ನನ್ನ ಗಂಡ ವಿಕಾಸ್ ಚೋಗಲೆ ಕೆಲಸದ ನಿಮಿತ್ತ ಜಪಾನ್‌ನಲ್ಲಿ ನೆಲೆಸಿದ್ದಾರೆ. ನಾನು ಮಾತ್ರ ನನ್ನ ಒಂದು ವರ್ಷದ ಮಗಳು ಅದ್ವಿಕಾಳೊಂದಿಗೆ ಭಾರತದಲ್ಲೇ ಇದ್ದೆ. ನಾನು ಕೆಲಸ ಮಾಡುತ್ತಿದ್ದೆ, ಆದರೆ ಜಪಾನ್ ನೋಡಬೇಕೆಂಬ ಆಸೆ ನನಗಿತ್ತು. ನನ್ನ ಗಂಡ ಕೂಡ ನನ್ನ ಆಸೆಯಂತೆ ಕಷ್ಟಪಟ್ಟು ವೀಸಾ (Visa) ಪಡೆದು ಮಗಳೊಂದಿಗೆ ಜಪಾನ್‌ಗೆ ಬರಲು ಹೇಳಿದರು. ನನಗೆ ತುಂಬಾ ಖುಷಿಯಾಯಿತು. ನಮ್ಮ ವಿಮಾನದ ಟಿಕೆಟ್ ಕೂಡ ಬಂತು. ನಾನು ನನ್ನ ಕೆಲಸಕ್ಕೆ ರಾಜೀನಾಮೆ ಕೊಟ್ಟು ಜಪಾನ್‌ಗೆ ಹೋಗುವ ತಯಾರಿಯಲ್ಲಿ ತೊಡಗಿದೆ.
ನಾನು ಒಬ್ಬಳೇ ಪುಟ್ಟ ಅದ್ವಿಕಾಳನ್ನು ಕರೆದುಕೊಂಡು ಜಪಾನ್‌ಗೆ ಹೋಗಬೇಕಿತ್ತು. ಸಹಜವಾಗಿಯೇ ತುಂಬಾ ಟೆನ್ಷನ್ ಆಗಿತ್ತು. ಮೊದಲ ಬಾರಿಗೆ ಅಂತಾರಾಷ್ಟ್ರೀಯ ವಿಮಾನದಲ್ಲಿ ಪ್ರಯಾಣಿಸಲು ಸಿಗುತ್ತದೆ ಎಂದು ಮನಸ್ಸಿನಲ್ಲಿ ಬಹಳ ಉತ್ಸಾಹವೂ ಇತ್ತು. ನಾನು ನನ್ನ ಅದ್ವಿಕಾಳ ಜೊತೆ 10 ಅಕ್ಟೋಬರ್ 2010 ರಂದು ಜಪಾನ್‌ಗೆ ಸುರಕ್ಷಿತವಾಗಿ ತಲುಪಿದೆ.
ಮನೆಗೆ ತಲುಪಿದ ಮೇಲೆ, ಇಷ್ಟು ತಿಂಗಳುಗಳ ನಂತರ ಭೇಟಿಯಾಗಿದ್ದರಿಂದ ನಮ್ಮ ಮಾತುಕತೆ ಮುಗಿಯುತ್ತಲೇ ಇರಲಿಲ್ಲ. ಮಾತಿನ ಭರದಲ್ಲಿ ವಿಕಾಸ್ ಹೇಳಿದರು, “ಜಪಾನ್‌ನಲ್ಲಿ ಯಾವಾಗಲೂ ಸಣ್ಣ-ಪುಟ್ಟ ಭೂಕಂಪಗಳು ಆಗುತ್ತಲೇ ಇರುತ್ತವೆ. ನೀನು ಸ್ವಲ್ಪವೂ ಭಯಪಡಬೇಡ. 2-3 ನಿಮಿಷ ಮನೆ ಅಲುಗಾಡಿದಂತೆ ಅನಿಸುತ್ತದೆ. ಆದರೆ ಹೆದರಬೇಡ. ಕೇವಲ ಅಂಥ ಸಮಯದಲ್ಲಿ ಗ್ಯಾಸ್ ಆನ್ ಮಾಡಬೇಡ ಮತ್ತು ಎಲೆಕ್ಟ್ರಿಸಿಟಿಯ ಮೇನ್ ಸ್ವಿಚ್ ಆಫ್ ಮಾಡಿಡು. ಇಷ್ಟು ಎಚ್ಚರಿಕೆ ಮಾತ್ರ ವಹಿಸು.” ನನ್ನ ಗಂಡ ನನಗೆ ಸರಿಯಾದ ಸೂಚನೆಗಳನ್ನು ನೀಡಿದರು ಏಕೆಂದರೆ ಅವರು ಕೆಲಸದ ಕಾರಣ ಇಡೀ ದಿನ ಹೊರಗೆ ಇರುತ್ತಾರೆ.
ಆನಂತರ ವಿಕಾಸ್ ಹೇಳಿದಂತೆಯೇ 3-4 ಬಾರಿ ನಾನು ಸಣ್ಣ-ಪುಟ್ಟ ಭೂಕಂಪಗಳನ್ನು ಎದುರಿಸಬೇಕಾಯಿತು. ಆದರೆ ಕೇವಲ ಬಾಪು ಅವರ ನಾಮಸ್ಮರಣೆ ಬಿಟ್ಟು ನಾನು ಬೇರೇನೂ ಮಾಡುತ್ತಿರಲಿಲ್ಲ. ಇದರಿಂದಾಗಿ ನಿಧಾನವಾಗಿ ಮನಸ್ಸಿನಲ್ಲಿದ್ದ ಭಯವೂ ಹೊರಟುಹೋಯಿತು. ಆದರೆ ಅತಿ ಶೀಘ್ರದಲ್ಲೇ ಒಂದು ಪ್ರಾಣಾಂತಿಕ ಮತ್ತು ಭಯಾನಕ ನೈಸರ್ಗಿಕ ವಿಕೋಪವನ್ನು ನಾನು ಒಬ್ಬಳೇ ಎದುರಿಸಬೇಕಾಗುತ್ತದೆ ಎಂಬ ಸಣ್ಣ ಕಲ್ಪನೆಯೂ ನನಗಿರಲಿಲ್ಲ.
