ನಾನು ಅಮಿತ್ ಸಿಂಘಲ್. ದೆಹಲಿಯಲ್ಲಿ ವಾಸವಾಗಿದ್ದೇನೆ. ವೃತ್ತಿಯಲ್ಲಿ ಆರ್ಕಿಟೆಕ್ಟ್ ಆಗಿದ್ದೇನೆ. ಬಿಲ್ಡಿಂಗ್ ಡಿಸೈನ್ ಮಾಡುತ್ತೇನೆ. ದೊಡ್ಡ ದೊಡ್ಡ ಕಾಂಪ್ಲೆಕ್ಸ್ ಡಿಸೈನ್ ಮಾಡುತ್ತೇನೆ. 2005-2006 ನೇ ಇಸವಿಯಲ್ಲಿ ಪರಮಪೂಜ್ಯ ಸದ್ಗುರು ಶ್ರೀ ಅನಿರುದ್ಧ ಬಾಪು ಅವರ ಬಗ್ಗೆ ಮೊದಲ ಬಾರಿಗೆ ನನಗೆ ನನ್ನ ಭಾವ ಡಾ. ಅಜಯ್ ರಾಘವ್ ಅವರಿಂದ ತಿಳಿಯಿತು. ಸದ್ಗುರು ಕೃಪೆಯಿಂದ ಅವರ ಮಗ ಬ್ಲಡ್ ಕ್ಯಾನ್ಸರ್‌ನಿಂದ ಹೇಗೆ ಬದುಕುಳಿದ, ಇದೆಲ್ಲ ಗೊತ್ತಿದ್ದರೂ ಕೂಡ ನಾನು ಬಾಪು ಅವರ ಮೇಲೆ ನಂಬಿಕೆ ಇಡಲಿಲ್ಲ. ಆದರೆ ನನ್ನ ಹೆಂಡತಿ ಬಾಪು ಅವರನ್ನು ನಂಬಲು ಶುರು ಮಾಡಿದ್ದಳು. ಬಾಪು ಅವರ ಬಗ್ಗೆ ತಿಳಿದ ಮೇಲೆ ಬಾಪು ಅವರ ಫೋಟೋ ನಮ್ಮ ಮನೆಗೆ ಬಂದಿತ್ತು. 10 ವರ್ಷಗಳಿಂದ ಸಾಯಿಬಾಬಾ ಅವರ ಭಕ್ತಿ ನಮ್ಮ ಮನೆಯಲ್ಲಿತ್ತು, ಆದರೆ ನನ್ನ ಮನಸ್ಸು ಮಾತ್ರ ಆ ಸದ್ಗುರುತತ್ವವನ್ನು ಬೇರೊಂದು ರೂಪದಲ್ಲಿ ನಂಬಲು ತಯಾರಿರಲಿಲ್ಲ.
ಇದು 2010 ರ ಹೊತ್ತಿನ ಮಾತು. 30 ಅಕ್ಟೋಬರ್ 2009 ರಂದು ನನಗೆ ಮಗಳಾದಳು. ನನಗೊಬ್ಬಳು ದೊಡ್ಡ ಮಗಳಿದ್ದಾಳೆ ಮತ್ತು ಇವಳು ಸಣ್ಣ ಮಗಳು. 2009 ರಲ್ಲಿ ಎಲ್ಲೆಡೆ ಸ್ವೈನ್ ಫ್ಲೂ ಹಾವಳಿ ಜೋರಾಗಿತ್ತು. ದೊಡ್ಡ ಮಗಳಿಗೆ ಯಾವಾಗಲಾದರೂ ಕೆಮ್ಮು ಬಂದರೆ ಸಾಕು, ಎಲ್ಲಾದರೂ ಸ್ವೈನ್ ಫ್ಲೂ ಇರಬಹುದೇನೋ ಎಂದು ಮನಸ್ಸಿನಲ್ಲಿ ಭಯವಾಗುತ್ತಿತ್ತು. ಶಾಲೆಯಲ್ಲೂ ಸ್ವೈನ್ ಫ್ಲೂ ಬಗ್ಗೆ ತುಂಬಾ ಭಯವಿತ್ತು. ಒಂದು ವೇಳೆ ದೊಡ್ಡ ಮಗಳಿಗೆ ಕೆಮ್ಮು ಬಂದರೆ, ಅವಳು ಪೂರ್ತಿ ಹುಷಾರಾಗಿದ್ದಾಳೆ ಎಂದು ಖಚಿತವಾಗುವವರೆಗೆ, ಆ ಮೂರು-ನಾಲ್ಕು ದಿನ ನಾನು ಅವಳನ್ನು ಕರೆದುಕೊಂಡು ಪಕ್ಕದ ರೂಮ್‌ನಲ್ಲಿ ಮಲಗುತ್ತಿದ್ದೆ. ಜ್ವರ ಕಡಿಮೆಯಾದ ಮೇಲೆ ಮತ್ತೆ ನಾವೆಲ್ಲರೂ ಒಟ್ಟಿಗೆ ಮಲಗುತ್ತಿದ್ದೆವು. ಹೀಗೆ ದಿನಗಳು ಕಳೆಯುತ್ತಿದ್ದವು.
ಡಿಸೆಂಬರ್ 2009 ರಲ್ಲಿ ದೊಡ್ಡ ಮಗಳಿಗೆ ಮತ್ತೆ ಜ್ವರ ಮತ್ತು ಕೆಮ್ಮು ಶುರುವಾಯಿತು. ಮೂರು-ನಾಲ್ಕು ದಿನವಾಯಿತು. ಡಾಕ್ಟರ್‌ಗೆ ಕೇಳಿದೆವು ‘ಡಾಕ್ಟರ್, ಸ್ವೈನ್ ಫ್ಲೂ ಅಂತೂ ಅಲ್ಲ ತಾನೇ?’ ಡಾಕ್ಟರ್ ಹೇಳಿದರು, ‘ಜ್ವರ ಕಡಿಮೆಯಾಗುತ್ತಿದೆ ಎಂದರೆ ಸ್ವೈನ್ ಫ್ಲೂ ಅಲ್ಲ. ಈಗ ಮಗಳು ಹುಷಾರಾಗಿದ್ದಾಳೆ, ನಾರ್ಮಲ್ ಆಗಿದ್ದಾಳೆ.’ ನಾಲ್ಕು ದಿನ ಕಾಯ್ದೆವು ಮತ್ತು ಮತ್ತೆ ಅವಳನ್ನು ಕರೆದುಕೊಂಡು ನನ್ನ ಸಣ್ಣ ಮಗಳ ಜೊತೆ ಒಟ್ಟಿಗೆ ಮಲಗಲು ಶುರುಮಾಡಿದೆವು. ತಮ್ಮ ಮಕ್ಕಳ ಮೇಲೆ ಎಲ್ಲರಿಗೂ ಪ್ರೀತಿ ಇದ್ದೇ ಇರುತ್ತದೆ ಮತ್ತು ಅವರಿಗೆ ಏನೂ ಆಗಬಾರದು ಎನ್ನುವ ಆಸೆಯಿರುತ್ತದೆ, ಹಾಗಾಗಿ ಒಮ್ಮೆ ಸ್ವೈನ್ ಫ್ಲೂ ಟೆಸ್ಟ್ ಮಾಡಿಸೋಣ ಎಂದು ಮನಸ್ಸಿನಲ್ಲಿ ಅನಿಸುತ್ತಿತ್ತು.
ಹಾಗಾಗಿ ಮಗಳ ಜ್ವರ ಕಡಿಮೆಯಾಗಿದ್ದರೂ, ಕೇವಲ ಒಂದು ಕುತೂಹಲಕ್ಕಾಗಿ ಟೆಸ್ಟ್ ಮಾಡಿಸಿದೆವು. ಸಂಜೆ ಐದು ಗಂಟೆಗೆ ರಿಪೋರ್ಟ್ ಬಂತು, ಅದರಲ್ಲಿ ಸ್ವೈನ್ ಫ್ಲೂ ‘ಪಾಸಿಟಿವ್’ ಆಗಿತ್ತು!
ಸ್ವೈನ್ ಫ್ಲೂ ‘ಪಾಸಿಟಿವ್’ ಎಂದು ನೋಡಿದ ಕೂಡಲೇ ಕೈ-ಕಾಲು ತಣ್ಣಗಾಗಿ ಹೋದವು. ಈಗ ಏನು ಮಾಡುವುದು? ತಕ್ಷಣ ದೊಡ್ಡ ಮಗಳನ್ನು ಕರೆದುಕೊಂಡು ನಾವು ಡಾಕ್ಟರ್ ಬಳಿ ಓಡಿದೆವು. ಡಾಕ್ಟರ್ ರಿಪೋರ್ಟ್ ನೋಡಿ ‘ಟ್ಯಾಮಿ ಫ್ಲೂ’ ಔಷಧಿಗಳನ್ನು ಬರೆದುಕೊಟ್ಟರು. ಡಾಕ್ಟರ್ ಕೇಳಿದರು, ‘ಇನ್ನೂ ಯಾರು ಯಾರು ಪೇಷೆಂಟ್‌ನ ಸಂಪರ್ಕಕ್ಕೆ ಬಂದಿದ್ದಾರೆ?’ ಅದಕ್ಕೆ ನಾವು, 'ನಾನು, ನನ್ನ ಹೆಂಡತಿ, ಮಾವ ಮತ್ತು ನನ್ನ 2 ತಿಂಗಳ ಸಣ್ಣ ಮಗಳು ಸಂಪರ್ಕಕ್ಕೆ ಬಂದಿದ್ದೇವೆ' ಎಂದು ಹೇಳಿದೆವು. ಇದನ್ನು ಕೇಳಿ ಡಾಕ್ಟರ್ ನನಗೂ, ನನ್ನ ಹೆಂಡತಿಗೆ ಮತ್ತು ಮಾವನಿಗೂ ಟ್ಯಾಮಿ ಫ್ಲೂ ಮಾತ್ರೆಯನ್ನು ಬರೆದುಕೊಟ್ಟರು. ಸಣ್ಣ ಮಗಳ ಬಗ್ಗೆ ಕೇಳಿದಾಗ ಡಾಕ್ಟರ್ ಹೇಳಿದರು, ‘ಒಂದು ವರ್ಷದೊಳಗಿನ ಮಗುವಿಗೆ ಈ ಔಷಧಿ ಕೊಡುವುದು ಮೆಡಿಕಲಿ ಸಾಧ್ಯವೇ ಇಲ್ಲ.’ ಕಣ್ಣೀರು ಹಾಕುತ್ತಲೇ ಡಾಕ್ಟರ್‌ಗೆ ಬೇಡಿಕೊಂಡೆವು, ‘ಡಾಕ್ಟರ್, ಸಣ್ಣವಳಿಗೂ ಔಷಧಿ ಕೊಡಿ; ಈಗ ಆ ಸಣ್ಣ ಮಗಳ ಗತಿ ಏನು?’ ಆಗ ಡಾಕ್ಟರ್ ಹೇಳಿದರು, ‘ಇವಳನ್ನು ಈಗ ಕೇವಲ ಆ ದೇವರು ಮಾತ್ರ ಕಾಪಾಡಬಲ್ಲ. ಅವನಿಗೇ ಬೇಡಿಕೊಳ್ಳಿ. ನಾನು ಇವಳಿಗೆ ಔಷಧಿ ಬರೆದುಕೊಡಲು ಸಾಧ್ಯವಿಲ್ಲ.’
