ಸದ್ಗುರುಗಳ ಅಭಯಕವಚ... - ಡಾ. ರಾಜೀವ್ ಕರ್ಣಿಕ್

ಸದ್ಗುರುಗಳ ಅಭಯಕವಚ... -  ಡಾ. ರಾಜೀವ್ ಕರ್ಣಿಕ್
8 ಅಕ್ಟೋಬರ್ 2005 ರ ಸಂಜೆಯಾಗಿತ್ತು. ನಾನು ಅಮೆರಿಕದ ಕ್ಲೀವ್‌ಲ್ಯಾಂಡ್ ಕ್ಲಿನಿಕ್‌ನಲ್ಲಿ ಎರಡು ತಿಂಗಳ ಟ್ರೈನಿಂಗ್‌ಗಾಗಿ ಹೋಗಲಿದ್ದೆ, ಹಾಗಾಗಿ ಬಹಳಷ್ಟು ಸಾಮಾನುಗಳನ್ನು ಬ್ಯಾಗ್‌ನಲ್ಲಿ ತುರುಕುತ್ತಿದ್ದೆ. ಅಷ್ಟರಲ್ಲಿ ನನ್ನ ಪತ್ನಿ ಸೌ. ಪ್ರಿಯಾ, ತನ್ನ ಸದ್ಗುರುಗಳ ಫೋಟೋ ತೆಗೆದುಕೊಂಡು ಬಂದಳು (ಹೌದು, ಆಗ ನಾನು ಅವರನ್ನು ಕೇವಲ ಅವಳ ಸದ್ಗುರು ಎಂದು ಮಾತ್ರ ತಿಳಿದಿದ್ದೆ) ಮತ್ತು ನನಗೆ ಹೇಳಿದಳು, "ರಾಜೀವ್, ನಿನಗೆ ನಂಬಿಕೆ ಇಲ್ಲ ಎಂದು ನನಗೆ ಗೊತ್ತಿದೆ, ಆದರೆ ನನಗಾಗಿಯಾದರೂ ನೀನು ಈ ಫೋಟೋವನ್ನು ನಿನ್ನ ಬ್ಯಾಗ್‌ನಲ್ಲಿ ಇಟ್ಟುಕೋ." ಆ ಫೋಟೋದಲ್ಲಿ ಆಶೀರ್ವಾದಕ್ಕಾಗಿ ಮೇಲೆತ್ತಿರುವ ಪರಮಪೂಜ್ಯ ಬಾಪು ಅವರ ಕೈಗಳು ನನ್ನ ಜೀವನದಲ್ಲಿ ಬರಲಿರುವ 'ಪ್ರಚಂಡ ಸುನಾಮಿ'ಯನ್ನು ತಡೆದು ನಿಲ್ಲಿಸುತ್ತವೆ ಎಂದು ಆಗ ನನಗೆ ಸ್ವಲ್ಪವೂ ಕಲ್ಪನೆ ಇರಲಿಲ್ಲ! ಹಾಗೆ ನೋಡಿದರೆ ಆ ಕಾಲದಲ್ಲಿ ನಾನು ವರ್ಷಕ್ಕೆ 5 ರಿಂದ 6 ಬಾರಿಯಾದರೂ ವಿದೇಶಕ್ಕೆ ಹೋಗುತ್ತಿದ್ದೆ, ಆದರೆ ಇದೇ ಸಮಯಕ್ಕೆ ನನ್ನ ಪತ್ನಿಗೆ ಈ ಫೋಟೋವನ್ನು ನನ್ನ ಬಳಿ ಕೊಡುವ ಬುದ್ಧಿ ಬಂದದ್ದು ಕೇವಲ ಕಾಕತಾಳೀಯವಾಗಿರಲಿಲ್ಲ.