ಭೂಕಂಪದ ಬಗ್ಗೆ ನಾನು ಯಾವಾಗಲೂ ಓದುತ್ತಿದ್ದೆ. ಆದರೆ ಓದುವುದು ಮತ್ತು ಪ್ರತ್ಯಕ್ಷವಾಗಿ ಅದನ್ನು ಎದುರಿಸುವುದರ ನಡುವೆ ಅಜಗಜಾಂತರ ವ್ಯತ್ಯಾಸವಿದೆ ಎಂಬುದು ಆವಾಗ ನನಗೆ ಅರ್ಥವಾಯಿತು. ಇವತ್ತಿಗೂ ಆ ಪ್ರಸಂಗ ನೆನಪಿಸಿಕೊಂಡರೆ ಮೈ ಜುಮ್ ಎನ್ನುತ್ತದೆ. ಕೇವಲ ನನ್ನ ಬಾಪು ಅವರಿಂದಲೇ ನಾನು ಇಂದು ಈ ಅನುಭವವನ್ನು ಎಲ್ಲರಿಗೂ ಹೇಳಲು ಸಾಧ್ಯವಾಗುತ್ತಿದೆ.
ಆ ದಿನ ಶುಕ್ರವಾರ, 11 ಮಾರ್ಚ್ 2011 ಆಗಿತ್ತು. ನನಗಷ್ಟೇ ಅಲ್ಲ, ಇಡೀ ಪ್ರಪಂಚವೇ ಜೀವನದಲ್ಲಿ ಎಂದಿಗೂ ಮರೆಯಲಾಗದಂತಹ ದಿನವದು. ಈ ದಿನ ಜಪಾನ್‌ನಂತಹ ಸುಂದರ ದೇಶವು ಭೂಕಂಪ ಮತ್ತು ಸುನಾಮಿಯಂತಹ ನೈಸರ್ಗಿಕ ವಿಕೋಪಗಳಿಂದಾಗಿ ಅಕ್ಷರಶಃ ಕುಸಿದುಬಿದ್ದಿತು.
ಅಂದು ಮಧ್ಯಾಹ್ನ ಸುಮಾರು 2.30 ರ ಸಮಯವಿರಬಹುದು. ನಾನು ನನ್ನ ಪುಟ್ಟ ಮಗಳೊಂದಿಗೆ ಮನೆಯಲ್ಲೇ ಇದ್ದೆ ಮತ್ತು ಕೆಲವೇ ನಿಮಿಷಗಳಲ್ಲಿ ಆ ಎದೆಗುಂದುವ ಪ್ರಸಂಗ ಶುರುವಾಯಿತು. ಭೂಕಂಪದ ಕಂಪನಗಳು ಅನುಭವಕ್ಕೆ ಬರತೊಡಗಿದವು. ನನಗನ್ನಿಸಿತು, ಎಂದಿನಂತೆ ಮನೆ ಸ್ವಲ್ಪ ಹೊತ್ತು ಅಲುಗಾಡುತ್ತದೆ ಮತ್ತು ಶಾಂತವಾಗುತ್ತದೆ ಅಂತ. ಆದರೆ ಈ ಬಾರಿ ಹಾಗಾಗಲಿಲ್ಲ. ಭೂಕಂಪದ ತೀವ್ರತೆ ಹೆಚ್ಚಾಗುತ್ತಲೇ ಹೋಯಿತು. ಮನೆ ಜೋರುಜೋರಾಗಿ ಅಲುಗಾಡಲು ಶುರುವಾಯಿತು. ಮನೆಯ ಸ್ಟ್ಯಾಂಡ್‌ನಲ್ಲಿ ಜೋಡಿಸಿಟ್ಟಿದ್ದ ಪಾತ್ರೆಗಳು ದಡದಡನೆ ಬೀಳಲಾರಂಭಿಸಿದವು. ಆ ಭಯದಿಂದ ನನ್ನ ಪುಟ್ಟ ಮಗಳು ಜೋರಾಗಿ ಅಳಲು ಶುರುಮಾಡಿದಳು. ನನಗಂತೂ ಭಯದಿಂದ ಜೀವವೇ ಹೋದಂತಾಗಿತ್ತು. ಕೇವಲ ಬಾಪು ಅವರ ನಾಮಸ್ಮರಣೆ ಮಾಡುತ್ತಿದ್ದೆ.
