"ಅವನೇ" ನನ್ನ ಮಾರ್ಗ ಏಕಮಾತ್ರ “ಬಾಳ ಗಂಗಾಧರ ತಿಲಕರು ಬಾಲ್ಯದಿಂದಲೇ ಅತ್ಯಂತ ಸ್ವತಂತ್ರ ವಿಚಾರದವರು, ಹೋರಾಟದ ಗುಣವುಳ್ಳವರು ಮತ್ತು ಅನ್ಯಾಯದ ವಿರುದ್ಧ ದೃಢವಾಗಿ ನಿಲ್ಲುವವರಾಗಿದ್ದರು.
ಅವರಿಗೆ 16 ವರ್ಷ ವಯಸ್ಸಿದ್ದಾಗ ಅವರ ತಂದೆ ಗಂಗಾಧರ ತಿಲಕರು ಅಲ್ಪಕಾಲದ ಅನಾರೋಗ್ಯದಿಂದ 1872ರಲ್ಲಿ ನಿಧನರಾದರು. ಆಗ ಬಾಳ ಗಂಗಾಧರ ತಿಲಕರಿಗೆ ಕೇವಲ 16 ವರ್ಷ ವಯಸ್ಸು ಮತ್ತು ಅವರ ವಿವಾಹವೂ ಆಗಿತ್ತು. ಅವರ ಪತ್ನಿಯ ತವರುಮನೆಯ ಹೆಸರು ‘ತಾಪಿಬಾಯಿ’ ಎಂದಿತ್ತು ಮತ್ತು ಸಾಸರದ ಹೆಸರು ‘ಸತ್ಯಭಾಮಾಬಾಯಿ’ ಎಂದಿತ್ತು.
ಲೋಕಮಾನ್ಯರ ಮದುವೆಯಾದ ಕೇವಲ ಆರು ತಿಂಗಳೊಳಗೆ ಗಂಗಾಧರರಾಯ ತಿಲಕರು ಮರಣ ಹೊಂದಿದ್ದರಿಂದ, ಅವರ ಕೆಲವು ಸಂಬಂಧಿಕರು ಮತ್ತು ಕೆಲವು ಗ್ರಾಮಸ್ಥರು ಸತ್ಯಭಾಮಾಬಾಯಿಯವರನ್ನು ದೊಷಿಸಲು ಪ್ರಾರಂಭಿಸಿದರು. ಅವಳ ಕಾಲ್ಗುಣದಿಂದಲೇ ಅವಳು ಮನೆಗೆ ಬಂದ ಒಂದು ವರ್ಷದೊಳಗೆ ಮಾವ ತೀರಿಕೊಂಡರು ಎಂದು ಮಾತನಾಡತೊಡಗಿದರು. ಆ ಕಾಲದಲ್ಲಿ ಇಂತಹ ತಪ್ಪು ನಂಬಿಕೆಗಳು ಭಾರತದಲ್ಲಿ ಎಲ್ಲೆಡೆ ಹರಡಿದ್ದವು ಮತ್ತು ಇಂತಹ ಘಟನೆಗಳಲ್ಲಿ ಸಿಲುಕಿದ ಸ್ತ್ರೀಯನ್ನು ‘ಬಿಳಿ ಕಾಲಿನವಳು, ಅಪಶಕುನಿ, ಅವಲಕ್ಷಣಿ ಮತ್ತು ಕೆಟ್ಟ ಕಾಲ್ಗುಣದವಳು’ ಎಂದು ಹೇಳಿ ಹೀಯಾಳಿಸಲಾಗುತ್ತಿತ್ತು.
ಲೋಕಮಾನ್ಯರಿಗೆ ತಮ್ಮ ತಂದೆಯ ಹದಿಮೂರನೇ ದಿನದ ಕಾರ್ಯ ಮಾಡುವಾಗ ಈ ವಿಷಯ ವಿಶೇಷವಾಗಿ ಗಮನಕ್ಕೆ ಬಂದಿತು. ಏಕೆಂದರೆ ಅಂದು ಸತ್ಯಭಾಮಾಬಾಯಿಯವರು ಬಡಿಸಲು ಬಂದಾಗ ಯಾರೂ ಏನನ್ನೂ ಬಡಿಸಿಕೊಳ್ಳುತ್ತಿರಲಿಲ್ಲ, ಆದರೆ ಅದೇ ವಸ್ತುವನ್ನು ಅಥವಾ ಪದಾರ್ಥವನ್ನು ಬೇರೆ ಯಾರಾದರೂ ಸ್ತ್ರೀ ಬಡಿಸಲು ತಂದಾಗ ಎಲ್ಲರೂ ತೆಗೆದುಕೊಳ್ಳುತ್ತಿದ್ದರು.
