ಅವರ ಜೀವನ ಬದಲಾಯಿತು.
ಖುದಿರಾಮ್ ಬೋಸ್ ಮತ್ತು ಪ್ರಫುಲ್ಲ ಚಾಕಿ ಇಬ್ಬರೂ ಸೇರಿ ‘ಬಾಂಬ್ ತಯಾರಿಸುವುದು ಹೇಗೆ’ ಎಂಬ ಕಾರ್ಯಾಶಾಳೆಯಲ್ಲಿ ತರಬೇತಿ ಪಡೆಯಲು ಆರಂಭಿಸಿದರು. ಈ ಇಬ್ಬರೂ ತಿಲಕರನ್ನು ಭೇಟಿಯಾಗಿ ಬಂದ ಮೇಲಂತೂ ವಿವಿದ ಪ್ರಕಾರದ ಬಾಂಬ್‌ಗಳನ್ನು ತಯಾರಿಸುವ ಭರಾಟೆಯನ್ನೇ ಶುರು ಮಾಡಿದರು. ಇವರಿಬ್ಬರೂ ಸೇರಿ ಮೊದಲ ಬಾರಿಗೆ ಒಂದು ‘ಪುಸ್ತಕ-ಬಾಂಬ್’ (book-bomb) ತಯಾರಿಸಿದರು. ಆ ಪುಸ್ತಕವನ್ನು ಹಿಡಿದು ಹೋಗುವ ಇವರಂಥ ತರುಣ ಹುಡುಗನನ್ನು ನೋಡಿದರೆ ಯಾರಿಗಾದರೂ ಅವನು ಒಬ್ಬ ವಿದ್ಯಾರ್ಥಿ ಎಂದೇ
ಅನಿಸುತ್ತಿತ್ತು. ಪುಸ್ತಕದ ಮೊದಲ ಕೆಲವು ಪುಟಗಳನ್ನು ತೆರೆದು ನೋಡಿದರೂ ಪೊಲೀಸರಿಗೆ ಬಾಂಬ್ ಇರುವ ಬಗ್ಗೆ ಸಂಶಯವೇ ಬರುತ್ತಿರಲಿಲ್ಲ.
ಇವರಿಬ್ಬರು ಆ ಪುಸ್ತಕದ ಮಧ್ಯಭಾಗದಲ್ಲಿ ಬಾಂಬ್ ತಯಾರಿಸುವ ಸಾಮಗ್ರಿಗಳನ್ನು ಎಷ್ಟು ಚಾಣಾಕ್ಷತನದಿಂದ ಅಡಗಿಸಿಡುತ್ತಿದ್ದರೆಂದರೆ, ಆ ಪುಸ್ತಕದ ತೂಕ ಕೂಡ ಅಷ್ಟೇನೂ ಜಾಸ್ತಿ ಅನಿಸುತ್ತಿರಲಿಲ್ಲ.
ಮೂರು ಪೊಲೀಸ್ ಚೌಕಿಗಳ ಮೇಲೆ, ಇಬ್ಬರು ಬ್ರಿಟಿಷ್ ಆಫೀಸರ್‌ಗಳ ಮೇಲೆ ಮತ್ತು ಬ್ರಿಟಿಷರ ಖಬರಿ ನೀಡುತ್ತಿದ್ದ ಒಬ್ಬ ದೇಶದ್ರೋಹಿಯ ಮನೆಯ ಮೇಲೆ ಇವರ ಈ ಸಣ್ಣ ಪುಸ್ತಕ ಬಾಂಬ್‌ಗಳನ್ನು ಬಳಸಲಾಯಿತು. ಯಾಕೆಂದರೆ ಇದು ಬರಿ ಟೆಸ್ಟಿಂಗ್ ಆಗಿತ್ತು ಮತ್ತು ಆ ಟೆಸ್ಟ್‌ನಲ್ಲಿ ಇವರ ಪುಸ್ತಕ ಬಾಂಬ್‌ಗಳು ಸಂಪೂರ್ಣವಾಗಿ ಯಶಸ್ವಿಯಾಗಿದ್ದವು.
