ಬಾಪುಜಿ ನನಗೆ ನಿಜವಾಗಿಯೂ ಹಾವು ತೋರಿಸಿದರು! – ಮಂಗಳವೀರಾ ಕುಲಟ್, ಜಳಗಾಂವ

ಬಾಪುಜಿ ನನಗೆ ನಿಜವಾಗಿಯೂ ಹಾವು ತೋರಿಸಿದರು! – ಮಂಗಳವೀರಾ ಕುಲಟ್, ಜಳಗಾಂವ

ಇದು ಅತ್ಯಂತ ಪ್ರಭಾವಶಾಲಿ ಅನುಭವ. ಸದ್ಗುರುತತ್ತ್ವವನ್ನು ಪರೀಕ್ಷಿಸಲು ಹೊರಡುವವರು ಅಂತಿಮವಾಗಿ ಅದೇ ಸದ್ಗುರುತತ್ತ್ವದ ಮುಂದೆ ಶರಣಾಗುತ್ತಾರೆ ಎಂಬುದನ್ನು ಇದು ಸ್ಪಷ್ಟವಾಗಿ ತೋರಿಸುತ್ತದೆ. “ಈ ಸದ್ಗುರು ನಿಜವಾಗಿದ್ದರೆ, ನನಗೆ ಹಾವು ತೋರಿಸಲಿ” ಎಂಬ ಸವಾಲು ಹಾಕಿದ ಈ ಭಕ್ತ ಮಹಿಳೆಗೆ, ತಾನೇ ಹೇಳಿದಂತೆ ಹೇಗೆ ಅನುಭವ ಲಭಿಸುತ್ತದೆ ಎಂಬುದು ಮರೆಯಲಾಗದಂತಹದ್ದು.

ನಾನು ಮಂಗಳವೀರಾ ಮೋಹನಸಿಂಹ ಕುಲಟ್, ಬಾಪುಜಿಯವರ ಸತ್ಸಂಗಕ್ಕೆ ಬರುವ ಮೊದಲು ನಾನು ಕಠೋರ ಸಾಯಿ ಭಕ್ತೆಯಾಗಿದ್ದೆ. 2003ರಲ್ಲಿ ನಾನು ಮೊದಲ ಬಾರಿ ಬಾಪುಜಿಯವರ ಹೆಸರನ್ನು ಕೇಳಿದ್ದೆ. ಆವಾಗ ನನ್ನ ಪತಿ ಜೀವಂತವಾಗಿದ್ದರು. ಆದರೆ ಅವರ ಬಳಿ ಹೋಗಬೇಕೆಂಬ ಆಲೋಚನೆ ನನಗೆ ಎಂದಿಗೂ ಬಂದಿರಲಿಲ್ಲ.

ಡಾ. ಯೋಗೇಂದ್ರಸಿಂಹ ಜೋಶಿಯವರು ರಚಿಸಿದ ಋಣಜ್ಞಾಪಕ ಸ್ತೋತ್ರ’ ದಲ್ಲಿನ ಕೆಳಗಿನ ಶ್ಲೋಕದ ಅರ್ಥದಂತೆಯೇ ನನ್ನ ಮನಸ್ಥಿತಿಯಾಗಿತ್ತು:

ಬುದ್ಧಿಯ ಮದದಿಂದ ಉನ್ಮತ್ತಳಾದೆ | ವ್ಯರ್ಥವಾದ ವಾದವಿವಾದಗಳಲ್ಲಿ ಸಿಲುಕಿಕೊಂಡೆ | ನಾನೇ ಬುದ್ಧಿವಂತೆಂದು ಭಾವಿಸಿಕೊಂಡೆ | ಇಂದು ನಿಮ್ಮ ಕಟಾಕ್ಷದಿಂದ ಅಹಂಶೂನ್ಯನಾದೆ | ಅನಿರುದ್ಧ, ನಿಮ್ಮಿಗೆ ನಾನು ಎಷ್ಟೋ ಋಣಿ ಆದೆ ||