ನಿಧಾನವಾಗಿ ಎಲ್ಲಿ ನೋಡಿದರೂ ಮನೆಯ ಗೋಡೆಗಳಲ್ಲಿ ಬಿರುಕುಗಳು ಕಾಣಿಸಿಕೊಳ್ಳುತ್ತಿದ್ದವು. ಈಗ ಮನೆ ಕುಸಿದುಬೀಳುತ್ತದೆ, ನಾವಿಬ್ಬರೂ ಇಂದು ಅಪ್ಪಚ್ಚಿಯಾಗಿ ಸಾಯುತ್ತೇವೆ ಎನ್ನುವ ಯೋಚನೆಯಿಂದಲೇ ಕಣ್ಣೆದುರು ಕತ್ತಲು ಆವರಿಸಿತು. ಆದರೆ ಬಾಪು ಅವರ ನಾಮಸ್ಮರಣೆಯಿಂದ ಒಳಗಿನಿಂದಲೇ ಏನೋ ಒಂದು ಚೈತನ್ಯ ಬಂತು. ಧೈರ್ಯ ಮಾಡಿ ಕುಳಿತಿದ್ದಲ್ಲಿಂದ ಎದ್ದೆ ಮತ್ತು ಎದುರಿಗೇ ಉಪಾಸನೆಯ ಫೋಟೋ ಇತ್ತು, ಅದರ ಮುಂದೆ ಮಗಳನ್ನು ಕರೆದುಕೊಂಡು ಕುಳಿತೆ. ಬಾಯಿಯಿಂದ ನನ್ನ ಬಾಪು ಅವರ 'ಓಂ ಮನಃಸಾಮರ್ಥ್ಯದಾತಾ ಶ್ರೀ ಅನಿರುದ್ಧಾಯ ನಮಃ' ಎಂಬ ಜಪವನ್ನು ದೊಡ್ಡ ಧ್ವನಿಯಲ್ಲಿ ಹೇಳುವುದನ್ನು ಮುಂದುವರೆಸಿದೆ. ಎಂತಹ ಕರುಣಾಜನಕ ದೃಶ್ಯವೆಂದರೆ ನನ್ನ ಒಂದೂವರೆ ವರ್ಷದ ಪುಟ್ಟ ಮಗಳು ಕೂಡ ಕೈ ಮುಗಿದುಕೊಂಡು ಬಾಪು ಅವರ ಕಡೆಗೆ ನೋಡುತ್ತಾ ಅಳುತ್ತಿದ್ದಳು.
ಇವೆಲ್ಲವನ್ನೂ ನೋಡಿ ನನಗೆ ದುಃಖ ಉಮ್ಮಳಿಸಿ ಬಂತು ಮತ್ತು ನನ್ನ ಕಣ್ಣುಗಳಿಂದಲೂ ಕಣ್ಣೀರಿನ ಧಾರೆ ಹರಿಯತೊಡಗಿತು. ಆ ಪರಿಸ್ಥಿತಿಯಲ್ಲೂ ನಾನು ಅವಳಿಗೆ ಪಟಾಪಟ್ ಮುತ್ತುಗಳನ್ನು ಕೊಟ್ಟೆ. ಗಂಡ ಆಫೀಸ್‌ನಲ್ಲಿ, ಮನೆಯಲ್ಲಿ ಬೇರೆ ಯಾರೂ ಇರಲಿಲ್ಲ. ನನ್ನ ಗಂಡನೊಂದಿಗೆ ಸಂಪರ್ಕ ಕೂಡ ಸಾಧಿಸಲು ಆಗಲಿಲ್ಲ. ಏಕೆಂದರೆ ಇಡೀ ಸಿಸ್ಟಮ್ ಕುಸಿದುಹೋಗಿತ್ತು. ಕೇವಲ ಬಾಪು ಅವರಿಗೆ ಪ್ರಾರ್ಥಿಸಿದೆ - ವಿಕಾಸ್ ಎಲ್ಲೇ ಇದ್ದರೂ ಅವರನ್ನು ಸುರಕ್ಷಿತವಾಗಿಡಿ ಅಂತ!
ಬಾಪು ಅವರನ್ನು ಸ್ಮರಿಸಿಕೊಳ್ಳುತ್ತಿರುವಾಗಲೇ ಇದ್ದಕ್ಕಿದ್ದಂತೆ ನೆನಪಾಯಿತು, ಇಂತಹ ಭೂಕಂಪದ ಸಮಯದಲ್ಲಿ ಮನೆಯಲ್ಲಿ ಇರದೆ ಬಯಲು ಜಾಗಕ್ಕೆ ಅಥವಾ ಮೈದಾನಕ್ಕೆ ಹೋಗಬೇಕು ಅಂತ. ಬಾಪು ಅವರ ‘ಅನಿರುದ್ಧಾಸ್ ಅಕಾಡೆಮಿ ಆಫ್ ಡಿಸಾಸ್ಟರ್ ಮ್ಯಾನೇಜ್‌ಮೆಂಟ್’ (AADM) ಕೋರ್ಸ್‌ನಿಂದಾಗಿ ಈ ಲಾಭವಾಯಿತು. ನಾನು ತಕ್ಷಣ ಮಗಳನ್ನು ಎತ್ತಿಕೊಂಡೆ. ಬಾಪು ಅವರ ಫೋಟೋ ತೆಗೆದುಕೊಂಡೆ. ಪರ್ಸ್ ತೆಗೆದುಕೊಂಡೆ. ಗ್ಯಾಸ್‌ನ ಮೇನ್ ಸಪ್ಲೈ ಬಂದ್ ಮಾಡಿದೆ ಮತ್ತು ಮನೆಯಿಂದ ಹೊರಬಿದ್ದೆ. ಹೊರಗೆ ಬಹಳಷ್ಟು ಜಪಾನಿ ಜನರು ನಿಂತಿದ್ದರು. ಅವರು ದೂರದಿಂದಲೇ ನನ್ನನ್ನು ತಮ್ಮ ಹತ್ತಿರ ಬರುವಂತೆ ಸನ್ನೆ ಮಾಡಿದರು. ನಾನು ಓಡುತ್ತಲೇ ಹೋದೆ. ಮಗಳನ್ನು ಹಿಡಿದುಕೊಂಡು ಅವರ ಜೊತೆಯಲ್ಲಿ ನಿಂತೆ. ಹೊರಗೆ ಕೊರೆಯುವ ಚಳಿ ಇತ್ತು. ನನ್ನ ಮಗಳು ಭಯ ಮತ್ತು ಚಳಿಯಿಂದ ಥರಥರ ನಡುಗುತ್ತಿದ್ದಳು. ಅವಳಿಗಾಗಿ ಸ್ವೆಟರ್ ತರುವ ಪ್ರಜ್ಞೆಯೂ ನನಗಿರಲಿಲ್ಲ. ಪಾಪ ಅವಳು ಅಳುತ್ತಲೇ ಇದ್ದಳು.
