ನನ್ನ ಚಿಂತೆ ನಿನಗಿದೆ ಎಂಬುದು ನನಗೆ ತಿಳಿಯಿತು - ವಿನೀತ್‌ಸಿಂಹ ಪಸರಣೀಕರ್, ಆಸ್ಟ್ರೇಲಿಯಾ

ನನ್ನ ಚಿಂತೆ ನಿನಗಿದೆ ಎಂಬುದು ನನಗೆ ತಿಳಿಯಿತು - ವಿನೀತ್‌ಸಿಂಹ ಪಸರಣೀಕರ್, ಆಸ್ಟ್ರೇಲಿಯಾ

ವಿದೇಶಕ್ಕೆ ಹೊರಟ ನಿಂತ ವ್ಯಕ್ತಿ..... ಇಂಗ್ಲಿಷ್ ಅಷ್ಟಕ್ಕಷ್ಟೇ ಮಾತನಾಡಲು ಬರುತ್ತಿತ್ತು ..... ಓದಿದ್ದು ಕೂಡ ಸಾಧಾರಣ... ವಿದೇಶಕ್ಕೆ ಹೋಗಿ ಮನೆ, ಕೆಲಸ ಹುಡುಕುವುದರಿಂದ ಹಿಡಿದು ಎಲ್ಲವನ್ನೂ ತಾನೇ ಮಾಡಬೇಕಿತ್ತು... ಬಾಪೂ ಅವರನ್ನು ಕೇವಲ ಒಬ್ಬ ಸಾಮಾನ್ಯ ಮನುಷ್ಯನಂತೆ ನೋಡುವ ದೃಷ್ಟಿಕೋನ... ಇಂತಹ ಪರಿಸ್ಥಿತಿಯಲ್ಲಿ ವಿದೇಶಕ್ಕೆ ಹೊರಡುವ ಮುನ್ನ ಶ್ರೀಹರಿಗುರುಗ್ರಾಮಕ್ಕೆ ಹೋಗುವ ಯೋಗ ಬರುತ್ತದೆ ಮತ್ತು ಎಲ್ಲಾ ಭಯಗಳನ್ನು ಬಾಪೂ ಅತ್ಯಂತ ಸುಲಭವಾಗಿ ದೂರ ಮಾಡುತ್ತಾರೆ... ಆ ವ್ಯಕ್ತಿ ತನಗೆ ತಿಳಿಯುವ ಮುನ್ನವೇ ಒಬ್ಬ ಶ್ರದ್ಧಾವಂತ ಬಾಪೂ ಭಕ್ತನಾಗಿ ಬದಲಾಗಿರುತ್ತಾನೆ.

-------------------------------------------

ವರ್ಷ 2000 ದಿಂದಲೇ ಬಾಪೂ ಅವರ ಬಗ್ಗೆ ನನ್ನ ಹೆಂಡತಿ ಮತ್ತು ಅವಳ ತವರು ಮನೆಯವರಿಂದ ಪದೇ ಪದೇ ಕೇಳಿದ್ದೆ. ಆದರೆ ನಾನು ಶ್ರೀಸ್ವಾಮಿ ಸಮರ್ಥರ ಭಕ್ತಿಯನ್ನು ಮನಸಾರೆ ಮಾಡುತ್ತಿದ್ದೆ. ಕೇವಲ ನನ್ನ ಹೆಂಡತಿ ವಿನಯಾಳ ಒತ್ತಾಯಕ್ಕೋಸ್ಕರ 2000 ನೇ ಇಸವಿಯಲ್ಲಿ ಬಾಪೂ ಪುಣೆಗೆ ಬಂದಾಗ, ಅವರ ದರ್ಶನ ಪಡೆದಿದ್ದೆ. ಆಗ ಇವರೊಬ್ಬ ಸಾಮಾನ್ಯ ಮನುಷ್ಯ, ಅದಕ್ಕಿಂತ ಹೆಚ್ಚೇನೂ ಅಲ್ಲ ಎಂದೆನಿಸಿತ್ತು. ಆದರೂ ಬಾಪೂ ಅವರ ಕಾರ್ಯ ಮತ್ತು ಪ್ರವಚನಗಳು ತುಂಬಾ ಇಷ್ಟವಾಗುತ್ತಿದ್ದವು. ಆದರೆ ಮನಸ್ಸು ಮಾತ್ರ ಅವರ ಭಕ್ತಿ ಮಾಡಲು ಸಿದ್ಧವಿರಲಿಲ್ಲ.

