ಲೋಕಮಾನ್ಯ ತಿಲಕರ ನಿಧನದ ಸುದ್ದಿ ಅಕ್ಷರಶಃ ವಾಯುವೇಗದಲ್ಲಿ ಇಡೀ ಭಾರತದಾದ್ಯಂತ ಹರಡಿತು. ಕ್ರಿ.ಶ. 1920 ರಲ್ಲಿ ದೂರಸಂಪರ್ಕದ ಸಾಧನಗಳು ತುಂಬಾ ಕಡಿಮೆ ಇದ್ದವು, ಹಾಗಿದ್ದರೂ ನಮ್ಮ ಪ್ರೀತಿಯ ನಾಯಕನ ನಿಧನದ ವಾರ್ತೆ ಭಾರತೀಯರಿಗೆ ಮೂಲೆ ಮೂಲೆಗೂ ಕೇವಲ ಎರಡು ಗಂಟೆಗಳಲ್ಲಿ ತಲುಪಿತ್ತು.
ತಿಲಕರ ಅಂತಿಮ ದರ್ಶನಕ್ಕಾಗಿ ಜನರ ಭಾರಿ ಜನಸ್ತೋಮವೇ ನೆರೆದಿತ್ತು. ಭಾರತದ ಮೂಲೆ ಮೂಲೆಯಿಂದ ಅನೇಕ ನಾಯಕರು ಹಾಗೂ ಸಾಮಾನ್ಯ ಭಾರತೀಯರು ಕೂಡ ಅಂತಿಮ ಯಾತ್ರೆಗಾಗಿ ಹೊರಟರು. ಆದರೆ ಪ್ರಯಾಣದ ಮಿತವಾದ ಸಾಧನಗಳಿಂದಾಗಿ (train, buses, planes) ಎಲ್ಲರೂ ಸಮಯಕ್ಕೆ ಸರಿಯಾಗಿ ಬಂದು ತಲುಪುವುದು ಸಾಧ್ಯವಿರಲಿಲ್ಲ.
ಒಬ್ಬ ಬ್ರಿಟಿಷ್ ವರದಿಗಾರ ನಮೂದಿಸಿರುವ ಪ್ರಕಾರ ಆ ವರ್ಣನೆ ಹೀಗಿದೆ - ‘ಸುದ್ದಿ ಮುಂಬೈ ಮತ್ತು ಮಹಾರಾಷ್ಟ್ರದಲ್ಲಿ ಮೊದಲು ಹರಡಿತು ಮತ್ತು ಸರ್ದಾರ್ ಗೃಹದ ಮುಂದೆ ಇಡೀ ಮುಂಬೈಯೇ ಬಂದಿದೆಯೇನೋ ಎಂಬಂತಿತ್ತು. ಯಾರು ಯಾರನ್ನು ತಡೆಯಲಾದೀತು?
ಭಾರತೀಯ ಮೂಲದ ಅನೇಕ ಪೊಲೀಸ್ ಅಧಿಕಾರಿಗಳು ಕೂಡ ಕಣ್ಣೀರು ಮತ್ತು ಬಿಕ್ಕಳಿಕೆಯನ್ನು ತಡೆಯಲಾಗಲಿಲ್ಲ. ಆ ಜನಸಂದಣಿಯಲ್ಲಿದ್ದ ಪ್ರತಿಯೊಬ್ಬ ಸ್ತ್ರೀ-ಪುರುಷ ಅಳುತ್ತಿದ್ದರು, ಲೋಕಮಾನ್ಯ ತಿಲಕರ ಹೆಸರಿನಲ್ಲಿ ಘೋಷಣೆ ಕೂಗುತ್ತಿದ್ದರು ಮತ್ತು ಮೈಯಲ್ಲಿಯ ಶಕ್ತಿಯನ್ನು ಹಾಕಿ ದರ್ಶನದ ದಿಕ್ಕಿನತ್ತ ಮುಂದೆ ಮುಂದೆ ಹೋಗುತ್ತಿದ್ದರು.
