ಅನುಭೂತಿ.... - ಸವಿತಾ ಶೆಂಡೆ, ಪ. ಬಂಗಾಳ

ಅನುಭೂತಿ.... - ಸವಿತಾ ಶೆಂಡೆ, ಪ. ಬಂಗಾಳ

ನಾನು ಮದುವೆಗೆ ಮುಂಚೆ ಸವಿತಾ ಮಾಶಾಳ್ಕರ್. ಕರ್ಜತ್ ಹತ್ತಿರದ ನೇರಳ್‌ನಲ್ಲಿ ನಮ್ಮ ವಾಸವಿತ್ತು. ಸ್ಮಿತಾ ದಾತಾರ್ ನನ್ನ ಸ್ವಂತ ಅಕ್ಕ. ಡಾ. ಶಿರೀಷ್ ದಾತಾರ್ ನನ್ನ ಭಾವ. ಡಾ. ಅನಿರುದ್ಧ್ ಜೋಶಿ (ಪರಮಪೂಜ್ಯ ಬಾಪು) ನಮ್ಮ ಭಾವನ ಪರಮಾಪ್ತ ಗೆಳೆಯರಾಗಿದ್ದರಿಂದ 1984 ರಲ್ಲೇ ಪರಮಪೂಜ್ಯ ಬಾಪು ಅವರ ಜೊತೆ ನಮಗೆ ಪರಿಚಯವಾಗಿತ್ತು. ಆದರೆ ಆ ಸಮಯದಲ್ಲಿ ಅವರು ಕೇವಲ ಡಾ. ಅನಿರುದ್ಧ್ ಜೋಶಿ ಎಂದಷ್ಟೇ ನಮಗೆ ಗೊತ್ತಿತ್ತು. ನನ್ನ ಅಕ್ಕನನ್ನು (ಸ್ಮಿತಾ) ಪ್ರಾಣಕ್ಕೆ ಸಂಚಕಾರ ತಂದಿದ್ದ ಕಾಯಿಲೆಯಿಂದ ಗುಣಪಡಿಸಿದ ಡಾಕ್ಟರ್ ಆಗಿ, ಕಷ್ಟದ ಸಮಯದಲ್ಲಿ ಅವಳ ಬೆನ್ನ ಹಿಂದೆ ದೊಡ್ಡ ಅಣ್ಣನ ರೂಪದಲ್ಲಿ ದೃಢವಾಗಿ ನಿಂತವರಾಗಿ, ಹೀಗೆ ಅವರ ವಿವಿಧ ರೂಪಗಳನ್ನು ನಾವು ಅನುಭವಿಸುತ್ತಿದ್ದೆವು.

ಮುಂದೆ 1988 ರಲ್ಲಿ ನನ್ನ ಮದುವೆ ಶ್ರೀಕಾಂತ್ ಶೆಂಡೆ ಅವರೊಂದಿಗೆ ಆಯಿತು. ನನ್ನ ಮಿಸ್ಟರ್ ಕೊಲ್ಕತ್ತಾದಲ್ಲಿ ನೆಲೆಸಿದ್ದರಿಂದ ನಾನು ಕೂಡ ಕೊಲ್ಕತ್ತಾವಾಸಿಯಾದೆ. 