ಈ ಭೂಕಂಪವು 9 ಡಿಗ್ರಿಯಷ್ಟು ತೀವ್ರವಾಗಿತ್ತು. ಸ್ವಲ್ಪ ಹೊತ್ತಿನ ನಂತರ ಎಲ್ಲವೂ ಶಾಂತವಾಯಿತು. ನಾನು ಮೊಬೈಲ್‌ನಲ್ಲಿ ಗಂಡನೊಂದಿಗೆ ಸಂಪರ್ಕ ಸಾಧಿಸಲು ಪ್ರಯತ್ನಿಸಿದೆ. ಆದರೆ ಸಂಪರ್ಕ ಸಾಧ್ಯವಾಗಲೇ ಇಲ್ಲ. ಭಾರತದಲ್ಲಿ ಅಪ್ಪ ಅಮ್ಮನೊಂದಿಗೆ ಸಂಪರ್ಕ ಮಾಡಲು ಕೂಡ ಪ್ರಯತ್ನಿಸಿದೆ. ಆದರೆ ಅದು ಸಾಧ್ಯವಾಗಲೇ ಇಲ್ಲ. ಮೊಬೈಲ್ ನೆಟ್‌ವರ್ಕ್ ಜಾಮ್ ಆಗಿದ್ದರಿಂದ ಕಮ್ಯುನಿಕೇಶನ್ ಸ್ತಬ್ಧವಾಗಿತ್ತು.
ಸ್ವಲ್ಪ ಹೊತ್ತಿನ ನಂತರ ಶಾಂತವಾದಾಗ ನಾನು ಧೈರ್ಯ ಮಾಡಿ ಹೇಗೋ ಮಗಳಿಗೆ ಸ್ವೆಟರ್ ತರಲು ಮನೆಯೊಳಗೆ ಹೋದೆ.... ಮತ್ತು ಅಷ್ಟರಲ್ಲೇ ಎರಡನೇ ಭೂಕಂಪ ಆಯಿತು!
ನಾನು ಸಿಕ್ಕ ಆ ಚಾದರವನ್ನು ತೆಗೆದುಕೊಂಡು ಮನೆಯಿಂದ ಹೊರಗೆ ಓಡತೊಡಗಿದೆ. ನೆಲವು ಸಂಪೂರ್ಣವಾಗಿ ಅಲುಗಾಡುತ್ತಿತ್ತು ಮತ್ತು ಪ್ರಾಣಭಯದಿಂದ ಮಗಳನ್ನು ತೆಗೆದುಕೊಂಡು ನಾನು ಓಡುತ್ತಿದ್ದೆ. ಮಗಳು ನನ್ನನ್ನು ಗಟ್ಟಿಯಾಗಿ ಅಪ್ಪಿಕೊಂಡಿದ್ದಳು. ಪಾಪ ಅವಳು ಥರಥರ ನಡುಗುತ್ತಿದ್ದಳು. ಈಗ ಕಾಲುಗಳಲ್ಲಿ ಓಡಲು ಶಕ್ತಿಯೇ ಉಳಿದಿರಲಿಲ್ಲ. ರಸ್ತೆಯಲ್ಲಿ ಅಲುಗಾಡುತ್ತಿರುವ ವಿದ್ಯುತ್ ಕಂಬಗಳು ಮೈಮೇಲೆ ಬಿದ್ದು ನಾವು ಸಾಯುತ್ತೇವೆ ಎಂದೇ ಅನ್ನಿಸುತ್ತಿತ್ತು, ಆದರೆ ಜೋರುಜೋರಾಗಿ ನನ್ನ ಬಾಪು ಅವರ ಜಪ ಮಾತ್ರ ಚಾಲೂ ಇತ್ತು. ಅದೇ ನನಗೆ ಧೈರ್ಯ ಕೊಡುತ್ತಿತ್ತು ಮತ್ತು ನಾನು ಹೇಗೋ ಮಾಡಿ ಮತ್ತೆ ಆ ಬಯಲು ಜಾಗಕ್ಕೆ ಬಂದೆ.
ಭೂಕಂಪಗಳ ಸರಮಾಲೆ ಮುಂದುವರೆಯುತ್ತಲೇ ಇತ್ತು. 7, 7.4, 7.2 ಹೀಗೆ ತೀವ್ರತೆಯ ಭೂಕಂಪಗಳು ಬರುತ್ತಲೇ ಇದ್ದವು. ಏನು ಮಾಡಬೇಕೆಂದೇ ತೋಚಲಿಲ್ಲ. ಮಗಳು ಅತ್ತು ಅತ್ತು ಹೈರಾಣಾಗಿದ್ದಳು, ಹಸಿವಿನಿಂದ ಕಂಗೆಟ್ಟಿದ್ದಳು; ಪಾಪ ಅವಳು ಹಾಗೆಯೇ ನನ್ನ ಹೆಗಲ ಮೇಲೆ ತಲೆಯಿಟ್ಟು ನಿದ್ದೆ ಹೋದಳು.