ಬಾಪುಜಿಯವರ ಬಳಿ ಬರುವ ಮೊದಲು ನಾನೂ ಹೀಗೆಯೇ ಇದ್ದೆ. ಸದ್ಗುರುಗೆ ಸವಾಲು ಹಾಕುವ ಧೃಷ್ಟತೆಯವಳು! ಅವರ ಅಸ್ತಿತ್ವವನ್ನೇ ಒಪ್ಪದವಳು! ಆದರೆ ಅದೇ ಸದ್ಗುರುತತ್ತ್ವವೇ ನನ್ನನ್ನು ಅವರ ಚರಣಗಳ ಕಡೆಗೆ ಆಕರ್ಷಿಸಿತು. ಅವರ ಕೃಪೆಯಿಂದ ನಾನು ಭಕ್ತಿಮಾರ್ಗದಲ್ಲಿ ದೃಢಳಾದೆ. ಈಗ ನನಗೆ ದೊರೆತ ಬಾಪುಜಿಯವರ ಅನುಭವವನ್ನು ವಿವರಿಸುತ್ತಿದ್ದೇನೆ.

ನನ್ನದೇ ಆದ ಬ್ಯೂಟಿ ಪಾರ್ಲರ್ ಇದೆ. 2010ರಿಂದ ರಾಖಿ ಸೋನಾವಣೆ ಎಂಬ ಬಾಪುಭಕ್ತೆ ನನ್ನ ಪಾರ್ಲರ್‌ಗೆ ಬರುತ್ತಿದ್ದಳು. ಅವಳು ಬಂದಾಗಲೆಲ್ಲಾ ಬಾಪುಜಿಯವರ ಸಣ್ಣ–ದೊಡ್ಡ ಅನುಭವಗಳನ್ನು ನನಗೆ ಹೇಳುತ್ತಲೇ ಇರುತ್ತಿದ್ದಳು. ನನಗೆ ಬಾಪುಜಿಯವರ ಮೇಲೆ ನಂಬಿಕೆ ಇರದ

ಕಾರಣ ಅವಳ ಮಾತುಗಳಿಂದ ನನಗೆ ಬೇಸರವಾಗುತ್ತಿತ್ತು. ಅವಳ ನಿರಂತರ “ಬಾಪು” ಕುರಿತ ಮಾತುಗಳು ನಿಲ್ಲದೇ ಬಾರುವ ರೇಡಿಯೋ ಹಾಗೆ ಇರುತ್ತಿದ್ದವು. ನನಗೆ ತುಂಬಾ ಕೋಪ ಬರುತ್ತಿತ್ತು. ಅವಳು ಹೋದ ನಂತರ ಕ್ಲಾಸ್‌ನ ಹುಡುಗಿಯರೂ ಮತ್ತು ನಾನೂ ನಗುತ್ತಲೇ ಇರುತ್ತಿದ್ದೆವು.

ನಾವು ಹೇಳುತ್ತಿದ್ದೆವು — ದೇವರನ್ನು ಬಿಟ್ಟು ಮನುಷ್ಯನ ಪೂಜೆ ಸರಿಯಲ್ಲ. ಆದರೆ “ಮ್ಯಾಡಂ, ದಯವಿಟ್ಟು ಬಾಪುಜಿಯವರ ಬಗ್ಗೆ ಹೇಳಬೇಡಿ” ಎಂದು ನಾನು ಅವಳಿಗೆ ಹೇಳಲಿಲ್ಲ; ಅವಳು ಬೇಸರಗೊಂಡು ಪಾರ್ಲರ್‌ಗೆ ಬರದೇ ಹೋದರೆ ವ್ಯಾಪಾರಕ್ಕೆ ನಷ್ಟವಾಗಬಹುದು ಎಂಬ ಭಯದಿಂದ ಆರು ತಿಂಗಳು ಅವಳನ್ನು ಸಹಿಸಿಕೊಂಡೆ. ಅವಳ “ಬಾಪು ಪುರಾಣ”ಕ್ಕೆ ಅಂತ್ಯವೇ ಇರಲಿಲ್ಲ. ಪ್ರತೀ ಶನಿವಾರ ಸಂಜೆ ಆರು ಗಂಟೆಗೆ ನಡೆಯುವ ಬಾಪುಜಿಯವರ ಉಪಾಸನೆಗೆ ಬರಲು ಅವಳು ನನ್ನನ್ನು ಆಹ್ವಾನಿಸುತ್ತಲೇ ಇರುತ್ತಿದ್ದಳು; ನಾನು ಯಾವದಾದರೂ ಕಾರಣ ಹೇಳಿ ತಪ್ಪಿಸುತ್ತಿದ್ದೆ.