ಅಪಾರ ಜನಸಂದಣಿಯಿಂದಾಗಿ ದರ್ಶನವನ್ನು ನಿಲ್ಲಿಸುವ ನಿರ್ಧಾರ ತೆಗೆದುಕೊಳ್ಳಲಾಯಿತು, ಆದರೆ ‘ಆ ದಿನ’ ಸಾಮಾನ್ಯ ಭಾರತೀಯ ನಾಗರಿಕರು ಬ್ರಿಟಿಷ ಪೊಲೀಸ್ ಮಾತ್ರವಲ್ಲ, ಬ್ರಿಟಿಷ ಮೂಲದ ದೊಡ್ಡ ದೊಡ್ಡ ಹುದ್ದೆಯಲ್ಲಿರುವ ಪೊಲೀಸ್ ಅಧಿಕಾರಿಗಳಿಗೂ ಕೂಡ ಕಿಂಚಿತ್ತೂ ಹೆದರುತ್ತಿರಲಿಲ್ಲ.
ದರ್ಶನ ನಿಲ್ಲಿಸಿದ್ದರಿಂದ ನೊಂದ ಭಾರತೀಯ ಜನತೆಯ ಕ್ಷೋಭೆ ಮತ್ತು ಸಿಟ್ಟಿನ ಬಿಸಿ ಪೊಲೀಸ್ ಅಧಿಕಾರಿಗಳಿಗೆ ಚೆನ್ನಾಗಿಯೇ ತಟ್ಟತೊಡಗಿತು.
ಮುಂಬೈ ಪ್ರಾಂತ್ಯದ ರಾಜ್ಯಪಾಲ ಅವರು ವೈಸ್ರಾಯ್ ಅವರನ್ನು ಸಂಪರ್ಕಿಸಿ ಎಲ್ಲಾ ವೃತ್ತಾಂತವನ್ನು ತಿಳಿಸಿದರು. ಅಂತಿಮ ದರ್ಶನದಿಂದ ಅಥವಾ ಅಂತಿಮ ಯಾತ್ರೆಯಲ್ಲಿ ಪಾಲ್ಗೊಳ್ಳುವುದರಿಂದ ಒಬ್ಬನೇ ಒಬ್ಬ ಭಾರತೀಯನನ್ನು ತಡೆದರೂ ಸಹ ಭಾರಿ ದಂಗೆ ಏಳಬಹುದು ಮತ್ತು ಈ ಕೆರಳಿದ ಜನಸಂದಣಿಯ ಮುಂದೆ ಬ್ರಿಟಿಷ್ ಸರ್ಕಾರ, ಬ್ರಿಟಿಷ್ ಅಧಿಕಾರಿಗಳು ಮತ್ತು ಬ್ರಿಟಿಷ್ ಸೈನಿಕರು ಕೂಡ ಅಸಹಾಯಕರಾಗುತ್ತಾರೆ ಎಂದು ಬ್ರಿಟಿಷರಿಗೆ ಅರ್ಥವಾಯಿತು. ಒಂದು ವೇಳೆ ಗುಂಡು ಹಾರಿಸಿದರೆ ಇಡೀ ಭಾರತದಾದ್ಯಂತ ಬ್ರಿಟಿಷರಿಗೆ ‘ಜಾಗ ಸಾಲದಂತಾಗುತ್ತದೆ’ ಎಂಬ ಸ್ಥಿತಿಯಾಗುತತೆ ಎಂದು ಬ್ರಿಟಿಷರಿಗೆ ತಿಳಿಯಿತು.
ಇಂತಹ ಘಟನೆಗಳಿಂದ ಭಾರತೀಯ ಜನತೆಗೆ ತಮ್ಮ ಸಾಮರ್ಥ್ಯದ ಸರಿಯಾದ ಗುರುತಾಗುತ್ತದೆ ಮತ್ತು ಇದರ ದೀರ್ಘಕಾಲದ ಪರಿಣಾಮ ‘ಸ್ವರಾಜ್’ ಸ್ಥಾಪನೆಯಲ್ಲಿಯೇ ಆಗುತ್ತದೆ ಎನ್ನುವ ಮುಖ್ಯ ಭಯ ಅವರಿಗಿತ್ತು,
ಹಾಗೆಯೇ ತಿಲಕರ ಬಹಿರಂಗ ವಚನ - ‘ಸ್ವರಾಜ್ಯವು ನನ್ನ ಜನ್ಮಸಿದ್ಧ ಹಕ್ಕು ಮತ್ತು ಅದನ್ನು ನಾನು ಪಡೆದೇ ತೀರುತ್ತೇನೆ’, ತಿಲಕರ ನಿಧನದಿಂದಾಗಿ ಆದಷ್ಟು ಬೇಗ ನಿಜವಾಗುತ್ತದೆ ಎನಿಸಿತು.