30 ಅಕ್ಟೋಬರ್ 2009 ರಂದು ನಾನು ಆಸ್ಟ್ರೇಲಿಯಾದಲ್ಲಿ ನೆಲೆಸಲು ಹೊರಟೆ. ನಾನು ಹತ್ತನೇ ತರಗತಿಯವರೆಗೆ ಓದಿದ ನಂತರ ಐ.ಟಿ.ಐ ನಲ್ಲಿ ವೆಲ್ಡಿಂಗ್ ಕೋರ್ಸ್ ಮಾಡಿದ್ದೆ ಮತ್ತು ಟಾಟಾ ಮೋಟಾರ್ಸ್‌ನಲ್ಲಿ 1996 ರಿಂದ 2009 ರವರೆಗೆ ಕೆಲಸ ಮಾಡಿದ್ದೆ. 2009 ರಲ್ಲಿ ನನಗೆ ಆಸ್ಟ್ರೇಲಿಯಾದ "ಸ್ಕಿಲ್‌ಮೈಗ್ರೇಷನ್ ಪರ್ಮನೆಂಟ್ ವೀಸಾ"  ಸಿಕ್ಕಿತು. ನನ್ನ ವಿಮಾನ 31 ಅಕ್ಟೋಬರ್ ಬೆಳಗ್ಗೆ ಇತ್ತು. ಆದ್ದರಿಂದ ನನ್ನ ಸ್ನೇಹಿತ ಹಿಂದಿನ ದಿನ ಸಂಜೆ ಮುಂಬೈನಲ್ಲಿರುವ ತನ್ನ ಮನೆಗೆ ಬಂದು ಉಳಿದುಕೊಳ್ಳಲು ಹೇಳಿದ್ದನು, ಅಲ್ಲಿಂದ ಬೆಳಗ್ಗೆ ಆರಾಮಾಗಿ ವಿಮಾನ ನಿಲ್ದಾನಕ್ಕೆ (ಏರ್ ಪೋರ್ಟ್‌)  ಹೋಗಬಹುದು ಎಂದು ತಿಳಿಸಿದ್ದನು. 30 ರಂದು ಸಂಜೆ ಮುಂಬೈ ತಲುಪಿದ ತಕ್ಷಣ ನನಗೆ ಸಿದ್ಧಿವಿನಾಯಕ ದೇವಸ್ಥಾನ ದರ್ಶನ ಪಡೆಯಬೇಕೆಂದು ಸ್ನೇಹಿತನಿಗೆ ತಿಳಿಸಿದೆ. ಆದರೆ ನಾವು ತಲುಪುವಷ್ಟರಲ್ಲಿ ದೇವಸ್ಥಾನದ ಬಾಗಿಲು ಮುಚ್ಚಿತ್ತು. ನನ್ನ ಕೋರಳಿನಲ್ಲಿ ಹೆಂಡತಿ ಹಾಕಿದ್ದ ಬಾಪೂ ಅವರ ಲಾಕೆಟ್ ನೋಡಿ ಸ್ನೇಹಿತನಿಗೆ ನಾನು ಬಾಪೂ ಭಕ್ತನಿರಬೇಕೆಂದು ಅನ್ನಿಸಿತು. ಅವನು ನನಗೆ, “ಇವತ್ತು ಗುರುವಾರ ಇದೆ, ನೀನು ಬಾಪೂ ಅವರ ದರ್ಶನ ಪಡೆದುಕೊ, ನಾಳೆ ಬೆಳಗ್ಗೆ ಸಿದ್ಧಿವಿನಾಯಕ ದೇವಸ್ಥಾನದ ಮೊದಲ ಆರತಿ ಮಾಡಿಸಿ ನಿನ್ನನ್ನು 