ನನ್ನ ಮಗ ಪ್ರಸಾದಸಿಂಹ ಕೂಡ “ಈ ಕಿರಿಕಿರಿಯನ್ನು ಇನ್ನೆಷ್ಟು ಶನಿವಾರ ಸಹಿಸಬೇಕು?” ಎಂದು ವಿರೋಧಿಸುತ್ತಿದ್ದ. ಹೀಗಾಗಿ ಒಂದು ಶನಿವಾರ ನಾನು ಮತ್ತು ನನ್ನ ಮಗ ನಿರ್ಧರಿಸಿದ್ದೇವೆ — “ಇಂದು ಅವಳು ಹೇಳಿದ ಜಾಗಕ್ಕೆ ಹೋಗಿ ನೋಡೋಣ.”

ಆ ದಿನ ರಾಖಿವೀರಾಳ ಫೋನ್ ಬಂತು. ಅವಳು ಹೇಳಿದಳು - “ಇಂದು ಮಗನನ್ನೂ ಕರೆದುಕೊಂಡು ಖಂಡಿತ ಬನ್ನಿ. ಆರತಿಗೆ ನಿಮ್ಮ ಹೆಸರನ್ನು ಕೊಟ್ಟಿದ್ದೇನೆ.” ನಾನು ಬರ್ತೇನೆ ಎಂದು ಹೇಳಿದೆ; ನಿಜ ಹೇಳಬೇಕೆಂದರೆ ದಿನನಿತ್ಯದ ಕಿರಿಕಿರಿಯಿಂದ ತಪ್ಪಿಸಿಕೊಳ್ಳಲು ಹೋಗುತ್ತಿದ್ದೆ.

ಸಂಜೆ ಮನೆಯಲ್ಲಿ ದೀಪ ಹಚ್ಚಿದೆ. ಆ ದಿನ ಪಾರ್ಲರ್‌ನಲ್ಲಿ ತುಂಬಾ ಜನರಿದ್ದರು. ಹುಡುಗಿಯರಿಗೆ, “ಉಳಿದ ಗ್ರಾಹಕರನ್ನು ನೀವು ನೋಡಿಕೊಳ್ಳಿ, ನಾನು ಆ ರಾಖಿ ಸೋನಾವಣೆಯವರು ಹೇಳಿದ ಜಾಗಕ್ಕೆ ಹೋಗುತ್ತೇನೆ” ಎಂದು ಹೇಳಿದೆ. ದೇವರಿಗೆ ನಮಸ್ಕರಿಸಿ, ನಗುತ್ತಾ ಹುಡುಗಿಯರಿಗೆ ಹೇಳಿದೆ, “ನೋಡೋಣ, ಈ ಬಾಪುಜಿ ಯಾರು ಅಂತ. ಅವರು ನಿಜವಾಗಿಯೂ ಸದ್ಗುರು ಆಗಿದ್ದರೆ, ನನಗೆ ಹಾವು ತೋರಿಸಲಿ!” (ನನಗೆ ಹಾವುಗಳೆಂದರೆ ತುಂಬಾ ಭಯ.) ಹೀಗೆ ಅಪಹಾಸ್ಯ ಮಾಡುತ್ತಾ, ಸಾಯಿಬಾಬಾರ ಫೋಟೋದ ಕಡೆ ನೋಡಿ ನಗುತ್ತಾ ನಾನು ಬಾಪು ಅವರ ಕಡೆಗೆ ಹೊರಟೆ.

