ಸದ್ಗುರು ಶ್ರೀ ಅನಿರುದ್ಧ ಬಾಪೂ ಅವರು ತಮ್ಮ ‘ತುಳಸಿಪತ್ರ’ ಎಂಬ ಸಂಪಾದಕೀಯ ಮಾಲಿಕೆಯಲ್ಲಿ, ೧೩೮೨ ಮತ್ತು ೧೩೮೩ ನೇ ಲೇಖನಗಳಲ್ಲಿ ಬರೆಯುತ್ತಾರೆ:
ಸದ್ಗುರು ಶ್ರೀ ಅನಿರುದ್ಧ ಬಾಪೂ ಅವರು ತಮ್ಮ ತುಳಸಿಪತ್ರ-1382 ಎಂಬ ಸಂಪಾದಕೀಯದಲ್ಲಿ ಬರೆಯುತ್ತಾರೆ,
ಲೋಪಮುದ್ರೆ ಅತ್ಯಂತ ಪ್ರೀತಿಯಿಂದ ಋಷಿ ಗೌತಮನನ್ನು ತನ್ನ ಹತ್ತಿರ ಕರೆದು, ಅವನ ಹಣೆಯನ್ನು ವಾತ್ಸಲ್ಯದಿಂದ ಮುದ್ದಿಸಿ, “ಪ್ರಿಯ ಗೌತಮ! ಈಗ ಬ್ರಹ್ಮರ್ಷಿ ಕಶ್ಯಪರು ಹೇಳಿದಂತೆ ನೀನು ‘ಸೂರ್ಯಕಿರಣ' ವಿಜ್ಞಾನದ ಒಬ್ಬ ಮಹಾನ್ ವಿಜ್ಞಾನಿ. ಆದರೆ, ನಾನು ನಿನ್ನನ್ನು ಒಂದು ಪ್ರಶ್ನೆ ಕೇಳಬಹುದೇ?” ಎಂದಳು.
ಋಷಿ ಗೌತಮ ತಕ್ಷಣವೇ ವಿನಯದಿಂದ ತಲೆ ಅಲ್ಲಾಡಿಸಿ ಸಮ್ಮತಿಸಿದ. ಆಗ ಲೋಪಮುದ್ರೆ ಅವನನ್ನು ಪ್ರಶ್ನಿಸಿದಳು, “ನೀನು ಸೂರ್ಯಕಿರಣ ವಿಜ್ಞಾನದ ಒಬ್ಬ ಶ್ರೇಷ್ಠ ವಿಜ್ಞಾನಿ ಆಗಿರುವುದರಿಂದ, ನೀನು ಎಲ್ಲಾ ರೀತಿಯ ಸೂರ್ಯಕಿರಣಗಳ ಘಟಕಗಳನ್ನು ಸರಿಯಾಗಿ ಅಭ್ಯಾಸ ಮಾಡಿರಬೇಕು. ಹಾಗಿದ್ದರೆ, ನೀನು ಚಂದ್ರಕಿರಣಗಳನ್ನೂ ಕೂಡ ಖಂಡಿತವಾಗಿ ಅಭ್ಯಾಸ ಮಾಡಿರಬೇಕಲ್ಲವೇ?”
ಋಷಿ ಗೌತಮ ಉತ್ತರಿಸಿದ, “ಹೌದು, ತಾಯೇ.”
ಲೋಪಮುದ್ರೆ ತಕ್ಷಣವೇ ಮುಂದಿನ ಪ್ರಶ್ನೆ ಕೇಳಿದಳು, "ಹೇ ಗೌತಮ! ಸೂರ್ಯನ ಕಿರಣಗಳನ್ನೇ ಚಂದ್ರನು ಕೇವಲ ಪ್ರತಿಫಲಿಸುತ್ತಾನೆ; ಆದರೆ, ಅವುಗಳ ದಹನಶೀಲತೆಯು ಸಂಪೂರ್ಣವಾಗಿ ಮಾಯವಾಗಿರುತ್ತದೆ. ಇದು ಚಂದ್ರನ ಕೆಲಸ. ಹಾಗಿದ್ದರೆ, ಇದರ ಹಿಂದಿನ ಕಾರಣ ತತ್ವ ಮತ್ತು ಮೂಲತತ್ವವನ್ನು ನೀನು ಕಂಡುಹಿಡಿದಿದ್ದೀಯಾ?”
ಋಷಿ ಗೌತಮ ಉತ್ತರಿಸಿದ, “ತಾಯೇ! ನಾನು ಈ ವಿಭಾಗದಲ್ಲಿ ಇನ್ನೂ ಒಬ್ಬ ವಿದ್ಯಾರ್ಥಿ. 'ಸೂರ್ಯಕಿರಣದಿಂದ ಚಂದ್ರಕಿರಣಕ್ಕೆ' ಇರುವ ಈ ಶಾಸ್ತ್ರವನ್ನು ನಾನು ಇನ್ನೂ ಸರಿಯಾಗಿ ಅಭ್ಯಾಸ ಮಾಡಿಲ್ಲ.”