ಏರ್ ಪೋರ್ಟ್‌ಗೆ ಬಿಡುತ್ತೇನೆ” ಎಂದನು. ನನ್ನ ಜೊತೆ ನನ್ನ ಹೆಂಡತಿಯ ತವರು ಮನೆಯವರೂ ಇದ್ದರು. ತಕ್ಷಣ ನಾವೆಲ್ಲರೂ ಶ್ರೀಹರಿಗುರುಗ್ರಾಮಕ್ಕೆ ಹೋದೆವು.

ಹಕ್ಕಿಯ ಕಾಲಿಗೆ ದಾರವ 

ಕಟ್ಟಿ ಎಳೆದು ತಂದಂತೆ ಎದುರಲಿ 

ಹಾಗೆಯೇ ನೀನು ನನ್ನನ್ನು ಸೆಳೆದೆ ನಿಜದಲಿ 

ನನ್ನ ಚಿಂತೆ ನಿನಗಿದೆ ಎಂಬುದು ನನಗೆ ತಿಳಿಯಿತು ||೨೦||

ಅನಿರುದ್ಧಾ, ನಿನಗೆ ನಾನು ಎಷ್ಟು ಋಣಿಯಾಗಿದ್ದೇನೆ||

ಅನಿರುದ್ಧಾ, ನಿನಗೆ ನಾನು ಎಷ್ಟು ಋಣಿಯಾಗಿದ್ದೇನೆ॥

(ಸದ್ಗುರು ಶ್ರೀ ಅನಿರುದ್ಧ ೠಣಜ್ನಪಕ ಸ್ತೊತ್ರ)

ಅಲ್ಲಿಗೆ ಹೋದಾಗ ದರ್ಶನಕ್ಕಾಗಿ ತುಂಬಾ ಜನರ ದೊಡ್ಡ ಸಾಲು ಇತ್ತು. ರಾತ್ರಿ ಹನ್ನೊಂದು ಗಂಟೆಯಾಗಿತ್ತು. ಸಾಲಿನಲ್ಲಿ ನಿಧಾನವಾಗಿ ಮುಂದೆ ಹೋಗುತ್ತಿದ್ದಾಗ ಬಾಪೂ ನನ್ನ ಕಡೆ ನೋಡಿ, ‘ನೀನು ಹೋಗು, ನಾನು ಇದ್ದೇನಲ್ಲ, ಚಿಂತೆ ಮಾಡಬೇಡ.’ ಎಂದು ಕೈಸಜ್ಜೆಯಿಂದ ಸ್ಪಷ್ಟವಾಗಿ ಭರವಸೆ ನೀಡಿದರು. ನಾನು ಕ್ಯೂನಿಂದ ಮುಂದೆ ಹೋದಂತೆ, ಬಾಪೂ ನನ್ನ ಕಡೆ ನೋಡಿ ಅದೇ ಸನ್ನೆಯನ್ನು ಪದೇ ಪದೇ ಮಾಡುತ್ತಿರುವುದು ಕಾಣಿಸುತ್ತಿತ್ತು. ನಂತರ ನಾನು ಸಾಷ್ಟಾಂಗ ನಮಸ್ಕಾರ ಮಾಡಿದೆ. ಎದ್ದು ಮತ್ತೆ ಬಾಪೂ ಅವರ ಕಡೆ ನೋಡಿದೆ. ಆ ಕ್ಷಣದಲ್ಲಿ ನನಗೆ ಒಂದು ವಿಭಿನ್ನ ರೀತಿಯ ದರ್ಶನವಾಯಿತು ಮತ್ತು ಇವರೊಬ್ಬರೇ ನನಗಾಗಿ ಏನನ್ನಾದರೂ ಮಾಡಲು ಸಾಧ್ಯ ಎಂದೆನಿಸತೊಡಗಿತು. ಬಾಪೂ ಅವರ ಆ ಸನ್ನೆ ಮತ್ತೆ ಮತ್ತೆ ಮುಂದುವರಿದಿತ್ತು. ಪ್ರತಿ ಬಾರಿ ನಾನು ಅವರ ಕಡೆ ನೋಡಿದಾಗಲೂ, ಬಾಪೂ ನನಗೆ ಅದನ್ನೇ ಹೇಳುತ್ತಿರುವುದು ಕಾಣಿಸುತ್ತಿತ್ತು.

