ಮಲ್ಹಾರರಾವರು ತಮಗೆ ಅರಿವಿಲ್ಲದಂತೆಯೇ ಎರಡೂ ಕೈಗಳನ್ನು ಜೋಡಿಸಿ, ಅಲ್ಲಿದ್ದವರೆಲ್ಲರಿಗೂ ಕೇಳಿಸುವಂತಹ ಧ್ವನಿಯಲ್ಲಿ ರಾಣಿ ಲಕ್ಷ್ಮೀಬಾಯಿ ಮತ್ತು ಭಾರತಮಾತೆಯ ಜಯಘೋಷ ಮಾಡಿದರು.
ಕಳೆದ ಐದು ದಿನಗಳಿಂದ ನಡೆಯುತ್ತಿದ್ದ ಈ 1857-1858ರ ಸ್ವಾತಂತ್ರ್ಯ ಸಂಗ್ರಾಮದ ಪವಿತ್ರ ಸ್ಮರಣೆ, ಅಲ್ಲಿದ್ದ ಪ್ರತಿಯೊಬ್ಬರನ್ನೂ ಹಲವು ಬಾರಿ ಅಲುಗಾಡಿಸಿತ್ತು, ಬೆಚ್ಚಿಬೀಳಿಸಿತ್ತು. ಮುಖ್ಯವಾಗಿ ಈ ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರ ಶೌರ್ಯದ ಮುಂದೆ ಪ್ರತಿಯೊಬ್ಬರೂ ತಲೆಬಾಗಿದ್ದರು. ಕಣ್ಣುಗಳಿಂದ ಪದೇ ಪದೇ ಹೊರಬರಲು ಹವಣಿಸುತ್ತಿದ್ದ ಕಣ್ಣೀರನ್ನು ತಡೆಯಲು ಯಾರಿಂದಲೂ ಸಾಧ್ಯವಾಗಿರಲಿಲ್ಲ ಮತ್ತು ಪ್ರತಿಯೊಬ್ಬರ ಮನಸ್ಸಿನಲ್ಲಿ ದೇಶಭಕ್ತಿಯ ಭಾವನೆ ದಿನದಿಂದ ದಿನಕ್ಕೆ ಹೆಚ್ಚು ಪ್ರಖರವಾಗುತ್ತಿತ್ತು.
ಸ್ವಲ್ಪ ಹೊತ್ತು ಪೂರ್ತಿಯಾಗಿ ಸುಮ್ಮನಿದ್ದು ಮಲ್ಹಾರರಾವರು ಮತ್ತೆ ಮಾತನಾಡಲು ಶುರು ಮಾಡಿದರು, “ಈ ಯುದ್ಧದ ನಂತರ ಬ್ರಿಟಿಷ್ ಪಾರ್ಲಿಮೆಂಟ್‌ನಲ್ಲಿ ಇದೇ ವಿಷಯದ ಬಗ್ಗೆ ಭರ್ಜರಿ ಚರ್ಚೆ ನಡೆಯಿತು. ಈ ಎಲ್ಲದರ ಬಗ್ಗೆ ಅಭ್ಯಾಸ ಮಾಡಲು ಒಂದು ಕಮಿಟಿಯನ್ನು ನೇಮಿಸಲಾಯಿತು ಮತ್ತು ಆ ಕಮಿಟಿಯ ವರದಿಯ ಪ್ರಕಾರ ವಿಕ್ಟೋರಿಯಾ ರಾಣಿಯ ಘೋಷಣಾಪತ್ರ (Queen’s Proclamation) ಭಾರತಕ್ಕಾಗಿ ತಯಾರಾಯಿತು.