ನವೆಂಬರ್‌ನ ಮೂರನೇ ವಾರದಲ್ಲಿ ನನ್ನ ಬೆನ್ನಿನಲ್ಲಿ (ಪಕ್ಕೆಲುಬಿನಲ್ಲಿ) ನೋವು ಕಾಣಿಸಿಕೊಳ್ಳತೊಡಗಿತು. ಸ್ನೋಫಾಲ್ ಮತ್ತು ಕೊರೆಯುವ ಚಳಿಗಾಳಿಯಿಂದಾಗಿ, ಹಾಸ್ಪಿಟಲ್‌ನಿಂದ ಹೋಟೆಲ್‌ಗೆ ಓಡಾಡುವಾಗ ಸ್ನಾಯು ಸೆಳೆತವಾಗಿರಬಹುದು ಎಂದು ನಾನು ಅಂದುಕೊಂಡೆ. ಮುಂದಿನ 5 ದಿನಗಳಲ್ಲಿ ನಾನು ತಾಯ್ನಾಡಿಗೆ ಮರಳುತ್ತಿದ್ದರಿಂದ ನಾನು ಅಮೆರಿಕದಲ್ಲಿ ಚೆಕಪ್ ಮಾಡಿಸಿಕೊಳ್ಳುವ ಗೋಜಿಗೆ ಹೋಗಲಿಲ್ಲ. ನನ್ನ ದೇಹವನ್ನು 'ಬ್ಲಡ್ ಕ್ಯಾನ್ಸರ್' ನಂತಹ ಭಯಾನಕ ಕಾಯಿಲೆಯೊಂದು ಆವರಿಸಿದೆ ಎಂಬ ವಾಸ್ತವದ ಅರಿವು ನನಗಾಗ ಇರಲಿಲ್ಲ. ನಾನು ಭಾರತಕ್ಕೆ ಮರಳುವಾಗ ನನ್ನ ದೇಹದಲ್ಲಿ ಪ್ಲೇಟ್ಲೆಟ್ ಪ್ರಮಾಣ ಕೇವಲ 10 ಸಾವಿರಕ್ಕೆ ಇಳಿದಿತ್ತು (ಆರೋಗ್ಯವಂತ ಮನುಷ್ಯರಲ್ಲಿ ಇದರ ಪ್ರಮಾಣ ಒಂದೂವರೆ ಲಕ್ಷದಿಂದ ನಾಲ್ಕೂವರೆ ಲಕ್ಷ ಇರುತ್ತದೆ ಮತ್ತು ಈ ಪ್ರಮಾಣ 20 ಸಾವಿರಕ್ಕಿಂತ ಕಡಿಮೆಯಾದರೆ ಸಾವಿನ ಸಾಧ್ಯತೆ ಹೆಚ್ಚಿರುತ್ತದೆ). ನನ್ನ ಪತ್ನಿ ಕೊಟ್ಟಿದ್ದ ಬಾಪು ಅವರ ಫೋಟೋದ ಮೂಲಕ, ಅವಳು ಬಾಪು ಅವರಲ್ಲೇ ನನ್ನ ಮೇಲೆ ಗಮನವಿಟ್ಟು ನನ್ನ ಕಾಳಜಿ ವಹಿಸುವಂತೆ ವಿನಂತಿಸಿದ್ದಳು ಎಂದು ಈಗ ನನಗೆ ಖಾತ್ರಿಯಾಗಿದೆ. ಅಂತಹ ಪರಿಸ್ಥಿತಿಯಲ್ಲಿ ನಾನು ವಿಮಾನ ಪ್ರಯಾಣದಲ್ಲಿ ಮದ್ಯಪಾನ ಮಾಡಿದ್ದರೆ ಪ್ರಯಾಣದಲ್ಲೇ ಹೊಟ್ಟೆಯಲ್ಲಿ ರಕ್ತಸ್ರಾವವಾಗಿ ಕಥೆ ಮುಗಿದೇ ಹೋಗುತ್ತಿತ್ತು. ಆದರೆ ಪ್ರಯಾಣದಲ್ಲಿ ನನ್ನನ್ನು ಮದ್ಯಪಾನದಿಂದ ದೂರ ಉಳಿಸಿದ್ದು ಮತ್ತು ಅಂತಹ ಅತಿಗಂಭೀರ, ನಾಜೂಕು ಸ್ಥಿತಿಯಲ್ಲಿ ಅಮೆರಿಕದಿಂದ ಲಂಡನ್ ಹಾಗೂ ಅಲ್ಲಿಂದ ಮುಂಬೈವರೆಗಿನ ಪ್ರಯಾಣವನ್ನು ನಾನು ಹೇಗೆ ಮಾಡಲು ಸಾಧ್ಯವಾಯಿತು ಎಂಬುದು ಇಂದಿಗೂ ನನಗೆ ಆಶ್ಚರ್ಯವನ್ನುಂಟುಮಾಡುತ್ತದೆ.

ಭಾರತಕ್ಕೆ ಮರಳಿದ ಮೇಲೆ, ನನ್ನ ಒಂದು ದಿನ ಜೆಟ್‌ಲ್ಯಾಗ್ ನಿಂದಾಗಿ ಮತ್ತು ಎರಡನೇ ದಿನ ಎರಡು ತಿಂಗಳಿನಿಂದ ಕಾಯುತ್ತಿದ್ದ ರೋಗಿಗಳನ್ನು ತಪಾಸಣೆ ಮಾಡುವುದರಲ್ಲಿ ಹೋಯಿತು ಮತ್ತು ಮೂರನೇ ದಿನದ ರಕ್ತಪರೀಕ್ಷೆಯಲ್ಲಿ ಅಕ್ಯೂಟ್ ಮೈಲಾಯ್ಡ್ ಲ್ಯುಕೇಮಿಯಾ (ಬ್ಲಡ್ ಕ್ಯಾನ್ಸರ್) ಇರುವುದು ಪತ್ತೆಯಾಯಿತು. ಒಂದು ದಿನ ಡಾ. ರಾಮಮೂರ್ತಿ ಅವರ ಮೇಲ್ವಿಚಾರಣೆಯಲ್ಲಿ ಬಾಂಬೆ ಹಾಸ್ಪಿಟಲ್‌ನಲ್ಲಿ ಕಳೆದೆ, ಆದರೆ ರಾತ್ರಿಯಲ್ಲಿ ಆರೋಗ್ಯ ತುಂಬಾ ಹದಗೆಟ್ಟಿತು. ನನ್ನ ಪತ್ನಿ, ಡಾ. ಸೌ. ಪ್ರಿಯಾ ಅಳುತ್ತಲೇ ಈ ವಿಷಯವನ್ನು ಶ್ರೀ ದತ್ತ ನಿವಾಸನಲ್ಲಿ ( ಹಿ೦ದೆ ’ಹ್ಯಾಪಿ ಹೋಮ್‌’ ಎಂದು ಕರೆಯಲ್ಪಡುತಿತ್ತು) ವಾಸಿಸುತ್ತಿದ್ದ ಡಾ.ಶಿವಾನಂದ್‌ಸಿಂಹ ನಿಚನಾಕಿ ಅವರ ಕಿವಿಗೆ ಹಾಕಿದಳು.