ಈಗ ನನ್ನ ಮತ್ತು ನನ್ನ ಮಗಳ ಮೇಲೆ ನಡೆದ ಪ್ರಸಂಗದ ಬಗ್ಗೆ ಹೇಳುತ್ತೇನೆ. ಪ. ಬಂಗಾಳದಲ್ಲಿ ವಾಸಿಸುತ್ತಿದ್ದರಿಂದ ಅನೇಕ ಬಂಗಾಳಿ ಕುಟುಂಬಗಳು ನಮಗೆ ಚೆನ್ನಾಗಿ ಪರಿಚಯವಿದ್ದವು. ಅಂತಹದೇ ಒಂದು ಪರಿಚಿತ ಬಂಗಾಳಿ ಕುಟುಂಬದ ಹುಡುಗನ ಮದುವೆ ನಿಶ್ಚಯವಾಯಿತು. ಬಂಗಾಳಿ ಜನರಲ್ಲಿ ಮದುವೆ ಮಧ್ಯರಾತ್ರಿಯ ನಂತರ ಅಥವಾ ಬೆಳಗಿನ ಜಾವದಲ್ಲಿ ನಡೆಯುತ್ತದೆ. ಈ ಮದುವೆ ಕೂಡ ಹೀಗೆಯೇ ಜುಲೈ 2-3 ರ ಮಧ್ಯರಾತ್ರಿ ಇತ್ತು. ವರ ಮತ್ತು ವಧು ಮೂಲತಃ ಒಂದೇ ಊರಿನವರು. ಈ ಊರು ಎಂದರೆ ಚಾಯಿಪಾಟ್ ಹೆಸರಿನ ಒಂದು ಹಳ್ಳಿ. ಪ. ಬಂಗಾಳದ ಮೇದಿನಿಪುರ್ ನಗರದಿಂದ ಸ್ವಲ್ಪ ದೂರದಲ್ಲಿ ಈ ಹಳ್ಳಿ ಇದೆ. ಮದುವೆ ಈ ಚಾಯಿಪಾಟ್‌ನಲ್ಲೇ ಇತ್ತು. 

ನಾವು ಜುಲೈ 2 ರಂದು ಸಂಜೆ ಊರಿಗೆ ತಲುಪಿದೆವು. ನಮ್ಮ ವಾಸ್ತವ್ಯ ಸಹಜವಾಗಿಯೇ ವರನ ಮನೆಯಲ್ಲಿತ್ತು. ಮದುವೆ ವಧುವಿನ ಮನೆಯಲ್ಲಿ ನಡೆಯಲಿತ್ತು. ಅಲ್ಲಿ ಮಂಟಪ ವಗೈರೆ ಹಾಕಿದ್ದರು. ಎರಡು ಮನೆಗಳ ನಡುವೆ 10-15 ನಿಮಿಷಗಳ ಅಂತರವಿತ್ತು. ನೆಂಟರಿಷ್ಟರನ್ನು ಕರೆತರಲು ಮತ್ತು ಬಿಡಲು ಕೆಲವು ಗಾಡಿಗಳನ್ನು ರೆಡಿ ಇಟ್ಟಿದ್ದರು. ಊರಿನಲ್ಲಿ ಕರೆಂಟ್ ಸೌಕರ್ಯವಿರಲಿಲ್ಲ, ಆದ್ದರಿಂದ ಎರಡು ಮನೆಗಳ ಮಧ್ಯೆ ಜನರೇಟರ್‌ನಿಂದ ದೀಪದ ವ್ಯವಸ್ಥೆ ಮಾಡಲಾಗಿತ್ತು. ಊರಿನಲ್ಲಿ ಅದೊಂದೇ ರಸ್ತೆ. ರಸ್ತೆಯ ಎರಡೂ ಬದಿಯಲ್ಲಿ ಮನೆಗಳು ಮತ್ತು ಮನೆಯ ಹಿಂದೆ ತಕ್ಷಣವೇ ಹೊಲ-ಗದ್ದೆ, ಅಂತಹ ಹಳ್ಳಿ ಅದು.