ಆ ಜಾಗದಲ್ಲಿ ವಯಸ್ಸಾದ ದಂಪತಿಗಳು ತಮ್ಮ ಮಗನ ಜೊತೆ ಇದ್ದರು. ಅವರು ಕೂಡ ಬಂಗಲೆಯ ಹೊರಗಡೆ ನಿಂತಿದ್ದರು. ಆ ಅಜ್ಜ ಎಲ್ಲಿಂದಲೋ ಒಂದು ಕುರ್ಚಿಯನ್ನು ನನಗೆ ತಂದುಕೊಟ್ಟರು.
ಸ್ವಲ್ಪ ಹೊತ್ತಿನ ನಂತರ ನನ್ನ ಗಂಡ ಆಫೀಸ್‌ನಿಂದ ಬೇಗಬೇಗನೆ ಮನೆಗೆ ಬಂದರು. ಸಹಜವಾಗಿಯೇ ಅವರು ನಡೆದುಕೊಂಡೇ ಬಂದಿದ್ದರು. ವಾಹನ ವ್ಯವಸ್ಥೆ ಕೂಡ ಸಂಪೂರ್ಣ ಕುಸಿದುಹೋಗಿತ್ತು. ಮನೆಯ ಪರಿಸ್ಥಿತಿ ನೋಡಿ ಅವರು ಭಯಪಟ್ಟರು. ಅವರು ಮನೆಯೊಳಗೆ ಹೋಗಿ ನನ್ನನ್ನು ಕೂಗಲು ಶುರುಮಾಡಿದರು. ಆದರೆ ಮನೆಯಿಂದ ಯಾವುದೇ ಉತ್ತರ ಬರಲಿಲ್ಲ. ಅದರಿಂದ ಅವರು ಮತ್ತಷ್ಟು ಹೆದರಿದರು ಮತ್ತು ಅತ್ತಿತ್ತ ತಿರುಗಾಡುತ್ತಾ ಮನೆಯ ಹಿಂಭಾಗಕ್ಕೆ ಬಂದರು. ನನ್ನನ್ನು ಮತ್ತು ಮಗಳನ್ನು ಜೀವಂತವಾಗಿ ನೋಡಿ ಅವರ ಕಣ್ಣುಗಳಲ್ಲಿ ಆನಂದಭಾಷ್ಪ ಉಕ್ಕಿಬಂತು. ಓಡುತ್ತಲೇ ಬಂದರು. ಮಗಳನ್ನು ತಬ್ಬಿಕೊಂಡರು. ಅವಳಿಗೆ ಪಟಾಪಟ್ ಮುತ್ತುಗಳನ್ನು ಕೊಟ್ಟರು. ಬಾಯಿಂದ ಮಾತು ಹೊರಡುತ್ತಿರಲಿಲ್ಲ. ನಾನು ಕರವಸ್ತ್ರದಲ್ಲಿ ಮುಖ ಮುಚ್ಚಿಕೊಂಡು ಆನಂದದಿಂದ ಅಳುತ್ತಿದ್ದೆ. ಬಾಪು ಅವರೇ ನಮ್ಮ ಮೂವರ ಭೇಟಿ ಮಾಡಿಸಿದರು. ತುಂಬಾ ಧೈರ್ಯ ಬಂತು.
ನಾವು ಸಂಜೆ 6.30 ರ ವರೆಗೆ ಹೊರಗೇ ನಿಂತಿದ್ದೆವು. ಭೂಕಂಪಗಳು ಆಗುತ್ತಲೇ ಇದ್ದವು. ಆದರೆ ಅದರ ತೀವ್ರತೆ ಕಡಿಮೆಯಾಗಿತ್ತು. ಆಮೇಲೆ ಮೆಲ್ಲಗೆ ನಾವು ಮನೆಯೊಳಗೆ ಹೋದೆವು. ಮನೆ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿತ್ತು. ವಿದ್ಯುತ್ ಕಡಿತಗೊಂಡಿತ್ತು. ನೀರಿನ ಸರಬರಾಜು ಬಂದ್ ಆಗಿತ್ತು. ಮನೆಯಲ್ಲಿ ಅನ್ನದ ಒಂದು ಕಾಳು ಕೂಡ ಇರಲಿಲ್ಲ, ಕುಡಿಯಲು ನೀರೂ ಇರಲಿಲ್ಲ. ಏಕೆಂದರೆ ಅಲ್ಲಿ 24 ಗಂಟೆಯೂ ನೀರು ಬರುತ್ತಿದ್ದರಿಂದ ನಾನು ಎಂದಿಗೂ ನೀರನ್ನು ಶೇಖರಿಸಿ ಇಟ್ಟುಕೊಂಡಿರಲಿಲ್ಲ; ಮತ್ತು ಸಂಜೆ ಗಂಡನ ಆಫೀಸ್‌ನಲ್ಲಿ ಪಾರ್ಟಿಗೆ ಹೋಗಬೇಕಿತ್ತು. ಹಾಗಾಗಿ ರಾತ್ರಿಯ ಅಡುಗೆಯನ್ನೂ ಮಾಡಿರಲಿಲ್ಲ ಮತ್ತು ಸಣ್ಣ ಪುಟ್ಟ ಭೂಕಂಪಗಳು ಇನ್ನು ಚಾಲೂ ಇದ್ದಿದ್ದರಿಂದ ನನಗೆ ಗ್ಯಾಸ್ ಕೂಡ ಆನ್ ಮಾಡಲು ಆಗುತ್ತಿರಲಿಲ್ಲ.