ಮತ್ತು ಇದರಿಂದಾಗಿ ಕಪಟ ಹಾಗೂ ಕುತಂತ್ರದ ಸ್ವಭಾವದ ಬ್ರಿಟಿಷ್ ಸರ್ಕಾರವು ಇದ್ದಕ್ಕಿದ್ದಂತೆ ತನ್ನ ನಿಲುವನ್ನು ಬದಲಿಸಿತು ಮತ್ತು ಭಾರತೀಯ ನಾಯಕರಿಗೆ ಹಾಗೂ ಸಮಾಜಕ್ಕೆ ಕ್ರೋಧ ಉಂಟಾಗುವಂತಹ ಯಾವುದೇ ಕೆಲಸವನ್ನೂ ಮಾಡಬೇಡಿ ಎಂಬ ಆದೇಶವನ್ನು ಮೇಲಿನಿಂದ ಕೆಳಗಿನವರೆಗೆ ನೀಡಲಾಯಿತು.
ಬ್ರಿಟಿಷ್ ಪೊಲೀಸ್ ಅಧಿಕಾರಿಗಳು ಮತ್ತು ಸಾರ್ಜೆ೦ಟ್ ಗಳು, ಜನರು ಅಂತಿಮ ದರ್ಶನ ಪಡೆಯಲು ಹಾಗೂ ಅಂತಿಮ ಯಾತ್ರೆಯ ಸಮಯದಲ್ಲಿ ಸಹಾಯ ಮಾಡುತ್ತಿರುವುದು ಕಂಡುಬಂದಿತು. ಅದರಲ್ಲಿ ಪ್ರೇಮ ಅಥವಾ ಅಕ್ಕರೆ ಇರಲಿಲ್ಲ; ಬದಲಾಗಿ ಭವಿಷ್ಯದ ಚಿಂತೆಯಿತ್ತು. ಇದೊಂದು ದೊಡ್ಡ ಕಪಟ ನಾಟಕವಾಗಿತ್ತು.
ಲೋಕಮಾನ್ಯ ತಿಲಕರ ಅಂತಿಮ ದರ್ಶನಕ್ಕಾಗಿ ದೊಡ್ಡ ದೊಡ್ಡ ದಿಗ್ಗಜ ನಾಯಕರು, ಸಮಾಜ ಸುಧಾರಕರು, ಪತ್ರಕರ್ತರು, ಲೇಖಕರು, ವಕೀಲರು, ಉದ್ಯಮಿಗಳ ಸಾಲು ಸಾಲೇ ನಿಂತಿತ್ತು. ಮುಂಬೈಯ ಗುಜರಾತಿ ಹಾಗೂ ಮಾರ್ವಾಡಿ ಸಮಾಜದವರಂತೂ ಜನರ ಅನುಕೂಲಕ್ಕಾಗಿ ಅಲ್ಲಲ್ಲಿ ಕುಡಿಯುವ ನೀರು ಮತ್ತು ಲಿಂಬೂ ಶರಬತ್ತಿನ ವ್ಯವಸ್ಥೆ ಮಾಡಿದ್ದರು. ಅನೇಕ ಶ್ರೀಮಂತರು ಸಾಲಿನಲ್ಲಿ ಗಂಟೆಗಟ್ಟಲೆ ನಿಂತಿದ್ದ ಜನರಿಗಾಗಿ ನೀರು, ಹಾಲು ಮತ್ತು ಬಾಳೆಹಣ್ಣಿನ ವ್ಯವಸ್ಥೆ ಮಾಡಿದ್ದರು ಮತ್ತು ಮುಖ್ಯ ವಿಷಯವೆಂದರೆ ಇವರಲ್ಲಿ ಯಾವೊಬ್ಬ ಶ್ರೀಮಂತ ವ್ಯಕ್ತಿ, ಸಮಾಜ ಅಥವಾ ಸಂಸ್ಥೆಯವರು ತಮ್ಮ ಫಲಕ ಹಾಕಿ ಪ್ರಚಾರ ಪಡೆಯುತ್ತಿರಲಿಲ್ಲ.