ದೊಡ್ಡ ಮಗಳ ಆರೋಗ್ಯ ಹದಗೆಡುತ್ತಿತ್ತು, ಹಾಗಾಗಿ ಅವಳನ್ನು ಕರೆದುಕೊಂಡು ಔಷಧಿ ತರಲು ಹಾಸ್ಪಿಟಲ್‌ಗೆ ಹೋದೆ. ಇಡೀ ದೆಹಲಿಯನ್ನೆ ಸುತ್ತಿದೆ, ಆದರೆ ಎಲ್ಲಿಯೂ ಟ್ಯಾಮಿ ಫ್ಲೂ ಮಾತ್ರೆ ಸಿಗಲಿಲ್ಲ. ಕೊನೆಗೆ ಸಂಜೆ 6.00 ಗಂಟೆಗೆ ಅಪೋಲೋ ಹಾಸ್ಪಿಟಲ್‌ಗೆ ಹೋದೆ. ಅಪೋಲೋ ಹಾಸ್ಪಿಟಲ್‌ನಲ್ಲಿ ಕೆಮಿಸ್ಟ್ ಬಳಿ ಔಷಧಿಗಳಿದ್ದವು, ಆದರೆ ಕೇವಲ ಮೂರೇ ಬಾಟಲ್‌ಗಳಿದ್ದವು ಮತ್ತು ‘ಅವು ಹಾಸ್ಪಿಟಲ್‌ನಲ್ಲಿರುವ ಪೇಷೆಂಟ್‌ಗಳಿಗಾಗಿ ಇವೆ’ ಎಂದು ಹೇಳಿ ಅವನು ಔಷಧಿ ಕೊಡಲು ನಿರಾಕರಿಸಿದನು. ನನ್ನ ಮಗಳಿಗೆ ಔಷಧಿಯ ತುಂಬಾ ಅಗತ್ಯವಿದೆ ಎಂದು ಬಹಳ ಬೇಡಿಕೊಂಡೆ, ಆದರೆ ಅವನು ಔಷಧಿ ಕೊಡಲಿಲ್ಲ ಏಕೆಂದರೆ ಆ ಔಷಧಿಗಳು ಕೇವಲ ಹಾಸ್ಪಿಟಲ್‌ಗಾಗಿ ಮಾತ್ರ ಮೀಸಲಾಗಿದ್ದವು. ದಿಗ್ಭ್ರಮೆಗೊಂಡು ಹೊರಬಂದು ನೋಡಿದರೆ ಮಗಳ ಬಾಯಿಂದ, ಕಿವಿಯಿಂದ ನೀರು ಬರಲು ಶುರುವಾಗಿತ್ತು. ಜ್ವರ 106 ಡಿಗ್ರಿ ವರೆಗೂ ತಲುಪಿತ್ತು! ಹೆಂಡತಿ ಕಾರ್‌ನಲ್ಲಿ ಕುಳಿತು ಅಳುತ್ತಿದ್ದಳು. ‘ನೀವು ಔಷಧಿ ಯಾಕೆ ತರಲಿಲ್ಲ? ಕೊಡದಿದ್ದರೆ ಕಸಿದುಕೊಂಡು ಬನ್ನಿ.’ ಆದರೆ ನಾನು ಕೆಮಿಸ್ಟ್‌ನಿಂದ ಔಷಧಿ ಹೇಗೆ ತಾನೇ ಕಸಿದುಕೊಂಡು ಬರಲಿ?
ಈಗ ನಮ್ಮ ಕಡೆಯಿಂದ ಆಗಬಹುದಾದ ಎಲ್ಲಾ ಮಾನವ ಪ್ರಯತ್ನಗಳು ಮುಗಿದುಹೋಗಿದ್ದವು. ಈಗ ಏನಾಗುತ್ತದೋ ಅದನ್ನು ಹತಾಶರಾಗಿ ನೋಡುವುದು ಮಾತ್ರ ನಮ್ಮ ಕೈಯಲ್ಲಿತ್ತು. ಆಗ ಹೆಂಡತಿ ಮೊದಲ ಬಾರಿಗೆ ನನಗೆ ಹೇಳಿದಳು, ‘ಈಗಲಾದರೂ ಸದ್ಗುರುಗಳನ್ನು ನಂಬಿ. ಒಮ್ಮೆ ಬಾಪು ಅವರಿಗೆ ಹೇಳಿ, ಬಾಪು ಅವರಿಗೆ ಕೈಮುಗಿದು ಸತ್ಯವಾದ ಮನಸ್ಸಿನಿಂದ ಬಾಪು ಅವರ ಧ್ಯಾನ ಮಾಡಿ ಹೇಳಿಕೊಳ್ಳಿ.’ ನನ್ನ ಕಣ್ಣೆದುರೇ ಮಗಳ ಪ್ರಾಣ ಮೆಲ್ಲಮೆಲ್ಲನೆ ಹೋಗುತ್ತಿರುವುದನ್ನು ನೋಡಿ, ಮೊದಲ ಬಾರಿಗೆ ನಾನು ಬಾಪು ಅವರಿಗೆ ಮನಸ್ಸಿನಲ್ಲೇ ಹೇಳಿಕೊಂಡೆ, ‘ಬಾಪು, ಈಗ ನೀವೇ ಕಾಪಾಡಬೇಕು ಇವಳನ್ನು.’ ಹೀಗೆ ಬಾಪು ಅವರಿಗೆ ಮನಸ್ಸಿನಲ್ಲಿ ಹೇಳಿಕೊಂಡೆನೋ ಇಲ್ಲವೋ, ತಕ್ಷಣವೇ ಮೊಬೈಲ್ ರಿಂಗ್ ಆಯಿತು. ಯಾವ ಡಾಕ್ಟರ್ ಬಳಿ ಮಗಳನ್ನು ಚೆಕ್ ಮಾಡಿಸಿಕೊಂಡು ಬಂದಿದ್ದೆವೋ, ಅದೇ ಡಾಕ್ಟರ್ ಅವರ ಫೋನ್ ಅದಾಗಿತ್ತು. ಡಾಕ್ಟರ್ ಕೇಳಿದರು, ‘ಮಗಳಿಗೆ ಔಷಧಿ ಕೊಟ್ಟಿರಾ?’ ನಾನು ಹೇಳಿದೆ, ‘ಇಲ್ಲ ಡಾಕ್ಟರ್; ಇಡೀ ದೆಹಲಿಯನ್ನು ಹುಡುಕಿ ಸುಸ್ತಾದೆ, ಆದರೆ ಎಲ್ಲಿಯೂ ಔಷಧಿ ಸಿಗುತ್ತಿಲ್ಲ.’ ಡಾಕ್ಟರ್ ಕೇಳಿದರು, ‘ಈಗ ನೀವು ಎಲ್ಲಿದ್ದೀರಾ?’ ನಾನು ಈಗ ಅಪೋಲೋ ಹಾಸ್ಪಿಟಲ್‌ನ ಹೊರಗಿದ್ದೇನೆ ಎಂದು ಹೇಳಿದೆ. ಆಗ ಡಾಕ್ಟರ್ ಹೇಳಿದರು, ‘ನೀವು ವಾಪಸ್ ಹೋಗಿ. ನಿಮ್ಮ ಹೆಸರನ್ನು ಹೇಳಿ, ಆ ಕೆಮಿಸ್ಟ್ ನಿಮಗಾಗಿ ಔಷಧಿ ಎತ್ತಿಟ್ಟಿದ್ದಾನೆ.’
ಇದನ್ನು ಕೇಳಿ ನನಗೆ ನಂಬಲು ಸಾಧ್ಯವೇ ಆಗಲಿಲ್ಲ. ಈಗ ಎರಡು ನಿಮಿಷದ ಮುಂಚೆಯಷ್ಟೇ ಎಷ್ಟೆಲ್ಲಾ ಬೇಡಿಕೊಂಡರೂ, ಕಾಲು ಹಿಡಿದರೂ ಯಾವ ಕೆಮಿಸ್ಟ್ ನನಗೆ ಔಷಧಿ ಕೊಡುತ್ತಿರಲಿಲ್ಲವೋ, ನೂಕಿ ಹೊರಹಾಕುತ್ತಿದ್ದನೋ, ಅವನ ಬಳಿ ಈಗ ಯಾಕೆ ವಾಪಸ್ ಹೋಗಬೇಕಿತ್ತು? ಆದರೂ ಆ ಡಾಕ್ಟರ್ ಹೇಳುತ್ತಿದ್ದಾರಲ್ಲ ಎಂದು ಹಾಗೂ ಒಂದು ಆಸೆಯಿಂದ ವಾಪಸ್ ಆ ಕೆಮಿಸ್ಟ್ ಬಳಿ ಹೋದೆ. ....ಮತ್ತು ನಿಮಗೇನು ಹೇಳಲಿ, ಯಾವ ಕೆಮಿಸ್ಟ್ ಎರಡು ನಿಮಿಷದ ಮುಂಚೆ ಔಷಧಿ ಕೊಡಲು ತಯಾರಿರಲಿಲ್ಲವೋ, ಅವನಿಗೆ ನಾನು ಈಗ ಮತ್ತೆ ಹೋಗಿ ‘ನನಗೆ ಟ್ಯಾಮಿ ಫ್ಲೂ ಮಾತ್ರೆ ಬೇಕು’ ಎಂದು ಹೇಳಿದಾಗ, ಅವನು ನನ್ನ ಹೆಸರನ್ನು ಕೇಳಿದ.... ಮತ್ತು ನಾನು ಹೆಸರು ಹೇಳಿದ ಕೂಡಲೇ, ಐದು ನಿಮಿಷದ ಮುಂಚೆ ಔಷಧಿ ಕೊಡಲು ನಿರಾಕರಿಸಿದ್ದ ಅದೇ ವ್ಯಕ್ತಿ ನನಗೆ ಟ್ಯಾಮಿ ಫ್ಲೂ ಔಷಧಿಯ ಬಾಟಲನ್ನು ತೆಗೆದುಕೊಟ್ಟನು! ಆ ಬಾಟಲ್ ಕೈಗೆ ಬಂದರೂ ನನಗೆ ನಂಬಲಾಗುತ್ತಿರಲಿಲ್ಲ. ನಾನು ಹೆಂಡತಿಯ ಮಾತಿನಂತೆ ಮನಸ್ಸಿನಲ್ಲಿ ಬಾಪು ಅವರನ್ನು ಪ್ರಾರ್ಥಿಸುವುದೇನು, ಅಷ್ಟರಲ್ಲೇ ಆ ಡಾಕ್ಟರ್ ಅವರ ಫೋನ್ ಬರುವುದೇನು ಮತ್ತು ಐದು ನಿಮಿಷದ ಮುಂಚೆ ನನಗೆ ‘ಔಷಧಿ ಕೊಡುವುದಿಲ್ಲ’ ಎಂದಿದ್ದ ಕೆಮಿಸ್ಟ್ ಔಷಧಿಯ ಬಾಟಲನ್ನು ನನ್ನ ಕೈಗಿಡುವುದೇನು! ಇದೆಲ್ಲವೂ ನನಗೆ ಊಹಿಸಲೂ ಅಸಾಧ್ಯವಾಗಿತ್ತು....
