ಅಸಾಧ್ಯವಾದುದನ್ನು ಸಾಧ್ಯವಾಗಿಸುವ ಬಾಪು - ಸಂಜಯ್‌ಸಿಂಹ ಜಾಧವ್, ರೇಂದಾಳ್, ಕೊಲ್ಲಾಪುರ


ನಾನು ೧೯೯೬ ರಲ್ಲಿ ಕೊಲ್ಲಾ ಪುರ ಜಿಲ್ಲೆಯ ರೇಂದಾಳ್‌ನಿಂದ ಮುಂಬೈಗೆ ಕೆಲಸದ ಹುಡುಕಾಟದಲ್ಲಿ ಹೋಗಿದ್ದೆ. ಅದೇ ಸಮಯದಲ್ಲಿ ನನ್ನೊಬ್ಬ ಸಂಬಂಧಿಕರಿಂದ ನನಗೆ ಸದ್ಗುರು ಶ್ರೀಅನಿರುದ್ಧ ಬಾಪು ಅವರ ಬಗ್ಗೆ ಮಾಹಿತಿ ಸಿಕ್ಕಿತು. ೨೦೦೩ ರವರೆಗೆ ನಾನು ಮುಂಬೈನಲ್ಲೇ ಇದ್ದೆ. ಆದರೆ ಆಮೇಲೆ ಮನೆಯವರ ಒತ್ತಾಯಕ್ಕೆ ಕಟ್ಟುಬಿದ್ದು ನಾನು ಮತ್ತೆ ರೇಂದಾಳ್‌ಗೆ ಬಂದೆ. ನಾನು ರೇಂದಾಳ್‌ಗೆ ಬಂದ ಮೇಲೆ ನಮ್ಮೂರಿನ ಪ್ರಸಿದ್ಧ ಉದ್ಯಮಿಯೊಬ್ಬರ ಬಳಿ ಕೆಲಸಕ್ಕೆ ಸೇರಿಕೊಂಡೆ. ಪೆಟ್ರೋಲ್ ಪಂಪ್, ಹೋಟೆಲ್‌ಗಳು, ಚಿನ್ನ-ಬೆಳ್ಳಿಯಲ್ಲಿ ಹೂಡಿಕೆ ಹೀಗೆ ಅವರದ್ದು ಸಾಲು ಸಾಲು ಬಿಸಿನೆಸ್‌ಗಳಿದ್ದವು. ನನ್ನ ಕೆಲಸವನ್ನು ಗಮನಿಸಿ ಮಾಲೀಕರು ನನ್ನ ಮೇಲೆ ಮೆಲ್ಲಮೆಲ್ಲನೆ ಮುಖ್ಯವಾದ ಜವಾಬ್ದಾರಿಗಳನ್ನು ನೀಡಲು ಶುರು ಮಾಡಿದರು. ಆಮೇಲೆ ‘ಆ’ ಭಯಾನಕ ಪ್ರಸಂಗ ನನ್ನ ಜೀವನದಲ್ಲಿ ಎದುರಾಯಿತು.


ಆಗಿದ್ದೇನಂದರೆ -

೧೯೯೪ ರಿಂದ ವರ್ಷಕ್ಕೊಮ್ಮೆ ೫ ರಿಂದ ೬ ದಿನ ಕೆಲಸಕ್ಕೆ ರಜೆ ಹಾಕಿ ನಾನು ದೇವರ ದರ್ಶನಕ್ಕಾಗಿ ಪಂಡರಾಪುರ, ಗಾಣಗಾಪುರದಂಥ ಪುಣ್ಯಕ್ಷೇತ್ರಗಳಿಗೆ ಹೋಗಿ ಬರುತ್ತಿದ್ದೆ. ಅದರಂತೆಯೇ ಈ ಬಾರಿಯೂ ದಿನಾಂಕ ೪ ಏಪ್ರಿಲ್‌ನಿಂದ ೧೧ ಏಪ್ರಿಲ್ ೨೦೦೮ ರ ಅವಧಿಯಲ್ಲಿ ಮಾಲೀಕರಿಗೆ ಮುಂಚಿತವಾಗಿ ತಿಳಿಸಿ ಸರಿಯಾಗಿ ರಜೆ ತೆಗೆದುಕೊಂಡು ದೇವರ ದರ್ಶನಕ್ಕೆ ಹೋಗಿ ಬಂದೆ.

ಕೆಲಸದಲ್ಲಿದ್ದಾಗ ನಾನು ರಾತ್ರಿ ಮಾಲೀಕರ ಬಂಗಲೆಯಲ್ಲೇ ಮಲಗುತ್ತಿದ್ದೆ, ಏಕೆಂದರೆ ಮಾಲೀಕರು ಮತ್ತು ಅವರ ಕುಟುಂಬದವರು ಕೊಲ್ಲಾಪುರದಲ್ಲಿದ್ದರು. ಆದರೆ ಆ ದಿನ ಪ್ರಯಾಣದ ಆಯಾಸದಿಂದಾಗಿ ರಾತ್ರಿ ನನ್ನ ಸ್ವಂತ ಮನೆಯಲ್ಲೇ ಮಲಗಿದೆ. ಮರುದಿನ ಎಂದಿನಂತೆ ಮುಂಜಾನೆ ಬೇಗ ಎದ್ದು ಮಾಲೀಕರ ದನದ ಕೊಟ್ಟಿಗೆಗೆ ಹೋಗಿ, ಹಾಲು ಕರೆದುಕೊಂಡು ಬಂದೆ. ಆ ಹಾಲನ್ನು ‘ಹಾಲು ಸಂಘಕ್ಕೆ’ ಕೊಟ್ಟು ನಾನು ಬೆಳಿಗ್ಗೆ ೭ ಗಂಟೆಯ ಸುಮಾರಿಗೆ ಬಂಗಲೆಗೆ ಹೋದೆ. ಅಲ್ಲಿಗೆ ಹೋಗಿ ನೋಡಿದರೆ...

....ಬಂಗಲೆಯ ಬಾಗಿಲು ಅರ್ಧ ತೆರೆದಿತ್ತು. ಒಳಗೆ ಹೋದಮೇಲೆ ಎದುರಿಗಿದ್ದ ದೃಶ್ಯವನ್ನು ನೋಡಿ ಮೈಯೆಲ್ಲಾ ಬೆವರಿತು. ನೋಡಿದರೆ ಬಂಗಲೆಯಲ್ಲಿದ್ದ ಸಾಮಗ್ರಿಗಳೆಲ್ಲಾ ಚಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಕಳ್ಳತನವಾಗಿದೆ ಎಂಬುದು ನನಗೆ ತಕ್ಷಣ ಅರ್ಥವಾಯಿತು. ಹೆದರಿಕೆಯಿಂದ ಮನಸ್ಸಿನಲ್ಲೇ ಬಾಪು ಅವರ ಬಳಿ ಪ್ರಾರ್ಥಿಸತೊಡಿದೆ. ನಾನು ತಕ್ಷಣ ಮಾಲೀಕರಿಗೆ ಫೋನ್ ಮಾಡಿ ನಡೆದ ಘಟನೆಯ ಬಗ್ಗೆ ಮಾಹಿತಿ ನೀಡಿದೆ.

ಸ್ವಲ್ಪ ಸಮಯದಲ್ಲೇ ಮಾಲೀಕರು ಬಂದರು. ಅವರು ಬಂಗಲೆಯನ್ನೆಲ್ಲಾ ಪರಿಶೀಲಿಸಿದರು. ಆಮೇಲೆ ಅವರು ನಮಗೆ ತಿಳಿಸಿದ್ದೇನೆಂದರೆ—ತಿಜೋರಿ ಒಡೆದು ಅದರಲ್ಲಿದ್ದ ೨೦ ತೊಲ ಚಿನ್ನ, ೩೫ ಕೆಜಿ ಬೆಳ್ಳಿ ಮತ್ತು ಸ್ವಲ್ಪ ನಗದು ಹಣ ಸೇರಿ ಸುಮಾರು ಒಂದೂವರೆ ಕೋಟಿ ರೂಪಾಯಿವರೆಗಿನ ಆಸ್ತಿಯನ್ನು ಕಳ್ಳರು ದೋಚಿದ್ದಾರೆ ಎಂದು.