ಲೋಕಮಾನ್ಯರು ಸ್ವತಃ ಪಂಕ್ತಿಯಲ್ಲಿ ಊಟಕ್ಕೆ ಕುಳಿತಿದ್ದರು, ಏಕೆಂದರೆ ಮೃತ ವ್ಯಕ್ತಿಯ ಹತ್ತಿರದ ಸಂಬಂಧಿಕರು, ವಿಶೇಷವಾಗಿ ಕುಟುಂಬದವರು ಹದಿಮೂರನೇ ದಿನದ ಪಂಕ್ತಿಯಲ್ಲಿರುವುದು ಅಗತ್ಯವಾಗಿತ್ತು. ಆ ವ್ಯಕ್ತಿ ಮೊದಲ ತುತ್ತು ತಿಂದ ನಂತರವೇ ಉಳಿದವರ ಭೋಜನ ಆರಂಭವಾಗುತ್ತಿತ್ತು. ತಿಲಕರ ಚುರುಕು ಕಣ್ಣುಗಳು ಸತ್ಯಭಾಮಾಬಾಯಿಯವರ ಸಂಕಟವನ್ನು ಗಮನಿಸಿದವು. ಆದರೆ ಒಂದು ಕಡೆ ಅವರ ವಯಸ್ಸು ತುಂಬಾ ಚಿಕ್ಕದಾಗಿತ್ತು ಮತ್ತು ಇಂತಹ ಮೂಢನಂಬಿಕೆ ಹೊಂದಿರುವವರ ಸಂಖ್ಯೆ ತುಂಬಾ ದೊಡ್ಡದಾಗಿತ್ತು. ತಿಲಕರು ಯಾರಿಗೂ ನೋವಾಗದಂತೆ ಈ ಪ್ರಸಂಗಕ್ಕೆ ಒಂದು ಉತ್ತರವನ್ನು ಕಂಡುಕೊಂಡರು.
ಲೋಕಮಾನ್ಯರು ಒಂದು ಮೂಲೆಯಲ್ಲಿ ಬೇಸರದಿಂದ ನಿಂತಿದ್ದ 14 ವರ್ಷದ ಸತ್ಯಭಾಮಾಬಾಯಿಯವರಿಗೆ ಕಣ್ಣಿನಲ್ಲೇ ಸಮಾಧಾನ ಮಾಡಿದರು ಮತ್ತು ವಡೆ ಬಡಿಸಲು ಬರುವಂತೆ ಸನ್ನೆ ಮಾಡಿದರು. ಅವರು ವಡೆಯ ತಟ್ಟೆ ಹಿಡಿದು ಬಡಿಸಲು ಬಂದಾಗ, ತಿಲಕರು ಅತ್ಯಂತ ಶಾಂತವಾಗಿ ತಮ್ಮ ಎಲೆಯಲ್ಲಿ ಐದಾರು ವಡೆಗಳನ್ನು ಬಡಿಸಿಕೊಂಡರು ಮತ್ತು ಅದು ಕೂಡ ಸತ್ಯಭಾಮಾಬಾಯಿಯವರ ಕೈಯಿಂದಲೇ.
ಮೊದಲಿಗೆ ಅವರು ತುಂಬಾ ಹೆದರಿದ್ದರು ಮತ್ತು ಅವರ ಕೈ ನಡುಗುತ್ತಿತ್ತು. ಆದರೆ ತಿಲಕರು ಅತ್ಯಂತ ಗಡಸು ದನಿಯಲ್ಲಿ ಇಡೀ ಪಂಕ್ತಿಯಲ್ಲಿ ಕೇಳಿಸುವಂತೆ ಹೇಳಿದರು, “ನಾನು ಇಂತಹ ಅರ್ಥವಿಲ್ಲದ ತಪ್ಪು ತಿಳುವಳಿಕೆಗಳಿಗೆ ಮತ್ತು ಅಂಧಶ್ರದ್ಧೆಗಳಿಗೆ ಕವಡೆ ಕಾಸಿನ ಕಿಮ್ಮತ್ತು ಕೊಡುವುದಿಲ್ಲ. ನಮ್ಮ ವಿವಾಹ ನಿಶ್ಚಯವಾಗುವ ಮೊದಲೇ ನನ್ನ ತಂದೆಯವರು ಅನಾರೋಗ್ಯದಿಂದಿದ್ದರು. ನಿಮ್ಮ ಗೃಹಪ್ರವೇಶದಿಂದ ಯಾವುದೇ ಅಶುಭ ಸಂಭವಿಸಿಲ್ಲ.”