ಆ ಜನಸಂದಣಿಯಲ್ಲಿದ್ದ ಮರಾಠಿ, ಗುಜರಾತಿ, ಮಾರ್ವಾಡಿ, ಉತ್ತರಪ್ರದೇಶದವರು, ಬಂಗಾಳಿ, ಕನ್ನಡಿಗರು, ತೆಲುಗು, ಸಿಖ್ ಹೀಗೆ ವಿವಿಧ ಭಾರತೀಯರ ಗುಂಪನ್ನು ನೋಡಿ, ಆಯಾ ಸಮಾಜದ ಗುಂಪುಗಳ ಚಿತ್ರಗಳನ್ನು ಬ್ರಿಟಿಷ್ ಪೊಲೀಸರು ತೆಗೆದು ವೈಸ್ರಾಯ್ ಗೆ ಕೂಡಲೇ ರವಾನಿಸಿದರು.
ಲೋಕಮಾನ್ಯ ತಿಲಕರ ಮೃತದೇಹವು ಅವರ ಅನುಯಾಯಿಗಳಿಗೆ ಕೇವಲ ಮೃತದೇಹವಾಗಿರಲಿಲ್ಲ. ಅವರ ಪಾಲಿಗೆ ಅದು ಲೋಕಮಾನ್ಯರ ಸಂಜೀವನ ಸಮಾಧಿಯಾಗಿತ್ತು. ದಿವ್ಯ ಯೋಗಾರೂಢ ಸ್ಥಿತಿಯಾಗಿತ್ತು, ಕರ್ಮಯೋಗದ ಅಂತಿಮ ಸ್ಥಿತಿಯಾಗಿತ್ತು.
ಮತ್ತು ಇದಕ್ಕಾಗಿಯೇ ತಿಲಕರ ದೇಹವನ್ನು ಪದ್ಮಾಸನದಲ್ಲಿ ಕುಳ್ಳಿರಿಸಲಾಗಿತ್ತು. ನ. ಚಿಂ. ಕೇಳಕರ್ ಅವರು ಸ್ಪಷ್ಟ ಶಬ್ದಗಳಲ್ಲಿ ಹೇಳಿದರು - ‘ಮಂಡಾಲೆಯಂತಹ ಭೀಕರ ಜೈಲಿನಲ್ಲಿಯೂ ಬ್ರಿಟಿಷರ ಮುಂದೆ ಎಂದೂ ಮಲಗದೆ (ಸೋಲದೆ) ತಲೆಬಾಗದ ಲೋಕಮಾನ್ಯರ ಮೃತದೇಹವನ್ನು ಕೂಡ ಮಲಗಿಸಿ ಇಡುವುದಿಲ್ಲ.’
ಅಂತಿಮ ಯಾತ್ರೆಯು ಅಪಾರ ಜನಸಂದಣಿ ಇದ್ದರೂ ಶಾಂತವಾಗಿ ಆರಂಭವಾಯಿತು. ಅಲ್ಲಲ್ಲಿ, ಚೌಕಗಳಲ್ಲಿ ತಿಲಕರ ಮೇಲೆ ಪುಷ್ಪವೃಷ್ಟಿ ಮಾಡಲಾಗುತ್ತಿತ್ತು. ಎಲ್ಲಾ ಸಾರ್ವಜನಿಕ ಗಣೇಶೋತ್ಸವದ ಕಾರ್ಯಕರ್ತರು ಭಾರಿ ದೊಡ್ಡ ಹಾರಗಳನ್ನು ಹಿಡಿದು ಅಲ್ಲಲ್ಲಿ ನಿಂತಿದ್ದರು.
ತಿಲಕರ ‘ಛತ್ರಪತಿ ಶಿವಾಜಿ ಮಹಾರಾಜ್ ಕಮಿಟಿ’ಯ ದಮ್ಮುಳ್ಳ ಕಾರ್ಯಕರ್ತರು ರಸ್ತೆ ರಸ್ತೆಯಲ್ಲಿ ಬ್ರಿಟಿಷರ ವಿರುದ್ಧ ಬಹಿರಂಗವಾಗಿ ಘೋಷಣೆಗಳನ್ನು ಕೂಗುತ್ತಿದ್ದರು ಮತ್ತು ಈ ವಿಶೇಷ ಸುದ್ದಿಯನ್ನು ಕೂಡ ರಾಜ್ಯಪಾಲನು ವೈಸ್ರಾಯ್ ಗೆ ಮತ್ತು ಬ್ರಿಟಿಷ್ ಸ೦ಸತ್ ಗೆ ಕೂಡಲೇ ರವಾನಿಸಿದರು.