ಒಂದು ಕ್ಷಣ ಅಲ್ಲಿದ್ದ ನಾವೆಲ್ಲರೂ ದಿಗ್ಭ್ರಮೆಗೊಂಡೆವು. ಆಮೇಲೆ ಮಾಲೀಕರು ಪೊಲೀಸ್ ಸ್ಟೇಷನ್‌ಗೆ ಫೋನ್ ಮಾಡಿ ದರೋಡೆ ನಡೆದಿರುವ ಬಗ್ಗೆ ಮಾಹಿತಿ ನೀಡಿದರು. ಸ್ವಲ್ಪ ಹೊತ್ತಿನಲ್ಲಿ ಪೊಲೀಸರು ಬಂದರು. ಪೊಲೀಸರು ತಮ್ಮ ತನಿಖೆ ಶುರು ಮಾಡಿದರು. ನಾನು ನನ್ನ ದಿನನಿತ್ಯದ ಕೆಲಸದಂತೆ ಮಾಲೀಕರ ಸ್ನೇಹಿತರಿಗೆ ಚಹಾ-ನೀರು ಕೊಡಲು ಶುರು ಮಾಡಿದೆ.

ಅಷ್ಟರಲ್ಲಿ ಮಾಲೀಕರು ಮೇಲಿನ ಮಹಡಿಗೆ ಬರುವಂತೆ ನನಗೆ ಕೂಗಿ ಕರೆದರು.


ಅಲ್ಲಿ ಮಾಲೀಕರು ಮತ್ತು ಪೊಲೀಸ್ ಅಧಿಕಾರಿಯೊಬ್ಬರು ಇದ್ದರು. ಮಾಲೀಕರು ಬಹುಶಃ ಅನುಮಾನಾಸ್ಪದ ವ್ಯಕ್ತಿಯೆಂದು ನನ್ನ ಹೆಸರನ್ನೇ ಹೇಳಿರಬೇಕು. ಏಕೆಂದರೆ ಅಲ್ಲಿದ್ದ ಒಬ್ಬ ಅಧಿಕಾರಿ ನನ್ನನ್ನು ಹತ್ತಿರ ಕರೆದು, ಅಕ್ಷರಶಃ ನನ್ನ ಕಾಲರ್ ಹಿಡಿದು, ಕೋಪದಿಂದ ಗಟ್ಟಿಯಾಗಿ ತನ್ನ ಸೊಂಟದಲ್ಲಿದ್ದ ಬಂದೂಕಿನ ಮೇಲೆ ಕೈಯಿಡುತ್ತಾ ನನಗೆ ಹೇಳಿದ—‘ಸಂಜ್ಯಾ, ಮಗಾ ಕಳ್ಳತನವಾದ ಆಸ್ತಿ ಮತ್ತು ಕಳ್ಳರು ಎಲ್ಲಿದ್ದಾರೆ ಅಂತ ಇಲ್ಲೇ ಹೇಳು, ಇಲ್ಲಾಂದ್ರೆ ನಿನ್ನ ಕಥೆ ಮುಗೀತು!’. ಆ ಮಾತು ಕೇಳಿ ಅಕ್ಷರಶಃ ನನ್ನ ಕಾಲಡಿ ಭೂಮಿ ಕುಸಿದುಬಿದ್ದಂತಾಯಿತು. ಏಕೆಂದರೆ ಯಾವ ವ್ಯಕ್ತಿಯ ಮನೆಯಲ್ಲಿ ನಾನು ಕಳೆದ ೬ ವರ್ಷಗಳಿಂದ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೆನೋ, ಮನೆಯ ಒಬ್ಬ ಸದಸ್ಯನಂತೆ ಓಡಾಡಿಕೊಂಡಿದ್ದೆನೋ, ಅದೇ ಮಾಲೀಕರು ನನ್ನ ಮೇಲೆ ಅನುಮಾನ ಪಟ್ಟು ಆರೋಪ ಹೊರಿಸಿದ್ದು ಆ ಕ್ಷಣದಲ್ಲಿ ನನಗೆ ಬಿದ್ದ ದೊಡ್ಡ ಆಘಾತವಾಗಿತ್ತು.

ಆದರೆ ನಾನು ನನ್ನನ್ನು ಸಂಭಾಳಿಸಿಕೊಂಡೆ, ಮನಸ್ಸಿನಲ್ಲೇ ‘ಹರಿ ಓಂ ಬಾಪು’ ಅಂದುಕೊಂಡೆ. ನನ್ನ ಕಾಲರ್ ಹಿಡಿದಿದ್ದ ಆ ಅಧಿಕಾರಿಯ ಕೈಯನ್ನು ಪಕ್ಕಕ್ಕೆ ಸರಿಸಿ ಅವರಿಗೆ ಇಷ್ಟೇ ಹೇಳಿದೆ—‘ಸಾಹೇಬ್ರೇ, ಸುಮ್ಮನೆ ನನ್ನ ಮೇಲೆ ಆರೋಪ ಹೊರಿಸಬೇಡಿ, ನನಗೂ ಈ ದರೋಡೆಗೂ ಯಾವುದೇ ಸಂಬಂಧವಿಲ್ಲ’. ಆ ಪೊಲೀಸ್ ಅಧಿಕಾರಿ ಮತ್ತೆ ಕೋಪದಿಂದ ಒದರಿದ—‘ಏಯ್, ತೀರಾ ನಾಟಕ ಆಡಬೇಡ. ನೀನು ದೇವಸ್ಥಾನಕ್ಕೆ ಹೋದಾಗಲೇ ಈ ದರೋಡೆ ಹೇಗೆ ನಡೀತು ರೋ? ನೀನೇ ಕಳ್ಳರಿಗೆ ಎಲ್ಲಾ ಮಾಹಿತಿ ಕೊಟ್ಟಿದ್ದೀಯಾ, ಅನುಮಾನ ಬರಬಾರದು ಅಂತ ದೇವರ ದರ್ಶನದ ನಾಟಕ ಆಡಿದ್ದೀಯಾ. ಎಲ್ಲೋ ಚೆನ್ನಾಗಿರೋ ಜಾಗದಲ್ಲಿ ಮಜಾ ಮಾಡುತ್ತಾ ಕುಳಿತಿದ್ದೀಯಾ ಅನ್ನಿಸುತ್ತೆ. ಸುಮ್ಮನೆ ಎಲ್ಲವನ್ನೂ ಸತ್ಯ ಹೇಳು, ಇಲ್ಲದಿದ್ದರೆ ನಿನಗೆ...’

ನಾನು ಸಂಪೂರ್ಣವಾಗಿ ನಿರಪರಾಧಿಯಾಗಿದ್ದೆ. ನಾನು ಮಾಲೀಕರಿಗೆ ಹೇಳಿದೆ—‘ಮಾಲೀಕರೇ, ನನಗಿದರ ಬಗ್ಗೆ  ఏನೂ ಗೊತ್ತಿಲ್ಲ. ನೀವು ನನ್ನ ಮೇಲೆ ಎಷ್ಟೇ ಸುಳ್ಳು ಆರೋಪ ಹೊರಿಸಿದರೂ ನಾನು ಹೆದರಿ ಸುಳ್ಳು ಹೇಳಿಕೆ ಕೊಡುವುದಿಲ್ಲ, ಇಷ್ಟನ್ನಂತೂ ಹೇಳುತ್ತೇನೆ.’ (ಮನಸ್ಸಿನಲ್ಲಂತೂ ‘ಹರಿ ಓಂ ಬಾಪು! ನನ್ನನ್ನು ಇದರಿಂದ ಪಾರು ಮಾಡಿ’ ಎಂದೇ ಜಪಿಸುತ್ತಿದ್ದೆ.)

ಆದರೆ ನನ್ನ ಮಾಲೀಕರಿಗೆ, ನಾನು ಆ ದರೋಡೆ ಮಾಡಲು ಕಳ್ಳರಿಗೆ ಸಹಾಯ ಮಾಡಿದ್ದೇನೆ ಎಂದೇ ಅನಿಸುತ್ತಿತ್ತು. ಹಾಗಾಗಿ ಅವರು ನನ್ನ ಮೇಲೆ ಕ್ರಮ ಕೈಗೊಳ್ಳುವಂತೆ ಪೊಲೀಸರನ್ನು ಕೇಳಿರಬೇಕು. ಮಾಲೀಕರ ಮಾತಿನಂತೆ ಪೊಲೀಸರು ನನ್ನನ್ನು ಅನುಮಾನಾಸ್ಪದ ಆರೋಪಿಯೆಂದು ಬಂಧಿಸಿ, ಕೈಗೆ ಬೇಡಿ ಹಾಕಿ ಪೊಲೀಸ್ ವ್ಯಾನ್‌ನಲ್ಲಿ ಕೂರಿಸಿದರು. ಗಾಡಿ ಪೊಲೀಸ್ ಸ್ಟೇಷನ್ ಕಡೆಗೆ ಹೊರಟಿತು.