ಅದೇ ಕ್ಷಣದಲ್ಲಿ, ಪಾರ್ವತಿ ಗೌತಮನಿಗೆ ಹೇಳಿದಳು, “ಓ ವತ್ಸ ಗೌತಮ! ನೀನು ಅತ್ಯಂತ ಬುದ್ಧಿವಂತ, ಕಷ್ಟಪಟ್ಟು ದುಡಿಯುವ ಮತ್ತು ಪ್ರಾಮಾಣಿಕ ವಿದ್ಯಾರ್ಥಿ, ಅಧ್ಯಾಪಕ ಹಾಗೂ ವಿಜ್ಞಾನಿಯೂ ಹೌದು. 'ಸೂರ್ಯನ ಕಿರಣಗಳು ಚಂದ್ರನಿಂದ ಪ್ರತಿಫಲಿತವಾಗುವಾಗ ಹೇಗೆ ಸೌಮ್ಯ, ತಂಪಾದ ಮತ್ತು ಆಹ್ಲಾದಕರವಾಗುತ್ತವೆ' ಎಂಬುದನ್ನು ನೀನು ಕಂಡುಹಿಡಿಯುವುದು ಬಹಳ ಮುಖ್ಯ. ಈ ಅಧ್ಯಯನ ಪೂರ್ಣವಾದ ಕೂಡಲೇ ನಿನ್ನ ಸ್ವಭಾವದಲ್ಲಿರುವ ಉಗ್ರತೆಯು ಮಾಯವಾಗುತ್ತದೆ ಮತ್ತು ನಿನ್ನಲ್ಲಿರುವ ಏಕೈಕ ತಾಮಸ ಗುಣವಾದ 'ಅನಿಯಂತ್ರಿತ ಕೋಪ'ವು ಇಲ್ಲವಾಗುತ್ತದೆ. ಮತ್ತು ಇದನ್ನು ನೀನೇ ನಿನಗಾಗಿ ಕಂಡುಹಿಡಿಯಬೇಕು. ಏಕೆಂದರೆ 'ಸಂಶೋಧನೆ'ಯು ಮಾನವನನ್ನು ಪರಿಪೂರ್ಣತೆಯ ಕಡೆಗೆ ಕೊಂಡೊಯ್ಯುವ ಅತ್ಯಂತ ಮಹತ್ವದ ಪ್ರಕ್ರಿಯೆಯಾಗಿದೆ.”
ಈಗ ಲೋಪಮುದ್ರೆ ಮತ್ತೆ ಮಾತನಾಡಲು ಪ್ರಾರಂಭಿಸಿದಳು, “ಇಲ್ಲಿ ನೆರೆದಿರುವ ಶ್ರೇಷ್ಠ ಶ್ರದ್ಧಾವಂತರೇ! ಶಾಂಭವಿ ವಿದ್ಯೆಯ ಎರಡನೇ ಮೆಟ್ಟಿಲಲ್ಲಿ, 'ನಾನು ಆದಿಮಾತೆಯನ್ನು ಪ್ರಸನ್ನಗೊಳಿಸಿಕೊಳ್ಳಬೇಕು ಮತ್ತು ಯಾವಾಗಲೂ ಪ್ರಸನ್ನವಾಗಿ ಇಡಬೇಕು, ಅದೇ ರೀತಿ ನಾನು ತ್ರಿವಿಕ್ರಮನ ಸತ್‌ಶಿಷ್ಯ ಮತ್ತು ಸುಪುತ್ರ ಆಗಬೇಕು ಮತ್ತು ಯಾವಾಗಲೂ ಅವನ ಸೇವೆಯನ್ನೇ ಮಾಡಬೇಕು' ಈ ಹಂಬಲವೇ ಏಕೈಕ ಸಾಧನವಾಗಿದೆ.
ತ್ರಿವಿಕ್ರಮನು ನಮ್ಮ ಸದ್ಗುರು ಆಗಲು, ಅತ್ಯಂತ ಶ್ರೇಷ್ಠ 'ಮಣಿದ್ವೀಪಮಂತ್ರ' ಅಥವಾ 'ಶ್ರೀಗುರುಕ್ಷೇತ್ರಮ್ ಮಂತ್ರ'ವನ್ನು ಉಚ್ಚರಿಸುವುದು ಮತ್ತು 'ಅಂಬಜ್ಞನಾಗಿರುವುದು' ಈ ಎರಡು ವಿಷಯಗಳು ಮಾತ್ರ ಅವಶ್ಯಕವಾಗಿವೆ.ಈ ಎರಡನೇ ಮೆಟ್ಟಿಲಿನ ಮೇಲೆ ಅನೇಕ ವರ್ಷಗಳವರೆಗೆ ಶ್ರಮಿಸಬೇಕಾಗುತ್ತದೆ ಮತ್ತು ಆಗ ಮಾತ್ರ ಶಾಂಭವಿ ವಿದ್ಯೆಯ ಮೂರನೇ ಮೆಟ್ಟಿಲು ಅಂದರೆ ವರ್ಗವು ನಮಗಾಗಿ ತೆರೆದುಕೊಳ್ಳುತ್ತದೆ.
ಶಾಂಭವಿ ವಿದ್ಯೆಯ ಈ ಮೊದಲ ಎರಡು ವರ್ಗಗಳ (ಮೆಟ್ಟಿಲುಗಳ) ಅಧಿಷ್ಠಾತ್ರಿ ಶೈಲಪುತ್ರಿ ಪಾರ್ವತಿ.
ಪಾರ್ವತಿಯ ಈ ಒಂಭತ್ತು 'ನವದುರ್ಗಾ' ಸ್ವರೂಪಗಳೇ ಕ್ರಮವಾಗಿ ಶಾಂಭವಿ ವಿದ್ಯೆಯ ಹದಿನೆಂಟು ವರ್ಗಗಳ ಅಧಿಷ್ಠಾತ್ರಿ ದೇವತೆಗಳಾಗಿವೆ ಮತ್ತು ಅದರ ಹಿಂದೆ ಕೂಡ ಒಂದು ಕಾರಣ ಪರಂಪರೆ ಮತ್ತು ಸಿದ್ಧಾಂತ ಇದೆ.