ಇದ್ದಕ್ಕಿದ್ದಂತೆ ರಾತ್ರಿ ಒಂದೂವರೆ ಗಂಟೆಗೆ ಡಾ. ಶಿವಾನಂದ್‌ಸಿಂಹ ಅವರ ಫೋನ್ ಪ್ರಿಯಾಗೆ ಬಂತು ಮತ್ತು ಅವರು ಹೇಳಿದರು, "ಪ.ಪೂ. ಬಾಪು ಅವರ ಸಂದೇಶವಿದೆ, ಅವರು ಬೆನ್ನಿಗಿದ್ದಾರೆ ಮತ್ತು ಕ್ಯಾನ್ಸರ್ ಸ್ಪೆಷಲಿಸ್ಟ್‌ಗಳಿಗೆ ತಮ್ಮ ಟ್ರೀಟ್‌ಮೆಂಟ್ ಶುರು ಮಾಡಲು ಹೇಳು." ಆ ಸಾಂತ್ವನ ಮತ್ತು ಭರವಸೆಯಿಂದ ಪ್ರಿಯಾ ಮಾನಸಿಕವಾಗಿ ಸ್ಥಿರಳಾದಳು ಮತ್ತು ಕೊನೆಯವರೆಗೂ; ಅಂದರೆ ಜೂನ್‌ನಲ್ಲಿ ನನ್ನ ಪುನರ್‌ಗೃಹ ಪ್ರವೇಶದವರೆಗೂ ನನಗೆ ಆಧಾರವಾಗಿ ನಿಂತಳು.

ಆ ರಾತ್ರಿಯಲ್ಲಿ ಇನ್ನೊಂದು ಊಹಿಸಲಾಗದ ಘಟನೆ ನಡೆಯಿತು. ಮಧ್ಯರಾತ್ರಿಯ ನಂತರ ಐ.ಸಿ.ಸಿ.ಯು. ಹೊರಗಿನ ವಾಚ್‌ಮ್ಯಾನ್ ಒಂದು ಜೋಡಿ ನನ್ನ ರೂಮ್‌ಗೆ ಬಂದು ಸ್ವಲ್ಪ ಹೊತ್ತು ಭೇಟಿ ನೀಡಿ ಹೋಗಿದ್ದನ್ನು ನೋಡಿದ್ದ. ನನ್ನ ಸಂಬಂಧಿಕರಾರೂ ಆ ಸಮಯದಲ್ಲಿ ಬಂದಿರಲಿಲ್ಲ. ತನ್ನ ಸದ್ಗುರುಗಳೇ ಬಂದು ಭೇಟಿ ನೀಡಿ ಹೋದರು ಎಂದು ಪ್ರಿಯಾಗೆ ಖಾತ್ರಿಯಾಯಿತು, ಏಕೆಂದರೆ ನನ್ನ ನಿಗಾದಲ್ಲಿದ್ದ ಬಾಪು ಭಕ್ತರ ಹಾರ್ಟ್ ಆಪರೇಷನ್ ನಂತರ ಅವರ ವಿಷಯದಲ್ಲಿ ಇಂಥಹುದೇ ಕೆಲವು ಅನುಭವಗಳಾಗಿದ್ದನ್ನು ನಾನು ಖುದ್ದಾಗಿ ಕೇಳಿದ್ದೆ.

ಮಾರನೇ ದಿನ 26 ನವೆಂಬರ್ ರಂದು ನನ್ನನ್ನು ಟಾಟಾ ಹಾಸ್ಪಿಟಲ್‌ಗೆ ಕರೆದೊಯ್ಯುತ್ತಿದ್ದಾಗ ನನ್ನ ಆರೋಗ್ಯ ತುಂಬಾ ಹದಗೆಟ್ಟಿತ್ತು ಮತ್ತು ಅಲ್ಲಿಗೆ ತಲುಪುವಷ್ಟರಲ್ಲಿ ನನ್ನ ಶ್ವಾಸಕೋಶಗಳು ನೀರಿನಿಂದ ತುಂಬಿಕೊಂಡಿದ್ದವು. ಉಸಿರಾಡಲು ಪರದಾಡುತ್ತಿದ್ದಾಗ, ನನಗೆ ಇದ್ದಕ್ಕಿದ್ದಂತೆ ಎಚ್ಚರವಾಯಿತು ಮತ್ತು ಅಲ್ಲಿನ ಆರ್.ಎಂ.ಒ ತಲುಪುವ ಮೊದಲೇ ನಾನೇ ಖುದ್ದಾಗಿ 'ಪಲ್ಮನರಿ ಎಡಿಮಾ' ಟ್ರೀಟ್‌ಮೆಂಟ್ ಕೇಳಿ ಪಡೆದುಕೊಂಡೆ. ಇದರಿಂದ ಶ್ವಾಸಕೋಶಗಳು ಖಾಲಿಯಾದ್ದರಿಂದ ನಾನು ವೆಂಟಿಲೇಟರ್‌ಗೆ ಹೋಗುವುದು ತಪ್ಪಿತು, ಏಕೆಂದರೆ ವೆಂಟಿಲೇಟರ್‌ಗೆ ಹೋಗಿದ್ದರೆ, ನನ್ನ ಮರಳುವಿಕೆ ಅಸಾಧ್ಯವಾಗಿತ್ತು. 27 ನವೆಂಬರ್ ರಂದು ಟಾಟಾದ ಐ.ಸಿ.ಯು. ನಲ್ಲಿದ್ದ ಸುತ್ತಮುತ್ತಲಿನ ರೋಗಿಗಳನ್ನು ನೋಡಿ ನನಗೆ ವಾಸ್ತವದ ಅರಿವಾಯಿತು. ಸುತ್ತಮುತ್ತಲಿದ್ದ ಜೀವಿತದ ಕೊನೆಯ ಹಂತದಲ್ಲಿದ್ದ ರೋಗಿಗಳು ಮತ್ತು ಅವರ ಯಾತನೆಯನ್ನು ನೋಡಿ ನನಗೆ ನನ್ನ ಭವಿಷ್ಯ ಕಾಣುತ್ತಿತ್ತು. ನನ್ನ ಭವಿಷ್ಯ ತುಂಬಾ ನಿರಾಶಾದಾಯಕವಾಗಿತ್ತು.