ನಾನು ಹೊರಬಂದು ಮಗಳಿಗೆ ಔಷಧಿ ಕೊಟ್ಟೆ. ಹತ್ತು ನಿಮಿಷದಲ್ಲಿ ಔಷಧಿಯಿಂದ ಗುಣ ಕಾಣತೊಡಗಿತು. ಮಗಳ ಆರೋಗ್ಯದಲ್ಲಿ ಚೇತರಿಕೆ ಕಂಡುಬರತೊಡಗಿತು. ಕಿವಿ-ಮೂಗಿನಿಂದ ಬರುತ್ತಿದ್ದ ನೀರು ನಿಂತುಹೋಯಿತು. ಜ್ವರವೂ ಮೆಲ್ಲಮೆಲ್ಲನೆ ಕಡಿಮೆಯಾಗತೊಡಗಿತು. ನಾವು ವಾಪಸ್ ಮನೆಗೆ ಹೋಗಲು ಹೊರಟೆವು. ಈಗ ತಲೆ ಸ್ವಲ್ಪ ಶಾಂತವಾಗಿದ್ದರಿಂದ, ಈ ಕಳೆದ ಹದಿನೈದು ನಿಮಿಷಗಳಲ್ಲಿ ನಡೆದ ಘಟನೆಗಳ ಬಗ್ಗೆ ಯೋಚಿಸತೊಡಗಿದಾಗ ನನಗೆ ಅರಿವಾಯಿತು, ಆ ಡಾಕ್ಟರ್ ನನಗೆ ಹೇಗೆ ಫೋನ್ ಮಾಡಿದರು? ನಾನಂತೂ ಮೊದಲ ಬಾರಿಗೆ ಆ ಡಾಕ್ಟರ್ ಬಳಿ ಹೋಗಿದ್ದೆ. ಆ ಡಾಕ್ಟರ್ ಬಳಿ ನನ್ನ ನಂಬರ್ ಕೂಡ ಇಲ್ಲ, ಹಾಗಾದರೆ ಆ ಡಾಕ್ಟರ್ ನನಗೆ ಹೇಗೆ ಫೋನ್ ಮಾಡಿದರು? ಇದೇ ವಿಚಾರ ತಲೆಯಲ್ಲಿ ಓಡುತ್ತಿತ್ತು, ಆದರೆ ಮೊಬೈಲ್ ತೆಗೆದುಕೊಂಡು ಅದರಲ್ಲಿ ನೋಡಬೇಕೆಂಬುದೇ ನೆನಪಿಗೆ ಬರಲಿಲ್ಲ, ಅದು ಯಾರ ಫೋನ್? ಯಾವ ನಂಬರ್ ಎಂದು? ಏಕೆಂದರೆ ಮನೆಗೆ ಹೋಗುವ ಅವಸರವಿತ್ತು. ಮೊಬೈಲ್‌ನಲ್ಲಿ ಅಂತೂ ಎಲ್ಲಾ ಕಾಲ್‌ಗಳು ರಿಜಿಸ್ಟರ್ ಆಗುತ್ತವೆ. ಮನೆಯಲ್ಲಿ ಬಿಟ್ಟುಬಂದಿದ್ದ ಸಣ್ಣ ಮಗಳನ್ನು ನೋಡುವ ಅವಸರವಿತ್ತು.
ಮನೆಗೆ ತಲುಪಿದ ಮೇಲೆ ನೋಡಿದರೆ, ಸಣ್ಣ ಮಗಳು ಆಟವಾಡುತ್ತಿದ್ದಳು ಮತ್ತು ಚೆನ್ನಾಗಿದ್ದಳು. ದೊಡ್ಡ ಮಗಳ ಟೆಸ್ಟ್ ಮಾಡಿಸಿದಾಗ ನಾನು ನನ್ನ ಮತ್ತು ಹೆಂಡತಿಯ ಟೆಸ್ಟ್ ಕೂಡ ಮಾಡಿಸಿದ್ದೆ. ರಾತ್ರಿ 8 ಗಂಟೆಗೆ ರಿಪೋರ್ಟ್ ಬಂತು ನೋಡಿದರೆ ಹೆಂಡತಿಗೂ ‘ಸ್ವೈನ್ ಫ್ಲೂ ಪಾಸಿಟಿವ್’! ಈಗ ಕೈಯಿಂದ ಎಲ್ಲವೂ ಜಾರಿಹೋಗುತ್ತಿದೆ ಎಂದೇ ಅನಿಸತೊಡಗಿತು, ಏಕೆಂದರೆ 2 ತಿಂಗಳ ಸಣ್ಣ ಮಗಳು ಎದೆಹಾಲನ್ನೇ ಕುಡಿಯುತ್ತಿದ್ದಳು ಮತ್ತು ಯಾವ ಮಗು ‘ಸ್ವೈನ್ ಫ್ಲೂ ಪಾಸಿಟಿವ್’ ಬಂದಿರುವ ತಾಯಿಯ ಬ್ರೆಸ್ಟ್‌ಫೀಡಿಂಗ್ ಪಡೆಯುತ್ತದೆಯೋ ಅವಳಿಗೆ ಅಂತೂ ಸ್ವೈನ್ ಫ್ಲೂ ಪಾಸಿಟಿವ್ ಆಗೇ ಆಗಿರುತ್ತದೆ. ಈಗ ಏನು ಮಾಡುವುದು? ಯಾವ ದಾರಿಯೂ ಸಿಗುತ್ತಿರಲಿಲ್ಲ.
ಹೆಂಡತಿ ನನಗೆ ಎರಡನೇ ಬಾರಿ ಮತ್ತೆ ಹೇಳಿದಳು, ನೀವು ಮುಂಬೈಗೆ ಪೂಜ್ಯ ಸಮೀರದಾದಾ ಅವರಿಗೆ ಫೋನ್ ಮಾಡಿ ಅಂತ. ಆಗ ಮೊದಲ ಬಾರಿಗೆ ಉತ್ತರಾಖಂಡದ ರೂರ್ಕಿಯಿಂದ ಡಾ. ಅಜಯ್ ರಾಘವ್ ಅವರಿಂದ ಸಮೀರದಾದಾ ಅವರ ಫೋನ್ ನಂಬರ್ ತೆಗೆದುಕೊಂಡೆ. ದಾದಾಗೆ ಫೋನ್ ಮಾಡಿದೆ - ‘ದಾದಾ, ಏನು ಮಾಡಲಿ? ಸಣ್ಣ ಮಗಳಿಗಾಗಿ ಔಷಧಿಯೂ ಇಲ್ಲ ಮತ್ತು ಸ್ವೈನ್ ಫ್ಲೂ ಬರುವ ಸಾಧ್ಯತೆಯೂ ಹೆಚ್ಚಿದೆ.’ ದಾದಾ ಹೇಳಿದರು, ಅರ್ಧ ಗಂಟೆಯಲ್ಲಿ ಹೇಳುತ್ತೇನೆ ಎಂದು. ರಾತ್ರಿ 10 ಗಂಟೆಯಾಗಿತ್ತು; 10.30 ಕ್ಕೆ ದಾದಾಗೆ ಮತ್ತೆ ಫೋನ್ ಮಾಡಿದೆ. ದಾದಾ ಹೇಳಿದರು, ‘ಮಗಳನ್ನು ತೊಡೆಯ ಮೇಲೆ ಕೂರಿಸಿಕೊಂಡು ಅವಳ ತಾಯಿ-ತಂದೆ ನಿರಂತರವಾಗಿ ಹನುಮಾನ್ ಚಾಲೀಸಾವನ್ನು ಪಠಣ ಮಾಡಿ.’ ಇಲ್ಲಿ ಹೆಂಡತಿಗೂ ಸ್ವೈನ್ ಫ್ಲೂ ಇತ್ತು ಮತ್ತು ದೊಡ್ಡ ಮಗಳನ್ನು ಕೂಡ ನೋಡಿಕೊಳ್ಳಬೇಕಿತ್ತು. ನಾವು ಮನೆಯಲ್ಲಿ ನಾಲ್ಕೇ ಜನರಿದ್ದೆವು ಮತ್ತು ಈಗ ಸಣ್ಣ ಮಗಳನ್ನು ತೊಡೆಯ ಮೇಲೆ ಕೂರಿಸಿಕೊಂಡು ಹನುಮಾನ್ ಚಾಲೀಸಾ ಪಠಣ ಮಾಡುವುದು ಹೇಗೆ?
ಆಮೇಲೆ ಮಕ್ಕಳ ಮಾವ ಡಾ. ಅಜಯ್ ರಾಘವ್ ಅವರನ್ನು ದೆಹಲಿಗೆ ಕರೆಸಿಕೊಂಡೆವು. ಡಾ. ಅಜಯ್ ರಾಘವ್ ಮತ್ತು ಅವರ ಹೆಂಡತಿ ಸವಿತಾ ರಾಘವ್ 10.30 ಗಂಟೆಗೆ ರೂರ್ಕಿಯಿಂದ ಹೊರಟು 2.00 ಗಂಟೆಗೆ ದೆಹಲಿಗೆ ತಲುಪಿದರು. 2.00 ಗಂಟೆಗೆ ಸಣ್ಣ ಮಗಳನ್ನು ಅವರಿಗೆ ಒಪ್ಪಿಸಿದೆವು. ಅವರು ತಾವು ಉಳಿದುಕೊಂಡಿದ್ದ ಜಾಗಕ್ಕೆ ಅವಳನ್ನು ಕರೆದುಕೊಂಡು ಹೋದರು. ಅವರೂ ಸಹ ಹನುಮಾನ್ ಚಾಲೀಸಾ ಪಠಣ ಶುರುಮಾಡಿದರು. ಬೆಳಗಿನ ಜಾವ 3.00 ಗಂಟೆಗೆ ಅವರ ಫೋನ್ ಬಂತು, ಇವಳ ಜ್ವರ ಹೆಚ್ಚಾಗುತ್ತಲೇ ಇದೆ ಅಂತ. ಸಣ್ಣ ಮಗಳು ಇದುವರೆಗೂ ಚೆನ್ನಾಗಿದ್ದಳೋ, ಅವಳಲ್ಲೂ ಸಹ ಸ್ವೈನ್ ಫ್ಲೂ ಲಕ್ಷಣಗಳು ಕಾಣಿಸಿಕೊಳ್ಳತೊಡಗಿದವು. ಮೂಗು-ಬಾಯಿಂದ ನೀರು ಬರಲು ಶುರುವಾಯಿತು ಮತ್ತು ಜ್ವರ ಹೆಚ್ಚಾಗತೊಡಗಿತು. ದಾದಾ ಜೊತೆ ಮಾತನಾಡಿದೆವು, ಆಗ ದಾದಾ ಹನುಮಾನ್ ಚಾಲೀಸಾ ಪಠಣವನ್ನು ನಿರಂತರವಾಗಿ ಮುಂದುವರಿಸಲು ಹೇಳಿದರು. ಎಲ್ಲಾ ನೆಂಟರಿಗೂ ಹೇಳಿದೆವು, ‘ಇವಳಿಗಾಗಿ ಹನುಮಾನ್ ಚಾಲೀಸಾ ಪಠಣ ಮಾಡಿ’ ಅಂತ.