ಶಾಂಭವಿ ವಿದ್ಯೆಯು ಮಾನವನ ಜೀವನವನ್ನು ಪರಿಪೂರ್ಣತೆಯ ಕಡೆಗೆ ಕೊಂಡೊಯ್ಯುವ ವಿಕಾಸ (ಕ್ರಮೇಣವಾದ ಬೆಳವಣಿಕೆ). ಅದು ಕ್ರಾಂತಿ ಮಾರ್ಗದಲ್ಲಿ ಎಂದಿಗೂ ಪ್ರಯಾಣಿಸುವುದಿಲ್ಲ ಮತ್ತು ಭಕ್ತಮಾತೆ ಪಾರ್ವತಿಯ ಸಂಪೂರ್ಣ ಚರಿತ್ರೆಯೇ ಶಾಂಭವಿ ವಿದ್ಯೆಯ ಒಂದು ಅವತಾರರೂಪದ ಉದಾಹರಣೆಯಾಗಿದೆ.”
ಶಿವ-ಋಷಿ ತುಂಬುರು ಮತ್ತು ದೇವರ್ಷಿ ನಾರದರು ಅತ್ಯಂತ ವಿನಯದಿಂದ ಪ್ರಣಾಮ ಮಾಡಿ ಬ್ರಹ್ಮವಾದಿನಿ ಲೋಪಮುದ್ರೆಯನ್ನು ಕೇಳಿದರು, “ಓ ಲೋಪಮುದ್ರೆ! ದಯವಿಟ್ಟು ಇನ್ನೂ ಹೆಚ್ಚು ವಿಸ್ತಾರವಾಗಿ, ಪಾರ್ವತಿಯ ಚರಿತ್ರೆ ಮತ್ತು ಈ ನವದುರ್ಗೆಯರ ಸ್ವರೂಪಗಳು ಹಾಗೂ ಶಾಂಭವಿ ವಿದ್ಯೆಯ ಹದಿನೆಂಟು ವರ್ಗಗಳ ಜೊತೆಗಿನ ಅವುಗಳ ಸಂಬಂಧವನ್ನು ವಿವರಿಸಿ ಹೇಳುತ್ತೀಯಾ?”
ಲೋಪಮುದ್ರೆ ಪ್ರಸನ್ನ ಮುಖದಿಂದ ಉತ್ತರಿಸಿದಳು, “ಹೌದು, ಖಂಡಿತ. ಏಕೆಂದರೆ ಅದನ್ನು ಕಲಿಯದೆ ಶಾಂಭವಿ ವಿದ್ಯೆಯ ಪ್ರಾಥಮಿಕ ಪರಿಚಯವೂ ಕೂಡ ಅಪೂರ್ಣವಾಗಿರುತ್ತದೆ.
ಓ ಶ್ರೇಷ್ಠ ಶ್ರದ್ಧಾವಂತರೇ!
'ಸತಿ' ರೂಪದ ಆತ್ಮದಹನದ ನಂತರ, ಈ ಶಿವಪ್ರಿಯೆ 'ಪಾರ್ವತಿ'ಯಾಗಿ ಹಿಮಾಲಯನ ಗರ್ಭದಲ್ಲಿ ಜನಿಸಿದಳು ಮತ್ತು ಅದಕ್ಕಾಗಿಯೇ ಈಕೆ ಶೈಲಪುತ್ರಿ. ಈ ಶೈಲಪುತ್ರಿ ಅತ್ಯಂತ ಆದರ್ಶ ಮಗಳಾಗಿದ್ದಳು. 'ಮಗಳು' ಆಗಿ ಇವಳು ತಂದೆ ಹಿಮವಾನ ಮತ್ತು ತಾಯಿ ಮೇನಾ ಇವರಿಗೆ ಕೊಟ್ಟ ಪರಿಪೂರ್ಣ ಆನಂದವು ನಿಜಕ್ಕೂ ವಿಶ್ವದ ಪ್ರತಿಯೊಬ್ಬ ಮಗುವಿಗೂ ಅತ್ಯಂತ ಆದರ್ಶವಾಗಿದೆ. ಮತ್ತು ಶಾಂಭವಿ ವಿದ್ಯೆಯ ಉಪಾಸಕನಿಗೆ ಎರಡನೇ ಮೆಟ್ಟಿಲಿನಲ್ಲಿ ತನ್ನ ತಂದೆ ತ್ರಿವಿಕ್ರಮನನ್ನು ಸಂತೋಷಗೊಳಿಸಬೇಕಾಗಿದೆ. ಈ ಕಾರಣದಿಂದಲೇ ಶಾಂಭವಿ ವಿದ್ಯೆಯ ಮೊದಲ ಎರಡು ವರ್ಗಗಳ ಅಧಿಷ್ಠಾತ್ರಿ ಶೈಲಪುತ್ರಿ ಪಾರ್ವತಿ. ಅಂದರೆ ನವರಾತ್ರಿಯ ಪ್ರತಿಪದೆಯ - ಮೊದಲ ಹಗಲು-ರಾತ್ರಿಯ ನಾಯಕಿ.