ಈ ರಾಣಿಯ ಘೋಷಣಾಪತ್ರದಲ್ಲಿ ಹಲವು ವಿಷಯಗಳಿದ್ದರೂ, ಮುಖ್ಯವಾದ ಸಂಗತಿಗಳು ಐದೇ ಆಗಿದ್ದವು. 1) ಭಾರತದ ಮೇಲಿನ ಆಡಳಿತ, ಈಸ್ಟ್ ಇಂಡಿಯಾ ಕಂಪನಿ ಸರ್ಕಾರದಿಂದ ಬ್ರಿಟಿಷ್ ರಾಜಸತ್ತೆಯ ಅಂದರೆ ಬ್ರಿಟಿಷ್ ಪಾರ್ಲಿಮೆಂಟ್ ಮತ್ತು ರಾಣಿಯ ಕೈಗೆ ಬಂದಿತ್ತು. 2) ಭಾರತದಲ್ಲಿ ಅಲ್ಲಿಯವರೆಗೆ ವಿಲೀನವಾಗದ ಸಂಸ್ಥಾನಗಳಿಗೆ ಗೌರವದ ನಡವಳಿಕೆ ಸಿಗಲಿದೆ, ಅವರಿಗೆ ಬ್ರಿಟಿಷ್ ದರ್ಬಾರಿನಲ್ಲಿ ಸ್ಥಾನಮಾನ ನೀಡಲಾಗುವುದು. 3) ವಿಲೀನಗೊಂಡ ರಾಜ್ಯಗಳ ಸಂಸ್ಥಾನಿಕರ ಹತ್ತಿರದ ಸಂಬಂಧಿಕರು ಬ್ರಿಟಿಷ್ ಸರ್ಕಾರದ ಜೊತೆಗೆ ಹೊಂದಾಣಿಕೆಯಿಂದ ನಡೆದರೆ ಅವರಿಗೆ ಮಾಸಿಕ ಗೌರವಧನ (ಪೆನ್ಷನ್) ಆರಂಭವಾಗಲಿದೆ ಮತ್ತು ಅದರ ಮೊತ್ತವೂ ಚೆನ್ನಾಗಿಯೇ ಇರಲಿದೆ. ಅಲ್ಲದೆ ಅವರಿಗೆ ಮೂಲ ಕೋಟೆಗಳನ್ನು ಬಿಟ್ಟು ಉಳಿದ ಅರಮನೆ ಮತ್ತು ವಾಡೆಗಳನ್ನು ಮರಳಿ ಪಡೆಯಲು ಸಾಧ್ಯವಾಗಲಿದೆ. 4) ಹಿಂದೂ ಧರ್ಮದ ದತ್ತಕ ತೆಗೆದುಕೊಳ್ಳುವ ಧಾರ್ಮಿಕ ಪದ್ಧತಿಯನ್ನು ಮಾನ್ಯ ಮಾಡಲಾಯಿತು ಮತ್ತು ದತ್ತಕ ಪುತ್ರನಿಗೆ ಹಿಂದೂ ಧರ್ಮವು ಮಾನ್ಯ ಮಾಡಿದ ಎಲ್ಲಾ ಹಕ್ಕುಗಳು ಸಿಗಲಿವೆ, ಅದು ಸಾಮಾನ್ಯ ಮನುಷ್ಯನಿಂದ ಹಿಡಿದು ಸಂಸ್ಥಾನಿಕನವರೆಗೆ ಎಲ್ಲರಿಗೂ ಅನ್ವಯಿಸಲಿದೆ. 5) ಬ್ರಿಟಿಷ್ ಸರ್ಕಾರ ಭಾರತೀಯರ ಧಾರ್ಮಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಮತ್ತು ಭಾರತೀಯರ ತೀರ್ಥಕ್ಷೇತ್ರಗಳ ಸಂರಕ್ಷಣೆಯ ಭರವಸೆ ನೀಡಲಾಯಿತು.
ಈ ಐದು ಕಲಂಗಳಿಂದಾಗಿ ಸಂಸ್ಥಾನಿಕರಲ್ಲಿ ಮತ್ತು ಸಾಮಾನ್ಯ ಜನರಲ್ಲಿ ಒಂದು ರೀತಿಯ ಸಮಾಧಾನ ಮೂಡಿತು. ಯಾಕೆಂದರೆ ಆಡಳಿತವು ಈಸ್ಟ್ ಇಂಡಿಯಾ ಕಂಪನಿಯ ಕೈಯಿಂದ ಬ್ರಿಟಿಷ್ ಗೌರ್ನಮೆಂಟ್ ಕೈಗೆ ಹೋದ ಕಾರಣ, ಕಂಪನಿ ಸರ್ಕಾರದ ಹುಂಬತನದ ಆಡಳಿತಕ್ಕೆ ಮುಕ್ತಿ ಸಿಕ್ಕಿತ್ತು ಮತ್ತು ‘ಲೋಕಶಾಹಿ ಪದ್ಧತಿಯಲ್ಲಿ ನಡೆಯುವ ಬ್ರಿಟಿಷ್ ಸರ್ಕಾರದಿಂದ ಕಂಪನಿ
ಸರ್ಕಾರದಂತಹ ದಬ್ಬಾಳಿಕೆಯ ನಡವಳಿಕೆ ಸಿಗಲಾರದು’ ಎಂಬ ಆಶಾವಾದ ಪ್ರತಿಯೊಬ್ಬರಲ್ಲಿ ಮೂಡಿತ್ತು.