ಮತ್ತು ತಿಲಕರ ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಮಹಾತ್ಮಾ ಗಾಂಧಿ, ಜವಾಹರಲಾಲ್ ನೆಹರೂ ಮತ್ತು ಮೌಲಾನಾ ಶೌಕತ್ ಅಲಿ ಈ ಮಂದಗಾಮಿ ಗುಂಪಿನ ನಾಯಕರಿಗೆ ಅಂತಿಮ ಯಾತ್ರೆಯಲ್ಲಿ ಮಹತ್ವದ ಸ್ಥಾನ ನೀಡಲಾಯಿತು ಮತ್ತು ‘ಅವರ ನೇತೃತ್ವದಲ್ಲಿಯೇ ಅಂತಿಮ ಯಾತ್ರೆ ನಡೆಯುತ್ತಿದೆ’ ಎಂದು ಜನರಿಗೆ ತೋರಿಸಲಾಯಿತು. ಈ ಒಂದು ವಿಷಯದಿಂದಾಗಿ ಗಾಂಧೀಜಿಯವರ ಮಹತ್ವ ಸಾಮಾನ್ಯ ಪ್ರಜೆಗಳಿಗೆ ತುಂಬಾ ದೊಡ್ಡದಾಗಿ ಅನಿಸತೊಡಗಿತು.
ಅಂತಿಮ ಯಾತ್ರೆಯಲ್ಲಿ ಪಾಲ್ಗೊಳ್ಳುವವರಲ್ಲಿ ಸ್ತ್ರೀಯರ ಪ್ರಮಾಣವೂ ದೊಡ್ಡದಾಗಿತ್ತು. ಆ ಕಾಲದಲ್ಲಿ ಮನೆಯಲ್ಲಿಯೇ ಇರುತ್ತಿದ್ದ ಸ್ತ್ರೀಯರು, ಇಂದು ಕೇವಲ ಮನೆಯಿಂದ ಹೊರಗೆ ಬಂದಿದ್ದಷ್ಟೇ ಅಲ್ಲ, ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು, ಘೋಷಣೆ ಕೂಗುತ್ತಿದ್ದರು ಮತ್ತು ಅಂತ್ಯಸಂಸ್ಕಾರದ ವೇಳೆಯಲ್ಲೂ ಉಪಸ್ಥಿತರಿದ್ದರು. ಕೇಶಮುಂಡನ ಮಾಡಿಸಿಕೊಂಡ ವಿಧವಾ ಸ್ತ್ರೀಯರು ಕೂಡ ಎಲ್ಲಾ ನಿಯಮಗಳನ್ನು ಬದಿಗೊತ್ತಿ ಆ ಮಹಾನ್ ಯುಗಪುರುಷನ ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
ಈ ಸಂಪೂರ್ಣ ಚಿತ್ರಣವು ಬ್ರಿಟಿಷ್ ರಾಜಸತ್ತೆಯನ್ನು ನಡುಗಿಸುವಂತಿತ್ತು. ತಿಲಕರ ಅಂತಿಮ ಯಾತ್ರೆಯು ಭಾರತೀಯರನ್ನು ಮತ್ತಷ್ಟು ಸಶಕ್ತರನ್ನಾಗಿ, ಬಲವಂತರನ್ನಾಗಿ ಹಾಗೂ ನಿರ್ಭಯರನ್ನಾಗಿ ಮಾಡುತ್ತಿತ್ತು ಮತ್ತು ಇದೇ ಭಯ ಬ್ರಿಟಿಷರಿಗೆ ಹೆಚ್ಚಾಗತೊಡಗಿತು.
ತಿಲಕರ ನಿಧನದ ವಾರ್ತೆಯಿಂದ ಖುಷಿಯಾಗಿದ್ದ ಬ್ರಿಟಿಷ್ ಸರ್ಕಾರ ಅಂತಿಮ ಯಾತ್ರೆಯ ವರ್ಣನೆಗಳಿಂದ ಬಹಳ ಜಾಗರೂಕವಾಯಿತು.