ಇದೇ ಆದರ್ಶ ಮಗಳು ಶೈಲಪುತ್ರಿ ಮುಂದೆ ಸರ್ವಗುಣಸಂಪನ್ನ ಮತ್ತು ಶ್ರೇಷ್ಠ ಪತಿಯನ್ನು ಪಡೆಯಲು, ಅಂದರೆ ಪರಮಶಿವನು ಅವಳನ್ನು ಸ್ವೀಕರಿಸಬೇಕು ಎಂದು ಶುದ್ಧ ಮಾನವೀಯ ಪ್ರಯತ್ನಗಳಿಂದಲೇ ತಪಸ್ಸಿಗೆ ಕುಳಿತಳು. ಅದೇ ಅವಳ ಸ್ವರೂಪವನ್ನು 'ನವದುರ್ಗಾ ಬ್ರಹ್ಮಚಾರಿಣಿ' ಎಂದು ಕರೆಯುತ್ತಾರೆ ಮತ್ತು ಇವಳು ಶಾಂಭವಿ ವಿದ್ಯೆಯ ಮೂರನೇ ಮತ್ತು ನಾಲ್ಕನೇ ವರ್ಗಗಳ ಅಧಿಷ್ಠಾತ್ರಿ. ಅಂದರೆ ನವರಾತ್ರಿಯ ದ್ವಿತೀಯಾ ತಿಥಿಯ ಹಗಲು-ರಾತ್ರಿಯ ನಾಯಕಿ.
ಏಕೆಂದರೆ ಶಾಂಭವಿ ವಿದ್ಯೆಯ ಮೂರನೇ ಮತ್ತು ನಾಲ್ಕನೇ ಮೆಟ್ಟಿಲಿಗೆ (1) ಏಕಾಂತ (2) ಆರಾಧ್ಯ ದೇವತೆಯ ಚಿಂತನೆ (3) ಅವರ ಚರಣಗಳಿಗೆ ಸಮರ್ಪಣೆಯ ಸಂಪೂರ್ಣ ಭಾವನೆ (4) ಮತ್ತು ಅದಕ್ಕಾಗಿ ಯಾವುದೇ ತ್ಯಾಗ ಮಾಡಲು ಸಿದ್ಧತೆ - ಈ ನಾಲ್ಕು ಸಾಧನಗಳ ಅವಶ್ಯಕತೆ ಇರುತ್ತದೆ ಮತ್ತು ಈ ನಾಲ್ಕೂ ಗುಣಗಳು ಬ್ರಹ್ಮಚಾರಿಣಿಯ ಚಿಂತನೆ ಮತ್ತು ಪೂಜೆಯಿಂದ ಮನುಷ್ಯನಿಗೆ ಪ್ರಾಪ್ತವಾಗುತ್ತವೆ.”
ಶಿವ-ಋಷಿ ತುಂಬುರು ಗೌರವದಿಂದ ಪ್ರಶ್ನಿಸಿದರು, “ಆದರೆ ಯಾವ ಆರಾಧ್ಯ ದೇವತೆಯನ್ನು ಆರಿಸಬೇಕು?”
ಈಗ ಬ್ರಹ್ಮರ್ಷಿ ಯಾಜ್ಞವಲ್ಕ್ಯರು ಎದ್ದು ನಿಂತು ಹೇಳಿದರು, “ಶ್ರೀ ಚಂಡಿಕಾ ಕುಲದಲ್ಲಿರುವ ಯಾರನ್ನಾದರೂ ಒಬ್ಬರನ್ನು ತನ್ನ ಆರಾಧ್ಯ ದೇವತೆ ಎಂದು ಆಯ್ಕೆ ಮಾಡಿಕೊಳ್ಳುವ ಸಂಪೂರ್ಣ ಸ್ವಾತಂತ್ರ್ಯವನ್ನು ಆದಿಮಾತೆ ಪ್ರತಿ ಶ್ರದ್ಧಾವಂತನಿಗೂ ನೀಡಿದ್ದಾಳೆ. ಆದ್ದರಿಂದ, ಯಾವ ದೇವತೆಯನ್ನು ಯಾರು ಇಷ್ಟಪಡುತ್ತಾರೋ, ಯಾರಿಗೆ ಹತ್ತಿರವೆನಿಸುತ್ತದೆಯೋ ಅದನ್ನು ಆಯ್ಕೆ ಮಾಡುವ ಸಂಪೂರ್ಣ ಹಕ್ಕು ಪ್ರತಿ ಶ್ರದ್ಧಾವಂತನಿಗೂ ಇದೆ. 'ಇದೇ ದೇವತೆಯನ್ನು ಆರಿಸಬೇಕು' ಎಂಬ ನಿಯಮ ಇಲ್ಲ.”
ದೇವರ್ಷಿ ನಾರದರು ತಮ್ಮ ಎಂದಿನ ತಮಾಷೆ ರೀತಿಯಲ್ಲಿ ಬ್ರಹ್ಮರ್ಷಿ ಯಾಜ್ಞವಲ್ಕ್ಯರನ್ನು ಪ್ರಶ್ನಿಸಿದರು, “ಒಬ್ಬ ಶ್ರದ್ಧಾವಂತನ ಸಂಪೂರ್ಣ ಜೀವನಯಜ್ಞದ ಮಾರ್ಗದರ್ಶಕರಾಗಿರುವ ಮತ್ತು ಸ್ವತಃ ತ್ರಿವಿಕ್ರಮನು 'ನಿತ್ಯಗುರು' ಎಂದು ಸ್ವೀಕರಿಸಿರುವ ಬ್ರಹ್ಮರ್ಷಿ ಯಾಜ್ಞವಲ್ಕ್ಯರು ಶಾಂಭವಿ ವಿದ್ಯೆಯನ್ನು ಸಾಧನೆ ಮಾಡುವಾಗ ತಮ್ಮ ಆರಾಧ್ಯ ದೇವತೆ ಎಂದು ಯಾರನ್ನು ಆರಿಸಿಕೊಂಡಿದ್ದರು?”