ನನ್ನ ತಲೆಯಲ್ಲಿ ನಡೆದ ಘಟನೆಯಿಂದಾಗಿ ಆಲೋಚನೆಗಳ ಬಿರುಗಾಳಿಯೇ ಎದ್ದಿತ್ತು. ನಾನು ಕಣ್ಣು ಮುಚ್ಚಿ ಮನಸ್ಸಿನಲ್ಲೇ ಬಾಪು ಜೊತೆ ಮಾತನಾಡಲು ಶುರು ಮಾಡಿದೆ. ‘ಬಾಪು, ನನ್ನ ಮೇಲೆ ಇಂತಹ ಕೆಟ್ಟ ಸಮಯ ಬರಲು ಹೇಗೆ ಬಿಟ್ಟಿರಿ, ನೀವು ಇದನ್ನು ತಡೆಯಬೇಕಿತ್ತು’ ಎಂದು ಹೇಳುತ್ತಾ ನಾನು ಬಾಪು ಅವರಿಗೇ ದೋಷ ನೀಡಲು ಶುರು ಮಾಡಿದ್ದೆ.


ನಾನು ಮನಸ್ಸಿನಲ್ಲಿ ಈ ಮಾತು ಹೇಳುತ್ತಿದ್ದಂತೆಯೇ, ವ್ಯಾನ್‌ನ ಬ್ರೇಕ್ ಗಟ್ಟಿಯಾಗಿ ಹಾಕಿದ ಸದ್ದು ಕೇಳಿಸಿತು. ನಾನು ಬೆಚ್ಚಿಬಿದ್ದು ಕಣ್ಣು ತೆಗೆದು ‘ಗಾಡಿ ಯಾಕೆ ನಿಂತಿತು’ ಎಂದು ನೋಡಲು ಎದುರಿಗೆ ನೋಡಿದೆ. ಒಂದು ಹಸು ದಿಢೀರನೆ ಗಾಡಿಯ ಮುಂದೆ ಅಡ್ಡ ಬಂದಿದ್ದರಿಂದ ಡ್ರೈವರ್ ಹಾಗೆ ಬ್ರೇಕ್ ಹಾಕಿದ್ದ. ಗಾಡಿಯಲ್ಲಿದ್ದವರೆಲ್ಲ ಮತ್ತೆ ಸರಿಯಾಗಿ ಕುಳಿತುಕೊಂಡರು. ಆಮೇಲೆ ಇದ್ದಕ್ಕಿದ್ದಂತೆ ಒಬ್ಬ ಕಾನ್‌ಸ್ಟೇಬಲ್ ನನಗೆ ಹೇಳಿದ—‘ನೀನು ಕಳ್ಳತನದಲ್ಲಿ ಸೇರಿದ್ದೀಯೋ ಇಲ್ಲವೋ ಗೊತ್ತಾಗುತ್ತೆ, ಆದರೆ ನಾನು ಇಷ್ಟೇ ಹೇಳುತ್ತೇನೆ... ನೀನು ನಿಜವಾಗಿಯೂ ನಿರಪರಾಧಿಯಾಗಿದ್ದು, ಆ ದರೋಡೆಯ ರಾತ್ರಿ ನೀನೇನಾದರೂ ಆ ಬಂಗಲೆಯಲ್ಲಿ ಮಲಗಿದ್ದರೆ, ಆ ದರೋಡೆಕೋರರು ಮೊದಲಿಗೆ ನಿನ್ನನ್ನೇ ಕೊಲೆ ಮಾಡಿ ಆಮೇಲೆ ದರೋಡೆ ಮಾಡುತ್ತಿದ್ದರು. ಇದು ನನ್ನ ಇಂದಿನವರೆಗಿನ ಅನುಭವದಿಂದ ನಿನಗೆ ಹೇಳುತ್ತಿದ್ದೇನೆ.’ ಇಷ್ಟು ಹೇಳಿ ಅವನು ಸುಮ್ಮನಾದ.

ಯಾರೋ ಆಳವಾದ ನಿದ್ರೆಯಲ್ಲಿದ್ದ ನನ್ನನ್ನು ಒಮ್ಮೆಗೆ ಗಟ್ಟಿಯಾಗಿ ಅಲ್ಲಾಡಿಸಿ ಎಬ್ಬಿಸಿದಂತಾಯಿತು. ಮೈಮೇಲೆ ನಿಜಕ್ಕೂ ಮುಳ್ಳುಗಳು ಎದ್ದು ನಿಂತವು! ಅಂದರೆ ಬಾಪು ನನ್ನನ್ನು ತೊಂದರೆಗೆ ಸಿಲುಕಿಸಿರಲಿಲ್ಲ, ಬದಲಿಗೆ ನನ್ನ ಪ್ರಾಣವನ್ನು ಉಳಿಸಿದ್ದರು! ಆದರು ನಾನು ಬಾಪು ಅವರಿಗೇ ದೋಷ ನೀಡುತ್ತಿದ್ದೆ. ನನ್ನ ಕಣ್ಣುಗಳು ತುಂಬಿ ಬಂದವು, ನಾನು ಮನಸ್ಸಿನಲ್ಲೇ ಬಾಪು ಅವರಲ್ಲಿ ಕ್ಷಮೆ ಕೇಳಿದೆ.

ನಿಜ ಹೇಳಬೇಕೆಂದರೆ, ನಾನು ದೇವರ ದರ್ಶನದ ದಿನಾಂಕವನ್ನು ಸ್ವಲ್ಪ ಮುಂದೂಡಬೇಕೆಂದಿದ್ದೆ. ಆದರೆ ಅದೇ ಸಮಯದಲ್ಲಿ ನಾನು ದೇವದರ್ಶನಕ್ಕಾಗಿ ಊರು ಬಿಟ್ಟು ಹೋಗಬೇಕೆಂದು ನನ್ನ ಪ್ರಕಾರ ೧೦೮% ಆ ದಯಾಳು ಸದ್ಗುರುತತ್ವವೇ ಯೋಜನೆ ಮಾಡಿತ್ತು! ದರೋಡೆಯ ಸಮಯದಲ್ಲಿ ನಾನೇನಾದರೂ ಬಂಗಲೆಯಲ್ಲಿದ್ದರೆ ಕಡ್ಡಾಯವಾಗಿ ಆ ದರೋಡೆಕೋರರು ನನ್ನ ಹೆಣವನ್ನೇ ಬೀಳಿಸುತ್ತಿದ್ದರು.

ಈ ಆಲೋಚನೆ ಮನಸ್ಸಿನಲ್ಲಿ ಗಟ್ಟಿಯಾಗುತ್ತಿದ್ದಂತೆಯೇ ನನ್ನ ಬಾಪು ಮೇಲಿನ ನಂಬಿಕೆ ಇನ್ನಷ್ಟು ಹೆಚ್ಚಾಯಿತು. ನನ್ನ ಬಾಪು ನನ್ನನ್ನು ಈ ಪ್ರಸಂಗದಿಂದ ಹೊರತರುತ್ತಾರೆ ಎಂಬ ದೃಢ ನಂಬಿಕೆಯಿಂದ, ಇನ್ಮುಂದೆ ಬರುವ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ನಾನು ಸಿದ್ಧನಾದೆ.

ಪೋಲೀಸ್ ವ್ಯಾನ್ ಪೊಲೀಸ್ ಸ್ಟೇಷನ್‌ಗೆ ತಲುಪಿತು. ನನ್ನನ್ನು ಲಾಕಪ್‌ಗೆ ಹಾಕಲಾಯಿತು. ನನ್ನ ಹೆಂಡತಿ ಮತ್ತು ಮಕ್ಕಳು ಕೂಡ ಈ ಘಟನೆಯ ನಂತರ ಮಾನಸಿಕವಾಗಿ ಆಘಾತಕ್ಕೊಳಗಾಗಿದ್ದರು. ನಾನು ನಿರಪರಾಧಿ ಎಂಬುದು ಅವರಿಗೆ ಪಕ್ಕಾ ಗೊತ್ತಿತ್ತು. ಜೈಲಿನಲ್ಲಿ ನನಗೆ ಏನೇನು ಹಿಂಸೆಯಾಗುತ್ತೋ ಎಂಬ ಯೋಚನೆಯಿಂದ ಅವರೂ ಚಿಂತೆಯಲ್ಲಿದ್ದರು.