ಉಪಾಸನಾ ಕೇಂದ್ರದಲ್ಲಿ ಬಹಳ ಜನಸಂದಣಿ ಇತ್ತು. ಆದರೆ ಎಲ್ಲರೂ ಶಿಸ್ತಿನಿಂದ ಕುಳಿತಿದ್ದರು. ನಾನು ರಾಖಿವೀರಾಳ ಪಕ್ಕದಲ್ಲಿ ಕುಳಿತೆ. ಉಪಾಸನಾ ಪುಸ್ತಕ ನೋಡಿ ಉಪಾಸನೆ ಮಾಡಿದೆ. ಆ ಸಮಯದಲ್ಲಿ ಆರತಿ ಮಾಡುವವರ ಹೆಸರನ್ನು ಕರೆಯುತ್ತಿದ್ದರು. ನನ್ನ ಹೆಸರು ಕರೆಯಲ್ಪಟ್ಟಾಗ ನನಗೆ ತುಂಬಾ ಸಂತೋಷವಾಯಿತು. ಬಾಪುಜಿಯವರ ಪಾದುಕೆಯೂ ಫೋಟೋವನ್ನೂ ನೋಡಿದಾಗ, ಬಾಪುಜಿಯವರೇ ಸಾಕ್ಷಾತ್ ಎದುರು ನಿಂತಂತಾಯಿತು. ಮನಸ್ಸು ತುಂಬಿ ಬಂತು.

ಸ್ವಯಂ ಸೇವಕರು ಶಿಸ್ತಿನಿಂದ, ಪ್ರೀತಿಯಿಂದ ಕೆಲಸ ಮಾಡುತ್ತಿದ್ದರು; ಒಬ್ಬರಿಗೊಬ್ಬರು ನಗುತ್ತಾ “ಹರಿ ಓಂ” ಎಂದು ಹೇಳುತ್ತಿದ್ದರು. ಇದು ನನಗೆ ತುಂಬಾ ಇಷ್ಟವಾಯಿತು. ಆದರೆ ನನ್ನ ಮನಸ್ಸು

ಇನ್ನೂ ತರ್ಕ–ಕುತರ್ಕದಲ್ಲೇ ಸಿಲುಕಿತ್ತು. ಸಾಯಿಬಾಬಾರನ್ನು ಬಿಟ್ಟು ಈ ಬಾಪು ಅವರ ಹಿಂದೆ ಹೋಗಬಾರದು ಎಂದು ಮನಸ್ಸಿನಲ್ಲಿ ವಿಚಾರ ಬರುತ್ತಿತ್ತು. ನಾನು ನಿರ್ಧರಿಸಿದೆ, ಒಂದು ವೇಳೆ ಆಕೆಯ (ರಾಖಿ ಸೋನಾವಣೆ) ಫೋನ್ ಬಂದರೆ ಸ್ಪಷ್ಟವಾಗಿ ಹೇಳುತ್ತೇನೆ, 'ನಾನು ಹೇಳಿದರೆ, ನೀವು ಬಾಪು ಬದಲಿಗೆ, ಸಾಯಿಬಾಬಾರನ್ನು ಪ್ರಾರ್ಥಿಸುವಿರಾ? ಇಲ್ಲ ತಾನೇ?’ ಹಾಗಾದರೆ ನನ್ನ ಹಿಂದೆ ಬರಬೇಡ.' ಮುಂದಿನ ಶನಿವಾರದಿಂದ ಉಪಾಸನೆಗೆ ಹೋಗಬಾರದು ಎಂದು ಮನಸ್ಸಿನಲ್ಲಿ ಗಟ್ಟಿಯಾಗಿ ನಿರ್ಧರಿಸಿದೆ.