ಈ ರೀತಿಯಾಗಿ ಹನುಮಾನ್ ಚಾಲೀಸಾದ ನಿರಂತರ ಪಠಣ ಶುರುಮಾಡಿದೆವು. ಡಾ. ರಾಘವ್ ಮತ್ತು ಅವರ ಹೆಂಡತಿ ಸಣ್ಣ ಮಗಳನ್ನು ತೊಡೆಯ ಮೇಲೆ ಕೂರಿಸಿಕೊಂಡು ಪಠಣ ಮಾಡುತ್ತಿದ್ದರು, ಮತ್ತು ನಾವು ದೊಡ್ಡ ಮಗಳನ್ನು ಕರೆದುಕೊಂಡು ಹನುಮಾನ್ ಚಾಲೀಸಾ ಪಠಣ ಮಾಡುತ್ತಿದ್ದೆವು.
ಒಂಬತ್ತು ಗಂಟೆಗೆ ಯಾವುದೇ ಔಷಧಿಯಿಲ್ಲದೆ ಸಣ್ಣ ಮಗಳ ಜ್ವರ ಇಳಿಯಲು ಶುರುವಾಯಿತು ಮತ್ತು ಕೊನೆಗೂ ಜ್ವರ ಪೂರ್ತಿಯಾಗಿ ಇಳಿಯಿತು! ಇದು ಯಾವುದೇ ಮೆಡಿಕಲ್ ಸೈನ್ಸ್‌ಗೆ ನಿಲುಕುವಂತಹುದ್ದಾಗಿರಲಿಲ್ಲ.
ಐದು ದಿನಗಳ ಟ್ಯಾಮಿ ಫ್ಲೂ ಕೋರ್ಸ್ ಇತ್ತು. ಐದು ದಿನಗಳ ನಂತರ ಡಾಕ್ಟರ್ ಬಳಿ ವಾಪಸ್ ಹೋದಾಗ ಡಾಕ್ಟರ್‌ಗಳು ಮೊದಲ ಬಾರಿಗೆ ಸಣ್ಣ ಮಗಳ ಬಗ್ಗೆ ವಿಚಾರಿಸಿದರು. ಡಾಕ್ಟರ್ ಕೇಳಿದರು, ‘ನಿಮ್ಮ ಸಣ್ಣ ಮಗಳು ಹೇಗಿದ್ದಾಳೆ?’ ಡಾಕ್ಟರ್‌ಗೆ ಹೇಳಿದೆವು, ‘ಡಾಕ್ಟರ್, ಈಗ ಅವಳು ಏಕ್‌ದಮ್ ಹುಷಾರಾಗಿದ್ದಾಳೆ. ಅವಳಿಗೆ ಈಗ ಏನೂ ಆಗಿಲ್ಲ.’ ಆಗ ಡಾಕ್ಟರ್ ಕೂಡ ಇದೇನೋ ಈಶ್ವರೀ ಚಮತ್ಕಾರವಿರಬೇಕು ಎಂದು ಹೇಳಿದರು. ಅವರು ಹೇಳಿದರು, ‘ನಮ್ಮ ಮೆಡಿಕಲ್‌ನಲ್ಲಿ ಇದಕ್ಕೆ ಯಾವುದೇ ಉತ್ತರವಿಲ್ಲ. ಯಾವ 2 ತಿಂಗಳ ಮಗು ಸ್ವೈನ್ ಫ್ಲೂ ಆಗಿರುವ ತನ್ನ ತಾಯಿಯಿಂದ ಬ್ರೆಸ್ಟ್‌ಫೀಡಿಂಗ್ ಪಡೆದಿದೆಯೋ; ಸ್ವೈನ್ ಫ್ಲೂ ಆಗಿರುವ ತನ್ನ ಅಕ್ಕನ ಒಡನಾಟದಲ್ಲಿ ಬಂದಿದೆಯೋ; ಆ ಮಗು ಬದುಕಿದೆ, ಸುರಕ್ಷಿತವಾಗಿದೆ ಎಂದರೆ ಇದು ಮೆಡಿಕಲಿ ಸಾಧ್ಯವೇ ಇಲ್ಲ.’
ಇದು ನಮಗೆ ಆ ಸದ್ಗುರುತತ್ವದ ಮೊದಲ ದೊಡ್ಡ ಅನುಭವವಾಗಿತ್ತು. ಈಗ ಜೀವನದಲ್ಲಿ ಇಷ್ಟೆಲ್ಲಾ ಅನುಭವಗಳು ಬಂದಿದ್ದವು, ಇಷ್ಟೆಲ್ಲಾ ಘಟನೆಗಳು ನಡೆದಿದ್ದವು ಅಂದರೆ ಬಾಪು ಅವರನ್ನು ನಂಬಲು ಶುರು ಮಾಡಿದೆವು. ಆದರೆ ‘ನಾನು ಬಾಪು ಅವರನ್ನು ನಂಬುತ್ತೇನೆ’ ಎಂದು ಬಹಿರಂಗವಾಗಿ ಹೇಳಲು ಇನ್ನೂ ನಾಚಿಕೆಯಾಗುತ್ತಿತ್ತು. ಹೆಂಡತಿ ಕೇಳುತ್ತಿದ್ದಳು, ‘ಈಗಲಾದರೂ ಬಾಪು ಅವರನ್ನು ನಂಬುತ್ತೀರಾ ತಾನೇ? ಈಗಲಾದರೂ ಪೂಜೆ ಮಾಡುತ್ತೀರಾ ತಾನೇ?’ ಆದರೆ ಆಗ ನಾನು ಕದ್ದು-ಮುಚ್ಚಿ ಬಾಪು ಅವರ ಆರಾಧನೆ ಮಾಡುತ್ತಿದ್ದೆ. ಗಾಯತ್ರಿ ಮಂತ್ರ ಓದಲು ಶುರು ಮಾಡಿದ್ದೆ. ಆದರೆ ಎದುರಿನಿಂದ ಯಾರಾದರೂ ಬಾಪು ಅವರ ಬಗ್ಗೆ ಹೇಳಿದರೆ ಇನ್ನು ಬಾಪು ಅವರನ್ನು ನಂಬಲು ನಿರಾಕರಿಸುತ್ತಿದ್ದೆ, ಆದರೆ ಮನಸ್ಸಿನಲ್ಲೇ ಮಾತ್ರ ನಂಬಿಕೆಯಿತ್ತು, ‘ಹೌದು, ಇವರೇ ನನಗಾಗಿ ಬಂದಿರುವ ಸದ್ಗುರು’ ಎಂದು!
ಈಗ ಮಾರ್ಚ್ 2010 ರ ಹೊತ್ತಿನ ಮಾತು. ಸಣ್ಣ ಮಗಳು, ಯಾರು ಸ್ವೈನ್ ಫ್ಲೂನಿಂದ ಬದುಕುಳಿದಿದ್ದಳೋ, ಅವಳಿಗೆ ಒಂದು ದಿನ ಇದ್ದಕ್ಕಿದ್ದಂತೆ ಫಿಟ್ ಬಂತು. ಎಪಿಲೆಪ್ಸಿ ಅಟ್ಯಾಕ್ ಆಯಿತು. ಫಿಟ್‌ನ ಅಟ್ಯಾಕ್‌ನಲ್ಲಿ ಮಗುವಿನ ಇಡೀ ಮೈಗೆ ಜೋರುಜೋರಾಗಿ ನಡುಕ ಬರುತ್ತದೆ. ಇದು ‘ಫಿಟ್’ ಎಂದು ನಂಬಲು ಸಾಧ್ಯವಾಗುತ್ತಿರಲಿಲ್ಲ. ಮನಸ್ಸು ಒಪ್ಪಿಕೊಳ್ಳಲು ತಯಾರಿರಲಿಲ್ಲ. ಇದೆಲ್ಲ ಯಾವುದೋ ಭಯದಿಂದ ಆಗಿದೆ ಅಥವಾ ಭೂತ-ಪ್ರೇತಾತ್ಮಗಳ ಪ್ರಭಾವವಿರಬಹುದು ಎಂದು ಅನ್ನಿಸಿತು. ಅವಳನ್ನು ಕರೆದುಕೊಂಡು ಎರಡು ಮೂರು ದೇವಸ್ಥಾನಗಳಿಗೆ ಹೋದೆವು, ಆದರೆ ಯಾವ ವ್ಯತ್ಯಾಸವೂ ಆಗಲಿಲ್ಲ. ಕೊನೆಗೆ ಮೂರನೇ ದಿನ ಅವಳನ್ನು ಕರೆದುಕೊಂಡು ಡಾಕ್ಟರ್ ಬಳಿ ಹೋದೆವು.
ಡಾಕ್ಟರ್ ಹೇಳಿದರು ‘ಇದು ಫಿಟ್ ಆಗಿದೆ. ಇವಳಿಗೆ ಸೆಳೆತದ ಅಟ್ಯಾಕ್ ಬರುತ್ತಿದೆ.’ ಆ ಸೆಳೆತದ ಹೆಸರು ಕೇಳಿ ನನ್ನ ಪ್ರಾಣವೇ ಹೋದಂತಾಯಿತು. ಡಾಕ್ಟರ್ ಔಷಧಿಗಳನ್ನು ಶುರು ಮಾಡಿದರು ಮತ್ತು ಆ ಔಷಧಿಗಳ ಸೈಡ್ ಎಫೆಕ್ಟ್‌ಗಳನ್ನು ಕೂಡ ಹೇಳಿದರು, ಆದರೆ ಔಷಧಿ ಶುರು ಮಾಡುವುದನ್ನು ಬಿಟ್ಟು ಬೇರೆ ದಾರಿಯೇ ಇರಲಿಲ್ಲ. ಔಷಧಿ ಶುರು ಮಾಡಿದೆವು. 10 ದಿನ ಅವಳನ್ನು ಹಾಸ್ಪಿಟಲ್‌ನಲ್ಲಿ ಇಟ್ಟೆವು, ಆದರೆ ಫಿಟ್ಸ್ ಬರುವುದು ಮಾತ್ರ ನಿಲ್ಲಲೇ ಇಲ್ಲ. ಫಿಟ್ಸ್ ಅಂತೂ ಅವಳಿಗೆ ಪದೇ ಪದೇ ಬರುತ್ತಲೇ ಇತ್ತು. ನಿಧಾನವಾಗಿ ಫಿಟ್ಸ್ ಬರುವುದನ್ನು ನೋಡುವ ಅಭ್ಯಾಸವೂ ಆಗಿಹೋಯಿತು!