ತಿಲಕರು ಈ ಮಾತುಗಳನ್ನು ಸ್ಪಷ್ಟವಾಗಿ ಹೇಳಿದ ನಂತರ, ಇತರ ಕೆಲವು ಸಮಾನ ವಿಚಾರದವರು ಕೂಡ ಸತ್ಯಭಾಮಾಬಾಯಿಯವರಿಂದಲೇ ಬೇಕೆಂದು ವಡೆಗಳನ್ನು ಕೇಳಿ ಪಡೆದರು. ಅವರ ಗಡಸು ದನಿ ಮತ್ತು ವಿಚಾರಗಳ ಸ್ಪಷ್ಟತೆಯ ಪರಿಣಾಮ ಎಷ್ಟಿತ್ತೆಂದರೆ, ಬೇರೆ ಯಾರೂ ಯಾವುದೇ ಆಕ್ಷೇಪ ಎತ್ತಲು ಧೈರ್ಯ ಮಾಡಲಿಲ್ಲ.
ಅಂದು ರಾತ್ರಿ ತಮ್ಮ ಸ್ನೇಹಿತರೊಂದಿಗೆ ಇದೇ ವಿಷಯದ ಬಗ್ಗೆ ಮಾತನಾಡುತ್ತಾ ಕುಳಿತಿದ್ದಾಗ, ಅವರ ಗೆಳೆಯರು ಮಾತನಾಡುತ್ತಾ ಅವರಿಗೆ ಮನವರಿಕೆ ಮಾಡಿಕೊಟ್ಟರು - “ಬಾಳ! ನಿನ್ನ ಈ ಗಂಭೀರ ಮುಖ, ಕಡಕ್ ಧ್ವನಿ ಮತ್ತು ವಿಚಾರಗಳ ಸ್ಪಷ್ಟತೆಯ ಮುಂದೆ ಕಟ್ಟರ್ ವಿರೋಧಿಗಳು ಕೂಡ ಸುಮ್ಮನಾದರು. ನೀನು ಮುಂದೆ ದೊಡ್ಡ ನಾಯಕನಾಗಬಲ್ಲೆ.” ತಿಲಕರು ಈ ಮಾತಿಗೆ ನಕ್ಕು ಹೇಳಿದರು, “ಇಷ್ಟೊಂದು ಸಣ್ಣ ವಿಷಯಕ್ಕೆ ನೀವು ನನ್ನನ್ನು ಒಮ್ಮೆಲೆ ಭಾರತದ ನಾಯಕನನ್ನಾಗಿ ಮಾಡಿಬಿಟ್ಟಿರಲ್ಲ. ನಾನು ಈ ಹಳ್ಳಿಯ ಕೇವಲ ಒಬ್ಬ ಮೆಟ್ರಿಕ್ ಪಾಸಾದ ಹುಡುಗ ಅಷ್ಟೇ.”
ಅಷ್ಟರಲ್ಲಿ ತಿಲಕರ ಹೆಗಲ ಮೇಲೆ ಕೈ ಹಾಕಿ ಶಹಬ್ಬಾಸ್ ಎನ್ನುತ್ತಾ, ತಿಲಕರ ಹಿಂದಿನಿಂದ ಬಂದ ಅವರ ಶಿಕ್ಷಕ ಚಿಂತಾಮಣಿ ಬರ್ವೆ ಅವರು ಮುಂದೆ ಬಂದು ಹೇಳಿದರು, “ಬಾಳ! ನಿನ್ನ ಸ್ನೇಹಿತರು ಹೇಳುತ್ತಿರುವುದು ನೂರಕ್ಕೆ ನೂರು ನಿಜ. ಈ ಘಟನೆ ನಡೆದಾಗ ನಾನು ಕೂಡ ಅಲ್ಲೇ ಇದ್ದೆ. ನಾನು ಕಳೆದ 25 ವರ್ಷಗಳಿಂದ ರತ್ನಗಿರಿ ಜಿಲ್ಲೆಯ ಪ್ರಮುಖ ಶಾಲೆಯಲ್ಲಿ ಕಲಿಸುತ್ತಿದ್ದೆ ಮತ್ತು ಕಳೆದ ಎರಡು ವರ್ಷಗಳಿಂದ ಈ ಹಳ್ಳಿಗೆ ನಾನಾಗಿಯೇ ಬಂದಿದ್ದೇನೆ.