ನನ್ನ ಎರಡೂ ಶ್ವಾಸಕೋಶಗಳನ್ನು ನ್ಯುಮೋನಿಯಾ ಆವರಿಸಿತ್ತು ಮತ್ತು ಅದನ್ನು ಎದುರಿಸಲು ಬೇಕಾಗುವ ಕಾರ್ಯಕಾರಿ ಬಿಳಿ ರಕ್ತಕಣಗಳೇ ದೇಹದಲ್ಲಿ ಇರಲಿಲ್ಲ, ಏಕೆಂದರೆ ಅವುಗಳ ಜಾಗವನ್ನು ಕ್ಯಾನ್ಸರ್‌ನ ಬ್ಲಾಸ್ಟ್ ಕಣಗಳು ಆಕ್ರಮಿಸಿಕೊಂಡಿದ್ದವು. ಡಾಕ್ಟರ್‌ಗಳ ಪ್ರಕಾರ ಇಂತಹ ಸ್ಥಿತಿಯಲ್ಲಿ 100% ಸಾವಿನ ಸಾಧ್ಯತೆ ಇರುತ್ತದೆ. ಈ ಯಾತನಾಮಯ ಪ್ರಯಾಣವನ್ನು ಅನುಭವಿಸುವುದಕ್ಕಿಂತ ಬೇಗನೆ ಮುಕ್ತಿ ಸಿಗುವುದೇನಾದರೂ ಇದೆಯೇ ಎಂದು ನಾನು ಶಾರ್ಟ್‌ಕಟ್ ಹುಡುಕತೊಡಗಿದೆ. ಹಾರ್ಟ್ ಸರ್ಜರಿಯಲ್ಲಿ ಹೃದಯವನ್ನು ತಾತ್ಕಾಲಿಕವಾಗಿ ನಿಲ್ಲಿಸಲು ಬೇಕಾಗುವ ಘಟಕಗಳ ಬಗ್ಗೆ ನನಗೆ ಚೆನ್ನಾಗಿ ಗೊತ್ತಿತ್ತು. ಅವುಗಳಲ್ಲಿ ಯಾವುದಾದರೂ ಕಠಿಣ ಘಟಕ ನನಗೆ ಸಿಕ್ಕಿ, ನನ್ನ ಹೃದಯದ ಬಡಿತವನ್ನು ನಾನೇ ನಿಲ್ಲಿಸಿಕೊಳ್ಳಬಹುದೇ ಎಂದು ನಾನು ಹುಡುಕಲಾರಂಭಿಸಿದೆ. ಈ ಸಾಧ್ಯತೆ ಅಸಾಧ್ಯ ಎಂದು ತಿಳಿದ ಮೇಲೆ ನಾನು ತುಂಬಾ ಹತಾಶನಾಗಿ ನಿಶ್ಚೇಷ್ಟಿತನಾಗಿ ಮಲಗಿದ್ದೆ. ಆದರೆ ನನ್ನ ಪತ್ನಿ ಪ್ರಿಯಾ ಮಾತ್ರ ಧೈರ್ಯಗುಂದದೆ ನನಗೆ ಧೈರ್ಯ ತುಂಬುತ್ತಿದ್ದಳು.

ಅಷ್ಟರಲ್ಲೇ ನನ್ನ ಜೀವನಕ್ಕೆ ತಿರುವು ನೀಡುವ ಘಟನೆಯೊಂದು ನಡೆಯಿತು. 28 ನವೆಂಬರ್ ರಾತ್ರಿ ನನಗೆ ಕನಸೊಂದು ಬಿತ್ತು, ಅದರಲ್ಲಿ ಪ.ಪೂ. ಬಾಪು ಅವರೇ ಖುದ್ದಾಗಿ ಒಂದು ಉದ್ದನೆಯ ಪೊರಕೆ ಹಿಡಿದು ಸ್ವಚ್ಛ ಮಾಡುತ್ತಿದ್ದರು (ಮಹಾನಗರ ಪಾಲಿಕೆಯ ಪೌರಕಾರ್ಮಿಕರ ಪೊರಕೆಯನ್ನು ಹಿಡಿದು) ಮತ್ತು ನನಗೆ ಸಾಂತ್ವನ ನೀಡುವಂತೆ ತಮ್ಮ ಕೈ ಮೇಲೆತ್ತಿದರು. ಅವರು ಸ್ವಚ್ಛ ಮಾಡುತ್ತಿದ್ದ ಜಾಗ ನನ್ನ ಶ್ವಾಸಕೋಶವಾಗಿತ್ತು. ನಾನು ಇದ್ದಕ್ಕಿದ್ದಂತೆ ಎಚ್ಚರಗೊಂಡು ಪ್ರಿಯಾಗೆ ಹೇಳಿದೆ, "ನಿನ್ನ ಬಾಪು ನನ್ನ ಶ್ವಾಸಕೋಶಗಳನ್ನು ಕ್ಲೀನ್ ಮಾಡಿದ್ದಾರೆ ಮತ್ತು ಈಗ ನನಗೆ ಭರವಸೆ ಇದೆ, ನೌ ಐ ಕ್ಯಾನ್ ಮೇಕ್ ಇಟ್.