ಅದರ ಜೊತೆಗೆ, ಧಾರ್ಮಿಕ ಕಾರ್ಯಗಳು ಮತ್ತು ತೀರ್ಥಕ್ಷೇತ್ರಗಳ ಬಗೆಗಿನ ಭರವಸೆಗಳಿಂದಾಗಿ, ಮೊದಲಿನ ಆಕ್ರಮಣಕಾರರಂತೆ ಬಲವಂತದ ಮತಾಂತರಗಳು ನಡೆಯಲಾರವು ಎಂಬ ಗಟ್ಟಿ ನಂಬಿಕೆ ಸಾಮಾನ್ಯ ಜನರಲ್ಲಿ ಮೂಡತೊಡಗಿತು. ಈ ವಿಷಯ ಸಾಮಾನ್ಯ ಭಾರತೀಯ ಜನತೆಗೆ ತುಂಬಾ ಮಹತ್ವದ್ದಾಗಿತ್ತು.
ಅದೇ ಸಮಯದಲ್ಲಿ ಬ್ರಿಟಿಷ್ ಸರ್ಕಾರ ಆರಂಭಿಸಿದ ಹಲವಾರು ಆಧುನಿಕ ಸುಧಾರಣೆಗಳು ಮೆಲ್ಲ ಮೆಲ್ಲಗೆ ದೊಡ್ಡ ನಗರಗಳಿಗಷ್ಟೇ ಸೀಮಿತವಾಗದೆ, ಸಣ್ಣ ಪಟ್ಟಣ ಮತ್ತು ಹಳ್ಳಿಗಳಿಗೂ ಹರಡತೊಡಗಿದವು. ಇದರಿಂದಾಗಿ ‘ಬ್ರಿಟಿಷ್ ಸರ್ಕಾರ ಒಳ್ಳೆಯದು’ ಎಂಬ ಭಾವನೆ ಮೂಡಲಾರಂಭಿಸಿತು.
ಆದರೆ ‘ರಾಣಿಯ ಘೋಷಣಾಪತ್ರ’ ಬ್ರಿಟಿಷರ ಒಂದು ಕುತಂತ್ರವಾಗಿತ್ತು. ಆ ಘೋಷಣಾಪತ್ರದಿಂದಾಗಿ ಸಂಸ್ಥಾನಿಕರು ಸ್ವಾತಂತ್ರ್ಯ ಹೋರಾಟಕ್ಕೆ ಇಳಿಯದಂತೆ ತಡೆಯುವಲ್ಲಿ ಬ್ರಿಟಿಷ್ ಸರ್ಕಾರ ಯಶಸ್ವಿಯಾಯಿತು. ಸಂಸ್ಥಾನಿಕರ ಮಕ್ಕಳು ಬ್ರಿಟಿಷ್ ಸರ್ಕಾರದ ವಿಶೇಷ ಶಾಲೆ ಮತ್ತು ಕಾಲೇಜುಗಳಲ್ಲಿ ಅಥವಾ ಸ್ಪೆಷಲ್ ಯುರೋಪಿಯನ್ ಶಿಕ್ಷಕರಲ್ಲಿ ಕಲಿಯತೊಡಗಿದರು ಮತ್ತು ಮುಂದೆ ಚಿಕ್ಕ ವಯಸ್ಸಿನಲ್ಲೇ ಇಂಗ್ಲೆಂಡ್‌ಗೆ ಉನ್ನತ ಶಿಕ್ಷಣಕ್ಕಾಗಿ ಹೋಗಲಾರಂಭಿಸಿದರು. ಇದರಿಂದಾಗಿ ಮೆಲ್ಲ ಮೆಲ್ಲಗೆ ಸಂಸ್ಥಾನಿಕರು ತಮ್ಮನ್ನು ತಾವು ಬ್ರಿಟಿಷ್ ವಂಶದವರೇ ಎಂದು ಭಾವಿಸತೊಡಗಿದರು ಮತ್ತು ಬ್ರಿಟಿಷ್ ಸರ್ಕಾರದ ವೈಸರಾಯ್ ಹಾಗೂ ಗವರ್ನರ್‌ಗಳ ಮುಂದೆ ತಲೆಬಾಗಲು ಅವರಿಗೆ ಯಾವುದೇ ಸಂಕೋಚವಿಲ್ಲದಂತಾಯಿತು.