ಜೀವನದಲ್ಲಿ ಮೊದಲ ಬಾರಿಗೆ ಇಂತಹ ದಯನೀಯ ಪರಿಸ್ಥಿತಿ ಉಂಟಾಗಿತ್ತು. ಮನೆಯಲ್ಲಿ ಧಾನ್ಯಗಳಿದ್ದರೂ ನಾನು ಅಡುಗೆ ಮಾಡಲು ಆಗುತ್ತಿರಲಿಲ್ಲ. ಹಣ ಇದ್ದರೂ ತಿನ್ನಲು ಏನನ್ನೂ ತರಲು ಆಗುತ್ತಿರಲಿಲ್ಲ. ಏಕೆಂದರೆ ಎಲ್ಲಾ ಅಂಗಡಿಗಳೂ ಬಂದ್ ಆಗಿದ್ದವು. ನಮಗೆ ನಮ್ಮ ಮಗಳ ಟೆನ್ಷನ್ ಶುರುವಾಗಿತ್ತು. ಈಗ ಇಂತಹ ಪರಿಸ್ಥಿತಿಯಲ್ಲಿ ಅವಳನ್ನು ಹೇಗೆ ನಿಭಾಯಿಸುವುದು?
ಕೊರೆಯುವ ಚಳಿಯಿತ್ತು. ಮನೆಯಲ್ಲಿ ಎಲ್ಲ ಕಡೆಯೂ ಕತ್ತಲು ಆವರಿಸಿತ್ತು. ಟಾರ್ಚ್ ಕೂಡ ಇರಲಿಲ್ಲ. ಸಾಮಾನ್ಯವಾಗಿ ರಾತ್ರಿ ಮಲಗುವಾಗಲೂ ನೈಟ್ ಲ್ಯಾಂಪ್‌ನ ಅಭ್ಯಾಸವಿದ್ದಿದ್ದರಿಂದ, ಕತ್ತಲೆಯ ಭಯದಿಂದ ಮಗಳು ಹೆದರಿ ಮತ್ತೆ ಅಳಲು ಶುರುಮಾಡಿದಳು. ನಾನು ಧೈರ್ಯ ಮಾಡಿ ಬಾಪು ಅವರ ಫೋಟೋದ ಮುಂದೆ ದೀಪ ಹಚ್ಚಿದೆ. ಭೂಕಂಪವಾದ ತಕ್ಷಣ ದೀಪ ಆರಿಸುವುದು ಮತ್ತು ಭೂಕಂಪ ಹೋದ ಮೇಲೆ ಮತ್ತೆ ದೀಪ ಹಚ್ಚುವುದು ಹೀಗೆಯೇ ನಮ್ಮದು ಅರ್ಧ-ಮುಕ್ಕಾಲು ಗಂಟೆ ನಡೆಯುತ್ತಿತ್ತು.
ಹೀಗೆ ಅಸಹಾಯಕತೆಯಿಂದ ಇದ್ದಾಗ, ಇದ್ದಕ್ಕಿದ್ದಂತೆ ನನ್ನ ಗಂಡನ ಆಫೀಸ್‌ನ ಅವರೊಬ್ಬ ಜಪಾನಿ ಸ್ನೇಹಿತ ನಮ್ಮ ಮನೆಗೆ ಬಂದ. ಅವನು ನಮಗಾಗಿ ನೀರಿನ ಬಾಟಲಿ, ಬಾಳೆಹಣ್ಣು ಮತ್ತು ಕೆಲವು ತಿನ್ನುವ ಪದಾರ್ಥಗಳನ್ನು ತಂದಿದ್ದ. ಅದನ್ನು ನೋಡಿ ನಮ್ಮ ಆನಂದಕ್ಕೆ ಪಾರವೇ ಇರಲಿಲ್ಲ. ಬಾಪು ಅವರ ಫೋಟೋದ ಕಡೆಗೆ ಕೃತಜ್ಞತೆಯಿಂದ ನೋಡುತ್ತಾ ನಾವು ಕಣ್ಣೀರು ಸುರಿಸುತ್ತಿದ್ದೆವು. ನನ್ನ ದೇವರು ಎಷ್ಟೊಂದು ಕರುಣಾಮಯಿ! ಇಷ್ಟೊಂದು ಅನಿಶ್ಚಿತ ಮತ್ತು ಅಶಾಂತ ವಾತಾವರಣದಲ್ಲೂ ನಮ್ಮ ಈ ಪರಮೇಶ್ವರನು ನಮ್ಮ ಊಟ ನೀರಿನ ವ್ಯವಸ್ಥೆ ಮಾಡಿದ್ದನು. ಆ ರಾತ್ರಿ ಬಾಳೆಹಣ್ಣು ಮತ್ತು ಹಾಲು ಇದೇ ನಮ್ಮ ಆಹಾರವಾಗಿತ್ತು. ರಾತ್ರಿ ಮೇಣದಬತ್ತಿಯನ್ನು ಹಚ್ಚುತ್ತಾ-ಆರಿಸುತ್ತಾ ನಾನು ಮತ್ತು ನನ್ನ ಗಂಡ ಸರದಿಯ ಮೇಲೆ ಇಡೀ ರಾತ್ರಿ ಎಚ್ಚರವಾಗಿಯೇ ಕಳೆದೆವು. ಭೂಕಂಪ ಬಂದರೆ ಮೇಣದಬತ್ತಿ ಆರಿಸುವುದು ಮತ್ತು ಹೋದರೆ ಮತ್ತೆ ಹಚ್ಚುವುದು.