ಬ್ರಹ್ಮರ್ಷಿ ಯಾಜ್ಞವಲ್ಕ್ಯರು ನಾರದನ ಆಟವನ್ನು ಅರಿತುಕೊಂಡು ಅತ್ಯಂತ ಗೌರವದಿಂದ, ಆದರೆ ಹಾಗಿದ್ದರೂ ಕೂಡ ಅಸ್ಪಷ್ಟವಾಗಿಯೇ ಉತ್ತರಿಸಿದರು, “ನನ್ನ ಆರಾಧ್ಯ ದೇವತೆಯ ಚರಿತ್ರೆಯನ್ನು ನೀನು ಇನ್ನೂ ನೋಡಿಯೂ ಇಲ್ಲ ಮತ್ತು ಅದು ನಿನಗೆ ಬೇಗನೆ ತಿಳಿಯುತ್ತದೆ. ಏಕೆಂದರೆ ನಿನಗೂ ಮತ್ತು ನನಗೂ ಇಬ್ಬರಿಗೂ ಭಂಡಾಸುರನ ಜನ್ಮ ಆಗಿದೆ ಎಂದು ತಿಳಿದಿದೆ.”
ಸದ್ಗುರು ಶ್ರೀ ಅನಿರದ್ಧ ಬಾಪೂ ಅವರು ತಮ್ಮ ತುಳಸಿಪತ್ರ-1383 ಎಂಬ ಸಂಪಾದಕೀಯದಲ್ಲಿ ಬರೆಯುತ್ತಾರೆ,
ಭಕ್ತಮಾತೆ ಪಾರ್ವತಿ ಮತ್ತು ಋಷಿ ಗೌತಮನ ನಡುವೆ ಹಾಗೂ ನಂತರ ದೇವರ್ಷಿ ನಾರದ ಮತ್ತು ಬ್ರಹ್ಮರ್ಷಿ ಯಾಜ್ಞವಲ್ಕ್ಯರ ನಡುವಿನ ಸಂಭಾಷಣೆಯು ಅಲ್ಲಿ ಉಪಸ್ಥಿತರಿದ್ದ ಋಷಿಕುಮಾರರು ಮತ್ತು ಶಿವಗಣಗಳಿಗೆ ಸ್ಪಷ್ಟವಾಗಿ ಕೇಳಿಸಿತ್ತು; ಆದರೆ ಅಷ್ಟೇ ಸ್ಪಷ್ಟವಾಗಿ ಅರ್ಥವಾಗಿರಲಿಲ್ಲ. 'ಭಂಡಾಸುರನು ಜನ್ಮ ತಳೆದಿದ್ದಾನೆ' ಎಂಬ ಬ್ರಹ್ಮರ್ಷಿ ಯಾಜ್ಞವಲ್ಕ್ಯರ ಮಾತುಗಳಿಂದ ಎಲ್ಲರೂ ಆಶ್ಚರ್ಯಚಕಿತರಾಗಿದ್ದರು.
ಅವರೆಲ್ಲರ ಅಸ್ವಸ್ಥತೆಯನ್ನು ನೋಡಿ, ಭಕ್ತಮಾತೆ ಪಾರ್ವತಿಯು ಸ್ವತಃ ಮತ್ತೆ ಮಾತನಾಡಲು ಪ್ರಾರಂಭಿಸಿದಳು, “ಓ ಶ್ರದ್ಧಾವಂತರೇ! ಭಂಡಾಸುರನ ಬಗ್ಗೆ ಇರುವ ಆಲೋಚನೆಗಳನ್ನು ಮತ್ತು ಕುತೂಹಲವನ್ನು ಮನಸ್ಸಿನಿಂದ ತೆಗೆದುಹಾಕಿ. ಏಕೆಂದರೆ ಭಂಡಾಸುರನು ಜನ್ಮ ತಳೆದಿದ್ದರೂ ಕೂಡ, ಅವನು ಇನ್ನೂ ಯಾವುದೇ ಚಟುವಟಿಕೆಗಳನ್ನು ಪ್ರಾರಂಭಿಸಿಲ್ಲ. ಮತ್ತು ನಾನು ನಿಮಗೆ ಇಷ್ಟೇ ಹೇಳುತ್ತೇನೆ, ಭಂಡಾಸುರನ ಜೊತೆ ಯುದ್ಧ ಆಗಲೇಬೇಕು. ಆದರೆ ಅದು ಪ್ರಾರಂಭವಾಗುವ ಮೊದಲು ನಿಮಗೆಲ್ಲರಿಗೂ ಶಾಂಭವಿ ವಿದ್ಯೆ ಅರ್ಥವಾಗುವುದು ಬಹಳ ಮುಖ್ಯ ಮತ್ತು ನಮ್ಮ ಹತ್ತಿರ ಸಾಕಷ್ಟು ಸಮಯವೂ ಇದೆ.
'ಶಿವ-ತ್ರಿಪುರಾಸುರ ಯುದ್ಧ'ವು ಹೇಗೆ ಶಾಂಭವಿ ವಿದ್ಯೆಯ ಕಥಾಸ್ವರೂಪ ಆಗಿದೆಯೋ, ಅದೇ ರೀತಿ 'ಭಂಡಾಸುರನ ಜೊತೆ ಯುದ್ಧ ಮತ್ತು ಅವನ ವಧೆ'ಯು ಶಾಂಭವಿ ವಿದ್ಯೆಯ ಮಾನವ ಜೀವನದಲ್ಲಿನ ಪ್ರತ್ಯಕ್ಷ ಪ್ರಭಾವ ಮತ್ತು ಕಾರ್ಯದ ಕಥಾಸ್ವರೂಪವಾಗಿದೆ.”