ನನ್ನ ಬಂಧನವಾದ ಮರುದಿನ ದಿನಪತ್ರಿಕೆಯಲ್ಲಿ ದರೋಡೆ ನಡೆದ ಸುದ್ದಿ ಮೊದಲ ಪುಟದಲ್ಲೇ ಬಂದಿತ್ತು. ನನ್ನ ಹೆಸರಂತೂ ಒಂದು ಚೌಕಟ್ಟಿನಲ್ಲಿ ದಪ್ಪ ಅಕ್ಷರಗಳಲ್ಲಿ ‘ಸಂದಿಗ್ಧ ಆರೋಪಿ’ ಎಂದು ಮುದ್ರಿತವಾಗಿತ್ತು. ನನ್ನ ಬಂಧನದ ಸುದ್ದಿ ಎಲ್ಲೆಡೆ ಹರಡಿತ್ತು. ಇದರಿಂದಾಗಿ ನನ್ನ ಮನೆಯವರು ಮನೆಯಿಂದ ಆಚೆ ಬರುವುದಕ್ಕೂ ಕಷ್ಟವಾಗಿತ್ತು.

ಇತ್ತ ಪೊಲೀಸ್ ಲಾಕಪ್‌ನಲ್ಲಿ, ‘ನಾನು ದರೋಡೆಕೋರರ ಜೊತೆ ಸೇರಿದ್ದೇನೆ’ ಎಂದೇ ಭಾವಿಸಿದ್ದ ಪೊಲೀಸರು ನನ್ನಿಂದ ತಪ್ಪೊಪ್ಪಿಗೆ ಪಡೆಯಲು ಸಾಫ್ಟ್‌ನಿಂದ ಹಿಡಿದು ಕಠಿಣದವರೆಗಿನ ಎಲ್ಲಾ ದಾರಿಗಳನ್ನು ಬಳಸಲು ಶುರು ಮಾಡಿದ್ದರು.

ಇದರಲ್ಲೊಮ್ಮೆ, ನನ್ನ ಮನೊಧೈರ್ಯ್ ಕುಗ್ಗಿ ನಾನು ಒಪ್ಪಿಕೊಂಡು ಬಿಡಲಿ ಎಂದು ಕೈಗೆ ಹಗ್ಗ ಕಟ್ಟಿ ಪೊಲೀಸ್ ಸ್ಟೇಷನ್‌ನಿಂದ ಊರಿನ ಮುಖ್ಯ ಚೌಕದವರೆಗೆ ನನ್ನ ಮೆರವಣಿಗೆಯನ್ನು ಬಹಿರಂಗವಾಗಿ ಮಾಡಿದರು. ನಾನು ಹುಟ್ಟಿ ಬೆಳೆದ ಊರು, ಅಲ್ಲಿದ್ದವರೆಲ್ಲಾ ಪರಿಚಿತರು, ಹಾಗಾಗಿ ನಾನು ತಲೆ ತಗ್ಗಿಸಿಕೊಂಡೇ ನಡೆಯುತ್ತಿದ್ದೆ. ಆ ಸಮಯದಲ್ಲಿ ನನಗೆ ಕೇವಲ ನನ್ನ ಕೊರಳಲ್ಲಿದ್ದ ಬಾಪು ಅವರ ಲಾಕೆಟ್ (ಅದನ್ನು ಪೊಲೀಸ್ ಸ್ಟೇಷನ್‌ಗೆ ತಂದಾಗ ತೆಗೆಯಲು ನಾನು ನಿರಾಕರಿಸಿದ್ದೆ) ಮತ್ತು ಅದರ ಮೇಲಿದ್ದ ಬಾಪು ಅವರ ಫೋಟೋ ಮಾತ್ರ ಕಾಣಿಸುತ್ತಿತ್ತು. ಮನಸ್ಸಿನಲ್ಲಿ ಬಾಪು ಅವರ ಜಪ ನಡೆಯುತ್ತಿತ್ತು ಮತ್ತು ನನ್ನ ಕಣ್ಣಿನ ಅಶ್ರುಧಾರೆಯಿಂದ ತಾನಾಗಿಯೇ ಬಾಪು ಅವರಿಗೆ ಅಭಿಷೇಕವಾಗುತ್ತಿತ್ತು. ಬಾಪು ಖಂಡಿತ ಇದರಿಂದ ಏನಾದರೂ ದಾರಿ ತೋರಿಸುತ್ತಾರೆ ಎಂದು ನಾನು ನನ್ನ ಮನಸ್ಸಿಗೆ ಸಮಾಧಾನ ಹೇಳಿಕೊಳ್ಳುತ್ತಿದ್ದೆ.

ಅದರ ಜೊತೆಗೆ ಮುಂದಿನ ಏಳು ದಿನಗಳಲ್ಲಿ ಇಂತಹ ಅನೇಕ ಕಠಿಣ ಕೃತ್ಯಗಳನ್ನು ನನ್ನ ಮೇಲೆ ನಡೆಸಲಾಯಿತು. ನಾನು ಕೇವಲ ಮನಸ್ಸಿನಲ್ಲಿ ಬಾಪು ಅವರ ಜಪವನ್ನು ಮುಂದುವರಿಸಿ ಅದನ್ನೆಲ್ಲಾ ಸಹಿಸಿಕೊಳ್ಳುತ್ತಿದ್ದೆ.


ಈ ಎಲ್ಲಾ ಸನ್ನಿವೇಶಗಳಲ್ಲೂ ಬಾಪು ಮೇಲಿದ್ದ ನನ್ನ ಶ್ರದ್ಧೆ ಅಲುಗಾಡಲಿಲ್ಲ. ನನ್ನನ್ನು ಪೊಲೀಸ್ ಸ್ಟೇಷನ್‌ಗೆ ತಂದಮೇಲೆ ನನ್ನ ಮನೆಯವರು ಮೊದಲ ಬಾರಿಗೆ ನನ್ನನ್ನು ನೋಡಲು ಬಂದಾಗ, ನಾನು ಬಾಪು ಆಶೀರ್ವದಿಸುತ್ತಿರುವ ಕವರ್ ಫೋಟೋ ಇರುವ ‘ಕೃಪಾಸಿಂಧು’ ಮಾಸಪತ್ರಿಕೆ ಮತ್ತು ಪೂಜೆಗೆ ಬೇಕಾದ ಇತರ ವಸ್ತುಗಳನ್ನು ತರಿಸಿಕೊಂಡಿದ್ದೆ. ಆಹ್ನಿಕ, ‘ॐ ಮನಃಸಾಮರ್ಥ್ಯದಾತಾ ಶ್ರೀ ಅನಿರುದ್ಧಾಯ ನಮಃ’ ಎಂಬ ಈ ತಾರಕಜಪ ಮತ್ತು ಇತರ ಪೂಜೆ, ಹಾಗೆಯೇ ಆರತಿಯನ್ನು ದಿನವೂ ಮಾಡುತ್ತಿದ್ದೆ. ಅದರ ಜೊತೆಗೆ ಕೆಲವು ಪೆನ್ಸಿಲ್‌ಗಳನ್ನೂ ತರಿಸಿಕೊಂಡಿದ್ದೆ. ಅವುಗಳಿಂದ ಜೈಲಿನ ಗೋಡೆಗಳ ಮೇಲೆ ಬಾಪು ಅವರ ಜಪವನ್ನು ಬರೆಯುತ್ತಿದ್ದೆ. ಎಷ್ಟು ದಿನ ಪೊಲೀಸ್ ಕಸ್ಟಡಿಯಲ್ಲಿದ್ದೆನೋ ಅಷ್ಟು ದಿನಗಳಲ್ಲಿ ಒಂದು ಇಡೀ ಗೋಡೆ ಜಪದಿಂದ ತುಂಬಿಬಂದಿತ್ತು.

ಇದರಿಂದಾಗಿಯೇ ಈ ಎಲ್ಲಾ ಭಯಾನಕ ಪರಿಸ್ಥಿತಿಯನ್ನು ಎದುರಿಸಲು ನನ್ನ ಮನೊಧೈರ್ಯ್ ಕಾಯ್ದುಕೊಂಡಿತ್ತು ಎಂದು ನನಗನಿಸುತ್ತದೆ. ಎಷ್ಟರಮಟ್ಟಿಗೆ ಎಂದರೆ, ಒಮ್ಮೆ ಒಬ್ಬ ಕಾನ್‌ಸ್ಟೇಬಲ್ ತಾಳ್ಮೆ ಗೆಟ್ಟು ನನ್ನ ಮೇಲೆ ಗದರಿದ—‘ನೀನು ಮನುಷ್ಯನೋ ಅಥವಾ ಪ್ರಾಣಿಯೋ? ಇಷ್ಟೆಲ್ಲಾ ಆದರೂ ನೀನು ಒಂದು ಚೂರು ಸದ್ದು ಮಾಡುವುದಿಲ್ಲ! ಇತರ ಕೈದಿಗಳನ್ನು ನಾವು ಎಳೆದುಕೊಂಡು ಈ ಕೋಣೆಗೆ ತರಬೇಕಾಗುತ್ತದೆ, ನೀನು ನಿನ್ನ ಸ್ವಂತ ಕಾಲಲ್ಲಿ ನಡೆದುಕೊಂಡು ಬರುತ್ತೀಯಾ!’