ನಮ್ಮ ಅಕ್ಕಪಕ್ಕದಲ್ಲಿ ವಾಸಿಸುತ್ತಿದ್ದ ಜನರಿಗೆ ಜಪಾನಿ ಭಾಷೆಯ ಹೊರತಾಗಿ ಬೇರೆ ಯಾವ ಭಾಷೆಯೂ ಬರುತ್ತಿರಲಿಲ್ಲ. ಹಾಗಾಗಿ ಯಾರೊಂದಿಗೂ ಮಾತನಾಡಲು ಆಗುತ್ತಿರಲಿಲ್ಲ. ಭಾರತದಲ್ಲೂ ನಮಗೆ ಯಾರೊಂದಿಗೂ ಮಾತನಾಡಲು ಸಾಧ್ಯವಾಗಲಿಲ್ಲ. ದಿನಪತ್ರಿಕೆ, ಟಿ.ವಿ. ಯಿಂದ ಈ ಭೂಕಂಪದ ಸುದ್ದಿಗಳು ನಮ್ಮ ಅಪ್ಪ-ಅಮ್ಮನಿಗೆ ತಲುಪಿದ್ದವು. ಆದರೆ ಅವರೊಂದಿಗೂ ಸಂಪರ್ಕ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಅವರ ಕಣ್ಣುಗಳಿಂದಲೂ ಕಣ್ಣೀರಿನ ಧಾರೆ ಹರಿಯುತ್ತಿತ್ತು ಏಕೆಂದರೆ ನಾವು ವಾಸಿಸುತ್ತಿದ್ದ ಭಾಗವೂ ಭೂಕಂಪದ ಹೊಡೆತಕ್ಕೆ ಸಿಲುಕಿದ್ದನ್ನು ಅವರು ತಮ್ಮ ಕಣ್ಣಾರೆ ಟಿ.ವಿ. ಯಲ್ಲಿ ನೋಡುತ್ತಿದ್ದರು. ಪ್ರಚಂಡ ಸುನಾಮಿಯು ಜಪಾನ್ ಅನ್ನು ಆವರಿಸಿಕೊಂಡಿದೆ ಎನ್ನುವ ಕಲ್ಪನೆ ನಮಗಿರಲಿಲ್ಲ, ಆದರೆ ಅವರಿಗೆ ಲೈವ್ ಆಗಿ ನೋಡಲು ಸಿಕ್ಕಿತ್ತು.
ಕೊನೆಗೂ ಶನಿವಾರ ಸಂಜೆ ನಾವು ಭಾರತದಲ್ಲಿರುವ ನಮ್ಮ ಕುಟುಂಬದವರೊಂದಿಗೆ ಸಂಪರ್ಕ ಸಾಧಿಸುವಲ್ಲಿ ಯಶಸ್ವಿಯಾದೆವು. ನಾವು ಸುರಕ್ಷಿತವಾಗಿದ್ದೇವೆ ಎಂದು ತಿಳಿದಾಗ ಅವರ ಕಣ್ಣುಗಳಲ್ಲಿದ್ದ ದುಃಖದ ಕಣ್ಣೀರಿನ ಜಾಗವನ್ನು ಆನಂದಭಾಷ್ಪ ಆಕ್ರಮಿಸಿತು.
ಭಾನುವಾರ ಬೆಳಿಗ್ಗೆ ವಿದ್ಯುತ್ ಸರಬರಾಜು ಮೊದಲಿನಂತೆ ಶುರುವಾಯಿತು. ಆ ಸಮಯದಲ್ಲಿ ನಾವು ಇಂಟರ್‌ನೆಟ್‌ನಲ್ಲಿ ನೋಡಿದೆವು, ಇದು ಜಪಾನ್‌ನ ಅತಿದೊಡ್ಡ ಅಂದರೆ 9 ಮ್ಯಾಗ್ನಿಟ್ಯೂಡ್‌ನ ಭೂಕಂಪವಾಗಿತ್ತು ಅಂತ. ಅದರ ಕೇಂದ್ರ ಪೆಸಿಫಿಕ್ ಸಮುದ್ರವಾಗಿತ್ತು. ಹಾಗಾಗಿ ಸುನಾಮಿ ಬಂತು ಮತ್ತು ಸೆಂದೈ ಎನ್ನುವ ನಗರವನ್ನು ಸುನಾಮಿಯು ಸಂಪೂರ್ಣವಾಗಿ ನಾಶ ಮಾಡಿತ್ತು.
ಭೂಕಂಪ ನಡೆದುಹೋಯಿತು, ಆದರೂ ಅಪಾಯ ಮಾತ್ರ ತಪ್ಪಿರಲಿಲ್ಲ. ಸುನಾಮಿಯ ಹೊಡೆತದಿಂದ ಫುಕುಶಿಮಾದಲ್ಲಿದ್ದ ಅಣುಸ್ಥಾವರಗಳು ಹಾನಿಗೊಳಗಾಗಿದ್ದರಿಂದ ರೇಡಿಯೇಶನ್ ಕೂಡ ಹರಡಲಾರಂಭಿಸಿತ್ತು. ಈ ರೇಡಿಯೇಶನ್ ದೇಹದೊಳಗೆ ಹೋದರೆ ಕ್ಯಾನ್ಸರ್‌ನಂತಹ ಪ್ರಾಣಾಂತಿಕ ಕಾಯಿಲೆಗಳು ಬರಬಹುದು. ಈ ಭೂಕಂಪ ಮತ್ತು ಸುನಾಮಿಯಿಂದಾಗಿ ಎಷ್ಟೋ ಸಾವಿರಾರು ಜನರು ಸಾವನ್ನಪ್ಪಿದರು. ಎಷ್ಟೋ ಜನರ ಜೀವನ ನಾಶವಾಯಿತು, ಇದನ್ನೆಲ್ಲಾ ಎಲ್ಲರೂ ಟಿ.ವಿ. ಯಲ್ಲಿ ನೋಡೇ ಇದ್ದಾರೆ.