ರಾತ್ರಿ ವಧುವಿನ ಮನೆಯಲ್ಲಿ ಎಲ್ಲರಿಗೂ ಊಟವಿತ್ತು. ಊಟ ಮುಗಿಯುವಷ್ಟರಲ್ಲಿ ರಾತ್ರಿ 11 ಗಂಟೆ ಕಳೆದಿತ್ತು. ನಾನು, ನನ್ನ ಮಗಳು ಸಂಯುಕ್ತಾ ಮತ್ತು ಒಬ್ಬಳು ಫ್ರೆಂಡ್ ಹೀಗೆ ನಾವು ಮೂವರು ಒಟ್ಟಿಗಿದ್ದೆವು. ಊಟ ಮುಗಿದ ಮೇಲೆ ಮೂವರೂ ಸೇರಿ ವರನ ಮನೆಗೆ ಹೋಗುವುದೆಂದು ನಿರ್ಧರಿಸಿದೆವು. ಊಟದ ನಂತರ ಕೈ ತೊಳೆದು ಮತ್ತೆ ಮಂಟಪಕ್ಕೆ ಬಂದರೆ, ಆ ಫ್ರೆಂಡ್ ಎಲ್ಲಿಯೂ ಕಾಣಿಸಲಿಲ್ಲ. ಸ್ವಲ್ಪ ಹೊತ್ತು ಅವಳಿಗಾಗಿ ಕಾಯ್ದು ನಾವಿಬ್ಬರೇ ಅಲ್ಲಿಂದ ಹೊರಟೆವು. ಸಂಯುಕ್ತಾ ಅಂದಳು, ನಾವು ನಡ್ಕೊಂಡೇ ಹೋಗೋಣ ಅಂತ, ಹಾಗಾಗಿ ನಡ್ಕೊಂಡೇ ಹೊರಟೆವು.

ಸ್ವಲ್ಪ ದೂರ ನಡೆದು ಹೋದ ಮೇಲೆ ಎದುರಿನಿಂದ ಮದುವೆಗಾಗಿ ವ್ಯವಸ್ಥೆ ಮಾಡಿದ್ದ ಗಾಡಿಗಳಲ್ಲಿದ್ದ ಒಂದು ಮಾರುತಿ ವ್ಯಾನ್ ಬಂತು. ಅದರಲ್ಲಿ ಕೇವಲ ಡ್ರೈವರ್ ಇದ್ದ. ನೀವು ಎಲ್ಲಿಗೆ ಹೊರಟಿದ್ದೀರಾ, ಎಂದು ಅವನು ವಿಚಾರಿಸಿದ. 'ವರನ ಮನೆಯ ಕಡೆಗೆ' ಎಂದು ಹೇಳಿದಾಗ ಅವನು ಅಂದ, "ನೀವು ನಡ್ಕೊಂಡು ಯಾಕೆ ಹೋಗ್ತಾ ಇದ್ದೀರಾ? ಗಾಡಿಯಲ್ಲಿ ಕೂತ್ಕೊಳ್ಳಿ. ನಾನು ನಿಮ್ಮನ್ನು ಮನೆ ಹತ್ರ ಬಿಡ್ತೀನಿ. ನಮ್ಮನ್ನು ನಿಮ್ಮ ಸೇವೆಗಾಗಿಯೇ ಇಟ್ಟಿದ್ದಾರೆ. ಮೊದಲು ಮಂಟಪದ ಕಡೆಗೆ ಹೋಗಿ ಇನ್ನೂ ಯಾರಾದರೂ ಬರುವವರಿದ್ದರೆ ಅವರನ್ನೂ ಕರೆದುಕೊಂಡು ವರನ ಮನೆ ಕಡೆಗೆ ಹೋಗೋಣ."