ಖುಷಿಯಾದ ಸಂಸ್ಥಾನಿಕರು, ಬ್ರಿಟಿಷರು ತಮಗೆ ನೀಡಿದ್ದ ಸೀಮಿತ ಅಧಿಕಾರವನ್ನು ಬಳಸಿ ತಮ್ಮ ಪ್ರಜೆಯನ್ನು ಹೆಚ್ಚು ಹೆಚ್ಚು ಬ್ರಿಟಿಷ್ ಪರವಾಗಿ ಮಾಡತೊಡಗಿದರು ಮತ್ತು ಬ್ರಿಟಿಷರ ವಿರುದ್ಧ ಧ್ವನಿ ಎತ್ತುವ ವ್ಯಕ್ತಿಗಳ ಬಗ್ಗೆ ಸುಳಿವು ಸಿಕ್ಕ ತಕ್ಷಣ ಅವರನ್ನು ಮಟ್ಟ ಹಾಕತೊಡಗಿದರು.
ಭಾರತೀಯ ಜನತೆ ಕೂಡ ಈ ಘೋಷಣಾಪತ್ರದಿಂದಾಗಿ ಧಾರ್ಮಿಕ ವಿಷಯಗಳ ಜೊತೆಗೆ ದೈನಂದಿನ ಜೀವನದಲ್ಲಿ ಶಾಂತಿಯನ್ನು ಅನುಭವಿಸತೊಡಗಿದ್ದರು; ಆದರೆ ಈ ಶಾಂತಿಯ ಹಿಂದೆ ಆಶಾವಾದದಷ್ಟೇ ಒಂದು ಭಯಾನಕ ಹೆದರಿಕೆಯೂ ಕೆಲಸ ಮಾಡುತ್ತಿತ್ತು.
ಮೊದಲು ಕಂಪನಿ ಸರ್ಕಾರ ಮತ್ತು ನಂತರ ಬ್ರಿಟಿಷ್ ಸರ್ಕಾರ ಕೂಡ ಆ 1857-58ರ ಸ್ವಾತಂತ್ರ್ಯ ಯುದ್ಧದಲ್ಲಿ ಭಾಗವಹಿಸಿದ ಪ್ರತಿಯೊಬ್ಬ ವ್ಯಕ್ತಿಯನ್ನು ಹುಡುಕಿ ತೆಗೆದು, ಬಹಿರಂಗವಾಗಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ನೇಣಿಗೆ ಹಾಕುವ ಅಥವಾ ಶೂಲಕ್ಕೇರಿಸುವ ಭಯೋತ್ಪಾದನೆಯ ಕೆಲಸವನ್ನು ಮುಂದುವರಿಸಿತ್ತು.
ಭಾರತದ ಪ್ರತಿಯೊಂದು ಪ್ರಮುಖ ಜಿಲ್ಲೆಗಳಲ್ಲಿ ಮತ್ತು ಗ್ರಾಮಗಳಲ್ಲಿ, ಚೌಕಗಳಲ್ಲಿ ಅನೇಕರನ್ನು ನೇಣುಗಂಬಕ್ಕೇರಿಸಲಾಯಿತು ಮತ್ತು ಅವರ ಮೃತದೇಹಗಳನ್ನು ಹಾಗೆಯೇ ನೇತು ಹಾಕಲಾಗಿತ್ತು. ಈ ದಹಶತ್ತಿನಿಂದಾಗಿ ಮುಂದಿನ ಸುಮಾರು ಇಪ್ಪತ್ತು ವರ್ಷಗಳ ಕಾಲ ಸಾಮಾನ್ಯ ಜನತೆ ಬ್ರಿಟಿಷರ ವಿರುದ್ಧ ಹೋಗಿ ಯಾವುದೇ ಕೆಲಸ ಮಾಡಲು ಸಿದ್ಧವಿರಲಿಲ್ಲ.