ದರ್ಶನ ಮುಗಿಸಿ ನಾನು ಮತ್ತೆ ದೂರ ಹೋಗಿ ಸಾಷ್ಟಾಂಗ ನಮಸ್ಕಾರ ಮಾಡಿದೆ. ಎದ್ದು ನಿಂತರೆ ಮತ್ತೆ ಬಾಪೂ ಅವರ ಅದೇ ಸನ್ನೆ! ಆ ಕ್ಷಣದಲ್ಲಿ ನನಗೆ ಶ್ರೀಸ್ವಾಮಿ ಸಮರ್ಥರ ಮಾತುಗಳು ನೆನಪಾದವು, ‘ಹೆದರಬೇಡ, ನಾನು ನಿನ್ನ ಜೊತೆಗಿದ್ದೇನೆ’. ಎರಡೂ ವಾಕ್ಯಗಳು ಒಂದೇ ಸಂಕೇತವನ್ನು ನೀಡುತ್ತಿದ್ದವು. ಬಾಪೂ ಅವರ ಈ ಕೃಪೆಯಿಂದ ನನ್ನ ಮನಸ್ಸಿನಲ್ಲಿ ಉಳಿದಿದ್ದ ಅಲ್ಪಸ್ವಲ್ಪ ಭಯವೂ ಕಡಿಮೆಯಾಯಿತು. ಬೆಳಗ್ಗೆ ಎದ್ದು ಸಿದ್ಧಿವಿನಾಯಕನ ದರ್ಶನ ಮುಗಿಸಿ ನಾನು ಏರ್ ಪೋರ್ಟ್‌ಗೆ  ಬಂದೆ. ಎಲ್ಲಾ ಹಿತೈಷಿಗಳು ನನ್ನನ್ನು ಕಳುಹಿಸಿಕೊಡಲು ಬಂದಿದ್ದರು.