ನಿನ್ನಂತೆ ಧೈರ್ಯವಂತ ಸ್ವಭಾವದ ಮತ್ತು ಸ್ಪಷ್ಟ ವಿಚಾರದ ಒಬ್ಬನೇ ಒಬ್ಬ ವಿದ್ಯಾರ್ಥಿ ಅಥವಾ ಶಿಕ್ಷಕ ಅಥವಾ ಹಿರಿಯ ನಾಗರಿಕ ನನಗೆ ಕಂಡುಬಂದಿಲ್ಲ. ಜನ ಮನೆಮಟ್ಟದ ಜಗಳಗಳನ್ನು ತುಂಬಾ ಮಾಡುತ್ತಾರೆ, ಆದರೆ ಒಂದು ವೈಚಾರಿಕ ವಿಷಯದ ಬಗ್ಗೆ ದೃಢವಾಗಿ ನಿಲುವು ತೆಗೆದು, ಎಲ್ಲರನ್ನೂ ವಿರೋಧಿಸುವ ಶಕ್ತಿ ನಿನ್ನ ಹೊರತು ಬೇರೆ ಯಾರಲ್ಲೂ ನಾನು ನೋಡಿಲ್ಲ.
ಬಾಳ! ನೀನು ನಿಜವಾಗಿಯೂ ಭಾರತದ ಭಾಗ್ಯವಿಧಾತನಾಗಬಲ್ಲೆ. ನಾನು ಮನಸ್ಸಿನಿಂದ ಹೇಳುತ್ತಿದ್ದೇನೆ, ನೀನು ರತ್ನಗಿರಿಯನ್ನು ಬಿಟ್ಟು ಪುಣೆ ಅಥವಾ ಮುಂಬೈಗೆ ಹೋಗಿ ಉಚ್ಚ ಶಿಕ್ಷಣ ಪಡೆಯಬೇಕು.
ಈ ಬ್ರಿಟಿಷ್ ಕಾಲೇಜುಗಳಲ್ಲಿ ಕಲಿಯುವಾಗ ಜಗತ್ತಿನ ವಿದ್ಯಮಾನಗಳ ಬಗ್ಗೆ ಮಾಹಿತಿ ದೊರೆಯುತ್ತದೆ ಮತ್ತು ಅದರಿಂದ ನಮ್ಮ ಅನುಭವದ ವ್ಯಾಪ್ತಿ ವಿಸ್ತರಿಸುತ್ತದೆ.
ಹಾಗೆಯೇ ಈ ಇಂಗ್ಲಿಷ್ ಕಾಲೇಜುಗಳಲ್ಲಿ ದೊಡ್ಡ ದೊಡ್ಡ ಲೈಬ್ರರಿಗಳು (Libraries) ಇವೆ. ಅದರಲ್ಲಿರುವ ಪುಸ್ತಕಗಳು ಪ್ರಪಂಚದಾದ್ಯಂತದ ಜ್ಞಾನವನ್ನು ನೀಡುತ್ತವೆ ಎಂದು ನಾನು ಕೇಳಿದ್ದೇನೆ. ನೀನು ಈ ಗ್ರಂಥಗಳನ್ನು ಅಭ್ಯಾಸ ಮಾಡಿ ನಿನ್ನ ಈ ಗುಣವನ್ನು ಮತ್ತಷ್ಟು ಪ್ರಬುದ್ಧಗೊಳಿಸಬಹುದು.
ಬ್ರಿಟಿಷರು ಝಾನ್ಸಿ ರಾಣಿ ಲಕ್ಷ್ಮೀಬಾಯಿ, ರಾವ್‌ಸಾಹೇಬ್ ಪೇಶವೆ ಮತ್ತು ತಾತ್ಯಾ ಟೋಪೆ ಅವರನ್ನು ಏನು ಮಾಡಿದರು? ನಿನಗೆ ಈ ಇತಿಹಾಸ ತಿಳಿದೇ ಇದೆ. ನಾನೇ ನಿಮಗೆ ಕಳೆದ ಎರಡು ವರ್ಷಗಳಿಂದ ಇದನ್ನು ಕಲಿಸಿದ್ದೇನೆ.