ರಾವ್ ಸಾಹೇಬ್ ಪೇಶ್ವೆ ಮತ್ತು ತಾತ್ಯಾ ಟೋಪೆ ಅವರಿಗೆ ಫಾಶಿ ನೀಡಿದ ಮೇಲೆಯೂ, ಪೇಶ್ವೆಗಳ ಪುಣೆಯಲ್ಲೂ ವಿಶೇಷ ವಿರೋಧ ವ್ಯಕ್ತವಾಗಲಿಲ್ಲ. ಯಾಕೆಂದರೆ ಬ್ರಿಟಿಷ್ ಸರ್ಕಾರ ದೊಡ್ಡ ಮಟ್ಟದ ಸೈನ್ಯವನ್ನು ಮಹಾರಾಷ್ಟ್ರದ ಪುಣೆಯಂತಹ ಮಹತ್ವದ ನಗರಗಳಲ್ಲಿ ನಿಯೋಜಿಸಿತ್ತು ಮತ್ತು ಸಮಾಜದ ವಿವಿಧ ಗುಂಪುಗಳಲ್ಲಿ ಬ್ರಿಟಿಷರ ಏಜೆಂಟರುಗಳು ತಯಾರಾಗಿದ್ದರು. ಭಾರತೀಯ ವಂಶದ ಈ ಬ್ರಿಟಿಷ್ ಏಜೆಂಟರುಗಳು ತಮಗೆ ಸಿಗುವ ಆರ್ಥಿಕ ಲಾಭಕ್ಕಾಗಿ ಜೀವ ಸವೆಸಿ ಕೆಲಸ ಮಾಡುತ್ತಿದ್ದರು ಮತ್ತು ಬ್ರಿಟಿಷರನ್ನು ವಿರೋಧಿಸುವ ಪ್ರತಿಯೊಬ್ಬ ವ್ಯಕ್ತಿಯ ವಿರುದ್ಧ ನಿಲ್ಲುತ್ತಿದ್ದರು, ಅದು ಕೂಡ ಸಾಮಾಜಿಕ ಅನ್ಯಾಯದ ಕಾರಣಗಳನ್ನು ಕೊಟ್ಟುಕೊಂಡು.
ಬ್ರಿಟಿಷರು ನಿರ್ಮಿಸಿದ ಯೂನಿವರ್ಸಿಟಿ ಮತ್ತು ಕಾಲೇಜುಗಳಲ್ಲಿ ಶಿಕ್ಷಣ ಪಡೆಯಲು ಎಲ್ಲಾ ಜಾತಿಯ ಯುವಕರಲ್ಲಿ ಒಂದು ರೀತಿಯ ಸ್ಪರ್ಧೆಯೇ ಏರ್ಪಟ್ಟಿತು. ಯಾಕೆಂದರೆ ಈ ಯೂನಿವರ್ಸಿಟಿಗಳಿಂದ ಪದವಿ ಪಡೆದು ಹೊರಬರುವವರಿಗೆ ಹತ್ತಾರು ಕಡೆ ಅಧಿಕಾರ ಪದವಿಗಳು ಸಿಗತೊಡಗಿದವು. ಅವರಿಗೆ ಸಿಗುವ ಗೌರವವನ್ನು ನೋಡಿ, ಅವರ ಸುತ್ತಮುತ್ತಲಿನ ಅನೇಕರು ಅದೇ ಹಾದಿಯನ್ನು ಹಿಡಿಯಲಾರಂಭಿಸಿದರು.
ಬ್ರಿಟಿಷರ ಪ್ರಕಾರ ಕೇವಲ ಎರಡು ವರ್ಷಗಳಲ್ಲಿ ಅಂದರೆ 1860ರ ಹೊತ್ತಿಗೆ ಭಾರತೀಯ ಸಂಸ್ಥಾನಿಕರು ಮತ್ತು ಭಾರತೀಯ ಪ್ರಜೆಗಳು ಬ್ರಿಟಿಷರ ಆಡಳಿತ ಹಾಗೂ ವರ್ಚಸ್ಸನ್ನು ಪೂರ್ತಿಯಾಗಿ ಒಪ್ಪಿಕೊಂಡಿದ್ದರು. ಅಂತಹ ವರದಿಯನ್ನು 1860ರ ಡಿಸೆಂಬರ್ ತಿಂಗಳಲ್ಲಿ ವೈಸರಾಯ್ ಇಂಗ್ಲೆಂಡ್‌ಗೆ ಕಳುಹಿಸಿದ್ದರು. ಆದರೆ 23 ಜುಲೈ 1856ರಂದು ರತ್ನಗಿರಿ ಜಿಲ್ಲೆಯ ‘ಚಿಖಲಿ’ ಎಂಬ ಪುಟ್ಟ ಹಳ್ಳಿಯಲ್ಲಿ ಭಾರತಮಾತೆಯ ಒಬ್ಬ ಸುಪುತ್ರನ ಜನನ ಆಗಲೇ ಆಗಿತ್ತು - ಇವರನ್ನೇ ಮುಂದೆ ನಾವು ‘ಲೋಕಮಾನ್ಯ ಬಾಳ ಗಂಗಾಧರ ಟಿಳಕ್’ ಎಂದು ಗುರುತಿಸಿದೆವು ಮತ್ತು ಈ ಮಹಾಪುರುಷ ಕೊಂಕಣದಿಂದ ಪುಣೆಗೆ ಬಂದು ಕಾಲೇಜಿಗೆ ಅಡ್ಮಿಶನ್ ಪಡೆದರು.”
(ಕಥೆ ಮುಂದುವರಿಯುವುದು)