೩೦ ಮಾರ್ಚ್ ೧೯೦೮ ರಂದು ಖುದಿರಾಮ್ ಬೋಸ್ ಒಬ್ಬರೇ ತಿಲಕರನ್ನು ಭೇಟಿಯಾಗಲು ಪುಣೆಗೆ ಬಂದು ತಲುಪಿದರು ಮತ್ತು ಹಿಂದಿರುಗುವಾಗ ತಮ್ಮ ಮೊದಲ ಗುರಿಯನ್ನು (Target) ನಿಶ್ಚಯಿಸಿಕೊಂಡೇ ಬಂದರು.
ಮ್ಯಾಜಿಸ್ಟ್ರೇಟ್ ಡಗ್ಲಾಸ್ ಎಚ್. ಕಿಂಗ್ಸ್‌ಫೋರ್ಡ್ (Kingsford) ಬಂಗಾಳದ ಪ್ರಮುಖ ಮ್ಯಾಜಿಸ್ಟ್ರೇಟ್ ಆಗಿದ್ದ ಮತ್ತು ಈತನಿಗೆ ಕ್ರಾಂತಿಕಾರಿಗಳೆಂದರೆ ವಿಪರೀತ ದ್ವೇಷವಿತ್ತು. ‘ಚೀಫ್ ಪ್ರೆಸಿಡೆನ್ಸಿ ಮ್ಯಾಜಿಸ್ಟ್ರೇಟ್ ಆಫ್ ಕಲ್ಕತ್ತಾ ಅಂಡ್ ಮುಜಾಫರ್‌ಪುರ್’ ಎಂಬ ತನ್ನ ಅಧಿಕಾರವನ್ನು ಅವನು ಬಹಿರಂಗವಾಗಿ ದುರುಪಯೋಗಪಡಿಸಿಕೊಳ್ಳುತ್ತಿದ್ದ.
ಕೇವಲ ಸಂಶಯ ಬಂದರೂ ಸಾಕು, ಯಾವುದೇ ಪುರಾವೆ ಇಲ್ಲದಿದ್ದರೂ ಸಹ ವೃದ್ಧರಿಗೂ ಅತಿ ಕ್ರೂರ ಶಿಕ್ಷೆಗಳನ್ನು ವಿಧಿಸುತ್ತಿದ್ದ. ಇಂತಹ ಶಿಕ್ಷೆಗಳಿಗೆ ಬ್ರಿಟಿಷ್ ಗವರ್ನಮೆಂಟ್‌ನ ಸಂವಿಧಾನದಲ್ಲಿ (Constitution) ಅವಕಾಶವಿಲ್ಲದಿದ್ದರೂ ಅವನು ಇದನ್ನು ಮಾಡುತ್ತಿದ್ದ.
೩೦ ಮಾರ್ಚ್‌ನಂದು ಖುದಿರಾಮ್ ಬೋಸ್ ಪುಣೆಗೆ ಬಂದಾಗ, ಅದರ ಎರಡು ತಿಂಗಳ ಮೊದಲಷ್ಟೇ ಈ ಕಿಂಗ್ಸ್‌ಫೋರ್ಡ್ ‘ಜುಗಂತರ್’ (ಯುಗಾಂತರ್) ಎಂಬ ಬಂಗಾಳಿ ಪತ್ರಿಕೆಯ ಸಂಪಾದಕರಿಗೆ ಅತ್ಯಂತ ಕಠಿಣ ಶಿಕ್ಷೆ ವಿಧಿಸಿದ್ದ. ಅವರನ್ನು ಜೈಲಿಗೆ ಕಳಿಸಿದ್ದು ಮಾತ್ರವಲ್ಲದೆ, ಅದಕ್ಕೂ ಮುನ್ನ ನಡುರಸ್ತೆಯಲ್ಲಿ ಹೊಡೆಯುತ್ತಾ, ಎಳೆದಾಡುತ್ತಾ ಗಲ್ಲಿ ಗಲ್ಲಿಗಳಲ್ಲಿ ಮೆರವಣಿಗೆ ಮಾಡುವಂತೆ ಹುಕುಂ ಕೊಟ್ಟಿದ್ದ.