ನಾನು ಹಿಂದೆ ತಿರುಗಿ ಅವನಿಗೆ ಇಷ್ಟೇ ಹೇಳಿದೆ—‘ನನ್ನ ಅಪ್ಪ....ನನ್ನ ಸದ್ಗುರು ಅನಿರುದ್ಧ ಬಾಪು ನನ್ನ ಜೊತೆಗಿದ್ದಾರೆ. ಅವರೇ ಈ ಕಷ್ಟವನ್ನು ಸಹಿಸುವ ಶಕ್ತಿಯನ್ನು ನನಗೆ ನೀಡುತ್ತಿದ್ದಾರೆ ಮತ್ತು ಮುಂದೆಯೂ ನೀಡುತ್ತಾರೆ, ಇದು ನನ್ನ ದೃಢ ನಂಬಿಕೆ.’ ಅವನು ನನ್ನನ್ನೇ ಆಶ್ಚರ್ಯದಿಂದ ನೋಡುತ್ತಾ ನಿಂತುಬಿಟ್ಟ.

ಜೈಲಿನಲ್ಲಿ ನನ್ನನ್ನು ಭೇಟಿಯಾಗಲು ನನ್ನ ಕುಟುಂಬದವರಿಗೆ, ಸ್ನೇಹಿತರಿಗೆ ನಿರ್ದಿಷ್ಟ ಸಮಯವನ್ನು ಮಾತ್ರ ನೀಡಲಾಗಿತ್ತು. ಆ ಸಮಯದಲ್ಲಿ ಅವರು ಬಂದು ನನ್ನನ್ನು ಭೇಟಿಯಾಗುತ್ತಿದ್ದರು. ಭೇಟಿಯಾದಾಗ ನನ್ನ ಹೆಂಡತಿ ಹೇಳಿದಳು—ನನ್ನ ತಂದೆ-ತಾಯಿಗೂ ಸಹ ‘ನಾನೇ ದೋಷಿ’ ಎಂದು ಅನಿಸಿದ್ದರಿಂದ ಅವರು ನನ್ನನ್ನು ಜೈಲಿಗೆ ಬಂದು ಭೇಟಿಯಾಗುವುದನ್ನು ತಪ್ಪಿಸಿದ್ದಾರೆ ಎಂದು. ಈ ವಿಷಯ ಕೇಳಿ ನಾನು ಇನ್ನಷ್ಟು ದುಃಖಿತನಾದೆ. ಆದರೂ ಇನ್ನಷ್ಟು ಶ್ರದ್ಧೆಯಿಂದ ಪೂಜೆ-ಜಪವನ್ನು ಮುಂದುವರಿಸಿದೆ.

ಹೀಗೆ ಎಂಟು ದಿನಗಳು ಕಳೆದವು. ಎಂಟನೇ ದಿನವೂ ಎಂದಿನಂತೆ ಬಾಪು ಅವರ ಪೂಜೆ.... ದಿನವಿಡೀ ಉಳಿದೆಲ್ಲವೂ ನಿಗದಿಯಂತೆ ಆಯಿತು....ಸಂಜೆಯಾಯಿತು. ಹೆಂಡತಿ ಮತ್ತು ಮಕ್ಕಳು ಭೇಟಿಯಾಗಲು ಬಂದರು. ಇಂದು ಏನೋ ಗೊತ್ತಿಲ್ಲ, ಅವರನ್ನು ನೋಡುತ್ತಿದ್ದಂತೆಯೇ ನನ್ನ ಕಣ್ಣಿನಿಂದ ನೀರು ಹರಿಯಲು ಶುರುವಾಯಿತು. ಅವರಿಗೆ ಗೊತ್ತಾಗಬಾರದೆಂದು ನಾನು ಕಣ್ಣನ್ನು ಒರೆಸಿಕೊಂಡು ನನ್ನನ್ನು ನಿಯಂತ್ರಿಸಿಕೊಂಡೆ. ಏಕೆಂದರೆ ಪೊಲೀಸರ ಜೀವಹಿಂಡುವ ರಿಮಾಂಡ್, ಸಮಾಜದಲ್ಲಿ ಆದ ಅವಮಾನ ಮತ್ತು ಹೆಂಡತಿ, ಮಕ್ಕಳು, ತಂದೆ-ತಾಯಿಯ ಭವಿಷ್ಯದ ಚಿಂತೆ—ಈ ಎಲ್ಲಾ ಆಲೋಚನೆಗಳಿಂದ ನಾನು ತೀರ ಕುಗ್ಗಿಹೋಗಿದ್ದೆ ಮತ್ತು ಸುಸ್ತಾಗಿದ್ದೆ. ಬಹುಶಃ ಅದಕ್ಕಾಗಿಯೇ ನನ್ನ ಕಣ್ಣಿನಲ್ಲಿ ನೀರು ಬಂದಿರಬಹುದು.

ಮೊದಲು ನಾನು ಮಕ್ಕಳೊಂದಿಗೆ ನಿರಾಳವಾಗಿ ಮತ್ತು ಮನಸ್ಸು ಬಿಚ್ಚಿ ಮಾತನಾಡಿದೆ. ಕೆಲವು ಜವಾಬ್ದಾರಿಯ ವಿಷಯಗಳನ್ನು ಹೇಳಿದೆ. ‘ಅಮ್ಮ ಮತ್ತು ಅಜ್ಜ-ಅಜ್ಜಿಯನ್ನು ಚೆನ್ನಾಗಿ ನೋಡಿಕೊಳ್ಳಿ’ ಎಂದು ಹೇಳಿದೆ, ಆದರೆ ಮತ್ತೆ ನನ್ನ ಕಣ್ಣುಗಳು ತುಂಬಿ ಬಂದವು. ಹೆಂಡತಿ ಮತ್ತು ಮಕ್ಕಳೂ ಕೂಗ ತೊಡಗಿದರು. ಆಮೇಲೆ ಅವರನ್ನು ಸಂಭಾಳಿಸುತ್ತಾ ಹೇಳಿದೆ—‘ಬಾಪು ಇದ್ದಾರೆ, ಅವರು ಎಲ್ಲವನ್ನೂ ನೋಡಿಕೊಳ್ಳುತ್ತಾರೆ, ನೀವು ಧೈರ್ಯ ಗೆಡಬೇಡಿ’.

ಆಮೇಲೆ ನಾನು ಮಕ್ಕಳನ್ನು ಆಚೆ ಹೋಗಲು ಹೇಳಿ ನನ್ನ ಹೆಂಡತಿ ಅಮಿತಾ ಜೊತೆ ಮಾತನಾಡಲು ಶುರು ಮಾಡಿದೆ. ಅವಳೊಂದಿಗೆ ಮಾತನಾಡುವಾಗ ಇಂದು ಭೇಟಿಯ ಸಮಯ ಬೇಗನೇ ಮುಗಿಯುತ್ತಿದೆ ಎನಿಸಿತು. ಅಮಿತಾ ಬಳಿ ನಾನು ಮನಸ್ಸು ಬಿಚ್ಚಿ ಮಾತನಾಡಿದೆ. ಮಧ್ಯದಲ್ಲಿ ಒಮ್ಮೆ ಹೊರಗಿದ್ದ ಕಾನ್‌ಸ್ಟೇಬಲ್ ಗಟ್ಟಿಯಾಗಿ ಕೂಗಿದ—‘ಸಮಯ ಮುಗಿಯಿತು!’

ಅಮಿತಾ ಹೊರಡುತ್ತಿದ್ದಳು. ನಾನು ಅವಳ ಕೈ ಹಿಡಿದು ಅವಳನ್ನು ತಡೆದು ಹೇಳಿದೆ—‘ಈಗ ನಾನು ತುಂಬಾ ಸುಸ್ತಾಗಿದ್ದೇನೆ. ಕೇವಲ ಬಾಪು ಅವರ ಸ್ಮರಣೆಯಿಂದ ಸಿಗುತ್ತಿರುವ ಶಕ್ತಿಯಿಂದಷ್ಟೇ ನಾನು ಇಲ್ಲಿಯವರೆಗೆ ಎಲ್ಲವನ್ನೂ ಸಹಿಸಿಕೊಂಡೆ, ಆದರೆ ಈಗ ಸಹಿಸಲು ಸಾಧ್ಯವಾಗುತ್ತಿಲ್ಲವೇ. ತುಂಬಾ ತೊಂದರೆಯಾಗುತ್ತಿದೆ ಇವೆಲ್ಲದರಿಂದ! ನಾನು ನಿನಗೆ ಮನಸ್ಸು ಬಿಚ್ಚಿ ನಿಜ ಹೇಳುತ್ತಿದ್ದೇನೆ... ನಾಳೆ ಬೆಳಿಗ್ಗೆ ಬಾಪು ಅವರ ಪೂಜೆ ಮಾಡಿದ ನಂತರ ನಾನು ನನ್ನ ಜೀವನವನ್ನು ಕೊನೆಗೊಳಿಸಿಕೊಳ್ಳುತ್ತೇನೆ. ನೀನು ಮಕ್ಕಳನ್ನು ಚೆನ್ನಾಗಿ ನೋಡಿಕೋ. ಅವರಿಗೆ ಒಳ್ಳೆಯ ಶಿಕ್ಷಣ ಕೊಡಿಸಲು ಪ್ರಯತ್ನಿಸು.’