ಈಗ ನನ್ನ ಮನಸ್ಸಿನಲ್ಲಿದ್ದ ಭಯದ ಬಗ್ಗೆ ಸಂಕ್ಷಿಪ್ತವಾಗಿ ಹೇಳುತ್ತೇನೆ. ಹೊಸ ದೇಶಕ್ಕೆ ಹೋಗಬೇಕು. ಸಿಂಗಾಪುರದಲ್ಲಿ ವಿಮಾನ ಬದಲಾಯಿಸಬೇಕು. ಇಂಗ್ಲಿಷ್ ಭಾಷೆ ಕೇಳಿದರೆ ಅರ್ಥವಾಗುತ್ತಿತ್ತು, ಆದರೆ ಮಾತನಾಡಲು ಭಯವಾಗುತ್ತಿತ್ತು. ಆಸ್ಟ್ರೇಲಿಯಾಕ್ಕೆ ಹೋಗಿ ನಾನು ಕೆಲಸವನ್ನೂ ಹುಡುಕಬೇಕಾಗಿತ್ತು. ಹಾಗಾಗಿ ಅಲ್ಲಿ ಮನೆಯಿಂದ ಹೊರಗೆ ಪ್ರತಿ ವಿಷಯಕ್ಕೂ ಇಂಗ್ಲಿಷ್‌ನಲ್ಲೇ ಮಾತನಾಡಬೇಕಾಗುತ್ತಿತ್ತು. ಹೊಸ ದೇಶ, ಹೊಸ ಜನ! ಅದರಲ್ಲಿಯೂ ನನ್ನನ್ನು ಆಸ್ಟ್ರೇಲಿಯಾದ ಏರ್ ಪೋರ್ಟ್‌ನಲ್ಲಿ ಕರೆದುಕೊಂಡು ಹೋಗಲು ಬರಬೇಕಾಗಿದ್ದ ವ್ಯಕ್ತಿಯನ್ನು ನಾನು 5 ವರ್ಷಗಳ ಹಿಂದೆ ನೋಡಿದ್ದೆ. ಆ ವ್ಯಕ್ತಿಯನ್ನು ನಾನು ಅಲ್ಲಿ ಗುರುತಿಸಲು ಸಾಧ್ಯವೇ? ಎಂಬ ಪ್ರಶ್ನೆಯೂ ಮನಸ್ಸಿನಲ್ಲಿತ್ತು. ಹೆಂಡತಿ ಮತ್ತು ಮಕ್ಕಳನ್ನು ಎರಡು ತಿಂಗಳೊಳಗೆ ಅಲ್ಲಿಗೆ ಕರೆಸಿಕೊಳ್ಳುವುದು ಅನಿವಾರ್ಯವಾಗಿತ್ತು. ಒಟ್ಟಿನಲ್ಲಿ ಇಂಗ್ಲಿಷ್ ಮಾತನಾಡಲು ಮತ್ತು ಅರ್ಥ ಮಾಡಿಕೊಳ್ಳಲು ಭಯವಾಗುತ್ತಿತ್ತು. ಈ ಭಯ ಬಾಪೂ ಅವರ ‘ಆ’ ಸನ್ನೆಯಿಂದ ಖಂಡಿತವಾಗಿಯೂ ದೂರವಾಗಿತ್ತು.