ಭಕ್ತಮಾತೆ ಪಾರ್ವತಿಯ ಈ ಮಾತುಗಳೊಂದಿಗೆ ಅಲ್ಲಿನ ಎಲ್ಲರ ಮನಸ್ಸು ಮತ್ತೆ ಶಾಂತವಾಯಿತು ಮತ್ತು ಅವರು ಮತ್ತೆ ಲೋಪಮುದ್ರೆಯ ಕಡೆಗೆ ತಿರುಗಿ, ಅವಳು ಈಗ ಮುಂದೆ ಏನು ಹೇಳುತ್ತಾಳೆ ಎಂಬುದರ ಮೇಲೆ ಗಮನವಿಟ್ಟು ಕುಳಿತರು.
ಬ್ರಹ್ಮವಾದಿನಿ ಲೋಪಮುದ್ರೆ ಋಷಿ ಗೌತಮನ ಕಡೆಗೆ ನೋಡಿ ಮುಗುಳು ನಗುತ್ತಾ ಹೇಳಿದಳು, “ಪ್ರಿಯ ವತ್ಸ ಗೌತಮ! ನೀನು 'ಸೂರ್ಯಕಿರಣದಿಂದ ಚಂದ್ರಕಿರಣಕ್ಕೆ' ಇರುವ ಪ್ರಯಾಣದ ಬಗ್ಗೆ ಯಾವ ಅಭ್ಯಾಸವನ್ನು ಮಾಡಲಿದ್ದೀಯೋ, ಅದರ ಮೂಲವು ಮೂರನೇ ನವದುರ್ಗಾ 'ಚಂದ್ರಘಂಟಾ' ಆಗಿದ್ದಾಳೆ.
ಈ 'ಚಂದ್ರಘಂಟಾ ಪಾರ್ವತಿ'ಯು ನವರಾತ್ರಿಯ ತೃತೀಯೆಯ ಹಗಲು-ರಾತ್ರಿಯ ನಾಯಕಿ. ಇವಳಿಗೆ ಹತ್ತು ಕೈಗಳಿವೆ ಮತ್ತು ಇವಳು ತನ್ನ ಮಸ್ತಕದ ಮೇಲೆ ಅರ್ಧಚಂದ್ರವನ್ನೇ, ಅಂದರೆ ಶುದ್ಧ ಅಷ್ಟಮಿಯ ಚಂದ್ರನನ್ನೇ, ತನ್ನ ಕೂದಲಿನ ಅಲಂಕಾರದಲ್ಲಿ ಸೂಕ್ಷ್ಮವಾದ ಗಂಟೆಯಂತೆ ಬಳಸುತ್ತಾಳೆ.
ಇವಳ ಈ ಚಂದ್ರರೂಪಿ ಗಂಟೆಯಿಂದ ಹೊರಬರುವ ಬೆಳಕು ನಾದರೂಪದಲ್ಲಿಯೂ ಇರುತ್ತದೆ ಮತ್ತು ಈ ಗಂಟೆಯಿಂದ ಹೊರಬರುವ ಧ್ವನಿಯು ಬೆಳಕಿನ ಅಲೆಗಳಿಂದ ಮಾಡಲ್ಪಟ್ಟಿರುತ್ತದೆ.
ಇಂತಹ ಈ ಮೂರನೇ ನವದುರ್ಗಾ ಚಂದ್ರಘಂಟಾ, ಧ್ವನಿ ಮತ್ತು ಬೆಳಕು ಎಂಬ ಈ ಎರಡು ಮೂಲ ಅಭಿವ್ಯಕ್ತಿಗಳನ್ನು ಒಂದಾಗಿಸುವವಳು ಮತ್ತು ಅವುಗಳ ಒಂದೇ ರೂಪವನ್ನು ತೋರಿಸುವವಳು.ಬೆಳಕಿನ ಕಿರಣಗಳ ವೇಗವು ಧ್ವನಿ ತರಂಗಗಳ ವೇಗಕ್ಕಿಂತ ಅನೇಕ ಪಟ್ಟು ಹೆಚ್ಚಾಗಿದೆ. ಆದರೆ ಈ ನವದುರ್ಗೆಯ ಈ ಚಂದ್ರರೂಪಿ ಗಂಟೆ ಮಾತ್ರ ಬೆಳಕಿನ ತರಂಗಗಳು ಮತ್ತು ಧ್ವನಿ ತರಂಗಗಳ ಪರಸ್ಪರ ರೂಪಾಂತರವನ್ನು (Transformation) ಸುಲಭವಾಗಿ ಮಾಡುತ್ತದೆ. ಮತ್ತು ಈ ವಿಷಯವು ಎಲ್ಲಾ ಶ್ರದ್ಧಾವಂತರಿಗೆ ಅತ್ಯಂತ ಮಹತ್ವದ ವಿಷಯವಾಗಿದೆ ಮತ್ತು ಇದನ್ನು ಶಾಶ್ವತವಾಗಿ ನೆನಪಿಟ್ಟುಕೊಳ್ಳಬೇಕು.