2 ತಿಂಗಳು ಔಷಧಿ ಚಾಲೂ ಇತ್ತು. ಫಿಟ್ಸ್ ಬರುತ್ತಲೇ ಇತ್ತು. ದಿನಕ್ಕೆ ಐದು ಬಾರಿ ಫಿಟ್ ಬರುತ್ತಿತ್ತು. ಐದರಿಂದ ಆರು; ಆರರಿಂದ ಏಳು ಹೀಗೆ ಫಿಟ್ಸ್ ಸಂಖ್ಯೆ ಹೆಚ್ಚಾಗುತ್ತಲೇ ಹೋಯಿತು. ಮೂರು ತಿಂಗಳ ನಂತರ ಅಂದರೆ ಏಪ್ರಿಲ್ 2010 ರಲ್ಲಿ ಒಬ್ಬರ ಮಾತಿನಂತೆ ನಾವು ಭಾರತದಲ್ಲೇ ಈ ವಿಷಯದಲ್ಲಿ ಅತಿ ದೊಡ್ಡ ಡಾಕ್ಟರ್ ಆದ, ಡಾಕ್ಟರ್ ಸಬರ್‌ವಾಲ್ ಅವರ ಬಳಿ ಹೋದೆವು. ಡಾ. ಸಬರ್‌ವಾಲ್ ಅವರು ಟೆಸ್ಟ್ ಮಾಡಿ ಹೇಳಿದರು ‘ಮೂರು ದಿನಗಳ ನಂತರ ನಾವು ಇವಳ ಬ್ರೇನ್ ಮ್ಯಾಪಿಂಗ್ ಮಾಡೋಣ. ಇಇಜಿ ತೆಗೆಯೋಣ. ನನಗೆ ಸ್ವಲ್ಪ ಅನುಮಾನವಿದೆ.’
ಆಮೇಲೆ ಮೂರು ದಿನಗಳ ನಂತರ ಬೆಳಿಗ್ಗೆ 7 ಗಂಟೆಗೆ ಮಗಳನ್ನು ಕರೆದುಕೊಂಡು ಡಾಕ್ಟರ್ ಬಳಿ ಹೋದೆವು. ಡಾಕ್ಟರ್ ಬೆಳಿಗ್ಗೆ 7.00 ಗಂಟೆಗೆ ಮೆದುಳಿನ ಇಇಜಿ ಮಾಡಿದ ನಂತರ ಬೆಳಿಗ್ಗೆ 8.00 ಗಂಟೆಗೆ ಡಾಕ್ಟರ್ ಅವರ ಟೇಬಲ್ ಮೇಲೆ ರಿಪೋರ್ಟ್ ಬಂತು. ಬೆಳಿಗ್ಗೆ 8.00 ಗಂಟೆಗೆ ನಾನು ಮತ್ತು ನನ್ನ ಹೆಂಡತಿ ಸಣ್ಣ ಮಗಳನ್ನು ಕರೆದುಕೊಂಡು ಡಾಕ್ಟರ್ ಅವರ ಕ್ಯಾಬಿನ್‌ಗೆ ಹೋದೆವು. ಡಾಕ್ಟರ್ ರಿಪೋರ್ಟ್ ಓದಿದರು ಮತ್ತು ಹೇಳಿದರು, ‘ನಾನು ನಿಮಗೆ ತುಂಬಾ ಸರಳ ಭಾಷೆಯಲ್ಲಿ ಹೇಳುತ್ತೇನೆ, ನಿಮ್ಮ ಮಗಳಿಗೆ ‘ಕಾರ್ಟೋಜೆನಿಕ್ ಇನ್ಫಾಂಟೈಲ್ ಸ್ಪಾಸ್ಮ್’ ನ ಪ್ರಾಬ್ಲಮ್ ಇದೆ. ಈ ಪ್ರಾಬ್ಲಮ್‌ನಲ್ಲಿ 90% ಸಾಧ್ಯತೆಯಿದೆ ಎಂದರೆ ನಿಮ್ಮ ಮಗಳು ಹುಷಾರಾಗುವುದಿಲ್ಲ. ಈ ಮಗಳು ಎಂದಿಗೂ ಕೂರಲು ಸಾಧ್ಯವಿಲ್ಲ, ನಡೆಯಲು ಸಾಧ್ಯವಿಲ್ಲ ಹಾಗೂ ಮಾತನಾಡಲು ಸಾಧ್ಯವಿಲ್ಲ.’
ಡಾಕ್ಟರ್ ಅವರ ಒಂದೊಂದು ಮಾತು ಕೇಳಿ ನಾವು ಇನ್ನಷ್ಟು ಅಸಹಾಯಕರಾಗುತ್ತಿದ್ದೆವು. ನಾನು ಮತ್ತು ನನ್ನ ಹೆಂಡತಿ ಅಲ್ಲೇ ಅಳಲು ಶುರು ಮಾಡಿದೆವು. ಡಾಕ್ಟರ್ ಹೇಳಿದರು, ‘ಅಳಬೇಡಿ! ನಾನು ಸ್ಪಷ್ಟವಾಗಿ ಹೇಳುತ್ತಿದ್ದೇನೆ. ಈಗ ಈ ರೋಗವನ್ನು ಹತೋಟಿಯಲ್ಲಿಡಲು ಮೆಡಿಕಲ್‌ನಲ್ಲಿ ಒಂದೇ ಒಂದು ಮಾತ್ರೆಯಿದೆ, ಅದಕ್ಕೆ ನಾವು ‘ಸ್ಟೀರಾಯ್ಡ್’ ಎನ್ನುತ್ತೇವೆ. ಇವಳಿಗಾಗಿ ಬೇರೆ ಯಾವುದೇ ಔಷಧಿ ನನ್ನ ಬಳಿ ಇಲ್ಲ.’ ಡಾಕ್ಟರ್ ಆ ಮಾತ್ರೆಯನ್ನು ಬರೆದುಕೊಟ್ಟರು. ಆದರೆ ಡಾಕ್ಟರ್ ಹೇಳಿದರು, ಒಮ್ಮೆ ಸ್ಟೀರಾಯ್ಡ್ ಕೊಡಲು ಶುರು ಮಾಡಿದರೆ ನೀವು ಅವಳನ್ನು ಮುಟ್ಟಲೂ ಬೇಡಿ, ಏಕೆಂದರೆ ಸ್ಟೀರಾಯ್ಡ್ ದೇಹವನ್ನು ಅಷ್ಟೊಂದು ದುರ್ಬಲ, ನಾಜೂಕಾಗಿ ಮಾಡುತ್ತದೆ ಎಂದರೆ ಅವಳ ಕೆನ್ನೆ ಊದಿಕೊಳ್ಳಬಹುದು, ಕಣ್ಣು ಹೊರಬರಬಹುದು. ನೀವು ಅವಳ ಕೈ ಎಳೆದರೆ ಕೈ ಕಳಚಿಕೊಂಡು ಹೊರಬರಬಹುದು. ಅವಳ ಬೆರಳು ಕಳಚಬಹುದು, ಆದರೆ ನನ್ನ ಬಳಿ ಈ ಔಷಧಿಯ ಹೊರತಾಗಿ ಬೇರೆ ಔಷಧಿ ಇಲ್ಲ. ನೀವು ಈ ಔಷಧಿಯನ್ನು ಕೊಡಲೇಬೇಕು.’
ಡಾಕ್ಟರ್‌ಗೆ ಮತ್ತೆ ಕೈಮುಗಿದು ಕೇಳಿದೆವು, ‘ಡಾಕ್ಟರ್, ನೀವು ಸರಿಯಾಗಿ ಚೆಕ್ ಮಾಡಿದ್ದೀರಾ ತಾನೇ?’ ಡಾಕ್ಟರ್ ಹೇಳಿದರು, ‘ಪೇಪರ್ಸ್ ನಿಮ್ಮ ಮುಂದೆಯೇ ಇವೆ.’ ಪೇಪರ್ ತೆಗೆದುಕೊಂಡು ಡಾಕ್ಟರ್ ಬಳಿಯಿಂದ ಹೊರಬಂದೆವು. ಹೆಂಡತಿ ಬಿಕ್ಕಿ ಬಿಕ್ಕಿ ಅಳುತ್ತಿದ್ದಳು. ಎಲ್ಲವೂ ಕೈತಪ್ಪಿ ಹೋಗುತ್ತಿರುವಂತೆ ಅನಿಸುತ್ತಿತ್ತು. ಡಾಕ್ಟರ್ ಮುಂದೆ ಹೇಳಿದ್ದರು, ನಿಮ್ಮ ಮಗಳು ನಡೆಯಲು ಸಾಧ್ಯವಿಲ್ಲ, ಅವಳು ಜೀವನಪೂರ್ತಿ ಅಂಗವಿಕಲೆಯಾಗಿದ್ದಾಳೆ ಎಂದು.’ ಹೆಂಡತಿ ಹೇಳಿದಳು, ‘ನೀವು ಸುಚಿತ್‌ದಾದಾ ಅವರೊಂದಿಗೆ ಮಾತನಾಡಿ. ಈಗ ಬಾಪು ಅವರೇ ಆಧಾರ.’ ಡಾ. ಲಿನಮ್, ಯಾರು ದಾದಾ ಅವರ ಕ್ಲಿನಿಕ್‌ನಲ್ಲಿ ಇರುತ್ತಾರೋ ಅವರೊಂದಿಗೆ 11.00 ಗಂಟೆಗೆ ಮಾತಾಯಿತು. ಅವರು ಮಗಳ ಪೇಪರ್ಸ್ ಫ್ಯಾಕ್ಸ್ ಮಾಡಲು ಹೇಳಿದರು. ಡಾ. ಲಿನಮ್ ಅವರಿಗೆ ಪೇಪರ್ಸ್ ಫ್ಯಾಕ್ಸ್ ಮಾಡಿದೆವು. ಅವರು ದಾದಾಗೆ ತೋರಿಸುತ್ತೇನೆ ಎಂದು ಹೇಳಿ ಮಧ್ಯಾಹ್ನ ಮತ್ತೆ ಫೋನ್ ಮಾಡಲು ಹೇಳಿದರು. ಮಧ್ಯಾಹ್ನ 1.30 ಕ್ಕೆ ಡಾ. ಲಿನಮ್ ಜೊತೆ ಮಾತನಾಡಿದೆ. ಡಾ. ಲಿನಮ್ ಹೇಳಿದರು, ‘ದಾದಾ ಹೇಳಿದ್ದಾರೆ ಇವಳ ಹೊಸ ಟ್ರೀಟ್‌ಮೆಂಟ್ ಶುರು ಮಾಡಿ ಅಂತ. ದಾದಾ ಅವಳಿಗೆ ಸ್ಟೀರಾಯ್ಡ್ ಟ್ರೀಟ್‌ಮೆಂಟ್ ಕೊಡುವುದಕ್ಕೆ ಆಕ್ಷೇಪವಿಲ್ಲ ಎಂದು ಹೇಳಿದ್ದಾರೆ; ನೀವು ಸ್ಟೀರಾಯ್ಡ್ ಕೊಡಿ.’