ನನ್ನ ಈ ಮಾತಿನಿಂದ ಅವಳು ಇನ್ನಷ್ಟು ಜೋರಾಗಿ ಕೂಗ ತೊಡಗಿದಳು. ಅವಳು ನನ್ನ ಬಳಿ ‘ಹಾಗೆಲ್ಲಾ ಮಾಡಬೇಡಿ’ ಎಂದು ಪದೇ ಪದೇ ಬೇಡಿಕೊಳ್ಳುತ್ತಿದ್ದಳು. ಅಷ್ಟರಲ್ಲಿ ಹೊರಗಿನಿಂದ ಒಬ್ಬ ಮಹಿಳಾ ಕಾನ್‌ಸ್ಟೇಬಲ್ ಒಳಗೆ ಬಂದು ನನ್ನ ಹೆಂಡತಿಯ ಕೈ ಹಿಡಿದು ಅವಳನ್ನು ಹೊರಗೆ ಎಳೆದುಕೊಂಡು ಹೋದಳು. ತುಂಬಿದ ಕಣ್ಣುಗಳಿಂದ ಹೊರಗೆ ಹೋಗುವಾಗಲೂ ಅವಳು ನನ್ನೊಂದಿಗೆ ಮಾತನಾಡಲು ಪ್ರಯತ್ನಿಸುತ್ತಿದ್ದಳು. ನಾವಿಬ್ಬರೂ ಇನ್ನೂ ಏನೇನೋ ಮಾತನಾಡಬೇಕಿತ್ತು, ಆದರೆ ಸಮಯ ಮುಗಿದುಹೋಗಿತ್ತು.

ಸಂಜೆ ೭ ಗಂಟೆಯಾಯಿತು. ಆ ದಿನ ರಾತ್ರಿಯ ಊಟವನ್ನೂ ನಾನು ಮಾಡಲಿಲ್ಲ. ರಾತ್ರಿ ಮಲಗುವ ಮುನ್ನ ಬಾಪು ಅವರ ಸ್ಮರಣೆ, ನಾಮಸ್ಮರಣೆ ಮಾಡಿ ಬಾಪು ಅವರೊಂದಿಗೆ ಇಷ್ಟೇ ಹೇಳಿದೆ—‘ಬಾಪು, ನನ್ನ ಮನಸ್ಥಿತಿ ನಿಮಗೆ ಗೊತ್ತೇ ಇದೆ. ನನಗೆ ನಿಮ್ಮ ಮೇಲೆ ಪೂರ್ಣ ನಂಬಿಕೆಯಿದೆ’ ಎಂದು ಬಾಪು ಜೊತೆ ನುಡಿದು ಮಲಗಲು ಪ್ರಯತ್ನಿಸಿದೆ. ಆದರೆ ತಲೆಯಲ್ಲಿ ಓಡುತ್ತಿದ್ದ ಆಲೋಚನೆಗಳ ಬಿರುಗಾಳಿಯಿಂದಾಗಿ ನನಗೆ ನಿದ್ರೆಯೇ ಬರಲಿಲ್ಲ.

ರಾತ್ರಿ ಪೂರ್ತಿ ನಾನು ಜಾಗೃತನಾಗಿಯೇ ಇದ್ದೆ. ಮುಂಜಾನೆ ೪ ಗಂಟೆಯಾಗಿತ್ತು. ನಾನು ಹಾಸಿಗೆಯಿಂದ ಎದ್ದೆ—ನನ್ನ ಜೀವನವನ್ನು ಕೊನೆಗೊಳಿಸಿಕೊಳ್ಳುವ ಗಟ್ಟಿ ನಿರ್ಧಾರದಿಂದಲೇ!

ನಾನು ಸ್ನಾನ ಮುಗಿಸಿ ಬಂದೆ. ನನ್ನ ದಿನನಿತ್ಯದ ಪೂಜೆಯ ಜಾಗದಲ್ಲಿ ಕುಳಿತೆ. ‘ಕೃಪಾಸಿಂಧು’ ಮಾಸಪತ್ರಿಕೆಯನ್ನು ಎದುರಿಗಿಟ್ಟೆ. ಅದರ ಮೇಲೆ ಬಾಪು ಆಶೀರ್ವದಿಸುವ ಫೋಟೋ ಇತ್ತು. ನಾನು ಪೂಜೆ ಮುಗಿಸಿದೆ. ಆಹ್ನಿಕವನ್ನೂ ಮಾಡಿದೆ. ಬಾಪು ಅವರ ಆರತಿ ಮಾಡಿದೆ, ಆಮೇಲೆ ಕಣ್ಣು ಮುಚ್ಚಿ ಮತ್ತೆ ಒಮ್ಮೆ ಬಾಪು ಅವರಿಗೆ ಮನಸಾರೆ ನಮಸ್ಕರಿಸಿದೆ. ಹೆಂಡತಿ ಮತ್ತು ಮಕ್ಕಳಲ್ಲಿ ಮನಸ್ಸಿನಲ್ಲೇ ಕ್ಷಮೆ ಕೇಳಿದೆ.

ನನ್ನ ಬಳಿ ಶೇವ್ ಮಾಡಲು ತಂದಿದ್ದ ಬ್ಲೇಡ್ ಪ್ಯಾಕೆಟ್ ಇಡಲಾಗಿತ್ತು. ಅದರಲ್ಲಿದ್ದ ಒಂದು ಬ್ಲೇಡ್ ಅನ್ನು ಬಲಗೈಯಲ್ಲಿ ಹಿಡಿದು, ಎಡಗೈ ನರವನ್ನು ಕತ್ತರಿಸಿಕೊಳ್ಳಲು ಅದರ ಮೇಲಿಟ್ಟೆ.

ಬೆಳಿಗ್ಗೆ ೫ ಗಂಟೆಯ ಸುಮಾರಿರಬಹುದು. ಇಲ್ಲಿ ಪೊಲೀಸ್ ಸ್ಟೇಷನ್ ಒಳಗೆ ನಾನು ನನ್ನನ್ನು ಕೊನೆಗೊಳಿಸಿಕೊಳ್ಳುವ ತಯಾರಿಯಲ್ಲಿದ್ದೆ, ಅತ್ತ ಅದೇ ಸಮಯದಲ್ಲಿ ಹೊರಗಡೆ ಪೊಲೀಸ್ ಸ್ಟೇಷನ್‌ನಲ್ಲಿದ್ದ ಲ್ಯಾಂಡ್‌ಲೈನ್ ಫೋನ್ ತುಂಬಾ ಹೊತ್ತು ರಿಂಗ್ ಆಗಿ ಬಂದ್ ಆಯಿತು.

ಮೂರನೇ ಬಾರಿಗೆ ಲ್ಯಾಂಡ್‌ಲೈನ್ ರಿಂಗ್ ಆದಾಗ, ನಾನು ಕೈ ನರ ಕತ್ತರಿಸಿಕೊಳ್ಳಲು ಮನಸ್ಸಿನಲ್ಲಿ ಧೈರ್ಯ ತಂದುಕೊಳ್ಳುತ್ತಿದ್ದೆ. ಆದರೆ ‘ಮಾಡಬೇಕೋ ಬೇಡವೋ’ ಎಂಬ ಗೊಂದಲ ನನ್ನ ಮನಸ್ಸಿನಲ್ಲಿ ೫ ರಿಂದ ೧೦ ನಿಮಿಷ ನಡೆಯಿತು. ಅಷ್ಟರಲ್ಲಿ ಕಾನ್‌ಸ್ಟೇಬಲ್ ಓಡೋಡಿ ನನ್ನ ಬಳಿ ಬಂದು ಹೇಳಿದ—‘ಮಗಾ ಸಂಜ್ಯಾ! ನೀನು ಪಾರಾದೆಯ, ಆ ಕಳ್ಳರು ಸ್ವಲ್ಪ ಸಮಯದ ಹಿಂದಷ್ಟೇ ಸಿಕ್ಕಿಬಿದ್ದಿದ್ದಾರೆ!’