ಏಕೆಂದರೆ ಯಾವ ಪ್ರಮಾಣದಲ್ಲಿ ಮಾನವನಿಗೆ ಚಂಡಿಕಾ ಕುಲದ ಮೇಲೆ ಶ್ರದ್ಧೆ ಮತ್ತು ವಿಶ್ವಾಸ ಇರುತ್ತದೆಯೋ, ಅದೇ ಪ್ರಮಾಣದಲ್ಲಿ ಈ ಚಂದ್ರಘಂಟಾ ನವದುರ್ಗೆಯು ಅವನ ಜೀವನದಲ್ಲಿ ಕ್ರಿಯಾಶೀಲಳಾಗುತ್ತಾಳೆ. ಮತ್ತು ಆಗ ಇವಳಿಂದಲೇ ಆ ಶ್ರದ್ಧಾವಂತನ ಪ್ರಾರ್ಥನೆಯ ಧ್ವನಿಯು ಬೆಳಕಿನ ಅಲೆಗಳ ವೇಗದಲ್ಲಿ ಪ್ರಯಾಣ ಮಾಡುತ್ತದೆ ಮತ್ತು ಅವನ ಪ್ರಾರ್ಥನೆಯ ಫಲವೂ ಕೂಡ, ಅಂದರೆ ಚಂಡಿಕಾ ಕುಲದ ವರವೂ ಕೂಡ ಅದೇ ವೇಗದಿಂದ ಅವನ ಹತ್ತಿರ ಬರುತ್ತದೆ.
ಆದರೆ, 'ನನಗೆ ನಿನ್ನ ಮೇಲೆ ಸಂಪೂರ್ಣ ವಿಶ್ವಾಸ ಇದೆ' ಎಂದು ಕೇವಲ ಬಾಯಿ ಮಾತಿನಿಂದ ಹೇಳಿದರೆ ಸಾಲದು, ಅದು ನಿಮ್ಮ ಕೃತಿಯಲ್ಲಿಯೂ ಕೂಡ ಇಳಿಯಬೇಕು. ಮತ್ತು ಶಾಂಭವಿ ವಿದ್ಯೆಯ ಐದನೇ ಮತ್ತು ಆರನೇ ವರ್ಗ, ಅಂದರೆ ಮೆಟ್ಟಿಲು, ಶ್ರದ್ಧೆ ಮತ್ತು ವಿಶ್ವಾಸವನ್ನು ತಮ್ಮ ಕೃತಿಗಳಿಂದ ಮತ್ತು ಆಜ್ಞಾಪಾಲನೆಯಿಂದ ಸಾಬೀತುಪಡಿಸುವ ಮೆಟ್ಟಿಲು ಆಗಿದೆ.
ಈ ಕಾರಣದಿಂದಲೇ ಶಾಂಭವಿ ವಿದ್ಯೆಯ 5ನೇ ಮತ್ತು 6ನೇ ಮೆಟ್ಟಿಲುಗಳೇ ಶ್ರದ್ಧಾಚರಣೆ ಮತ್ತು ವಿಶ್ವಾಸಾಚರಣೆ ಮತ್ತು ಈ ಎರಡೂ ವರ್ಗಗಳ ಒಡತಿ 'ನವದುರ್ಗಾ ಚಂದ್ರಘಂಟಾ'.
ಈ ಎರಡು ಮೆಟ್ಟಿಲುಗಳು ಶ್ರದ್ಧಾವಂತನಿಗೆ ಅತ್ಯಂತ ಮಹತ್ವದ ವಿಷಯವನ್ನು ನೀಡುತ್ತವೆ - ಧೈರ್ಯ (ಸಬೂರಿ). ಈ ಧೈರ್ಯವಿಲ್ಲದ ಮನುಷ್ಯನ ಜೀವನವು ಒಣಗಿಹೋಗುತ್ತದೆ. ಧೈರ್ಯದ ಕೊರತೆಯಿಂದಲೇ ಮನುಷ್ಯ ತಪ್ಪಾದ ದಾರಿಯಲ್ಲಿ ಹೋಗುತ್ತಲೇ ಇರುತ್ತಾನೆ, ತನ್ನ ಅಹಂಕಾರವನ್ನು ಹೆಚ್ಚಿಸಿಕೊಳ್ಳುತ್ತಲೇ ಇರುತ್ತಾನೆ, ಮೋಹಕ್ಕೆ ಒಳಗಾಗುತ್ತಾನೆ ಮತ್ತು ಸರಿಯಾದ ದಿಕ್ಕನ್ನು ತಪ್ಪಾದ ದಿಕ್ಕು ಎಂದು ತಿಳಿದುಕೊಳ್ಳುತ್ತಾನೆ.
ಯಾವ ಶ್ರದ್ಧಾವಂತನು ತನ್ನ ಆರಾಧ್ಯ ದೇವತೆಯ ಚಿಂತನೆ, ಭಜನೆ, ಪೂಜೆ, ನಾಮಸ್ಮರಣೆ ಮತ್ತು ಗುಣಸಂಕೀರ್ತನೆ ಮಾಡುತ್ತಾ ತನ್ನ ವಿಶ್ವಾಸವನ್ನು ಕೃತಿಯಿಂದ ಪ್ರಕಟಿಸುತ್ತಾನೋ, ಅವನಿಗೆ ಈ ನವದುರ್ಗಾ ಚಂದ್ರಘಂಟಾಳಿಂದ ಕಾಲಕಾಲಕ್ಕೆ ಧೈರ್ಯದ ಪೂರೈಕೆ ಆಗುತ್ತಲೇ ಇರುತ್ತದೆ ಮತ್ತು ಅದು ಕೂಡ ಚಂದ್ರಕಿರಣಗಳಂತೆ - ಸೌಮ್ಯವಾಗಿ ಮತ್ತು ಶಾಂತವಾಗಿ.