ಬುಧವಾರ, 30 ನವೆಂಬರ್ ರಂದು ಪ.ಪೂ. ಸೌ. ನಂದಾಯೀ ಅವರೇ ಖುದ್ದಾಗಿ ಇಬ್ಬರು ರೋಗಿಗಳಿಗೆ ಆಶೀರ್ವಾದ ಮಾಡಲು ಟಾಟಾ ಹಾಸ್ಪಿಟಲ್‌ಗೆ ಬಂದರು ಮತ್ತು ಆ 2 ರೋಗಿಗಳಲ್ಲಿ ನಾನೊಬ್ಬನಾಗಿದ್ದೆ. ನಂದಾಯೀ ನನಗೆ ಹೇಳಿದರು, "ನಾನು ಬಾಪು ಅವರ ಮೆಸೇಜ್ ತಂದಿದ್ದೇನೆ. ನೀನು ಈ ಲಡಾಯಿಯನ್ನು ಫೈಟ್ ಮಾಡಿ ಗೆಲ್ಲಲಿದ್ದೀಯ. ಫೈಟರ್ ಹಮೇಶಾ ಜೀತ್‌ತಾ ಹೈ." ಮಾರನೇ ದಿನವೇ, 1 ಡಿಸೆಂಬರ್ ರಂದು ಟಾಟಾದ ಫಿಸಿಯೋಥೆರಪಿಸ್ಟ್ ಬಂದು ನನ್ನ ಶ್ವಾಸಕೋಶದ ವ್ಯಾಯಾಮವನ್ನು ಶುರು ಮಾಡಿದರು. ಸದ್ಗುರುಗಳ ಒಂದು ಭರವಸೆಯಿಂದ ವಿಭಿನ್ನವಾದ ಮನೋಬಲ ಬಂದು ಆಶಾದಾಯಕ ಬೆಳಕು ಕಾಣತೊಡಗಿತು ಮತ್ತು ನಂತರ ಇಡೀ ದಿನ ನಾನು ಉಸಿರಾಟದ ವ್ಯಾಯಾಮಗಳನ್ನು ಮಾಡುತ್ತಲೇ ಇದ್ದೆ. ಒಂದೇ ದಿನದಲ್ಲಿ ನನ್ನ ಶ್ವಾಸಕೋಶದಲ್ಲಿ ದಿಢೀರ್ ಸುಧಾರಣೆ ಕಂಡು, ನನ್ನನ್ನು ಐ.ಸಿ.ಸಿ.ಯು. ನಿಂದ ಹೊರತಂದು ಏಕಾಂತವಾಸದ ಬಿ.ಎಂ.ಟಿ. ಯುನಿಟ್‌ಗೆ ಶಿಫ್ಟ್ ಮಾಡಲಾಯಿತು.

ನನ್ನ ಮೊದಲ ಕೀಮೋಥೆರಪಿಯ ನಂತರ ನನಗೆ ಬೋನ್ ಮ್ಯಾರೋ ಟ್ರಾನ್ಸ್‌ಪ್ಲಾಂಟ್ ಬಗ್ಗೆ ಸಲಹೆ ನೀಡಲಾಯಿತು. ಅಮೆರಿಕದಲ್ಲಿ ಅದರ ಖರ್ಚನ್ನು ಲೆಕ್ಕ ಹಾಕಿದಾಗ, ಅಣ್ಣ-ತಂಗಿಯಿಂದ ಬೋನ್ ಮ್ಯಾರೋ ಸಿಕ್ಕರೆ 2 ಕೋಟಿ, ಅದೇ ಅಮೆರಿಕನ್ ಡೋನರ್‌ನಿಂದ ಬೋನ್ ಮ್ಯಾರೋ ಪಡೆದರೆ ಈ ಖರ್ಚು 5 ಕೋಟಿಯವರೆಗೂ ಹೋಗಬಹುದು ಮತ್ತು ಪ್ರಸ್ತುತ ಅಮೆರಿಕದಲ್ಲಿ ಇವರಲ್ಲಿ 30% ರೋಗಿಗಳು ಸಾವನ್ನಪ್ಪುವ ಸಾಧ್ಯತೆ ಇದೆ ಎಂದು ತಿಳಿಯಿತು. ಇಷ್ಟೆಲ್ಲಾ ಆರ್ಥಿಕ ವ್ಯವಸ್ಥೆ ಮಾಡುವುದು ಅಸಾಧ್ಯ ಎಂದು ಪ್ರಿಯಾ ಪ.ಪೂ. ದಾದಾ ಅವರಿಗೆ ಹೇಳಿದಳು. ಆಗ ಅವರು ಶಾಂತವಾಗಿ ಹೇಳಿದರು, "ಯಾವ ಚಿಂತೆಯನ್ನೂ ಮಾಡಬೇಡಿ. ನಾವು ಎಲ್ಲಾ ಟ್ರೀಟ್‌ಮೆಂಟ್ ಟಾಟಾದಲ್ಲೇ ಮಾಡೋಣ." ಆನಂತರ ಟಾಟಾದಲ್ಲಿ ನನ್ನ ಪ್ರೋಗ್ರೆಸ್ ತುಂಬಾ ಆಶ್ಚರ್ಯಜನಕವಾಗಿತ್ತು.