ಅವನ ಆ ಮಾತು ಕೇಳಿ ಅಕ್ಷರಶಃ ನನ್ನ ಇಡೀ ಶರೀರ ಆನಂದದಿಂದ ರೋಮಾಂಚನಗೊಂಡಿತು. ಕಣ್ಣಿನಿಂದ ಹರಹರನೆ ಆನಂದಾಶ್ರು ಹರಿಯಲು ಶುರುವಾಯಿತು. ನಾನು ಬ್ಲೇಡ್ ಅನ್ನು ಪಕ್ಕಕ್ಕೆ ಎಸೆದೆ. ಎದುರಿಗೆ ಬಾಪು ಫೋಟೋ ಇದ್ದೇ ಇತ್ತು. ನಾನು ಕೂಗುತ್ತಲೇ ಅಕ್ಷರಶಃ ಆ ಫೋಟೋ ಮುಂದೆ ಸಾಷ್ಟಾಂಗ ನಮಸ್ಕಾರ ಮಾಡಿದೆ. ನನ್ನ ಆನಂದಕ್ಕೆ ಎಲ್ಲೆಯೇ ಇರಲಿಲ್ಲ. ನಾನು ಗಟ್ಟಿಯಾಗಿ ಕೂಗಿದೆ—‘ನೋಡಿ, ನಾನು ಹೇಳುತ್ತಿದ್ದೆ ಅಲ್ವಾ ‘ಬಾಪು ನನ್ನ ಸದ್ಗುರು, ನನ್ನ ಅಪ್ಪ, ಅವರು ನನ್ನನ್ನು ಬಚಾವ್ ಮಾಡೇ ಮಾಡುತ್ತಾರೆ’ ಅಂತ!’

ಅವನು ನನ್ನನ್ನು ಲಾಕಪ್‌ನಿಂದ ಆಚೆ ಕರೆತಂದ. ಪೊಲೀಸ್ ಸ್ಟೇಷನ್‌ನಲ್ಲಿದ್ದ ಎಲ್ಲಾ ಕಾನ್‌ಸ್ಟೇಬಲ್‌ಗಳು ಮತ್ತು ಇತರ ಕೈದಿಗಳೂ ಸಹ ನನ್ನ ಆ ಸದ್ದಿಗೆ ಎದ್ದು ಆಶ್ಚರ್ಯದಿಂದ ನನ್ನನ್ನು ನೋಡುತ್ತಿದ್ದರು.


ಆ ಫೋನ್ ಇಚಲಕರಂಜಿ ಪೊಲೀಸ್ ಸ್ಟೇಷನ್‌ನಿಂದ ಬಂದಿತ್ತು. ಸ್ವತಃ ಪೊಲೀಸ್ ವರಿಷ್ಠಾಧಿಕಾರಿಯೇ ಫೋನ್‌ನಲ್ಲಿ ಮಾತನಾಡುತ್ತಿದ್ದರು. ದರೋಡೆ ಮಾಡಿದ ಆ ಕಳ್ಳರು ಇಚಲಕರಂಜಿ ಬಸ್ ಸ್ಟ್ಯಾಂಡ್‌ನಲ್ಲಿ ಬೆಳಿಗ್ಗೆ ೪.೩೦ ಕ್ಕೆ ಕದ್ದ ಮಾಲಿನೊಂದಿಗೆ ಸಿಕ್ಕಿಬಿದ್ದಿದ್ದು, ಅವರು ಅಪರಾಧವನ್ನು ಒಪ್ಪಿಕೊಂಡಿದ್ದಾರೆ ಎಂಬ ಮಾಹಿತಿಯನ್ನು ಅವರು ನೀಡಿದರು. ಅದರ ಜೊತೆಗೆ ಇದನ್ನೂ ಹೇಳಿದರು—‘ನಿಮ್ಮ ಪೊಲೀಸ್ ಸ್ಟೇಷನ್‌ನಲ್ಲಿ ಬಂಧಿಯಾಗಿರುವ ಅನುಮಾನಾಸ್ಪದ ಆರೋಪಿ ಸಂಜಯ್ ಜಾಧವ್‌ನನ್ನು ತಕ್ಷಣ ಜೈಲಿನಿಂದ ಬಿಡುಗಡೆ ಮಾಡಿ. ನಾವು ಪೊಲೀಸ್ ವ್ಯಾನ್‌ನಲ್ಲಿ ಆ ಕಳ್ಳರನ್ನು ನಿಮ್ಮ ಬಳಿಗೆ ಕರೆತರುತ್ತಿದ್ದೇವೆ.’

ಆಮೇಲೆ ನಮ್ಮ ಪೊಲೀಸ್ ಸ್ಟೇಷನ್‌ನ ಪೋಲೀಸ್ ಅಧಿಕಾರಿ ಮತ್ತು ಇತರ ಎಲ್ಲಾ ಸಿಬ್ಬಂದಿ ನನ್ನೊಂದಿಗೆ ಗೌರವದಿಂದ ಮಾತನಾಡಲು ಶುರು ಮಾಡಿದರು.

ಪೋಲೀಸ್ ಅಧಿಕಾರಿಯಂತೂ ಹೀಗೂ ಹೇಳಿದರು—‘ನೀನು ಹೇಳಿದಂತೆಯೇ ನಿಜವಾಗಿಯೂ ನಿನ್ನ ಬಾಪು ನಿನ್ನನ್ನು ಬಿಡಿಸಿದರಲ್ಲವೋ!’

ಆಮೇಲೆ ಅವರು ನನ್ನ ಬಳಿ ‘ಈ ಬಾಪು ಯಾರು? ಎಲ್ಲಿಯವರು?’ ಎಂದು ವಿಚಾರಿಸಿದರು. ನಾನು ಅವರಿಗೆ ಬಾಪು ಭಕ್ತಿಯನ್ನು ಹೇಗೆ ಶುರು ಮಾಡಿದೆ ಎಂಬುದನ್ನು ವಿವರವಾಗಿ ಹೇಳಿದೆ. ಆಮೇಲೆ ನಾನು ಅವರಿಗೆ ‘ಕೃಪಾಸಿಂಧು’ ಮಾಸಪತ್ರಿಕೆಯನ್ನು ಓದಲು ನೀಡಿದೆ. ಅವರು ಕುರ್ಚಿಯಲ್ಲಿ ಕುಳಿತು ಪತ್ರಿಕೆಯನ್ನು ಮಗುಚಿ ನೋಡತೊಡಗಿದರು. ನಾನು ಎದುರಿನ ಕುರ್ಚಿಯಲ್ಲಿ ಕುಳಿತಿದ್ದೆ.

ಆದರೆ ನನ್ನ ಗಮನ ನಮ್ಮ ಮಾತಿನ ಕಡೆಗೆ ಇರಲೇ ಇಲ್ಲ. ನನ್ನ ಮನಸ್ಸಿನಲ್ಲಿ ಪ್ರಶ್ನೆ ಮೂಡಿತ್ತು—‘ಬಾಪು ಇದನ್ನು ಹೇಗೆ ನಡೆಸಿಕೊಟ್ಟಿರಬಹುದು? ನಿಜವಾಗಿ ಏನಾಗಿರಬಹುದು?’

ಹೀಗೆ ಅನೇಕ ಪ್ರಶ್ನೆಗಳು ಮನಸ್ಸಿನಲ್ಲಿ ಬರುತ್ತಿದ್ದವು ಮತ್ತು ಒಂದೇ ರೀತಿಯ ಕುತೂಹಲ ಕಾಡುತ್ತಿತ್ತು. ಸಾಹೇಬರ ಮತ್ತು ನನ್ನ ಮಾತುಕತೆ ನಡೆಯುತ್ತಿತ್ತು, ಅಷ್ಟರಲ್ಲೇ ಇಚಲಕರಂಜಿಯಿಂದ ಆ ಪೊಲೀಸ್ ವ್ಯಾನ್ ಕಳ್ಳರನ್ನು ಕರೆದುಕೊಂಡು ನಮ್ಮ ಪೊಲೀಸ್ ಸ್ಟೇಷನ್‌ಗೆ ಬಂದು ತಲುಪಿತು. ಅವರು ನಾಲ್ಕು ಜನರಿದ್ದರು, ನಾಲ್ವರೂ ಸೇರಿ ದರೋಡೆ ಮಾಡಿದ್ದರು. ನಮ್ಮ ಪೊಲೀಸ್ ಸ್ಟೇಷನ್‌ನ ಅಧಿಕಾರಿ ಮೊದಲು ಆ ಕಳ್ಳರಿಗೆ ನನ್ನ ಕಡೆ ಬೆರಳು ಮಾಡಿ ಕೇಳಿದರು—‘ಈ ವ್ಯಕ್ತಿಯ ನಿಮಗೆ ಪರಿಚಯವಿದೆಯೇ?  ಕಳ್ಳತನಕ್ಕಾಗಿ ಇವನು ನಿಮಗೇನಾದರೂ ಸಹಾಯ ಮಾಡಿದ್ದಾನಾ?’