ಪಾರ್ವತಿಯ ಇದೇ ಸ್ವರೂಪವು ಶಿವನ ಜೊತೆ ಅವಳ ವಿವಾಹವಾಗುವಾಗ ಪ್ರಕಟವಾಯಿತು ಮತ್ತು ಅದಕ್ಕಾಗಿಯೇ 'ಚಂದ್ರಘಂಟಾ'ವೇ ಶಿವಪತ್ನಿ ಪಾರ್ವತಿಯ ನಿತ್ಯ ಸ್ವರೂಪವಾಗಿದೆ. ಈ 'ಚಂದ್ರಘಂಟಾ' ರೂಪದಲ್ಲಿ ಈ ಪಾರ್ವತಿ ಪರಮಶಿವನ ನಿತ್ಯ ಸಹಧರ್ಮಚಾರಿಣಿಯಾದಳು ಮತ್ತು ಶಿವನು ಅವಳ ಕೈಯನ್ನು ತನ್ನ ಕೈಯಲ್ಲಿ ತೆಗೆದುಕೊಳ್ಳುತ್ತಿದ್ದಂತೆಯೇ, ಅವಳು ಒಂದು ಸೌಮ್ಯ, ಶಾಂತ, ಸುಂದರ ಮತ್ತು ಸಾತ್ತ್ವಿಕ ನಗುವನ್ನು ನಕ್ಕಳು.
ಈ ನಗುವನ್ನೇ 'ಈಷತ್ ಹಾಸ್ಯ' ಎಂದು ಕರೆಯುತ್ತಾರೆ ಮತ್ತು ಈ ನಗುವಿನಿಂದಲೇ ಅನಂತ ಬ್ರಹ್ಮಾಂಡಗಳಲ್ಲಿ ಹೊಸಹೊಸ ನಕ್ಷತ್ರಗಳು ಜನ್ಮ ತಳೆಯುತ್ತಲೇ ಇರುತ್ತವೆ ಮತ್ತು ಆ ಪ್ರತಿ ನಕ್ಷತ್ರವು ಮೊದಲು ಮೊಟ್ಟೆಯ ಆಕಾರದಲ್ಲಿರುತ್ತದೆ. ಮತ್ತು ಈ ಕಾರಣದಿಂದಲೇ ನಾಲ್ಕನೇ ನವದುರ್ಗೆಯ ಹೆಸರು 'ಕೂಷ್ಮಾಂಡಾ' ಎಂದು, ಏಕೆಂದರೆ ಪ್ರತಿ ವಿಶ್ವವು ಮೊದಲು 'ಕೂಷ್ಮಾಂಡ' ರೂಪದಲ್ಲಿಯೇ ಇರುತ್ತದೆ.
ಶಾಂಭವಿ ವಿದ್ಯೆಯ 7ನೇ ಮತ್ತು 8ನೇ ವರ್ಗಗಳ ಅಂದರೆ ಮೆಟ್ಟಿಲುಗಳ ಅಧಿಷ್ಠಾತ್ರಿ ಈ 'ನವದುರ್ಗಾ ಕೂಷ್ಮಾಂಡಾ' ಆಗಿದ್ದಾಳೆ. ಏಕೆಂದರೆ ಶಾಂಭವಿ ವಿದ್ಯೆಯ 7ನೇ ಮತ್ತು 8ನೇ ಮೆಟ್ಟಿಲಲ್ಲಿ ಶ್ರದ್ಧಾವಂತನು ಕರ್ಮತಪಸ್ಸನ್ನು ಮಾಡಬೇಕಾಗುತ್ತದೆ - ಅಂದರೆ ಹೊಸ ಸಂಶೋಧನೆಗಳನ್ನು ಮಾಡಿ ಮಾನವ ಮಟ್ಟದಲ್ಲಿ ಹೊಸ ಸೃಷ್ಟಿಯನ್ನು ಮಾಡಬೇಕಾಗುತ್ತದೆ. ಮತ್ತು ಯಾವುದೇ ಹೊಸ ಸೃಷ್ಟಿಯು ನವದುರ್ಗಾ ಕೂಷ್ಮಾಂಡಳ ಶಕ್ತಿಪೂರೈಕೆ ಇಲ್ಲದೆ ಸಾಧ್ಯವೇ ಇಲ್ಲ.
ನವರಾತ್ರಿಯ ಚತುರ್ಥಿಯ ಹಗಲು-ರಾತ್ರಿಯ ಈ 'ಕೂಷ್ಮಾಂಡಾ ನವದುರ್ಗಾ' ನಾಯಕಿ ಮತ್ತು ಈ ಕಾರಣದಿಂದಲೇ ಮಾನವನು ಯಾವುದೇ ಹೊಸ ಶುಭ ಕಾರ್ಯವನ್ನು ನವರಾತ್ರಿಯ ಚತುರ್ಥಿಗೆ ಪ್ರಾರಂಭಿಸಿದರೆ, ಅವನ ಕೆಲಸವು ಸುಲಭವಾಗುತ್ತದೆ.
ಜೀವನದಲ್ಲಿ ಏನಾದರೂ ಶ್ರೇಷ್ಠ ಮತ್ತು ಅತ್ಯುತ್ತಮವಾದದನ್ನು ಮಾಡಿ ತೋರಿಸುವ ಇಚ್ಛೆ ಯಾವ ಶ್ರದ್ಧಾವಂತನಿಗೆ ಇರುತ್ತದೆಯೋ, ಅವನು ನವರಾತ್ರಿಯಲ್ಲಿನ ಚತುರ್ಥಿಯ ರಾತ್ರಿ ಖಂಡಿತವಾಗಿಯೂ ಜಾಗರಣೆ ಮಾಡಿ ಆದಿಮಾತೆಯ ಗ್ರಂಥಗಳನ್ನು ಓದಬೇಕು ಮತ್ತು ಹಗಲಿನಲ್ಲಿ ಅವಳ ಪೂಜೆಯನ್ನು ಮಾಡಬೇಕು.