ಈ ಮಧ್ಯೆ ನಮ್ಮ ರೆಗ್ಯುಲರ್ ಮಕ್ಕಳ ಡಾಕ್ಟರ್ ಮತ್ತು ಫ್ಯಾಮಿಲಿ ಡಾಕ್ಟರ್ ಮುಂತಾದವರ ಸಲಹೆಯನ್ನೂ ಪಡೆಯುತ್ತಿದ್ದೆವು. ಎಲ್ಲರೂ ಹೇಳಿದರು ‘ಸ್ಟೀರಾಯ್ಡ್ ಕೊಡಬೇಡಿ. ನಾಲ್ಕು ತಿಂಗಳ ಮಗಳಿಗೆ ನೀವೇನಾದರೂ ಸ್ಟೀರಾಯ್ಡ್ ಕೊಟ್ಟರೆ ಅವಳಿಗೆ ಶಾಶ್ವತ ಅಂಗವೈಕಲ್ಯ ಖಂಡಿತ ಬರುತ್ತದೆ; ಆದರೆ ಕೊಡದಿದ್ದರೆ ಅಂಗವೈಕಲ್ಯ ಬಾರದಿರುವ ಸ್ವಲ್ಪವಾದರೂ ಸಾಧ್ಯತೆಯಿದೆ. ಒಮ್ಮೆ ಸ್ಟೀರಾಯ್ಡ್ ಕೊಟ್ಟರೆ ಆಮೇಲೆ ಶೀತ, ಕೆಮ್ಮು, ಜ್ವರದ ಯಾವುದೇ ಔಷಧಿಗಳು ಕೆಲಸ ಮಾಡುವುದಿಲ್ಲ.’ ಇಷ್ಟೆಲ್ಲಾ ಕೇಳಿದ ಮೇಲೆ ಸ್ಟೀರಾಯ್ಡ್ ಕೊಡುವ ಧೈರ್ಯ ನನಗೆ ಬರಲಿಲ್ಲ. ದಾದಾ ಹೇಳಿದರೂ ಕೂಡ ಸ್ಟೀರಾಯ್ಡ್ ಕೊಡಲಿಲ್ಲ. ಪೂರ್ತಿ ದಿನ ಮಗುವನ್ನು ಎತ್ತಿಕೊಂಡು ತಿರುಗಾಡುತ್ತಿದ್ದೆ. ಯಾವ ಯಾವ ಡಾಕ್ಟರ್‌ಗಳನ್ನು ಭೇಟಿಯಾದೆನೋ, ಅವರೆಲ್ಲರೂ ಹೇಳಿದರು, ‘ಸ್ಟೀರಾಯ್ಡ್ ಕೊಡಬೇಡಿ. ಭವಿಷ್ಯದಲ್ಲಿ ಈ ಮಗಳಿಗೆ ಜ್ವರ ಬಂದರೆ, ಕೆಮ್ಮು ಬಂದರೆ ಏನು ಮಾಡುತ್ತೀರಾ?’
ಆ ಕಠೋರ, ಆದರೆ ಅವರ ದೃಷ್ಟಿಯಲ್ಲಿ ಪ್ರಾಯೋಗಿಕವಾದ ಮಾತುಗಳನ್ನು ಕೇಳಿ ತಲೆಯ ಮೇಲೆ ಸಿಡಿಲು ಬಿದ್ದಂತಾಯಿತು. ತಲೆಯಲ್ಲಿ ಅದೇ ಓಡುತ್ತಿತ್ತು. ಅವಳಿಗೆ ಸ್ಟೀರಾಯ್ಡ್ ಕೊಡಲಿಲ್ಲ. ಆದರೆ ಈಗ ಅವಳಿಗೆ ದಿನಕ್ಕೆ ಬರುತ್ತಿದ್ದ 10 ಫಿಟ್ಸ್ ಹೆಚ್ಚಾಗುತ್ತಲೇ ಇದ್ದವು. ಮರುದಿನ ಅವು 70 ರವರೆಗೆ ತಲುಪಿದವು. ಮಗುವಿಗೆ ಒಂದು ಫಿಟ್ ಬಂದರೆ, ನಮ್ಮ ದೇಹ 24 ಗಂಟೆಗಳಲ್ಲಿ ಎಷ್ಟು ಕೆಲಸ ಮಾಡುತ್ತದೆಯೋ ಅಷ್ಟು ಕೆಲಸವನ್ನು 1 ಸೆಕೆಂಡಿನ ಫಿಟ್‌ನಲ್ಲಿ ದೇಹ ಮಾಡುತ್ತದೆ ಎಂದು ಹೇಳುತ್ತಾರೆ; ಮತ್ತು ಇಂತಹ ಫಿಟ್ಸ್ ಆ ನಾಲ್ಕು ತಿಂಗಳ ಮಗಳಿಗೆ ದಿನಕ್ಕೆ 70 ಬರಲು ಶುರುವಾದವು, ಅವು ಹೆಚ್ಚಾಗಿ 100 ರವರೆಗೆ ತಲುಪಿದವು. ಮೂರನೇ ದಿನವಂತೂ 250 ರವರೆಗೆ ತಲುಪಿದವು. ಈಗ ಏನು ಮಾಡಲಿ?
ಆಗ ಮತ್ತೆ ಹೆಂಡತಿ ಹೇಳಿದಳು, ‘ಒಮ್ಮೆಯಾದರೂ ದಾದಾ ಅವರ ಮೇಲೆ ನಂಬಿಕೆಯಿಡಿ ಮತ್ತು ಇವಳಿಗೆ ಔಷಧಿ ಕೊಡಿ.’ ಮಗಳ ಪರಿಸ್ಥಿತಿ ಹೇಗಾಗಿತ್ತೆಂದರೆ ಅವಳು ಥರಥರ ನಡುಗುತ್ತಿದ್ದಳು. ನಡುಗುತ್ತಿರುವಾಗ ಅವಳ ಕಣ್ಣಿನಿಂದ ನೀರು ಬರುತ್ತಿತ್ತು ಮತ್ತು ಆಮೇಲೆ ಸುಸ್ತಾಗಿ ಮಲಗಿಬಿಡುತ್ತಿದ್ದಳು. ಮಗಳನ್ನು ನೋಡಿದರಂತೂ, ಕಣ್ಣಿನಿಂದ ಕಣ್ಣೀರು ಮಾತ್ರ ಬರುತ್ತಿತ್ತು.
ನಾಲ್ಕನೇ ದಿನ ಹೆಂಡತಿ ಹೇಳಿದಳು, ನೀವು ದಾದಾ ಅವರು ಒಪ್ಪಿಗೆ ಕೊಟ್ಟಿರುವ ಔಷಧಿಯನ್ನು ಕೊಡಿ, ಇಲ್ಲದಿದ್ದರೆ ನಾನು ಹೋಗುತ್ತೇನೆ. ಆಗ ದಾದಾ ಅವರ ಮೇಲೆ ನಂಬಿಕೆಯಿಟ್ಟು ಮಗಳಿಗೆ ಸ್ಟೀರಾಯ್ಡ್ ಕೊಡಲು ಶುರು ಮಾಡಿದೆ. ಆದರೆ ಐದನೇ ದಿನ ಫಿಟ್ 300 ರವರೆಗೆ ತಲುಪಿತು. ಸ್ಟೀರಾಯ್ಡ್ ಮುಂದುವರೆಸಿದೆವು. ಆರನೇ ದಿನ ಫಿಟ್ 300 ರಿಂದ 350 ರವರೆಗೆ ತಲುಪಿತು. ತಡೆಯಲಾರದೆ ಆರನೇ ದಿನ ಮುಂಬೈಗೆ ದಾದಾ ಅವರ ಕ್ಲಿನಿಕ್‌ಗೆ ಫೋನ್ ಮಾಡಿದೆ. ರಾತ್ರಿ 10.00 ಗಂಟೆಗೆ ಡಾ. ಲಿನಮ್ ಅವರ ಸಹಾಯದಿಂದ ದಾದಾ ಜೊತೆ ಮಾತನಾಡಿದೆ. ದಾದಾ ಹೇಳಿದರು, ‘ಯಾವ ಚಿಂತೆಯೂ ಮಾಡಬೇಡಿ, ನೀವು ಅವಳ ಟ್ರೀಟ್‌ಮೆಂಟ್ ಮುಂದುವರೆಸಿ. ಏನಾಗುತ್ತಿದೆಯೋ ಅದು ಆಗಲು ಬಿಡಿ. ಕೇವಲ ದೇವರ ಮೇಲೆ ನಂಬಿಕೆಯಿಡಿ ಮತ್ತು ಅವಳ ಸ್ಟೀರಾಯ್ಡ್ ಮಾತ್ರೆಗಳನ್ನು ಮುಂದುವರೆಸಿ.’ ದಾದಾ ಅವರ ಮಾತುಗಳಿಂದ ಟೆನ್ಷನ್ ಕಡಿಮೆಯಾಯಿತು.
ನಮಗೆ ಡಾಕ್ಟರ್ ಹೇಳಿದ್ದರು ಇವಳ ಫಿಟ್ಸ್ ದಾಖಲೆ ಬರೆದಿಡಿ ಅಂತ. ಹಾಗಾಗಿ ‘ಒಂದು ದಿನದಲ್ಲಿ ಅವಳಿಗೆ ಎಷ್ಟು ಫಿಟ್ಸ್ ಬರುತ್ತದೆ? ಎಷ್ಟು ಸಮಯದವರೆಗೆ ಬರುತ್ತದೆ’ ಎಂಬುದನ್ನು ನಾವು ಡೈರಿಯಲ್ಲಿ ಬರೆದಿಡುತ್ತಿದ್ದೆವು. ಮಗಳ ಪಕ್ಕದಲ್ಲೇ ಡೈರಿ ಇಟ್ಟಿರುತ್ತಿದ್ದೆವು. ನನಗೆ ಹೆಂಡತಿಯನ್ನು ಕೇಳುವ ಧೈರ್ಯವಾಗುತ್ತಿರಲಿಲ್ಲ, ಮಗಳಿಗೆ ದಿನವಿಡೀ ಎಷ್ಟು ಫಿಟ್ಸ್ ಬಂದವು ಎಂದು ಮತ್ತು ಅವಳಿಗೂ ನನಗೆ ಹೇಳುವ ಧೈರ್ಯವಿರಲಿಲ್ಲ, ದಿನವಿಡೀ ಎಷ್ಟು ಫಿಟ್ಸ್ ಬಂದವು ಅಂತ. ಆಫೀಸ್‌ನಿಂದ ಬಂದ ಮೇಲೆ ಡೈರಿ ತೆಗೆದು ನೋಡುತ್ತಿದ್ದೆ ದಿನವಿಡೀ ಎಷ್ಟು ಫಿಟ್ಸ್ ಬಂದವು ಎಂದು. ಮಗಳನ್ನು ನೋಡಿ ಅಳು ಬರುತ್ತಿತ್ತು. ಡೈರಿಯನ್ನು ಮುಚ್ಚಿ ಇಟ್ಟುಬಿಡುತ್ತಿದ್ದೆ.
ಆರನೇ ದಿನ ರಾತ್ರಿ ದಾದಾ ಜೊತೆ ಮಾತನಾಡಿದ ನಂತರ ಏಳನೇ ದಿನ ಸಂಜೆ ಆಫೀಸ್‌ನಿಂದ ಮನೆಗೆ ಬಂದೆ....ದಿನದಂತೆಯೇ ಡೈರಿ ತೆಗೆದೆ....ಡೈರಿಯಲ್ಲಿ ಒಂದೇ ಒಂದು ಫಿಟ್‌ನ ದಾಖಲೆ ಇರಲಿಲ್ಲ. ಹೆಂಡತಿ ಬರೆಯಲು ಮರೆತಿರಬಹುದು ಎನ್ನಿಸಿತು. ಆದರೆ ಹೆಂಡತಿಯನ್ನು ಕೇಳುವ ಧೈರ್ಯವಾಗಲಿಲ್ಲ. ಮನಸ್ಸಿನಲ್ಲಿ ಮಿಶ್ರ ಭಾವನೆಗಳಿದ್ದವು, ನಿಜ ತಿಳಿಯುವ ಎದೆಗಾರಿಕೆ ಇರಲಿಲ್ಲ, ನಿಜಕ್ಕೂ ಇವಳಿಗೆ ಇಂದು ದಿನವಿಡೀ ಫಿಟ್ ಬರಲಿಲ್ಲವೋ ಅಥವಾ ಹೆಂಡತಿ ಬರೆಯಲು ಮರೆತುಹೋದಳೋ?