ಆ ವೃದ್ಧ ಸಂಪಾದಕರ ಅಸಹಾಯಕ ಹಾಗೂ ನೋವಿನ ಕಿರುಚಾಟ ಖುದಿರಾಮ್ ಅವರ ಮನಸ್ಸನ್ನು ಸಂಪೂರ್ಣವಾಗಿ ಕಲಕಿತು.
ತದನಂತರ ೨೪ ಮಾರ್ಚ್ ರಂದು ಕಿಂಗ್ಸ್‌ಫೋರ್ಡ್ ‘ಸುಶೀಲ್ ಸೇನ್’ ಎಂಬ ಸ್ವದೇಶಿ ಕಾರ್ಯಕರ್ತನನ್ನು ಬಂಧಿಸಿದ. ಆತ ಕೇವಲ 15 ವರ್ಷದ, 8ನೇ ತರಗತಿಯ ಮುಗ್ಧ ವಿದ್ಯಾರ್ಥಿಯಾಗಿದ್ದ. ಆತ ಮಾಡುತ್ತಿದ್ದ ಕೆಲಸವೆಂದರೆ, ಜುಗಂತರ್ ಸಂಪಾದಕರ ಮೇಲೆ ನಡೆದ ಕ್ರೂರ ಕ್ರಮವನ್ನು ವಿರೋಧಿಸಲು ಜನರನ್ನು ವಿನಂತಿಸುತ್ತಿದ್ದ ಅಷ್ಟೇ.
ಕಿಂಗ್ಸ್‌ಫೋರ್ಡ್ ಐದಡಿ ಎತ್ತರದ ಈ ಸಣ್ಣ ಹುಡುಗನಿಗೆ ೧೫ ಚಾಟಿಯೇಟುಗಳ ಶಿಕ್ಷೆ ವಿಧಿಸಿದ.
ಅದೂ ಕೂಡ ಮಾರುಕಟ್ಟೆಯ ಜನಜಂಗುಳಿಯ ನಡುವೆ ಇರುವ ಮುಖ್ಯ ಚೌಕದಲ್ಲಿ.
ಅನ್ಯಾಯದ ಪರಮಾವಧಿ ಎಂದರೆ, ಚಾಟಿಯ ಒಂದೊಂದು ಏಟಿಗೂ ಸುಶೀಲ್ ಸೇನ್ ‘ವಂದೇ ಮಾತರಂ’ ಎಂದು ಘೋಷಣೆ ಕೂಗುತ್ತಿದ್ದ. ಇದನ್ನು ನೋಡಿ ಕೆರಳಿದ ಕಿಂಗ್ಸ್‌ಫೋರ್ಡ್, ಆ ಒಂದೊಂದು ‘ವಂದೇ ಮಾತರಂ’ಗೆ ೧೫ ಚಾಟಿಯೇಟಿನಂತೆ ಶಿಕ್ಷೆ ನೀಡಲು ಆದೇಶಿಸಿದ.
ಸುಮಾರು ಅರ್ಧ ಗಂಟೆಗಳ ಕಾಲ ಆ ಕಿಶೋರ ವಿದ್ಯಾರ್ಥಿ ‘ವಂದೇ ಮಾತರಂ’ ಎಂದು ಕೂಗುತ್ತಲೇ ಇದ್ದ. ಕ್ರಮೇಣ ಅವನ ಧ್ವನಿ ಕ್ಷೀಣವಾಯಿತು ಮತ್ತು ಕೊನೆಗೆ ಅವನು ಪ್ರಜ್ಞೆ ತಪ್ಪಿ ಬಿದ್ದಾಗಲೇ ಚಾಟಿಯೇಟುಗಳು ನಿಂತವು.