ಒಮ್ಮೆ ಚೀಫ್ ಆಂಕಾಲಜಿಸ್ಟ್ ಡಾ. ಪುರವೀಷ್ ಪಾರೀಖ್ ನನಗೆ ಹೇಳಿದರು, "Someone up there is helping you. Otherwise your survival was very difficult.. (ಯಾವುದೋ ದೈವೀ ಶಕ್ತಿ ನಿಮಗೆ ಸಹಾಯ ಮಾಡುತ್ತಿದೆ. ಇಲ್ಲದಿದ್ದರೆ ನೀವು ಬದುಕುಳಿಯುವುದು ತುಂಬಾ ಕಷ್ಟವಿತ್ತು.)"

ನನ್ನನ್ನು ಈ ಜೀವಹಾನಿಕರ ರೋಗದಿಂದ ಮುಕ್ತಗೊಳಿಸಲಾಗಿದ್ದರೂ, ಸಾಮಾನ್ಯವಾಗಿ ಇದು ತಾತ್ಕಾಲಿಕವೇ ಆಗಿರುತ್ತದೆ. ಅಂದರೆ ಯಾವುದಾದರೂ ಅಪವಾದಾತ್ಮಕ ಕೇಸ್‌ನಲ್ಲಿ ಮಾತ್ರ ಈ ರೋಗ ಮತ್ತೆ ತಲೆಯೆತ್ತುವುದಿಲ್ಲ ಎಂದು ನನಗೆ ತಿಳಿದಿತ್ತು. ಇಲ್ಲದಿದ್ದರೆ ರಿಲ್ಯಾಪ್ಸ್ ಆಗುವುದು ಖಚಿತವಾಗಿರುತ್ತದೆ. ಅದಕ್ಕಾಗಿಯೇ ಹಾಫ್‌ಮನ್‌ರವರ ಗ್ರಂಥದಲ್ಲಿ ಹೇಳಿರುವಂತೆ ಈ ರೋಗದಲ್ಲಿ ಆಯುಷ್ಯದ ಮಿತಿ ಸಾಮಾನ್ಯವಾಗಿ 3 ವರ್ಷದಷ್ಟೇ ಇರುತ್ತದೆ. ಈ ಎಲ್ಲ ವಿಷಯಗಳ ಜ್ಞಾನವಿದ್ದ ಕಾರಣ ನಾನು ಭವಿಷ್ಯದ ಬಗ್ಗೆ ಶಂಕೆ ಮತ್ತು ಅಸ್ವಸ್ಥನಾಗಿದ್ದೆ. ಅಂತಹ ಸಮಯದಲ್ಲಿ ಪ್ರಿಯಾ ನನ್ನನ್ನು ಪ.ಪೂ. ಸುಚಿತ್‌ದಾದಾ ಅವರ ಭೇಟಿಗೆ ಕರೆದೊಯ್ದಳು. ಆ ಸಮಯದಲ್ಲಿ ಕ್ಲಿನಿಕ್‌ನಲ್ಲಿ ದಾದಾ ನನಗೆ ಹೇಳಿದರು, "ರಾಜೀವ್, ಒಂದು ನೆನಪಿಟ್ಟುಕೋ, ಮುಂದೆ ವಿಷಕಾರಿ ಹಾವು ಹೆಡೆ ಬಿಚ್ಚಿ ನಿಂತಿದ್ದರೂ ಅದು ಕಚ್ಚುತ್ತದೆಯೋ ಅಥವಾ ಹಾಗೆಯೇ ಹೊರಟು ಹೋಗುತ್ತದೆಯೋ ಎಂಬುದನ್ನೆಲ್ಲ ದತ್ತಗುರುಗಳು ನಿರ್ಧರಿಸುತ್ತಾರೆ." ತದನಂತರದ ಗಣೇಶೋತ್ಸವದ ದಿನ ಪ.ಪೂ. ಬಾಪು ನನಗೆ ಹೇಳಿದರು, "ರಾಜೀವ್, ಈಗ ಪುಸ್ತಕಗಳು ಮತ್ತು ಗ್ರಂಥಗಳನ್ನು ಬದಿಗೆ ಇಡು. ನಿನ್ನ ವಿಷಯದಲ್ಲಿ ಸಾಕಷ್ಟು ಅಪವಾದಾತ್ಮಕ ಘಟನೆಗಳು ನಡೆದಿವೆ ಮತ್ತು ಇದರಲ್ಲಿ ಪುಸ್ತಕದ ಜ್ಞಾನ ಅನ್ವಯಿಸುವುದಿಲ್ಲ." ಮತ್ತು ನಿಜವಾಗಿಯೂ ನೋಡನೋಡುತ್ತಿದ್ದಂತೆ ಐದು ವರ್ಷಗಳು ಕಳೆದುಹೋಗಿವೆ. ಈ ಅವಧಿಯಲ್ಲಿ ನನ್ನ ಹಿರಿಯ ಮಗಳ ಮದುವೆ, ವಿದೇಶ ಪ್ರಯಾಣ ಮತ್ತು ಅದೇ ರೀತಿ ಚಿಕ್ಕ ಮಗಳ ಮೆಡಿಕಲ್ ಕಾಲೇಜು ಪ್ರವೇಶ ಇವೆಲ್ಲದರಲ್ಲೂ ನಾನು ಕೈಜೋಡಿಸಲು ಸಾಧ್ಯವಾಯಿತು.