ಈಗೆಯೇ ವಿಚಾರಿಸುತ್ತಾ, ಉಪಾಸನೆಯ ನಂತರ ಮನೆಗೆ ಬಂದು ಬಾಗಿಲು ತೆರೆದಾಗ, ನಾನು ಕಂಡ ದೃಶ್ಯದಿಂದ ನನ್ನ ಬಾಯಿ ತೆರೆದ ಹಾಗೆಯೇ ಉಳಿದುಬಿಟ್ಟಿತು. ಬಾತ್‌ರೂಮ್ ಹತ್ತಿರ ಮನೆಯೊಳಗೆ ಒಂದು ಚಿಕ್ಕ ಹಾವಿನ ಮರಿ ಕಂಡಿತು! ಮುಚ್ಚಿದ ಮನೆಯಲ್ಲಿ ಹಾವು ಹೇಗೆ ಬಂತು ಎಂಬುದೇ ಅರ್ಥವಾಗಲಿಲ್ಲ.

ನನಗೆ ಹಾವುಗಳೆಂದರೆ ಬಹಳ ಭಯ. ತಕ್ಷಣ ಮಗನಿಗೆ, “ಈ ಹಾವನ್ನು ಹಿಡಿದು ದೂರದಲ್ಲಿ ಬಿಟ್ಟು ಬಾ” ಎಂದೆ. ನಾವು ಅದನ್ನು ಬಹಳ ದೂರದಲ್ಲಿ ಬಿಟ್ಟೆವು. ಆದರೆ ರಾತ್ರಿ ಮಲಗಿದ ಮೇಲೂ ಆ ಹಾವಿನ ಮರಿ ಕಣ್ಣೆದುರಿನಿಂದ ಮಾಯವಾಗುತ್ತಿರಲಿಲ್ಲ.

ಬೆಳಿಗ್ಗೆ ಅಡುಗೆಮನೆಗೆ ಹೋದಾಗ ಮತ್ತೆ ದೇವರಮನೆಯ ಹತ್ತಿರ ಅದೇ ಗಾತ್ರದ ಮತ್ತೊಂದು ಹಾವಿನ ಮರಿ! ಇಬ್ಬರೂ ತುಂಬಾ ಹೆದರಿಬಿಟ್ಟೆವು. ಮನೆಗೆ ಎರಡು ಹಾವುಗಳು? ಮತ್ತೆ ಅದನ್ನೂ ಹಿಡಿದು ದೂರದಲ್ಲಿ ಬಿಟ್ಟೆವು.

ಮಧ್ಯಾಹ್ನ ಕ್ಲಾಸ್‌ನ ಹುಡುಗಿಯರು ಬಂದರು. ನಾನು ನಡೆದ ಎಲ್ಲವನ್ನೂ ವಿವರಿಸಿದೆ. ಆಗ ಎಲ್ಲ ಹುಡುಗಿಯರೂ ಒಟ್ಟಿಗೆ ಕೂಗಿದರು. ಇವರಿಗೆ ಒಮ್ಮೆಲೇ ಏನು ಆಯಿತೆಂದು ನಾನು ಯೋಚಿಸಿದೆ

ಆವಾಗ ಆ ಹುಡುಗಿಯರು ಹೇಳಿದರು: “ಮ್ಯಾಡಂ, ನಿನ್ನೆ ನೀವು ಏನು ಹೇಳಿದಿರಿ ನೆನಪಿದೆಯಾ?”

ಅವರು ನೆನಪಿಸಿದಾಗ ನನ್ನ ಕಾಲಿನ ಕೆಳಗಿನ ನೆಲವೇ ಸರಿದಂತಾಯಿತು. ನಾನು ಮಜಾಕಾಗಿ ಬಾಪುಜಿಯವರಿಗೆ ಸವಾಲು ಹಾಕಿದ್ದೆ: “ಅವರು ನಿಜವಾದ ಸದ್ಗುರು ಆಗಿದ್ದರೆ, ನನಗೆ ಹಾವು ತೋರಿಸಲಿ!”