ಈ ಘಟನೆಯಿಂದ ಖುದಿರಾಮ್ ಮತ್ತು ಪ್ರಫುಲ್ಲ ಅತೀವವಾಗಿ ನೊಂದರು. ಅವರ ಜೊತೆಗೆ ಪ್ರತಿಯೊಬ್ಬ ಭಾರತೀಯ ನಾಗರಿಕನೂ ಕಂಗೆಟ್ಟಿದ್ದ. ‘ಸುಶೀಲ್ ಸೇನ್’ ಬ್ರಿಟಿಷರ ದಬ್ಬಾಳಿಕೆಯ ಸಂಕೇತವಾದರು ಮತ್ತು ಇಡೀ ದೇಶಾದ್ಯಂತ ಈ ಘಟನೆಯ ವಿರುದ್ಧ ಪ್ರತಿಭಟನೆಗಳು ಶುರುವಾದವು.
ಪುಣೆಯಿಂದ ಹಿಂದಿರುಗಿದ ಖುದಿರಾಮ್ ಬೋಸ್ ಈ ನಿರ್ದಯಿ ಕಿಂಗ್ಸ್‌ಫೋರ್ಡ್‌ನನ್ನು ಮುಗಿಸಲೇಬೇಕೆಂದು ನಿರ್ಧರಿಸಿದರು. ಅಷ್ಟರಲ್ಲೇ ಬ್ರಿಟಿಷ್ ಸರ್ಕಾರ ಕಲ್ಕತ್ತಾದಲ್ಲಿನ ಜನರ ಆಕ್ರೋಶವನ್ನು ತಣಿಸಲು ಕಿಂಗ್ಸ್‌ಫೋರ್ಡ್‌ನನ್ನು ಮುಜಾಫರ್‌ಪುರಕ್ಕೆ ಮ್ಯಾಜಿಸ್ಟ್ರೇಟ್ ಆಗಿ ವರ್ಗಾವಣೆ ಮಾಡಿತು.
ಆದರೆ ಖುದಿರಾಮ್ ಮತ್ತು ಪ್ರಫುಲ್ಲಗೆ ಈ ವರ್ಗಾವಣೆ ಅನುಕೂಲಕರವೆಂದೇ ಅನಿಸಿತು. ಕಲ್ಕತ್ತಾದಂತಹ ಗಿಜಿಗುಡುವ ನಗರದಲ್ಲಿ ಕಿಂಗ್ಸ್‌ಫೋರ್ಡ್ ಮೇಲೆ ಬಾಂಬ್ ಎಸೆಯುವುದು ಕಷ್ಟವಿತ್ತು ಮತ್ತು ಅದರಲ್ಲಿ ನಿರಪರಾಧಿಗಳ ಜೀವ ಹೋಗುವ ಸಾಧ್ಯತೆಯೂ ಇತ್ತು. ಕಿಂಗ್ಸ್‌ಫೋರ್ಡ್ ಮುಜಾಫರ್‌ಪುರಕ್ಕೆ ಹೋಗಿದ್ದರಿಂದ ಇವರಿಬ್ಬರಿಗೂ ಖುಷಿಯಾಯಿತು. ಮುಜಾಫರ್‌ಪುರ ಕಲ್ಕತ್ತಾಗೆ ಹೋಲಿಸಿದರೆ ಸಣ್ಣ ಮತ್ತು ಶಾಂತ ನಗರವಾಗಿತ್ತು. ಅಲ್ಲದೆ ಈ ಕಿಂಗ್ಸ್‌ಫೋರ್ಡ್ ಪ್ರತಿದಿನ ಸಂಜೆ ನಿಯಮಿತವಾಗಿ ‘ಯೂರೋಪಿಯನ್ ಕ್ಲಬ್’ಗೆ ಹೋಗುತ್ತಿದ್ದ.
೩೦ ಮಾರ್ಚ್ ೧೯೦೮ ರ ಸಾಯಂಕಾಲ ಸಮಯ ನಿಗದಿಯಾಯಿತು. ಇವರಿಬ್ಬರೂ ವಿದ್ಯಾರ್ಥಿಗಳ ಸಮವಸ್ತ್ರ ಧರಿಸಿ ಆ ಕ್ಲಬ್ ಮುಂದಿನ ಬಸ್ ನಿಲ್ದಾಣದಲ್ಲಿ ಬಸ್‌ಗಾಗಿ ಕಾಯುತ್ತಿರುವವರಂತೆ ಕುಳಿತಿದ್ದರು.