ಬ್ರಿಟಿಷರು ಭಾರತವನ್ನು ಅಕ್ಷರಶಃ ಲೂಟಿ ಮಾಡುತ್ತಿದ್ದಾರೆ ಮತ್ತು ಭಾರತೀಯ ಸಂಸ್ಕೃತಿಯನ್ನೂ ನಾಶ ಮಾಡುತ್ತಿದ್ದಾರೆ. ನಿನ್ನಂತಹ ನಾಯಕನ ಅವಶ್ಯಕತೆ ಭಾರತೀಯ ಜನತೆಗೆ ಈಗ ಬಹಳಷ್ಟಿದೆ. ನಮ್ಮ ರಾಜ-ಮಹಾರಾಜರು ಸೀಮಿತ ಅಧಿಕಾರದಲ್ಲೇ ಖುಷಿಯಾಗಿದ್ದಾರೆ ಮತ್ತು ತಮ್ಮನ್ನು ತಾವು ಬ್ರಿಟಿಷರೆಂದು ಭಾವಿಸತೊಡಗಿದ್ದಾರೆ.
ಆದರೆ ನೆನಪಿಡು, ತಾತ್ಯಾ ಟೋಪೆ ಅವರನ್ನು ಹೇಗೆ ಗಲ್ಲಿಗೇರಿಸಲಾಯಿತು, ಮಂಗಳ ಪಾಂಡೆಯವರ ಗತಿಯೂ ಅದೇ ಆಯಿತು ಮತ್ತು ವೀರಾಂಗನೆ ರಾಣಿ ಲಕ್ಷ್ಮೀಬಾಯಿಯವರನ್ನು ಕೂಡ ಕಪಟದಿಂದ ಕೊಲ್ಲಲಾಯಿತು. ಆನಂತರ ಬಂದ ಬ್ರಿಟಿಷ್ ಸರ್ಕಾರವು ಸೇಡಿನ ಬುದ್ಧಿಯಿಂದ ಭಾರತದ ವಿವಿಧ ಜಿಲ್ಲೆಗಳಲ್ಲಿ ಅನೇಕ ಸ್ವಾತಂತ್ರ್ಯ ಹೋರಾಟಗಾರರನ್ನು ಗಲ್ಲಿಗೇರಿಸಿದರು. ಆದ್ದರಿಂದ ನೀನು ನಿನ್ನ ದಾರಿಯನ್ನು ಜಾಗರೂಕತೆಯಿಂದ ರೂಪಿಸಿಕೊ, ಏಕೆಂದರೆ ಬ್ರಿಟಿಷರ ಅಧಿಕಾರ ಬಹಳ ಪ್ರಬಲವಾಗಿದೆ.”
ಬರ್ವೆ ಮಾಸ್ಟರ್ ಮತ್ತು ಬಾಳನ ಸ್ನೇಹಿತರು ಅಲ್ಲಿಂದ ಹೋದ ನಂತರ ಬಾಳ ಗಂಗಾಧರ ತಿಲಕರು ಒಬ್ಬರೇ ಅಂಗಳದಲ್ಲಿ ವಿಚಾರ ಮಾಡುತ್ತಾ ಕುಳಿತರು. ಅವರಿಗೆ ಬರ್ವೆ ಮಾಸ್ತರರ ಮಾತು ಸಂಪೂರ್ಣವಾಗಿ ಸರಿ ಎನಿಸಿತ್ತು ಮತ್ತು ಅವರ ಮನಸ್ಸಿನಲ್ಲಿ ತಮ್ಮ ಮುಂದಿನ ಜೀವನದ ಬಗ್ಗೆ ಅನೇಕ ವಿಚಾರಗಳು ಸ್ಪಷ್ಟವಾಗಿ ಬರತೊಡಗಿದ್ದವು. ಏಕೆಂದರೆ ತಿಲಕರ ಮನಸ್ಸಿನಲ್ಲೂ ಇಂತಹ ಆಲೋಚನೆಗಳು ಒಂದು-ಎರಡು ವರ್ಷಗಳಿಂದ ಸತತವಾಗಿ ಬರುತ್ತಿದ್ದವು.
ರಾತ್ರಿಯಿಡೀ ತಿಲಕರು ಎಚ್ಚರವಾಗಿಯೇ ಇದ್ದರು. ಅವರು ಪುಣೆಗೆ ಹೋಗಲು ನಿರ್ಧರಿಸಿದರು ಮತ್ತು 1873ರಲ್ಲಿ ಅವರು ಪುಣೆಯ ಡೆಕ್ಕನ್ ಕಾಲೇಜಿನ ವಿದ್ಯಾರ್ಥಿಯಾದರು ಮತ್ತು ಅದೇ ಕಾಲೇಜಿನಿಂದ ‘ಬಿ.ಎ. ಮ್ಯಾಥಮೆಟಿಕ್ಸ್’ (ಫಸ್ಟ್ ಕ್ಲಾಸ್) ಪದವಿಯನ್ನು ಸಂಪಾದಿಸಿದರು.