ವೈಸ್ರಾಯ್ ಕೂಡಲೇ ಸಂದೇಶ ಕಳುಹಿಸಿದರು - ‘ಎಲ್ಲಾ ಪ್ರಜೆಗಳಿಗೆ ಅನುಕೂಲವಾಗುವಂತೆ, ಎಲ್ಲಾ ನಿಯಮಗಳನ್ನು ಬದಿಗಿಟ್ಟು ಲೋಕಮಾನ್ಯ ತಿಲಕರ ಅಂತ್ಯಸಂಸ್ಕಾರವನ್ನು ಗಿರಗಾಂವ್‌ನ ಆಲಿಶಾನ್ ಚೌಪಾಟಿಯಲ್ಲಿ ಮಾಡಬೇಕು.’ (ಆ ಕಾಲದ ಗಿರಗಾಂವ್ ಚೌಪಾಟಿ ಅನೇಕ ಎಕರೆಗಳಷ್ಟು ವಿಸ್ತಾರವಾಗಿತ್ತು.)
‘ಲೋಕಮಾನ್ಯರ ಚಿತೆಯು ಸಾಮಾನ್ಯ ಕಟ್ಟಿಗೆಗಳಿಂದ ಇರಲೇಬಾರದು’ ಎಂದು ನಿಜವಾದ ಭಾರತೀಯರಾದ ಉದ್ಯಮಿಗಳ ವರ್ಗವು ನಿರ್ಧರಿಸಿತು ಮತ್ತು ಲೋಕಮಾನ್ಯರ ಚಿತೆಯನ್ನು ಸಂಪೂರ್ಣವಾಗಿ ಶ್ರೀಗಂಧದ ಕಟ್ಟಿಗೆಗಳಿಂದಲೇ ತಯಾರಿಸಲಾಯಿತು.
ಆದರೆ ಒಂದು ಅಚ್ಚರಿಯ ಮತ್ತು ಅದ್ಭುತ ವಿಷಯ ಆರಂಭವಾಯಿತು. ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಅನೇಕರು ತಮ್ಮ ತಮ್ಮ ಆರ್ಥಿಕ ಶಕ್ತಿಯನುಸಾರ ಶ್ರೀಗಂಧದ ತುಂಡುಗಳನ್ನು ತಂದಿದ್ದರು ಮತ್ತು ಅವುಗಳ ದೊಡ್ಡ ರಾಶಿಯೇ ನಿರ್ಮಾಣವಾಯಿತು.
ಯಾವ ಪಾರ್ಸಿ ಸಮಾಜದವರ ಹತ್ತಿರ ಶ್ರೀಗಂಧದ ವ್ಯಾಪಾರವಿತ್ತೋ, ಆ ಸಮಾಜದ ಮುಖಂಡರು ಎತ್ತಿನಗಾಡಿಗಳ ತುಂಬ ಶ್ರೀಗಂಧವನ್ನು ಅರ್ಪಿಸಿದರು.
ಸನಾತನ ವೈದಿಕ ಧರ್ಮದ ಕಟು ಅಭಿಮಾನಿಯಾಗಿದ್ದ ಮತ್ತು ಅದಕ್ಕಾಗಿ ಸಂದರ್ಭ ಬಂದಾಗ ಆಕ್ರಮಣಕಾರಿಯೂ ಆಗುತ್ತಿದ್ದ ಲೋಕಮಾನ್ಯ ತಿಲಕರ ಅಂತಿಮ ಯಾತ್ರೆಯು ಪ್ರತಿ ದೊಡ್ಡ ದೇವಸ್ಥಾನದ ಮುಂದೆ ನಿಲ್ಲಲೇಬೇಕಾಯಿತು. ಏಕೆಂದರೆ ಅಲ್ಲಿನ ಅರ್ಚಕ ಸಮುದಾಯ ಮತ್ತು ಉಪಾಧ್ಯಾಯರು ಎಲ್ಲಾ ಶಾಸ್ತ್ರಗಳನ್ನು ಬದಿಗಿಟ್ಟು ದೊಡ್ಡ ದೊಡ್ಡ ಹಾರಗಳನ್ನು ಹಿಡಿದು ತಿಲಕರ ಚರಣಗಳ ಪೂಜೆ ಮಾಡುತ್ತಿದ್ದರು.
ಅನೇಕ ದರ್ಗಾಗಳಿಂದ ತಿಲಕರ ಮೃತದೇಹದ ಮೇಲೆ ಹೂಗಳನ್ನು ಚೆಲ್ಲಲಾಯಿತು ಮತ್ತು ಪ್ರಾರ್ಥನೆ ಮಾಡಲಾಯಿತು.