31 ಅಕ್ಟೋಬರ್‌ನಂದು ಸಿಡ್ನಿಗೆ ತಲುಪಿದಾಗ ವಿಮಾನದಿಂದ ಇಳಿಯುವಾಗ ಮೊದಲು ಬಾಪೂ ಮತ್ತು ಸಿದ್ಧಿವಿನಾಯಕನ ಹೆಸರು ಸ್ಮರಿಸಿದೆ. ಅಂದಿನಿಂದ ನಾನು ಬಾಪೂ ಅವರ ಛತ್ರಛಾಯೆಯಡಿಗೆ ಬಂದೆ. ಸಿಡ್ನಿಗೆ ಬಂದ ನಂತರ ಒಬ್ಬ ಸಾಮಾನ್ಯ ಮನುಷ್ಯ ಮತ್ತು ಸದ್ಗುರು ಮಾರ್ಗದಲ್ಲಿರುವ ಮನುಷ್ಯನ ನಡುವಿನ ವ್ಯತ್ಯಾಸವೇನು ಎಂಬುದು ಪ್ರತಿ ಸಣ್ಣ ಸಣ್ಣ ವಿಷಯದಿಂದ ನನಗೆ ತಿಳಿಯುತ್ತಿತ್ತು. ನನಗೆ ತಕ್ಷಣವೇ ಕೆಲಸ ಸಿಕ್ಕಿತು. ನನ್ನ ಹೆಂಡತಿ ಮತ್ತು ಮಕ್ಕಳೂ ಇಲ್ಲಿಗೆ ಬಂದರು ಮತ್ತು ಅವರೂ ಕೂಡ ತುಂಬಾ ಬೇಗನೆ ಸೆಟ್ ಆದರು. ನಾನು ಹೊಸಬನಾಗಿದ್ದಾಗ ಅಲ್ಲಿ ನನ್ನನ್ನು ಭೇಟಿಯಾಗಲು ಬರುತ್ತಿದ್ದ ಜನರು ಹೇಳುತ್ತಿದ್ದರು, ‘ಅರೇ, ನಿನಗೆ ಇಷ್ಟು ಬೇಗ ಕೆಲಸ ಹೇಗೆ ಸಿಕ್ಕಿತು? ಏಕೆಂದರೆ ನವೆಂಬರ್ ಮತ್ತು ಡಿಸೆಂಬರ್ ರಲ್ಲಿ ಕ್ರಿಸ್‌ಮಸ್ ರಜೆಗಳಿರುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಹೊಸ ಕೆಲಸ ಸಿಗುವುದು ಸ್ವಲ್ಪ ಕಷ್ಟ.  ಆದರೆ ಪ್ರತಿ ವಿಷಯದಲ್ಲೂ ನನಗೆ ಬಾಪೂ ಅವರ ಅನುಭವವಾಗುತ್ತಿತ್ತು, ಅವರ ನೆನಪಾಗುತ್ತಿತ್ತು. ‘ಹೆದರಬೇಡ, ನಾನು ನಿನ್ನ ಜೊತೆಗಿದ್ದೇನೆ’, ಎಂದು ಬಾಪೂ ನನಗೆ ಹೇಳುತ್ತಿರುವಂತೆ ಅನಿಸುತ್ತಿತ್ತು. 2009 ರಿಂದ 2013 ರವರೆಗೆ ನಾನು ಬಾಪೂ ಅವರ ಬಳಿ ಕೇಳಿದ್ದನ್ನೆಲ್ಲಾ ಅವರು ನನಗೆ ನೀಡಿದ್ದಾರೆ. ಇಂದು ನನ್ನ ಜೀವನದಲ್ಲಿ ಬಾಪೂ ನನಗೆ ನೀಡದಿರುವಂತಹ ಯಾವುದೇ ವಸ್ತುವೂ ಇಲ್ಲ. ನನ್ನ ಈ ಅನುಭವವನ್ನು ನಾನು ಭೇಟಿಯಾಗುವ ಪ್ರತಿ ಬಾಪೂ ಭಕ್ತರಿಗೆ ಮತ್ತು ಸ್ನೇಹಿತರಿಗೆ ತಿಳಿಸಿದ್ದೇನೆ.

ನೀನು ಮತ್ತು ನಾನು ಬಾಪೂ ಒಂದಾದಾಗ ಸ್ವಭಾವದಲಿ

ಸಹಜವಾಗಿಯೇ ಅದ್ವೈತ ನಡೆದುಹೋಗುವುದು ನಮ್ಮಲಿ

ಅಸಾಧ್ಯವಾದುದನ್ನು ಸಾಧ್ಯವಾಗಿಸುವೆ ನೀನೇ ಈ ಜಗದಲಿ

ನಿನ್ನ ಅನಂತ ಲೀಲೆಗಳನ್ನು ನೋಡುವುದರಲ್ಲೇ ಮರೆತೆ ನನ್ನನು||೨೩||

ಅನಿರುದ್ಧಾ, ನಿನಗೆ ನಾನು ಎಷ್ಟು ಋಣಿಯಾಗಿದ್ದೇನೆ||

ಅನಿರುದ್ಧಾ, ನಿನಗೆ ನಾನು ಎಷ್ಟು ಋಣಿಯಾಗಿದ್ದೇನೆ॥

(ಸದ್ಗುರು ಶ್ರೀ ಅನಿರುದ್ಧ ೠಣಜ್ನಪಕ ಸ್ತೊತ್ರ)

----------------------------------------


Hindi English