ಆದರೆ ಪ್ರಕೃತಿಯ ಈ ಎಲ್ಲಾ ತಾಂಡವದ ಮಧ್ಯೆಯೂ, ಪರಮಪೂಜ್ಯ ಬಾಪುಮಾವಳಿಯಿಂದಾಗಿಯೇ ನಾವೆಲ್ಲರೂ ಸುರಕ್ಷಿತವಾಗಿದ್ದೆವು. ಈ ಭೂಕಂಪದಿಂದ ನಮ್ಮನ್ನು ಕೇವಲ ನಮ್ಮ ಈ ಸದ್ಗುರು ಬಾಪು ಅವರೇ ಕಾಪಾಡಿದರು.
ಮನೆಗೆ ಬಿರುಕು ಬಿಟ್ಟಿತ್ತು. ಆದರೆ ಮನೆ ಬೀಳಲಿಲ್ಲ. ಜೀವ ಉಳಿಸಿಕೊಳ್ಳಲು ಆ ಪರಿಸ್ಥಿತಿಯಲ್ಲೂ ಬಾಪು ಅವರು ಊಟ-ನೀರಿನ ವ್ಯವಸ್ಥೆ ಮಾಡಿದರು. ಸುನಾಮಿಯ ಅಲೆಗಳು ನಮ್ಮವರೆಗೂ ತಲುಪಲೇ ಇಲ್ಲ. ಸ್ವಭಾವತಃ ಹೆದರಿಕೆಯ ಸ್ವಭಾವದವಳಾದ ನನಗೆ ಆ ಸಮಯದಲ್ಲಿ ಧೈರ್ಯದ, ಸಾಮರ್ಥ್ಯದ ಅಗತ್ಯವಿತ್ತು. ಬಾಪು ಅವರ ‘ಓಂ ಮನಃಸಾಮರ್ಥ್ಯದಾತಾ ಶ್ರೀ ಅನಿರುದ್ಧಾಯ ನಮಃ’ ಎಂಬ ತಾರಕಮಂತ್ರವು ನನಗೆ ಸಾಮರ್ಥ್ಯವನ್ನು ನೀಡಿತು....ಬರೋಬ್ಬರಿ 108 ಪ್ರತಿಶತ ನೀಡಿತು! ಕೇವಲ ಬಾಪು ಅವರಿಂದಲೇ ನಮ್ಮ ಪ್ರಾಣ ಉಳಿಯಿತು, ಇದನ್ನು ನಾನು ಜಗತ್ತಿಗೆ ಕೂಗಿ ಹೇಳಬಲ್ಲೆ.
ಇಡೀ ಜಪಾನ್ ನಗರವೇ ಈ ವಿಕೋಪದ ತೀವ್ರ ಹೊಡೆತದಿಂದ ಅಸ್ತವ್ಯಸ್ತವಾಗಿದ್ದಾಗ, ಯಾವ ಜಪಾನಿಗನಿಗೆ ತನ್ನೊಬ್ಬ ಭಾರತೀಯ ಸಹೋದ್ಯೋಗಿಗಾಗಿ ಊಟ ತೆಗೆದುಕೊಂಡು ಹೋಗಲು ಸಮಯವಿರುತ್ತದೆ? ಆದರೆ ಆ ಪರಮದಯಾಳು ಸದ್ಗುರುಮಾವಳಿಯೇ ಎಲ್ಲ ಚಕ್ರಗಳನ್ನು ತಿರುಗಿಸಿದರೇನೋ, ಏಕೆಂದರೆ ನಮ್ಮ ಜೊತೆಗೆ ನಮ್ಮ ಒಂದೂವರೆ ವರ್ಷದ ಆ ಎಳೆಯ ಜೀವದ ಕಾಳಜಿ ಕೂಡ ಅವರಿಗಿತ್ತು. ನಿಜಕ್ಕೂ, ನಮಗೆ ಸರಿಯಾದ ಸಮಯಕ್ಕೆ ರಾತ್ರಿ ಬಾಳೆಹಣ್ಣು, ನೀರು, ಹಾಲು ಆ ಜಪಾನಿ ವ್ಯಕ್ತಿಯ ಕೈಯಿಂದ ತಂದುಕೊಟ್ಟವರು ಯಾರು? ಎಲ್ಲೆಡೆಯೂ ಸಾವು ತಾಂಡವವಾಡುತ್ತಿರುವಾಗ ನಮ್ಮನ್ನು ಸಾವಿನ ದವಡೆಯಿಂದ ಎಳೆದು ತರುವ ಬೇರೆ ಯಾರು ಇರಲು ಸಾಧ್ಯ? ಕೇವಲ ಬಾಪು, ಬಾಪು ಮತ್ತು ಬಾಪು ಮಾತ್ರ! ಆಗ ಬಾಯಿಂದ ಒಂದೇ ಒಂದು ವಾಕ್ಯ ಹೊರಬರುತ್ತದೆ,
'ನಮ್ಮ ಬಾಪು ನಿಧಾನವಾಗಿ ನಮಗಾಗಿ ಎಲ್ಲವನ್ನೂ ಸರಿ ಮಾಡುತ್ತಿದ್ದಾರೆ'.
'ಅವರ' ಹೆಸರು ಬಾಯಲ್ಲಿದ್ದ ಮೇಲೆ ಅತಿಪ್ರಚಂಡ ಸುನಾಮಿಯ ಶಕ್ತಿ ಕೂಡ ಏನೂ ಮಾಡಲು ಸಾಧ್ಯವಿಲ್ಲ. ಏಕೆಂದರೆ ಆ ಸದ್ಗುರುತತ್ವದ ಕೃಪೆಯನ್ನು ತಡೆಯುವವರು ಯಾರೂ ಇಲ್ಲ.
ಇದಕ್ಕಿಂತ ಬೇರೆ ‘ಸು-ನಾಮ’ ಯಾವುದಿರಬಹುದು?
| Hindi | English |
|---|---|