ಬ್ರಿಟಿಷ್ ರಾಜ್ಯಪಾಲನ ಅಂದಾಜಿನ ಪ್ರಕಾರ ನಾಲ್ಕು ಲಕ್ಷ ಪುರುಷರು ಮತ್ತು ಒಂದು ಲಕ್ಷ ಸ್ತ್ರೀಯರು ಆ ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು ಮತ್ತು ಇವರಲ್ಲಿ ಪ್ರತಿಯೊಬ್ಬರೂ ‘ಲೋಕಮಾನ್ಯ ತಿಲಕ್ ಅಮರ್ ರಹೇ, ಬ್ರಿಟಿಷ್ ರಾಜ್ ಮುರ್ದಾಬಾದ್, ಲಾಲಾ ಲಜಪತ ರಾಯ್ ಜಿಂದಾಬಾದ್’ ಎನ್ನುವ ಘೋಷಣೆಗಳನ್ನು ಕೂಗುತ್ತಿದ್ದರು.
‘ತಿಲಕರಂತೆಯೇ ಆಕ್ರಮಣಕಾರಿ ಸ್ವಭಾವದವರಾದ ಲಾಲಾ ಲಜಪತ ರಾಯ್ ಅವರ ಬಳಿ ನೇತೃತ್ವ ಹೋದರೆ ತಿಲಕರ ತೀವ್ರಗಾಮಿ ಗುಂಪು ಮತ್ತು ಕ್ರಾಂತಿಕಾರಿಗಳ ವಿಜಯವಾಗುತ್ತದೆ’ ಎಂಬ ಅಭಿಪ್ರಾಯವನ್ನು ವೈಸ್ರಾಯ್ ವ್ಯಕ್ತಪಡಿಸಿದರು.
ಮತ್ತು ಲಾಲಾ ಲಜಪತ ರಾಯ್ ಅವರನ್ನು ಬದಿಗೊತ್ತಿ, ತಿಲಕರ ತೀವ್ರಗಾಮಿ ವಿಚಾರಗಳ ಪ್ರಭಾವವನ್ನು ಕಡಿಮೆ ಮಾಡಲು ಬ್ರಿಟಿಷ್ ಪರವಾಗಿದ್ದ ಜವಾಹರಲಾಲ್ ನೆಹರೂ ಅವರನ್ನು ಜೊತೆಗೂಡಿಸಿಕೊಳ್ಳಲಾಯಿತು ಮತ್ತು ಗಾಂಧೀಜಿಯವರನ್ನು ಮುಂದೆ ತರುವ ನಿರ್ಧಾರವಾಯಿತು. ಏಕೆಂದರೆ ಮೊದಲ ಮಹಾಯುದ್ಧದ ಸಮಯದಲ್ಲಿ ತಿಲಕರು ಸೈನ್ಯ ಸೇರ್ಪಡೆಗೆ ವಿರೋಧ ವ್ಯಕ್ತಪಡಿಸಿದ್ದರು, ಆದರೆ ಗಾಂಧೀಜಿಯವರು ಬೆಂಬಲ ನೀಡಿದ್ದರು. ತಿಲಕರ ಚಿತೆಯು ಸತತ ಏಳು ದಿನಗಳವರೆಗೆ ಉರಿಯುತ್ತಿತ್ತು ಏಕೆಂದರೆ ಭಾರತದ ವಿವಿಧ ಪ್ರಾಂತ್ಯಗಳಿಂದ ಜನರು ಬರುತ್ತಲೇ ಇದ್ದರು ಮತ್ತು ಶ್ರೀಗಂಧವನ್ನು ಅರ್ಪಿಸುತ್ತಲೇ ಇದ್ದರು.
ಮುಂದಿನ ಕಾಲದಲ್ಲಿ ಗಾಂಧೀಜಿಯವರ ನೇತೃತ್ವವು ಸ್ಥಾಪಿತವಾಯಿತು, ಆದರೆ ಅದರ ಶಕ್ತಿಯು ತಿಲಕರ ಶ್ರಮದಿಂದಲೇ ನಿರ್ಮಾಣವಾಗಿತ್ತು.
(ಕಥೆ ಮುಂದುವರಿಯುವುದು)