ಅವನ ಮೇಲೆ ನಂಬಿಕೆಯಿಟ್ಟು ನಾನು ಮತ್ತು ಸಂಯುಕ್ತಾ ಕಾರಿನಲ್ಲಿ ಕೂತೆವು. ಅವನು ಕಾರಿನ ಎಲ್ಲಾ ಬಾಗಿಲುಗಳನ್ನು ಮುಚ್ಚಿದ ಮತ್ತು ಗಾಡಿ ಸ್ಟಾರ್ಟ್ ಮಾಡಿ ವೇಗವಾಗಿ ಬಿಟ್ಟ. ಗಾಡಿಯ ಸೌಕರ್ಯ ಸಿಕ್ಕಿದ್ದರಿಂದ ನಮಗೆ ಸ್ವಲ್ಪ ನಿರಾಳವೆನಿಸಿತ್ತು, ಆದರೆ ಅದು ಕ್ಷಣಕಾಲ ಮಾತ್ರ! ವರನ ಮನೆ ದಾಟಿ ಗಾಡಿ ವೇಗವಾಗಿ ಮುಂದೆ ಹೋಯಿತು, ಆದರೂ ಡ್ರೈವರ್ ನಿಲ್ಲಿಸುವ ಹೆಸರೇ ಎತ್ತಲಿಲ್ಲ, ಇದನ್ನು ನೋಡಿ ನಮ್ಮ ಎದೆ ಝಲ್ ಅಂದಿತು. ನಾವು ನಮ್ಮ ಜೀವ ಬಿಗಿಹಿಡಿದುಕೊಂಡು ಅವನಿಗೆ ಗಾಡಿ ನಿಲ್ಲಿಸಲು ಹೇಳಿದೆವು. ಆದರೆ ಅವನು ಆ ಕಡೆ ಗಮನ ಕೊಡಲಿಲ್ಲ ಮತ್ತು ಪೆಟ್ರೋಲ್ ಹಾಕಿಸಬೇಕಿದೆ ಎಂಬ ನೆಪ ಹೇಳಿದ.

ಈಗ ಮಾತ್ರ ನಾವು ಸಿಕ್ಕಾಪಟ್ಟೆ ಹೆದರಿದೆವು. ಇವನ ಲಕ್ಷಣವೇನೋ ಸರಿ ಕಾಣುತ್ತಿಲ್ಲ, ಎಂಬುದು ಅರ್ಥವಾಯಿತು. ಅಷ್ಟರಲ್ಲಾಗಲೇ ಗಾಡಿ ಊರಿನಿಂದ ಹೊರಗೂ ಬಂದಾಗಿತ್ತು. ಕಗ್ಗತ್ತಲು, ರಸ್ತೆಯ ಎರಡೂ ಬದಿಯಲ್ಲಿ ಹೊಲ-ಗದ್ದೆಗಳಿದ್ದವು. ಗಾಡಿಯ ಹೆಡ್‌ಲೈಟ್ ಬೆಳಕಿನಲ್ಲಿ ಮುಂದಿನ ರಸ್ತೆ ಕಾಣಿಸುತ್ತಿತ್ತು. ನಾವಿಬ್ಬರೂ ಬಾಪು ಅವರ ಹೆಸರಿನಲ್ಲಿ ಜೋರಾಗಿ ಅಳುತ್ತಾ ಕೂಗಿಕೊಂಡೆವು. 'ಬಾಪು ಕಾಪಾಡು....ಬಾಪು ಕಾಪಾಡು....ಬಾಪು....ಬಾಪು' ಇಷ್ಟೇ ನಮ್ಮ ಆಕ್ರೋಶ....

ಏಕೆಂದರೆ,

ಕ್ರೂರ ಮೃಗಗಳಿಗಿಂತ ಘೋರವಾದ ಈ ಜಗತ್ತಿನಲ್ಲಿ।

ತಂಗಿಯನ್ನು ರಕ್ಷಿಸಲು ಸದಾ ದಕ್ಷ ಆ ಶ್ರೀಪತಿ॥

ನಮ್ಮ ಪ್ರಾರ್ಥನೆ ಮುಂದುವರಿದೇ ಇತ್ತು....