ಹೊರಬಂದೆ; ಹೆಂಡತಿ ಹೊರಗೆ ಕುಳಿತಿದ್ದಳು. ಮನಸ್ಸಿನಲ್ಲಿ ಯೋಚನೆ ಬಂತು, ಇವಳಿಗೆ ಕೇಳೋಣ, ಇಂದು ಫಿಟ್ ಬಂತಾ? ಆದರೆ ಕೇಳಲಾಗಲಿಲ್ಲ. ಮರುದಿನ ಮತ್ತೆ ಆಫೀಸ್‌ಗೆ ಹೋದೆ. ರಾತ್ರಿ ಆಫೀಸ್‌ನಿಂದ ಬಂದ ಮೇಲೆ ದಿನದಂತೆಯೇ ಡೈರಿ ತೆಗೆದೆ. ಮತ್ತೆ ಡೈರಿಯಲ್ಲಿ ಒಂದೇ ಒಂದು ಬರವಣಿಗೆ ಇರಲಿಲ್ಲ. ಹೇಗೆ ಸಾಧ್ಯ? ಹೀಗಾಗಲು ಸಾಧ್ಯವೇ ಇಲ್ಲ....ಇವಳು ಬಹುಶಃ ಬರೆಯಲು ಮರೆಯುತ್ತಿದ್ದಾಳೆ. ಹೆಂಡತಿಯ ಮೇಲೆ ತುಂಬಾ ಸಿಟ್ಟು ಬಂತು. ಹೊರಗೆ ಬಂದು ಅವಳಿಗೆ ಕೇಳಿದೆ, ‘ನೀನು 2 ದಿನಗಳಿಂದ ಅವಳ ಫಿಟ್ಸ್ ಬಗ್ಗೆ ಯಾಕೆ ದಾಖಲೆ ಬರೆದಿಡುತ್ತಿಲ್ಲ? ಡಾಕ್ಟರ್ ಅದರ ಪ್ರಕಾರವೇ ಮುಂದಿನ ಟ್ರೀಟ್‌ಮೆಂಟ್ ಮಾಡಲಿದ್ದಾರೆ.’ ಹೆಂಡತಿ ಹೇಳಿದಳು, ‘2 ದಿನಗಳಿಂದ ಇವಳಿಗೆ ಫಿಟ್ಸ್ ಬರದೇ ಇದ್ದಾಗ, ನಾನೇನು ಬರೆಯಲಿ?’
ನಾನು ದಂಗಾಗಿ ಹೋದೆ....ಆಗ ಮೊದಲ ಬಾರಿಗೆ ಅನುಭವವಾಯಿತು ಸದ್ಗುರುಗಳಿಗೆ ತಮ್ಮ ಭಕ್ತರ ಮೇಲೆ ಎಷ್ಟೊಂದು ಪ್ರೀತಿಯಿರುತ್ತದೆ, ಸದ್ಗುರುಗಳ ಮಾತಿನಲ್ಲಿ ಎಷ್ಟೊಂದು ಶಕ್ತಿಯಿರುತ್ತದೆ ಎಂದು! ಒಂದು ತಿಂಗಳು ನನ್ನ ಮಗಳ ಟ್ರೀಟ್‌ಮೆಂಟ್ ನಡೆಯಿತು. ಈ ಒಂದು ತಿಂಗಳಲ್ಲಿ ಅವಳಿಗೆ ಜ್ವರವೂ ಬರಲಿಲ್ಲ ಕೆಮ್ಮೂ ಬರಲಿಲ್ಲ; ತೊಡೆಯ ಮೇಲೆ ತೆಗೆದುಕೊಂಡಾಗ ಅವಳ ಕೈ ಕಳಚಿಕೊಳ್ಳಲಿಲ್ಲ; ಅವಳ ಕೆನ್ನೆಯೂ ಉಬ್ಬಿ ಹೊರಬರಲಿಲ್ಲ, ಅವಳ ಕಣ್ಣೂ ಹೊರಬರಲಿಲ್ಲ! ಇದನ್ನು ಕೇವಲ ಆ ‘ಸದ್ಗುರು’ ಮಾತ್ರ ಮಾಡಬಲ್ಲರು. ಅವರ ಅಭಯದ ಮಾತುಗಳೇ ಅವಳನ್ನು ರಕ್ಷಿಸಿದವು.
ಆಮೇಲೆ ಅವಳನ್ನು ಒಂದು ತಿಂಗಳ ನಂತರ ಡಾಕ್ಟರ್ ಬಳಿ ಕರೆದುಕೊಂಡು ಹೋದೆವು. ಡಾಕ್ಟರ್ ಅವಳನ್ನು ಚೆಕ್ ಮಾಡಿ ಹೇಳಿದರು, ‘ನನ್ನ ಜೀವನದಲ್ಲೇ ಇದೇ ಮೊದಲ ಕೇಸ್ ಆಗಿದೆ ಮತ್ತು ಬಹುಶಃ ಭಾರತದಲ್ಲೂ ಸಹ ಇದೇ ಮೊದಲ ಕೇಸ್ ಆಗಿರಬಹುದು, ಸ್ವೈನ್ ಫ್ಲೂ ಆಗಿದ್ದ ಮಗು ಇಂದು ಪೂರ್ತಿ ಹುಷಾರಾಗಿ ನನ್ನ ಮುಂದೆ ಕುಳಿತಿದೆ.’ ಮಗು ಈಗ ನಿಧಾನವಾಗಿ ಬೆಳೆಯುತ್ತಿತ್ತು. ಬಾಲ್ಯದಲ್ಲೇ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಫಿಟ್ಸ್ ಬಂದು ಹೋದ ಕಾರಣ ಮಗುವಿನ ಪ್ರೋಗ್ರೆಸ್ ನಿಧಾನಗತಿಯಲ್ಲಿ ಸಾಗುತ್ತಿತ್ತು. ಮಗಳಿಗೆ 9 ತಿಂಗಳಾಗಿತ್ತು, ಆದರೆ ಇನ್ನೂ ಕೂರಲು ಸಾಧ್ಯವಾಗುತ್ತಿರಲಿಲ್ಲ, ಅವಳಿಗೆ ಇನ್ನೂ ಹಲ್ಲುಗಳು ಕೂಡ ಬಂದಿರಲಿಲ್ಲ!
ಡಿಸೆಂಬರ್ 2010 ರಲ್ಲಿ ಅವಳನ್ನು ಮೊದಲ ಬಾರಿಗೆ ದಾದಾಗೆ ತೋರಿಸಲು, ಅವರ ಆಶೀರ್ವಾದ ಪಡೆಯಲು ಮುಂಬೈಗೆ ಕರೆತಂದೆ. ಬೆಳಿಗ್ಗೆ 11 ಗಂಟೆಯ ಸುಮಾರಿಗೆ ದಾದಾಗೆ ತೋರಿಸಿದೆವು. ದಾದಾಗೆ ಹೇಳಿದೆ, ‘ದಾದಾ, ಇನ್ನು ಇವಳಿಗೆ ಹಲ್ಲು ಬಂದಿಲ್ಲ.’ ದಾದಾ ಹೇಳಿದರು - ‘ಡೋಂಟ್ ವರಿ. ದೇವರ ಮೇಲೆ ನಂಬಿಕೆಯಿಡಿ, ಇವರು ಎಲ್ಲವನ್ನೂ ಮಾಡುತ್ತಾರೆ! ಇವಳ ಬಗ್ಗೆ ಸ್ವಲ್ಪವೂ ಚಿಂತೆ ಮಾಡಬೇಡಿ, ಇವಳು ಸದ್ಗುರು ಬಾಪು ಅವರ ಕೃಪಾಛತ್ರದಲ್ಲೇ ಇದ್ದಾಳೆ.’ ದಾದಾ ಅವರ ಮಾತುಗಳ ಮೇಲೆ ನಂಬಿಕೆಯಿಟ್ಟು ಹೊರಟೆವು. ಮಧ್ಯಾಹ್ನ 1.00 ಗಂಟೆಗೆ ವಿಮಾನ ನಿಲ್ದಾಣ ತಲುಪಿದೆವು. ಮಧ್ಯಾಹ್ನ 3.00 ಗಂಟೆಗೆ ಫ್ಲೈಟ್ ಇತ್ತು. ಅಲ್ಲಿ ಸ್ಯಾಂಡ್‌ವಿಚ್ ತಿನ್ನುತ್ತಿದ್ದೆವು. ಸ್ಯಾಂಡ್‌ವಿಚ್ ತಿನ್ನುತ್ತಿರುವಾಗ ದೊಡ್ಡ ಮಗಳು ಹೇಳಿದಳು, ‘ಪಾಪಾ, ಇವಳಿಗೂ ಸ್ವಲ್ಪ ಸ್ಯಾಂಡ್‌ವಿಚ್ ಕೊಡಿ.’ ಆಮೇಲೆ ನಾನು ಸ್ವಲ್ಪ ಸ್ಯಾಂಡ್‌ವಿಚ್ ತುಂಡನ್ನು ಅವಳಿಗೆ ತಿನಿಸಿದೆ. ಆಗ ನನ್ನ ಬೆರಳಿಗೆ ಏನೋ ಚುಚ್ಚಿತು. ನನಗನ್ನಿಸಿತು, ತಪ್ಪಿ ನಾನು ಸ್ಯಾಂಡ್‌ವಿಚ್ ಪೇಪರ್‌ನಲ್ಲಿದ್ದ ಸ್ಟೇಪಲ್ ಪಿನ್ ಅನ್ನೇನಾದರೂ ಬಾಯಿಗೆ ಹಾಕಿದೆನಾ ಎಂದು, ಅದನ್ನು ತೆಗೆಯಲು ನಾನು ಬಾಯಿಗೆ ಬೆರಳು ಹಾಕಿದಾಗ ಪಿನ್ ಇರಲಿಲ್ಲ. ಆಮೇಲೆ ನನಗೆ ಏನು ಚುಚ್ಚಿತು ಎಂದು ನೋಡಿದಾಗ ಮಗಳ ಮೇಲಿನ ಮತ್ತು ಕೆಳಗಿನ ವಸಡುಗಳಲ್ಲಿ ಬಿಳಿ ಲೈನ್ ಹೊಳೆಯುತ್ತಿತ್ತು....ಹಲ್ಲುಗಳದ್ದು!