ತಿಲಕರು ಪದವಿಗಾಗಿ ಗಣಿತದ ಅಭ್ಯಾಸ ಮಾಡುತ್ತಿದ್ದರು; ಆದರೆ ಡೆಕ್ಕನ್ ಕಾಲೇಜಿನ ಸಮೃದ್ಧ ಲೈಬ್ರರಿಯಲ್ಲಿ ಕುಳಿತು ಪಾಲಿಟಿಕ್ಸ್ (Politics), ಫಿಲಾಸಫಿ (Philosophy) ಅಭ್ಯಾಸದ ಜೊತೆಗೆ ಸಂಸ್ಕೃತ ಗ್ರಂಥಗಳನ್ನೂ ಅಧ್ಯಯನ ಮಾಡುತ್ತಿದ್ದರು.
ಅವರು 1877ರಲ್ಲೇ ಎಂ.ಎ. ಗೆ ಪ್ರವೇಶ ಪಡೆದು ಅಭ್ಯಾಸ ಆರಂಭಿಸಿದರು. ಅಭ್ಯಾಸದ ನಂತರ ಅವರದೊಂದು ನಿರ್ಧಾರ ಪಕ್ಕಾ ಆಗಿತ್ತು - ‘ಧರ್ಮ, ಅಧ್ಯಾತ್ಮ ಮತ್ತು ವ್ಯವಹಾರಿಕ ಜೀವನ ಇವುಗಳನ್ನು ಒಂದರಿಂದ ಇನ್ನೊಂದನ್ನು ಬೇರ್ಪಡಿಸಲು ಸಾಧ್ಯವಿಲ್ಲ. ಕೇವಲ ತನಗಾಗಿ ಬದುಕುವ ಬದಲು ತನ್ನ ರಾಷ್ಟ್ರವನ್ನೇ ತನ್ನ ಕುಟುಂಬವೆಂದು ಭಾವಿಸುವುದು ಅಗತ್ಯ ಮತ್ತು ಈ ಸಮಯ ಅದರ ದೊಡ್ಡ ಅವಶ್ಯಕತೆಯಿದೆ. ದೇಶಸೇವೆಯ ನಂತರದ ಹಂತವೆಂದರೆ ಮಾನವೀಯತೆ, ಸೇವೆ ಅಂದರೆ ದೀನದಲಿತರ ಸೇವೆ ಮತ್ತು ಸರ್ವೋಚ್ಚ ಹಂತವೆಂದರೆ ವೈಯಕ್ತಿಕ ಜೀವನ, ಕೌಟುಂಬಿಕ ಜೀವನ, ರಾಷ್ಟ್ರಸೇವೆ ಮತ್ತು ಮಾನವಸೇವೆ ಈ ಎಲ್ಲ ದಾರಿಗಳಲ್ಲಿ ನಡೆಯುತ್ತಲೇ ಭಗವಂತನೊಂದಿಗೆ ಅನುಸಂಧಾನ ಸಾಧಿಸುವುದು.’
ತಿಲಕರು ಬ್ರಿಟಿಷ್ ಪ್ರೊಫೆಸರ್‌ಗಳ ಮತ್ತು ಇತರ ಬ್ರಿಟಿಷ್ ಅಧಿಕಾರಿಗಳ ನಡವಳಿಕೆಯನ್ನು ನೋಡಿ ರಾಜಕೀಯ ಪ್ರವೇಶಿಸುವ ನಿರ್ಧಾರವನ್ನು ಗಟ್ಟಿಗೊಳಿಸಿದ್ದರು ಮತ್ತು ಆದ್ದರಿಂದಲೇ ಅವರು ಎಂ.ಎ. ಅಭ್ಯಾಸವನ್ನು ಅರ್ಧಕ್ಕೆ ಬಿಟ್ಟು ಮುಂಬೈಯ ‘ಗವರ್ನಮೆಂಟ್ ಲಾ ಕಾಲೇಜ್’ಗೆ ಪ್ರವೇಶ ಪಡೆದರು.”
(ಕಥೆ ಮುಂದುವರಿಯುವುದು)