ಕ್ಲಬ್‌ನ ಪಾರ್ಟಿ ಮುಗಿಸಿ ಕಿಂಗ್ಸ್‌ಫೋರ್ಡ್ ತನ್ನ ಕುದುರೆ ಗಾಡಿಯಲ್ಲಿ ಮನೆಗೆ ಹೊರಟ. ಅವನ ಜೊತೆಗೆ ಇನ್ನೊಬ್ಬ ಬ್ರಿಟಿಷ್ ಆಫೀಸರ್ ಪ್ರಿಂಜಲ್ ಕೆನೆಡಿ (Pringle Kennedy) ಅವರ ಪತ್ನಿ ಮತ್ತು ಮಗಳು ಇದ್ದರು. ಕೊನೆಯ ಕ್ಷಣದಲ್ಲಿ ಕಿಂಗ್ಸ್‌ಫೋರ್ಡ್ ಆ ಇಬ್ಬರು ಮಹಿಳೆಯರಿಗೆ ತನ್ನ ಐಷಾರಾಮಿ ಗಾಡಿಯಲ್ಲಿ ಕೂರುವಂತೆ ವಿನಂತಿಸಿದ, ಯಾಕೆಂದರೆ ಅವರ ಗಾಡಿ ಸಣ್ಣದಾಗಿತ್ತು ಮತ್ತು ಅವರ ಜೊತೆಗೆ ಆಫೀಸರ್ ಕೆನೆಡಿ ಹಾಗೂ ಇಬ್ಬರು ಬ್ರಿಟಿಷ್ ಮಹಿಳೆಯರಿದ್ದರು. ಕಿಂಗ್ಸ್‌ಫೋರ್ಡ್ ಸ್ವತಃ ಕೆನೆಡಿಯ ಸಣ್ಣ ಗಾಡಿಯಲ್ಲಿ ಕುಳಿತುಕೊಂಡ. ಆ ಕಾಲದಲ್ಲಿ ಕುದುರೆ ಗಾಡಿಗಳು ಅಧಿಕಾರಕ್ಕೆ ತಕ್ಕಂತೆ ಸಣ್ಣ-ದೊಡ್ಡದಾಗಿರುತ್ತಿದ್ದವು ಮತ್ತು ನಾಲ್ಕು ಕಡೆಯಿಂದ ಮುಚ್ಚಲ್ಪಟ್ಟಿದ್ದವು.
ಕೊನೆಯ ಕ್ಷಣದ ಈ ಬದಲಾವಣೆಯ ವಿಷಯ ಖುದಿರಾಮ್ ಮತ್ತು ಪ್ರಫುಲ್ಲಗೆ ತಿಳಿಯಲು ಸಾಧ್ಯವೇ ಇರಲಿಲ್ಲ. ಹೀಗಾಗಿ ‘ಹರ್ಬರ್ಟ್ ಬ್ರೂಮ್’ (Herbert Broom) ಅವರ ‘ಕಮೆಂಟರೀಸ್ ಆನ್ ದ ಕಾಮನ್ ಲಾ’ ಎಂಬ ಎಲ್.ಎಲ್.ಬಿ ಪುಸ್ತಕದಲ್ಲಿ ಅಡಗಿಸಿಟ್ಟಿದ್ದ ಆರು ಔನ್ಸ್‌ನ ಡೈನಮೈಟ್, ಡಿಟೋನೇಟರ್ ಮತ್ತು ಬ್ಲ್ಯಾಕ್ ಪೌಡರ್ ಫ್ಯೂಸ್‌ನಿಂದ ತಯಾರಿಸಿದ ಬಾಂಬನ್ನು ಖುದಿರಾಮ್ ನ ಗಾಡಿಯ ಮೇಲೆ ಎಸೆದರು.