ಆ ಕಳ್ಳರಲ್ಲಿ ಒಬ್ಬ—‘ನಮಗೆ ಇವನ ಪರಿಚಯವಿಲ್ಲ’ ಎಂದು ಸ್ಪಷ್ಟವಾಗಿ ಹೇಳಿದ. ಆದರೆ ಇದನ್ನು ಹೇಳುವಾಗ ಅವನ ಕಣ್ಣು ಪೋಲೀಸ್ ಅಧಿಕಾರಿಯ ಟೇಬಲ್ ಮೇಲಿಟ್ಟಿದ್ದ ಬಾಪು ಅವರ ‘ಕೃಪಾಸಿಂಧು’ ಮಾಸಪತ್ರಿಕೆಯ ಮೇಲೆಯೇ ಇತ್ತು ಮತ್ತು ಇದನ್ನು ಹೇಳುತ್ತಲೇ ಅವನು ಟೇಬಲ್ ಹತ್ತಿರ ಬಂದ.

ಅವನ ಮುಖದಲ್ಲಿ ಪ್ರಶ್ನಾರ್ಥಕ ಚಿಹ್ನೆ ಮೂಡಿದ್ದು ಸ್ಪಷ್ಟವಾಗಿ ತಿಳಿಯುತ್ತಿತ್ತು. ಅವನು ಪೋಲೀಸ್ ಅಧಿಕಾರಿಯ ಅನುಮತಿ ಪಡೆದು ‘ಕೃಪಾಸಿಂಧು’ ಮಾಸಪತ್ರಿಕೆಯನ್ನು ಕೈಗೆ ತೆಗೆದುಕೊಂಡ. ಆ ಪತ್ರಿಕೆಯ ಮುಖಪುಟದಲ್ಲಿದ್ದ ಬಾಪು ಅವರ ಫೋಟೋವನ್ನು ಆ ಕಳ್ಳ ರೆಪ್ಪೆ ಹೊಡೆಯದೆ ನೋಡುತ್ತಲೇ ನಿಂತಿದ್ದ. ಪೊಲೀಸ್ ಸ್ಟೇಷನ್‌ನಲ್ಲಿದ್ದವರೆಲ್ಲರೂ ಆ ಕಳ್ಳನನ್ನು ಆಶ್ಚರ್ಯದಿಂದ ನೋಡುತ್ತಿದ್ದರು.



ಕೆಲವು ಸೆಕೆಂಡುಗಳ ಕಾಲ ಆ ಜಾಗದಲ್ಲಿ ಗಂಭೀರವಾದ ಮೌನ ಆವರಿಸಿತ್ತು....

ಅಷ್ಟರಲ್ಲಿ ಆ ಪತ್ರಿಕೆಯ ಮೇಲಿದ್ದ ಬಾಪು ಅವರ ಫೋಟೋವನ್ನು ಪೊಲೀಸ್ ಅಧಿಕಾರಿಗೆ ತೋರಿಸುತ್ತಾ ಆ ಕಳ್ಳ ಕೇಳಿದ—‘ಸಾಹೇಬ್ರೇ, ಈ ಮನುಷ್ಯ ಯಾರು? ಕಳ್ಳತನ ಮಾಡಿದ ಕ್ಷಣದಿಂದ ಇವನು ನಮ್ಮ ಬೆನ್ನ ಹಿಂದೆಯೇ ಇದ್ದಾನೆ ಎಂದು ನಮಗೆ ಸತತವಾಗಿ ಭಾಸವಾಗುತ್ತಿದೆ. ಇವನು ಕಾಣಿಸುತ್ತಿದ್ದ, ಮತ್ತೆ ಕಣ್ಮರೆಯಾಗುತ್ತಿದ್ದ. ಇವನಿಂದಾಗಿಯೇ ನಮ್ಮ ಪರಾರಿಯಾಗುವ ಪ್ಲಾನಿಂಗ್ ಸತತವಾಗಿ ಬದಲಾಗುತ್ತಾ ಹೋಯಿತು, ಇಲ್ಲದಿದ್ದರೆ ನಾವು ಎಂದೋ ಪರಾರಿಯಾಗುತ್ತಿದ್ದೆವು. ಯಾವುದೋ ಪೊಲೀಸ್ ಅಧಿಕಾರಿಯಂತೆ ಇವನು ಕಾಣಿಸುತ್ತಿದ್ದರಿಂದ ನಾವು ತುಂಬಾ ಹೆದರಿಕೊಂಡಿದ್ದೆವು. ಇವತ್ತು ಬೆಳಿಗ್ಗೆಯೂ ಇಚಲಕರಂಜಿ ಎಸ್.ಟಿ ಬಸ್ ಸ್ಟ್ಯಾಂಡ್‌ಗೆ ನಾವು ಹೋದಾಗ, ಇವನು ಅಲ್ಲೂ ಎದುರಿನ ಬೆಂಚ್ ಮೇಲೆ ಕುಳಿತಿದ್ದಾನೇನೋ ಅನಿಸಿತು. ಯಾರು ಈ ವ್ಯಕ್ತಿ? ನಿಜವಾಗಿಯೂ ಇವರು ಪೊಲೀಸ್ ಅಧಿಕಾರಿಯೇ?’ ಎಂದು ಅನೇಕ ಪ್ರಶ್ನೆಗಳನ್ನು ಕೇಳಿ ಆ ಕಳ್ಳ ಸುಮ್ಮನಾದ.

ಅವನ ಆ ವಾಕ್ಯದ ನಂತರ ನನ್ನ ಮೈಮೇಲೆ ಮತ್ತೆ ಮುಳ್ಳುಗಳು ಎದ್ದು ನಿಂತವು. ನನ್ನ ಕಣ್ಣುಗಳಲ್ಲಿ ನೀರು ತುಂಬಿಕೊಳ್ಳಲು ಶುರುವಾಯಿತು. ಈ ಅನುಭವವನ್ನು ಓದುವವರಲ್ಲಿ ಯಾರಿಗಾದರೂ ‘ಇದು ಹೇಗೆ ಸಾಧ್ಯ?’ ಎಂದು ಖಂಡಿತ ಅನಿಸಬಹುದು. ಆದರೆ ಏನು ನಡಿತೋ, ಕೇಳಿದೆನೋ ಮತ್ತು ಸ್ವತಃ ಅನುಭವಿಸಿದೆನೋ ಅದೆಲ್ಲವನ್ನೂ ಸಂಪೂರ್ಣ ಸತ್ಯ ತಿಳಿಸಿದ್ದೇನೆ. ಏನೇ ಇರಲಿ, ಹೀಗೆ ಈ ಭಯಾನಕ ಪ್ರಸಂಗದಿಂದ ಮತ್ತು ದರೋಡೆಯ ಸುಳ್ಳು ಆರೋಪದಿಂದ ನನ್ನ ಬಾಪು ಅವರೇ ನನ್ನನ್ನು ಬಚಾವ್ ಮಾಡಿದರು ಎಂಬುದು ನನ್ನ ದೃಢ ನಂಬಿಕೆ. ಬಾಪುರಾಯಾ, ನಿಮ್ಮ ಶ್ರದ್ಧಾವಾನ್ ಭಕ್ತರಿಗೆ ಯಾವಾಗಲೂ ಅಸಾಧ್ಯವಾದದ್ದು ಸಾಧ್ಯವಾಗುವುದನ್ನು ನಾವು ನೋಡುತ್ತೇವೆ. ಇಂದು ನಾನು ಮತ್ತು ನನ್ನ ಮನೆಯವರೆಲ್ಲ ಸಂತೋಷವಾಗಿ, ಸುಖವಾಗಿದ್ದೇವೆ ಎಂದರೆ ಅದು ಕೇವಲ ನಿಮ್ಮಿಂದಲೇ! ನಮ್ಮಿಂದ ಇಂತಹ ಭಕ್ತಿ ಮತ್ತು ಸೇವೆಯನ್ನು ನೀವೇ ಮಾಡಿಸಿಕೊಳ್ಳಿ. ಬಾಪು, ನೀವು ನಮ್ಮ ಸದ್ಗುರು, ಮಿತ್ರ, ಅಪ್ಪ ಎಲ್ಲವೂ ಆಗಿದ್ದೀರಿ.