....ಮತ್ತು ಇದ್ದಕ್ಕಿದ್ದಂತೆ ಗಾಡಿಯಿಂದ ಸ್ವಲ್ಪ ದೂರದಲ್ಲಿ ಪಕ್ಕದ ಹೊಲದಿಂದ ಇಬ್ಬರು ವ್ಯಕ್ತಿಗಳು ರಸ್ತೆಯ ಮೇಲೆ ಬಂದರು. ಗಾಡಿಯ ದೀಪದ ಬೆಳಕಿನಲ್ಲಿ ಅವರು ನಮಗೆ ಕಾಣಿಸುತ್ತಿದ್ದರು. ಇಬ್ಬರೂ ವ್ಯಕ್ತಿಗಳ ಮೈಮೇಲೆ ಬಿಳಿ ಶರ್ಟ್ ಇತ್ತು. ಇಬ್ಬರೂ ರಸ್ತೆ ತಡೆದು ಗಾಡಿ ನಿಲ್ಲಿಸಿದರು. ಇಷ್ಟು ರಾತ್ರಿಯಲ್ಲಿ ಎಲ್ಲಿಗೆ ಹೊರಟಿದ್ದೀಯಾ, ಎಂದು ಅವನು ಡ್ರೈವರ್‌ಗೆ ಗದರಿಸಿ ಕೇಳಿದ. ನಾವಿಬ್ಬರೂ ಏನೂ ಮಾತನಾಡುವ ಮನಸ್ಥಿತಿಯಲ್ಲಿ ಇರಲೇ ಇಲ್ಲ. ಡ್ರೈವರ್ ಸುಳ್ಳು ಹೇಳಲು ಶುರು ಮಾಡಿದ. ಅಂದ 'ಯು-ಟರ್ನ್‌ಗಾಗಿ ಜಾಗ ಹುಡುಕುತ್ತಿದ್ದೆ.' ನಮ್ಮ ಮುಖ, ಡ್ರೈವರ್‌ನ ಉತ್ತರ ಮತ್ತು ಊರಿನಿಂದ ಇಷ್ಟು ದೂರ ಬಂದಿದ್ದ ಗಾಡಿಯನ್ನು ನೋಡಿ ಅವರಿಗೆ ಎಲ್ಲವೂ ಅರ್ಥವಾಯಿತು. ಅವರಿಬ್ಬರೂ ಗಾಡಿಯಲ್ಲಿ ಕೂತರು. ನಮಗೆ ಧೈರ್ಯ ತುಂಬಿದರು. ಡ್ರೈವರ್‌ಗೆ ಗಾಡಿ ತಿರುಗಿಸಲು ಹೇಳಿ ನಮ್ಮನ್ನು ಹುಡುಗನ ಮನೆಯಲ್ಲಿ ಬಿಟ್ಟರು. "ನೀವು ಯಾರು? ಊರಿನಿಂದ ಇಷ್ಟು ದೂರ ನೀವು ರಾತ್ರಿಯಲ್ಲಿ ಏನು ಮಾಡುತ್ತಿದ್ದಿರಿ?" ಎಂದು ಅವರನ್ನು ಕೇಳುವ ಪ್ರಜ್ಞೆ ಕೂಡ ನಮಗೆ ಉಳಿದಿರಲಿಲ್ಲ. ನಾವು ಸುರಕ್ಷಿತವಾಗಿ ನಮ್ಮವರ ಮಧ್ಯೆ ತಲುಪಿದೆವು. ಅವರಿಬ್ಬರೂ ಯಾರಾಗಿದ್ದರು ಎಂದು ನಮಗೆ ಗೊತ್ತಿಲ್ಲ, ಆದರೆ ನಮಗಂತೂ ಅವರು ಬಾಪು ಮತ್ತು ಸುಚಿತ್‌ದಾದಾ ಅವರೇ ಆಗಿದ್ದರು. 

ಈ ಅನುಭವದಿಂದ ನಮಗೆ ಮನವರಿಕೆಯಾಯಿತೆಂದರೆ,

ಪ್ರತ್ಯಕ್ಷ ಅನುಭೂತಿಯೇ ನಿನ್ನ ಮರ್ಮ।

ಬೇಡ ಯಾವುದೇ ಮಧ್ಯಸ್ಥಗಾರ, ಇದೇ ನಿನ್ನ ಧರ್ಮ।

ಮುಂದೆ ಎರಡು ದಿನ ನಾವು ಅದೇ ಹಳ್ಳಿಯಲ್ಲಿ ಉಳಿದೆವು. ಮದುವೆ ಸಮಾರಂಭ ಮುಗಿದ ನಂತರ ಅಸನ್ಸೋಲ್ ಎಂಬ ಊರಿಗೆ ನಮ್ಮ ಮನೆಗೆ ಹಿಂದಿರುಗಿದೆವು.


Hindi English