ಆದರೆ ಕಿಂಗ್ಸ್‌ಫೋರ್ಡ್ ಬೇರೆಯೇ ಗಾಡಿಯಲ್ಲಿದ್ದ ಕಾರಣ ಆತ ಬಚಾವಾದ. ಖುದಿರಾಮ್ ಮತ್ತು ಪ್ರಫುಲ್ಲ ಕಿಂಗ್ಸ್‌ಫೋರ್ಡ್‌ನ ಗಾಡಿಯ ಬಗ್ಗೆ ಸರಿಯಾಗಿ ಅಧ್ಯಯನ ಮಾಡಿದ್ದರು. ಆದರೆ ಆ ದಿನ ಆ ಗಾಡಿಯಲ್ಲಿ ಕೆನೆಡಿ ಕುಟುಂಬವಿತ್ತು ಮತ್ತು ಅದರಲ್ಲಿದ್ದ ಇಬ್ಬರು ಮಹಿಳೆಯರು ಸಾವನ್ನಪ್ಪಿದರು.
ಸ್ವಲ್ಪ ದಿನಗಳಲ್ಲೇ ಖುದಿರಾಮ್ ಮತ್ತು ಪ್ರಫುಲ್ಲ ಸಿಕ್ಕಿಬಿದ್ದರು. ಬ್ರಿಟಿಷ್ ಸರ್ಕಾರಕ್ಕೆ ಭಾರತದ ಸ್ವಾತಂತ್ರ್ಯ ಸಂಗ್ರಾಮವನ್ನು ಕೆಣಕಲು ಒಂದು ಕಾರಣ ಸಿಕ್ಕಿತು. ‘ಯೂರೋಪಿಯನ್ ಮಹಿಳೆಯರ ಮೇಲೆ ದಾಳಿ’ ಎಂಬ ಶೀರ್ಷಿಕೆಯಡಿ ಅವರು ನಾಯಕರನ್ನು ಅವಮಾನಿಸಲು ಶುರು ಮಾಡಿದರು.
ಆದರೆ ಲೋಕಮಾನ್ಯ ತಿಲಕರು ತಮ್ಮ ‘ಮರಾಠಾ’ ಮತ್ತು ‘ಕೇಸರಿ’ ಪತ್ರಿಕೆಗಳಲ್ಲಿ ಸುಶೀಲ್ ಸೇನ್ ಅವರ ಪ್ರಕರಣವನ್ನು ಗಂಭೀರವಾಗಿ ಪ್ರಸ್ತಾಪಿಸುತ್ತಾ ಖುದಿರಾಮ್ ಅವರನ್ನು ಬಹಿರಂಗವಾಗಿ ಬೆಂಬಲಿಸಿದರು. ತಿಲಕರ ಲೇಖನಿ ಗುಡುಗಿತು ಮತ್ತು ಬ್ರಿಟಿಷರ ವಾದಗಳು ಚೂರುಚೂರಾದವು.
ಸರಿಯಾಗಿ ಇದೇ ಹೊತ್ತಿಗೆ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬಂದು ತನ್ನ ನಾಯಕತ್ವ ಸ್ಥಾಪಿಸಲು ಪ್ರಯತ್ನಿಸುತ್ತಿದ್ದ ‘ಮೋಹನದಾಸ್ ಕರಮಚಂದ್ ಗಾಂಧಿ’ ಎಂಬ ಹೊಸ ನಾಯಕ ಖುದಿರಾಮ್ ಅವರ ಕೃತ್ಯವನ್ನು ಕಟು ಶಬ್ದಗಳಿಂದ ಖಂಡಿಸಿದರು ಮತ್ತು ಅವರನ್ನು ‘ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದವನು’ ಎಂದು ಕರೆದರು.
ಇಲ್ಲಿಂದಲೇ ‘ತಿಲಕ್ ವರ್ಸಸ್ ಗಾಂಧಿ’ ಎಂಬ ಹೊಸ ಯುಗದ ಆರಂಭವಾಯಿತು, ಯಾಕೆಂದರೆ ತಿಲಕರ ವೈರಿ ಗೋಪಾಲ ಕೃಷ್ಣ ಗೋಖಲೆ ಅವರ ಶಿಷ್ಯ ಗಾಂಧೀಜಿಯಾಗಿದ್ದರು.
(ಕಥೆ ಮುಂದುವರಿಯುವುದು)