ಇಲ್ಲಿಯೂ ಮೊದಲ ನೋಟದಲ್ಲಿ ನನಗೆ ನಂಬಲಸಾಧ್ಯವಾಗಿತ್ತು, ಆದರೆ ಸೂಕ್ಷ್ಮವಾಗಿ ನೋಡಿದಾಗ ನಿಜಕ್ಕೂ....ಅದು ಹಲ್ಲುಗಳೇ ಆಗಿದ್ದವು! ಇದಂತೂ ಆ ಸದ್ಗುರುತತ್ವದ ಅಕಾರಣ ಕರುಣೆಯ ಪರಮಾವಧಿಯಾಗಿತ್ತು. ಬೆಳಿಗ್ಗೆ 11.00 ಗಂಟೆಗೆ ನಾವು ದಾದಾ ಅವರನ್ನು ಭೇಟಿಯಾಗಿ ‘ದಾದಾ, ಇವಳಿಗೆ 9 ತಿಂಗಳಾದರೂ, ಇನ್ನು ಹಲ್ಲು ಬಂದಿಲ್ಲ’ ಎಂದು ಹೇಳುತ್ತಿದ್ದೆವು ಮತ್ತು ಮುಂದಿನ ಎರಡು ಗಂಟೆಗಳಲ್ಲಿ ಅವಳಿಗೆ ಮೇಲೆ ಮತ್ತು ಕೆಳಗೆ ಎರಡು ಹಲ್ಲುಗಳು ಬರುತ್ತಿರುವುದು ಕಾಣುತ್ತಿತ್ತು.
ನಾನು ಕೂಗಿದೆ. ಹೆಂಡತಿ ಕೇಳಿದಳು, ‘ಏನಾಯ್ತು?’ ನಾನು ಹೇಳಿದೆ, ‘ನೋಡು, ಇವಳ ಹಲ್ಲು ಬಂದಿದೆ.’ ಅವಳು ಹೇಳಿದಳು, 'ಏನು ಹೇಳುತ್ತಿದ್ದೀರಾ ನೀವು, ನಿಮಗೆ ಸುಮ್ಮನೆ ಹಾಗೆ ಭ್ರಮೆಯಾಗಿರಬಹುದು!’ ಆಮೇಲೆ ಅವಳೇ ಖುದ್ದಾಗಿ ಪರೀಕ್ಷಿಸಿ ನೋಡಿದಾಗ ನಿಜಕ್ಕೂ ಮಗಳಿಗೆ ಮೇಲೆ ಮತ್ತು ಕೆಳಗೆ ಎರಡು ಹಲ್ಲುಗಳು ಬರುತ್ತಿದ್ದವು! ನಾನು, ನನ್ನ ದೊಡ್ಡ ಮಗಳು ಮತ್ತು ಹೆಂಡತಿ ಮೂವರೂ ಅಲ್ಲೇ ನೆಲದ ಮೇಲೆ ಕುಳಿತೆವು ಮತ್ತು ಮನಸ್ಸಿನಲ್ಲೇ ದಾದಾಗೆ ಹೇಳಿದೆವು, ‘ದಾದಾ, ಇದೆಲ್ಲ ಬಾಪು ಅವರ ಕೃಪೆಯೇ.’ ಮನೆಗೆ ಬಂದೆವು. ತುಂಬಾ ಖುಷಿಯಾಗಿದ್ದೆವು. ಆದರೆ ನನ್ನ ಬಾಪು ಅವರ ಅಕಾರಣ ಕರುಣೆ ಇಲ್ಲಿಗೇ ಮುಗಿಯುವುದಿಲ್ಲ. ಮುಂದೆ ನೋಡಿ -
ಈಗ ಮಗಳಿಗೆ 15 ತಿಂಗಳಾಗಿತ್ತು. ಮಾರ್ಚ್ 2011 ರ ಮಾತು. ಹಲ್ಲುಗಳು ಬಂದಿದ್ದವು, ಆದರೆ ಇನ್ನೂ ಬೇರೆ ಏನನ್ನೂ ಅವಳು ಮಾಡಲು ಸಾಧ್ಯವಾಗುತ್ತಿರಲಿಲ್ಲ. ಮತ್ತೆ ಮುಂಬೈಗೆ ಬಂದೆವು. ಮತ್ತೆ ದಾದಾಗೆ ತೋರಿಸಿದೆವು. ದಾದಾಗೆ ಹೇಳಿದೆವು, ‘ದಾದಾ, ಇವಳಿಗೆ ಈಗ ಒಂದೂವರೆ ವರ್ಷವಾಗಿದೆ, ಆದರೆ ಇನ್ನು ಕೂರಲು ಸಾಧ್ಯವಿಲ್ಲ ಮತ್ತು ನಡೆಯಲೂ ಸಾಧ್ಯವಿಲ್ಲ. ದಾದಾ, ಇವಳು ಯಾವಾಗ ನಡೆಯಬಹುದು? ಹೀಗಾದರೆ ಇವಳು ತುಂಬಾ ಹಿಂದೆ ಬಿದ್ದುಬಿಡುತ್ತಾಳಲ್ಲ?’
ದಾದಾ ಮತ್ತೆ ಅದನ್ನೇ ಹೇಳಿದರು, ‘ಅವರ ಮೇಲೆ ನಂಬಿಕೆಯಿಡಿ. ಈ ಮಗಳದ್ದೆಲ್ಲವೂ ಒಳ್ಳೆಯದೇ ಆಗುತ್ತದೆ. ಇವಳ ಬಗ್ಗೆ ನೀವು ನಿಶ್ಚಿಂತರಾಗಿರಿ.’ ದಾದಾ ಅವರ ಆಶೀರ್ವಾದ ತೆಗೆದುಕೊಂಡು ಮತ್ತೆ ದೆಹಲಿಗೆ ಬಂದೆವು. ದೆಹಲಿಗೆ ಬಂದ ಮೇಲೆ ನಾನು ಮತ್ತು ನನ್ನ ಹೆಂಡತಿ ಹೊರಗಿನ ಹಾಲಿನಲ್ಲಿ ಕುಳಿತು ಟಿ.ವಿ. ನೋಡುತ್ತಿದ್ದೆವು. ಇಬ್ಬರೂ ಹೆಣ್ಣುಮಕ್ಕಳು ಒಳಗೆ ಮಲಗಿದ್ದರು. ಇದ್ದಕ್ಕಿದ್ದಂತೆ ದೊಡ್ಡ ಮಗಳು ಜೋರಾಗಿ ನಾವಿಬ್ಬರಿಗೂ ಕೂಗಿದಳು. ಆ ಕೂಗು ಕೇಳಿ ಭಯದಿಂದ ನಾವಿಬ್ಬರೂ ಓಡುತ್ತಾ ಒಳಗೆ ಹೋದೆವು; ....ಹೋಗಿ ನೋಡಿದರೆ ಏನು? ಯಾವ ಮಗಳು ಇದುವರೆಗೂ ಕೂರಲು ಸಾಧ್ಯವಾಗುತ್ತಿರಲಿಲ್ಲವೋ, ಏನೂ ಮಾಡಲು ಸಾಧ್ಯವಾಗುತ್ತಿರಲಿಲ್ಲವೋ, ಆ ಮಗಳು ಮಂಚದಿಂದ ಕೆಳಗಿಳಿದು ನಿಂತಿದ್ದಳು. ಅವಳು ಹಾಗೆ ನಿಂತಿರುವುದನ್ನು ನೋಡಿಯೇ ದೊಡ್ಡ ಮಗಳು ನಮಗೆ ಕೂಗಿ ಕರೆದಿದ್ದಳು. ನನ್ನನ್ನು ಮತ್ತು ನನ್ನ ಹೆಂಡತಿಯನ್ನು ನೋಡಿ ಮೂರು ಹೆಜ್ಜೆ ನಡೆದು ಅವಳು ನಮ್ಮ ತೆಕ್ಕೆಗೆ ಬಂದಳು. ಇದು ನನ್ನ ಸದ್ಗುರು ಬಾಪು ಅವರೇ ನನ್ನ ಮೇಲೆ ತೋರಿದ ಕೃಪೆಯಾಗಿದೆ.
ಯಾವ ಮಗಳ ಬಗ್ಗೆ ಡಾಕ್ಟರ್ ಹೇಳಿದ್ದರೋ ಅವಳು ಎಂದಿಗೂ ಕೂರಲು ಸಾಧ್ಯವಿಲ್ಲ, ನಡೆಯಲು ಸಾಧ್ಯವಿಲ್ಲ, ಎದ್ದು ನಿಲ್ಲಲು ಸಾಧ್ಯವಿಲ್ಲ ಎಂದು, ಆ ಮಗಳು ದಾದಾ ಅವರನ್ನು ಭೇಟಿಯಾಗಿ ಬಂದ ನಾಲ್ಕು ಗಂಟೆಗಳ ಒಳಗೆ ತನ್ನ ಸ್ವಂತ ಕಾಲಿನ ಮೇಲೆ ಎದ್ದು ನಿಂತು ನಡೆಯಲೂ ಶುರುಮಾಡಿದ್ದಳು! ಅಂದಿನಿಂದ ಸದ್ಗುರು ಬಾಪು ಅವರ ಮೇಲಿನ ನನ್ನ ನಂಬಿಕೆ ಅಚಲವಾಯಿತು. ಈಗ ಯಾವಾಗಲಾದರೂ ನಾವು ಮಗಳನ್ನು ಕರೆದುಕೊಂಡು ಡಾಕ್ಟರ್ ಬಳಿ ಹೋಗುತ್ತೇವೋ ಮತ್ತು ಅವರಿಗೆ ಅವಳ ಪ್ರೋಗ್ರೆಸ್ ಬಗ್ಗೆ ಕೇಳುತ್ತೇವೋ, ಆಗ ಆ ಡಾಕ್ಟರ್; ಯಾರು ಭಾರತದ ಅತ್ಯಂತ ಪ್ರಸಿದ್ಧ ಮಕ್ಕಳ ನ್ಯೂರಾಲಜಿಸ್ಟ್ ಆಗಿದ್ದಾರೋ, ಅವರು ಕೇಳುತ್ತಾರೆ - ‘ಇವಳಿಗೆ ಮುಂಬೈಯ ಇಂಜೆಕ್ಷನ್ ಕೊಡಿಸಲು ಯಾವಾಗ ಕರೆದುಕೊಂಡು ಹೋಗುತ್ತೀರಾ? ಇವಳು ಯಾವಾಗೆಲ್ಲಾ ಮುಂಬೈಗೆ ಹೋಗುತ್ತಾಳೋ, ಆಗಲೇ ಅವಳದೇನಾದರೂ ಪ್ರೋಗ್ರೆಸ್ ಆಗುತ್ತದೆ.’ ನಿಜಕ್ಕೂ ಇದು ಕಾಕತಾಳೀಯವೂ ಅಲ್ಲ, ಚಮತ್ಕಾರವೂ ಅಲ್ಲ, ಎಂದು ನನಗನ್ನಿಸುತ್ತದೆ ಏಕೆಂದರೆ ಚಮತ್ಕಾರ ಅಥವಾ ಕಾಕತಾಳೀಯ ಒಮ್ಮೆ ಆಗಬಹುದು, ಎರಡು ಬಾರಿ ಆಗಬಹುದು; ಆದರೆ ಪದೇ ಪದೇ ಆಗಲು ಸಾಧ್ಯವಿಲ್ಲ. ಇದು ಕೇವಲ ಆ ಸದ್ಗುರುತತ್ವದ ಕೃಪೆಯಷ್ಟೇ ಆಗಿರಬಹುದು! ನಮ್ಮ ಅವರ ಮೇಲಿರುವ ನಂಬಿಕೆಯೇ ನಮ್ಮ ಮೇಲೆ ಕೃಪೆ ತೋರುತ್ತದೆ.
| Hindi | English |
|---|---|