ಈ ಆಶ್ಚರ್ಯಕರ ಅನುಭೂತಿಯ ಮುನ್ಸೂಚನೆ ನೀಡುವ ಘಟನೆಯೊಂದು 2003 ರಲ್ಲಿ ನಡೆದಿತ್ತು. 2003 ರ ಜಗನ್ನಾಥ ಉತ್ಸವದಲ್ಲಿ ನನ್ನ ಪತ್ನಿಗೆ 'ಸಾವಿತ್ರೀಧಾಮ' ಎಂಬಲ್ಲಿ ಸೇವೆ ಮಾಡುವ ಅವಕಾಶ ಸಿಕ್ಕಿತ್ತು. ಆದರೆ ಈ ಧಾಮಕ್ಕೆ ಪ.ಪೂ. ಬಾಪು ಅವರು ಬರುವುದಿಲ್ಲವಾದ್ದರಿಂದ ಅವಳು ಸಾಕಷ್ಟು ಬೇಸರ ವ್ಯಕ್ತಪಡಿಸಿದ್ದಳು. ಆದರೆ ಆ ಸಾವಿತ್ರೀಧಾಮದ ಆ ಪುಣ್ಯಸಂಚಯ ಎಂದರೆ 2005 ರಲ್ಲಿ ಅವಳು ತನ್ನ ಸತ್ಯವಾನನನ್ನು ಯಮರಾಜನಿಂದ ಮರಳಿ ತರಲೆಂದೇ ಪ.ಪೂ. ಬಾಪು ಅವರು ರೂಪಿಸಿದ ಯೋಜನೆಯಾಗಿರಬಹುದು ಎಂದು ಆಗ ಯಾರಿಗಾದರೂ ಕಲ್ಪನೆ ಇತ್ತೇ?

ನನ್ನ ಅನುಭವದ ಪೂರ್ವಭಾಗದಲ್ಲಿ ನಾನು ಪ.ಪೂ. ಬಾಪು ಅವರ ಬಗ್ಗೆ 'ನನ್ನ ಪತ್ನಿಯ ಸದ್ಗುರು, ಅವಳ ಬಾಪು' ಎಂದು ಬರೆದಿದ್ದೇನೆ. ಆದರೆ ನನ್ನ ಮನಸ್ಸಿನಲ್ಲಿ ಪ.ಪೂ. ಬಾಪು ಅವರ ಬಗ್ಗೆ ಅಗೌರವ ಎಂದೂ ಇರಲಿಲ್ಲ. ಬದಲಿಗೆ ಅವರ ಕಾರ್ಯದ ಬಗ್ಗೆ ನನಗೆ ಸಂಪೂರ್ಣ ಗೌರವವಿತ್ತು. ನಾನು ಅವರನ್ನು ಯುಗಪ್ರವರ್ತಕ ಎಂದು ಪರಿಗಣಿಸಿದ್ದೆ. ಹೇಗೆ ಲೋಕಮಾನ್ಯ ತಿಲಕರು ಲೇಖನಗಳು ಮತ್ತು ಭಾಷಣಗಳ ಮೂಲಕ ಗುಲಾಮಗಿರಿಯ ಸರಪಳಿಯನ್ನು ಮುರಿಯಲು ಒಂದು ಪರಿವರ್ತನೆ ತಂದರೋ, ಅದೇ ರೀತಿ ಬಾಪು ತಮ್ಮ ಪ್ರಭಾವಶಾಲಿ ವ್ಯಕ್ತಿತ್ವ, ವಾಣಿ ಮತ್ತು ವಿಚಾರಗಳ ಮೂಲಕ ಪ್ರಸ್ತುತ ದಾರಿ ತಪ್ಪುತ್ತಿರುವ ಯುವಪೀಡೀಗೆಯನ್ನು ಸನ್ಮಾರ್ಗಕ್ಕೆ ತರುತ್ತಿದ್ದಾರೆ, ಅಸಹಾಯಕ ರೈತರಿಗಾಗಿ ಮತ್ತು ಅದೇ ರೀತಿ ಗ್ರಾಮೀಣ ಭಾಗದ ಶಾಲಾ ವಿದ್ಯಾರ್ಥಿಗಳಿಗಾಗಿ ಅವರ ಸಂಸ್ಥೆಗಳು ಮಹತ್ಕಾರ್ಯ ಮಾಡುತ್ತಿವೆ ಎಂಬುದನ್ನು ನಾನು ನೋಡುತ್ತಿದ್ದೆ. ಆದರೆ ದೇವರು ಎಂಬ ಕಲ್ಪನೆ ನನಗೆ ಒಪ್ಪಿಗೆಯಿರಲಿಲ್ಲ. ಇದಕ್ಕಿಂತಲೂ ಮತ್ತೊಂದು ವಿಚಾರ ಬರುತ್ತಿತ್ತು, ಅದೇನೆಂದರೆ ನನ್ನ ಜೊತೆಗಿದ್ದ ರುಯಿಯಾ ಕಾಲೇಜಿನಲ್ಲಿ ಹಾಗೂ ಆಮೇಲೆ ಎಂ.ಡಿ. ವರೆಗಿನ ನನ್ನ ಸಹಪಾಠಿ ಇದ್ದಕ್ಕಿದ್ದಂತೆ ದೇವರು ಹೇಗಾದರು?