ಭಯದಿಂದಲೇ ನಾನು ರಾಖಿವೀರಾಳ ಮನೆಗೆ ಹೋಗಿ ಎಲ್ಲವನ್ನೂ ಹೇಳಿದೆ. ಅವಳು ಧೈರ್ಯ ನೀಡಿ ಸಂಸ್ಥೆಯ ಉದಿ ಕೊಟ್ಟು, ಮನೆಗೆಲ್ಲಾ ಉದಿ ತಾಗಿಸುವಂತೆ ಹೇಳಿದಳು. ನಿಜ ಹೇಳಬೇಕೆಂದರೆ, ಆ ನಂತರ ಇಂದಿನವರೆಗೂ ನಮ್ಮ ಮನೆಯಲ್ಲಿ ಯಾವ ಹಾವೂ ಕಾಣಿಸಿಲ್ಲ. ಮುಂದೆ ಎಂದಿಗೂ ಕಾಣಿಸುವುದಿಲ್ಲ ಎಂಬ ಪೂರ್ಣ ನಂಬಿಕೆ ನನಗಿದೆ.

ಪೂರ್ಣ ವಿಶ್ವಾಸದಿಂದ ಮನೆಗೆ ಉದಿ ತಾಗಿಸಿದೆನೋ ಅದೇ ಕ್ಷಣದಿಂದಲೇ, ಬಾಪುಜಿಯವರ ಚರಣಗಳನ್ನು ಗಟ್ಟಿಯಾಗಿ ಹಿಡಿದುಕೊಂಡೆ — ಎಂದಿಗೂ ಬಿಡದಂತೆ!

ಜಯ ಜಗದಂಬೆ! ಜಯ ದುರ್ಗೆ!

ಹಕ್ಕಿಯ ಕಾಲಿಗೆ ದಾರ ಕಟ್ಟಿ | ಅದನ್ನು ಹತ್ತಿರಕ್ಕೆ ತರುತ್ತಾರೆ | ಅದೇ ರೀತಿ ನೀನು ನಿಜವಾಗಿಯೂ ನನ್ನನ್ನು ಸೆಳೆದೆ | ನನ್ನ ಕಾಳಜಿ ನಿನಗೆ ಇದೆ ಎಂಬುದು ನನಗೆ ಅರ್ಥವಾಯಿತು | ಅನಿರುದ್ಧ, ನಿನಗೆ ನಾನು ಎಷ್ಟೋ ಋಣಿಯಾಗಿದ್ದೇನೆ ||

ಈ ಪಂಕ್ತಿಗಳಂತೆ ನನ್ನ ಸದ್ಗುರು ನನ್ನನ್ನೂ ತಮ್ಮ ಉಪಾಸನೆಗೆ ಕರೆದುಕೊಂಡರು — ರಾಖಿವೀರಾ ಸೋನಾವಣೆ ಅವರನ್ನು ಕೇವಲ ನಿಮಿತ್ತಮಾತ್ರವಾಗಿ ಬಳಸಿ. ಅವರೇ ತಮ್ಮ ಭಕ್ತರನ್ನು ಈ ರೀತಿಯಲ್ಲಿ ತಮ್ಮತ್ತ ಸೆಳೆದು, ಅವರ ಜೀವನದಲ್ಲಿ ಆನಂದ, ಸಂತೋಷ, ಶಕ್ತಿ ಮತ್ತು ಸಮೃದ್ಧಿಯ ಅನೇಕ ಬಣ್ಣಗಳನ್ನು ತುಂಬುತ್ತಾರೆ.

“ಬಹಳ ಪ್ರಯತ್ನದಿಂದ ಸದ್ಗುರು ಲಭಿಸುತ್ತಾರೆ” ಎಂದು ಹೇಳುತ್ತಾರೆ. ಆದರೆ ನನ್ನ ‘ಡ್ಯಾಡ್’ ಮಾತ್ರ ಸ್ವತಃ ನನ್ನ ಬಳಿಗೆ ಓಡಿ ಬಂದರು — ಭಕ್ತರ ಮೇಲಿರುವ ಅವರ ನಿಷ್ಕಾಮ ಪ್ರೀತಿಯ ಕಾರಣದಿಂದ. ನಿಜವಾಗಲೂ 100%.

॥ ಹರಿ: ಓಂ ॥ ಶ್ರೀರಾಮ ॥ ಅಂಬಜ್ಞ ॥

Hindi English