ಈ ರೀತಿ ನಾನು ಹೊಸ ಜೀವನಕ್ಕೆ ಪ್ರವೇಶಿಸಿದ ನಂತರ ಹಲವು ಅನುಭವಗಳನ್ನು ಬೇರೆಯದೇ ದೃಷ್ಟಿಕೋನದಿಂದ ಅನುಭವಿಸಿದೆ. ಅದರಲ್ಲಿ ನನ್ನ ವೃತ್ತಿಯಿಂದಾಗಿ ನನ್ನ ಸಂಪರ್ಕಕ್ಕೆ ಬಂದ ಹೃದಯ ರೊಗಿಗಳಿಗೆ ಸಂಬಂಧಿಸಿದ ಕೆಲವು ಊಹಿಸಲಾಗದ ಅನುಭವಗಳು ಸೇರಿವೆ. ಕೆಲವು ಬಾಪುಭಕ್ತರು ಹಾರ್ಟ್ ಅಟ್ಯಾಕ್ ನಂತರ ನನ್ನ ಬಳಿ ಆಂಜಿಯೋಗ್ರಫಿಗಾಗಿ ಬಂದಾಗ, ಹಾರ್ಟ್ ಅಟ್ಯಾಕ್‌ಗೆ ಕಾರಣವಾದ ರಕ್ತದ ಗಂಟು ಮುಖ್ಯ ಕೊರೊನರಿ ಅಪಧಮನಿಯಿಂದ ಸ್ಥಳಾಂತರಗೊಂಡು ಚಿಕ್ಕ ಉಪಶಾಖೆಯಲ್ಲಿ ಸೇರಿಕೊಂಡಿರುವುದು ಕಂಡುಬಂದಿದೆ, ಇನ್ನು ಕೆಲವೊಮ್ಮೆ ಈ ರಕ್ತದ ಗಂಟು ಸಂಪೂರ್ಣವಾಗಿ ಕರಗಿ ಹೋಗಿರುವುದು ಕಂಡುಬಂದಿದೆ. ಒಬ್ಬ ರೋಗಿಯ ಹೃದಯದ ಸಂಕೋಚನ ಸಾಮರ್ಥ್ಯ ಕೇವಲ 15% ಇದ್ದರೂ ಕೆಲವು ವಾರಗಳಲ್ಲೇ ಸಂಪೂರ್ಣವಾಗಿ ಸುಧಾರಿಸಿರುವುದು ಕಂಡುಬಂದಿದೆ.

ಮೇಲೆ ಉಲ್ಲೇಖಿಸಿದ ಈ ಘಟನೆಗಳು ವೈಜ್ಞಾನಿಕ ದೃಷ್ಟಿಯಿಂದ ಸಾಧ್ಯವೂ ಇರಬಹುದು, ಆದರೆ ಅವು ಪದೇ ಪದೇ ಒಂದು ಪುಣ್ಯಸಂಚಿತ ವರ್ಗದವರ ವಿಷಯದಲ್ಲಿ ಕಣ್ಣಿಗೆ ಬೀಳಲು ಶುರುವಾದಾಗ, ದೈವೀಕೃಪೆ ಮತ್ತು 'ಸದ್ಗುರುಗಳ ಅಭಯಕವಚ'ವನ್ನು ಬಿಟ್ಟು ಬೇರೆ ಯಾವುದೇ ಸ್ಪಷ್ಟೀಕರಣ ಕಾಣಿಸುವುದಿಲ್ಲ. ಆದಕಾರಣವೇ ಬೆಳಿಗ್ಗೆ ಆಹ್ನಿಕ ಮುಗಿದ ನಂತರ ಸದ್ಗುರು ಶ್ರೀ ಅನಿರುದ್ಧರ 9 ಗುರುವಚನಗಳನ್ನು ಹೇಳುವಾಗ ನನಗೆ ನನ್ನದೇ ಅನುಭವಗಳು ಕಣ್ಮುಂದೆ ಬರತೊಡಗುತ್ತವೆ ಮತ್ತು ನಾನು ಮನಃಪೂರ್ವಕವಾಗಿ ಹೇಳುತ್ತೇನೆ, "ನನ್ನ ಭಯ, ದುಃಖದ ಭಾರ ಹಗುರವಾಗಿದೆ, ನನ್ನ ದೇವಯಾನಪಂಥಿ ರಕ್ಷಣಕರ್ತ ಸದ್ಗುರು ಇದ್ದಾರೆ, ನನಗೆ ಆನಂದಧನ ನೀಡುವ ಮತ್ತು ನನ್ನ ಯೋಗಕ್ಷೇಮ ವಹಿಸುವ ಸದ್ಗುರು ಇದ್ದಾರೆ, ನನ್ನ ಜೀವನದಲ್ಲಿ ಅಸಾಧ್ಯವಾದದ್ದು ಸಾಧ್ಯವಾಗಿ ರಾವಣನ ವಧೆಯಾಗಿದೆ ಮತ್ತು ನನ್ನ ಭಕ್ತಿಶರಣ್ಯತೆಯಿಂದಾಗಿ ಸದ್ಗುರು ಅನಿರುದ್ಧರ ಕೃಪಾದೃಷ್ಟಿ ನನ್ನ ಮೇಲಿದೆ."
Hindi English